ಅಭಿವ್ಯಕ್ತಿ
ಡಾ.ಎಂ.ಮಹದೇವಪ್ಪ
ಕೃಷಿ ಕ್ಷೇತ್ರದ ಜೈವಿಕ ತಂತ್ರಜ್ಞಾನ ಪ್ರಯೋಗವನ್ನು 10 ವರ್ಷ ತಡೆಹಿಡಿದಿದ್ದು ಭಾರತದ ಕೃಷಿ ಮತ್ತು ರೈತರಿಗಾದ ನಷ್ಟ.
ಭಾರತದ ಸುಪ್ರೀಂಕೋರ್ಟ್ ನೇಮಿಸಿದ ಐವರು ತಾಂತ್ರಿಕ ತಜ್ಞರ ಸಮಿತಿ (ಟಿಇಸಿ) ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಆಧರಿ ಸಿದ ಎಲ್ಲ ಬೆಳೆಗಳ ಮೇಲೆ ಯಾವುದೇ ಪ್ರಯೋಗಗಳನ್ನು 10 ವರ್ಷಗಳ ಕಾಲ ಕೈಗೊಳ್ಳದಂತೆ ತಡೆಯೊಡ್ಡಲು ಶಿಫಾರಸ್ಸು ಮಾಡಿ ವರದಿ ಸಲ್ಲಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ಈಗಿನದು ಏನಿದ್ದರೂ ಸಮಿತಿಯ ಶಿಫಾರಸ್ಸಷ್ಟೆ. ಮುಂದಿನ ನಿರ್ಧಾರವನ್ನು ಘನತೆವೆತ್ತ ಸುಪ್ರೀಂ ಕೋರ್ಟ್ ಕೈಗೊಳ್ಳಲಿದೆ. ಘನತೆ ವೆತ್ತ ನ್ಯಾಯಮೂರ್ತಿಗಳು ನಿರ್ಧಾರಕ್ಕೆ ಬರುವುದಕ್ಕೂ ಮುನ್ನ ಈ ವಿಚಾರವಾಗಿ ಜೈವಿಕ ತಂತ್ರಜ್ಞಾನ ಆಧಾರಿತ ಕೃಷಿ ಕ್ಷೇತ್ರದಲ್ಲಿ ನುರಿತಿರುವ ವಿಜ್ಞಾನಿಗಳ ಅಭಿಪ್ರಾಯ ಪಡೆಯುವುದು ಒಳ್ಳೆಯದು. ಅಲ್ಲದೆ, ಈ ಬಗ್ಗೆ ವಿಶಾಲ ದೃಷ್ಟಿಕೋನದಲ್ಲಿ ಚಿಂತಿಸುವ ರೆಂಬ ನಂಬಿಕೆಯೂ ಇದೆ. ಹೀಗೆ ಮಾಡದಿದ್ದರೆ, ಈ ವಿಶಿಷ್ಟ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ದೇಶದ ನೂರಾರು ವಿಜ್ಞಾನಿ ಗಳ ಸಂಶೋಧನೆಗಳು ಮತ್ತು ರೈತರ ಭವಿಷ್ಯದ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ದೇಶದ ಯಾವುದೇ ಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಪ್ರಯೋಗಗಳನ್ನು ಕೈಗೊಳ್ಳಬಾರದೆಂಬ ಬೇಡಿಕೆಯನ್ನು
ಸುಪ್ರೀಂ ಕೋರ್ಟ್ ತಳ್ಳಿ ಹಾಕಿತ್ತು. ಅದಕ್ಕೆ ಬದಲಾಗಿ, ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ನಿರ್ದಿಷ್ಟ ಉದ್ದೇಶಕ್ಕಾಗಿ ಸ್ಥಾಪಿಸಿದ ದೇಶದ ಉನ್ನತ ನಿಯಂತ್ರಣ ಸಂಸ್ಥೆ ವಂಶಾಂತರಿ ತಂತ್ರಜ್ಞಾನ ಅನುಮೋದನಾ (ಈಗ ಪ್ರಶಂಸಾ) ಸಮಿತಿಯಿಂದ (ಜನೆಟಿಕ್ ಎಂಜಿನಿಯರಿಂಗ್ ಅಪ್ರೂವಲ್ ಕಮಿಟಿ- ಜಿಇಎಸಿ) ಅನುಮತಿ ಪಡೆದುಕೊಂಡನಂತರವೇ ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಪ್ರಯೋಗಗಳನ್ನು ಕೈಗೊಳ್ಳಬಹುದು ಎಂಬುದು ಸುಪ್ರೀಂ ಕೋರ್ಟ್ ಆದೇಶವಾಗಿದೆ.
ಜೈವಿಕ ತಂತ್ರಜ್ಞಾನದಿಂದ ಸುಧಾರಿಸಲಾದ ತಳಿಗಳು ಸೇರಿದಂತೆ ಹಲವು ಪ್ರಯೋಗಗಳನ್ನು ಕೃಷಿ ಕ್ಷೇತ್ರದಲ್ಲಿ ನಡೆಸಲು ಅನು ಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪರಿಶೀಲಿಸಲು ಸಮಿತಿಗೆ ಸುಪ್ರೀಂ ಕೋರ್ಟ್ 2008ರಲ್ಲಿಯೇ ಅವಕಾಶ ನೀಡಿತ್ತು. ಆ ಸಂದರ್ಭದಲ್ಲಿ ನಾವು ಬಡತನ ಹಸಿನಿಂದ ಅಸುನೀಗುವ ಬದಲು ಜೈವಿಕ ತಂತ್ರಜ್ಞಾನದಿಂದ ಸುಧಾರಿಸಲಾದ ತಳಿಗಳಿಗೆ ಅವಕಾಶ ಮಾಡಿಕೊಡುವುದು ಸರಿಯಲ್ಲವೇ? ಲಕ್ಷಾಂತರ ಮಂದಿ ಹಸಿನಿಂದ ಬಳಲಿ ಕೊನೆಯುಸಿರೆಳೆಯುವಂಥ ದುಃಸ್ಥಿತಿ ಎದುರಾಗಲು ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತು.
ಜತೆಗೆ, ಜೆನೆಟಿಕಲಿ ಮಾಡಿ-ಡ್(ಜಿಎಂ) ಕೃಷಿ ಕ್ಷೇತ್ರ ಪ್ರಯೋಗಕ್ಕೆ ಅವಕಾಶ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಜನೆಟಿಕ್ ಎಂಜಿನಿಯರಿಂಗ್ ಅಡ್ವೆ ಸರಿ ಕಮಿಟಿಯು ಪರಿಶೀಲಿಸದಂತೆ ತಡೆಯೊಡ್ಡಿತು. ಮತ್ತೆ 2009ರಲ್ಲಿಯೂ, ಕೃಷಿ ಕ್ಷೇತ್ರದಲ್ಲಿ ನಡೆಯು ತ್ತಿರುವ ಜಿಎಂ ಪ್ರಯೋಗಗಳಿಗೆ ತಡೆಯೊಡ್ಡಲು ನ್ಯಾಯಾಲಯ ಒಪ್ಪಿರಲಿಲ್ಲ. ಅಲ್ಲದೆ, ಅದೇ ವರ್ಷದ ಸೆಪ್ಟೆಂಬರ್ 22 ರಂದು ನೀಡಿದ ಆದೇಶದಲ್ಲಿ, ಎಲ್ಲ ಕಕ್ಷಿದಾರರ ಅಹವಾಲುಗಳನ್ನೂ ಆಲಿಸಿ ಮುಂದಿನ ನಿರ್ದೇಶನ ನೀಡುವವರೆಗೂ ಈ ಮೊದಲೇ ನೀಡಿರುವ ಅನುಮತಿ ಯನ್ನು ಎತ್ತಿ ಹಿಡಿಯುವಂತೆ ‘ಜಿಇಎಸಿ’ಗೆ ಸೂಚಿಸಿತು.
ಸಸ್ಯಗಳ ಸಮಗ್ರ ಜ್ಞಾನ ವಿಭಾಗ, ಕೆಲವು ನಿರ್ದಿಷ್ಟ ಕೀಟಗಳಿಂದ ಜೈವಿಕ ತಂತ್ರಜ್ಞಾನದಿಂದ ಸುಧಾರಿಸಿದ ಸಸ್ಯಗಳನ್ನು ರಕ್ಷಿಸಲು ಹಾಗೂ ಔಷಧಿಯ ಸತ್ವದ ನಾರು – ಬೇರು ಮೂಲದ ಅಮೂಲ್ಯ ಸಸ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ವಾಣಿಜ್ಯಿಕ ಕೃಷಿಯಲ್ಲಿ ಕಳೆದ 17 ವರ್ಷಗಳಿಂದಲೂ ಕಾರ್ಯ ನಿರತವಾಗಿದೆ. 2011ರಲ್ಲಿ 29 ದೇಶಗಳಲ್ಲಿನ (19 ಅಭಿವೃದ್ಧಿ ಶೀಲ ದೇಶಗಳು-10 ಕೈಗಾರಿಕೆ ಪ್ರಧಾನ ರಾಷ್ಟ್ರಗಳು) 16 ಕೋಟಿ ಹೆಕ್ಟೇರ್ ಭೂಮಿಯಲ್ಲಿ ಜೈವಿಕ ತಂತ್ರಜ್ಞಾನ ತಳಿಗಳ ಕೃಷಿ ನಡೆದಿದೆ. ಅಲ್ಲದೆ, ಇಂಥ ತಳಿಗಳ, ಸಸ್ಯಗಳ ಆಮದು ಪ್ರಕ್ರಿಯೆಗೆ ಇತರೆ 31 ದೇಶಗಳು ವಿಜ್ಞಾನ ಆಧಾರಿತ ನಿಯಂತ್ರಣ ತಳಿಯ ಬೆಳೆಯನ್ನು ವಾಣಿಜ್ಯ ದೃಷ್ಟಿಕೋನದಲ್ಲಿ ಬೆಳೆಯಲು 2002ರ ಮಾರ್ಚ್‌ನಿಂದ ಅನುಮತಿ ನೀಡಲಾಗಿದೆ.
ಅದುವೇ ಬಿಟಿ ಹತ್ತಿ ತಳಿ. ಕಳೆದ 10 ವರ್ಷಗಳಿಂದ ಸಾಂಪ್ರದಾಯಿಕ ಹತ್ತಿ ತಳಿಯನ್ನು ಕಾಡಿ ಕಂಗೆಡಿಸಿರುವ ಕಾಯಿಕೊರಕ ಹುಳುವನ್ನು ನಿರ್ವಹಿಸಲಾಗದೆ ಈ ಬಿಟಿ ಹತ್ತಿ ತಳಿಗೆ ಅವಕಾಶ ನೀಡಿದೆ. 2002ರಲ್ಲಿ ಬಿಟಿ ಹತ್ತಿ ತಳಿಯನ್ನು ದೇಶದ ಕೃಷಿ
ಕ್ಷೇತ್ರಕ್ಕೆ ಪರಿಚಯಿಸಿದ ನಂತರ ಹತ್ತಿಯ ಇಳುವರಿಯೂ ಹೆಚ್ಚಿದೆ. ವಾರ್ಷಿಕ ಹತ್ತಿ ಉತ್ಪಾದನೆಯು 136 ಲಕ್ಷ ಬೇಲುಗಳಿಂದ 350 ಲಕ್ಷ ಬೇಲುಗಳಿಗೆ ಹೆಚ್ಚಿದೆ. ಆ ಮೂಲಕ ಭಾರತವು ಅತಿ ಹೆಚ್ಚು ಹತ್ತಿ ಬೆಳೆಯುವ ವಿಶ್ವ ಮಟ್ಟದ ದೇಶಗಳ ಸಾಲಿನಲ್ಲಿ 2ನೇ ಸ್ಥಾನಕ್ಕೇರಿದೆ. ಈಗ ಚೀನಾ ನಂತರ ಅತ್ಯಽಕ ಹತ್ತಿ ಬೆಳೆಯ ನಾಡು ಎಂದರೆ ಭಾರತ ಎನ್ನುವಂತಾಗಿದೆ.
ಇದಕ್ಕೆ ಹೆಚ್ಚಿನ ಮಟ್ಟಿಗೆ ಕಾರಣವಾಗಿರುವುದು, ದೇಶದ ಒಟ್ಟಾರೆ ಹತ್ತಿ ಕೃಷಿಯಲ್ಲಿ ಶೇ.90 ಭಾಗದಲ್ಲಿ ಬಿಟಿ ಹತ್ತಿ ತಳಿಗಳೇ ಆಗಿರು ವುದು. ಬಿಟಿ ಹತ್ತಿಯಲ್ಲಾಗುತ್ತಿದ್ದ ಇಳುವರಿ ನಷ್ಟವನ್ನು ಗಣನೀಯವಾಗಿ ಇಳಿಸುವುದರ ಜತೆಗೆ ಅಧಿಕ ಪ್ರಮಾಣದಲ್ಲಿ ಕೀಟ ನಾಶಕದ ಮೇಲೆ ಅವಲಂಬಿತವಾಗುವುದೂ ತಪ್ಪಿದೆ. ಪರಿಸರ ಸಂರಕ್ಷಣೆ, ರೈತರ ಆರೋಗ್ಯ ಮತ್ತು ಆರ್ಥಿಕ ವೃದ್ಧಿಗೂ ಕಾರಣ ವಾಗಿದೆ. ಜಾಗತಿಕವಾಗಿ ಸುಮಾರು 60 ದೇಶಗಳು ವಿವಿಧ ಬಗೆಯ ಜೈವಿಕ ತಂತ್ರಜ್ಞಾನ ಆಧಾರಿತ ಕೃಷಿ ಮತ್ತು ಆಮದು ಚಟು ವಟಿಕೆಯನ್ನು ಅಳವಡಿಸಿಕೊಂಡಿವೆ.
ಇನ್ನೂ ಸಾಕಷ್ಟು ಬೆಳೆಗಳ ಕುರಿತ ಸಂಶೋಧನೆ ನಡೆಯುತ್ತಿದೆ. ಹೆಚ್ಚು ಇಳುವರಿ ಕೊಡುವ ತಳಿಗಳಿಗಾಗಿ ಕಳೆದ ಕೆಲವು ವರ್ಷ ಗಳಿಂದಲೂ ಸಂಶೋಧನೆ – ಅಭಿವೃದ್ಧಿ ಕಾರ್ಯ ನಡೆದೇ ಇದೆ. ದೇಶದ ಕೃಷಿ ಸಂಶೋಧನಾ ಸಂಸ್ಥೆಗಳೂ ಸಹ ದೇಶೀಯ ಹತ್ತಿ ತಳಿಗಳನ್ನು ಕಾಯ್ದಿರಿಸಿ, ಮತ್ತೆ ಬೆಳೆಯುವ ಸಂದರ್ಭ ಒದಗಿಬಂದಲ್ಲಿ ಅಥವಾ ಸಂಶೋಧನೆಗೆ ಅಗತ್ಯವಾದಾಗ ಬಳಸಿಕೊಳ್ಳು ತ್ತವೆ. ಬರ, ಅತಿವೃಷ್ಟಿ ಅಥವಾ ನೆರೆ ಮೊದಲಾದ ನೈಸರ್ಗಿಕ ವಿಪತ್ತುಗಳನ್ನೂ ತಡೆದುಕೊಂಡು ಫಸಲು ಕೊಡುವಂಥ ಹಾಗೂ ಸತ್ವಹೀನ ಮಣ್ಣಿನಲ್ಲಿಯೂ ಬೆಳೆಯಬಹುದಾದ ಕೃಷಿ ತಳಿಗಳನ್ನು ಅಭಿವೃದ್ಧಿ ಪಡಿಸಲು ವಿಶ್ವದಾದ್ಯಂತ ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ.
ಸದ್ಯಕ್ಕೆ ಮಾನವನಿಗೆ ಆರೋಗ್ಯಕಾರಿಯಾದ ಕೊಬ್ಬಿನಂಶ ರಹಿತ ಖಾದ್ಯತೈಲದ ಸಂಶೋಧನೆ ಅಭಿವೃದ್ಧಿಯ ಹಂತದಲ್ಲಿದೆ ಹಾಗೂ ಹೆಚ್ಚುಕಬ್ಬಿಣದ ಅಂಶವಿರುವ, ಮಕ್ಕಳ ದೇಹದ ಬೆಳವಣಿಗೆಗೆ ಪೂರಕವಾದ ಅಂಶಗಳಿರುವ ಮತ್ತು ಅಂಧತ್ವ – ರಕ್ತ ಹೀನತೆ ನಿವಾರಿಸುವಂಥ ‘ಗೋಲ್ಡನ್ ರೈಸ್’ ತಳಿಯ ಸಂಶೋಧನೆಯೂ ಅಭಿವೃದ್ಧಿಯ ಕೊನೆಯ ಹಂತದಲ್ಲಿದೆ. ಇಂತಹುದೇ
ಕ್ರಿಯೆಗಳು ಪ್ರಕೃತಿಯಲ್ಲಿ ನೂರಾರು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಲೇ ಇದೆ. ಜ್ಞಾನವು ಈ ಕೆಲಸವನ್ನು ಬಹಳ ಕ್ಷಿಪ್ರಗತಿಯಲ್ಲಿ ಕೈಗೊಳ್ಳುತ್ತಿದೆ.
ಆದರೆ, ಇಂಥ 21ನೇ ಶತಮಾನದ ಕೃಷಿ ತಳಿ – ಬೆಳೆಗಳ ಅಭಿವೃದ್ಧಿ ಮತ್ತು ಪ್ರಯೋಗ – ಪರೀಕ್ಷೆಗಳ ಮೇಲೆ ಭಾರತ ದೇಶವು 10 ವರ್ಷಗಳ ಕಾಲದ ನಿರ್ಬಂಧ ಹೇರುವುದರಿಂದ ಭಾರೀ ನಷ್ಟವಾಗುತ್ತದೆ. ಸುದೈವವಶಾತ್, ಸರಕಾರಿ ಅನುದಾನ ಪಡೆದ ಸಾರ್ವ ಜನಿಕ ಕ್ಷೇತ್ರದ ಸಂಶೋಧನಾ ಸಂಸ್ಥೆಗಳಲ್ಲಿ (ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರೀಸರ್ಚ್, ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಇನ್‌ಸ್ಟಿಟ್ಯೂಟ್, ಹೈದರಾಬಾದ್‌ನಲ್ಲಿರುವ ಇಂಟರ್‌ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ದ ಸೆಮಿ ಅರಿಡ್ ಟ್ರಾಪಿಕ್ಸ್-ಐಸಿಆರ್‌ಐಎಸ್‌ಎಟಿ- ಮೊದಲಾದವು) ಇದೇ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಪ್ರಯೋಗಗಳನ್ನು ನಡೆಸು ತ್ತಿವೆ.
ಭಾರತ ಸರಕಾರವೂ 1986ರಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯನ್ನು ಆರಂಭಿಸಿದೆ. ವಿವಿಧ ಅಂದಾಜುಗಳ ಪ್ರಕಾರ, ಭಾರತ ದಲ್ಲಿ ಕೃಷಿ ಬೆಳೆಗಳಿಗೆ ಸಂಬಂಧಿಸಿದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ ಕಳೆದ 5
ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಹೂಡಿಕೆಯು 8000 ಕೋಟಿ ರೂಪಾಯಿಗಳನ್ನೂ ಮೀರಿರುವುದಾಗಿ ಅಂದಾಜು ಮಾಡ ಲಾಗಿದೆ. ಅಂದರೆ, ಪ್ರತಿವರ್ಷ 1600 ಕೋಟಿ ರುಪಾಯಿ ಈ ಕ್ಷೇತ್ರಕ್ಕಾಗಿ ನಿಯೋಗವಾಗುತ್ತಿದೆ. ಅಲ್ಲದೆ, ಹಲವು ಖಾಸಗಿ ಕ್ಷೇತ್ರದ ಸಂಸ್ಥೆಗಳೂ ಸಹ ಇದೇ ಕ್ಷೇತ್ರದಲ್ಲಿ ಪ್ರತಿ ವರ್ಷ 2750 ಕೋಟಿ ರುಪಾಯಿಗೂ (500 ದಶಲಕ್ಷ ಡಾಲರ್) ಹೆಚ್ಚು ಮೊತ್ತವನ್ನು ವೆಚ್ಚ ಮಾಡುತ್ತಿವೆ.
ಸಸ್ಯಗಳಿಗೆ ಸಂಬಂಽಸಿದಂತೆ ಜೈವಿಕ ತಂತ್ರಜ್ಞಾನವು ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ ಎನ್ನಬಹುದು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇಂಥ ಕೃಷಿ ಚಟುವಟಿಕೆಗಳ ಪ್ರಯೋಜನ ಪಡೆಯುವ ಯತ್ನಗಳೂ ನಡೆಯುತ್ತಿವೆ. ಹಾಗಾದರೆ, ಈ ಎಲ್ಲ ಪ್ರಯೋಗಗಳು, ಪ್ರಯತ್ನಗಳು, ಕೋಟ್ಯಂತರ ಮೊತ್ತದ ನಿಯೋಜನೆಯ -ಲವನ್ನು, ಈ ಐವರು ತಜ್ಞರು ಶಿಫಾರಸು ಮಾಡಿದರೆಂದ ಮಾತ್ರಕ್ಕೆ ಜನಸಾಮಾನ್ಯರ ಅನುಕೂಲಕ್ಕೂ ಸಿಗದಂತೆ ಶೈತ್ಯಾಗಾರದಲ್ಲಿ(ಕೋಲ್ಡ್ ಸ್ಟೋರೇಜ್) ಇಟ್ಟುಬಿಡ ಲಾದೀತೇ? ಪ್ರತಿಷ್ಠಿತ ಭಾರತದ ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ(ಎನ್‌ಎಆರ್‌ಎಸ್)ಯಡಿ ಕೆಲವು ದಶಕಗಳಿಂದ ಸಾಗುತ್ತಿರುವ ವೈಜ್ಞಾನಿಕ ಸಂಶೋಧನೆಗಳ ಫಲವನ್ನೂ ಅಲ್ಲಿ ಸಂಗ್ರಹಿತವಾದ ದತ್ತಾಂಶಗಳೆಲ್ಲವನ್ನೂ ನಿರ್ಲಕ್ಷಿಸಲಾದೀತೆ? ಸುರಕ್ಷತೆಯನ್ನು ಎತ್ತಿ ತೋರ ಬೇಕು ಎಂಬ ಒಂದೇ ಕಾರಣಕ್ಕಾಗಿ, ಸಂಶೋಧನೆ ನಿಯಂತ್ರಣ ಕಾರ್ಯದಲ್ಲಿನ ಸುಧಾರಣೆ ಮತ್ತು ಅಪಾಯದ ಲೆಕ್ಕಾಚಾರದ (ರಿಸ್ಕ್ ಅಸೆಸ್‌ಮೆಂಟ್) ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ.
ಹಾಗೆಂದು, ಸರಿಯಾಗಿ ವಿಶ್ಲೇಸದೆ, ಬಡರೈತರ ಕಲ್ಯಾಣಕ್ಕಾಗಿ, ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ 15 ವರ್ಷ ಗಳಿಂದ ಸತತವಾಗಿ ನಡೆದ ಸಂಶೋಧನೆ – ಪ್ರಯೋಗಗಳ ಫಲವು ರೈತರಿಗೆ ದಕ್ಕದಂತೆ ಮಾಡುವುದು, ಸಂಶೋಧನೆಗಳ ಮೇಲೆ ನಿಷೇಧ ಹೇರುವುದು ಎಷ್ಟು ಸರಿ? ಇಂತಹ ಕಾರ್ಯ ನಡೆದಲ್ಲಿ, ಅದರಿಂದ ವಿಜ್ಞಾನದ ಲಾಭವೆಲ್ಲವೂ ಪಶ್ಚಿಮ ದೇಶಗಳ ಪಾಲಾಗ ಲಿದೆ.
ಜತೆಗೆ ಭಾರತದ ಕೃಷಿ ಕ್ಷೇತ್ರವನ್ನು ವಿಶ್ವದ ಇತರೇ ದೇಶಗಳಿಂದ ದೂರವಿಟ್ಟು ಮುನ್ನಡೆಗೆ ಅನುವು ಮಾಡಿಕೊಟ್ಟಂತಾಗುವುದೂ ಅಲ್ಲದೆ, ಈ ಉಪಕ್ರಮವು ಭಾರತದ ಕೃಷಿ ಕ್ಷೇತ್ರದಲ್ಲಿನ ಸಂಶೋಧನೆಗಳ ಗಡಿಯಾರವನ್ನು ಹಿಮ್ಮುಖವಾಗಿ ಚಲಿಸುವಂತೆ ಒತ್ತಡ ಹೇರುವ ಕ್ರಮವೇ ಆಗಿದೆ.
ಬಹಳ ಪ್ರಯೋಜನಕಾರಿಯಾದ ಅಂಶವನ್ನು ಯಾವತ್ತಿಗೂ ಬಾರದೇ ಇರುವ ಯಾವುದೋ ದುಷ್ಟಶಕ್ತಿಯ ಭಯದಿಂದ ಮುಚ್ಚಿಟ್ಟುಬಿಡುವುದು ಸರಿಯಲ್ಲ- (ಜೇಮ್ಸ್ ವ್ಯಾಟ್ಸನ್, ನೊಬೆಲ್ ಪುರಸ್ಕೃತ ಸಾಹಿತಿ. 1962) Not taking the risk is the
biggest risk! ಯಾವುದೇ ಸವಾಲು ಸ್ವೀಕರಿಸದೇ ಇರುವುದೇ ಬಹಳ ದೊಡ್ಡ ಸಂಕಷ್ಟಕ್ಕೆ ಕಾರಣವಾಗಬಹುದು! ನಮ್ಮ ಉನ್ನತೀ ಕರಣಕ್ಕಾಗಿ ಆಧುನಿಕ ವಿಜ್ಞಾನದಲ್ಲಿನ ಉತ್ತಮ ಅಂಶಗಳನ್ನು ಆಯ್ದುಕೊಳ್ಳುವುದರಲ್ಲಿಯೇ ಜಾಣತನವಿದೆ. ಅಲ್ಲದೆ ಒಂದೊಂದು ತಾಂತ್ರಿಕತೆಯನ್ನು ಪ್ರತ್ಯೇಕವಾಗಿ (Case by Case) ವಿಶ್ಲೇಷಿಸಿ ತೀರ್ಮಾನಿಸಬೇಕೇ ಹೊರತು ಒಮ್ಮೆಲೇ ತೀರ್ಮಾನ ತೆಗೆದುಕೊಳ್ಳುವುದು ಅವೈಜ್ಞಾನಿಕ ಮತ್ತು ದೇಶದ ಪ್ರಗತಿಗೆ ಮಾರಕ.
ಇದೆಲ್ಲದರ ಅರಿವಿಲ್ಲದಿರುವ ರೈತರಿಗಾಗುತ್ತಿರುವ ಅನ್ಯಾಯವನ್ನು ಗಮನಿಸಿ ಯುವಜನಾಂಗ ವೈಜ್ಞಾನಿಕ ವಿಶ್ಲೇಷಣೆ ಮತ್ತು
ತೀರ್ಮಾನಗಳತ್ತ ಕಾಲಿಡಲು ಇದು ಸಕಾಲ; ವಿರಮಿಸುವ ಕಾಲ ಮೀರಿದೆ.