ಪ್ರಸ್ತುತ
ಶ್ರೀಧರ್ ಡಿ.ರಾಮಚಂದ್ರಪ್ಪ
ಇತ್ತೀಚೆಗೆ ನಡೆದ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಪ್ರಾದೇಶಿಕ ಅಂಗ ಪಕ್ಷಗಳ ನೆರವಿನಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ೨೯೨ ಸಂಖ್ಯೆಯ ಸಾಧಾರಣ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಬಿಜೆಪಿಯ ಸಾರಥಿ ನರೇಂದ್ರ ಮೋದಿಯವರ ೨೦೧೪ ರಿಂದ ೨೦೨೪ ವರೆಗಿನ ಆಡಳಿತಕ್ಕೆ ಮತದಾರ ಪ್ರಭು ಸಂಪೂರ್ಣವಾಗಿ ಜೈ ಎನ್ನದೇ ಬೇಸರಗೊಡಿರುವುದು ಜೂನ್ ೪ರಂದು ಹೊರಬಿದ್ದ ಏಳು ಹಂತಗಳ ಲೋಕಸಭೆ ಚುನಾವಣೆ ಫಲಿತಾಂಶದಿಂದ ತಿಳಿಯುತ್ತದೆ.
ಇದೇ ಸಂದರ್ಭದಲ್ಲಿ ಮತ್ತೆ ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆಯನ್ನು ಈ ಫಲಿತಾಂಶ ಎತ್ತಿ ತೋರಿಸುತ್ತದೆ. ಈಗೀರುವಾಗ ದಕ್ಷಿಣ ಭಾರತದ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳು ನಾಡಿನ ಪ್ರಾದೇಶಿಕ ಪಕ್ಷಗಳ ಹಂಗಾಮ ಶುರುವಾಗಿದೆ. ಬಿಜೆಪಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಾವಧಿಯಲ್ಲಿ ಹೆಚ್ಚಿನ ಮನ್ನಣೆ ಗಳಿಸಿದ್ದ ಈ ರಾಜ್ಯಗಳ ಪಕ್ಷಗಳು, ನಂತರದ ಮತ್ತೊಬ್ಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರದ ಹತ್ತು ವರ್ಷಗಳ ಅವಧಿಯ ಆಡಳಿತಕ್ಕೆ ನಿರ್ಣಾಯಕ ಪಾತ್ರವನ್ನು ವಹಿಸಿದ್ದವು.
ಇಂತಹ ಸನ್ನಿವೇಶದಲ್ಲಿ ೩ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ದೇಶದಲ್ಲಿ ಹಿಂದುತ್ವದ ಹವಾ ಸೃಷ್ಟಿಸಿದ್ದ ನರೇಂದ್ರ ಮೋದಿ ಆರಂಭದಲ್ಲಿ ದೇಶದ ಜನತೆಯಲ್ಲಿ ಅಪಾರ ಕುತೂಹಲ, ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು. ಹತ್ತು ವರ್ಷಗಳ ಅವಧಿಯಲ್ಲಿ ಬಿಜೆಪಿ ಬಹುಮತ ಪಡೆದು ಜಯಭೇರಿ ಬಾರಿಸಿ ಮೈತ್ರಿಕೂಟದ ಅಂಗ ಪಕ್ಷಗಳ ನೆರವಿಲ್ಲದೇ ಅಧಿಕಾರಕ್ಕೆ ಬಂದಿತ್ತು. ಒಂದೆಡೆ ವಿಪಕ್ಷ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವ ಇಲ್ಲದೇ ಈ ಅವಧಿಯ ಪ್ರಧಾನಿ ನರೇಂದ್ರ ಮೋದಿಗೆ ಯಾರೂ ಎದುರಾಳಿ ಇಲ್ಲದೇ, ಸಲೀಸಾಗಿ ಆಡಳಿತ ನಡೆಸಲು ಅನುಕೂಲವಾಗಿತ್ತು. ಆದರೆ ಹತ್ತು ವರ್ಷಗಳ ನಂತರ ಮೋದಿ ಅಲೆಯು ಕಡಿಮೆಯಾಗಿರುವುದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶವೇ ಕೈಗನ್ನಡಿಯಾಗಿದೆ.
ಹಾಗಾಗಿ, ಈ ಸಲ ಬಹುಮತಕ್ಕೆ ಮ್ಯಾಜಿಕ್ ನಂಬರ್ ೨೭೨ನ್ನು ಸ್ವತಂತ್ರವಾಗಿ ತಲುಪಲು ಮೋದಿ ನಾಯಕತ್ವದ ಬಿಜೆಪಿಗೆ ಸಾಧ್ಯವಾಗದೇ ೨೪೪ ಸ್ಥಾನ ಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಈಗಾಗಿ, ಮತ್ತೆ ದೇಶದ ಕೇಂದ್ರ ಸರಕಾರ ರಚನೆಗೆ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿ ನಲ್ಲಿ ಸೀಮಾಂಧ್ರದ ತೆಲುಗು ದೇಶಂ ಪಕ್ಷ ಮತ್ತು ಬಿಹಾರದ ಜೆಡಿಯು ಈ ಬಾರಿ ಕೇಂದ್ರದಲ್ಲಿ ರಚನೆಯಾಗಲಿರುವ ಬಿಜೆಪಿ ಸಾರಥ್ಯದ ಎನ್ ಡಿಎ ಮೈತ್ರಿ ಕೂಟದ ಸರಕಾರ ರಚನೆಗೆ ಅವುಗಳ ಬೆಂಬಲ ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಸೃಷ್ಟಿಸಿದೆ.
ಕಾಂಗ್ರೆಸ್‌ನಿಂದ ಜೆಡಿಯುಗೆ ಉಪ ಪ್ರಧಾನಿ ಹುದ್ದೆ, ಟಿಡಿಪಿಗೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆಯನ್ನು ಆಫರ್ ನೀಡಲಾಗಿತ್ತು. ಒಂದೊಮ್ಮೆ ಇಂಡಿಯಾ ಒಕ್ಕೂಟದ ಸರಕಾರ ರಚನೆಗೆ ಬೆಂಬಲ ನೀಡಿದ್ದಲ್ಲಿ ಎಂದು. ಆದರೆ ಈ ಪಕ್ಷಗಳ ಮುಖ್ಯಸ್ಥರಾದ ನಿತೀಶ್ ಹಾಗೂ ಚಂದ್ರಬಾಬು ನಾಯ್ಡು ಅವರು ಮೊದಲೇ ನಿರ್ಧರಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲ ಘೋಷಿಸಿzರೆ. ಇದರ ನಡುವೆ ಹಲವು ಬೇಡಿಕೆಗಳ ಪಟ್ಟಿಯನ್ನೇ ನರೇಂದ್ರ ಮೋದಿ ನಾಯಕತ್ವದ ಬಿಜೆಪಿಗೆ ನೀಡಿದ್ದು, ಅದರಲ್ಲಿ ಲೋಕಸಭೆ ಸ್ಪೀಕರ್, ಹಲವು ಕ್ಯಾಬಿನೆಟ್ ಸಚಿವ ಸ್ಥಾನ, ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವಂತೆ ತಮ್ಮ ಅಹವಾಲುಗಳನ್ನು ಸಲ್ಲಿಸಲಾಗಿದೆ.
ಇದರಿಂದ ಸಹಜವಾಗಿ ಮೋದಿ ನಾಯಕತ್ವದ ಬಿಜೆಪಿಗೆ ಇಕ್ಕಟ್ಟಿನ ಸ್ಥಿತಿ ನಿರ್ಮಿಸಲಾಗಿದೆ. ಅಂದಹಾಗೇ, ನರೇಂದ್ರ ಮೋದಿ ಅವರು ಈ ಮೊದಲಿನ ಹತ್ತು
ವರ್ಷಗಳ ಆಡಳಿತದ ಅವಧಿಯಲ್ಲಿ ನಡೆದುಕೊಂಡ ಸರ್ವಾಧಿಕಾರಿ ಧೋರಣೆ ಈ ಬಾರಿಯ ಅಽಕಾರಾವಽಯಲ್ಲಿ ಇರಲು ಸಾಧ್ಯವಿಲ್ಲ. ಆ ದಿಶೆಯಲ್ಲಿ ಪ್ರಾದೇಶಿಕ ಪಕ್ಷಗಳು ಸರಕಾರದ ಜುಟ್ಟನ್ನು ತಮ್ಮ ಕೈಲಿ ಹಿಡಿದಿಟ್ಟುಕೊಳ್ಳುವ ಮೂಲಕ ನೀತಿ-ನಿರ್ಧಾರಗಳಲ್ಲಿ ತಮ್ಮ ನಡೆಯನ್ನು ನಿರ್ಣಾಯಕ ಗೊಳಿಸುತ್ತವೆ. ಇಂತಹ ಸನ್ನಿವೇಶದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿಯವರ ನಡೆಯು ತಂತಿಯ ಮೇಲಿನ ನಡಿಗೆಯನ್ನು
ನೆನಪಿಸುವಂತಿರುತ್ತದೆ. ಆ ಮಟ್ಟಿಗೆ ಪ್ರಾದೇಶಿಕ ಪಕ್ಷಗಳ ಹಂಗಾಮ ಮತ್ತೆ ಶುರುವಾಗಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.