Sunday, 15th December 2024

ಯಾರದ್ದೋ ತೆರಿಗೆ ದುಡ್ಡು ಯಲ್ಲಮ್ಮನ ಜಾತ್ರೆ !

ವೀಕೆಂಡ್ ವಿತ್ ಮೋಹನ್

camohanbn@gmail.com

ಒಂದು ದೇಶದ ಆರ್ಥಿಕತೆಯನ್ನು ಒಂದು ಕುಟುಂಬದ ಆರ್ಥಿಕತೆಯೊಂದಿಗೆ ಹೋಲಿಸಬಹುದು. ಕುಟುಂಬದ ಆದಾಯದ
ಮೂಲ ಹಲವು. ದುಡಿಯುವವರು ಒಬ್ಬರಿದ್ದರೆ, ದುಡಿಮೆಯಿಂದ ಜೀವನ ನಡೆಸುವವರು ಹಲವರಿರುತ್ತಾರೆ.

ದೇಶದ ಆರ್ಥಿಕತೆಯೂ ಅಷ್ಟೇ ದುಡಿಯುವವರ ದುಡಿಮೆಯಿಂದ ಬರುವ ತೆರಿಗೆಯಿಂದ ಹಲವು ಜನರ ಜೀವನವನ್ನು ನೋಡಿ ಕೊಳ್ಳಬೇಕಾಗುತ್ತದೆ. ಹೇಗೆ ಕುಟುಂಬದಲ್ಲಿ ಸಂಬಳ ಕಡಿಮೆಯಾದಾಗ ಸಾಲ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತ ದೆಯೋ, ಹಾಗೆ, ದೇಶದ ಆರ್ಥಿಕತೆಯ ವಿಚಾರದಲ್ಲಿಯೂ ಆದಾಯ ಕಡಿಮೆಯಾದಾಗ ಸಾಲ ಮಾಡ ಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಕುಟುಂಬದಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದಂತೆ ದೇಶದ ಆರ್ಥಿಕತೆಯನ್ನು ಮುನ್ನಡೆಸುವಾಗ ದುಂದುವೆಚ್ಚಗಳಿಗೆ ಕಡಿವಾಣ ಹಾಕ ಬೇಕಾಗುತ್ತದೆ. ಕುಟುಂಬ ವೊಂದರಲ್ಲಿ ವಯಸ್ಸಿಗೆ ಬಂದ ಯುವಕನಿಗೆ ಹೊರಗೆ ಕೆಲಸ ಮಾಡಲು ಹೇಳಿ ಮನೆಯ ಆರ್ಥಿಕತೆಗೆ ಸಹಾಯ ಮಾಡಲು ಹೇಳಬೇಕು. ಅದರ ಬದಲು ಕುಟುಂಬದ ಹಿರಿಯ ಸದಸ್ಯ ತನ್ನ ಆದಾಯದಿಂದ ಯುವಕನ ಜೀವನ ನೋಡಿಕೊಳ್ಳುತ್ತಿದ್ದರೆ ಆ ಯುವಕ ಜೀವನ ಪೂರ್ತಿ ಆರಾಮಾಗಿದ್ದು ಬಿಡುತ್ತಾನೆ.

ಸಮಾಜದ ಕೆಲವೊಂದು ವರ್ಗಕ್ಕೆ ಬೇಕಿರುವ ಸಾಮಾಜಿಕ ಭದ್ರತೆಯನ್ನು ನೀಡಬೇಕು ನಿಜ, ಆದರೆ ಎಷ್ಟು ನೀಡಬೇಕು? ಯಾವಾಗ ನೀಡಬೇಕು? ಯಾವಾಗ ನಿಲ್ಲಿಸಬೇಕೆಂಬ ಸ್ಪಷ್ಟತೆಯಿರಬೇಕು. ನಮ್ಮ ಸಂವಿಧಾನ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಪ್ರತ್ಯೇಕ ಹಕ್ಕುಗಳನ್ನು ನೀಡಿದೆ. ಕೆಲವು ರಾಜ್ಯಗಳು ತಮ್ಮ ಮತಬ್ಯಾಂಕನ್ನು ಹೆಚ್ಚಿಸಿಕೊಳ್ಳಲು ಮತದಾರರಿಗೆ ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ಹಲವು ಉಚಿತ ಯೋಜನೆಗಳ ಭರವಸೆಯನ್ನು ನೀಡುತ್ತವೆ.

ಭರವಸೆ ಈಡೇರಿಸಲು ಬೇಕಿರುವ ತೆರಿಗೆ ಹಣ ಸಾಕಾಗದೆ ಇದ್ದಾಗ ಸಾಲವನ್ನಾದರೂ ಮಾಡಿ ಭರವಸೆ ಈಡೇರಿಸುತ್ತವೆ. ಸರ್ವೋಚ್ಚ ನ್ಯಾಯಾಲಯ ಕಳೆದ ಕೆಲವು ತಿಂಗಳುಗಳಿಂದ, ಉಚಿತ ಯೋಜನೆಗಳ ರಾಜಕಾರಣದ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ಚಾಟಿ ಬೀಸುತ್ತಿದೆ. ರಾಜಕೀಯ ಪಕ್ಷಗಳು ಸಾಮಾಜಿಕ ಭದ್ರತೆಯ ವಿಷಯದಲ್ಲಿ ಮತದಾರರಿಗೆ ಹತ್ತಾರು ಆಮಿಷಗಳನ್ನು ಒಡ್ಡುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಅಧಃಪತನಕ್ಕೆ ಕೊಂಡೊಯುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನ್ಯಾಯಾಲಯ ಹೇಳಿದೆ.

ಭಾರತೀಯ ರಿಸರ್ವ ಬ್ಯಾಂಕ್ -ಕೇರಳ, ಪಶ್ಚಿಮ ಬಂಗಾಳ, ಪಂಜಾಬ, ರಾಜಸ್ಥಾನ, ಆಂಧ್ರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಅತ್ಯಂತ ಒತ್ತಡದಲ್ಲಿದೆಯೆಂದು ವರದಿ ಮಾಡಿದೆ. ಪಂಜಾಬ್ ನ ಆರ್ಥಿಕತೆ ಅತ್ಯಂತ ಹದಗೆಟ್ಟಿದ್ದು 2026-27 ರ ಹೊತ್ತಿಗೆ ತನ್ನ ರಾಜ್ಯದ ‘ಜಿಡಿಪಿ’ ಯ ಶೇ. 46 ಸಾಲಕ್ಕೆ ತಳ್ಳಲ್ಪಡುತ್ತದೆಯೆಂದು ಅಂದಾಜಿಸಲಾಗಿದೆ. ಪಂಜಾಬ್ ರಾಜ್ಯವನ್ನಾ
ಳಿದ ಕಾಂಗ್ರೆಸ್ ಸಾಲದ ಶೂಲದಲ್ಲಿ ರಾಜ್ಯವನ್ನು ಸಿಲುಕಿಸಿತ್ತು. ಈಗ ಅವರನ್ನು ಮೀರಿಸುವಂತೆ ‘ಆಮ್ ಆದ್ಮಿ ಪಕ್ಷ’ ಚುನಾವಣೆ ಯನ್ನು ಗೆಲ್ಲುವ ಸಲುವಾಗಿ ಹತ್ತಾರು ಉಚಿತ ಯೋಜನೆಗಳ ಭರವಸೆ ನೀಡುವ ಮೂಲಕ ರಾಜ್ಯವನ್ನೇ ದಿವಾಳಿಯನ್ನಾಗಿಸುವತ್ತ ಹೊರಟಿದೆ.

ದೆಹಲಿಯಲ್ಲಿ ಈ ಪಕ್ಷಕ್ಕೆ ಅಷ್ಟೊಂದು ಆರ್ಥಿಕ ಹೊರೆಯಿರಿವುದಿಲ್ಲ, ದೆಹಲಿಯನ್ನು ನಿರ್ವಹಿಸುವುದು ಹಾಗೂ ಬೆಂಗಳೂರನ್ನು ನಿರ್ವಹಿಸುವುದು ಎರಡೂ ಒಂದೇ. ಪಂಜಾಬ್ ಹಾಗಲ್ಲ ಅಲ್ಲಿ ರೈತರಿದ್ದಾರೆ, ನೀರಿನ ಸಮಸ್ಯೆಯಿದೆ, ಹಳ್ಳಿಗಳಿವೆ. ಇತ್ತೀಚೆಗೆ ದೆಹಲಿ ಸರಕಾರದ ಆರ್ಥಿಕತೆಯ ವರದಿ ಹೊರಬಂದಾಗ, ಅಲ್ಲಿನ ಸರಕಾರದಲ್ಲಿ ‘ವಿತ್ತೀಯ ಹೆಚ್ಚುವರಿ ಹಣ’ವಿದೆಯೆಂದು ಹೇಳಲಾಗಿತ್ತು. ಹೆಚ್ಚುವರಿ ಹಣ ಉಳಿತಾಯದಿಂದ ಬಂದಿಲ್ಲ, ಬದಲಾಗಿ ಸಾಲದಿಂದ ಬಂದಿದೆ.

ದೆಹಲಿಯ ಪೊಲೀಸರು ಕೇಂದ್ರ ಗೃಹ ಇಲಾಖೆಯಲ್ಲಿರುವುದರಿಂದ ಸಂಪೂರ್ಣ ಖರ್ಚನ್ನು ಕೇಂದ್ರ ಗೃಹ ಇಲಾಖೆ ಭರಿಸುತ್ತದೆ. ದೆಹಲಿ ಸರಕಾರದ ಪಿಂಚಣಿ ಹಣದ ಜವಾಬ್ದಾರಿ ಕೇಂದ್ರ ಸರಕಾರ ವಹಿಸಿಕೊಂಡಿದೆ. ದೆಹಲಿಯ ಹಲವು ಖರ್ಚುಗಳು ಕೇಂದ್ರ ದಲ್ಲಿರುವುದರಿಂದ ಉಚಿತ ಭರವಸೆ ನೀಡಿಯೂ ಸಾಲ ಮಾಡಿದೆ. ಸಾಲ ಮಾಡುವುದು ತಪ್ಪಲ್ಲ, ಮಾಡಿದ ಸಾಲದ ಹಣ ಎಲ್ಲಿ ವಿನಿಯೋಗವಾಯಿತೆಂಬುದು ಬಹಳ ಮುಖ್ಯ. ಸಾಲ ಮಾಡಿ ಆಸ್ತಿಯ ಮೇಲೆ ಹೂಡಿಕೆ ಮಾಡಿದರೆ ಆದಾಯದ ಮೂಲವಾ ಗುತ್ತದೆ.

ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಸಾಲ ಮಾಡಿ ಆದಾಯದ ಮೂಲಗಳನ್ನು ಸೃಷ್ಟಿ ಮಾಡಬೇಕು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ಸರಕಾರದ ಸಾಲ ಹೆಚ್ಚಾಗಿದೆಯೆಂದು ಬೊಬ್ಬೆ ಹೊಡೆದುಕೊಳ್ಳುವ ಪ್ರತಿಪಕ್ಷಗಳು, ಆ ಸಾಲದಿಂದಲೇ ಕಟ್ಟಿರುವ ವಿಶ್ವ ದರ್ಜೆಯ ರಾಷ್ಟ್ರೀಯ ಹೆzರಿಗಳ ಮೇಲೆ ಓಡಾಡುತ್ತಿರುತ್ತವೆ. ಸಾಲ ಮಾಡಿ ಮನೆಯನ್ನು ಕಟ್ಟಿ ಅದರಿಂದ ಬರುವ ಬಾಡಿಗೆಯಿಂದ ಸಾಲವನ್ನು ತೀರಿಸಿ ಉಳಿದ ಆದಾಯವನ್ನು ಮನೆ ಖರ್ಚಿಗೆ ಬಳಸಿ ಕೊಳ್ಳುವುದಿಲ್ಲವೇ? ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರ ಚುನಾವಣಾ ಭರವಸೆಗಳನ್ನು ಈಡೇರಿಸುವ ಸಲುವಾಗಿ ಸಾಲದ ಶೂಲಕ್ಕೆ ಸಿಲುಕಿದೆ.

ರಾಜ್ಯದ ಸಾಲದ ಮೊತ್ತ 289000 ಕೋಟಿಗೆ ತಲುಪಿದೆ. ತನ್ನನ್ನು ತಾನು ಚುನಾವಣಾ ಚಾಣಕ್ಯನೆಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡುವ ಪ್ರಶಾಂತ್ ಕಿಶೋರ್ ಆಂಧ್ರಪ್ರದೇಶದ ಚುನಾವಣಾ ಪ್ರಚಾರಕ್ಕೆ ಬಳಸಿ ಕೊಂಡಿದ್ದು ಉಚಿತ ಭರವಸೆಗಳ ಪ್ರಣಾಳಿಕೆಯನ್ನಷ್ಟೇ. ನೇರವಾಗಿ ಸರಕಾರದ ಹಣದಿಂದ ಮತವನ್ನು ಖರೀದಿಸುವ ತಂತ್ರಗಾರಿಕೆ ಯನ್ನು ಈತ ಆಂಧ್ರದಲ್ಲಿ ಬಳಸಿದ್ದ. ಉಚಿತ ಭರವಸೆಗಳ ಮೂಲಕ ಚುನಾವಣೆ ಗೆಲ್ಲುವವನನ್ನು ಹೇಗೆ ಚುನಾವಣಾ ಚಾಣಕ್ಯ ನೆನ್ನುತ್ತಾರೋ ದೇವರೇ ಬಲ್ಲ!

ಸಮಾಜದ ಪ್ರತಿಯೊಂದು ವರ್ಗಕ್ಕೂ ಜಗನ್ ನೇತೃತ್ವದ ಸರಕಾರ ಉಚಿತ ಭರವಸೆಗಳ ಮಹಾಪೂರವನ್ನೇ ನೀಡಿತ್ತು. ಭರವಸೆ ಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಿಕ್ಕ ಸಿಕ್ಕ ಕಡೆ ಸಾಲ ಮಾಡಿದೆ. ತನ್ನ ‘ಭವಿಷ್ಯದ ತೆರಿಗೆ ಹಣ’ವನ್ನು ಅಡವಿಟ್ಟು ಬ್ಯಾಂಕುಗಳ ಬಳಿ ಸಾಲ ಪಡೆದಿದೆ. ಆಂಧ್ರ ಪ್ರದೇಶದ ಈ ನೀತಿಯನ್ನು ಖಂಡಿಸಿದ ‘ರಿಸರ್ವ್ ಬ್ಯಾಂಕ್’ ಭವಿಷ್ಯದ ತೆರಿಗೆಯ ಮೇಲೆ ಸಾಲ ನೀಡುವುದನ್ನು ನಿಲ್ಲಿಸುವಂತೆ ಹೇಳಿದೆ. ಮತದಾರ ಅರ್ಥ ಮಾಡಿಕೊಳ್ಳಬೇಕಿರುವ ವಿಷಯವೆಂದರೆ ತಾನು ಕಟ್ಟಿದ ತೆರಿಗೆಯ ಹಣವೇ ತನಗಾಗಿ ಉಚಿತ ಯೋಜನೆಯ ರೂಪದಲ್ಲಿ ವಾಪಸ್ ಬರುತ್ತದೆ.

ಉಚಿತ ಯೋಜನೆಗಳ ಮೂಲಕ ಮತ ಸೆಳೆಯುವ ತಂತ್ರಗಾರಿಕೆಯನ್ನು ಪ್ರಾರಂಭಿಸಿದ ಕೀರ್ತಿ ತಮಿಳುನಾಡಿಗೆ ಸಲ್ಲಬೇಕು. ಅಮ್ಮ ಕ್ಯಾಂಟೀನ್, ಅಮ್ಮ ಲ್ಯಾಪ್‌ಟಾಪ್, ಅಮ್ಮ ಅಕ್ಕಿ, ಅಮ್ಮ ಮನೆಗಳು, ಅಮ್ಮ ಆಟೋಗಳು, ಅಮ್ಮ ಮೊಬೈಲ್…ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಲ್ಲಿನ ಜನರ ಮನಃಸ್ಥಿತಿಯನ್ನೇ ಬದಲಾಯಿಸಿಬಿಟ್ಟರು. ನಿಮಗೆ ನೆನಪಿದ್ದರೆ ಸುಮಾರು ಎರಡು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಮನೆ ಕಟ್ಟುವ ಕೆಲಸಗಾರರೆಂದರೆ ತಮಿಳುನಾಡಿನವ ರಾಗಿದ್ದರು. ಯಾವಾಗ ಅಮ್ಮ ಅಲ್ಲಿ ಉಚಿತ ಯೋಜನೆಗಳನ್ನು ನೀಡಲು ಪ್ರಾರಂಭಿಸಿದರೋ ಬೆಂಗಳೂರಿನಲ್ಲಿ ಅವರ ಸಂಖ್ಯೆ ಸಂಪೂರ್ಣ ಇಳಿದುಹೋಯಿತು.

ಅವರ ಮನಃಸ್ಥಿತಿಯೇ ಸಂಪೂರ್ಣ ಬದಲಾಗಿ ಆರಾಮಾಗಿ ತಮ್ಮ ತಮ್ಮ ಊರುಗಳಲ್ಲಿ ಸರಕಾರೀ ಯೋಜನೆಗಳಿಂದಲೇ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರಕಾರಗಳು ಬ್ಯಾಂಕಿನಿಂದ ಪಡೆಯುವ ಸಾಲದ ಹಣವೂ ಸಹ ಮತದಾರನದ್ದೇ. ಮತದಾರ  ಬ್ಯಾಂಕಿ ನಲ್ಲಿಟ್ಟಿರುವ ಠೇವಣಿ ಹಣವನ್ನೇ ಸಾಲದ ರೂಪದಲ್ಲಿ ಸರಕಾರಗಳಿಗೆ ನೀಡಲಾಗುತ್ತದೆ. ಅದೇ ಸಾಲದಿಂದ ಉಚಿತ ಯೋಜನೆ ಗಳನ್ನು ನೀಡಿ ಬ್ಯಾಂಕಿನಲ್ಲಿರುವ ಮತದಾರನ ಠೇವಣಿ ಅಪಾಯದಲ್ಲಿ ಸಿಲುಕಿರುತ್ತದೆ.

ವಿಜಯ್ ಮಲ್ಯ, ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿಯಂತಹ ಬೃಹತ್ ವ್ಯವಹಾರಸ್ಥರಿಗೆ ನೀಡಿರುವ ಸಾಲದಿಂದ ಠೇವಣಿ ದಾರರಿಗೆ ಅಪಾಯವಾಗುವುದು ಎಷ್ಟು ಸತ್ಯವೋ, ರಾಜ್ಯ ಸರಕಾರಗಳ ಉಚಿತ ಯೋಜನೆಗಳಿಂದುಂಟಾಗುವ ಅಪಾಯವೂ ಸಹ ಅಷ್ಟೇ ಸತ್ಯ. ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹದಗೆಡಲು ಮುಖ್ಯ ಕಾರಣವೂ ಅತಿಯಾದಂತಹ ಸಾಲ.
ತನ್ನ ಯೋಜನೆಗಳಿಗೆ ಬಂಡವಾಳ ಆಕರ್ಷಿಸುವ ಬದಲು ವಿದೇಶಿ ಸಾಲವನ್ನು ನಂಬಿಕೊಂಡನಂತಹ ಶ್ರೀಲಂಕಾ ಅಧಃ
ಪತನಕ್ಕೆ ಹೋಯಿತು.

ಭಾರತದ ಸಂವಿಧಾನದ ರೀತಿಯಲ್ಲಿ ಶ್ರೀಲಂಕಾದಲ್ಲಿ ಎರಡು ಶಕ್ತಿ ಕೇಂದ್ರಗಳಿಲ್ಲ. ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ಕೈಹಿಡಿಯಲು ಕೇಂದ್ರವಿಲ್ಲ. ಭಾರತದಲ್ಲಿ ರಾಜ್ಯ ಹಾಗೂ ಕೇಂದ್ರವೆಂಬ ಎರಡು ಶಕ್ತಿ ಕೇಂದ್ರಗಳಿರುವುದರಿಂದ ಸಾಲದ ಶೂಲದಲ್ಲಿರುವ ರಾಜ್ಯಗಳು ಬಚಾವಾಗಿವೆ. ೧೫ನೆಯ ಹಣಕಾಸು ಆಯೋಗದ ನಿಯಮದಂತೆ ತೆರಿಗೆ ಶೇ.41 ಕೇಂದ್ರಕ್ಕೆ ಹೋಗಿ ಪುನಃ ರಾಜ್ಯಗಳಿಗೆ ಹಂಚಿಕೆಯಾಗುವುದರಿಂದ ಆರ್ಥಿಕ ಶಿಸ್ತಿದೆ.

ಕೇಂದ್ರದ ಪಾಲಿನ ತೆರಿಗೆ ರಾಜ್ಯಗಳಿಗೆ ಒಂದು ರೀತಿಯ ಉಳಿತಾಯವಾಗಿರುವುದರಿಂದ ರಾಜ್ಯಗಳ ಕಷ್ಟ ಕಾಲದಲ್ಲಿ ಸಹಾಯ
ಮಾಡಲು ಅನುಕೂಲವಾಗುತ್ತದೆ. ಅಪ್ಪಿ ತಪ್ಪಿ ಕೇಂದ್ರದ ತೆರಿಗೆಯಿಲ್ಲದೆ ಕೇವಲ ರಾಜ್ಯಗಳದ್ದೇ ಆಡಳಿತವಿದ್ದಿದ್ದರೆ ಇಷ್ಟು ಹೊತ್ತಿಗೆ ಹಲವು ರಾಜ್ಯಗಳು ದಿವಾಳಿಯಾಗುತ್ತಿದ್ದವು. ಕರ್ನಾಟಕದ ಸಾಲದ ಮೊತ್ತವನ್ನು ಮೊದಲ ಬಾರಿಗೆ ಲಕ್ಷ ಕೋಟಿಗೆ ಏರಿಸಿದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲಬೇಕು. ಮತಬ್ಯಾಂಕಿಗಾಗಿ ಆರ್ಥಿಕ ಶಿಸ್ತನ್ನು ಕಾಪಾಡದೇ ರಾಜ್ಯದ ಆರ್ಥಿಕತೆಯನ್ನು ಅಧಃಪತನಕ್ಕಿಳಿಸಿದ್ದರು.

ಕರೋನ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೆರಿಗೆಯ ಕೊರತೆಯಿಂದ ಮಾಡಿರುವ ಸಾಲಗಳ ಬಗ್ಗೆ ಮಾತ ನಾಡುವುದಿಲ್ಲ. ಸಾಲ ಮಾಡಲೇ ಬೇಕಾದಂತಹ ಪರಿಸ್ಥಿತಿ ಎದುರಾದಾಗ ಮಾಡಲೇಬೇಕು. ಕರೋನ ಆರ್ಥಿಕ ಹೊಡೆತದ
ಪರಿಣಾಮ ಜಗತ್ತಿನ ದೊಡ್ಡ ದೊಡ್ಡ ದೇಶಗಳೇ ಸಾಲದ ಸುಳಿಯಲ್ಲಿ ಸಿಲುಕಿವೆ. ಪಶ್ಚಿಮ ಬಂಗಾಳವನ್ನಾಳುತ್ತಿರುವ ಮಮತಾ ಬ್ಯಾನರ್ಜಿ ತನ್ನ ಅಧಿಕಾರಾವಧಿಯಲ್ಲಿ ರಾಜ್ಯದ ಆರ್ಥಿಕತೆಯನ್ನು ಪಾತಾಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಇಲ್ಲಸಲ್ಲದ ಉಚಿತ ಯೋಜನೆಗಳನ್ನು ಜಾರಿಗೆ ತಂದಿರುವ ಮಮತಾ ರಾಜ್ಯದಲ್ಲಿ ಬಂಡವಾಳ ಹೂಡಲು ಹೂಡಿಕೆದಾರರು ಹೆದರುವ ಪರಿಸ್ಥಿತಿ ಎದುರಾಗಿದೆ. ಸಾಮಾನ್ಯವಾಗಿ ಪ್ರಾದೇಶಿಕ ಪಕ್ಷಗಳ ಆಳ್ವಿಕೆಯ ರಾಜ್ಯಗಳಲ್ಲಿ ಆರ್ಥಿಕ ಶಿಸ್ತಿಗೆ ಹೊಡೆತ ಬಿದ್ದುರುತ್ತದೆ. ಒರಿಸ್ಸಾ ರಾಜ್ಯದ ಬಿಜು ಜನತಾದಳದ ನಾಯಕ ನವೀನ್ ಪಾಟ್ನಾಯಿಕ್ ಅವರು ಇದಕ್ಕೆ ತದ್ವಿರುದ್ಧವಾಗಿ, ಆರ್ಥಿಕ ಶಿಸ್ತಿನೊಂದಿದೆ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ.

ಜಿಎಸ್‌ಟಿ ತೆರಿಗೆಯ ಬಗೆಗಿನ ಪ್ರತಿಯೊಂದು ನಿರ್ಧಾರವೂ ಸರ್ವ ರಾಜ್ಯಗಳ ಸಭೆಯಲ್ಲಿ ನಿರ್ಧಾರವಾಗುತ್ತದೆ. ತಾವು ಭರವಸೆ
ನೀಡಿರುವ ಉಚಿತ ಯೋಜನೆಗಳನ್ನು ಈಡೇರಿಸುವ ಸಲುವಾಗಿ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ, ದೆಹಲಿ, ರಾಜಸ್ಥಾನ್, ತಮಿಳುನಾಡು, ಕೇರಳ ರಾಜ್ಯಗಳು ತೆರಿಗೆ ಏರಿಕೆಯ ಬಗ್ಗೆ ತಾವೇ ಪ್ರಸ್ತಾಪಿಸಿ, ತೆರಿಗೆ ಏರಿಕೆಯನ್ನು ಬೆಂಬಲಿಸಿ, ಸಭೆಯಿಂದ ಹೊರಬಂದು ಸುಳ್ಳಿನ ಮೂಲಕ ಮೋದಿಯನ್ನು ದೂರುತ್ತಾರೆ.

ಕಮ್ಯುನಿಸ್ಟರ ಆಡಳಿತದಿಂದ ಕೇರಳ ರಾಜ್ಯದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ. ಪಶ್ಚಿಮ ಬಂಗಾಳವನ್ನು ಮೂರು ದಶಕ ಗಳ ಕಾಲ ಆಳಿದ ಕಮ್ಯುನಿಸ್ಟರು ಬಂಗಾಳದ ಅಭಿವೃದ್ಧಿಯನ್ನು ಪಾತಾಳಕ್ಕೆ ತಳ್ಳಿದ್ದರು. ಕಮ್ಯುನಿಸ್ಟರ ರಾಜ್ಯಗಳಿಗೆ ಬಂಡವಾಳ ಹರಿದುಬರುವುದು ಸುಲಭವಲ್ಲ. ಬಂಡವಾಳಶಾಹಿಗಳಿಲ್ಲದೆ ಸಮಾಜವಾದವನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲವೆಂಬ ಸಾಮಾನ್ಯ ಜ್ಞಾನ ಕಮ್ಯುನಿಸ್ಟರಿಗಿಲ್ಲ. ಆಸ್ತಿಯನ್ನು ಸೃಷ್ಟಿಮಾಡಿದರಷ್ಟೇ ಹಂಚಲು ಸಾಧ್ಯ.

ಆಸ್ತಿಯನ್ನು ಸೃಷ್ಟಿಮಾಡದೆ ಹಂಚಿದರೆ ಕೊನೆಗೆ ಇಡೀ ರಾಜ್ಯದ ಜನ ಬೀದಿಗೆ ಬರಬೇಕಾಗುತ್ತದೆ. ಕೇರಳ ರಾಜ್ಯದ ಸದ್ಯದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆಯೆಂದರೆ ಅಲ್ಲಿನ ಸರಕಾರ ‘ರಾಜ್ಯ ಸರ್ಕಾರದ ಬಾಂಡ್’ಗಳ ಮೂಲಕ ಜನರ ಬಳಿ ಹಣ
ಸಂಗ್ರಹ ಮಾಡುತ್ತಿದೆ. ವಿಪರ್ಯಾಸವೆಂದರೆ ಇವರು ಹದಗೆಡಿಸಿ ಅಧಿಕಾರ ಕಳೆದುಕೊಳ್ಳುತ್ತಾರೆ. ನಂತರದ ಸರಕಾರಗಳು ಆರ್ಥಿಕ ಪರಿಸ್ಥಿಯನ್ನು ಸರಿಮಾಡಲು ಹರಸಾಹಸಪಡುತ್ತವೆ.

ಸರಿಪಡಿಸುವ ಸರಕಾರದ ನೀತಿಗಳನ್ನು ಟೀಕಿಸಿಕೊಂಡು ಪುನಃ ಅಧಿಕಾರಕ್ಕೆ ಬರುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಹಾಳು ಗೆಡವಿದ ಆರ್ಥಿಕ ಪರಿಸ್ಥಿಯನ್ನು ಮೋದಿಯವರು ಸರಿಪಡಿಸುತ್ತಿರುವ ಆರ್ಥಿಕ ನೀತಿಗಳನ್ನು ವಿರೋಧಿಸುವುದು ಕಾಂಗ್ರೆಸ್ ಪಕ್ಷದ ದಿನನಿತ್ಯದ ಕೆಲಸವಾಗಿಹೋಗಿದೆ.