Tuesday, 17th September 2024

ತಂತ್ರಜ್ಞಾನ ಲೋಕವನ್ನು ಆಳುತ್ತಿರುವ ಟ್ರೋಲ್

ಕಳಕಳಿ

ಸುರೇಂದ್ರ ಪೈ

ಒಬ್ಬರಿಗೊಬ್ಬರು ಹೊಂದಿಕೊಂಡು ಹೇಗೆ ಬದುಕಬೇಕು ಎಂಬುದನ್ನು ಕಲಿಯಲು ನಮಗೆ ಸಾವಿರಾರು ವರ್ಷಗಳು ಬೇಕಾದವು. ನಮ್ಮ ವಿಕೃತ ಮನಸ್ಥಿತಿಯನ್ನು ತಡೆದು ನಿಲ್ಲಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ನಿಯಮಗಳನ್ನು ರೂಪಿಸಿಕೊಂಡೆವು. ತಾನೊಬ್ಬ ಪ್ರಗತಿಪರ ಎಂದು ಗುರುತಿಸಿ ಕೊಳ್ಳುವ ಧಾವಂತದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸಿದ ಮಾನವ, ಕೊನೆಗೆ ತಾನು ತೋಡಿದ ಹಳ್ಳದಲ್ಲೇ ಬೀಳುವಂಥ ಪರಿಸ್ಥಿತಿಯನ್ನೂ ಹುಟ್ಟುಹಾಕಿದ್ದಾನೆ. ಈ ಹಳ್ಳದಲ್ಲಿ ಅಮಾಯಕರೂ ಬೀಳುತ್ತಿರುವುದು ವಿಷಾದನೀಯ.

‘ರಾಮೇಶ್ವರಕ್ಕೆ ಹೋದ್ರೂ ಶನೈಶ್ಚರನ ಕಾಟ ತಪ್ಪಲಿಲ್ಲ’ ಎನ್ನುವ ಹಾಗೆ ಇಂದಿನ ತಂತ್ರಜ್ಞಾನ ಯುಗದಲ್ಲೂ ನಮ್ಮನ್ನೆಲ್ಲಾ ಬೆಂಬಿಡದೆ ಕಾಡುವ ಸಂಗತಿ
ಯೆಂದರೆ ಟ್ರೋಲ್. ಕಳೆದ ಒಂದು ದಶಕದಿಂದ ಇದರ ಹಾವಳಿ ಜೋರಾಗಿದ್ದು, ಇದರ ಬಲೆಗೆ ಬೀಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಳೆಯರಿಂದ
ಹಿಡಿದು ಹಿರಿಯರ ತನಕ ಈ ಟ್ರೋಲ್ ಮಹಾಶಯ ಯಾರನ್ನೂ ಬಿಟ್ಟಿಲ್ಲ. ನದಿಮೂಲ, ಋಷಿಮೂಲವನ್ನು ಹುಡುಕುವುದು ಹೇಗೆ ದುಸ್ತರವೋ,
ಹಾಗೆಯೇ ಈ ಟ್ರೋಲ್ ಮೂಲವನ್ನು ಹುಡುಕುವುದೂ ಕಷ್ಟ.

‘ಟ್ರೋಲ್’ ಎಂದರೆ ಇನ್ನೊಬ್ಬರ ಮಾತು, ಹಾವ- ಭಾವದ ಮೂಲ ವಿಡಿಯೋಗಳಿಗೆ ಇನ್ಯಾವುದೋ ವ್ಯಕ್ತಿಯ ಹಾಸ್ಯದೃಶ್ಯದ ತುಣುಕು/ಚಿತ್ರಗಳನ್ನು
ಸೇರಿಸಿ ತಿರುಚಿ ಅದನ್ನು ತಮಾಷೆ/ಗೇಲಿಯ ವಸ್ತುವನ್ನಾಗಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಎಂದು ಹೇಳಬಹುದು. ಇನ್ನೂ ಸರಳ
ವಾಗಿ ಹೇಳುವುದಾದರೆ- ಇನ್ನೊಬ್ಬರನ್ನು ಆಡಿಕೊಂಡು ನಗುವುದು. ಈ ಅಭ್ಯಾಸ ಕೆಲವರಿಗೆ ಹೊಸ ದೇನೂ ಅಲ್ಲ ಬಿಡಿ. ತಮಗೆ ಸಂಬಂಧವಿರಲಿ ಇಲ್ಲದಿ
ರಲಿ, ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದನ್ನು ಮಾತ್ರ ಇಂಥವರು ಎಂದಿಗೂ ಬಿಡುವುದಿಲ್ಲ.

ಬಹುಶಃ ಈ ಸ್ವಭಾವವೇ ಟ್ರೋಲ್ ಹುಟ್ಟಿಕೊಳ್ಳಲು ಪ್ರೇರಣೆಯಾಗಿದ್ದರೂ ಆಗಿರಬಹುದು. ಆದರೆ ಆನ್‌ಲೈನ್ ಟ್ರೋಲ್ ಮಾತ್ರ ತುಸು ಭಿನ್ನವಾಗಿದ್ದು, ತಂತ್ರಜ್ಞಾನ ಸಾಮಗ್ರಿಗಳ ಮೂಲಕ ರಂಜನೀಯವಾಗಿ ಕಾಣುವಂತೆ ಅದನ್ನು ಮಾರ್ಪಡಿಸಬಹುದಾಗಿದೆ. ಈ ಕಾರಣದಿಂದಲೇ ಟ್ರೋಲ್ ಇಂದು ಜಗತ್ತಿನ ಎಲ್ಲೆಡೆಯೂ ಎಲ್ಲರನ್ನೂ ಬಹುಬೇಗ ಆಕರ್ಷಿಸುವ ಸಾಧನವಾಗಿದೆ.

ಟ್ರೋಲ್‌ನಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎಂಬ ಎರಡು ಪ್ರಕಾರಗಳನ್ನು ಕಾಣಬಹುದು. ತಮಗೆ ಬೇಕಾದವರನ್ನು ಬೆಂಬಲಿಸಲು ಬಳಕೆಯಾಗು
ವಂಥದ್ದು ಧನಾತ್ಮಕ ಟ್ರೋಲ್; ಉದಾಹರಣೆಗೆ, ತಮಗೆ ಬೇಕಾದ ವ್ಯಕ್ತಿಯೊಬ್ಬ ಸಮಾಜದಲ್ಲಿ ನಡೆದ ಯಾವುದೋ ವಿಚಾರಕ್ಕೆ ಸಂಬಂಧಿಸಿ ಖಡಕ್ ಆಗಿ
ಪ್ರತಿಕ್ರಿಯಿಸಿದಾಗ ಆತನ ತಲೆಗೆ ಟೋಪಿ, ತುಟಿಗೆ ಸಿಗರೇಟು, ಕುತ್ತಿಗೆಗೆ ಬಂಗಾರದ ಸರಗಳನ್ನು ಎಡಿಟ್ ಮಾಡಿ ಸೇರಿಸಿ, ಅದಕ್ಕೊಂದು ಸ್ಟ್ರಾಂಗ್ ಹಿನ್ನೆಲೆ
ಸಂಗೀತ ಕೊಡುವುದು. ಇನ್ನು, ವಿರೋಧಿಗಳನ್ನು ವ್ಯಂಗ್ಯ ಮಾಡಲು ಬಳಸುವ ಅಸವೇ ಋಣಾತ್ಮಕ ಟ್ರೋಲ್. ಇಲ್ಲಿ ಮೂಲ ವಿಡಿಯೋ ದೃಶ್ಯಕ್ಕೆ ಸರಿ
ಹೊಂದುವಂತೆ ಯಾವುದೋ ಸಿನಿಮಾದ, ಕೇಕೆ ಹಾಕಿ ನಗುವ ತುಣುಕಿನ ದೃಶ್ಯವನ್ನು ಸೇರಿಸುವ ಮೂಲಕ ಎದುರಾಳಿಗಳನ್ನು ಅಪಹಾಸ್ಯಕ್ಕೆ ಗುರಿ
ಮಾಡಲಾಗುತ್ತದೆ.

ಇಂದು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಸಾಕು, ಸಾವಿರಾರು ಟ್ರೋಲ್ ಪೇಜ್ ಗಳು ವೀಕ್ಷಣೆಗೆ ಸಿಗುತ್ತವೆ. ಅಲ್ಲಿ ದಿನದಿನಕ್ಕೂ ನೂರಾರು ಹೊಚ್ಚ ಹೊಸ ಪ್ರಚೋದನಕಾರಿ ಮೀಮ್ ವಿಡಿಯೋಗಳನ್ನು ಹರಿಬಿಡಲಾಗುತ್ತದೆ. ಒಮ್ಮೆ
ಟ್ರೋಲ್ ವಿಡಿಯೋ ನೋಡಿದರೆ ಸಾಕು, ನಿಮಗೇ ಗೊತ್ತಿಲ್ಲದ ಹಾಗೆ ಅದರ ಬಲೆಯೊಳಗೆ ಬೀಳುತ್ತೀರಿ. ದಿನಕ್ಕೊಮ್ಮೆಯಾದರೂ ಟ್ರೋಲ್ ವಿಡಿಯೋ ನೋಡಿ ಎಂಜಾಯ್ ಮಾಡದಿದ್ದರೆ ಏನೋ ಕಳೆದುಕೊಂಡ ಭಾವ. ಈ ಟ್ರೋಲ್ ಲೋಕದಲ್ಲಿ ವಿಶೇಷವಾಗಿ ರಾಜಕಾರಣಿಗಳು, ಸಿನಿಮಾ ತಾರೆಯರು, ಪತ್ರಕರ್ತರು, ಟಿವಿ ಆಂಕರ್‌ಗಳು, ಕ್ರೀಡಾಪಟುಗಳು ಟ್ರೋಲಿಗರ ಫೇವರಿಟ್ ಆಗಿರುತ್ತಾರೆ.

ಕನ್ನಡದ ‘ಯುಐ’ ಚಿತ್ರದ ‘ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ’ ಎಂಬ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಯಿತು; ಟ್ರೋಲ್ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಎಷ್ಟರಮಟ್ಟಿಗೆ ಸಾರ್ವಭೌಮತೆಯನ್ನು ಸ್ಥಾಪಿಸುತ್ತಿದೆ ಎಂಬುದನ್ನು ಈ ಹಾಡು ತೋರಿಸಿಕೊಟ್ಟಿದೆ. ಟ್ರೋಲ್ ಆಗಲು ಕಾರಣ ಬೇಕಿಲ್ಲ, ಅದು ಟ್ರೋಲಿ ಗರ ವಿಕೃತ ಮನಸ್ಥಿತಿಯ ಮೇಲೆ ನಿಂತಿರುತ್ತದೆ. ‘ಸದಾಶಿವನಿಗೆ ಅದೇ ಧ್ಯಾನ’ ಎಂಬಂತೆ ಟ್ರೋಲಿಗ ರಿಗೆ ಅದೇ ಒಂದು ಪಾರ್ಟ್‌ಟೈಮ್ ಕೆಲಸ ವಾಗಿಬಿಟ್ಟಿದೆ.

ಟ್ರೋಲ್ ಜಗತ್ತಿನಲ್ಲಿ ‘ಫೇವರಿಟ್’ ಎನಿಸಿಕೊಂಡ ರಾಜಕಾರಣಿಗಳ ಟ್ರೋಲ್ ವಿಡಿಯೋಗಳು ಬಹುಬೇಗನೆ ಹಿಟ್ ಆಗಿಬಿಡುತ್ತವೆ; ಅವರಿಗೆ ಸಾಮಾಜಿಕ/
ಸಾರ್ವಜನಿಕ ಜೀವನದಲ್ಲಿ ನಿತ್ಯವೂ ಕಾಣಿಸಿಕೊಳ್ಳುವ ಹೊಣೆಗಾರಿಕೆ ಇರುವುದರಿಂದಲೇ ಅವರ ಕುರಿತಾದ ಟ್ರೋಲ್‌ಗಳು ಹೆಚ್ಚು ಜನಪ್ರಿಯವಾಗುತ್ತವೆ. ಹಾಗೇ ಒಂದೆರಡು ಝಲಕ್ ನೋಡುವುದಾದರೆ- ಎಚ್.ಡಿ.ಕುಮಾರಸ್ವಾಮಿಯವರ ‘ನಿಖಿಲ್ ಎಲ್ಲಿದ್ದೀಯಪ್ಪಾ?’, ಸಿದ್ದರಾಮಯ್ಯನವರ ಕುರಿತಾದ
‘ಹೌದು ಹುಲಿಯಾ’, ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಅವರ ‘ಕಂಜಾಜುಲೇಷನ್ ಬ್ರದರ್, ಅಬ್ಬಬ್ಬಾ ಲಾಟರಿ’, ಚಿಕ್ಕಬಳ್ಳಾಪುರದ ಶಾಸಕ
ಪ್ರದೀಪ್ ಈಶ್ವರ್ ಕುರಿತ ‘ಅವನ ಕೈಗೆ ಕಬ್ಬಿಣ ಕೊಡ್ರೀ’ ಹಾಗೂ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಜಯಪ್ರಕಾಶ್ ಶೆಟ್ರ ‘ಶೆಡ್ಡಿಗೆ ಹೋಗಣ ಬಾ,
ಕುಂಟೆಬಿಲ್ಲೆ ಆಡೋಣ ಬಾ’ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ನಿಮಗೆ ನೆನಪಿರಬಹುದು.

ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಮಾತ
ನಾಡಲು ನಿಂತಾಗ ಸ್ಪೀಕರ್ ಯು.ಟಿ.ಖಾದರ್ ಮಧ್ಯ ಪ್ರವೇಶಿಸಿ, ‘ಟ್ರೋಲ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಾನು ಈ ಕುರ್ಚಿಯಲ್ಲಿ ಕುಳಿತು
ಕೊಳ್ಳಲು ಅವರೇ ಕಾರಣ. ಹೊಸದಾಗಿ ಆಯ್ಕೆಯಾದ ಶಾಸಕರು ಆತ್ಮವಿಶ್ವಾಸದಿಂದಲೇ ಮಾತನಾಡಿ, ಹೆಚ್ಚು ಕಮ್ಮಿಯಾದರೆ ಏನೂ ತೊಂದರೆ ಇಲ್ಲ. ಇದು ಪರೀಕ್ಷಾ ಕೊಠಡಿ ಅಥವಾ ನ್ಯಾಯಾಲಯ ಅಲ್ಲ’ ಎಂದಿದ್ದುಂಟು.

ಸಾರ್ವಜನಿಕ ಜೀವನದ ಮೇಲೆ ಟ್ರೋಲ್‌ಗಳು ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತವೆ ಎಂಬುದು ಇದರಿಂದ ಅರ್ಥವಾಗುತ್ತದೆ. ಇನ್ನು ರಾಷ್ಟ್ರ ರಾಜಕಾರಣ ದ ಟ್ರೋಲ್ ಲೋಕದಲ್ಲಿ, ಕಳೆದ ಒಂದು ದಶಕದಿಂದಲೂ ಟ್ರೋಲಿಗರ ನೆಚ್ಚಿನ ವ್ಯಕ್ತಿಗಳಲ್ಲಿ ಅಗ್ರಸ್ಥಾನ ಪಡೆದವರು ರಾಹುಲ್ ಗಾಂಧಿ. ಅವರನ್ನು ಆ ಹೆಸರಿನಿಂದ ಸಂಬೋಧಿಸುವುದಕ್ಕಿಂತ ಹೆಚ್ಚಾಗಿ ಟ್ರೋಲಿಗರು ‘ಪಪ್ಪು’ ಎಂದೇ ಕರೆಯುತ್ತಿದ್ದರು. ರಾಹುಲರು ಏನು ಮಾತನಾಡಿದರೂ ಅದು ಟ್ರೋಲ್ ಆಗುತ್ತಿತ್ತು. ಇತ್ತೀಚೆಗೆ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲರ ‘ಖಟಾಖಟ್ ಖಟಾಖಟ್ ಖಟಾಖಟ್’ ಸಾಲು ಟ್ರೋಲ್ ಆಗಿ ಎಲ್ಲೆಡೆ ಹರಿದಾಡತೊಡಗಿತು. ಅದರ ತೀವ್ರತೆ ಎಷ್ಟಿತ್ತೆಂದರೆ, ಸ್ವತಃ ಪ್ರಧಾನಿ ಮೋದಿಯವರಿಂದ ಹಿಡಿದು ಬಹುತೇಕರು ತಮ್ಮ ಭಾಷಣದಲ್ಲಿ ‘ಖಟಾಖಟ್ ಖಟಾಖಟ್’ ಸಾಲು ಸೇರಿಸಿ ರಾಹುಲರನ್ನು ಟ್ರೋಲ್ ಮಾಡಲು ಶುರುಮಾಡಿದರು. ಆದರೆ ಚುನಾವಣಾ ಫಲಿತಾಂಶ ಬಂದ ನಂತರ ಹಾಗೂ ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿ ಅವರ ಮಾತುಗಳನ್ನು ಆಲಿಸಿದ ನಂತರ ರಾಹುಲರ ಕುರಿತಾದ ಟ್ರೋಲ್ ನಿಂತುಹೋಯಿತು.

ಇವನ್ನೆಲ್ಲಾ ನೋಡಿದಾಗ, ‘ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ’ ಎಂಬ ಗಾದೆಮಾತು ನೆನಪಾಗುತ್ತದೆ. ಮೊದಲೇ ಹೇಳಿದಂತೆ ‘ಟ್ರೋಲ್’ ಎಂಬುದು ವ್ಯಕ್ತಿಯೊಬ್ಬನ ವಿಕೃತ ಮನಸ್ಥಿತಿಯ ಪ್ರತಿರೂಪ. ಮನುಷ್ಯರಾದ ನಾವು ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗುವ ಹಾಗೇ ನಡೆದುಕೊಳ್ಳುತ್ತಿರುವುದನ್ನು ನೋಡಿದಾಗ, ನಾವಿನ್ನೂ ಪೂರ್ಣಪ್ರಮಾಣದಲ್ಲಿ ವಿಕಸನಗೊಂಡಿಲ್ಲ ಎನಿಸುತ್ತದೆ. ಟ್ರೋಲ್ ಎಂಬುದು ತಂತ್ರಜ್ಞಾನ ಜಗತ್ತಿನಲ್ಲಿ ಒಂದು ಫ್ಯಾಷನ್ ಆಗಿ
ಬಿಟ್ಟಿದೆ. ಟ್ರೋಲ್ ಮಾಡುವವರು ತಮ್ಮ ಪೇಜ್ ಲೈಕ್ಸ್ ಮತ್ತು ಅನುಯಾಯಿಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಮನಸೋಇಚ್ಛೆ ವಿಡಿಯೋಗಳನ್ನು ಎಡಿಟ್
ಮಾಡಿ, ಒಂದು ಹೊಸ ವಿಡಿಯೋವನ್ನು ಸೃಷ್ಟಿಸುತ್ತಾರೆ. ಒಂದು ವೇಳೆ ಅದು ನಿರೀಕ್ಷಿತ ಮಟ್ಟದಲ್ಲಿ ‘ಹಿಟ್’ ಆಗದಿದ್ದರೆ, ಇನ್ನೊಂದು ಟ್ರೋಲ್
ವಿಡಿಯೋಗಾಗಿ ಮಿಕವನ್ನು ಹುಡುಕಲು ಶುರುಹಚ್ಚಿ ಕೊಳ್ಳುತ್ತಾರೆ.

ಗಣ್ಯಾತಿಗಣ್ಯರನ್ನೂ ಟ್ರೋಲ್‌ಗೆ ಗುರಿಪಡಿಸಿ ಅವರ ವೈಯಕ್ತಿಕ ಘನತೆಗೆ ಕುಂದುತರುವ ಮತ್ತು ಅವರ ಹುದ್ದೆಗೆ ಅಗೌರವ ಸೂಚಿಸುವ ಮನಸ್ಥಿತಿ
ಸರಿಯಲ್ಲ. ರಾಜಕಾರಣಿಗಳು ಮತ್ತು ಇತರ ಸೆಲೆಬ್ರಿಟಿಗಳು ಸಾರ್ವಜನಿಕ ಜೀವನದಲ್ಲಿ ನಿತ್ಯವೂ ಪರ-ವಿರೋಧ ಪ್ರತಿಕ್ರಿಯೆಗಳನ್ನು ಸ್ವೀಕರಿಸುವುದ
ರಿಂದ ಇಂಥ ಟ್ರೋಲ್‌ಗಳು ಅವರ ಪಾಲಿಗೆ ಒಂದು ಪ್ರಚಾರಸಾಮಗ್ರಿ, ಅಷ್ಟೇ. ಅವರು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಜನಸಾಮಾನ್ಯರ,
ಯುವಕರ, ವಿದ್ಯಾರ್ಥಿಗಳ ಪಾಲಿಗೆ ಇದೊಂದು ಮಾನಸಿಕ ಹಿಂಸೆಯಾಗಿ ಕಾಡುತ್ತಿದೆ, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟುಮಾಡುತ್ತಿದೆ.

ಬಹಳಷ್ಟು ಜನರಿಗೆ ಏನು ಮಾತನಾಡಬೇಕು, ಎಷ್ಟು ಮಾತನಾಡಬೇಕು, ಯಾವ ರೀತಿ ಬದುಕಬೇಕು ಎಂಬುದೇ ಸವಾಲಾಗಿದೆ. ಸ್ವಲ್ಪ ಎಡವಿದರೂ
ಟ್ರೋಲ್ ಆಗುತ್ತೇವೆಂಬ ಹೆದರಿಕೆ ಜನರನ್ನು ಕಾಡುತ್ತಿದೆ. ಸ್ವಲ್ಪ ಸಮಯ ಇದರ ಬಗ್ಗೆ ತಲೆಕೆಡಿಸಿಕೊಳ್ಳದಿರುವ ಜನ ಕ್ರಮೇಣ ಮಾನಸಿಕವಾಗಿ ಕುಗ್ಗುತ್ತಿ
ದ್ದಾರೆ. ಇದು ನಿಜಕ್ಕೂ ದುರದೃಷ್ಟಕರ. ಎಷ್ಟೋ ಬಾರಿ ಬೇನಾಮಿ ಹೆಸರಿನಿಂದ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿಖಾತೆ ತೆರೆದು ಇಂಥ
ತೀಟೆಯನ್ನು ತೀರಿಸಿಕೊಳ್ಳುವವರೂ ಇದ್ದಾರೆ. ಟ್ರೋಲ್ ಜನರಲ್ಲಿ ಪ್ರಚೋದನೆ ಉಂಟುಮಾಡುತ್ತಿದ್ದು, ಇದನ್ನು ಉದ್ದೇಶಪೂರ್ವಕವಾಗಿ ಬೆಳೆಸುವ
ಒಂದು ಪ್ರತ್ಯೇಕ ವರ್ಗವೇ ಇದೆ.

ಟ್ರೋಲ್ ಮೂಲಕ ಜನರ ಗಮನವನ್ನು ವಾಸ್ತವಿಕತೆಯಿಂದ ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ. ಟ್ರೋಲ್ ಮತ್ತು ಸೈಬರ್ ಬುಲ್ಲಿಂಗ್‌ನಿಂದಾಗಿ ೬೮ ಪ್ರತಿಶತ ಮಕ್ಕಳು ಮಾನಸಿಕ ಖಿನ್ನತೆ ಮತ್ತು ದೈಹಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಹೊರ ಬರಲು ದಾರಿಕಾಣದೆ ಹದಿಹರೆಯದವರು ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರೆ. ಇನ್ನೂ ಕೆಲವರು ಅದರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವರಲ್ಲಿ ೧೦ರಿಂದ ೧೬ ವರ್ಷದ ಹುಡುಗಿ ಯರ ಪ್ರಮಾಣ ಹೆಚ್ಚಿದೆ ಮತ್ತು ಲಕ್ಷಾಂತರ ಮಕ್ಕಳು ಪ್ರತಿದಿನ ಶಾಲೆಗೆ ಹೋಗದೆ ಮನೆಯಲ್ಲೇ ಇರುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಹದಿಹರೆಯದ ಆರು ಮಂದಿಯ ಪೈಕಿ ಒಬ್ಬರು ಸೈಬರ್ ಬುಲ್ಲಿಂಗ್‌ಗೆ ಒಳಗಾಗಿರುತ್ತಾರೆ ಎಂದು ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನ ಸಂಸ್ಥೆಯೊಂದು
ತಿಳಿಸಿದ್ದರೆ, ‘ಹೆಚ್ಚಿನ ಶಾಲಾ ಮಕ್ಕಳು ಸಾಂಕ್ರಾಮಿಕ ರೋಗಕ್ಕಿಂತ ಸೈಬರ್ ಬುಲ್ಲಿಂಗ್‌ನಿಂದಾಗಿ ಬಳಲುತ್ತಿದ್ದಾರೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ
ಮಾಡಿದೆ. ಟ್ರೋಲಿಂಗ್ ಜಾಗತಿಕ ವ್ಯಾಪಾರವಾಗಿ ವಿಕಸನ ಗೊಂಡಿದೆ. ಟ್ರೋಲ್ ಮಾಡುವುದರ ಬಗೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಸೈಬರ್ ಬುಲ್ಲಿಂಗ್‌ನ ಸ್ವರೂಪಗಳು ಮತ್ತು ಅದರ ಪರಿಣಾಮ ಗಳ ಬಗ್ಗೆ ಹಾಗೂ ಕಾನೂನಿನಲ್ಲಿ ಇರುವ ಶಿಕ್ಷೆಯ ಬಗ್ಗೆ ಯುವಜನರಿಗೆ, ಕುಟುಂಬಿಕರಿಗೆ ಮತ್ತು ಶಾಲೆಗಳಿಗೆ ಅರಿವು ನೀಡುವ ತುರ್ತು ಅಗತ್ಯವಿದೆ.

ಆನ್‌ಲೈನ್ ಅಪರಾಧ ಕುರಿತಂತೆ ಭಾರತದಲ್ಲಿ ಹಲವಾರು ಕಾನೂನುಗಳಿವೆ. ‘ಮಾಹಿತಿ ತಂತ್ರಜ್ಞಾನ ಕಾಯ್ದೆ, ೨೦೦೦’ರ ಸೆಕ್ಷನ್ ೬೬ಎ, ೬೭, ೬೯ಎ, ೭೯ರ ಪ್ರಕಾರ, ಆಕ್ಷೇಪಾರ್ಹ ಸಂದೇಶಗಳ್ನು ಕಳಿಸಿದರೆ, ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮುದ್ರಣ ಅಥವಾ ವಿಡಿಯೋ ರೂಪದಲ್ಲಿ ಆತನ ಚಿತ್ರ/ದೃಶ್ಯ ವನ್ನು ಪ್ರಕಟಿಸಿದರೆ ಮೂರು ವರ್ಷಗಳ ಜೈಲುಶಿಕ್ಷೆ ಅಥವಾ ೨ ಲಕ್ಷದಿಂದ ೧೦ ಲಕ್ಷ ರು.ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಇಷ್ಟೆಲ್ಲಾ ಅವಕಾಶಗಳಿದ್ದರೂ ಅಪರಾಧಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇರುವುದು ದುರದೃಷ್ಟಕರ.

ಒಬ್ಬರಿಗೊಬ್ಬರು ಹೊಂದಿಕೊಂಡು ಹೇಗೆ ಬದುಕ ಬೇಕು ಎಂಬುದನ್ನು ಕಲಿಯಲು ನಮಗೆ ಸಾವಿರಾರು ವರ್ಷಗಳು ಬೇಕಾದವು. ನಮ್ಮ ವಿಕೃತ ಮನಸ್ಥಿತಿ
ಯನ್ನು ತಡೆದು ನಿಲ್ಲಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ನಿಯಮಗಳನ್ನು ರೂಪಿಸಿ ಕೊಂಡೆವು. ತಾನೊಬ್ಬ ಪ್ರಗತಿಪರ ಎಂದು ಗುರುತಿಸಿ ಕೊಳ್ಳುವ ಧಾವಂತದಲ್ಲಿ ಹೊಸ ಹೊಸ ತಂತ್ರಜ್ಞಾನ ಗಳನ್ನು ಸೃಷ್ಟಿಸಿದ ಮಾನವ, ಕೊನೆಕೊನೆಗೆ ತಾನು ತೋಡಿದ ಹಳ್ಳದಲ್ಲೇ ಬೀಳುವಂಥ ಪರಿಸ್ಥಿತಿ ಯನ್ನೂ ಹುಟ್ಟುಹಾಕಿದ್ದಾನೆ. ಈ ಹಳ್ಳದಲ್ಲಿ ಅಮಾಯಕರೂ ಬೀಳುತ್ತಿರುವುದು ವಿಷಾದನೀಯ.

ಆದ್ದರಿಂದ, ಜೀವನದಲ್ಲಿ ಯಾವುದಕ್ಕೆ ಎಷ್ಟು ಆದ್ಯತೆ ನೀಡ ಬೇಕೆಂಬುದನ್ನು ಮೊದಲು ನಾವು ನಿರ್ಧರಿಸಬೇಕು. ಯಾರೋ ಮಾಡುವ ಋಣಾತ್ಮಕ ಟ್ರೋಲ್‌ಗಳಿಗೆ ಒಡ್ಡಿಕೊಂಡು, ಅದಕ್ಕೆ ನಮ್ಮ ಸಮಯವನ್ನೂ ವಿನಿಯೋಗಿಸುತ್ತಾ ಮತ್ತು ಅವನ್ನು ಉತ್ತೇಜಿಸುತ್ತಾ ಹೋದರೆ ಹಾಳಾಗುವುದು ನಮ್ಮ ಭವಿಷ್ಯವೇ ಎಂಬ ಎಚ್ಚರ ನಮ್ಮಲ್ಲಿರಬೇಕು.

(ಲೇಖಕರು ಶಿಕ್ಷಕರು)

Leave a Reply

Your email address will not be published. Required fields are marked *