Monday, 14th October 2024

ಸರಹದ್ದಿನ ಸುಡು ನೆಲ ತವಾಂಗ್

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ನೀವು ಈಶಾನ್ಯ ರಾಜ್ಯ ಪ್ರವಾಸ ಮಾಡುವಾಗ ‘ತವಾಂಗ್’ ಎನ್ನುವ ಸಂಕೀರ್ಣ ನೆಲಕ್ಕೊಮ್ಮೆ ಪಾದವೂರಿ ಬರಬೇಕು. ಕಾರಣ ತವಾಂಗ್ ಬಿಟ್ಟುಕೊಟ್ಟರೆ ಶಾಶ್ವತವಾಗಿ ತಮ್ಮ ಮಧ್ಯದ ಭಿನ್ನಾಭಿಪ್ರಾಯ ಬಗೆಹರಿದೀತು ಎಂದು ಹಿಂದೊಮ್ಮೆ ಚೀನಾದ ರಾಜತಾಂತ್ರಿಕ ಡೈ ಬಿಂಗ್ವೋ ಹೇಳಿದ್ದನೆಂದರೆ ಅದರ ಮಹತ್ವ
ಅರಿವಾದೀತು.

‘ಮ್ಯಾಕ್ ವಹೋನ್’ ರೇಖೆಯನ್ನು ಜಾರಿಗೊಳಿಸುವಾಗಲೇ ಬ್ರಿಟಿಷ್ ಸರಕಾರ ತವಾಂಗ್‌ನ್ನು ಚೀನಿಯರದ್ದೆಂದು ಒಪ್ಪಿಕೊಂಡಾಗಿತ್ತು ಎನ್ನುವ ನಿಲುವನ್ನು ಚೀನಾ ಅಗೀಗ ಕೆದರಲು ನಮಗೆ ‘ತವಾಂಗ್’ನ ಬಗ್ಗೆ ಅರಿವಿರಲೇ ಬೇಕು. ಪ್ರಸ್ತುತ ತವಾಂಗ್ ಮೇಲೆ ಚೀನಿಯರಿಗೆ ಅಧಿಕಾರ ದಕ್ಕಿ ಬಿಟ್ಟರೆ, ಅನಾಮತ್ತಾಗಿ ಭಾರತೀಯರ ಎದೆಯ ಮೇಲಲ್ಲ ಅಕ್ಷರಶಃ ಕುತ್ತಿಗೆಯ ಮೇಲೆ ಕೂತಂತೆ ಲೆಕ್ಕ. ಕಾರಣ ಈಶಾನ್ಯ ರಾಜ್ಯದ ಸಿಕ್ಕಿಂ ಗಡಿಯಲ್ಲಿ, ಸದ್ದಿಲ್ಲದೆ ಟಿಬೆಟ್‌ನ ರಾಜಧಾನಿ ಲಾಸಾದಿಂದ ಶೀಗಾಛೆವರೆಗೆ, ನೂರಮೂವತ್ತು ಶತಕೋಟಿ ವೆಚ್ಚದಲ್ಲಿ, ಇನ್ನೂರು ಚಿಲ್ಲರೆ ಕಿ.ಮೀ. ಉದ್ದದ ರೈಲು ಸಂಪರ್ಕ ನಿರ್ಮಿಸಿಕೊಂಡು ಚೀನಾ ಅಲ್ಲಿ ಸುಮ್ಮನೆ ವ್ಯಾಗನ್
ಓಡಿಸುತ್ತದೆ. ತೀರಾ ಕಳವಳಕಾರಿ ಎಂದರೆ ಚೀನಾ ನಿರ್ಮಿಸಿರುವ ಈ ದಾರಿ ನಮ್ಮ ಸಿಕ್ಕಿಂ ರಾಜ್ಯದ ಗಡಿಗೆ ಹೊಂದಿ ಕೊಂಡಿದ್ದರೆ, ಆತ್ತ ಕಡೆಯಿಂದ ಸಂಚರಿಸಲಿರುವ ಆ ದಾರಿಯಲ್ಲಿ ಇರುವ ಒಟ್ಟಾರೆ ಜನಸಂಖ್ಯೆ ಎರಡು ಲಕ್ಷ ಕೂಡಾ ದಾಟುವುದಿಲ್ಲ.

ಅಷ್ಟುದ್ದದ ಹಳಿಯನ್ನು ಯಾವ ಸರಕಾರವೂ ಕೇವಲ ತನ್ನ ಎರಡೂ ಚಿಲ್ರೆ ಲಕ್ಷ ಜನ ಸಂಪರ್ಕಕ್ಕಾಗಿ ನಿರ್ಮಿಸು ವುದಿಲ್ಲ ಎನ್ನುವುದೇ ಇಂಟರೆಸ್ಟಿಂಗು. ಇಲ್ಲಿ ತವಾಂಗ್‌ನ ಭೌಗೋಳಿಕ ಸ್ಥಿತಿ ಹೇಗಿದೆಯೆಂದರೆ, ಪರ್ವತಗಳ ಗುಂಪೊಂದನ್ನು ಊಹಿಸಿಕೊಳ್ಳಿ. ಅದರ ಸೆರಗಿನಲ್ಲೇ ಜಾಗ ಸಿಕ್ಕರೆ ಅದೇ ಕಾಲ್ದಾರಿ. ಒಂದೊಂದನ್ನೂ ಹತ್ತಿ ಇಳಿಯಲು ಒಂದೊಂದು ದಿನ ಬೇಕೇ ಬೇಕು. ತವಾಂಗ್ ಹೊರತುಪಡಿಸಿದರೆ ಅದರ ಕೆಳಗಡೆ ಚೀನಿಯರ ಬಗ್ಗೆ ಮಾಹಿತಿಗಾಗಿ ಇರುವ ಮುಖ್ಯ ಊರೆಂದರೆ ‘ತೊಸೊಮ್’.

ಇಂಥಾ ಪರ್ವತದ ಗುಂಪಿನಲ್ಲಿ ಶೀತ ಮಾರುತ ತಡೆಯುವ ಇನ್ನು ಎತ್ತರದ ಒಂದು ಪರ್ವತ ಇದೆ ಅದೀಗ ಚೀನಿಯರ ವಶದಲ್ಲಿದೆ. ಅದರ ಮೇಲೆ ಬೀಡು ಬಿಡುವ ಚೀನಿ ಸೈನಿಕನಿಗೆ ಇಲ್ಲಿ ನಡೆಯುವುದೆಲ್ಲವೂ ನೇರಾನೇರ ದರ್ಶನ ಮತ್ತು ನೈಸರ್ಗಿಕ ರಕ್ಷಣೆ ಬೇರೆ. ಇಲ್ಲಿ ಗಡಿ ಎನ್ನುವುದು ಇಲ್ಲವೇ ಇಲ್ಲ. ಇದ್ದರೂ ಅದನ್ನು ರಕ್ಷಿಸಿಕೊಳ್ಳುವುದು ಎರಡೂ ಕಡೆಯವರಿಗೆ ಅಸಾಧ್ಯವೇ.

ಹಿಮ, ಶೀತ ಮಾರುತ, ಆಹಾರ ಇಲ್ಲದ ಪರಿಸ್ಥಿತಿಯಲ್ಲಿ ಆಮ್ಲಜನಕದ ಕೊರತೆಯಲ್ಲಿ ಬಡಿದಾಡಬೇಕು. ಈಗಲೂ ತವಾಂಗ್ ತಲುಪಲೇ ದಿನವಿಡಿ ಚಲಿಸ ಬೇಕಾ ಗುತ್ತದೆ. ಕಾರಣ ಆ ರಸ್ತೆಯಲ್ಲಿ ಈಗಲೂ ಗಂಟೆಗೆ ೨೫ ಕಿ.ಮೀ. ಜಾಸ್ತಿ ಹೋಗಲು ಸಾಧ್ಯವಿಲ್ಲ. ರಸ್ತೆ ಎನ್ನುವುದು ಹೆಸರಿಗೆ ಮಾತ್ರ. ಅದೇ ಚೀನಿಯರ ಕಡೆಯಿಂದ ನೋಡಿದರೆ ಈಗಿನ ಶೀಗಾಛೆ ರೈಲು ಸಿಕ್ಕಿಂ ಗಡಿ ತಲುಪಲು ಸಹಾಯ ಮಾಡಿದರೆ, ಈಗಾಗಲೇ ನಿರ್ಮಿಸಿರುವ ಹೆದ್ದಾರಿ ಆ ಕಡೆಯ ಧೊಗ್ಲಾ ರಿಡ್ಜ್‌ವರೆಗೂ ಸುವಿ ಶಾಲವಾಗಿದೆ.

ಇನ್ನು ಕಾರಾ ಕೋರಮ್ ಹೈವೆಯ ಪಕ್ಕದಲ್ಲೇ ಚೀನಿಯರಿಗೆ ಸಲೀಸಾಗಿ ಚಲಿಸಲು ಈಗಾಗಲೇ ವಶಪಡಿಸಿಕೊಂಡಿರುವ ಸಿಓಕೆ ಇದೆ. ಅಲ್ಲೊಂದು ಕಾರಿಡಾರ್ ನಿರ್ಮಿಸಿಕೊಂಡು ಬಿಟ್ಟರೆ ಭಾರತೀಯ ಆರ್ಮಿಯ ಮೇಲೆ ಕಣ್ಣಿಡುವುದು ಮತ್ತು ನಿಯಂತ್ರಣ ಎರಡೂ ಸುಲಭ. ಈ ಕಾರಾಕೋರಮ್ ಹೈವೆಯ ಕೊನೆಯ ಹಳ್ಳಿ ಯಾದ ನುಬ್ರಾ ವ್ಯಾಲಿಯ ಪ್ರದೇಶ ಇತ್ತಿಚಿನವರೆಗೆ ಜನ ಸಂಪರ್ಕಕ್ಕೇ ತೆರೆದೇ ಇರಲಿಲ್ಲ. ಇಂಥಾ ದುರ್ಗಮ ಕಣಿವೆಯಲ್ಲಿ ‘ಯಡೊಂಗ್ ಪಾಯಿಂಟ್‌ಗೆ ದಾರಿ ನಿರ್ಮಿಸಿರುವ ಕಾರಣ, ಅಲ್ಲಿಂದ ಚೀನಿ ಸೈನಿಕ ಓಡಲು ಶುರು ಮಾಡಿದರೆ ಎಲ್ಲೂ ನಿಲ್ಲದೆ ತನ್ನ ಲಗೇಜು ಸಮೇತ ನಮ್ಮ ಗ್ಯಾಂಗ್‌ಟಾಕ್‌ಗೆ ಬಂದು ನಿಲ್ಲಬಹುದು.

ಹೇಗಿದೆ ಲೆಕ್ಕಾಚಾರ…? ಅಲ್ಲಿಗೆ ಚೀನಾ ರಾಜಧಾನಿ ಯಿಂದ ಸೈನಿಕನೊಬ್ಬ ಸಕಲ ಸರಂಜಾಮುಗಳೊಂದಿಗೆ ಕೇವಲ ಐದು ಗಂಟೆಯೊಳಗೆ ನಮ್ಮ ಗಡಿ ಸವರಿಕೊಂಡು ಬರಲು ಆಗುತ್ತದಲ್ಲ ಇದೇ ಕಳವಳಕ್ಕೆ ಕಾರಣವಾಗಿರೋದು. ಕಾರಣ ಯಾವ ಉಪಯೋಗ ಇಲ್ಲದ ಕಣಿವೆಯಲ್ಲಿ ಚೀನಾ ರಸ್ತೆ ಮತ್ತು ರೈಲು ನಿರ್ಮಿಸುತ್ತಿದೆ ಮತ್ತು ಈಗ ನೇರವಾಗಿ ತವಾಂಗ್ ಬಿಟ್ಟು ಕೊಡಿ ಎಂದೆನ್ನುತ್ತಿದೆಯೆಂದರೆ ಸುಮ್ಮನೆ ಅದು ಕಾಲು ಕೆದರುವುದೇ ಇಲ್ಲ. ಅಕಸ್ಮಾತ್ ಅವರ
ಯೋಜನೆ ಯಶಸ್ವಿ ಆಗಿದ್ದೇ ಆದರೆ ಸಂಪೂರ್ಣ ಈಶಾನ್ಯ ಭಾರತ ಒಂದೇಟಿಗೇ ಅವರ ಕೈಗೆ ದಕ್ಕಿ ಹೋಗುತ್ತದೆ ಮತ್ತದು ಭಾರತ ಪ್ರವೇಶಕ್ಕೆ ಹೆಬ್ಬಾಗಿಲಾ ಗುತ್ತದೆ. ಅದೇ ಚೀನಿಯರಿಗೂ ಬೇಕಾಗಿರುವುದು.

ಪ್ರವಾಸಿಯಾಗಿ ಹೋದಾಗ ಒಂದು ಗಮನಿಸಬೇಕು ನೀವು ಈ ಏಳೂ ರಾಜ್ಯಗಳೂ ನಾಲ್ಕು ರಾಷ್ಟ್ರಗಳೊಂದಿಗೆ (ಮ್ಯಾನ್ಮಾರ್, ಭೂತಾನ್, ಬಾಂಗ್ಲಾ ಮತ್ತು ಚೀನಾ) ಸರಹದ್ದನ್ನು ಹಂಚಿಕೊಂಡಿರುವ ಒಟ್ಟಾರೆ ಉದ್ದ ನಾಲ್ಕೂವರೆ ಸಾವಿರ ಕಿ.ಮೀ.ಗಳು. ಅಸಲಿಗೆ ಯಾವ ರಾಜ್ಯದ ಗಡಿಯೂ ಭದ್ರವಿಲ್ಲ ಮತ್ತು ಎಲ್ಲಿದೆ ಎನ್ನುವಂತೆ ಸರಿಯಾಗಿ ಗುರ್ತೇ ಇಲ್ಲ. ಇನ್ನು ಇವೆಲ್ಲಾ ರಾಜ್ಯವನ್ನು ಭಾರತದೊಂದಿಗೆ ಸೇರಿಸಿರುವ ಪ್ರದೇಶ ಮಾತ್ರ ಕೇವಲ ಇಪ್ಪತ್ತೆರಡು ಕಿ.ಮೀ. ಇಲ್ಲಿಂದಲೇ ಭಾರತಕ್ಕೆ ಸಂಪರ್ಕದ ಹೆದ್ದಾರಿ ‘ಸಿಲಿಗುರಿ ಕಾರಿಡಾರ್’ ಇರುವುದು. ಇದು ಭಾರತದ ‘ಚಿಕನ್‌ನೆಕ್’. ಈಗ ಕ್ಯಾತೆ ತೆಗೆಯುತ್ತಿರುವ ಚೀನಾ ತನ್ನ ರೈಲು ಮಾರ್ಗವನ್ನು ಎಲ್ಲಿಯವರೆಗೆ ಎಳೆ ತಂದಿದೆ ಎಂದು ಒಮ್ಮೆ ಭೂಪಟ ಇಟ್ಟುಕೊಂಡು ನೋಡಿ.

ಬಾಂಗ್ಲಾ ಗಡಿಯಲ್ಲಿ ಹಾಕಿದ ಸುಭದ್ರ(?) ಬೇಲಿಯ ಜತೆಗೆ ಸರಹದ್ದು ಹಂಚಿಕೊಂಡಿದ್ದು ಡಿಮಾಗಿರಿ ಹಳ್ಳಿಯೇ ಅಸಲು ಸರಹದ್ದು. ಇಲ್ಲಿನ ಬುದ್ಧನ ಅನುಯಾಯಿ ಗಳಾದ, ಭಾರತೀಯರಿಗೆ ಅತೀವ ನಿಷ್ಠೆ ವ್ಯಕ್ತಪಡಿಸುವ ‘ಚಕ್ಮಾ..’ ಎನ್ನುವ ಮೂಲ ಜನಾಂಗೀಯರಿದ್ದಾರೆ. ಹಾಗೆ ಎರಡೂ ಕಡೆಯಲ್ಲಿ ಬಿಎಸ್ಎಫ್ಗೆ ಒಂದು ಪಕ್ಕಾ ಲೆಕ್ಕಾಚಾರವಿದೆ. ಎಲ್ಲಿ ಏನು ನಡೆಯುತ್ತದೆ ಎಂದು. ಕಾರಣ ಇಲ್ಲಿಂದ ಹೊರಟವರು ಲುಂಗ್‌ಲುಯಿ ಮೂಲಕ ಐಸ್ವಾಲ್ ದಾಟಿ ಆಸ್ಸಾಮ್ ತಲುಪುತ್ತಾರೆ.

ಹಾಗೇಯೆ ಮನ್ಮಾರ್‌ನಲ್ಲಿರುವ ಬರ್ಮೀಯರದ್ದೂ ಅತಿ ಹೆಚ್ಚು ಮತ್ತು ನೇರ ರಸ್ತೆಯ ಸಂಪರ್ಕ ಇರುವ ‘ತಾಮು’ ಹೊರತು ಪಡಿಸಿದರೆ ಉಳಿದಂತೆ ಗಡಿ ಸುಭದ್ರವೇ. ಬಾರ್ಡರ್ ಸೆಕ್ಯೂರಿಟಿಯ ಕಣ್ಣು ತಪ್ಪಿಸುವುದು ಸಾಧ್ಯವೇ ಇಲ್ಲ. ಆದರೆ ಚೀನಾದ ಸರಹದ್ದೇ ಬೇರೆ. ಇಲ್ಲೇ ಭಾರತ, ಇಲ್ಲೇ ಚೀನಾ ಎನ್ನಿಸುವ ಸ್ಪಷ್ಟ ಸರಹದ್ದು ಗುರುತಿಸುವುದು ಆ ಪರಿಸರದಲ್ಲಿ ಅಸಾಧ್ಯ ಮತ್ತು ಗುರುತಿಸಿದ್ದೂ ಇಲ್ಲ. ಕಾರಣ ನೆಲ ಎನ್ನುವುದು ಒಂದರ ಆಚೆ ಇನ್ನೊಂದು ಕೊರಕಲು ಅಷ್ಟೆ. ಅದೂ ಕೂಡ ಅಲ್ಲಿನ ನದಿಯ ಹರಿವನ್ನು ಅವಲಂಭಿಸಿದ್ದು ಭೂಕುಸಿತದಿಂದ ಆಗೀಗ ದಿಕ್ಕು ಬದಲಿಸುತ್ತದೆ. ಕಾರಣ ಅಲ್ಲಿನ ನಿಸರ್ಗದ ನಿಯಮವೇ ಹಾಗೆ.

ಇಲ್ಲಿ ಗಡಿಗುಂಟ ಕೂತು ಸರಹದ್ದು ಕಾಯುವ ಸಾಧ್ಯತೆ ಇಲ್ಲವೇ ಇಲ್ಲ. ಇಂಥದರಲ್ಲಿ ಚೀನಾ ಇಲ್ಲಿ ರೈಲು ತಂದು ನಿಲ್ಲಿಸುತ್ತಿದೆ. ಈಗ ನಮ್ಮ ಸೈನಿಕರೂ ಸುಲಭ ವಾಗಿ ತವಾಂಗ್ ನೆತ್ತಿ ಹತ್ತಿ ಬಂದೂಕು ಹೂಡುವ ಸಾಮರ್ಥ್ಯ ಪಡೆದಿದ್ದಾರೆನ್ನುವುದು ಚೀನಿಗೆ ಗೊತ್ತಿಲ್ಲದ್ದೇನಲ್ಲ. ಅದಕ್ಕಾಗೆ ಈ ಬಾರಿ ಅದು ನೇರವಾಗಿ ವಿವಾದ ಇತ್ಯರ್ಥದ ನೆಪದಲ್ಲಿ ಎಲ್ಲಾ ಸಮಸ್ಯೆಗೂ ಅಂತರಾಷ್ಟ್ರೀಯ ಮನ್ನಣ್ಣೆಗೂ ಇದು ಸಹಕಾರಿ ಎಂದು ಮಾತಾಡುತ್ತಿದೆ. ನಂಬಬೇಕೆ..? ಹಿಂದೊಮ್ಮೆ ನಡೆದದ್ದು ಹೀಗೇಯೆ.

ಚೀನಾದೊಂದಿಗೆ ಯುದ್ಧ ನಡೆಯಿತಲ್ಲ ಆಗ ‘ನಾಮ್ಕಾಚು’ ಪರ್ವತ ಶ್ರೇಣಿಯಲ್ಲಿ ಚೀನಿ ಸೈನ್ಯ ಕವಾಯಿತಿನ ಹೆಸರಿನಲ್ಲಿ ಮೊದಲು ಬೀಡು ಬಿಟ್ಟಿತ್ತು. ೧೯೬೧ರ ಆಗಸ್ಟ್ ರಿಂದ ಸೆಪ್ಟಂಬರ್‌ವರೆಗೆ ನಡೆದ ಚೀನಾ ದಾಳಿಯಲ್ಲಿ ಅವರೆಷ್ಟು ಆತ್ಮ ವಿಶ್ವಾಸದಿಂದ ಇದ್ದರೆಂದರೆ ಒಂದು ವಾರ ಕಾಲ ಭಾರತೀಯ ಸೈನ್ಯವನ್ನು ಚಳಿಯಲ್ಲಿ ಸಾಯಲು ಬಿಟ್ಟು ಕಾಯುತ್ತಿದ್ದರೂ ಭಾರತೀಯ ಸೇನೆ ಅವರ ನೆರವಿಗೆ ಧಾವಿಸಲಾರದು ಎನ್ನುವುದು ಚೀನಿಯರಿಗೆ ಪಕ್ಕಾ ಮನದಟ್ಟಾಗಿತ್ತು. ಕಾರಣ ಭಾರತೀಯ ಸೇನೆ ಅದಕ್ಕೆ ತಯಾರಿಯಲ್ಲಿರಲಿಲ್ಲ ಎಂದಲ್ಲ. ಅಲ್ಲಿಗೆ ತಲುಪಲು ಭಾರತೀಯ ಸೈನಿಕರಿಗೆ ರಸ್ತೆಗಳೇ ಇರಲಿಲ್ಲ. ಸೈನಿಕನೊಬ್ಬ ತನ್ನ ಪೋಸ್ಟಿಗೆ
ಸಾಮಾನು ತಲುಪುವ (?) ಡ್ರಾಪಿಂಗ್ ಝೊನ್ – ಟಿಸಾಂಗಧರ್ ಪೋಸ್ಟ್ ತಲುಪಲೇ ನಾಲ್ಕು ದಿನಗಳ ಕಾಲ ತೆಗೆದುಕೊಂಡರೆ ಅಲ್ಲಿಂದ ‘ಹತುಂಗ್ಲಾ ರಿಡ್ಜ್’ ತಲುಪಲು ಇನ್ನು ಮೂರು ದಿನ.

ಆಮೇಲೆ ಆಚೆ ಕಡೆಯ ಆಯಕಟ್ಟಿನ ಬೆಟ್ಟದ ಇಳಿಜಾರಿನಲ್ಲಿ ಬೀಡು ಬಿಟ್ಟು ಬೆಂಕಿ ಕಾಯಿಸಿಕೊಳ್ಳುತ್ತಿದ್ದ ಚೀನಿಯರ ಕಣ್ಣು ತಪ್ಪಿಸಿ ವಾತಾವರಣ ವೈಪರಿತ್ಯ
ದಲ್ಲೂ ಮುಂದುವರೆದರೆ ಮತ್ತೆ ಮೂರು ದಿನ ಬೇಕು ತಲುಪಿದರೆ ಅಲ್ಲಿ ಸ್ಥಾಪಿಸಲಾಗಿತ್ತು ಧೋಗ್ಲಾ ಪೋಸ್ಟ್. ತೀರಾ ಅದರ ಆ ಕಡೆಗೆ ಒಂದೇ ಗುಡ್ಡದ ಸೆರಗಿನಲ್ಲಿ ಚೀನಿಯರ ‘ಪೋಸ್ಟ್’ ಇತ್ತು. ಇವೆರಡರ ಅಂತರ ಕೆಲವೇ ಕೆಲವು ನೂರು ಟರುಗಳು ಗೊತ್ತಿರಲಿ. ಇವೆಲ್ಲದಕೂ ಹೆಡ್ ಎನ್ನಿಸಿಕೊಂಡ ಪ್ರದೇಶವೇ ತವಾಂಗ್ ಆಗಲೂ ಮತ್ತು ಈಗಲೂ ಚೀನಿಯರಿಗೆ ಬೇಕಿರುವುದೇ ಈ ಪರ್ವತದ ತುದಿ.

ಇಂತಹದ್ದರ ಮಾರುಕಟ್ಟೆಯ ಮಧ್ಯದಲ್ಲಿ ನಿಂತರೆ ಇದೆಲ್ಲ ಅರಿವಿಗೇ ಬಾರದಂತೆ ಮೌಮೌ ಮಾರುವವರದ್ದೇ ಗೌಜಿ. ಸರಹದ್ದಿನಲ್ಲಿ ಏನಾದರೇನಂತೆ..?