Tuesday, 5th November 2024

Tavleen Singh Column: ರಾಹುಲ್‌ ಗಾಂಧಿಗೆ ಇನ್ನಷ್ಟು ಶಿಕ್ಷಣದ ಅಗತ್ಯವಿದೆ !

Rahul Gandhi

ಕಿವಿಮಾತು

ತವ್ಲೀನ್‌ ಸಿಂಗ್

ರಾಹುಲ್ ಗಾಂಧಿ ಪ್ರತಿ ಬಾರಿ ವಿದೇಶಕ್ಕೆ ಹೋದಾಗಲೂ ಏನಾದರೊಂದು ಉಪದ್ವ್ಯಾಪ ಮಾಡಿಕೊಂಡು ಬರುವು ದೇಕೆ? ಈ ದೇಶದ ಅತ್ಯಂತ ಪ್ರಸಿದ್ಧ ರಾಜಕೀಯ ಮನೆತನವು ವಿದೇಶಗಳಲ್ಲಿ ಭಾರತದ ಬಗ್ಗೆ ಅಪಪ್ರಚಾರ ಮಾಡುವು ದೇಕೆ? ನಿಮಗೆ ನೆನಪಿರಬಹುದು, ಈ ಹಿಂದೆ ಒಮ್ಮೆ ವಿದೇಶಕ್ಕೆ ಹೋದಾಗ ರಾಹುಲ್ ಗಾಂಧಿಯವರು ‘ಭಾರತದಲ್ಲಿ ಪ್ರಜಾಪ್ರಭುತ್ವವೇ ಸರ್ವನಾಶವಾಗಿದೆ’ ಎಂದು ಹೇಳಿದ್ದರು.

ರಾಜಕೀಯ ವಿಶ್ಲೇಷಕರು ಹಾಗೂ ಚುನಾವಣೆಗಳು ಪ್ರತಿ ಬಾರಿ ‘ರಾಹುಲ್ ಗಾಂಧಿಯನ್ನು ಸೀರಿಯಸ್ಸಾಗಿ ತೆಗೆದು‌ ಕೊಳ್ಳುವ ಸಮಯ ಬಂದಿದೆ’ ಎಂಬ ಸುಳಿವು ನೀಡಿದಾಗಲೂ ರಾಹುಲ್ ವಿಮಾನ ಹತ್ತಿ ವಿದೇಶಕ್ಕೆ ಹೋಗಿ ಏನಾದರೂ ಎಡವಟ್ಟು ಹೇಳಿಕೆ ನೀಡಿ ರಾಡಿ ಮಾಡಿಕೊಳ್ಳುತ್ತಾರೆ. ತನ್ಮೂಲಕ ಆ ರಾಜಕೀಯ ವಿಶ್ಲೇಷಕರು ಮತ್ತು ಚುನಾವಣೆಯ ಫಲಿತಾಂಶ ಸುಳ್ಳೆಂದು ಸಾಬೀತು ಮಾಡುತ್ತಾರೆ. ಈ ಬಾರಿ ಅವರು ವಿದೇಶಕ್ಕೆ ಹೋಗಿ ಆಡಿರುವ ಅತ್ಯಂತ ಮೂರ್ಖತನದ ಮಾತುಗಳಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುವ ಮಾತು ಏನು ಗೊತ್ತೇ? ‘ಲೋಕಸಭೆ
ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂಬ ಹೇಳಿಕೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಬಳಿಕ ರಾಹುಲ್ ಗಾಂಧಿ ಕೈಗೊಂಡ ಮೊದಲ ವಿದೇಶ ಪ್ರವಾಸವಿದು. ಈ ಪ್ರವಾಸದಲ್ಲಿ ಅವರು ಅಮೆರಿಕದ ವಿಶ್ವವಿದ್ಯಾ ಲಯದಲ್ಲಿ ನಿಂತು ಆಡಿರುವ ಮಾತುಗಳು ಮೂರ್ಖತನದಿಂದ ಕೂಡಿವೆ ಎಂದು ನಾನೇಕೆ ಹೇಳುತ್ತಿದ್ದೇನೆ ಗೊತ್ತೇ? ಭಾರತದಲ್ಲಿ ಕೆಲ ತಿಂಗಳ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಕ್ರಮಗಳನ್ನು ಎಸಗಿದ್ದರೆ ಕೊನೆಯ ಪಕ್ಷ ಅವರು ಬಿಜೆಪಿಗೆ ಪೂರ್ಣ ಬಹುಮತ ಬರುವಂತೆಯಾದರೂ ನೋಡಿಕೊಳ್ಳುತ್ತಿದ್ದರು! ಇದನ್ನು ಈ ದೇಶದ ಅನಕ್ಷರಸ್ಥ ಕೂಡ ಹೇಳುತ್ತಾನೆ.

ಆದರೆ, ಈ ಸರಳ ಲೆಕ್ಕಾಚಾರ ನಮ್ಮ ದೇಶದ ವಿರೋಧ ಪಕ್ಷದ ನಾಯಕನಿಗೆ ಏಕೆ ಹೊಳೆಯುತ್ತಿಲ್ಲ? ಆದ್ದರಿಂದಲೇ ಅವರು ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುವಾಗ, ‘ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆದರೆ ಬಿಜೆಪಿ ೨೪೦ ಸ್ಥಾನ ಕೂಡ ಗಳಿಸಲು ಸಾಧ್ಯವಿಲ್ಲ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಹೀಗಾಗಿ ಈ ಬಾರಿ ನಡೆದಿರುವುದು ನ್ಯಾಯಯುತ ಚುನಾವಣೆ ಅಲ್ಲ. ಬದಲಿಗೆ ಅದು ನಿಯಂತ್ರಿತ ಚುನಾವಣೆ’ ಎಂದು ಹೇಳಿದರು.

ಅದೇ ಉಸಿರಿನಲ್ಲಿ ಅವರು (ಸಂದರ್ಶನದಲ್ಲಿ ಮಾತನಾಡುವಾಗ) ಹೇಳಿದ ಇನ್ನೊಂದು ಮಾತು ನನಗೆ ಬಹಳ ಆಶ್ಚರ್ಯವೆನಿಸಿತು. ಭಾರತದ ಚುನಾವಣಾ ಆಯೋಗದವರು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಬದಲು ಮೋದಿಗೆ ಏನು ಬೇಕೋ ಅದನ್ನು ಮಾಡಿದರು ಎಂದೂ ಹೇಳಿಬಿಟ್ಟರು. ಇದು ಆಶ್ಚರ್ಯಕರ ಹೇಳಿಕೆ ಏಕೆಂದರೆ, ಈ ಮಾತನ್ನು ಆಡಿದ ವ್ಯಕ್ತಿಯ ತಾಯಿ ಈ ಹಿಂದೆ ಮುಖ್ಯ ಚುನಾವಣಾ ಆಯುಕ್ತರೊಬ್ಬರು ನಿವೃತ್ತಿ ಯಾಗುತ್ತಿದ್ದಂತೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ ಸಂಸತ್ತಿಗೆ ಕರೆ ತಂದು ತಮ್ಮ ನಿಯಂತ್ರ
ಣದಲ್ಲಿದ್ದ ಸರಕಾರದಲ್ಲಿ ಮಂತ್ರಿಯನ್ನಾಗಿಯೂ ಮಾಡಿದ್ದರು.

ಅಷ್ಟೇಕೆ, ಈ ಮಾತುಗಳನ್ನು ಆಡಿದ ವ್ಯಕ್ತಿಯ ಕುಟುಂಬದವರು ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ಕಾಲ ಚುನಾವಣೆಗಳನ್ನು ನಿಯಂತ್ರಿಸಿದ್ದರು ಮತ್ತು ತಿರುಚಿದ್ದರು. ಹೀಗಾಗಿ, ನನ್ನ ಪ್ರಕಾರ, ಈ ಮಾತುಗಳನ್ನು ಆಡುತ್ತಿರುವ ವ್ಯಕ್ತಿಗೆ ಇತಿಹಾಸದ ಬಗ್ಗೆ ಇನ್ನಷ್ಟು ಪಾಠ ಮಾಡುವ ಅಗತ್ಯವಿದೆ. ಮೋದಿಯ ಬಳಿಕ ಇದೇ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗಲು ಯೋಗ್ಯನೆಂದು ಇತ್ತೀಚಿನ ಚುನಾವಣೆಯ ಫಲಿತಾಂಶ ಹೇಳುತ್ತಿರುವಾಗ ಈ
ಪಾಠದ ಜರೂರತ್ತು ಇನ್ನೂ ಹೆಚ್ಚಿದೆ.

ಅಮೆರಿಕದ ಪ್ರವಾಸದಲ್ಲಿ ರಾಹುಲ್ ಗಾಂಧಿ ನೀಡಿದ ಎರಡನೇ ಅತ್ಯಂತ ಮೂರ್ಖತನದ ಹೇಳಿಕೆ ಸಿಖ್ಖರ ಕುರಿತಾ ಗಿದೆ. ಸಿಖ್ಖರಿಗೆ ಭಾರತದಲ್ಲಿ ಸ್ವಾತಂತ್ರ್ಯವೇ ಇಲ್ಲ, ಅವರಿಗೆ ಪಗಡಿ ಧರಿಸಲು ಆಗುತ್ತಿಲ್ಲ, ಕಠಾರಿ ಹಿಡಿದು ಓಡಾಡಲು ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಹೇಳಿದರು. ಸಂದರ್ಶನದ ವೇಳೆ ಅಲ್ಲೇ ಕುಳಿತಿದ್ದ ಕೆನಡಾದ ಖಲಿಸ್ತಾನಿ ಮುಖಂಡನೊಬ್ಬ ಎದ್ದುನಿಂತು ಎಲ್ಲರಿಗೂ ಕೇಳಿಸುವಂತೆ ಮತ್ತು ಕಾಣಿಸುವಂತೆ ಜೋರಾಗಿ ‘ನಾವು ನಿಮಗೆ ಹೇಳಿದ್ದೇವಲ್ಲವೇ’ ಎಂದು ಕಿರುಚಿದ ತಕ್ಷಣ ರಾಹುಲ್ ಗಾಂಧಿಯ ಬಾಯಿಯಲ್ಲಿ ಈ ಮಾತು ಬಂದಿತು ಎಂಬುದು ಗಮನಾರ್ಹ ಸಂಗತಿ.

ಸಿಖ್ಖರಿಗೆ ಭಾರತದಲ್ಲಿ ಸ್ವಾತಂತ್ರ್ಯವಿಲ್ಲ ಎಂದು ಹೇಳಿದರೆ ಯಾರಾದರೂ ನಂಬುತ್ತಾರೆಯೇ? ಏಕೆ ರಾಹುಲ್ ಗಾಂಧಿ ಪ್ರತಿ ಬಾರಿ ವಿದೇಶಕ್ಕೆ ಹೋದಾಗಲೂ ಏನಾದರೊಂದು ಉಪದ್ವ್ಯಾಪ ಮಾಡಿಕೊಂಡು ಬರುತ್ತಾರೆ? ಏಕೆ ಈ ದೇಶದ ಅತ್ಯಂತ ಪ್ರಸಿದ್ಧ ರಾಜಕೀಯ ಮನೆತನವು ವಿದೇಶಗಳಲ್ಲಿ ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತದೆ? ನಿಮಗೆ ನೆನಪಿರಬಹುದು, ಈ ಹಿಂದೆ ಒಮ್ಮೆ ವಿದೇಶಕ್ಕೆ ಹೋದಾಗ ರಾಹುಲ್ ಗಾಂಧಿಯವರು ‘ಭಾರತದಲ್ಲಿ ಪ್ರಜಾ ಪ್ರಭುತ್ವವೇ ಸರ್ವನಾಶವಾಗಿದೆ’ ಎಂದು ಹೇಳಿದ್ದರು.

ಭಾರತದ ಬಗ್ಗೆ ಇಂಥ ಬೇಜವಾಬ್ದಾರಿಯ ಹೇಳಿಕೆಗಳನ್ನು ಕೇಳಿದಾಗ ನನಗೆ ಇನ್ನೂ ಹೆಚ್ಚು ಬೇಸರವಾಗುವುದು ಏಕೆಂದರೆ, ನಮ್ಮ ದೇಶಕ್ಕೆ ಪ್ರಬಲವಾದ ಹಾಗೂ ಬುದ್ಧಿವಂತ ವಿರೋಧ ಪಕ್ಷದ ನಾಯಕನ ಅಗತ್ಯವಿದೆ. ಅದರಲ್ಲೂ, ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅತಿಯಾದ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತಾ ಭ್ರಮಾತ್ಮಕ ಸಂಗತಿಗಳಲ್ಲಿ ಜನರನ್ನು ಮುಳುಗಿಸುತ್ತಿರುವಾಗ ಅದನ್ನು ತಡೆಯಲು ಒಳ್ಳೆಯ ವಿಪಕ್ಷ ನಾಯಕನೊಬ್ಬ ಬೇಕಿದೆ. ಪ್ರಧಾನಿಯ ಸರ್ವಾಧಿಕಾರಿ ಧೋರಣೆಯ ಆಡಳಿತ ಶೈಲಿ ಹಾಗೂ ಅವರ ಕೆಲವು ಮಂತ್ರಿಗಳು ಆಡುವ ಮಾತುಗಳು ಮೋದಿಯವರ ಕಟ್ಟರ್ ಬೆಂಬಲಿಗರನ್ನೂ ಕೆಲವೊಮ್ಮೆ ಬೇಸರಗೊಳಿಸುತ್ತವೆ.

ಈ ಬಾರಿ ಮೋದಿ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿಗೆ ಪೂರ್ಣ ಬಹುಮತ ಬಾರದೆ ಇದ್ದಾಗ ದೇಶದ ಉದ್ದಗಲಕ್ಕೂ ಜನರು ನಿಟ್ಟುಸಿರು ಬಿಟ್ಟಿದ್ದು ನಿಮಗೆ ಕೇಳಿಸಿರಬಹುದು. ಚುನಾವಣೆಯಲ್ಲಿ ಈ ಸಲ ಬಿಜೆಪಿಗೆ ಸರಿಯಾದ ಪಾಠ ಕಲಿಸಲಾಯಿತು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂತು. ಆದರೆ ಇದರರ್ಥ ಭಾರತದ ಮತದಾ ರರು ಮೋದಿಯ ಬದಲು ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಲು ಬಯಸುತ್ತಿದ್ದಾರೆ ಎಂಬುದಲ್ಲ. ರಾಹುಲ್ ಇದನ್ನು ಚೆನ್ನಾಗಿ ನೆನಪಿಟ್ಟು ಕೊಳ್ಳಬೇಕು. ಆಗ ಎಲ್ಲದಕ್ಕೂ ತನ್ನಲ್ಲಿ ಉತ್ತರವಿದೆ ಎಂಬ ಭ್ರಮೆಯಿಂದ ಹೊರಗೆ ಬರುವುದಕ್ಕೆ ಸಾಧ್ಯವಾದೀತು.

ರಾಹುಲ್ ಗಾಂಧಿ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ‘ಭಾರತದ ಶೇ.೯೦ರಷ್ಟು ಜನರು’ ಈ ದೇಶದ
ಅಭಿವೃದ್ಧಿಯ ಪಯಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಜಾತಿ ಒಂದೇ ಕಾರಣವಲ್ಲ. ಭಾರತ ಇನ್ನೂ
ಶ್ರೀಮಂತವಾಗದೆ ಇರುವುದಕ್ಕೆ ಜಾತಿಯೇ ಏಕೈಕ ಹೊಣೆಗಾರನಲ್ಲ. ಏಕೆಂದರೆ, ರಾಹುಲ್ ಪದೇಪದೆ ‘ನಮ್ಮ ದೇಶದ
ಅಧಿಕಾರದ ಕುರ್ಚಿಗಳಲ್ಲಿ ಕೆಳಜಾತಿಯವರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ’ ಎಂದು ಹೇಳುತ್ತಿರುತ್ತಾರೆ. ಆದರೆ, ಏಕೆ ಅವರು ಪ್ರಮುಖ ಸ್ಥಾನಗಳಲ್ಲಿ ಇಲ್ಲ ಎಂಬುದನ್ನು ಅವಲೋಕಿಸುವಾಗ ಅವರಿಗೆ ಬಡತನ ಹಾಗೂ ಅವಕಾಶ ವಂಚಿತತೆಯನ್ನು ಮೀರಿ ಎದ್ದು ನಿಲ್ಲುವುದಕ್ಕೆ ಅಸವೇ ಸಿಕ್ಕಿಲ್ಲ ಎಂಬುದನ್ನು ರಾಹುಲ್ ಕಡೆಗಣಿಸಿಬಿಡುತ್ತಾರೆ. ನಮ್ಮ ದೇಶದಲ್ಲಿ ಕೆಳಜಾತಿಯವರಿಗೆ ಮತ್ತು ಬಡವರಿಗೆ ಸಿಗಬೇಕಿದ್ದ ಅತ್ಯಂತ ಪ್ರಬಲವಾದ ಅಸವೆಂದರೆ ಶಿಕ್ಷಣ. ಕೆಳಜಾತಿಯ ಮಕ್ಕಳಿಗೆ ಒಳ್ಳೆಯ ಶಾಲೆಗಳಲ್ಲಿ ಶಿಕ್ಷಣ ಲಭಿಸಿದ್ದರೆ ಅವರು ಸುಲಭವಾಗಿ ಮೇಲ್ಜಾತಿಯ ಮಕ್ಕಳಿಗೆ ಪೈಪೋಟಿ ನೀಡುತ್ತಿದ್ದರು.

ನಿಜ ಹೇಳಬೇಕೆಂದರೆ ಇದು ಭಾರತದ ರಾಜಕಾರಣದ ನಿಗೂಢಗಳಲ್ಲಿ ಒಂದು. ಇಲ್ಲಿ ಎಷ್ಟೊಂದು ಸಮಾಜವಾದಿ ಪ್ರಧಾನಿಗಳು ಅಧಿಕಾರ ನಡೆಸಿದ್ದಾರೆ. ಆದರೂ ಅವರು ಕೆಳಜಾತಿಯವರು ಮತ್ತು ಬಡವರಿಗೆ ಕೇವಲ ಪ್ರಾಥಮಿಕ ಶಿಕ್ಷಣ ನೀಡುವುದರ ಬದಲು ನಿಜವಾದ ಶಿಕ್ಷಣ ಲಭಿಸುವಂತೆ ಮಾಡಲು ಶಾಲೆಗಳನ್ನು ಕಟ್ಟುವ ತುರ್ತು ಅಗತ್ಯವಿದೆ ಎಂಬುದನ್ನು ಮನಗಾಣಲೇ ಇಲ್ಲ. ಇದು ನಿಜಕ್ಕೂ ಚೋದ್ಯ.

ಮೋದಿಯವರ ಅತಿದೊಡ್ಡ ವೈಫಲ್ಯಗಳಲ್ಲಿ ಇದೂ ಒಂದು. ಅವರು ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸುಧಾ ರಿಸಲು ಗಮನಾರ್ಹವಾದ ಯಾವುದೇ ಕೆಲಸ ಮಾಡಲಿಲ್ಲ. ಸ್ವಚ್ಛ ಭಾರತ ಯೋಜನೆಗೆ ಕೊಟ್ಟ ಮಹತ್ವದಂತೆ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೂ ಅವರು ಮಹತ್ವ ನೀಡಿದ್ದರೆ ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಯನ್ನು ತರಬಹುದಿತ್ತು. ಅದರಲ್ಲೂ, ನಮ್ಮ ದೇಶದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಅಶಿಕ್ಷಿತ ರಾಜ್ಯಗಳೆಲ್ಲ ಬಿಜೆಪಿಯ ಆಳ್ವಿಕೆಯಲ್ಲೇ ಇರುವಾಗ ಅವರು ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಸುಧಾರಣೆ ತರಲು ಸಾಧ್ಯವಿತ್ತು. ಆದರೆ ಇಂದು ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಅಂದರೆ, ಕೆಳಜಾತಿಯವರು ಹಾಗೂ ಬಡವರಿಗೆ ಸರಿಯಾದ ಶಿಕ್ಷಣ ಲಭಿಸದೆ ಇಷ್ಟು ದೊಡ್ಡ ದೇಶದ ಯುವಶಕ್ತಿಯಲ್ಲಿ ಒಂದು ದೊಡ್ಡ ವರ್ಗವು ಈಗಲೂ ನಿಷ್ಪ್ರಯೋಜಕವಾಗಿಯೇ ಕಳೆದು ಹೋಗುತ್ತಿದೆ.

ಕಳೆದ ಹತ್ತು ವರ್ಷಗಳಲ್ಲಿ ನಮಗೆ ಇನ್ನೂ ಸಾಕಷ್ಟು ಆಡಳಿತಾತ್ಮಕ ವೈಫಲ್ಯಗಳು ಕಾಣಿಸುತ್ತವೆ. ಆದರೆ, ರಾಹುಲ್
ಗಾಂಧಿಗಾಗಲೀ ಅವರ ಸಲಹೆಗಾರರಿಗಾಗಲೀ ಅವು ಕಾಣಿಸುತ್ತಿಲ್ಲ ಎಂಬುದೇ ಆಶ್ಚರ್ಯ. ಹಳಿಯಲ್ಲಿ ಬಿದ್ದ ಸೂಜಿ ಯನ್ನು ಹುಡುಕಿದಂತೆ ಈಗಲೂ ಅವರು ‘ನಮ್ಮ ದೇಶದ ಶಿಕ್ಷಣ ಸಂಸ್ಥೆಗಳನ್ನೆಲ್ಲ ಕೇಸರೀಕರಣ ಗೊಳಿಸ ಲಾಗುತ್ತಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದವರು (ಆರ್‌ಎಸ್‌ಎಸ್) ಶಾಲೆಗಳನ್ನೆಲ್ಲ ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳು ತ್ತಿದ್ದಾರೆ’ ಎಂದೇ ಹೋದಲ್ಲಿ ಬಂದಲ್ಲಿ ಹಳಹಳಿಸುತ್ತಿದ್ದಾರೆ. ಆದರೆ, ಕಪಿಮುಷ್ಟಿಗೆ ತೆಗೆದುಕೊಳ್ಳುವು ದಕ್ಕೆ ಇನ್ನೇನೂ ಉಳಿದಿಲ್ಲ ಎಂಬುದೇ ಅವರಿಗೆ ಗೊತ್ತಿಲ್ಲ.

ಈಗಾಗಲೇ ಅವರು ಇತಿಹಾಸದ ಪಠ್ಯಪುಸ್ತಕಗಳನ್ನು ಬದಲಿಸುತ್ತಿದ್ದಾರೆ. ಆದರೆ, ಅವರು ಕೂಡ ದೇಶದ ನಿಜವಾದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದಲೇ ಇಂದು ಭಾರತದ ಬಹುತೇಕ ಮಕ್ಕಳು ಶಾಲೆಗಳಿಂದ ಹೊರಬರುವಾಗ ವಿಶೇಷವಾದ ಕೌಶಲಗಳನ್ನಾಗಲೀ, ಒಳ್ಳೆಯ ಶಿಕ್ಷಣವನ್ನಾಗಲೀ ಪಡೆದಿರುವುದಿಲ್ಲ.
ರಾಹುಲ್ ಗಾಂಧಿ ಈಗ ತಮ್ಮೆಲ್ಲಾ ಗಮನವನ್ನೂ, ತಮ್ಮ ಪಕ್ಷದ ಎಲ್ಲಾ ಶಕ್ತಿಯನ್ನೂ ಶಿಕ್ಷಣ ಕ್ಷೇತ್ರದತ್ತ ತಿರುಗಿಸಿದರೆ
ತಮಗೂ, ತಮ್ಮ ಪಕ್ಷಕ್ಕೂ, ಈ ದೇಶಕ್ಕೂ ಬಹಳ ದೊಡ್ಡ ಉಪಕಾರ ಮಾಡಿದಂತಾಗುತ್ತದೆ.

ಆಗ ಭಾರತದ ಭವಿಷ್ಯದ ಪ್ರಜೆಗಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಮತ್ತು ನಿಜವಾದ ಉಜ್ವಲ ಭವಿಷ್ಯ ತೆರೆದು ಕೊಳ್ಳುತ್ತದೆ. ವಿದೇಶ ಪ್ರವಾಸದಲ್ಲಿ ಅವರು ‘ಶೇ.೯೦ರಷ್ಟು ಭಾರತೀಯರಿಗೆ ಅವಕಾಶಗಳು ಸಿಗುತ್ತಿಲ್ಲ’ ಎಂದು ಹೇಳಿದ್ದಾರೆ. ‘ಇದಕ್ಕೆ ಜಾತಿ ವ್ಯವಸ್ಥೆಯೇ ಕಾರಣ’ ಎಂದೂ ಹೇಳಿದ್ದಾರೆ. ಭಾರತದಲ್ಲೂ ತಿಂಗಳುಗಳ ಕಾಲ ಅವರು
ಇದೇ ತೌಡು ಕುಟ್ಟಿದ್ದಾರೆ. ಇದೆಲ್ಲ ಸರಿಹೋಗಬೇಕು ಅಂದರೆ ಜಾತಿ ಗಣತಿ ನಡೆಯಬೇಕು ಎಂದು ಮೇಜು ಕುಟ್ಟಿ ಕುಟ್ಟಿ ಹೇಳಿದ್ದಾರೆ. ಆದರೆ, ಜಾತಿ ಗಣತಿಯಿಂದ ಏನಾಗುತ್ತದೆ? ಉದ್ಯೋಗದಲ್ಲಿ ಇನ್ನಷ್ಟು ಮೀಸಲಾತಿ ಸೃಷ್ಟಿ ಯಾಗುತ್ತದೆ.

ಶಾಲೆ ಮತ್ತು ಕಾಲೇಜುಗಳಲ್ಲಿ ಇನ್ನಷ್ಟು ಮೀಸಲು ಸೀಟುಗಳು ಬೇರೆ ಬೇರೆ ಜಾತಿಯವರಿಗೆ ಲಭಿಸುತ್ತವೆ. ಆದರೆ ಭಾರತದ ಸಮಸ್ಯೆಗಳಿಗೆ ಉತ್ತರ ಇರುವುದು ಮೀಸಲಾತಿಯನ್ನು ಇನ್ನಷ್ಟು ವಿಸ್ತರಿಸುವುದರಲ್ಲಿ ಅಲ್ಲ. ಭಾರತ ಯಾವತ್ತಾದರೂ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಅಂದರೆ ಈ ದೇಶದ ಮಕ್ಕಳಿಗೆ ಒಳ್ಳೆಯ
ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂಬ ಸಂಗತಿ ನಮ್ಮ ರಾಜಕೀಯ ನಾಯಕರಿಗೆ ಅರ್ಥವಾಗಬೇಕು. ಅದು ಅರ್ಥವಾದ ದಿನ ನಿಜವಾದ ಬದಲಾವಣೆ ಆರಂಭವಾಗುತ್ತದೆ.

(ಲೇಖಕಿ ಹಿರಿಯ ಅಂಕಣಗಾರ್ತಿ)

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ʻಪಪ್ಪುʼ ಎಂದ ಜಿಲ್ಲಾಧಿಕಾರಿ; ಕಾಂಗ್ರೆಸ್‌ ಕೆಂಡಾಮಂಡಲ, FIR ದಾಖಲು