ತನ್ನಿಮಿತ್ತ
ಭಾರತಿ ಎ ಕೊಪ್ಪ
‘ಶಿಕ್ಷಣ ಎನ್ನುವುದು ಸಮೃದ್ಧಿಯಲ್ಲಿ ಆಭರಣ ಇದ್ದಂತೆ. ನಮ್ಮ ಸರ್ವ ಸಮೃದ್ಧಿಯ ನಡುವೆಯೂ ಆಭರಣದಂತೆ ಶೋಭಿಸುವ, ಕಷ್ಟಕರ ದಿನಗಳಲ್ಲೂ ಹೊಸ ನೆಲೆ-ಸೆಲೆ ಕಂಡು ಕೊಳ್ಳಲು ದಾರಿದೀಪವಾಗುವ ಏಕೈಕ ಸಾಧನವೆಂದರೆ ಶಿಕ್ಷಣ. ಈ ಶಿಕ್ಷಣ ಎಂಬ ಶರಧಿಯ ದಡ ಸೇರಲು ದಿಕ್ಸೂಚಕರಾಗಿ ನಿಲ್ಲುವವರೇ ಶಿಕ್ಷಕರು. ಹಾಗಾಗಿ ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಶಿಕ್ಷಕರಿಗೆ ವಿಶೇಷ ಗೌರವ ಹಾಗೂ ಸ್ಥಾನಮಾನವಿದೆ.
ಭವಿಷ್ಯದ ಪ್ರಜೆಗಳನ್ನು ಶಿಲ್ಪಿಗಳಂತೆ ಬೆಳೆಸುವ ಶಿಕ್ಷಕರನ್ನು ವಿಶೇಷವಾಗಿ ಗೌರವಿಸುವ ವಿಶ್ವ ಶಿಕ್ಷಕರ ದಿನಾಚರಣೆ ಮಹತ್ವ ಪೂರ್ಣವಾದುದು. ಅ.5, ವಿಶ್ವ ಶಿಕ್ಷಕರ ದಿನಾ ಚರಣೆಯ ಸುದಿನ. ಯುನೆಸ್ಕೊ ಸಂಸ್ಥೆ 1994ರಲ್ಲಿ ಅ.5ನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿತು. ಶಿಕ್ಷಕರಿಗೆ ಅಗತ್ಯವಾದ ಪ್ರೋತ್ಸಾಹ, ಬೆಂಬಲ ನೀಡುವುದು ಹಾಗೂ ಭವಿಷ್ಯದ ಪೀಳಿಗೆಗೆ ಕೂಡ ಶಿಕ್ಷಕರ ಅಗತ್ಯವನ್ನು ತಿಳಿಯಪಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲು ಆರಂಭಿಸಲಾಯಿತು. ಇದಕ್ಕೆ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘ ಕೂಡ ಕೈಜೋಡಿಸುತ್ತಿದೆ.
ಶಿಕ್ಷಣವು ವಿಶ್ವದಾದ್ಯಂತ ಕಡ್ಡಾಯವಾದ ಕಾರಣದಿಂದ ಸಾಕ್ಷರತೆಯ ಮಟ್ಟವನ್ನು ಏರಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ವಾದದ್ದು. ಆಧುನಿಕ ಕಾಲಘಟ್ಟದಲ್ಲಿ ಎಲ್ಲಾ ರಂಗಗಳಲ್ಲಿಯೂ ಪರಿಣತರ ಅಗತ್ಯತೆ ಹೆಚ್ಚಾಗುತ್ತಿರುವುದರಿಂದ, ಪರಿಣತ ವಿದ್ಯಾರ್ಥಿಯನ್ನು ರೂಪಿಸುವಲ್ಲಿ, ಶಿಕ್ಷಕರು ಕೂಡ ಕೌಶಲ್ಯಯುತ ತರಬೇತಿ ಪಡೆದು ಪರಿಣತರಾಗಬೇಕಿದೆ. ಈ ನಿಟ್ಟಿನಲ್ಲಿ ವಿಶ್ವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಯುನೆಸ್ಕೊ ವತಿಯಿಂದ ಶಿಕ್ಷಕರ ಕಾರ್ಯ ಕ್ಷಮತೆ ಹೆಚ್ಚಿಸುವ ಕಾರ್ಯಕ್ರಮಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುತ್ತಿದೆ.
ಕರೋನೋತ್ತರ ದಿನಗಳಲ್ಲಿ ಶಿಕ್ಷಕರು ನಿಜವಾಗಿಯೂ ಶಿಕ್ಷಣ ಚೇತರಿಕೆಯ ಹೃದಯ ಭಾಗದಲ್ಲಿರುತ್ತಾರೆ ಎಂದರೆ ತಪ್ಪಾಗ ಲಾರದು. ಕರೋನಾ ರಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ತಲುಪುವಲ್ಲಿ ನೀಡಿದ ಆನ್ಲೈನ್ ಶಿಕ್ಷಣ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಕರ್ನಾಟಕದಂತಹ ರಾಜ್ಯಗಳಲ್ಲಿ ಕೈಗೊಂಡ ವಿದ್ಯಾಗಮ ಶಿಕ್ಷಣ, ಪೋಷಕರೊಂದಿಗಿನ ಬಾಂಧವ್ಯ ಇವೆಲ್ಲವನ್ನೂ ಮತ್ತೆ ಹೊಸರೂಪದಲ್ಲಿ ವಿನ್ಯಾಸಗೊಳಿಸಬೇಕಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಅಣಿಗೊಳ್ಳಬೇಕಿದೆ.
ಯುನೆಸ್ಕೊ ಪ್ರಕಾರ 2030 ರ ವೇಳೆಗೆ ವಿಶ್ವವ್ಯಾಪಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ನೀಡಲು ವಿಶ್ವದಾದ್ಯಂತ 69 ಮಿಲಿ ಯನ್ ಗಿಂತಲೂ ಅಧಿಕ ಶಿಕ್ಷಕರು ಬೇಕು. ಆದರೆ ಬಹಳಷ್ಟು ದೇಶಗಳು ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯನ್ನು ಎದುರಿಸು ತ್ತಿವೆ. ಶಿಕ್ಷಕರು ಶಿಕ್ಷಣ ವ್ಯವಸ್ಥೆಯ ಹೃದಯ ಭಾಗದಲ್ಲಿರುವುದರಿಂದ ಅವರ ಆರೋಗ್ಯ ಕಾಳಜಿಯೂ ಅಷ್ಟೇ ಮುಖ್ಯ ವಾಗಿದೆ. ಕರೋನೋತ್ತರ ದಿನಗಳಲ್ಲಿ ಶಾಲಾ ಭೌತಿಕ ತರಗತಿಗಳು ಆರಂಭವಾಗುವ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಕೋವಿಡ್ ಲಸಿಕಾ ಕಾರ್ಯ ಕ್ರಮ ಬಹಳ ಅಗತ್ಯವಾಗಿದೆ. ಲಭ್ಯ ಮಾಹಿತಿಯನ್ವಯ ಒಟ್ಟು 197 ದೇಶಗಳಲ್ಲಿ 21 ದೇಶಗಳು ಮಾತ್ರ ಸುಮಾರು 18 ಮಿಲಿಯನ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರನ್ನು ಆದ್ಯತೆಯ ಮೇರೆಗೆ ಮೊದಲ ಆದ್ಯತಾ ಗುಂಪಿನ ಕೋವಿಡ್ ಲಸಿಕೆಗೆ ಒಳಪಡಿಸಿದ್ದವು.
ಅಂತೆಯೇ 119 ದೇಶಗಳು ನಂತರದ ಆದ್ಯತೆಯಲ್ಲಿ ಶಿಕ್ಷಕರನ್ನು ಕೋವಿಡ್ ಲಸಿಕೆಗೆ ಒಳಪಡಿಸಿ ಆರೋಗ್ಯ ಕಾಳಜಿಗೆ ಇಂಬು ತುಂಬಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ಪುನಃ ಸದೃಢಗೊಳಿಸಲು ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆ, ತಾಂತ್ರಿಕ ಶಿಕ್ಷಣ, ಇವುಗಳಿಗೆ ಶಿಕ್ಷಕರನ್ನು ತಯಾರಿಗೊಳಿಸುವತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಚನೆ, ಯೋಜನೆಗಳನ್ನು ಹಾಕಿಕೊಂಡು ಕಾರ್ಯಗತಗೊಳಿಸುತ್ತಿರುವುದು ಶ್ಲಾಘನೀಯ ವಿಚಾರ. ವಿಶ್ವ ಶಿಕ್ಷಕರ ದಿನದ ಸಂದರ್ಭದಲ್ಲಿ ಶಿಕ್ಷಣ ಸೌಧದ ಸ್ತಂಭಗಳಾದ ಶಿಕ್ಷಕರಿಗೆ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ನೀಡುವತ್ತ ಎಲ್ಲಾ ರಾಷ್ಟ್ರಗಳು ಚಿಂತನೆ ಮಾಡಿ, ಬಲಿಷ್ಠ ವಿದ್ಯಾವಂತ ಯುವಪೀಳಿಗೆಯನ್ನು ನಿರ್ಮಿಸುವತ್ತ ಚಿತ್ತ ಬೆಳೆಸುವಂತಾಗಲಿ ಎಂಬ ಆಶಯ ಸರ್ವರದಾಗಿದೆ.