ಅನುಭವಾಮೃತ
ಜಯಪ್ರಕಾಶ್ ಪುತ್ತೂರು
ಪತ್ರಿಕಾ ಸಂಬಂಧಗಳು/ಪಿಆರ್‌ಒ ಕಾರ್ಯಭಾರಗಳನ್ನು ನೋಡಿಕೊಳ್ಳಲಿಕ್ಕಾಗಿ ಬಹುತೇಕ ಸಂಸ್ಥೆಗಳಲ್ಲಿ ವಾರ್ತಾಧಿಕಾರಿ ಇರುವುದು ವಾಡಿಕೆ. ಆದರೆ ರಕ್ಷಣಾ ಇಲಾಖೆಯಲ್ಲಿನ ವಾರ್ತಾಧಿಕಾರಿಗಳು, ಇನ್ನಿತರ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾಣಬರುವುದಕ್ಕಿಂತ ಭಿನ್ನವಾಗಿ ಕಾರ್ಯಾಚರಿಸ ಬೇಕಾಗುತ್ತದೆ.
ಏಕೆಂದರೆ, ಇಸ್ರೋ, ಡಿಆರ್‌ಡಿಒ, ಎನ್‌ಎಎಲ್, ಬಾಬಾ ಅಣುಶಕ್ತಿ ಕೇಂದ್ರ ಹೀಗೆ ಸಂಶೋಧನಾ ಕಾರ್ಯದಲ್ಲಿ ತೊಡಗಿರುವ ದೇಶದ ಹಲವು ಪ್ರಮುಖ ಸಂಸ್ಥೆಗಳಲ್ಲಿ ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಎಚ್ಚರ ವಹಿಸ ಬೇಕಾಗುತ್ತದೆ. ಹೀಗಾಗಿ ಏನನ್ನು ಹೇಳಬಹುದು/ಹೇಳಬಾರದು ಎಂಬುದರ ನಡುವೆ ಅವರು ಒಂದು ಲಕ್ಷ್ಮಣರೇಖೆ ಹಾಕಿಕೊಂಡಿರುತ್ತಾರೆ. ಪೂರ್ವಾನುಮತಿ ಪಡೆದು ಹೊರಹಾಕಬಹುದಾದ ಮಾಹಿತಿಯನ್ನೂ ಪರಿಶೀಲನೆಗೆ ಒಳಪಡಿಸಿದ ಬಳಿಕವೇ ಪ್ರಚುರಪಡಿಸಲಾಗುತ್ತದೆ. ಅಲ್ಲದೆ, ಕ್ಲಿಷ್ಟಕರವಾದ ಮಾಹಿತಿ/ತಾಂತ್ರಿಕ ವಿಚಾರಗಳಲ್ಲಿ ಇರಬೇಕಾದಂಥ ಕನಿಷ್ಠ ಜ್ಞಾನ, ಅಧ್ಯಯನಶೀಲತೆ ಮತ್ತು ಮತುವರ್ಜಿಯಿಟ್ಟು ಸರಳವಾಗಿ ತಿಳಿಯ
ಪಡಿಸುವ ಕೌಶಲ ಮಾಧ್ಯಮ ಸ್ನೇಹಿತರಲ್ಲಿ ಇರಬೇಕಾಗುತ್ತದೆ. ಆದರೆ ಇಂಥವರನ್ನು ನಿಯುಕ್ತಿಗೊಳಿಸುವಲ್ಲಿ ಮಾಧ್ಯಮ ಸಂಸ್ಥೆಗಳು ಕೆಲವೊಮ್ಮೆ ಆಸಕ್ತಿ ವಹಿಸುವುದಿಲ್ಲ ಎಂಬುದು ವಿಪರ್ಯಾಸ.
‘ಬ್ರೇಕಿಂಗ್ ನ್ಯೂಸ್’/‘ಎಕ್ಸ್‌ಕ್ಲೂಸಿವ್ ನ್ಯೂಸ್’ ನೀಡುವ ಹಪಹಪಿಯಲ್ಲಿ ಪೈಪೋಟಿಗೆ ಬೀಳುವ ಹೆಚ್ಚಿನವರಲ್ಲಿ ಮೇಲೆ ಉಲ್ಲೇಖಿಸಿದ ವೈಶಿಷ್ಟ್ಯ, ಪರಿಶ್ರಮ ಇರುವುದಿಲ್ಲ. ಜತೆಗೆ, ರಾಷ್ಟ್ರೀಯ ಭದ್ರತೆ/ಗೌಪ್ಯತೆಯ ಸೂಕ್ಷ್ಮಗಳನ್ನು ಒಳಗೊಂಡ ಸಂಗತಿಗಳನ್ನು ಕಳಕಳಿಯಿಂದಷ್ಟೇ ಅಲ್ಲದೆ ದೇಶಪ್ರೇಮದ ಲೇಪದೊಂದಿಗೆ ವರದಿ ಮಾಡುವ ಎಚ್ಚರ ಕೆಲವರಲ್ಲಿ ಇಲ್ಲದ ಕಾರಣ ಆಗಾಗ ಗೊಂದಲಗಳು ಎದುರಾಗುತ್ತವೆ. ಹಲವು ವರ್ಷ ತಪಸ್ಸಿನಂತೆ ನಡೆಸುವ ಸಂಶೋಧನೆ/ಯೋಜನಾ ಕಾರ್ಯಗಳ ಬಗ್ಗೆ ಅನುಚಿತವಾಗಿ ಬರೆದು, ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ವಿಜ್ಞಾನಿಗಳ, ತಂತ್ರಜ್ಞರ ಉತ್ಸಾಹ ಹಾಗೂ ಮನಃಶಾಂತಿಯನ್ನು ಕದಡುವ ಯತ್ನಗಳು ಸಾಕಷ್ಟು ಬಾರಿ ನಡೆದಿವೆ. ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿನವರಿಗೆ ಉತ್ಪಾದನೆ ಮತ್ತು ಸಂಶೋಧನೆಗಳ ನಡುವಿನ ಅಂತರ ತಿಳಿಯದಿರುವುದೂ ಇದಕ್ಕೊಂದು ಕಾರಣ.
ದೇಶದ ಪ್ರಥಮ ಲಘು ಯುದ್ಧವಿಮಾನ (ಎಲ್‌ಸಿಎ) ‘ತೇಜಸ್’ನ ಸಂಶೋಧನೆ, ರಚನೆ ಮತ್ತು ಅಭಿವೃದ್ಧಿಯನ್ನು ದೇಶೀಯವಾಗಿ ನಡೆಸುವ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮೇಲೆ ಉಲ್ಲೇಖಿಸಿರುವ ಎಲ್ಲಾ ಕಷ್ಟಗಳನ್ನು ತನ್ನ ಹುಟ್ಟಿ ನಿಂದಲೇ ಎದುರಿಸುತ್ತಾ ಬಂದಿದೆ. ಬಹುಕೋಟಿ ಮೌಲ್ಯದ ಈ ಯುದ್ಧವಿಮಾನ ಯೋಜನೆಯ ಕಾರ್ಯಚಟುವಟಿಕೆಗಳಿಗೆ ಡಾ. ಎಪಿಜೆ ಅಬ್ದುಲ್ ಕಲಾಂರ ನಾಯಕ್ವ ದಕ್ಕಿತ್ತು. ಇಂಥ ಸಂಶೋಧನೆ
ಮತ್ತು ಅಭಿವೃದ್ಧಿ ಕಾರ್ಯಗಳಿಗೆ, ವೈಮಾನಿಕ ಕ್ಷೇತ್ರದಲ್ಲಿ ಅಗ್ರಗಣ್ಯತೆ ಸಾಧಿಸಿರುವ ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್ ಮತ್ತು ಚೀನಾದಂಥ ರಾಷ್ಟ್ರಗಳು ೨೦ ವರ್ಷಕ್ಕೂ ಹೆಚ್ಚು ಅವಧಿಯನ್ನು ತೆಗೆದುಕೊಂಡಿವೆ. ಹಲವಾರು ದೊಡ್ಡ ಅಪಘಾತ ಸಂಭವಿಸಿದರೂ ಅವುಗಳ ಬಗ್ಗೆ ಹೊರಗಿನ ಜಗತ್ತಿಗೆ ಮಾಹಿತಿ ಲಭಿಸಿಲ್ಲ.
ಈ ದೇಶಗಳು ಬಹು ಹಿಂದೆಯೇ ಇಂಥ ಯೋಜನೆಗಳನ್ನು ಪ್ರಾರಂಭಿಸಿದ ಕಾರಣ, ಅಲ್ಲೆಲ್ಲ ಈಗಾಗಲೇ ಬಹುಮುಖ್ಯವಾದ ಮೂಲಸೌಲಭ್ಯಗಳು ಚೆನ್ನಾಗಿ ಅಭಿವೃದ್ಧಿಯಾಗಿವೆ. ಈ ರಾಷ್ಟ್ರಗಳ ಪೈಕಿ ಹೆಚ್ಚಿನವು ಹಲವು ವರ್ಷಗಳ ಅನುಭವ ಹೊಂದಿವೆ. ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಅಲ್ಲಿನ ವಿಪಕ್ಷಗಳು, ಮಾಧ್ಯಮಗಳು ಜತೆಗೆ ನಿಂತು ದೇಶದ ಹಿತಾಸಕ್ತಿಗೆ ಪ್ರೋತ್ಸಾಹ ನೀಡಿವೆ. ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಆಗಾಗ ಬದಲಾಗುವ ಸರಕಾರ/
ರಾಜಕೀಯ ಪಕ್ಷಗಳು, ಬೆಲೆಯೇರಿಕೆ ಹೀಗೆ ಕಾರಣಗಳು ಒಂದೇ ಎರಡೇ? ಹೀಗಾಗಿ ಬೇರೆ ದೇಶಗಳೊಂದಿಗೆ ಹೋಲಿಸಿ ದಾಗ, ನಮ್ಮ ಸಂಸ್ಥೆಗಳಲ್ಲಿನ ಈ ಸಂಶೋಧನಾ ಮಾರ್ಗ ಶ್ರಮದಾಯಕ ಎನ್ನಬಹುದು.
ಮಾಧ್ಯಮ ಕ್ಷೇತ್ರಗಳಲ್ಲಿರುವವರಿಗೆ ದೇಶಪ್ರೇಮ ಹಾಗೂ ಸ್ವದೇಶಿ ನಿರ್ಮಾಣ ಯೋಜನೆಗಳಲ್ಲಿ ಅಭಿಮಾನ ಇರಲೇ ಬೇಕು. ಒಂದು ಯೋಜನೆಯ ಹಿಂದಿರುವ ತಂತ್ರಜ್ಞಾನವನ್ನು ಅವರು ಸ್ವಲ್ಪವಾದರೂ ಅರಿತಿರಬೇಕು. ಆದರೆ ನಮ್ಮಲ್ಲಿ ಯೋಜನೆಯೊಂದರ ಅನುಷ್ಠಾನದ ವೇಳೆ ದುರ್ಘಟನೆ
ನಡೆದುಬಿಟ್ಟರೆ ಸಂಶೋಧನೆಯ ಬಗ್ಗೆ ಎಲ್ಲರೂ ಟೀಕೆಗಳ ಸುರಿಮಳೆ ಸುರಿಸುವವರೇ! ವಾಸ್ತವವನ್ನು ಅರಿಯದೆ ಊಹಾಪೋಹ ಸೃಷ್ಟಿಸುವುದು ಕೆಲವರ ಹವ್ಯಾಸವಾಗಿದೆ. ಇಂಥ ಪ್ರಸಂಗವು ೯೦ರ ದಶಕದ ವೇಳೆ ನಡೆದಿತ್ತು. ಅದು, ಹಲವಾರು ವರ್ಷಗಳಿಂದ ಸಂಶೋಧನೆ ನಡೆಸುತ್ತಾ ಕೊನೆಯ ಹಂತಕ್ಕೆ ಬಂದಿದ್ದ ವೈಮಾನಿಕ ರಾಡಾರ್ ವ್ಯವಸ್ಥೆ (ಎ. ಡಬ್ಲ್ಯು.ಎ.ಸಿ.ಎಸ್.) ಎಂಬ ಡಿಆರ್‌ಡಿಒ ಯೋಜನೆಗೆ ಸಂಬಂಧಿಸಿದ್ದಾಗಿತ್ತು.
ಯುದ್ಧವಿಮಾನದ ಬೆನ್ನ ಮೇಲೆ, ವಾಯುಕ್ಷೇತ್ರದಲ್ಲಿನ ಯಾವುದೇ ವಿಮಾನ ಅಥವಾ ಇನ್ನಿತರ ಆಕಾಶಕಾಯಗಳನ್ನು ಬಹಳ ದೂರದಿಂದಲೇ ಗುರುತಿ ಸುವ ರೆಡಾರ್ ವ್ಯವಸ್ಥೆಯ ವಿಮಾನ ಪರೀಕ್ಷೆ ನಡೆಯುತ್ತಿತ್ತು. ಆದರೆ ದುರದೃಷ್ಟವಶಾತ್ ಆ ವಿಮಾನವು ನಿಲ್ದಾಣ ಸೇರುವ ಕ್ಷಣಗಣನೆ ನಡೆಯು ತ್ತಿದ್ದಂತೆಯೇ, ಅಂದಿನ ಯಶಸ್ಸಿನ ಸಾಧನೆಯನ್ನು ಪರೀಕ್ಷಾ ಕೇಂದ್ರದಲ್ಲಿನ ವಿಜ್ಞಾನಿಗಳು ಸಂಭ್ರಮಿಸ ತೊಡಗಿದರು. ಆದರೆ, ತಾಂತ್ರಿಕ ತೊಂದರೆಗೊಳ ಗಾದ ವಿಮಾನ ೧೦,೦೦೦ ಅಡಿ ಎತ್ತರದಿಂದ ಉರುಳಿಬಿತ್ತು.
ವಾಯುದಳದ ಸಿಬ್ಬಂದಿ ಹಾಗೂ ವಿಜ್ಞಾನಿಗಳನ್ನು ಒಳ ಗೊಂಡಿದ್ದ ಆ ತಂಡದ ಎಲ್ಲರೂ ದುರ್ಮರಣಕ್ಕೆ ಒಳಗಾದರು. ಈ ವೇಳೆ ಅನುಕಂಪದ ಅಲೆಗಿಂತಲೂ ಹೆಚ್ಚಾಗಿ, ಈ ಯೋಜನೆಯ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿಯಿತು. ದುರಂತದಲ್ಲಿ ಸತ್ತವರ ಕುಟುಂಬದ ಸದಸ್ಯರನ್ನು ಸಂತೈಸಲು ಡಾ. ಕಲಾಂ ಸ್ವತಃ ದೆಹಲಿಯಿಂದ ಧಾವಿಸಿ ಬಂದಿದ್ದರು. ಆ ಬಳಿಕ ಈ ಬೃಹತ್ ಯೋಜನೆಯು ಸ್ತಬ್ಧವಾಗಿ ಹತ್ತಾರು ವರ್ಷಗಳ ಕಾಲ ನನೆಗುದಿಗೆ ಬಿತ್ತು. ಈ ಯೋಜನೆ ಪುನಶ್ಚೇತನಗೊಳ್ಳಲು ಸಂಬಂಧಪಟ್ಟವರು ಬಹಳಷ್ಟು ಪ್ರಯಾಸಪಡಬೇಕಾಯಿತು. ಆದರೂ ಹಠ ಬಿಡದ ನಮ್ಮ ವಿಜ್ಞಾನಿಗಳು ಸಾಕಷ್ಟು ಪರಿಶ್ರಮ ವಹಿಸಿ, ಕೆಲವು ವರ್ಷಗಳ ಹಿಂದೆ ಎದುರಿಸಿದ್ದ ಎಲ್ಲಾ ವಿಘ್ನಗಳನ್ನು ಹಿಂದೆ ಹಾಕಿ, ಈ ಸ್ವದೇಶಿನಿರ್ಮಿತ ವಿಮಾನವನ್ನು ನಮ್ಮ ವಾಯುದಳದ
ವೈಮಾನಿಕ ಕಾರ್ಯಚರಣೆಗೆ ಸಮರ್ಪಿಸಿದರು. ಈ ಲಘು ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟಗಳಲ್ಲಿ ಯಾವುದೇ ರೀತಿಯ ದುರ್ಘಟನೆ, ಅಪಘಾತ ನಡೆಯದಂತೆ ಸದಾ ಕಟ್ಟೆಚ್ಚರವನ್ನು ವಹಿಸಲಾಗುತ್ತದೆ.
ಅದೇ ಉದ್ದೇಶದಿಂದ ಆಮದು ಮಾಡಿಕೊಳ್ಳಲಾದ ಒಂದು ಏರೋ ಎಂಜಿನ್‌ಗೆ, ದೇಶೀಯವಾಗಿ ಸಿದ್ಧಪಡಿಸಲಾದ ವಿನ್ಯಾಸ ಹಾಗೂ ಜೋಡಣೆ ಮಾಡಿದ ಎಲ್ಲಾ ಬಾಹ್ಯಕವಚ ಮತ್ತು ವ್ಯವಸ್ಥೆಗಳು ಖಚಿತವಾಗಿ, ಕ್ಷೇಮಕರವಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ನಿಧಾನವೇ ಪ್ರಧಾನ ಎಂಬಂತೆ, ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ಹಂತದಲ್ಲೂ ಯಾವುದೇ ಅವಸರ ಮಾಡದೆ ಸಾವಕಾಶವಾಗಿ ಮುಂದೆ ಸಾಗುತ್ತಿದ್ದರು. ಅಂದರೆ, ತಾಂತ್ರಿಕ ಪರವಾನಗಿ ಪಡೆದೇ ಬಹು ಎಚ್ಚರದ ಹೆಜ್ಜೆಗಳನ್ನು ಇರಿಸುವ ಸಂಪ್ರದಾಯವನ್ನು ಪಾಲಿಸಲಾಗುತ್ತಿತ್ತು. ಕಾರಣ ಸ್ವಲ್ಪವೇ ದುಡುಕಿದರೂ ಅಪಘಾತದ ಸಾಧ್ಯತೆ ಇತ್ತು, ಹೀಗಾಗಿ
ಅಲ್ಲೊಂದು ಆತಂಕವಿತ್ತು. ಅಲ್ಲದೆ ಈ ಕಸರತ್ತು ಈ ಬೃಹತ್ ಯೋಜನೆಯ ಅಳಿವು ಉಳಿವಿನ ಪ್ರಶ್ನೆಯೂ ಆಗಿತ್ತು.
೧೯೯೬ರಿಂದ ೨೦೧೨ರ ಕೊನೆಯವರೆಗೆ ಎಲ್‌ಸಿಎ ಕಾರ್ಯಕ್ರಮದ ಮಾಧ್ಯಮ ಪ್ರಚಾರಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ತುಂಬಾ ಎಚ್ಚರ ವಹಿಸಲಾಗಿತ್ತು. ಅದರಲ್ಲಿ ಪಾಲ್ಗೊಳ್ಳುವ ಅವಕಾಶ ನನಗೂ ಲಭಿಸಿತ್ತು. ಇದು ಒಂದು ರೀತಿಯಲ್ಲಿ ಬಹು ಎಚ್ಚರಿಕೆಯಿಂದ ಇರಿಸಿದ ಹೆಜ್ಜೆಯೇ ಸರಿ; ಕಾರಣ ಅದರ ಹಿಂದೆ ಸುದೀರ್ಘ ಕಾಲದ ತಪಸ್ಸು ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಹೊರಗಿನ ಮಾಧ್ಯಮ ಕ್ಷೇತ್ರದವರಿಗೆ ಈ ಯೋಜನೆಯ ತಂತ್ರಜ್ಞಾನವನ್ನು ಸರಳವಾಗಿ ತಿಳಿಯಪಡಿಸುವುದು ಹಾಗೂ ಇಂಥ ಬೃಹತ್ ಯೋಜನೆಯಲ್ಲಿ ಎದುರಾ ಗುವ ಎಲ್ಲಾ ಕಷ್ಟಗಳನ್ನು ಮನವರಿಕೆ ಮಾಡಿಕೊಡುವುದು ಅಲ್ಲಿ ತೀರಾ ಅವಶ್ಯಕವಾಗಿತ್ತು.
ಕಾಲಕಾಲಕ್ಕೆ ನಮ್ಮ ವಿಜ್ಞಾನಿಗಳೊಂದಿಗೆ ಮಾತುಕತೆ, ಸಾಧ್ಯವಿದ್ದೆಡೆ ಪತ್ರಿಕಾ ತಂಡದವರಿಗೆ ಪ್ರತ್ಯಕ್ಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದು, ಎಲ್ಲರನ್ನೂ
ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ರಾಷ್ಟ್ರೀಯ ಯೋಜನೆಗಳಲ್ಲಿ ಅಭಿಮಾನ ಇರುವವರನ್ನು ಆಯ್ಕೆಮಾಡುವುದು, ನಂತರ ಅವರಿಂದ ಲೇಖನಗಳನ್ನು ಬರೆಸಿ ಸಾರ್ವಜನಿಕರಿಗೆ ಈ ತಂತ್ರಜ್ಞಾನದ ಒಳಹರಿವಿನ ಬಗ್ಗೆ ಮಾಹಿತಿ ನೀಡುವುದು ಈ ಕಾರ್ಯಭಾರಗಳೆಲ್ಲ ಅಲ್ಲಿ ಅಡಕವಾಗಿರುತ್ತವೆ. ಏಕೆಂದರೆ
ಹಲವು ವರ್ಷಗಳನ್ನು ತೆಗೆದುಕೊಳ್ಳುವ, ತಂತ್ರಜ್ಞಾನ ಅಭಿವೃದ್ಧಿಯಂಥ ಕಷ್ಟಕರವಾದ ಯಾತ್ರೆಯಲ್ಲಿ ಏನೆಲ್ಲಾ ತೊಂದರೆಗಳು ಇರುತ್ತವೆ ಮತ್ತು ಸವಾಲುಗಳು ಎದುರಾಗುತ್ತವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ.
ಇಂಥ ಅಪೂರ್ವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನಾನು ಹಲವಾರು ಪತ್ರಕರ್ತ ಮಿತ್ರರಿಗೆ ವರದಿಗಾರಿಕೆ ಕಾರ್ಯ ಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಟ್ಟಿರುವುದನ್ನು ಜ್ಞಾಪಿಸಿ ಕೊಂಡಾಗ ಮನಸ್ಸಿಗೆ ಸಮಾಧಾನವಾಗುತ್ತದೆ. ಈ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಂಶೋಧನೆಯ ವರದಿ ಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಶೀಘ್ರ ಪರಿಣಾಮ ಕಂಡುಬರಲು ಅವೇನೂ ಉತ್ಪಾದನಾ ಘಟಕದ ವಾರ್ತೆಗಳೂ ಅಲ್ಲ. ಇಲ್ಲಿ ಸೋಲು-ಗೆಲುವು ಇವೆರಡೂ ಸಮಾನ. ಸೋಲು ಸಂಭವಿಸದೆಯೇ ಗೆಲುವು ಲಭಿಸದು. ಇದು ಪ್ರಪಂಚದಾದ್ಯಂತದ ಎಲ್ಲಾ ಸಂಶೋಧನಾ ಕ್ಷೇತ್ರಗಳಲ್ಲಿ ಕಾಣಬರುವ ವಿದ್ಯಮಾನವೇ. ಹೀಗಾಗಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಕೆಲವೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ, ಅದಕ್ಕೆ ತಕ್ಕಂತೆಯೇ ವರದಿ ಮಾಡಬೇಕಿರು ವುದು ಅಪೇಕ್ಷಣೀಯ ಮತ್ತು ಆರೋಗ್ಯಕರ.
ಪ್ರಥಮವಾಗಿ, ಈ ಕುರಿತಾದ ಸಾಮಾನ್ಯ ಜ್ಞಾನವು ಓದುಗರಿಗೆ ತಿಳಿದಿಲ್ಲವಾದರೆ ಮಾಧ್ಯಮಗಳು ಅದನ್ನು ತಿಳಿಯಪಡಿಸುತ್ತಾ, ಸಂಶೋಧನಾ ಕ್ಷೇತ್ರದ ಸಾಧನಾ ಮಾರ್ಗದಲ್ಲಿರುವ ಕಷ್ಟ-ಸುಖಗಳನ್ನು ಹಂಚಿ ಕೊಂಡಲ್ಲಿ, ಅದು ಸಂಸ್ಥೆಯೊಂದರ ಪ್ರತಿಷ್ಠೆಯ ವರ್ಧನೆಗೆ ಸಹಕಾರಿಯಾಗುತ್ತದೆ. ಒಂದು ವೇಳೆ, ತಪ್ಪಾಗಿ ಅಥವಾ ಹಾನಿಕಾರಕವಾಗಿ ವರದಿ ಬಂದಿರುವುದರ ಬಗ್ಗೆ ಎಚ್ಚರ ವಹಿಸಿದರೆ, ಅದನ್ನು ಸೂಕ್ತ ಸಮಯದಲ್ಲೇ ಸರಿಪಡಿಸಲು ಸಾಧ್ಯವಾಗುತ್ತದೆ. ಆಗ ಓದುಗರಿಗೋ ವೀಕ್ಷಕರಿಗೋ ಸತ್ಯದರ್ಶನ ಮಾಡಿಸುವ ಗುರುತರ ಕಾರ್ಯವನ್ನು ಸಂಸ್ಥೆಗಳು ತಮ್ಮ ಪಿಆರ್‌ಒ ಅಥವಾ ಸಂಬಂಧಿತ ಅಧಿಕಾರಿ ಗಳಿಂದ ಶಿಸ್ತು ಬದ್ಧವಾಗಿ ನಿರ್ವಹಿಸಿಕೊಂಡು ಹೋಗಲು ಅನುಕೂಲವಾಗುತ್ತದೆ.
ಈ ಕಾರ್ಯ ನಿರ್ವಹಣೆಯಲ್ಲಿ ಮಾಧ್ಯಮಗಳ ವಿವಿಧ ಮುಖ್ಯಸ್ಥರನ್ನು ಹಾಗೂ ವರದಿಗಾರರನ್ನು ಪರಿಚಯ ಮಾಡಿಕೊಂಡು, ಅವರೊಡನೆ ಸದಾ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರೆ ಯಾವುದೇ ಗೊಂದಲಗಳು ಇರುವುದಿಲ್ಲ. ಸಂಸ್ಥೆಗಳು ತಮ್ಮ ಪ್ರತಿಷ್ಠೆಯನ್ನು ಕಾಪಾಡಲು ಮಾಧ್ಯಮಗಳ
ಜತೆಗಿನ ಬಾಂಧವ್ಯದ ನಿರ್ವಹಣೆಗೆ ಯಾವತ್ತೂ ಎಚ್ಚರ ವಹಿಸಿದರೆ ಅದು ಅರ್ಥಪೂರ್ಣ ನಡೆಯಾಗುತ್ತದೆ ಎಂಬುದು ನನ್ನ ಅಭಿಮತ.
(ಲೇಖಕರು ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಡಿಆರ್‌ಡಿಒ)