ರಾವ್ ಭಾಜಿ
journocate@gmail.com
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇರಾನಿ ಟ್ರೋಫಿ ಪಂದ್ಯ ಅವಧಿಗೆ ಮುನ್ನವೇ ಮುಗಿದಿತ್ತು. KSCA ಪೆವಿಲಿಯನ್ನಲ್ಲಿ ಅಂದಷ್ಟೆ ಪರಿಚಯವಾಗಿದ್ದ ಸದಾನಂದ್ ವಿಶ್ವನಾಥ್ರನ್ನು ಊಟಕ್ಕೆ ಕರೆದೆ. ಆಗ ತಾನೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಸದಾನಂದ್ ಒಪ್ಪಿದರು.
ಚರ್ಚ್ ರಸ್ತೆಯಲ್ಲಿದ್ದ ನೈಟ್ ವಾಚ್ಮನ್ ಪಬ್ಬಿಗೆ ಹೋಗಿ ಗಂಟೆಗಟ್ಟಲೆ ಹರಟಿದೆವು. ಜತೆಯಲ್ಲಿ ನನ್ನ ಹರಟೆಮಲ್ಲ ಸ್ನೇಹಿತ ನೊಬ್ಬನಿದ್ದ. ಅವನೇ ಗಪ್ಚಿಪ್ಪಾಗಿದ್ದ. ಅನೇಕ ವಿಷಯಗಳ ಪ್ರಸ್ತಾಪವಾಯಿತು. ವಿಶಿ ತಮ್ಮನ್ನು ತಾವು ಬಿಚ್ಚಿಕೊಂಡಿದ್ದರು. ನಮ್ಮ ಹಿಂದೆ ಕುಳಿತು ನಮ್ಮ ಮಾತನ್ನಾಲಿಸುತ್ತಿದ್ದ ಒಬ್ಬರು ನಮ್ಮ ಅನುಮತಿ ಬೇಡಿ ನಮ್ಮ ಟೇಬಲ್ಲಿಗೇ ಬಂದು ಕುಳಿತರು. ಭಗವದ್ಗೀತೆ ಕುರಿತೂ ಹರಟಲು ಅವರು ಕಾರಣ ವಾದರು. ಮುಖ ಪರಿಚಯವಿತ್ತು. ಸಮಯ ಕಳೆದಿದ್ದೇ ತಿಳಿಯಲಿಲ್ಲ. ಅಷ್ಟೊತ್ತಿಗೆ ಊಟದ ಸಮಯವಾಗಿತ್ತು. ಪ್ರೆಸ್ ಕ್ಲಬ್ಬಿಗೆ ಹೋಗಿ ಊಟ ಮಾಡೋಣವೆಂದೆ. ಆಟೊದಲ್ಲಿ ಕ್ಲಬ್ಬಿಗೆ ಬಂದೆವು.
ಅಲ್ಲಿ ನನ್ನ ಸಹೋದ್ಯೋಗಿಯೂ ಜತೆ ಗೂಡಿದರು. ಅವರು ವಿಶ್ವನಾಥ್ ಜತೆ ಸೇಂಟ್ ಜೋಸೆಫ್ ನಲ್ಲಿ ಓದಿದ್ದರು. ಕಾಲೇಜಿನಲ್ಲಿ ಅವರೊಡನೆ ಕ್ರಿಕೆಟ್ ಕೂಡ ಆಡಿದ್ದರು. ಅದೇಕೋ ಮಾತಿನ ಭರದಲ್ಲಿ ವಿಶ್ವನಾಥ್ ಆವೇಶಗೊಂಡು ‘ನೀನು, ನಾನು ಸ್ಥಳ ವಿನಿಮಯ ಮಾಡಿಕೊಳ್ಳೋಣ. ನಿನಗಿಂತ ಚೆನ್ನಾಗಿ ನಾನು ಬರೆಯಬ, ನನಗಿಂತ ಚೆನ್ನಾಗಿ ನೀನು ಕ್ರಿಕೆಟ್ ಆಡಬಯಾ?’ ಎಂದು ಸವಾಲೆಸೆದರು.
ಘಟನೆ ನಡೆದು ಎಷ್ಟೋ ವರ್ಷಗಳಾದರೂ ಅವರ ಮಾತನ್ನು ಆಗಾಗ ಮೆಲುಕು ಹಾಕುತ್ತಿರುತ್ತೇನೆ. ವಿಶಿ ಆ ರೀತಿ ನನ್ನ ಸಹಪಾಠಿ ಯನ್ನು ಹಳಿಯಬಾರದಿತ್ತು, ನಿಜ. ಅವರ ಬರವಣಿಗೆ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ಪ್ರತಿಭಾನ್ವಿತ ಅಂತಾರಾಷ್ಟ್ರೀಯ ಕ್ರಿಕೆಟಿಗ ರನ್ನು ಟೀಕಿಸಿ ಬರೆಯುವ ಯಾವುದೇ ಕ್ರಿಕೆಟ್ ಪತ್ರಕರ್ತನಿಗೂ ಅವರಿಂದ ಟೀಕಿಸಲ್ಪಡುವ ಕ್ರಿಕೆಟಿಗರ ಆಟದ ಪ್ರತಿಭೆ ಇರುವು ದಿಲ್ಲ. ಇದೇ ಮಾತು ಯಾವುದೇ ರಂಗದಲ್ಲಿ ಸಾಧನೆಗೈದ ವ್ಯಕ್ತಿಯ ಬಗ್ಗೆ ಬರೆಯುವ ಪತ್ರಕರ್ತರಿಗೂ ಹೊಂದುತ್ತದೆ. ನಾವ್ಯಾರೂ ನಾವು ಯಾರನ್ನು ಟೀಕಿಸಿ ಬರೆಯುತ್ತೇವೆಯೋ ಅವರ ಸಾಧನೆಯ ಎಳ್ಳಷ್ಟೂ ಸಾಧನೆ ಮಾಡಿದವರಲ್ಲ. (ಮಾಡಿದ್ದರೆ, ನಾವ್ಯಾಕೆ ಪತ್ರಕರ್ತರಾಗಿರುತ್ತಿದ್ದೆವು!?) ನಾರಾಯಣ ಮೂರ್ತಿಯ ಕೋಟಿಯ ಒಂದು ಭಾಗದಷ್ಟು ಸಂಪಾದನೆ ನನಗಿಲ್ಲ. ವಿಶ್ವ ಚಾಂಪಿ ಯನ್ ಗೀತ್ ಸೇಥಿಯಂತೆ ಬಿಲಿಯರ್ಡ್ಸ ಆಡಲು ನನಗೆ ಬರುವುದಿಲ್ಲ.
ಮಿಥಾಲಿ ರಾಜ್ ಆಡಿದಷ್ಟು ಕ್ರಿಕೆಟ್ ನಾನಾಡಿಲ್ಲ. ಸುಲ್ತಾನ್ ಖಾನ್‌ನಂತೆ ನಾನು ಸಾರಂಗಿಯನ್ನು ನುಡಿಸುವುದಿರಲಿ, ಹಿಡಿಯುವು ದಕ್ಕೇ ಬರುವುದಿಲ್ಲ. ವಿಕ್ರಂ ಸಾರಾಭಾಯಿಯಂತೆ ಬಾಹ್ಯಾಕಾಶದ ಒಳಹೊರಗುಗಳನ್ನು ಅಭ್ಯಸಿದವನಲ್ಲ. ಆದರೂ, ಅಗತ್ಯ ಬಿದ್ದರೆ ಟೀಕಾಪ್ರಹಾರ ಮಾಡುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ. ಹೆಸರಾಂತ ಪತ್ರಕರ್ತ-ಲೇಖಕ ರಾಜನ್ ಬಾಲಾ ಕ್ರಿಕೆಟ್ ಲೇಖಕರನ್ನು ಆಯ್ಕೆ ಮಾಡುವಾಗ ಅವರು ಕ್ರಿಕೆಟ್ ಆಡಿರಲೇಬೇಕೆಂಬ ಅರ್ಹತಾ ನಿಯಮವನ್ನನುಸರಿಸುತ್ತಿದ್ದರು. ಬರವಣಿಗೆ ಯನ್ನು ಉತ್ತಮಪಡಿಸಿಕೊಳ್ಳಬಹುದು, ಆದರೆ ಕ್ರಿಕೆಟ್ ಜ್ಞಾನ ಅದನ್ನಾಡಿಯೇ ಗಳಿಸಿಕೊಳ್ಳಬೇಕು ಎಂಬುದು ಅವರ ಅಚಲ ನಂಬಿಕೆ. ಕ್ರಿಕೆಟ್ ಆಡಿದ್ದೂ ಕೂಡ, ಕೆಲ ತಾಂತ್ರಿಕಾಂಶಗಳ ಬಗ್ಗೆ ಬರೆಯುವಾಗ ತಡಕಾಡುವವರೂ ಇದ್ದಾರೆ.
ನಾನು ಬಾಂಬೆಯಲ್ಲಿ ಉದ್ಯೋಗದಲ್ಲಿದ್ದಾಗ ಅಂದಿನ ಮಹಾರಾಷ್ಟ್ರ ಸಿಎಂ ವಸಂತದಾದಾ ಪಾಟೀಲ್ ಅವರ ಮಗಳ ಭರತ ನಾಟ್ಯ ಕಾರ್ಯಕ್ರಮವನ್ನು ವೀಕ್ಷಿಸಿ ಬರೆಯಲು ನನಗೆ ಹೇಳಿದರು. ನೃತ್ಯದಲ್ಲಿ ನನಗೆ ಆಸಕ್ತಿ ಇರುವುದೇನೋ ನಿಜ, ಆ
ಕಾರ್ಯಕ್ರಮದ ಬಗ್ಗೆ ಒಂದಷ್ಟು ಸಾಲು ಬರೆಯಬಲ್ಲ ಸಾಮರ್ಥ್ಯವೂ ಇದೆ, ಆದರೆ ನುರಿತ ನಾಟ್ಯಗಾರ್ತಿಯೊಬ್ಬಳ ಬಗ್ಗೆ ಪ್ರಮುಖ ಪತ್ರಿಕೆಯಲ್ಲಿ ನಾನು ಬರೆದರೆ ಅದನ್ನು ಜೊಳ್ಳೆಂದು ತಳ್ಳಿಹಾಕುವ ಒಬ್ಬರೇ ಒಬ್ಬ ಓದುಗರಾದರೂ ಇರುತ್ತಾರೆ, ಅವರ ತಿರಸ್ಕಾರಕ್ಕೆ ನಾನು ಗುರಿಯಾಗಲಾರೆ.
ಅದಕ್ಕಿಂತ ಹೆಚ್ಚಾಗಿ, ಸಾಧನೆಗೈದ ಒಂದು ನರ್ತಕಿಗೆ ನಾನು ನನ್ನ ಅರೆಬೆಂದ ಲೇಖನದ ಮೂಲಕ ಅಪಚಾರವೆಸಗುವುದಕ್ಕೆ
ಇಷ್ಟವಿರಲಿಲ್ಲ. ನೃತ್ಯಕಲೆಯ ಬಗ್ಗೆ ಪರಿಶ್ರಮವಿರುವರಾದರೂ ಹೋಗಲೆಂದು ಸಲಹೆ ನೀಡಿ ನಾನು ಹಿಂದುಳಿದೆ. ವರದಿಗಾರ ನೊಬ್ಬನಿಗೆ ಇಂತಹ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಇದ್ದರೂ, ಸದಾ ಕಾಲವಿರುವುದಿಲ್ಲ. ವಿಷಯ ತಿಳಿದಿದೆಯೋ, ಇಲ್ಲವೋ ಬರೆಯಬೇಕೆಂದರೆ, ಬರೆಯಬೇಕು.
ನಾವು ಆಯ್ಕೆಮಾಡಿಯೋ, ಅನಿವಾರ್ಯವಾಗಿಯೋ ಬರೆಯಬೇಕಾದ ವಿಷಯದ ಬಗ್ಗೆ ನಮಗೆ ಪಾಂಡಿತ್ಯವಿರದಿದ್ದರೂ,
ಪರಿಜ್ಞಾನವಂತೂ ಇರಲೇಬೇಕಾಗುತ್ತದೆ. ಅದಿಲ್ಲದಿರುವ ಕಾರಣಕ್ಕೆ ನಾವು ಬರೆಯುವ ಬಹುಪಾಲು ಲೇಖನಗಳೂ, ವರದಿ
ಗಳೂ ಜಾಳುಜಾಳಾಗಿರುತ್ತವೆ. ಹಾಸ್ಯಾಸ್ಪದವಾಗಿರುವ ಪ್ರಸಂಗಗಳಿಗೂ ಕೊರತೆಯಿಲ್ಲ. ನಾವು ಓದಿಕೊಂಡಷ್ಟೂ ನಮ್ಮ ಓದಿನ ಫಲ ಓದುಗರಿಗೂ ಲಭ್ಯವಾಗುತ್ತದೆ. ನಮ್ಮ ಆಸಕ್ತಿಗಳೂ ವಿಸ್ತಾರವಾಗಿರಬೇಕು.
ಸತ್ಯಕ್ಕೆ ಸದಾ ಬದ್ಧವಾಗಿದ್ದು, ಪೂರ್ವಗ್ರಹಮುಕ್ತವಾಗಿರಬೇಕು. ಅವೆಲ್ಲವೂ ಆದರ್ಶ ಪತ್ರಿಕೋದ್ಯಮದ ಮಾತಾಯಿತು. ವದಂತಿಯೇ ವರದಿಯಾಗಿ ಕ್ಷಣದಲ್ಲಿ ರೂಪಾಂತರವಾಗಬಲ್ಲ ಯುಗವಿದು. ಸುದ್ದಿಮನೆಯನ್ನು ಹೊಟೆಲ್‌ನ ಅಡುಗೆಮನೆಗೆ
ಹೋಲಿಸಿ, ಹಿಂದೊಮ್ಮೆ ನನ್ನ ಇಂಗ್ಲಿಷ್ ಅಂಕಣದಲ್ಲಿ ಬರೆದಿದ್ದೆ. ಅಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ. ಮೂರ್ ಮಸಾಲೆಯ
ಎಂದು ವೇಟರ್ ದೋಸೆ ಹುಯ್ಯುವವನಿಗೆ ಕೂಗಿ ಹೇಳುವಂತೆ, ಈ ವರದಿಗೊಂದಿಷ್ಟು ಮಸಾಲೆ (ಹಚ್ಚಿ) ಎಂದು ಸಂಪಾದಕ ತನ್ನ ಅಧೀನರಿಗೆ ಹೇಳುವ ದೃಶ್ಯವನ್ನು ಊಹಿಸಿಕೊಳ್ಳಿ.
ಸುದ್ದಿಮನೆಯೊಳಗೆ ಪ್ರವೇಶ ನಿಷಿದ್ಧವಾದ್ದರಿಂದ ನೀವದನ್ನು ಊಹಿಸಿಯೇ ಅನುಭವಿಸಬೇಕು! ಸುದ್ದಿಯನ್ನು ಹೆಚ್ಚು ಆಕರ್ಷಕ ಗೊಳಿಸಲು ಅದಕ್ಕೆ ಲೇಪಿಸುವ (ಮನೋ)ರಂಜಕ, (ಅಡ್ಡವಾಸನೆ ಮೂಗಿಗೆ ಹೊಡೆಯುವ) ಗಂಧಕ ಇತ್ಯಾದಿ ಅಂಶಗಳ ಪರಿಚಯ ಓದುಗ/ವೀಕ್ಷಕರಾದ ನಿಮಗಿದೆ. ಮೊನ್ನೆ ನನಗೆ ಹೊಳೆದ ಅಂಶ. ಸಮಾಜದ ಹಿತವನ್ನು ಕಾಪಾಡಬೇಕಾದವರು ನಾವಾದ್ದರಿಂದ ನಮ್ಮನ್ನು ಕಾವಲು ನಾಯಿಯೆಂದು ಕರೆಯಲಾಗುತ್ತದೆ.
ವಾಸ್ತವದಲ್ಲಿ, ನಾವು ಹಾಗೆಯೇ ಇದ್ದೇವೆ ಅನಿಸುತ್ತದೆ. ನಾಯಿಯ ಹೆಸರಿಟ್ಟು ನೀವು ಕರೆದಾಗ ಅದು ಕಿವಿಗೊಡುವುದು ಅದಕ್ಕೆ
ಅದರ ಹೆಸರಿನ ಶಬ್ದದ ಬಳಕೆಯಿರುವ ಕಾರಣಕ್ಕಾಗಿಯೇ ಹೊರತು ಅದಕ್ಕೆ ಆ ಶಬ್ದದ ಅರ್ಥ ತಿಳಿದಿರುತ್ತದೆ ಎಂದಲ್ಲ. ಮೂಲತಃ ನಮ್ಮ ಗ್ರಹಿಕೆಯ ದೋಷವಿದೆ. ದೋಷವಿಲ್ಲದಿರುವ ಸಂದರ್ಭದಲ್ಲೂ ಗ್ರಹಿಕೆ ಸೂಕ್ಷ್ಮವಲ್ಲ, ಸ್ಥೂಲ, ಎಡವಬಲ್ಲಷ್ಟು ಸ್ಥೂಲ! ನಮ್ಮ ಎಲ್ಲಾ ತಪ್ಪುಗಳ ಮೂಲ ಅಪ್ರಾಮಾಣಿಕತೆಯೇ ಆಗಿರುವುದಿಲ್ಲ. ಅಪ್ರಾಮಾಣಿಕ ತಪ್ಪುಗಳಾಗದಂತೆ ಹೆಚ್ಚಿನ ನಿಗಾ ಅಗತ್ಯ.
ಇದೀಗ ಬಹು ಮುಖ್ಯವಾದ ಒಂದೆರಡು ಪ್ರಶ್ನೆಗಳನ್ನು ನಿಮ್ಮ ಮುಂದಿಡುವೆ. ಮಾಧ್ಯಮದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ? ಯಾರೂ ಪ್ರಾಮಾಣಿಕರಲ್ಲ, ಎಲ್ಲರೂ ಒಂದಲ್ಲ ಒಂದು ರಾಜಿ ಮಾಡಿಕೊಂಡಿರುವ ಪತ್ರಕರ್ತರೇ! ಇಂಥ ವ್ಯವಸ್ಥೆಯನ್ನು ಸರಿಪಡಿಸುವುದಾದರೆ, ಅದರ ಆರಂಭ ಎಲ್ಲಿಂದ? ಅಂತಹ ಸರಿಪಡಿಸುವಿಕೆಯನ್ನು ನಿರೀಕ್ಷಿಸುವವರೂ ಪ್ರಾಮಾಣಿಕರಾಗಿರ ಬೇಕಲ್ಲವೇ? ಯಾವೊಂದು ಹೆಂಗಸನ್ನೂ ಕಣ್ಣೆತ್ತಿ ನೋಡದವ ನನ್ನ ಮೇಲೆ ಮೊದಲ ಕಲ್ಲು ಎಸೆಯಲಿ, ಎಂದ ಕ್ರಿಸ್ತನಂಥ ಪರಿಸ್ಥಿತಿಯಲ್ಲಿ ಇಂದಿನ ಸಮಾಜವಿದೆ.
ಹಿಂದೊಮ್ಮೆ, ನನ್ನ ಸ್ನೇಹಿತರೊಬ್ಬರು ಸರಕಾರಿ ಸೇವೆಯಲ್ಲಿದ್ದ ತಮ್ಮ ತಂದೆಯನ್ನು ಕುರಿತು ಅವರು ತಕ್ಕಮಟ್ಟಿಗೆ ಪ್ರಾಮಾಣಿಕರು ಎಂದಿದ್ದರು. ಅಂದರೆ, ಅವರು ಸುಳ್ಳರು ಎಂದು ಹೇಳಿ ನಕ್ಕಿದ್ದೆ. ಒಬ್ಬರು ತಕ್ಕಮಟ್ಟಿಗೆ ಪ್ರಾಮಾಣಿಕರಾಗಲು ಹೇಗೆ ಸಾಧ್ಯ? ಪರಿಚಯದ ದಲಿತ ಲೇಖಕರೊಬ್ಬರ ಬಗ್ಗೆ ನಾನು ಅಪಾರ ಗೌರವವನ್ನಿಟ್ಟುಕೊಂಡಿz. ಅವರ ಜತೆ ಕೆಲವು ವಿಚಾರಗಳ
ಕುರಿತಂತೆ ಭಿನ್ನಾಭಿಪ್ರಾಯವಿತ್ತು, ಆದರೆ ಅದು ಅವರ ಬಗ್ಗೆಗಿನ ನನ್ನ ಗೌರವಾಭಿಮಾನಗಳನ್ನು ಕಿಂಚಿತ್ ಕಡಿಮೆಗೊಳಿಸಿರಲಿಲ್ಲ.
ಆದರೆ, ಅಪರಾಧಿಯೊಬ್ಬನ ಪರವಾಗಿ ಅವರು ಬ್ಯಾಟ್ ಬೀಸಿದಾಗ ಅವರ ಮೇಲಿನ ಗೌರವಾಭಿಮಾನ ಕ್ಷಣದ ಮಾಯವಾಯಿತು. ಅಷ್ಟೇ ವೇಗದಲ್ಲಿ, ಒಬ್ಬ ಬ್ರಾಹ್ಮಣ ಪತ್ರಕರ್ತನ ಮೇಲಿದ್ದ ಅಭಿಮಾನ ಆತ ದಂಧೆಕೋರನೆಂದು ತಿಳಿದ ಕ್ಷಣವೇ ಮಾಯ ವಾಯಿತು. ನನ್ನ ಮತ್ತೊಬ್ಬ ಅನುಭವೀ ಲೇಖಕ-ಮಿತ್ರರು ಬೇರೇ ಕಾರಣಕ್ಕೆ ಅವರಿಬ್ಬರ ಬಗ್ಗೆಯೂ ಅಭಿಮಾನವಿಟ್ಟು ಕೊಂಡಿದ್ದಾರೆ.
ಇದು ನನಗೆ ಕಸಿವಿಸಿಯುಂಟುಮಾಡುತ್ತದೆ. ಆ ಇಬ್ಬರ ಬಗ್ಗೆ ನನ್ನ ಪೂರ್ವಗ್ರಹವೇನೂ ಇಲ್ಲ. ಅವರನ್ನು ಆದರದಿಂದ ನೋಡುವ ಮಿತ್ರರಲ್ಲಿ ಪ್ರಾಮಾಣಿಕತೆಯ ಅಭಾವವೇನಿಲ್ಲ. ಅವರಿಗೆ, ಅವರಿಬ್ಬರಿಗೆ ಸಂಬಂಧಿಸಿದಂತೆ ಮುದವಾದ ಅನು
ಭವವೇ ಆಗಿದೆ. ಅವರಿಗೆ ನನ್ನ ವೈಯಕ್ತಿಕ ಅನುಭವದ ಕಹಿಯನ್ನು ದಾಟಿಸಿ ಅವರಿಬ್ಬರ ಮೇಲಿನ ಒಳ್ಳೆಯ ಅಭಿಪ್ರಾಯವನ್ನು ಬದಲಿಸುವ ಯಾವುದೇ ಇರಾದೆ ನನಗಿಲ್ಲ. ಆಶ್ಚರ್ಯ ವೆಂದರೆ, ಬಹಳಷ್ಟು ಪ್ರಮುಖ ವ್ಯಕ್ತಿಗಳನ್ನು ಕುರಿತಂತೆ ಅವರ ಮತ್ತು ನನ್ನ ಅನುಭವಗಳು ಭಿನ್ನ, ಭಿನ್ನ.
ಆಕರ್ಷಣೆ ಕುರಿತಾದ ನಿಯಮವೊಂದಿದೆ. ನಾವು ನಮಗೆ ಬೇಕಾದ ಅನುಭವವನ್ನೇ ಆಕರ್ಷಿಸುತ್ತೇವಂತೆ. ಅಂದರೆ, ಪತ್ರಕರ್ತ ನಾಗಿ ಋಣಾತ್ಮಕ ಅಂಶಗಳನ್ನೇ ನಾನು ಸೆಳೆಯಬನೆಂದೇ! ಹೌದೆಂದಾದರೆ, ಇದು ಬಹಳಷ್ಟು ಪತ್ರಕರ್ತರಿಗಂಟಿದ ಶಾಪ. ಆದರೆ, ಸಿನಿಕರಾಗದಿರುವ ಸ್ವಾತಂತ್ರ್ಯವನ್ನು ಜತನವಾಗಿಟ್ಟುಕೊಳ್ಳಬೇಕಾದ ಹೊಣೆಯೂ ನಮ್ಮದೇ. ಅನುಭವಜನ್ಯ ಅಭಿಪ್ರಾಯಗಳ ಮಾತಾಯಿತು. ಪೂರ್ವಗ್ರಹಕ್ಕೆ ಸಂಬಂಧಿಸಿದಂತೆ, ಒಂದು ಪ್ರಸಂಗ ಮತ್ತೆ ನೆನಪಾಗುತ್ತಿದೆ.
ಅಂದಿನ ಮೈಸೂರು ಪೊಲೀಸ್ ಆಯುಕ್ತರಾಗಿದ್ದ ಚಂದ್ರಶೇಖರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಸಾಹಿತ್ಯ-ಕಲೆ-ಸಂಗೀತದ ಬಗ್ಗೆ ಅಭಿರುಚಿಯಿದ್ದವರು. ಬಿಜಿ ಇದ್ದುದರಿಂದ ನನ್ನನ್ನು ಮಾತನಾಡಿಸುವುದು ತಡವಾಯಿತು. ಏಕಕಾಲಕ್ಕೆ, ಫೈಲ್‌ಗಳಿಗೆ ಸಹಿ ಹಾಕುತ್ತಿದ್ದರು, ಫೋನ್‌ನಲ್ಲಿ ಮಾತನಾಡುತ್ತಿದ್ದರು, ವಯರ್ಲೆಸ್ ಸಂದೇಶವನ್ನು ಆಲಿಸುತ್ತಿದ್ದರು. ಅಷ್ಟರ ನಡುವೆ, ನನಗೆ ಚಹಾ ಕೊಟ್ಟ ಪೇದೆಗೆ ಇನ್ನು ಮುಂದೆ ಅತಿಥಿಗಳಿಗೆ ನೀಡುವ ಕಪ್ಪು-ಸಾಸರ್ ಬೇರೆ ಬೇರೆ (ಞಜಿoಞZಠ್ಚಿe) ಆಗದಂತೆ ಗಮನವಿಡಿ ಎಂದು ಸೂಚನೆ ನೀಡುವಷ್ಟು ಜಾಗೃತರಾಗಿದ್ದರು.
ಮಲ್ಟಿ-ಟಾಸ್ಕಿಂಗ್ ಕುರಿತು ಉಪನ್ಯಾಸ ನೀಡುವಾಗ ನಾನು ಎಂಬಿಎ ವಿದ್ಯಾರ್ಥಿಗಳೊಂದಿಗೆ ಈ ಅನುಭವವನ್ನು ಹಂಚಿಕೊಂಡಿ ದ್ದೀನಿ. ಅದನ್ನು ಪ್ರಮುಖ ಎಡಪಂಥೀಯ ಲೇಖಕರೊಬ್ಬರ ಹತ್ತಿರ ಹೇಳಿದಾಗ: ‘ಬಹುಷಃ ಚಹಾ ನೀಡಿದ ಕಾನ್ಸ್‌ಟೇಬಲ್‌ಗೆ ತಾಳೆಯಾಗದ ಕಪ್ ಮತ್ತು ಸಾಸರ್‌ನ ನಿಮಗೆ ಚಹಾ ನೀಡಲು ಮುಂಚೆಯೇ ಆದೇಶಿಸಿ, ನಿಮ್ಮ ಮುಂದೆ ಸ್ಕೋಪ್ ತೆಗೆದು ಕೊಂಡಿರುತ್ತಾರೆ. ಹೇಳಿಕೇಳಿ ನೀವು ಪತ್ರಕರ್ತರಲ್ವಾ!’ ಎಂದು ವ್ಯಾಖ್ಯಾನ ನೀಡಿ ನನ್ನನ್ನು ಸುಸ್ತಾಗಿಸಿದ್ದರು.
ಈ ಎಡಪಂಥೀಯರೇ ಹೀಗೆ ಅನಿಸುತ್ತಿದೆ. ಮಾನವಸಹಜರಾರಿಗೂ ಕಾಣದ್ದು ಅವರಿಗೆ ಕಾಣುತ್ತದೆ. ಯನಹೃನ್ಮನಗಳೆಲ್ಲವೂ ಸರಿಯಾಗಿರುವವರಿಗೆ ಕಾಣುವುದು ಅವರಿಗೆ ಕಾಣುವುದೇ ಇಲ್ಲ. ಸರ್ವೋಚ್ಚ ನ್ಯಾಯಾಲಯವೇ ನರೇಂದ್ರ ಮೋದಿ ಪುನೀತ ರೆಂದು ಘೋಷಿಸಿದ ನಂತರವೂ ಅವರ ಮೇಲೆ ಟೀಕೆ ಮುಂದುವರೆಯುತ್ತದೆ. ಸಮಾಜದ್ರೋಹಿ ಕೃತ್ಯಗಳಲ್ಲಿ ನಿರತಳಾದ ತೀಸ್ತಾ ಸೆಟಲ್ವಾಡ್ ಎಂಬಾಕೆಯನ್ನು ಸಕಾರಣಗಳಾಗಿ ಬಂಧಿಸಿದರೆ, ಇವರಿಗೆ ಉರಿ. ಅವರ ವರ್ತನೆಯಿಂದ ಬೇಸತ್ತು ಮನೆಯವರೇ ಹೊರದೂಡಿದ್ದಾರೇನೋ ಎಂಬಂತೆ ಟೌನ್ ಹಾಲ್ ಮುಂದೆ ವಕ್ಕರಿಸುತ್ತಾರೆ. ವೆಂಕ, ಸೀನ, ನಾಣಿ ಎಂಬ ಮೂರೇ ಜನರಾದರೂ
ಅಡ್ಡಿಯಿಲ್ಲ.
ಸಾಗರಿಕಾ ಘೋಷ್ ಎಂಬ ಹಿರಿಯ ಪತ್ರಕರ್ತೆಗಂತೂ ತನ್ನ ಸ್ವಾರ್ಥಕ್ಕಷ್ಟೆ ದೇಶವನ್ನು ತುರ್ತು ಪರಿಸ್ಥಿತಿಯಂಥ ಕರಾಳ ಕೂಪಕ್ಕೆ ತಳ್ಳಿ ವಿರೋಧಿಗಳನ್ನು ಸಾರಾಸಗಟಾಗಿ ಜೈಲಿಗೆ ತಳ್ಳಿದ ಇಂದಿರಾ ಗಾಂಧಿ ನೆನಪಾಗುತ್ತಾರೆ. ಎಮರ್ಜೆನ್ಸಿ ಹೇರಿದ ದಿನದಂದೇ ಮೋದಿ ತೀಸ್ತಾ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಶ್ರೀಕುಮಾರರ ಸ್ವಾತಂತ್ರ್ಯಹರಣ ಮಾಡಿದ್ದಾರೆಂದು ದೆಹಲಿಯಲ್ಲಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ. ಆಕೆಯ ಊಳಿಡುವಿಕೆಗೆ ಕಾರಣವೇನೆಂದು ನನಗೆ ತಿಳಿಯದಾಗಿದೆ.
ನನ್ನ ಗ್ರಹಿಕೆಯ ಸಾಮರ್ಥ್ಯ ನನಗೆ ಕೈಕೊಡುತ್ತಿದೆ. ನರಿಯ ಕೂಗು ಗಿರಿಗೆ ಮುಟ್ಟಿ, ಮೇಧಾ ಪಾಟ್ಕರ್‌ಗೆ ಸಿಕ್ಕಂತೆ ಈಕೆಗೂ
ಮ್ಯಾಗ್ಸೇಸೆ ಪ್ರಶಸ್ತಿ ಸಿಗಬಹುದೇ? ಅಥವಾ, ಅಂದು ಸದಾನಂದ್ ವಿಶ್ವನಾಥ್, ಪತ್ರಕರ್ತನಿಗೆ ಸವಾಲೆಸೆದಂತೆ ಮೋದಿಯೂ ಈಕೆಗೆ ಪ್ರಧಾನಿಯ ಕುರ್ಚಿ ಬಿಟ್ಟುಕೊಟ್ಟು ದೇಶವನ್ನು ನಿಭಾಯಿಸು ಎಂದು ಕರೆದಾರೆಂಬ ನಿರೀಕ್ಷೆಯೇ?