Sunday, 15th December 2024

ಚಹಾ ಒಂದು ಆಹ್ಲಾದಕರ ಪಾನೀಯ

ವಿಶೇಷ

ಬಸವರಾಜ ಎಂ.ಯರಗುಪ್ಪಿ

ಚಹಾದ ಸ್ವಭಾವವು ನಮ್ಮನ್ನು ಜೀವನದ ಶಾಂತ ಚಿಂತನೆಯ ಜಗತ್ತಿಗೆ ಕರೆದೊಯ್ಯುತ್ತದೆ- ಎಂದು ಲಿನ್ ಯುಟಾಂಗ್ ಹೇಳಿರುವ ಹಾಗೆ ಚಹಾ ಸೇವನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದ್ದು ಅಕ್ಷರಶಃ ಸತ್ಯವಾದ ಮಾತು. ಹಾಗೆಯೇ ಅದು ಜೀವನದಲ್ಲಿ ಒಂದು ಪ್ರಾಮುಖ್ಯ ತೆಯ ಅಂಶವಾಗಿದೆ. ಅದೆ ರೀತಿ ಚಹಾದ ಪ್ರಾಮುಖ್ಯತೆಯ ಬಗ್ಗೆ ಹಿರಿಯರಂತೂ ಆಗಾಗ್ಗೆ ಈ ಕೆಳಗಿನಂತೆ ಹೇಳುತ್ತಾ ಇರುತ್ತಾರೆ. ಏನಪ್ಪಾ ಅಂದ್ರೆ…

ನೀವು ತಣ್ಣಗಾಗಿದ್ದರೆ, ಚಹಾವು ನಿಮ್ಮನ್ನು ಬೆಚ್ಚಗಾಗಿಸುತ್ತದೆ; ನೀವು ತುಂಬಾ ಬಿಸಿಯಾಗಿದ್ದರೆ, ಅದು ನಿಮ್ಮನ್ನು ತಂಪಾಗಿಸುತ್ತದೆ; ನೀವು ಖಿನ್ನತೆಗೆ ಒಳಗಾಗಿದ್ದರೆ, ಅದು ನಿಮ್ಮನ್ನು ಹುರಿದುಂಬಿಸುತ್ತದೆ; ನೀವು ಉತ್ಸುಕರಾಗಿದ್ದರೆ, ಅದು ನಿಮ್ಮನ್ನು ಶಾಂತಗೊಳಿಸುತ್ತದೆ. ಹಾಗೆಯೇ ಚಹಾವು ಹೆಚ್ಚಿನ ಸಮಸ್ಯೆಗಳಿಗೆ ಉತ್ತರವಾಗಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಪರಿಮಳಯುಕ್ತ ಪಾನೀಯ ಯಾವುದೆಂದರೆ
ಅದುವೇ ಚಹಾ ಎಂದು ಹೇಳಿದರೆ ತಪ್ಪಾಗಲಾರದು. ಚಹಾ ಎಂದರೇನು?

ಬಿಸಿಯಾಗಿರುವ ಅಥವಾ ಕುದಿಯುತ್ತಿರುವ ನೀರಿಗೆ ಹದಗೊಳಿಸಲಾದ ಅಥವಾ ಸಂಸ್ಕರಿಸಲಾದ ಎಲೆಗಳನ್ನು ಮಿಶ್ರಗೊಳಿಸಿ ತಯಾರಿಸಲಾಗುವ ಪರಿಮಳದ ಪಾನೀಯಕ್ಕೂ ಚಹಾ ಎಂದೇ ಕರೆಯಲಾಗುತ್ತದೆ. ಚಹಾ, ಕ್ಯಾಮೆಲಿಯಾ ಸಿನೆನ್ಸಿಸ್ ಎಂಬ ಚಹಾ ಸಸ್ಯದ ಎಳೆಯ ಎಲೆಗಳು ಮತ್ತು ಎಲೆಗಳ ಮೊಗ್ಗುಗಳನ್ನು ಹೊಸದಾಗಿ ಕುದಿಸಿದ ನೀರಿನಲ್ಲಿ ಮುಳುಗಿಸಿ ತಯಾರಿಸಿದ ಪಾನೀಯ. ಎರಡು ಪ್ರಮುಖ ಪ್ರಭೇದಗಳನ್ನು ಬಳಸಲಾಗುತ್ತದೆ, ಸಣ್ಣ-ಎಲೆಗಳಿರುವ ಚೀನಾ ಸಸ್ಯ (ಸಿ. ಸಿನೆನ್ಸಿಸ್ ವೆರೈಟಿ ಸಿನೆನ್ಸಿಸ್) ಮತ್ತು ದೊಡ್ಡ-ಎಲೆಗಳ ಅಸ್ಸಾಂ ಸಸ್ಯ (ಸಿ.ಸಿನೆನ್ಸಿಸ್ ವಿಧ ಅಸ್ಸಾಮಿಕಾ). ಈ ಎರಡು ಪ್ರಭೇದಗಳ ಮಿಶ್ರತಳಿಗಳನ್ನು ಸಹ ಬೆಳೆಯಲಾಗುತ್ತದೆ. ಎಲೆಗಳನ್ನು ಹದಗೊಳಿಸಲ್ಪಡಬಹುದು ಅಥವಾ ಹುದುಗದೆ ಬಿಡಬಹುದು.

ಚಹಾ ಮೂಲ ಕುರಿತಾದ ಐತಿಹ್ಯ: ಚೀನಾದ ದಂತಕಥೆ ಯಲ್ಲಿರುವಂತೆ, ಷೆನ್ನಾಂಗ್ ಎನ್ನುವ ಒಬ್ಬ ಜನಪ್ರಿಯ, ಐತಿಹ್ಯವನ್ನು ಹೊಂದಿರುವ ಚೀನಾದ ಚಕ್ರವರ್ತಿ. ಇವರು ಕೃಷಿ ಹಾಗೂ ಚೀನಾದ ಔಷಧಿಯ ಸಂಶೋಧಕ. ಕ್ರಿ.ಪೂ ಸರಿಸುಮಾರು ೨೭೩೭ ಕಾಲದಲ್ಲಿ ಒಂದು ಬೋಗುಣಿಯಷ್ಟು ಕುದಿಯುವ ನೀರನ್ನು ಕುಡಿಯುತ್ತಿದ್ದ. ಅದೇ ಸಮಯಕ್ಕೆ ಹತ್ತಿರದ ಮರವೊಂದರಿಂದ ಒಂದಷ್ಟು ಎಲೆಗಳು ಹಾರಿ ಬಂದು, ಆತನ ಬೋಗುಣಿ(ಪಾತ್ರೆ)ಯ ನೀರಿಗೆ ಬಿದ್ದು, ಅದರ ಬಣ್ಣವನ್ನು ಬದಲಾಯಿಸಿದವು. ಕುದಿಸಿದ ನೀರಿನಲ್ಲಿನ ಈ ಮಿಶ್ರಣವನ್ನು ಒಂದು ಬಾರಿ ರುಚಿ ನೋಡಿದ ಚಕ್ರವರ್ತಿಯು, ಅದರ ಪರಿಮಳ ಹಾಗೂ ಪುನಶ್ಚೇತನಕಾರಿ ಗುಣಲಕ್ಷಣಗಳಿಂದಾಗಿ ಆಹ್ಲಾದಕರವಾದ ರೀತಿಯಲ್ಲಿ ಅಚ್ಚರಿಗೊಂಡನು ಹೀಗೆ ಚಹಾ ಮೂಲದ ಇತಿಹಾಸ ಗೊತ್ತಾಯಿತು.

ಈ ದಂತಕಥೆ ವಾಸ್ತವವಾಗಿ ಯಾವುದಾದರೂ ಆಧಾರವನ್ನು ಹೊಂದಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಶತಮಾನಗಳವರೆಗೆ ಏಷ್ಯಾದ ಸಂಸ್ಕೃತಿಯಲ್ಲಿ ಚಹಾವು ಒಂದು ಮುಖ್ಯ ಪಾನೀಯವಾಗಿ, ಒಂದು ರೋಗ ಪರಿಹಾರಕವಾಗಿ ಮತ್ತು ಒಂದು ಹಿರಿಮೆಯ ಕುರುಹಾಗಿ ಒಂದು
ಗಮನಾರ್ಹವಾದ ಪಾತ್ರವನ್ನು ವಹಿಸಿದೆ. ಆದ್ದರಿಂದ, ಇದರ ಹುಟ್ಟುವಿಕೆಯ ಕುರಿತಾದ ಸಿದ್ಧಾಂತಗಳು ಅನೇಕ ವೇಳೆ ಧಾರ್ಮಿಕ ಅಥವಾ ಭವ್ಯವಾದ ಸ್ವರೂಪದಿಂದ ಕೂಡಿರುವುದು ಅಚ್ಚರಿಯ ವಿಷಯವೇನೂ ಅಲ್ಲ.

ಈ ದಿನಾಚರಣೆಯ ಹಿನ್ನೆಲೆ: ಆಧುನಿಕ ಯುಗದಲ್ಲಿ ಚಹಾ ದಿನ ಆಚರಣೆ ಹಿನ್ನೆಲೆಯನ್ನು ಗಮನಿಸಿದರೆ ೨೦೦೫ರಲ್ಲಿ, ಮೊದಲ ಅಂತಾರಾಷ್ಟ್ರೀಯ ಚಹಾ ದಿನವನ್ನು ಭಾರತದ ನವದೆಹಲಿಯಲ್ಲಿ ಆಚರಿಸಲಾಯಿತು. ಮತ್ತೊಂದೆಡೆ, ಭಾರತ ಸರಕಾರವು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಗೆ
೨೦೧೫ರಲ್ಲಿ ಅಂತಾರಾಷ್ಟ್ರೀಯ ಚಹಾ ದಿನವನ್ನು ಪ್ರಪಂಚದಾದ್ಯಂತ ವಿಸ್ತರಿಸಲು ಶಿಫಾರಸು ಮಾಡಿತು.

ಭಾರತದಂತಹ ಮತ್ತು ಶ್ರೀಲಂಕಾ , ನೇಪಾಳ, ವಿಯೆಟ್ನಾಂ, ಇಂಡೋನೇಷಿಯಾ, ಬಾಂಗ್ಲಾದೇಶ, ಕೀನ್ಯಾ, ಮಲೇಷಿಯಾ, ಉಗಾಂಡಾ ಹಾಗೂ ತಾಂಜಾ ನಿಯಾದಂತಹ ಚಹಾ ಉತ್ಪಾದಿಸುವ ದೇಶಗಳಲ್ಲಿ ೨೦೦೫ ರಿಂದ ಡಿಸೆಂಬರ್ ೧೫ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸುತ್ತಾ ಬರಲಾ ಗುತ್ತಿದೆ. ಅದೇ ರೀತಿ ವಿಶ್ವಸಂಸ್ಥೆಯ ಪ್ರಕಾರ ವಾರ್ಷಿಕವಾಗಿ ಮೇ ೨೧ ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ.

ಸಂಬಂಧಿಸಿದ ನಿರ್ಣಯವನ್ನು ಡಿಸೆಂಬರ್‌ ೨೧, ೨೦೧೯ ರಂದು ಅಂಗೀಕರಿಸಲಾಯಿತು. ವೈಜ್ಞಾನಿಕ ಹಿನ್ನೆಲೆಯಲ್ಲಿ ಚಹಾದ ಪ್ರಯೋಜನೆಗಳು:
ಚಹಾ ಎಲೆಗಳು ೭೦೦ಕ್ಕೂ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಒಳಗೊಂಡಿದ್ದು, ಅವುಗಳ ಪೈಕಿ ಮಾನವನ ಆರೋಗ್ಯಕ್ಕೆ ತೀರಾ ಸನಿಹವಾಗಿ ಸಂಬಂಧಿಸಿರುವ ಸಂಯುಕ್ತಗಳೆಂದರೆ, -ವನಾಯ್ಡ್‌ಗಳು, ಅಮೈನೋ ಆಮ್ಲಗಳು, ವಿಟಮಿನ್ ಗಳು (ಸಿ, ಈ ಮತ್ತು ಕೆ), ಕೆಫೀನ್ ಮತ್ತು ಪಾಲಿಸ್ಯಾಕರೈಡ್
ಗಳು. ಎಲ್ಲಕ್ಕಿಂತ ಮಿಗಿಲಾಗಿ, ಮಾನವ ಶರೀರದ ಜೀವಕೋಶದ-ಮಧ್ಯಸ್ಥಿಕೆಯ ಪ್ರತಿರಕ್ಷಣಾ ಕಾರ್ಯದೊಂದಿಗೆ ಚಹಾ ಸೇವನೆಯು ಸಂಬಂಧ ಹೊಂದಿದೆ
ಎಂದು ಇತ್ತೀಚೆಗೆ ಸಾಬೀತುಮಾಡಲ್ಪಟ್ಟಿದೆ.

ಕರುಳಿಗೆ ಸಂಬಂಧಿಸಿದ ಪ್ರಯೋಜನಕಾರಿ ಸೂಕ್ಷ್ಮ ಜೀವಕೋಶಗಳನ್ನು ಸುಧಾರಿಸುವಲ್ಲಿ ಚಹಾವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲ, ಕರುಳಿನ ಅಸಮರ್ಪಕತೆಗಳಿಗೆ ಪ್ರತಿಯಾಗಿ ಪ್ರತಿರಕ್ಷಕ ಗುಣವನ್ನು ಒದಗಿಸುವಲ್ಲಿ ಹಾಗೂ ಉತ್ಕರ್ಷಣಶೀಲ ಹಾನಿಯಿಂದ ಜೀವಕೋಶದ
ಒಳಪೊರೆಗಳನ್ನು ರಕ್ಷಿಸುವಲ್ಲಿಯೂ ಚಹಾವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚಹಾದಲ್ಲಿ ಕ್ಲೋರೀನ್ ಅಂಶವು ಇರುವುದರಿಂದ, ಇದು ಹಲ್ಲಿನ ಸವೆತವನ್ನೂ ತಡೆಗಟ್ಟುತ್ತದೆ.

ರಕ್ತದೊತ್ತಡವನ್ನು, ಮೇಧಸ್ಸನ್ನು ಕುಗ್ಗಿಸುವ ಚಟುವಟಿಕೆ ಯನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ, ರಕ್ತದ-ಗ್ಲೂಕೋಸ್‌ನ ಚಟುವಟಿಕೆಯನ್ನು ತಗ್ಗಿಸುವ ಮೂಲಕ ಪರಿಧಮನಿಯ ಹೃದ್ರೋಗ ಹಾಗೂ ಮಧುಮೇಹವನ್ನು ತಡೆಗಟ್ಟುವಲ್ಲಿ ಚಹಾದ ಪಾತ್ರವು ಉತ್ತಮ ರೀತಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ. ಹಸಿರು ಮತ್ತು ಕಪ್ಪು ಚಹಾ ಮಿಶ್ರಣಗಳೆರಡೂ ಅನೇಕ ಉತ್ಕರ್ಷಣಕಾರಿ-ನಿರೋಧಕಗಳನ್ನು, ಮುಖ್ಯವಾಗಿ ಕ್ಯಾಟ್ಚಿನ್‌ಗಳನ್ನು ಒಳಗೊಂಡಿದ್ದು, ಅವು ಕ್ಯಾನ್ಸರ್ ಜನಕ-ನಿರೋಧಕ, ವಿಕೃತಿ ಜನಕ-ನಿರೋಧಕ ಮತ್ತು ಗಡ್ಡೆಗಳ-ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತವೆ.

ಚಹಾ ಭಾರತಕ್ಕೆ ಹೇಗೆ ಆಗಮನವಾಯಿತು?: ಭಾರತದಲ್ಲಿ ಮೊದಲ ಬಾರಿಗೆ ಚಹಾವನ್ನು ೧೮೨೪ರಲ್ಲಿ ಬರ್ಮಾ ಮತ್ತು ಭಾರತದ ಅಸ್ಸಾಂ ನಡುವಿನ ಗಡಿಯಲ್ಲಿ ಬೆಟ್ಟಗಳಲ್ಲಿ ಚಹಾ ಸಸ್ಯಗಳನ್ನು ಕಂಡುಹಿಡಿಯಲಾಯಿತು. ಬ್ರಿಟಿಷರು೧೮೩೬ರಲ್ಲಿ ಭಾರತಕ್ಕೆ ಮತ್ತು ೧೮೬೭ರಲ್ಲಿ ಸಿಲೋನ್ (ಶ್ರೀಲಂಕಾ)ಗೆ ಚಹಾ ಸಂಸ್ಕೃತಿಯನ್ನು ಪರಿಚಯಿಸಿದರು. ಮೊದಲಿಗೆ ಅವರು ಚೀನಾದಿಂದ ಬೀಜಗಳನ್ನು ಬಳಸಿದರು. ನಂತರ ಅಸ್ಸಾಂ ಸಸ್ಯದಿಂದ ಬೀಜಗಳನ್ನು ಬಳಸಲಾಯಿತು. ವಿವಿಧ ದೇಶಗಳಲ್ಲಿ ಚಹಾದ ಉತ್ಪಾದನೆ: ಚೀನಾವು ವಿಶ್ವದ ಅತಿ ಹೆಚ್ಚು ಚಹಾ ಉತ್ಪಾದಕ ದೇಶವಾಗಿದೆ. ನಂತರ ಭಾರತವು ಜಾಗತಿಕ ವಾಗಿ ದೇಶದ ಚಹಾ ಉತ್ಪಾ ದನೆಯ ಸುಮಾರು ೮೩%ರಷ್ಟು ಭಾರತದ ಉತ್ತರ ಭಾಗವು ಅತಿದೊಡ್ಡ ಉತ್ಪಾದಕವಾಗಿದೆ. ಹೀಗಾಗಿ ಭಾರತ ಚಹಾ ಉತ್ಪಾ ದನೆಯಲ್ಲಿ ಎರಡನೇ ಅತಿದೊಡ್ಡ ದೇಶವಾಗಿದೆ. ಹಾಗೆ ಯೇ ಭಾರತದಲ್ಲಿ ಅಸ್ಸಾಂ ರಾಜ್ಯವು ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯವಾಗಿದೆ.

ಇದಲ್ಲದೆ, ಅಸ್ಸಾಂ ಭಾರತದಲ್ಲಿ ಅತಿ ದೊಡ್ಡ ಚಹಾ ಉತ್ಪಾದಕ ಎಂದು ಹೆಸರುವಾಸಿಯಾಗಿದೆ. ಇದು ಜಾಗತಿಕವಾಗಿ ೪೦೦ ಮಿಲಿಯನ್ ಕೆಜಿಗಿಂತ ಹೆಚ್ಚು ಚಹಾವನ್ನು ಉತ್ಪಾದನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಚಹಾಕ್ಕೆ ಪರ್ಯಾಯವಾಗಿ ಕಾಫಿ ಕೂಡ ಬಳಸಲಾಗುತ್ತದೆ. ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ- ಕರ್ನಾಟಕ ರಾಜ್ಯವಾಗಿದೆ.

ಚಹಾದ ವಿಧಗಳು: ಕಾಶ್ಮೀರಿ ಕಹ್ವಾ, ಜಿಂಜರ್ ಟೀ, ತುಳಸಿ ಟೀ, ಸುಲೈಮಾನಿ ಟೀ, ರೋಂಗಾ ಸಾಹ್, ಮಸಾಲಾ ಟೀ, ಲೆಮನ್‌ಗ್ರಾಸ್ ಟೀ, ಏಲಕ್ಕಿ ಟೀ, ಲೆಂಬು ಚಾಯ, ಗ್ರೀನ್ ಟೀ, ಗುರ್ ಗುರ್ ಚಾಯ/ಬೆಣ್ಣೆ ನೀವು ರುಚಿನೋಡಬೇಕಾದ ಕೆಲವು ಚಹಾಗಳಾಗಿವೆ. ಒಟ್ಟಾರೆಯಾಗಿ ಚಹಾವು ಒಂದು ಐತಿಹಾ ಸಿಕ ಹಿನ್ನೆಲೆ ಹೊಂದಿರುವ ಒಂದು ಆಹ್ಲಾದಕರ ಪೇಯ. ಚಹಾ ಚೈತನ್ಯಗೊಳಿಸುತ್ತದೆ. ಮನಸ್ಸನ್ನು ಸಮನ್ವಯಗೊಳಿಸುತ್ತದೆ. ಆಲಸ್ಯವನ್ನು ಹೋಗ ಲಾಡಿಸುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ.ಆಲೋಚನೆಯನ್ನು ಜಾಗೃತಗೊಳಿಸುತ್ತದೆ ಮತ್ತು ಅರೆನಿದ್ರಾವಸ್ಥೆಯನ್ನು ತಡೆಯುತ್ತದೆ. ಈ ಮಧ್ಯೆ ಚಹಾದ ಜಾಸ್ತಿ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಆದ್ದರಿಂದ ಚಹಾವನ್ನು ಅಮೃತದಂತೆ ಸೇವಿಸಿ.