Saturday, 14th December 2024

ವಿಶ್ವವನ್ನು ಕಾಡಿದ ಕ್ಷಯಕ್ಕೆ ಮದ್ದುಕೊಟ್ಟ ಕಾಚ್

ಹಿಂದಿರುಗಿ ನೋಡಿದಾಗ

ಕ್ಷಯ ಬ್ಯಾಕ್ಟೀರಿಯವು ಪೂರ್ವ ಆಫ್ರಿಕದಲ್ಲಿ ಸುಮಾರು ೩೦,೦೦೦ ವರ್ಷಗಳ ಹಿಂದೆ ಹುಟ್ಟಿರಬಹುದು. ಮನುಕುಲವನ್ನು ನವಶಿಲಾಯುಗದಿಂದ ಕಾಡುತ್ತಿದೆ ಎನ್ನುವುದಕ್ಕೆ ಪುರಾವೆಯು ಈಜಿಪ್ಟಿನ ಮಮ್ಮಿಗಳಲ್ಲಿ (ಕ್ರಿ.ಪೂ.೩೦೦೦) ದೊರೆತಿದೆ. ರಾಬರ್ಟ್ ಬರ್ನ್ಸ್, ಜಾನ್ ಕೀಟ್ಸ್, ಬೈರನ್, ಶೆಲ್ಲಿ, ಆಂಟನ್ ಚೆಕಾವ್, ಫ್ರಾಂಜ಼್ ಕಾಫ್ಕ, ಡಿ.ಎಚ್.ಲಾರೆನ್ಸ್, ಜಾರ್ಜ್ ಆರ್ವೆಲ್, ಅಲೆಕ್ಸಾಂಡರ್ ಪೋಪ್, ಅಲೆಗ್ಸಾಂಡರ್ ಗ್ರಹಾಮ್ ಬೆಲ್, ಫ್ಲಾರೆನ್ಸ್ ನೈಟಿಂಗೇಲ್, ಜಾನ್ ರಸ್ಕಿನ್, ರಾಬರ್ಟ್ ಲೂಯಿ ಸ್ಟೀವ ನ್ಸನ್, ಶೋಪಿನ್, ಇಮಾನ್ಯುಯಲ್ ಕಂಟ್, ಡಿಮಿಟ್ರೀ ಮೆಂಡಲೀವ್, ನಥಾನಿಯಲ್ ಹಾಥೋರ್ನ್, ಹೆನ್ರಿ ಡೇವಿಡ್ ಥೋರು, ಇಮ್ಮಡಿ ನೆಪೋಲಿಯನ್, ಮೊಹ್ಮದ್ ಅಲಿ ಜಿನ್ನ, ಪೇಶ್ವ ಮಾಧವರಾವ್-೧, ನೆಲ್ಸನ್ ಮಂಡೇಲ, ಹೋ ಚಿ ಮಿನ್, ಆನಂದಿ ಗೋಪಾಲ ಜೋಷಿ (ಪ್ರಥಮ ಭಾರತೀಯ ಮಹಿಳಾ ವೈದ್ಯೆ) ಶ್ರೀನಿವಾಸ ರಾಮಾನುಜನ್, ನಂದಳಿಕೆಯ ನಾರಣಪ್ಪ (ಮುದ್ದಣ) ಮುಂತಾದವರೆಲ್ಲ ಈ ಮಾರಕ ರೋಗಕ್ಕೆ ಬಲಿಯಾದರು.

ಈ ಮಾರಕ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾದ ಪ್ರಾತಃಸ್ಮರಣೀಯ ವೈದ್ಯರು ಹಾಗೂ ಸಂಶೋಧಕರು ಹಾಗೂ ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅಂತಹವರಲ್ಲಿ ಬಹಳ ಮುಖ್ಯವಾಗಿರುವವರ ಕಾಣಿಕೆಯಲ್ಲಿ ಸಂಕ್ಷಿಪ್ತವಾಗಿ ಗಮನಿಸೋಣ.

ಡಾ.ರೆನೆ ಥಿಯೋ-ಲ್ ಹಯಾಸಿಂಥ್ ಲೆನೆಕ್ (೧೭೮೧- ೧೮೨೬) ಓರ್ವ -ಂಚ್ ವೈದ್ಯ ಹಾಗೂ ಸಂಗೀತ ಕೋವಿದ. ಇವನು ತನಗೆ ಅಗತ್ಯವಾಗಿದ್ದ ಕೊಳಲನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತಿದ್ದ. ಒಮ್ಮೆ ಓರ್ವ ದಡೂತಿ ಹೆಂಗಸಿನ ಸ್ತನದ ಮೇಲೆ ಕಿವಿಯನ್ನಿಟ್ಟು ಆಕೆಯ ಎದೆ ಬಡಿತವನ್ನು ಆಲಿಸುವುದು
ಮುಜುಗರವೆನಿಸಿತು. ಹಾಗಾಗಿ ಅವನು ಕಾಗದವನ್ನು ಸುರುಳಿ ಸುತ್ತಿ ಒಂದು ತುದಿಯನ್ನು ಆಕೆಯ ಎದೆಯ ಮೇಲಿಟ್ಟು ಮತ್ತೊಂದು ತುದಿಯನ್ನು ತನ್ನ ಕಿವಿಗೆ ಹೊಂದಿಸಿ, ಆಕೆಯ ಹೃದಯ ಮಿಡಿತವನ್ನು ಸ್ಪಷ್ಟವಾಗಿ ಆಲಿಸಿದ.

ಬಿದಿರಿನಿಂದ ಕೊಳಲನ್ನು ರೂಪಿಸಬಲ್ಲವನಾಗಿದ್ದ ಲೆನೆಕ್, ಸ್ಟೆಥೋಸ್ಕೋಪನ್ನು ರೂಪಿಸಿದ. ಆಧುನಿಕ ವೈದ್ಯಕೀಯ ಕ್ಷೇತ್ರದ ಅತ್ಯಂತ ಸರಳ ಆದರೆ ಅತ್ಯುಪಯುಕ್ತ ಸಾಧನವನ್ನು ನೀಡಿದ. ಆಧುನಿಕ ವೈದ್ಯಕೀಯದಲ್ಲಿ ಆಲಿಸುವಿಕೆ (ಆಸ್ಕಲ್ಟೇಶನ್) ಎಂಬ ಪರೀಕ್ಷಾ ಪದ್ಧತಿಯು ಜಾರಿಗೆ ಬಂದಿತು. ಸ್ಟೆಥೋಸ್ಕೋಪಿನ ಮೂಲಕ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಸ್ವರೂಪವನ್ನು ಅಧ್ಯಯನ ಮಾಡಿದ. ಅವುಗಳಲ್ಲಿ ಮುಖ್ಯವಾದದ್ದು ಪಲ್ಮನರಿ ಥೈಸಿಸ್ ಎಂದು ಹೆಸರಾಗಿದ್ದ ಕ್ಷಯವು ಮುಖ್ಯವಾಗಿತ್ತು.

ವೈದ್ಯಕೀಯದಲ್ಲಿ ಬಳಸುವ ರೇಲ್ಸ್, ರಾಂಕೈ, ಕ್ರೆಪಿಟನ್ಸ್, ಇಗೋಫೋನಿ ಮುಂತಾದ ಶ್ವಾಸಕೋಶಗಳ ಭಿನ್ನ ಸ್ಥಿತಿ-ಗತಿಗಳನ್ನು ವಿವರಿಸುವ ತಾಂತ್ರಿಕ
ಪದಗಳ ಜನನಕ್ಕೆ ಕಾರಣನಾದ. ಮಾನವನ ಇತಿಹಾಸದಲ್ಲಿ ವೈದ್ಯರು ಮೊದಲ ಬಾರಿಗೆ ಶ್ವಾಸಕೋಶ ಕ್ಷಯವನ್ನು ಪತ್ತೆಹಚ್ಚಲು ಸಾಧ್ಯವಾಯಿತು.
ಡಾ.ರಾಬರ್ಟ್ ಕಾಚ್ (೧೮೪೩-೧೯೧೦) ಜರ್ಮನಿಯ ಹ್ಯಾನೋವರ್‌ನಲ್ಲಿ ಜನಿಸಿದ. ಈತ ಶಾಲೆಗೆ ಹೋಗದೇ, ಕೇವಲ ಪತ್ರಿಕೆಗಳಲ್ಲಿರುವ ಅಕ್ಷರಗಳನ್ನು ಗುರುತಿಸಿ ಓದಲು ಕಲಿತನಂತೆ. ಆಗ ಆತನಿಗೆ ಐದು ವರ್ಷ. ಗಾಂಟಿಂಜನ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿಯನ್ನು ಪಡೆದ (೧೮೬೬).

ಫ್ರಾಂಕೋ- ಪರ್ಷಿಯಾ ಯುದ್ಧದಲ್ಲಿ ಸೇವೆಯನ್ನು ಸಲ್ಲಿಸಿ, ಪೋಲಂಡಿನ ವೂಲ್‌ಸ್ಟೆ ನ್‌ನಲ್ಲಿ ಜಿಲ್ಲಾ ವೈದ್ಯಾಧಿಕಾರಿಯಾಗಿ ನೇಮಕಗೊಂಡ. ಅಲ್ಲಿಯೇ ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು, ವಾಸ್ತವದಲ್ಲಿ ರೋಗಜನಕಗಳು ಎಂದು ತರ್ಕಿಸಿ ಸಂಶೋಧನೆಯನ್ನು ಆರಂಭಿಸಿದ. ನೆರಡಿ ರೋಗಕ್ಕೆ (ಆಂಥ್ರಾಕ್ಸ್) ಕಾರಣವಾದ ಬ್ಯಾಕ್ಟೀರಿಯವನ್ನು ಹಾಗೂ ಅವುಗಳ ಬೀಜಕಗಳನ್ನು (ಸ್ಪೋರ್ಸ್) ಗಾಜಿನ ತುಂಡಿನ ಮೇಲೆ ಸ್ಥಿರೀಕರಿಸಿ, ಬಣ್ಣ ಕಟ್ಟಿ, ಅವುಗಳ ಛಾಯಾಚಿತ್ರವನ್ನು ತೆಗೆದ. ಆಂಥ್ರಾಕ್ಸ್ ಬ್ಯಾಕ್ಟೀರಿಯವು, ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ನೆರಡಿ ರೋಗವನ್ನು ಹರಡುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದ. ಆ ಬಗ್ಗೆ ಸಂಶೋಧನಾ ಬರಹವನ್ನು ಪ್ರಕಟಿಸಿದ (೧೮೭೬).

ಈ ಪ್ರಬಂಧವನ್ನು ಅವನಿಗೆ ಕೀರ್ತಿಯನ್ನು ತಂದುಕೊಟ್ಟಿತು. ಬರ್ಲಿನ್‌ನ ಇಂಪೀರಿಯಲ್ ಹೆಲ್ತ್ ಬ್ಯೂರೋದಲ್ಲಿ ಉದ್ಯೋಗವನ್ನು ದೊರಕಿಸಿತು. ಹೊಸ ಸ್ಥಳದಲ್ಲಿ ದೊರೆತ ಸಂಶೋಧನಾವಕಾಶಗಳನ್ನು ಬಳಸಿಕೊಂಡ. ಪಾಲ್ ಎರ್ಲಿಕ್ (೧೮೫೪-೧೯೧೫) ನೆರವಿನಿಂದ ಬ್ಯಾಕ್ಟೀರಿಯಗಳ ಬಣ್ಣಗಟ್ಟುವಿಕೆಯ ತಂತ್ರಜ್ಞಾನವನ್ನು ಕಲಿತುಕೊಂಡ. ಹಾಗೆಯೇ ಜೂಲಿಯ ರಿಚರ್ಡ್ ಪೆಟ್ರಿ (೧೮೫೨-೧೯೨೧: ಗೌರವ ನಾಮ ಪೆಟ್ರಿಡಿಶ್) ನೆರವಿನಿಂದ ಬ್ಯಾಕ್ಟೀರಿಯಗಳ ಕೃಷಿಕೆಯ (ಕಲ್ಚರ್) ಬಗ್ಗೆ ಪರಿಣತಿಯನ್ನು ಗಳಿಸಿದ. ಇವರಿಬ್ಬರ ನೆರವಿನಿಂದ ಕಾಚ್, ಕ್ಷಯ ಸಂಬಂಧಿತ ಅಧ್ಯಯನಗಳನ್ನು ತ್ವರಿತಗೊಳಿಸಿದ.

ಮೊದಲಿಗೆ ಕ್ಷಯವು ಆನುವಂಶಿಕ ಕಾಯಿಲೆ ಅಥವಾ ದೈವ ಪ್ರಕೋಪದ ಕಾಯಿಲೆ ಎನ್ನುವುದನ್ನು ಅಲ್ಲಗಳೆದ. ಕ್ಷಯಕ್ಕೆ ಕಾರಣವಾದ ಮೈಕೋ ಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಸೂಕ್ಷ್ಮಜೀವಿಯನ್ನು ಪತ್ತೆ ಹಚ್ಚಿದ. ಈ ಬ್ಯಾಕ್ಟೀರಿಯವು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ಕ್ಷಯವನ್ನು ಹರಡುತ್ತದೆ ಎನ್ನುವುದನ್ನು ಪುರಾವೆ ಸಹಿತ ನಿರೂಪಿಸಿ ೧೮೮೨ ಪ್ರಬಂಧವನ್ನು ಪ್ರಕಟಿಸಿದ.

ಕೂಡಲೇ ಅವನಿಗೆ ಬರ್ಲಿನ್ ವಿಶ್ವವಿದ್ಯಾನಿಲಯದಿಂದ ಆಹ್ವಾನ ಬಂದಿತು. ಅಲ್ಲಿ ಆರಂಭವಾದ ಇನ್‌ಸ್ಟಿಟ್ಯೂಟ್ ಆಫ್ ಹೈಜೀನ್ ಸಂಸ್ಥೆಯ ನಿರ್ದೇಶಕ ನಾದ. ಕ್ಷಯ ಬ್ಯಾಕ್ಟೀರಿಯದ ಒಡಲಿನಿಂದ ಒಂದು ಔಷಧವನ್ನು ರೂಪಿಸಿ, ಕ್ಷಯವನ್ನು ಗುಣಪಡಿಸುವ ಕನಸನ್ನು ಕಂಡ. ಆದರೆ ಅವನಿಗೆ
ಟ್ಯುಬರ್ಕ್ಯುಲಿನ್ ಎಂಬ ವಸ್ತುವು ದೊರೆಯಿತು. ಇದರಿಂದ ಮನುಷ್ಯರಲ್ಲಿ ಕ್ಷಯ ಸೋಂಕನ್ನು ಪತ್ತೆಹಚ್ಚುವುದು ಸುಲುಭವಾಯಿತು. ಇದು ಮಾಂಟೂ ಪರೀಕ್ಷೆ ಅಥವ ಪಿಪಿಡಿ ಪರೀಕ್ಷೆ ಹೆಸರಾಯಿತು. ರಾಬರ್ಟ್ ಕಾಚ್ ೧೯೦೫ರಲ್ಲಿ ನೊಬೆಲ್ ಪಾರಿತೋಷಕದಿಂದ ಪುರಸ್ಕೃತನಾದ.

ಡಾ.ಪಾಲ್ ಎರ್ಲಿಕ್ ಪರ್ಷಿಯಾ ದೇಶದ ಸಿಲೇಸಿಯದಲ್ಲಿ ಹುಟ್ಟಿದ. ೧೮೭೮ರಲ್ಲಿ ವೈದ್ಯಕೀಯ ಪದವಿ ಗಳಿಸಿದ. ಬೆರ್ಲಿನ್ ಮೆಡಿಕಲ್ ಕ್ಲಿನಿಕ್‌ನಲ್ಲಿ ಸಂಶೋಧಕನಾಗಿ ಸೇರಿದ ಈತನು ಸೂಕ್ಷ್ಮಜೀವಿಗಳು ಹಾಗೂ ಊತಕಗಳಿಗೆ ಬಣ್ಣ ಕಟ್ಟುವ ತಂತ್ರಜ್ಞಾನವನ್ನು (ಸ್ಟೇಯಿನಿಂಗ್) ಕರಗತಗೊಳಿಸಿಕೊಂಡ. ಈತನ ನೆರವಿನಿಂದ ರಾಬರ್ಟ್ ಕಾಚ್, ಕ್ಷಯ ಬ್ಯಾಕ್ಟೀರಿಯವನ್ನು ಸುಲುಭವಾಗಿ ಪತ್ತೆಹಚ್ಚಿದ. ಬಣ್ಣಗಳ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಎರ್ಲಿಕ್, ಕೆಲವು ಬಣ್ಣಗಳು ರೋಗಜನಕಗಳನ್ನು ನಿಗ್ರಹಿಸಲು ಶಕ್ತವಾಗಿರಬಹುದು ಎಂದು ತರ್ಕಿಸಿದ.

ಆತನ ತರ್ಕ ಸುಳ್ಳಾಗಲಿಲ್ಲ. ಸ್ಯಾಲ್ವರಸನ್ ಎಂಬ ಹೆಸರಿನ ಸಂಯುಕ್ತವು, ಮ್ಯಾಜಿಕ್ ಬುಲೆಟ್ ರೂಪದಲ್ಲಿ ಸಿಫಿಲಿಸ್ ಕಾಯಿಲೆಯನ್ನು ಗುಣಪಡಿಸಿತು. ೧೯೦೮ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ ಎರ್ಲಿಕ್ ರಸಾಯನ ಚಿಕಿತ್ಸೆ (ಕೀಮೋಥೆರಪಿ) ಎಂಬ ಹೊಸ ಚಿಕಿತ್ಸಾ ತಂತ್ರಜ್ಞಾನವು ಹುಟ್ಟಲು ಕಾರಣನಾದ. ಡಾ.ಸೆಲ್ಮನ್ ವಕ್ಸ್‌ಮನ್ (೧೮೮೮-೧೯೭೩) ರಷ್ಯಾ ಮೂಲದವನಾದರೂ ೧೯೧೦ರಲ್ಲಿ ಅಮೆರಿಕದಲ್ಲಿ ನೆಲೆಸಿದ. ಜೀವಶಾಸ್ತ್ರದಲ್ಲಿ ಪಿ.ಎಚ್‌ಡಿ ಪಡೆದ ಮೇಲೆ ರುಟ್ಗರ್ ವಿದ್ಯಾಲಯದಲ್ಲಿ ಮಣ್ಣಿನ ಸೂಕ್ಷ್ಮಜೀವಿಗಳ ತಜ್ಞನಾಗಿ ಕೆಲಸವನ್ನು ಮಾಡಲಾರಂಭಿಸಿದ.

ತನ್ನ ವಿದ್ಯಾರ್ಥಿಗಳೊಂದಿಗೆ ಸೇರಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಬಳಸಿಕೊಂಡು ಹೊಸ ಪ್ರತಿಜೈವಿಕಗಳನ್ನು ರೂಪಿಸುವ ಯೋಜನೆಯನ್ನು ಹಾಕಿಕೊಂಡ. ಆತನು ರೂಪಿಸಿದ ನಿಯೋಮೈಸಿನ್ ಪ್ರತಿಜೈವಿಕವು ಇಂದಿಗೂ ಸಹ ಬಳಕೆಯಲ್ಲಿದೆ. ವಕ್ಸ್‌ಮನ್ ಬಳಿ ಆಲ್ಬರ್ಟ್ ಶಾಟ್ಜ್ (೧೯೨೦-೨೦೦೫) ಎಂಬ ಸ್ನಾತಕ ವಿದ್ಯಾರ್ಥಿಯಿದ್ದ. ೧೯೪೩ರಲ್ಲಿ ಈತನು ಮಣ್ಣಿನಲ್ಲಿದ್ದ ಸ್ಟ್ರೆಪ್ಟೋಮೈಸೀಸ್ ಗ್ರೈಸಿಯನ್ಸ್ ಎಂಬ ಬ್ಯಾಕ್ಟೀರಿಯವನ್ನು ಗುರುತಿಸಿ, ಪ್ರತ್ಯೇಕಿಸಿ,
ಶುದ್ಧರೂಪದಲ್ಲಿ ಸಂಗ್ರಹಿಸಿದ. ವಕ್ಸ್‌ಮನ್ ಕೂಡಲೇ ಮೆರ್ಕ್ ಔಷಧ ತಯಾರಿಕಾ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡ.

ಶಿಷ್ಯನು ಕಂಡುಹಿಡಿದ ಬ್ಯಾಕ್ಟೀರಿಯ ಉತ್ಪಾದಿಸುವ ಸ್ಟ್ರೆಪ್ಟೋಮೈಸೀನ್ ಪ್ರತಿಜೈವಿಕವು ಕ್ಷಯವನ್ನು ಗುಣಪಡಿಸಬಲ್ಲದೇ ಎಂಬುದರ ಬಗ್ಗೆ ಕ್ರಮಬದ್ಧ ಸಂಶೋಧನೆಯನ್ನು ನಡೆಸಿದ. ೧೯೪೭ರಲ್ಲಿ ಕ್ಷಯವನ್ನು ಗುಣಪಡಿಸಬಲ್ಲ ಮೊದಲ ಔಷಧವನ್ನು ಜಗತ್ತಿಗೆ ನೀಡಿದ. ಒಂದು ವರ್ಷದ ಒಳಗೆ ಸ್ವೀಡಿಶ್ ವಿಜ್ಞಾನಿ ಜೋರ್ಗನ್ ಲೆಹ್ಮನ್ (೧೮೯೮-೧೯೮೯) ಪ್ಯಾರಾ ಅಮೈನೋ ಸ್ಯಾಲಿಸಿಲಿಕ್ ಆಸಿಡ್ (ಪ್ಯಾಸ್) ಎಂಬ ಔಷಧವನ್ನು ರೂಪಿಸಿದ.

ಸ್ಟ್ರೆಪ್ಟೋಮೈಸಿನ್ ಮತ್ತು ಪ್ಯಾಸ್ ಎರಡೂ ಔಷಧಗಳನ್ನು ಒಟ್ಟಿಗೆ ನೀಡಿದಾಗ ಅವು ಕ್ಷಯವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದವು. ೧೯೫೨ರಲ್ಲಿ ವಕ್ಸ್‌ಮನ್‌ನಿಗೆ ಸ್ಟ್ರೆಪ್ಟೋಮೈಸಿನ್ ಕಂಡು ಹಿಡಿದು ದಕ್ಕಾಗಿ ನೊಬೆಲ್ ಪಾರಿತೋಷಕವು ದೊರೆಯಿತು. ಆದರೆ ನೊಬೆಲ್ ಸಮಿತಿಯು ಶಾಟ್ಜ್ ಮತ್ತು ಲೆಹ್ಮನ್‌ರನ್ನು ಪ್ರಜ್ಞಾಪೂರ್ವಕವಾಗಿ ಮರೆಯಿತು. ಡಾ.ಆಲ್ಬರ್ಟ್ ಶಾಟ್ಜ್, ಅಮೆರಿಕದ ಕನೆಕ್ಟಿಕಟ್ ಪ್ರದೇಶದಲ್ಲಿ ಜನಿಸಿದ. ಕೃಷಿ ಪದವಿಯನ್ನು ಪಡೆಯಲು ರಟ್ಗರ್ ವಿಶ್ವವಿದ್ಯಾಲಯವನ್ನು ಸೇರಿಕೊಂಡ. ಆದರೆ ವಕ್ಸ್‌ಮನ್ ಸಂಸರ್ಗದಿಂದ ಸೂಕ್ಷ್ಮಜೀವಿಶಾಸದಲ್ಲಿ ಆಸಕ್ತಿಯನ್ನು ತಳೆದು ಸಂಶೋಧನೆಗೆ ಇಳಿದ.

ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ಅಲೆಗ್ಸಾಂಡರ್ ಫ್ಲೆಮಿಂಗ್ ಕಂಡು ಹಿಡಿದ ಪೆನಿಸಿಲಿನ್, ರೋಧಕತೆಯ (ರೆಸಿಸ್ಟನ್ಸ್) ಕಾರಣ ಕೆಲವರಲ್ಲಿ ವಿ-ಲವಾಗಿ, ಸೈನಿಕರು ಸಾಯುವುದನ್ನು ಕಣ್ಣಾರೆ ಕಂಡ. ಹೊಸ ಪ್ರತಿಜೈವಿಕವನ್ನು ಜಗತ್ತಿಗೆ ನೀಡಲು ನಿರ್ಧರಿಸಿದ. ಅದರಂತೆಯೇ ಸ್ಟ್ರೆಪ್ಟೋಮೈಸಿನ್ ರೂಪಿಸಿದ. ಈ ಸಂಶೋಧನೆಯಿಂದ ಅವನಿಗೆ ಸುಲುಭವಾಗಿ ಪಿ.ಎಚ್‌ಡಿ ದೊರೆಯಿತು. ಆದರೆ ಮೆರ್ಕ್ ಜತೆಯಲ್ಲಿ ವಕ್ಸ್‌ಮನ್ ಮಾಡಿಕೊಂಡಿದ್ದ ಅಪಾರ
ಮೊತ್ತದ ಒಪ್ಪಂದದಲ್ಲಿ ಶಾಟ್ಜ್ ಹೊರಗುಳಿದಿದ್ದ. ಹಾಗಾಗಿ ಅವನಿಗೆ ನ್ಯಾಯಬದ್ಧವಾಗಿ ದೊರೆಯಬೇಕಾಗಿದ್ದ ಹಣ, ಆತನಿಗೆ ದೊರೆಯಲಿಲ್ಲ. ಶಾಟ್ಜ್‌ನಿಗೆ ಅಪಾರ ಖೇದವಾಗಿ ಅಮೆರಿಕವನ್ನೇ ಬಿಟ್ಟು ಚಿಲಿ ದೇಶಕ್ಕೆ ಹೋದ. ಆದರೆ ವಕ್ಸ್‌ಮನ್ ಜೊತೆಯಲ್ಲಿ ವೈಯುಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ  ಸಂಘರ್ಷಕ್ಕಿಳಿದ. ನೊಬೆಲ್ ಸಮಿತಿಯೂ ಸಹ ಶಾಟ್ಜ್‌ನನ್ನು ಸಂಪೂರ್ಣವಾಗಿ ಕಡೆಗಣಿಸಿದಾಗ ಹತಾಶನಾದ.

ಅಲ್ಲಿಯೂ ಅವನು ಆರ್ಥಿಕವಾಗಿ ನಷ್ಟವನ್ನು ಅನುಭವಿಸಿದ. ೧೯೯೦ರಲ್ಲಿ ಅಮೆರಿಕದ ಔದ್ಯೋಗಿಕ ಸೂಕ್ಷ್ಮಜೀವಿ ವಿಜ್ಞಾನದ ಸಂಸ್ಥೆ ಹಾಗೂ ಅಮೆರಿಕದ ಎದೆಗೂಡಿನ ತಜ್ಞರ ಸಂಸ್ಥೆಗಳು ಕ್ಷಯ ಚಿಕಿತ್ಸೆಯ ಯಶಸ್ಸು ಶಾಟ್ಜ್‌ಗೆ ಸಹ ಸಲ್ಲಬೇಕು ಎಂದು ಅಧಿಕೃತವಾಗಿ ಸಾರಿದರು. ಡಾ.ಜಾರ್ಗನ್ ಲೆಹ್ಮನ್, ಡೆನ್ಮಾರ್ಕಿನ ಕೋಪನ್‌ಹೇಗನ್ ನಲ್ಲಿ ಹುಟ್ಟಿದ. ಲಂಡ್ ವಿಶ್ವವಿದ್ಯಾನಿಲಯದಿಂದ ಅಂಗಕ್ರಿಯಾ ವಿಜ್ಞಾನದಲ್ಲಿ ಪದವಿಯನ್ನು ಪಡೆದ. ಸ್ವೀಡನ್ನಿಗೆ
ಬಂದ. ಸಂಶೋಧನೆಯಲ್ಲಿ ತೊಡಗಿಕೊಂಡ. ೧೯೪೧ರಲ್ಲಿ ರಕ್ತಗರಣೆಯನ್ನು ಕರಗಿಸಬಲ್ಲ ಡೈಕ್ಯುಮರಾಲ್ ಔಷಧವನ್ನು ರೂಪಿಸಿದ.

ಎರಡು ವರ್ಷಗಳ ನಂತರ ಪ್ಯಾಸ್ ರೂಪಿಸಿ, ಕ್ಷಯ ರೋಗಿಗಳ ಮೇಲೆ ಪ್ರಯೋಗಿಸಿದ. ಲೆಹ್ಮನ್ ತನ್ನ ಅಷ್ಟೂ ಅಧ್ಯಯನವನ್ನು ವಿಶ್ವದ ಎರಡನೆಯ
ಮಹಾಯುದ್ಧದವಧಿಯಲ್ಲಿ ನಡೆಸಿದ ಕಾರಣ, ಅವನ ಸಂಶೋಧನೆಯು ಹೊರಜಗತ್ತಿಗೆ ತಿಳಿಯಲಿಲ್ಲ. ವಕ್ ಮನ್‌ನಿಗೂ ಸಹ ಈ ಬಗ್ಗೆ ಮಾಹಿತಿಯಿರ ಲಿಲ್ಲ. ೧೯೪೮ರ ವೇಳೆಗೆ ಕ್ಷಯ ಬ್ಯಾಕ್ಟೀರಿಯವು ಸ್ಟ್ರೆಪ್ಟೋಮೈಸಿನ್ ಪ್ರತಿಜೈವಿಕಕ್ಕೆ ರೋಧಕತೆಯನ್ನು ಬೆಳೆಸಿಕೊಂಡ ಕಾರಣ, ಎರಡೂ ಔಷಧಗಳನ್ನು ಒಟ್ಟಿಗೆ ಪ್ರಯೋಗಿಸುವ ಅಧ್ಯಯನಗಳು ನಡೆದವು. ಜೋಡಿ ಔಷಧಗಳು ಹೆಚ್ಚು ಪರಿಣಾಮಕಾರಿಯಾದವು.

ಪ್ಯಾಸ್‌ನನ್ನು ಇಂದಿಗೂ ಬಳಸುತ್ತಿದ್ದೇವಾದರೂ, ಆತ ಸದಾ ಕಾಲಕ್ಕೂ ನೊಬೆಲ್ ವಂಚಿತನಾಗಿ ಉಳಿಯುತ್ತಾನೆ ಎನ್ನುವುದು ಒಂದು ವಿಪರ್ಯಾಸ ವಾಗಿದೆ.