Thursday, 12th December 2024

ತೆರಿಗೆ ಕಟ್ಟಿ ಹೆರಿಗೆ ನೋವು ಬರಿಸಿಕೊಂಡಂಗಂಗಾಗಿದೆ!

ಪ್ರಸ್ತುತ

ಸುಜಯ ಆರ್‌.ಕೊಣ್ಣೂರ್‌

ನಾವು ಮನೆ ಕಟ್ಟಿದ್ದು ೧೫ ವರ್ಷದ ಹಿಂದೆ. ಆಗ ರಸ್ತೆ ಮನೆಗಿಂತ ತುಂಬಾ ಕೆಳಗಿತ್ತು. ಈಗ ರಸ್ತೆ ಎಷ್ಟು ಎತ್ತರ ಆಗಿದೆ ಅಂದ್ರೆ, ನಮ್ಮನೆ ಎರಡು ಮೆಟ್ಟಿಲು ಮುಚ್ಚಿದರೂ ರಸ್ತೆ ಮಟ್ಟಕ್ಕೆ ಬರ್ಲಿಲ್ಲ. ಮಳೆ ಬಂದರೆ, ಇಡೀ ರಸ್ತೆ ನೀರೆ ನಮ್ಮನೆಗೆ ನುಗ್ಗುತ್ತೆ. ಸಂಪ್ ಸ್ವಚ್ಛ ಮಾಡ್ಸಿ, ಟ್ಯಾಂಕರ್ ನೀರು ಹಾಕ್ಸಿ, ನೀರಲ್ಲಿ ನೆನೆದಿದ್ದಕ್ಕೆ ಮೋಟಾರ್ ಕೆಟ್ಟಿದ್ದನ್ನ ರಿಪೇರಿ ಮಾಡಿಸೋ ಹೊತ್ತಿಗೆ ಒಂದು ಬಾರಿಗೆ ೫೦೦೦ ರುಪಾಯಿ ಎಕ್ಕುಟ್ಟಿ ಹೋಯ್ತು. ಪ್ರತೀ ಬಾರಿ ಮಳೆ ಮೋಡ ಅದಾಗಲೆಲ್ಲ, ಅಯ್ಯೋ ಮನೆ ಕಡೆ ಏನಾಯ್ತೋ ಅಂತ ಯೋಚನೆ.

ಮನೆಯಲ್ಲಿದ್ದಾಗ ಮಳೆ ಬಂದ್ರೆ ಹೇಗೋ ಸಂಭಾಳಿಸಬಹುದು. ಹೊರಗಡೆ ಹೋದಾಗ ಬಂದ್ರೆ ಗೋವಿಂದಾ ಗೋವಿಂದ. ಎಂಥಾ ಪಾಡು ರೀ ಇದು. ಬೆಂಗಳೂರಿ ನಲ್ಲಿ ಸ್ವಂತ ಮನೆ ಕಟ್ಟಿಸಿಕೊಂಡು ನೆಮ್ಮದಿಯಾಗಿ ಜೀವನ ಮಾಡಬಹುದೆಂಬ ಆಸೆಗೆ ದೊಡ್ಡ ಕಲ್ಲು ಬಿತ್ತು. ಎಲೆಕ್ಷನ್ ಬಂದಾಗೆ ಆಳುವ ಪಕ್ಷದವರು ನಾವು ಏನೇನೋ ಕೆಲ್ಸ ಮಾಡ್ತಿದೀವಿ ಅಂತ ಜನರ ಮುಂದೆ ತೋರಿಸಿಕೊಳ್ಳೋ ಚಪಲಕ್ಕೆ ಬಿದ್ದು, ರಸ್ತೆ ಮಾಡಿಸ್ತಾರೆ. ಒಂದೂ ಸರಿಯಾದ ಪ್ಲ್ಯಾನ್ ಇರಲ್ಲ. ಇರುವ ರಸ್ತೆಯ ಮೇಲೆ ಮತ್ತೆ ನಾಲ್ಕಿಂಚು ರಸ್ತೆ.

ಪ್ರತೀ ಬಾರಿ ಈ ರೀತಿ ರಸ್ತೆ ಹಾಕುತ್ತಾ ಹೋದ್ರೆ, ಜನರ ಪಾಡೇನು? ಅವರೋ ದೊಡ್ಡ ಬಂಗಲೆಯಲ್ಲಿ ಕುಳಿತು ಆದೇಶ ಕೊಡುವುದಷ್ಟೇ ಗೊತ್ತು. ಜನರಿಗೆ
ತೊಂದರೆ ಆಗದಂತೆ ಮೂಲ ಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಯೋಚನೆ ಬರುವುದೇ ಇಲ್ಲ. ತಾತ್ಪೂರ್ತಿಕವಾಗಿ ಎಲೆಕ್ಷನ್ ಬರುವ ಹೊತ್ತಿಗೆ ರಸ್ತೆಗಳು ಡಾಂಬರು ಕಾಣುತ್ತವೆ. ಅದೂ ಬರೀ ತೋರಿಕೆಗೆ. ರಸ್ತೆ ಹಾಕಿದ ತಕ್ಷಣ ಅಲ್ಲಿ ನೀರಿನ ಪೈಪ್ ಅಥವಾ ಯಾವುದೋ ಕೇಬಲ್ ಹಾಕಲು ಅಗೆತ. ಅದನ್ನು ಹಾಗೇ ಮುಚ್ಚಿ ಹೋಗೋದು. ಅಲ್ಲಿ ಗುಂಡಿಯಾಗೋದು ಇದು ಮಾಮೂಲಿ ವಿಷಯ ಆಗಿಬಿಟ್ಟಿದೆ. ಕಾಂಟ್ರಾಕ್ಟರ್‌ಗೆ ದುಡ್ಡು ಬಂದರಾಯಿತು, ಸಚಿವರಿಗೆ ಕೆಲಸ ಮಾಡಿಸಿ ದರಾಯಿತು. ಹೇಗಾಗಿದೆ, ಯಾರಿಗಾದ್ರು ಅದರಿಂದ ಅನಾನುಕೂಲ ಆಗ್ತಿದೆಯಾ ಅನ್ನುವುದರ ಬಗ್ಗೆ ಲವ ಲೇಶದ ಯೋಚನೆ ಇಲ್ಲ. ನಾನು, ನಮ್ಮ ಮನೆಯವರು
ಚೆನ್ನಾಗಿದ್ದರಾಯಿತು ಎಂಬ ಸ್ವಾರ್ಥ. ಇದು ಬೇರೆ ಯಾರದೋ ಸಮಸ್ಯೆ ಅಲ್ಲ.

ನಾನೂ ಅನುಭವಿಸಿಯೇ ಬರೆಯುತ್ತಿ ರೋದು. ಮನೆ ಎತ್ತೋಕೆ ಬರುವ ಹಾಕಿದ್ರೆ ಇಷ್ಟು ಹೊತ್ತಿಗೆ ೪-೫ ಬಾರಿ ಎತ್ತಿ ಇಡಬಹುದಿತ್ತು. ಮನೆ ಕೆಳಗೆ ಆಯ್ತು ಅಂತ ಮುಂದಿನ ಕಲ್ಲು ಎತ್ತರಿಸೋದು, ಮತ್ತೆ ಮುಂದಿನ ವರ್ಷ ರಸ್ತೆ ಆದಾಗ ಮತ್ತೆ ಅದೇ ಕಥೆ- ವ್ಯಥೆ. ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು? ಇದು ಹೀಗೆಯೇ ಆಗುತ್ತಿದ್ದರೆ, ನಾವೆ ಕಷ್ಟ ಪಟ್ಟು, ಹೊಟ್ಟೆ-ಬಟ್ಟೆ ಕಟ್ಟಿ, ಸಾಲ-ಸೋಲ ಮಾಡಿ ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಕಟ್ಟಿಸಿ ಏನು ಪ್ರಯೋಜನ ಸ್ವಾಮಿ? ಮಳೆಗಾಲವನ್ನು
ಎದುರಿಸುವ ಸರಿಯಾದ ಯೋಜನೆಗಳಿಲ್ಲದ ಸರಕಾರ.

ಮಳೆ ಬಂದಾಗ ರಸ್ತೆಯ ಕೊಚ್ಚೆ ನೀರೆ ನುಗ್ಗಿ ಮನೆಯ ಸುತ್ತ ದ್ವೀಪ ನಿರ್ಮಾಣ. ಹೇಗ್ರಿ ಜೀವನ ಮಾಡೋದು? ತೆರಿಗೆ ಕಟ್ಟಿ, ಹೆರಿಗೆ ನೋವು ಅನುಭವಿಸಿ ಅನ್ನೋ ಥರ ಆಗಿದೆ ನಮ್ಮ ಪಾಡು. ಒಂದು ದಿನ ಮಾತ್ರ ರಸ್ತೆ ಸ್ವಚ್ಛ. ಮರುದಿನ ನೋಡಿದ ಕಸದ ರಾಶಿ. ಜೊತೆಗೆ ಒಂದೆರಡು ಭಾರೀ ಗಾತ್ರದ ಲಾರಿಗಳು ಓಡಾಡಿದರೆ
ರಸ್ತೆ ಕುಸಿದು ಹೋಗಿರುತ್ತೆ. ಕಸದ ರಾಶಿಯನ್ನೂ ಸಹ ಸರಿಯಾದ ರೀತಿಯ ವಿಂಗಡಣೆ ಮಾಡದೇ ಬೀಸಾಕುವ ಜನ, ಅದನ್ನು ಎತ್ತಿಕೊಂಡು ಹೋಗಿ ಖಾಲಿ ಜಾಗಗಳಲ್ಲಿ ಸುರಿದು ಬರುವ ಮಹಾನಗರ ಪಾಲಿಕೆ ಲಾರಿಗಳು. ಬೆಂಗಳೂರು ಮಹಾನಗರಿ ಕಸದ ಗೂಡಾಗಿದೆ.

ಅವ್ಯವಸ್ಥೆಯ ಆಗರವಾಗಿದೆ. ನಮ್ಮಂಥ ಸಾಮಾನ್ಯ ಜನರಿಗೆ ರಸ್ತೆಗಳೇ ಯಮನ ಪಾಶವಾಗಿದೆ. ಹೊಂಡ ಬಿದ್ದ ರಸ್ತೆಗಳಲ್ಲಿ ಅಪಘಾತಗಳಾಗಿ ಎಷ್ಟೋ ಜನ ಸಾವನ್ನಪ್ಪಿzರೆ. ಆದರೂ ಸಹ ನಗರಾಭಿವೃದ್ಧಿಯ ಹೆಸರಿನಲ್ಲಿ ಸರಕಾರದ ಖಜಾನೆ / ನಮ್ಮ ತೆರಿಗೆ ಹಣವನ್ನು ಕೊಳ್ಳೆ ಹೊಡೆಯೋದು ನಿಂತಿಲ್ಲ. ಇನ್ನಾದರೂ ರಸ್ತೆ
ಮಾಡುವಾಗ, ಕೆತ್ತಿ, ಅದರ ಮೇಲೆ ಡಾಂಬರು ಹಾಕಿ, ರಸ್ತೆ ಎತ್ತರವಾಗಿ ಮನೆಗಳಿಗೆ ಮಳೆ ನೀರು ನುಗ್ಗದಂತೆ, ಸರಿಯಾದ ಯೋಜನೆ ಹಾಕಿದಲ್ಲಿ ನಮ್ಮಂಥ ಸಾಮಾನ್ಯ ಜನರು ನೆಮ್ಮದಿಯಿಂದ ಬದುಕು ವಂತಾಗಬಹುದು. ನಗರಾಭಿವೃದ್ಧಿ ಸಚಿವರೇ, ಇತ್ತ ಗಮನಿಸಿ ನಮ್ಮ ಅಳಲಿಗೆ ನ್ಯಾಯ ದೊರಕಿಸಿಕೊಡಿ ಎಂಬ ವಿನಂತಿಯೊಂದಿಗೆ,