Thursday, 12th December 2024

ಟಾಟಾ ಸಂಸ್ಥೆ ಎಂಬ ಲರ್ನಿಂಗ್ ಫ್ಯಾಕ್ಟರಿ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಟಾಟಾ ಸಂಸ್ಥೆಯಲ್ಲಿ ಸುಮಾರು ಕಾಲು ಶತಮಾನ ಉನ್ನತ ಜವಾಬ್ದಾರಿಗಳಲ್ಲಿ ಕೆಲಸ ಮಾಡಿದ ಅರುಣ್ ಮೈರಾ ಎಂಬುವವರು ಬರೆದ The Learning Factory: How the Tata became leaders of nation builders  ಎಂಬ ಪುಸ್ತಕವನ್ನು ಓದುತ್ತಿದ್ದೆ. ಈ ಕೃತಿ ಯನ್ನು ಓದಿ ಮುಗಿಸಿದಾಗ, ಟಾಟಾ ಸಂಸ್ಥೆ ನಮ್ಮ ದೇಶದ ಅತ್ಯುನ್ನತ ಸಂಸ್ಥೆಯಾಗಿ ರೂಪುಗೊಂಡ ಬಗ್ಗೆ ಅತೀವ ಅಭಿಮಾನ ವಾಯಿತು.

ಸುಮಾರು ನೂರಾ ಐವತ್ತೆರಡು ವರ್ಷಗಳ ಇತಿಹಾಸವಿರುವ ಈ ಸಂಸ್ಥೆ, ಭಾರತದಂಥ ವಿಶಾಲ ದೇಶದ ಮನೆಮನೆಯನ್ನು ಒಂದಿಂದು ರೀತಿಯಲ್ಲಿ ತಲುಪಿದೆ. ಟಾಟಾ ಹೆಸರನ್ನು ಕೇಳದವರಿಲ್ಲ. ಶ್ರೀಮಂತರ ಹೆಸರನ್ನು ಹೇಳುವಾಗ ಇಂದಿಗೂ ಟಾಟಾ, ಬಿರ್ಲಾ, ಅಂಬಾನಿ ಎಂದೇ ಹೇಳುತ್ತೇವೆ. ಇಂದು ಅಂಬಾನಿ, ಟಾಟಾ ಸಂಸ್ಥೆಯನ್ನು ಮೀರಿಸಿರಬಹುದು, ಆದರೆ ಯಾವತ್ತೂ ಮೊದಲ ಸ್ಥಾನದಲ್ಲಿ – ಟಾಟಾ!

ಯಾವುದೇ ಸಂಸ್ಥೆ ಇರಬಹುದು, ಲಾಭ ಗಳಿಸುವುದು ಅದರ ಪರಮ ಉದ್ದೇಶವಾದರೂ, ಅದೊಂದನ್ನೇ ಇಟ್ಟುಕೊಂಡು
ಸಂಸ್ಥೆಯನ್ನು ಕಟ್ಟಲಾಗುವುದಿಲ್ಲ. ಉದಾತ್ತ ಧ್ಯೇಯ, ಶ್ರೇಷ್ಠ ಮೌಲ್ಯ ಮತ್ತು ಸಮಾಜಮುಖಿ ಆಶಯಗಳಿಲ್ಲದಿದ್ದರೆ ಎಂಥ
ಸಂಸ್ಥೆಯಾದರೂ ಬಹುಬೇಗ ಶಿಥಿಲವಾಗುತ್ತದೆ. ಅಲ್ಲದೇ ಅಂಥ ಸಂಸ್ಥೆಗಳು ಸರ್ವಮಾನ್ಯ ಮತ್ತು ಜನಾನುರಾಗಿ ಎಂದು
ಅನಿಸಿಕೊಳ್ಳುವುದಿಲ್ಲ. ಆದರೆ ಟಾಟಾ ಸಂಸ್ಥೆ ಇಂದು ವಿಶ್ವದಲ್ಲಿಯೇ ಒಂದು ಬಲಾಢ್ಯ ಸಂಸ್ಥೆಯಾಗಿ ಬೇರೂರಿದ್ದರೆ, ಅದಕ್ಕೆ ಆ ಸಂಸ್ಥೆ ಅಲ್ಲಿನ ಸಿಬ್ಬಂದಿಗೆ ನೀಡುವ ಮರ್ಯಾದೆ, ಮಹತ್ವ ಮತ್ತು ಅವರ ಸಾಮರ್ಥ್ಯದಲ್ಲಿಟ್ಟಿರುವ ವಿಶ್ವಾಸವೇ ಕಾರಣ.

ಟಾಟಾ ಸಂಸ್ಥೆಯ ಸಂಸ್ಥಾಪಕರಾದ ಜಮ್ ಶೇಟ್ ಜಿ ಬಹಳ ದೊಡ್ಡ ಕನಸುಗಾರ ಮತ್ತು ದೂರದೃಷ್ಟಿಯುಳ್ಳವರು. 1868ರಲ್ಲಿ
ಸಂಸ್ಥೆಯನ್ನು ಆರಂಭಿಸಿದಾಗ, ತಮ್ಮ ಸಂಸ್ಥೆ ವಿರಾಟ ಸ್ವರೂಪ ತಾಳಬೇಕೆಂದು ಅವರು ನಿರೀಕ್ಷಿಸಿದ್ದರು. ಎಲ್ಲರಿಗೂ ಸಾಧ್ಯ ವಾಗುವ, ಯಾರು ಬೇಕಾದರೂ ಮಾಡುವ ದಂಧೆಯನ್ನು ಆರಂಭ ಮಾಡಬಾರದು ಎಂಬುದು ಅವರ ನಿಲುವಾಗಿತ್ತು.

ಕನಸು ಕಾಣಲು ಹೆದರುವವರು ನನ್ನ ಜತೆ ಬರಬೇಡಿ. ನನ್ನಿಂದ ಸಾಧ್ಯವಿಲ್ಲ ಎಂಬ ಕೆಲಸವನ್ನು ಸಾಧ್ಯ ಮಾಡಿದಾಗಲೇ ಜನರಿಗೆ
ಆಶ್ಚರ್ಯವಾಗುವುದು, ಅದನ್ನೇ ಸಾಧನೆ ಎಂದು ಭಾವಿಸುವುದು ಎಂದು ಅವರು ಹೇಳುತ್ತಿದ್ದರು. ಕನಸು ಕಾಣುವಾಗ, ದೊಡ್ಡ
ಕನಸು ಕಾಣಬೇಕು ಎಂಬುದು ಅವರ ಮಂತ್ರವಾಗಿತ್ತು. ಇದು ನನಗೆ ಮಾಡಿಸಿದ ದಂಧೆಯಲ್ಲ ಎಂದು ಹಿಂದೇಟು ಹಾಕಿದಾಗ,
ಅದನ್ನು ಕೈಯೆತ್ತಿ ನೆರವೇರಿಸುವುದೇ ಬಹಳ ದೊಡ್ಡ ಸಾಧನೆ ಎಂಬುದು ಅವರ ನಂಬಿಕೆಯಾಗಿತ್ತು.

ಹೀಗಾಗಿ ಅವರು ಆ ದಿನಗಳ ಜವಳಿ, ಉಕ್ಕು, ಜಲವಿದ್ಯುತ್ ಯೋಜನೆಗಳಿಗೆ ಕೈಹಾಕಿದರು. ಆ ದಿನಗಳಲ್ಲಿ ಭಾರತದಲ್ಲಿ ಈ ಉದ್ಯಮಗಳನ್ನು ಆರಂಭಿಸಲು ವಿಪರೀತ ಬಂಡವಾಳ ಬೇಕಿತ್ತು. ಅದನ್ನು ಒಟ್ಟುಗೂಡಿಸುವುದು ಸಾಮಾನ್ಯ ಸಂಗತಿಯೇನೂ ಆಗಿರಲಿಲ್ಲ. ಅಲ್ಲದೇ ಪರಿಣತ ಸಿಬ್ಬಂದಿಯೂ ಇರಲಿಲ್ಲ. ಆದರೆ ಅವರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಅಂದು ಅವರು ಹೇಗೆ ಈ ಉದ್ಯಮಗಳನ್ನು ಆರಂಭಿಸಿರಬಹುದು ಎಂಬುದನ್ನು ಇಂದು ಊಹಿಸಲೂ ಸಾಧ್ಯವಿಲ್ಲ. ಅಂದು ಅವರು ಇಟ್ಟ ಹೆಜ್ಜೆ, ಇಂದು ಭಾರತದ ಅಭಿವೃದ್ಧಿಯ ದಾಪುಗಾಲು ಸಹ ಹೌದು. ಇಂದಿಗೂ ಸಹ ಜವಳಿ, ಉಕ್ಕು ಮತ್ತು ಜಲವಿದ್ಯುತ್ ಯೋಜನೆಗಳನ್ನು ಆರಂಭಿಸಬೇಕೆಂದರೆ, ಲಕ್ಷಾಂತರ ಕೋಟಿ ರುಪಾಯಿ ಬಂಡವಾಳಬೇಕು, ಅಲ್ಲದೇ ಅದು ಎಲ್ಲರಿಗೂ ಕೈಹಿಡಿಯುವ ಉದ್ಯಮ ವಲ್ಲ.

ಅಂಥ ದಂಧೆಗೆ ಇಳಿಯಲು ಹಣದ ಜತೆಗೆ ಎದೆಗಾರಿಕೆಯೂ ಬೇಕು ಮತ್ತು ದೊಡ್ಡ ಇಚ್ಛಾಶಕ್ತಿಯೂ ಬೇಕು. ಹಣವೊಂದೇ
ಇದ್ದರೂ ಆಗುವುದಿಲ್ಲ. ಏಣಿ ಹಾಕಿ ಆಕಾಶ ಏರಬ ಎಂದು ಹುಚ್ಚು ಸಾಹಸ ಮಾಡಲು ತವಕಿಸುವವ ಮಾತ್ರ ಅಂಥ ಕಾರ್ಯಕ್ಕೆ
ಮುಂದಾಗಬಲ್ಲ. ಉದ್ಯಮ ಬೆಳೆಸುವ ಜತೆಗೆ ಮಾನವ ಸಂಪನ್ಮೂಲ, ಸಂಶೋಧನೆ, ಅಭಿವೃದ್ಧಿಯನ್ನೂ ಬೆಳೆಸಬೇಕು, ಇಲ್ಲದಿದ್ದರೆ ಯಾವ ಉದ್ಯಮವೂ ಸಮಾಜಕ್ಕೆ ಎರವಾಗುವುದಿಲ್ಲ ಎಂಬುದು ಅವರ ನಂಬಿಕೆಯಾಗಿತ್ತು. ಹೀಗಾಗಿ ಅವರು ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್‌ ಸೈನ್ಸ್ ಆರಂಭಕ್ಕೆ ಮುಂದಾದರು. ಹಣ ಮಾಡುವುದೇ ಅವರ ಹಂಬಲವಾಗಿದ್ದರೆ, ಇಂಥ ಸಂಸ್ಥೆ ತಲೆಯೆತ್ತುತ್ತಲೇ ಇರಲಿಲ್ಲ.

ಎಲ್ಲರೂ ಹಣ ಮಾಡುತ್ತಾರೆ, ಅನೇಕರು ಸಾವಿರಾರು, ಲಕ್ಷಾಂತರ ಕೋಟಿ ಸಂಪಾದಿಸುತ್ತಾರೆ. ಆದರೆ ಎಷ್ಟು ಮಂದಿ ದೇಶದ
ಬುದ್ಧಿವಂತರನ್ನು ರೂಪಿಸುವ ಸಂಸ್ಥೆಗಳನ್ನು ಹುಟ್ಟುಹಾಕುತ್ತಾರೆ? ಈ ವಿಷಯದಲ್ಲಿ ಟಾಟಾ ಸಂಸ್ಥೆಗೆ ಹೋಲಿಕೆ, ಸರಿಸಾಟಿ ಯಿಲ್ಲ. ಇವರ ತರುವಾಯ, ಈ ಸಂಸ್ಥೆಯ ಮುಖ್ಯಸ್ಥರಾಗಿ, ಐವತ್ತೆರಡು ವರ್ಷಗಳ ಕಾಲ ಮುನ್ನಡೆಸಿದವರು ಜೆ.ಆರ್.ಡಿ.ಟಾಟಾ. ಜಮ್ ಶೇಟ್ ಜಿ ಕಂಡ ಕನಸಿಗೆ, ಬೆಳಕಿನ ಬೀಜ ಬಿತ್ತಿದವರು ಜೆ.ಆರ್.ಡಿ. ಇವರು ಟಾಟಾ ಮುಖ್ಯಸ್ಥರಾದ ನಂತರ, ಸಂಸ್ಥೆ ದಶದಿಕ್ಕು ಗಳಲ್ಲಿ ಪಸರಿಸಿದ್ದು, ಆಧುನಿಕ ಭಾರತದ ಸಾಧನೆಯ ಕಥೆಯೂ ಹೌದು.

ರಾಸಾಯನಿಕ, ವಿಮಾನಯಾನ, ಎಂಜಿನಿರಿಂಗ್ ಪ್ರಾಡಕ್ಟ್ಸ್, ವಾಣಿಜ್ಯ ಬಳಕೆ ವಾಹನ, ಎಲೆಕ್ಟ್ರಾನಿಕ್ಸ್, ಸಾಫ್ಟ್‌ವೇರ್, ಸಿದ್ಧ ಉಡುಪು .. ಹೀಗೆ ಮೂವತ್ತಕ್ಕೂ ವಿವಿಧ ಕ್ಷೇತ್ರಗಳಿಗೆ ಸಂಸ್ಥೆ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸಿತು. ಟಾಟಾ ಸಂಸ್ಥೆ ಉತ್ಪನ್ನ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಯಿತು. ಜೆ.ಆರ್.ಡಿ. ಅವರಿಗೆ ಈ ಎ ಕ್ಷೇತ್ರಗಳ ಅಂತರ್ಗತ ಜ್ಞಾನ ಇರಲಿಲ್ಲ. ಆದರೆ ಯಾರಲ್ಲಿ talent ಇದೆ, ಯಾರಿಗೆ ಯಾವ ಜವಾಬ್ದಾರಿ ನೀಡಿದರೆ ಅವರು ಅದನ್ನು ಈಡೇರಿಸಬಹುದು ಎಂಬುದನ್ನು ನಿರ್ಧರಿಸುವ ಅಸಾಧಾ ರಣ ಬುದ್ಧಿಮತ್ತೆಯಿತ್ತು. ಅವರು ನಿಜಕ್ಕೂ ಪ್ರತಿಭೆಯನ್ನು ಶೋಧಿಸುವ ಹೊಂಚುಗಾರರಾಗಿದ್ದರು. ಅವರು ಯಾರನ್ನಾ ದರೂ ಒಂದು ಹೊಸ ಉದ್ಯಮಕ್ಕೆ ನೇಮಿಸಿದರೆ, ಅತ್ತ ನೋಡುತ್ತಿರಲಿಲ್ಲ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು. ನಿಗದಿತ ಸಮಯದೊಳಗೆ ಫಲಿತಾಂಶ ಕೊಡದಿದ್ದರೆ, ಅವರು ಯಾವ ಕುಂಟು ನೆಪವನ್ನೂ ಕೇಳುತ್ತಿರಲಿಲ್ಲ.

ಹೋಮಿ ಭಾಭಾ ಅವರಿಗೆ Tata Fundamental Research  ಸಂಸ್ಥೆಗಳನ್ನು ಕಟ್ಟುವ ಕೆಲಸವನ್ನು ಕೊಟ್ಟರು. ಅವರು ಆ ಕೆಲಸ ವನ್ನು ಅದ್ಭುತವಾಗಿ ಮಾಡಿದರು. ಸುಮಂತ ಮೂಲಗಾವ್ಕರ್ ಅವರಿಗೆ ಟೆಲ್ಕೊ (TATA Engineering and Locomotive Company) ಜವಾಬ್ದಾರಿಯನ್ನು ವಹಿಸಿದರು. ಅವರು ಅದನ್ನು ವಿಶ್ವದರ್ಜೆ ಕಂಪನಿಯಾಗಿ ರೂಪಿಸಿದರು. ಮಿಥಾಪುರದಲ್ಲಿ ರಾಸಾಯನಿಕ ಘಟಕಗಳನ್ನು ಸ್ಥಾಪಿಸುವ ಹೊಣೆಗಾರಿಕೆಯನ್ನು ದರ್ಬಾರಿ ಸೇಥ್ ಹೆಗಲಿಗೆ ಹಾಕಿದರು. ಅದನ್ನು ಸೇಥ್ ಬೃಹತ್ ಉದ್ಯಮವಾಗಿ ಬೆಳೆಸಿದರು. ಆನಂತರ ಸೇಥ್‌ಗೆ ಟೆರಿ (Tata Environmental Research Institute)  ಯನ್ನು ಕಟ್ಟುವ ಕೆಲಸ
ವಹಿಸಿದರು. ಅದನ್ನೂ ಅವರು ಬಹಳ ಸಮರ್ಥವಾಗಿ ನಿರ್ವಹಿಸಿದರು. ಎಫ್‌.ಸಿ.ಕೊಹ್ಲಿ ಅವರಿಗೆ ಸಾಫ್ಟ್’ವೇರ್ ಕಂಪನಿ
ಕಟ್ಟುವ ಕೆಲಸವನ್ನು ಕೊಟ್ಟರು. ಅವರು ಟಿಸಿಎಸ್ (Tata Consultancy Services) ಎಂಬ ಚೆಂದದ ಸಂಸ್ಥೆಯನ್ನು ಕಟ್ಟಿದರು.

ಟಾಟಾ ಮೋಟಾರ್ಸ್ ಜವಾಬ್ದಾರಿಯನ್ನು ರತನ್ ಟಾಟಾಗೆ ವಹಿಸಿದರು. ಅವರು ಮೋಟಾರು ವಾಹನ ಉದ್ಯಮದಲ್ಲಿ ಹಲವಾರು ಯಶಸ್ವಿ ಪ್ರಯೋಗಗಳನ್ನು ಮಾಡಿದರು. ಹೀಗೆ ಇನ್ನೂ ಹಲವು… ಜೆಆರ್‌ಡಿ ಮೌಲ್ಯಗಳ ಜತೆ ರಾಜಿ ಆಗುವವರಲ್ಲ ಎಂಬುದು ಅವರ ಜತೆ ಕೆಲಸ ಮಾಡುವವರಿಗೆ ಗೊತ್ತಿತ್ತು. ಹೀಗಾಗಿ ಅವರು ಯಾವುದೇ ಉದ್ಯಮವನ್ನು ಬೇರೆಯವರಿಗೆ ವಹಿಸಿ ಕೊಟ್ಟಾಗ, ಟಾಟಾ ಸಂಸ್ಥೆ ಏನನ್ನು ಪ್ರತಿನಿಧಿಸುವುದೋ, ಅದಕ್ಕೆ ಸ್ವಲ್ಪವೂ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಟಾಟಾ
ಸ್ಟೀಲ್ ಸಂಸ್ಥೆಯನ್ನು ಸ್ಥಾಪಿಸಿದಾಗ, ಸ್ವತಃ ಜೆಆರ್‌ಡಿ ಅವರೇ ಆ ಸಂಸ್ಥೆಯ ಆಶಯ, ಧ್ಯೇಯೋದ್ದೇಶಗಳನ್ನು ಬರೆದಿದ್ದರು.

ತಮ್ಮ ಸಂಸ್ಥೆಯ ವಿವಿಧ ಉದ್ಯಮಗಳನ್ನು ನಿರ್ವಹಿಸುವ ಮುಖ್ಯಸ್ಥರಿಗೆ ಜೆಆರ್‌ಡಿ ಎಂದೂ ಸೂಚನೆ ಕೊಡುತ್ತಿರಲಿಲ್ಲ. ಹಾಗೆಂದು
ಎಲ್ಲವನ್ನೂ ಅವರ ಸುಪರ್ದಿಗೆ ಬಿಟ್ಟು ನಿಶ್ಚಿಂತರಾಗಿರುತ್ತಿರಲಿಲ್ಲ. ಅವರ ಗಮನಕ್ಕೆ ಸಣ್ಣ ದೂರು ಬಂದರೂ, ಅವರೇ ಖುದ್ದಾಗಿ
ಪರಿಶೀಲಿಸುತ್ತಿದ್ದರು. ಜೆಆರ್‌ಡಿ ಅವರಿಗೆ ಸಂಸ್ಥೆಯ ನೌಕರರು ಪತ್ರ ಬರೆಯಬಹುದಿತ್ತು. ಅದನ್ನು ಅವರು ಇಷ್ಟಪಡುತ್ತಿದ್ದರು.
ಅವರ ಮುಂದೆ ಯಾವ ಸಮಸ್ಯೆಯನ್ನಾದರೂ ಬರೆಯಬಹುದಿತ್ತು. ಜೆಆರ್‌ಡಿ ಟಾಟಾ ಸಂಸ್ಥೆಯ ಮುಖ್ಯಸ್ಥರಾಗಿದ್ದಾಗ, ದೇಶದೆಡೆ ಗಳಲ್ಲಿ ಸುಮಾರು ಮೂರು ಲಕ್ಷ ಸಿಬ್ಬಂದಿಯಿದ್ದರು. ‘ಜೆ.ಆರ್.ಡಿ. ಟಾಟಾ, ಮುಂಬೈ’ ಎಂದು ಬರೆದರೆ ಸಾಕಿತ್ತು. ಅದು ಜೆಆರ್‌ಡಿ ಟೇಬಲ್ಲಿಗೆ ಬರುತ್ತಿತ್ತು. ಆ ಪತ್ರಗಳನ್ನು ನಿರ್ವಹಿಸಲೆಂದೇ ಇಬ್ಬರನ್ನು ನೇಮಿಸಿದ್ದರು.

ಈ ರೀತಿ ಜೆಆರ್‌ಡಿ ಅವರಿಗೆ ಯಾರೇ ಪತ್ರ ಬರೆದರೂ ಉತ್ತರ ಸಿಗುತ್ತಿತ್ತು. ಅಲ್ಲದೇ ಯಾವುದಾದರೂ ಸಮಸ್ಯೆ ಹೇಳಿಕೊಂಡರೆ ,
ಅದಕ್ಕೆ ಪರಿಹಾರ ಸಿಗುತ್ತಿತ್ತು. ಜೆಆರ್‌ಡಿಯವರಿಗೆ ಖುದ್ದಾಗಿ ಸಮಸ್ಯೆಯನ್ನು ಹೇಳಿಕೊಂಡೂ ಪ್ರಯೋಜನ ಆಗಲಿಲ್ಲ ಎಂಬ
ಮಾತೇ ಇರಲಿಲ್ಲ. ಯಾವ ಸಿಬ್ಬಂದಿಯಿಂದ ಪತ್ರ ಬಂದರೂ ಸಂಬಂಧಪಟ್ಟ ಘಟಕದ ಮುಖ್ಯಸ್ಥರ ಗಮನಕ್ಕೆ ಬರುತ್ತಿದ್ದುದರಿಂದ, ಅವರೂ ಯಾವುದೇ ಸಮಸ್ಯೆ ಜೆಆರ್‌ಡಿ ತನಕ ಹೋಗದಂತೆ ನೋಡಿಕೊಳ್ಳುತ್ತಿದ್ದರು. ಕೆಳ ಹಂತದಲ್ಲಿಯೇ ಸಮಸ್ಯೆ ಇತ್ಯರ್ಥ ಪಡಿಸುವ ವ್ಯವಸ್ಥೆಯನ್ನು ತಮ್ಮ ತಮ್ಮ ಉದ್ಯಮಗಳಲ್ಲಿ ಆಚರಣೆಗೆ ತಂದಿರುತ್ತಿದ್ದರು. ಅಷ್ಟಾಗಿಯೂ ಜೆಆರ್‌ಡಿ ಗಮನಕ್ಕೆ ಬಂದರೆ, ಆ ಸಮಸ್ಯೆ ಗಂಭೀರವಾದುದು ಎಂದು ಪರಿಗಣಿಸಲಾಗುತ್ತಿತ್ತು. ಜೆಆರ್‌ಡಿ ವಿದೇಶ ಪ್ರವಾಸದಲ್ಲಿದ್ದಾಗ, ಅವರ ಆಪ್ತ ಕಾರ್ಯದರ್ಶಿ ಈ ಸಂಗತಿಗಳನ್ನು ಅವರ ಗಮನಕ್ಕೆ ತರಬೇಕಿತ್ತು.

‘ಸಮಸ್ಯೆಗಳು ಪ್ರತಿದಿನವೂ ಬರುತ್ತವೆ, ಅವನ್ನು ಅದೇ ದಿನ ಬಗೆಹರಿಸಬೇಕು. ಯಾವ ಕಾರಣಕ್ಕೂ ಸಮಸ್ಯೆಗಳನ್ನು ಮುಂದೂ ಡುವುದರಿಂದ ಅವು ಇತ್ಯರ್ಥವಾಗುವುದಿಲ್ಲ’ ಎಂದು ಅವರು ಹೇಳುತ್ತಿದ್ದರು. ಎಪ್ಪತ್ತರ ದಶಕದ ಕೊನೆಯಲ್ಲಿ, ಮೈರಾ (ಕೃತಿ ಕಾರರು) ಅವರು ಪುಣೆಯ ಟೆಲ್ಕೊ ಸಂಸ್ಥೆಯ ಮಾನವ ಸಂಪನ್ಮೂಲ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಾಗ, ಒಂದು ದಿನ ಅವರ ಕಾರ್ಯದರ್ಶಿ, ‘ನಿಮ್ಮ ಜತೆ ಸಂಸ್ಥೆಯ ಚೇರ್ಮನ್ ಜೆಆರ್‌ಡಿ ಮಾತಾಡಲು ಬಯಸುತ್ತಾರಂತೆ’ ಎಂದು ಇಂಟರಕಾಮ್ ನಲ್ಲಿ ಹೇಳಿದ. ಮೈರಾ ಗಾಬರಿಗೊಂಡರು. ಟಾಟಾ ಸಂಸ್ಥೆಯ ಮುಖ್ಯಸ್ಥರು ತನ್ನ ಜತೆ ಮಾತಾಡುವುದಾ? ಏನೋ ಪ್ರಮುಖವಾದ ವಿಷಯವೇ ಇರಬೇಕು ಎಂದು ಗಲಿಬಿಲಿಗೊಂಡರು.

ಅತ್ತ ಕಡೆಯಿಂದ ಜೆಆರ್‌ಡಿ,’ ಟೆಲ್ಕೊ ಪುಣೆ ಘಟಕದಲ್ಲಿ ಗ್ರ್ಯಾಜುಯೆಟ್ ಎಂಜಿನಿಯರಿಂಗ್ ಪ್ರೋಗ್ರಾಮ್‌ಗೆ ಯುವತಿಯೊಬ್ಬಳು ಅರ್ಜಿ ಹಾಕಿದ್ದಾಳಂತೆ. ಅದನ್ನು ನೀವು ತಿರಸ್ಕರಿಸಿದ್ದೀರಂತೆ. ನಾನು ನಿಮ್ಮ ಆಯ್ಕೆ ಪ್ರಕ್ರಿಯೆಯಲ್ಲಿ ಮೂಗು ತೂರಿಸುವುದಿಲ್ಲ . ಆದರೆ ಆ ಯುವತಿ ಹೇಳುತ್ತಾಳೆ ತಾನು ಎ ರೀತಿಯಲ್ಲೂ ಅರ್ಹಳಿದ್ದೇನೆಂದು. ತಾನು ಸೀ ಎಂಬ ಒಂದೇ ಕಾರಣಕ್ಕೆ ತನ್ನ ಅರ್ಜಿ ಯನ್ನು ಪರಿಗಣಿಸಿಲ್ಲ ಎಂದೂ ಆ ಯುವತಿ ಹೇಳುತ್ತಿದ್ದಾಳೆ. ಮಹಿಳೆಯರಿಗೇಕೆ ತಾರತಮ್ಯ ಮಾಡುತ್ತಿದ್ದೀರಿ?’ ಎಂದು ಕೇಳಿದರು.

ಅದಕ್ಕೆ ಮೈರಾ ಹೇಳಿದರು – ‘ಗ್ರ್ಯಾಜುಯೆಟ್ ಟ್ರೈನಿಗಳು ಫ್ಯಾಕ್ಟರಿಯಲ್ಲಿ ನೆಲದ ಮೇಲೆ ಕೆಲಸ ಮಾಡಬೇಕಾಗುತ್ತದೆ. ಆರು
ತಿಂಗಳು ಅವರು ತರಬೇತಿ ವಿಭಾಗದಲ್ಲಿ ಕೆಲಸ ಮಾಡಬೇಕು. ಹಸುರು ಸಮವಸ ಧರಿಸಿ, ಯಂತ್ರಗಳ ಜತೆ ಕೈಯಲ್ಲಿ ಕೆಲಸ
ಮಾಡಬೇಕು. ಇದು ಮಹಿಳೆಯರಿಗೆ ಕಠಿಣವಾದ ಕೆಲಸ. ಅಲ್ಲದೇ ಅವರು ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದು
ಮಹಿಳೆಯರಿಗೆ ಸುರಕ್ಷಿತವಲ್ಲ. ಅಲ್ಲದೆ ನಮ್ಮ ಕಾರ್ಯಾಗಾರದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆ ಇಲ್ಲ.
ಅವರಿಗಾಗಿ ಪ್ರತ್ಯೇಕ ಟಾಯ್ಲೆಟ್ ಕಲ್ಪಿಸದೇ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಹೇಗೆ ?’ ತಮ್ಮ ಈ ಮಾತುಗಳಿಂದ ಜೆಆರ್‌ಡಿಗೆ ಸಮಾಧಾನವಾಗಿರ ಬಹುದು ಎಂದು ಮೈರಾ ಭಾವಿಸಿದರು.

‘ಮೈರಾ, ನೀವು ದೇಶದಲ್ಲಿರುವ ಐಐಟಿಗಳಿಗೆ ಹೋಗಿ ಒಳ್ಳೆಯ ಪ್ರತಿಭೆಗಳನ್ನು ಶೋಧಿಸಿ ನೇಮಿಸಿಕೊಂಡಿದ್ದೀರಿ ಎಂಬುದನ್ನು ಬ. ಅದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ಆದರೆ ಈ ಒಂದು ಕಾರಣಕ್ಕೆ ಮಹಿಳೆಯರನ್ನು ನೇಮಿಸಿಕೊಳ್ಳುವುದಿಲ್ಲ ಅಂತಾದರೆ, ನಮ್ಮ ದೇಶದಲ್ಲಿನ ಬಹುದೊಡ್ಡ ಪ್ರತಿಭಾ ಸಮೂಹವನ್ನು ಕಡೆಗಣಿಸಿದಂತಾಗುವುದಿಲ್ಲವೇ? ನಿಮಗೆ ಪ್ರತ್ಯೇಕ ಟಾಯ್ಲೆಟ್ ಕಟ್ಟಿಸಲು ಹೆಚ್ಚಿನ ಹಣ ಬೇಕಾದರೆ, ತಕ್ಷಣ ಬಿಡುಗಡೆ ಮಾಡುವಂತೆ ನಿಮ್ಮ ಘಟಕದ ಮುಖ್ಯಸ್ಥರಿಗೆ ಈಗಲೇ ಹೇಳುತ್ತೇನೆ’ ಎಂದು ಹೇಳಿದರು.

ಅಂದೇ ಇಡೀ ಟಾಟಾ ಸಂಸ್ಥೆಗಳ ಸಿಬ್ಬಂದಿ ಆಯ್ಕೆ ಮತ್ತು ನೇಮಕ ಪ್ರಕ್ರಿಯೆ ಬದಲಾಯಿತು. ದೇಶದೆಡೆಯಿರುವ ಟಾಟಾ ಸಮೂಹದ ಕಚೇರಿ ಮತ್ತು ಘಟಕಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆ ನಿರ್ಮಿಸಲಾಯಿತು. ಇದಕ್ಕೆ ಹಲವು
ಕೋಟಿ ರೂಪಾಯಿ ಖರ್ಚಾದವು. ಎ ಅರ್ಹತೆಯಿದ್ದೂ ತನ್ನ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ನೇರವಾಗಿ ಜೆಆರ್‌ಡಿಯವರಿಗೆ ಪತ್ರ
ಬರೆದ ಆ ಯುವತಿಗೆ ನೌಕರಿ ಸಿಕ್ಕಿತು!

ಅಂದ ಹಾಗೆ ಟಾಟಾ ಸಂಸ್ಥೆಯ ಮೊದಲ ಆ ಮಹಿಳಾ ಉದ್ಯೋಗಿ ಸುಧಾಮೂರ್ತಿ ! ಕೆಲವು ದಿನಗಳ ಬಳಿಕ ಈ ಯುವತಿ, ಆಗ ತಾನೇ ಇನೋಸಿಸ್ ಸ್ಥಾಪಿಸಿದ ನಾರಾಯಣಮೂರ್ತಿ ಅವರನ್ನು ವಿವಾಹವಾದಳು. ಟಾಟಾ ಸಂಸ್ಥೆ ತನ್ನ ಪತ್ನಿಗೆ ನೌಕರಿ ಕೊಟ್ಟಿದ್ದರಿಂದ, ಆ ಹಣದಲ್ಲಿ ನನಗೆ ಜೀವನ ನಿರ್ವಹಿಸಲು ಮತ್ತು ಇನ್ಫೋಸಿಸ್ ಸ್ಥಾಪಿಸಲು ಸಹಾಯಕವಾಯಿತು ಎಂದು ನಾರಾಯಣಮೂರ್ತಿ ಹಲವು ಬಾರಿ ಜೆಆರ್‌ಡಿ ಮುಂದೆ ಹೇಳಿದ್ದರಂತೆ. ಜೆಆರ್‌ಡಿ ಆ ಒಂದು ನಡೆ ಅದೆಂಥ ಪವಾಡ ಸೃಷ್ಟಿಸಿತು ಎಂಬುದು ನಮ್ಮ ಕಣ್ಣೆದುರಿಗಿದೆ.

ಈ ದೇಶ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸಿರುವ ಟಾಟಾ ಸಂಸ್ಥೆ ನಿಜಕ್ಕೂ ಲರ್ನಿಂಗ್ ಫ್ಯಾಕ್ಟರಿಯೇ.