Sunday, 15th December 2024

ಟೆಲಿಗ್ರಾಮ್ ಮತ್ತು ವಾಟ್ಸಾಪ್: ನಡುವೆ ಎನಿತು ಅಂತರ ?

ಇದೇ ಅಂತರಂಗ ಸುದ್ದಿ

vbhat@me.com

ಇತ್ತೀಚೆಗೆ ನಾನು ಟಾಮ್ ಸ್ಟ್ಯಾಂಡೇಜ್ ಎಂಬಾಟ ಬರೆದ The Victorian Internet ಎಂಬ ಕೃತಿಯನ್ನು ಓದುತ್ತಿದ್ದೆ. ಇದನ್ನು ಆತ ಬರೆದಿದ್ದು 1998 ರಲ್ಲಿ. ಮಾಹಿತಿ ತಂತ್ರಜ್ಞಾನದ ಸೋಟದ ಈ ಕಾಲದಲ್ಲಿ ಈ ಕೃತಿ ಮಹತ್ವದ್ದಾಗಿದೆ.

ಸುಮಾರು 178 ವರ್ಷಗಳ ಹಿಂದೆ, ಟೆಲಿಗ್ರಾಮ್‌ನ್ನು ಕಂಡು ಹಿಡಿದಾಗ, ಸಂದೇಶ ಕಳಿಸುವುದು ತುಂಬಾ ದುಬಾರಿಯಾಗಿತ್ತು. ಒಂದು ಪದಕ್ಕೆ ಇಂತಿಷ್ಟು ಅಂತ ಹಣ ನೀಡಬೇಕಾಗುತ್ತಿತ್ತು. ಹೀಗಾಗಿ ಜನ ನಾಲ್ಕೈದು ಪದಗಳಲ್ಲಿ ಇಡೀ ಸಂದೇಶವನ್ನು ಕಳಿಸುತ್ತಿದ್ದರು. ಟೆಲಿಗ್ರಾಮ್ ಬಂತು ಅಂತ ಹೇಳಿದರೆ ಏನೋ ಅನಾಹುತ ಆಯಿತು, ಯಾವ ಅಹಿತಕರ ಘಟನೆ ಕಾದಿದೆಯೋ ಎಂದು ಜನ ಅಂದುಕೊಳ್ಳುತ್ತಿದ್ದರು. ಬೇರೇನೂ ಬೇಡ, ’’Start immedietely’ಎಂಬ ಎರಡು ಪದಗಳ ಸಂದೇಶವುಳ್ಳ ಟೆಲಿಗ್ರಾಮ್ ಬಂದರೆ ಯಾರೋ ನಿಧನ ರಾಗಿದ್ದಾರೆ, ತಕ್ಷಣ ಹೊರಟು ಬನ್ನಿ ಎಂದು ಅರ್ಥೈಸಿಕೊಳ್ಳುತ್ತಿದ್ದರು.

ಹದಿನೆಂಟನೇ ಶತಮಾನದ ದ್ವಿತೀಯಾರ್ಧದಲ್ಲಿ ಟೆಲಿಗ್ರಾಮ್ ಬಹಳ ಪ್ರಸಿದ್ಧವಾಯಿತು. ಆ ದಿನಗಳಲ್ಲಿ ಅಮೆರಿಕದಲ್ಲಿ ಸುಮಾರು ಹನ್ನೆರಡು ಸಾವಿರ ಮೈಲು ಉದ್ದದ ಟೆಲಿಗ್ರಾಮ್ ತಂತಿಗಳನ್ನು ಎಳೆಯಲಾಗಿತ್ತಂತೆ. ‘ದಿ ವಿಕ್ಟೊರಿಯನ್ ಇಂಟರ್ನೆಟ್ ಪುಸ್ತಕದಲ್ಲಿ ಒಂದೆಡೆ, ಟೆಲಿಗ್ರಾಮ್‌ನಿಂದ ಏನೆ ಬದಲಾವಣೆಗಳಾದವು ಎಂಬುದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಲಾಗಿದೆ –  It revolutionized business practice, gave rise to new forms of crime….romances
blossomed over the wires and secret codes were devised by some users and cracked by
others. (ಟೆಲಿಗ್ರಾಮ್ ನಿಂದಾಗಿ ವ್ಯಾಪಾರ-ವ್ಯವಹಾರ ವೃದ್ಧಿಸಿತು. ಇದರಿಂದಾಗಿ ಹೊಸ ರೀತಿ ಅಪರಾಧಗಳು ಹೆಚ್ಚಾದವು. ಪ್ರೇಮ ಪ್ರಕರಣಗಳು ಜಾಸ್ತಿಯಾದವು. ಕೆಲವರು ರಹಸ್ಯ ಕೋಡ್ ಬಳಸಲಾರಂಭಿಸಿದರು. ಅದನ್ನು ಬೇಧಿಸುವವರ ಸಂಖ್ಯೆಯೂ ಹೆಚ್ಚಿತು.)

ಅಮೆರಿಕದಲ್ಲಿ ಆ ದಿನಗಳಲ್ಲಿ ಪತ್ರ ಬರೆದರೆ, ಅದು ತಲುಪಲು ಕನಿಷ್ಠ ಹತ್ತು ದಿನಗಳು ಬೇಕಾಗುತ್ತಿದ್ದವು. ಅತಿ ವೇಗವಾಗಿ ಕುದುರೆ ಮೇಲೆ ಪತ್ರಗಳನ್ನಿಟ್ಟು ಸಾಗಿಸುತ್ತಿದ್ದರು. ಯಾವಾಗ ಟೆಲಿಗ್ರಾಮ್ ಬಂದಿತೋ, ಅದು ಸಂದೇಶವನ್ನು ತತ್ ಕ್ಷಣವೇ ರವಾನಿಸುವಂತಾದಾಗ, ಜನ ಅಚ್ಚರಿಪಟ್ಟರು. ಅದೇ ಕೃತಿಯಲ್ಲಿ ಲೇಖಕ, ‘ಟೆಲಿಗ್ರಾಮ್ ಸೇವೆ ಜನಪ್ರಿಯವಾದಾಗ ನಾವು ಜೀವಿಸುವ ಜಗತ್ತು ಇನ್ನು ಮುಂದೆ ಹೀಗಿರುವುದಿಲ್ಲ ಎಂದು ಜನ ಮಾತಾಡಿಕೊಳ್ಳುವಂತಾಯಿತು.

ಟೆಲಿಗ್ರಾಮ್ ನಮ್ಮ ಬದುಕಿನ ಮೇಲೆ ಅಸಾಧಾರಣ ಪರಿಣಾಮವನ್ನುಂಟು ಮಾಡುತ್ತದೆ ಎಂದು ಜನ ಚರ್ಚಿಸುತ್ತಿದ್ದರು. ಅವರೇನಾದರೂ ಇಮೇಲ್, ಮೊಬೈಲ್, ಎಸ್ಸೆಮ್ಮೆಸ್ ನೋಡಿದ್ದರೆ ಏನು ಹೇಳುತ್ತಿದ್ದರೋ?’ ಎಂದು ಬರೆದಿದ್ದಾನೆ.

ಟೆಲಿಗ್ರಾಮ್ ಜನಪ್ರಿಯವಾದಾಗ ಜನರ ಭಾಷೆಯೂ ಬದಲಾಯಿತು. ‘ನಿನ್ನ ಉದ್ದನೆಯ ಕತೆಯನ್ನು ಯಾರು ಕೇಳುತ್ತಾರೆ? ಟೆಲಿಗ್ರಾಮ್ ಭಾಷೆಯಲ್ಲಿ ಬರೆಯಿರಿ’ ಎಂದು ಜನ ಹೇಳುತ್ತಿದ್ದರು. ಒಮ್ಮೆ ಸೈನಿಕನೊಬ್ಬ, ತನ್ನ ಮೇಲಾಧಿಕಾರಿಗೆ Your dear wife is convalescent. ಎಂದು ಟೆಲಿಗ್ರಾಮ್ ಕಳಿಸಿದ್ದ. ಅದಕ್ಕಾಗಿ ಎರಡು ಕಾರಣಗಳಿಗೆ ಸೈನಿಕನಿಗೆ ದಂಡ ವಿಧಿಸ ಲಾಗಿತ್ತು.

ಮೊದಲನೆಯ ಕಾರಣ, ಡಿಯರ್ ಎಂಬ ಪದವನ್ನು ಬಳಸಿದ್ದೇಕೆ ಮತ್ತು ಎರಡನೆಯದು, convalescent ಎಂಬ ಪರಿಚಿತ ವಲ್ಲದ, ತಕ್ಷಣ ಅರ್ಥವಾಗದ (convalescent ಅಂದ್ರೆ ಗಂಭೀರ ಕಾಯಿಲೆ ಬಳಿಕ ಗುಣಮುಖವಾಗುವುದು, ಚೇತರಿಸಿ ಕೊಳ್ಳುವುದು ಎಂದರ್ಥ) ಕಠಿಣ ಪದವನ್ನು ಬಳಸಿದ್ದೇಕೆ? ಇದರ ಬದಲು, Your wife recovering ಅಥವಾ Your Wife Recovered ಎಂದು ಬರೆಯಬಹುದಾಗಿತ್ತಲ್ಲ ಎಂದು ಆ ಮೇಲಾಧಿಕಾರಿ ಸೈನಿಕನಿಗೆ ಪಾಠ ಮಾಡಿದ್ದ.

ಸಾಮ್ಯುಯೆಲ್ ಮೋರ್ಸ್ 1844 ರ ಮೇ 24 ರಂದು ಅಮೆರಿಕದ ವಾಷಿಂಗ್ಟನ್ ದಿಂದ ಬಾಲ್ಟಿಮೋರ್‌ಗೆ ಕಳಿಸಿದ ಮೊದಲ ಟೆಲಿಗ್ರಾಮ್ ಸಂದೇಶದಲ್ಲಿ What hath God wrought? ಎಂದು ಕಳಿಸಿದ್ದ. ಇಂದಿಗೂ ಈ ನಾಲ್ಕು ಪದಗಳು ಸಂವಹನ ನಡೆದು ಬಂದ ದಾರಿಯನ್ನು ನೆನಪಿಸುತ್ತದೆ. ಟೆಲಿಗ್ರಾಮ್ ಕಂಡು ಹಿಡಿದ ಹದಿನಾಲ್ಕು ವರ್ಷಗಳ ನಂತರ, ವಿಕ್ಟೋರಿಯಾ ರಾಣಿ, ಅಮೆರಿಕದ ಅಂದಿನ ಅಧ್ಯಕ್ಷ ಜೇಮ್ಸ್ ಬುಕನಾನ್ ಅವರಿಗೆ ಟೆಲಿಗ್ರಾಮ್ ಸಂದೇಶ ಕಳಿಸಿದಾಗ, ಅದನ್ನು ಮೊದಲ ಟ್ರಾ ಅಟ್ಲಾಂಟಿಕ್ ಟೆಲಿಗ್ರಾಮ್ ಎಂದು ಕರೆಯಲಾಗಿತ್ತು.

ನ್ಯೂಯಾರ್ಕಿನಲ್ಲಿ ಆ ಸುದ್ದಿಯನ್ನು ಕೇಳಿ ಆನಂದತುಂದಿಲರಾದ ಜನ ಬೀದಿಗಳಲ್ಲಿ ಪೆರೇಡ್ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿ ಸಿದ್ದರು. ಆ ದಿನಗಳಲ್ಲಿ ಅಮೆರಿಕದ ವೈಟ್ ಹೌಸಿನಲ್ಲಿ ಅಧ್ಯಕ್ಷರ ಟೆಲಿಗ್ರಾಮ್ ಸಂದೇಶಗಳನ್ನು ನಿರ್ವಹಿಸುವುದಕ್ಕಾಗಿ ಪ್ರತ್ಯೇಕ ಕೋಣೆ, ಎಂಟು ಜನರ ವಿಶೇಷ ತಂಡ ಮತ್ತು ಅದಕ್ಕೊಬ್ಬ ಮುಖ್ಯಸ್ಥರನ್ನು ನೇಮಿಸಲಾಗಿತ್ತು.

1912 ರ ಏಪ್ರಿಲ್ 14 ರಂದು ಟೈಟಾನಿಕ್ ಹಡಗು ಮುಳುಗಿದ ದಿನ ಕಳಿಸಿದ – SOS SOS CQD CQD TITANIC. WE ARE SINKING FAST. PASSENGERS ARE BEING PUT INTO BOATS. TITANIC ಟೆಲಿಗ್ರಾಮ್ ಸಂದೇಶವನ್ನು ಮರೆಯಲು ಸಾಧ್ಯವಿಲ್ಲ.

1928 ರಲ್ಲಿ ನೆಲ್ಸನ್ ರೋಸ್ ಎಂಬಾತ How to Write Telegrams Properly ಎಂಬ ಪುಸ್ತಕವನ್ನು ಬರೆದಿದ್ದ. ಆ ಕೃತಿಯಲ್ಲಿರುವ ಎಂಟು ಅಧ್ಯಾಯಗಳ ಪೈಕಿ ಎರಡರ ಶೀರ್ಷಿಕೆ ಹೀಗಿತ್ತು – Extra Words and Their Avoidance ಮತ್ತು How Unnecessary Words Creep In. 1920 ರ ಹೊತ್ತಿಗೆ ಟೆಲಿಗ್ರಾಮ್ ಅದೆಷ್ಟು ಜನಪ್ರಿಯವಾಗಿತ್ತು
ಅಂದರೆ, ವರ್ಷಕ್ಕೆ 200 ದಶಲಕ್ಷ ಟೆಲಿಗ್ರಾಮ್ ಸಂದೇಶಗಳು ವಿನಿಮಯವಾಗುತ್ತಿದ್ದವು. ಈಗಲೂ ಟೆಲಿಗ್ರಾಮ್ ಸಂದೇಶ ಗಳನ್ನು ಕಳಿಸಬಹುದು. ಈ ಇಂಟರ್ನೆಟ್, ಟ್ವಿಟರ್ ಯುಗದಲ್ಲೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಜನ ಟೆಲಿಗ್ರಾಮ್‌ಗಳನ್ನು ಕಳಿಸುತ್ತಾರೆಂದರೆ ಆಶ್ಚರ್ಯವಾಗಬಹುದು.

ನೂರು ವರ್ಷಗಳ ನಂತರವೂ ಇಂದು ವರ್ಷಕ್ಕೆ ಇಪ್ಪತ್ತು ದಶಲಕ್ಷ ಟೆಲಿಗ್ರಾಮ್‌ಗಳು ವಿನಿಮಯವಾಗುತ್ತವೆ. ಮಹತ್ವದ ಗುತ್ತಿಗೆ ಅಥವಾ ಒಪ್ಪಂದಗಳನ್ನು ರದ್ದು ಮಾಡುವಾಗ, ಜನನ ಮತ್ತು ಮರಣ, ವೈವಾಹಿಕ ಸಂಬಂಧ ಅಥವಾ ವಿಚ್ಛೇದನವಾದಾಗ, ಲೀಗಲ್ ನೋಟೀಸ್ ನೀಡಿದಾಗ, ದಾಖಲೆಯ ಕುರುಹಾಗಿ, ನೆನಪಿನ ತುಣುಕಾಗಿ, ಐತಿಹಾಸಿಕ ದಾಖಲೆಯ ಪ್ರತೀಕವಾಗಿ ಇಂದಿಗೂ ಕೆಲವರು ಟೆಲಿಗ್ರಾಮನ್ನು ಬಳಸುತ್ತಾರೆ.

ಒಂದು ವಾಟ್ಸಾಪ್ ಸಂದೇಶ ಕ್ಷಣಾರ್ಧದಲ್ಲಿ ಜಗತ್ತನ್ನು ಸುತ್ತು ಹಾಕಿ, ನಮಗೇ ವಾಪಸ್ ಬರುವ ಈ ಹೊತ್ತಿನಲ್ಲಿ The
Victorian Internet ಕೃತಿ ನನಗೆ ಬಹಳ ತಮಾಷೆಯಾಗಿ ಕಂಡಿತು.
***

ಶಾಣ್ಯಾ ಆದರೇನು ಬಂತು?
‘ನಾನು ನಿಮ್ಮ ಮೇಲೆ ನಂಬಿಕೆ ಇಡುವುದಿಲ್ಲ ಅಂತಾದರೆ, ನೀವು ಎಷ್ಟೇ ಶಾಣ್ಯಾ (smart) ಆಗಿದ್ದರೂ ಪ್ರಯೋಜನ
ಇಲ್ಲ.’ ಹೀಗೆಂದು ಹೇಳಿದವರು Do Epic Shit ಎಂಬ ಕೃತಿಯನ್ನು ಬರೆದ ಅಂಕುರ್ ವಾರಿಕೂ. ಈ ಉಪದೇಶವನ್ನು ಅವರು ಮೊದಲು ಕೇಳಿದ್ದು ಅವರ ಮ್ಯಾನೇಜರ್‌ನಿಂದ. ಆತ ಹೆಜ್ಜೆಹೆಜ್ಜೆಗೆ ಮೇಲಿನ ಮಾತುಗಳನ್ನು ಹೇಳುತ್ತಿದ್ದನಂತೆ.

ನನ್ನ ಮ್ಯಾನೇಜರ್ ಬರೀ ತಪ್ಪುಗಳನ್ನೇ ಹುಡುಕುತ್ತಾನೆ. ಅದಕ್ಕಾಗಿಯೇ ಅವನನ್ನು ನೇಮಿಸಿದ್ದಾರೆ ಎಂದು ವಾರಿಕೂ ಭಾವಿಸಿದ್ದರಂತೆ. ಆದರೆ ಹಾಗೆ ಯೋಚಿಸುವುದೇ ತಪ್ಪು ಎಂದು ಅವರಿಗೆ ಒಂದು ದಿನ ಅನಿಸಿತಂತೆ. ಅಂದಿನಿಂದ ಮ್ಯಾನೇಜರ್ ಹೇಳುತ್ತಿದ್ದ ಮೇಲಿನ ಮಾತುಗಳನ್ನು ತಾವೇ ನೆನಪು ಮಾಡಿಕೊಳ್ಳತೊಡಗಿದರಂತೆ. ಮ್ಯಾನೇಜರ್ ನನ್ನ ತಪ್ಪುಗಳನ್ನು ಹುಡುಕುತ್ತಿದ್ದಾನೆ ಎನ್ನುವುದರ ಬದಲು ನಾನು ತಪ್ಪುಗಳಿಲ್ಲದ ಕೆಲಸ ಮಾಡಲಿ ಎಂದು ಬಯಸುತ್ತಿದ್ದಾನೆ ಎಂದು ಅಂದುಕೊಳ್ಳಲು ಆರಂಭಿಸಿದರಂತೆ. ಅಂದಿನಿಂದ ಅವರ ಕೆಲಸದಲ್ಲಿ ತನ್ನಷ್ಟಕ್ಕೆ ಅಗಾಧ ಬದಲಾವಣೆ ಅನುಭವಕ್ಕೆ ಬರಲಾರಂಭಿಸಿತಂತೆ.

ಕ್ರಮೇಣ ಮ್ಯಾನೇಜರ್ ಕೂಡ ಇವರನ್ನು ನಂಬಲು ಆರಂಭಿಸಿದನಂತೆ. ಅವರನ್ನು ಪ್ರೀತಿಸಲು ಶುರು ಮಾಡಿದನಂತೆ.
ಕ್ರಮೇಣ ಅವನ ಜತೆ ಉತ್ತಮ ಸಂಬಂಧ ಸಾಧ್ಯವಾಯಿತಂತೆ. ನಿಮ್ಮ ಕೆಲಸ ಅಂದ್ರೆ ಬರೀ ಕೆಲಸವಷ್ಟೇ ಅಲ್ಲ. ನಿಮ್ಮ
ಮೇಲಾಽಕಾರಿ ನಿಮ್ಮ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದಾನೆ, ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮನ್ನು ಎಷ್ಟು ಚೆನ್ನಾಗಿ
ನೋಡಿಕೊಳ್ಳುತ್ತದೆ, ನೀವು ವೈಯಕ್ತಿಕವಾದುದನ್ನು ಮೀರಿ ಆ ಸಂಸ್ಥೆಗೆ ಏನನ್ನು ಕೊಡುತ್ತೀರಿ ಎಂಬುದನ್ನು ಅವಲಂಬಿಸಿ ರುತ್ತದೆ.

ಜನ ನಿಮ್ಮನ್ನು ನಂಬಬೇಕು, ನಿಮ್ಮ ಕೆಲಸ ನಿಮ್ಮ ವ್ಯಕ್ತಿತ್ವವನು ಹೇಳಬೇಕು. ಈಗ ವಾರಿಕೂ ಅವರಿಗೆ ಅವರ ಮೊದಲ ಮ್ಯಾನೇಜರ್ ಹೇಳಿದ ಮೇಲಿನ ಸಾಲನ್ನು ಮತ್ತೊಮ್ಮೆ ಓದಿ.
***

ನಿರ್ಗಮನ ಸಂದರ್ಶನ ಕುರಿತು
ಕೆಲವು ಕಂಪನಿಗಳಲ್ಲಿ ಅದರಲ್ಲೂ ವಿಶೇಷವಾಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿ, ನೀವು ಆ ಸಂಸ್ಥೆಯಿಂದ ನಿರ್ಗಮಿಸುವ ಸಂದರ್ಭ ಬಂದಾಗ, ಎಚ್.ಆರ್.(ಹ್ಯೂಮನ್ ರಿಸೋರ್ಸ್) ವಿಭಾಗದವರು ನಿರ್ಗಮನ ಸಂದರ್ಶನ (Exit Interview) ವನ್ನು ಏರ್ಪಡಿಸುತ್ತಾರಷ್ಟೆ. ‘ನೀವು ನಮ್ಮ ಸಂಸ್ಥೆಯನ್ನು ಯಾಕೆ ಬಿಡುತ್ತಿದ್ದೀರಿ?’ ನಮ್ಮ ಸಂಸ್ಥೆಯಲ್ಲಿ ನಿಮಗೆ ಮೆಚ್ಚುಗೆಯಾಗದ ಅಂಶಗಳೇನು? ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವುದು ಅಭಿಮಾನದ ವಿಷಯ ಎಂದು ನಿಮಗೆ ಅನಿಸಿದೆಯಾ?, ನಿಮ್ಮ ವೃತ್ತಿ ಜೀವನ ಸುಧಾರಣೆಗೆ ನಮ್ಮಲ್ಲಿ ಕೆಲಸ ಮಾಡಿದ್ದು ಸಹಾಯಕವಾಯಿತಾ?, ನಿಮ್ಮ
ಖಾಸಗಿ- ವೃತ್ತಿಜೀವನದ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ನಮ್ಮಸಂಸ್ಥೆ ನೆರವಾಯಿತಾ?, ನಮ್ಮಲ್ಲಿ ಕೆಲಸ
ಮಾಡುವಾಗ, ಕೆಲಸದ ಒತ್ತಡದಿಂದ ನಿಮ್ಮ ಖಾಸಗಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಆಯಿತಾ?, ನಮ್ಮ ಸಂಸ್ಥೆ ಯಾವ ಕ್ಷೇತ್ರಗಳಲ್ಲಿ ಸುಧಾರಿಸಿಕೊಳ್ಳಬೇಕು ಎಂದು ನಿಮಗೆ ಅನಿಸುತ್ತದೆ?… ಇವೇ ಮುಂತಾದ ಪ್ರಶ್ನೆಗಳನ್ನು ನಿರ್ಗಮಿತ
ಉದ್ಯೋಗಿಗೆ ಕೇಳಲಾಗುತ್ತದೆ.

ಇಂಥ ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ ಆಕ್ರೋಶವನ್ನು ಹೊರಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಈ ಎಲ್ಲ ಪ್ರಶ್ನೆಗಳನ್ನು ನೀವು ಆ ಸಂಸ್ಥೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ಕೇಳಿರುವುದಿಲ್ಲ. ಒಂದು ವೇಳೆ ಕೇಳಿದ್ದಿದ್ದರೆ ನೀವು ಆ ಸಂಸ್ಥೆಯನ್ನು ತೊರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ನೀವು ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವ
ಸಂದರ್ಭದಲ್ಲಿ, ಒಂದು ಆರೋಗ್ಯಪೂರ್ಣವಾದ ಚರ್ಚೆ, ಸಂವಾದ ಅಥವಾ ಮಾತುಕತೆ ಸಾಧ್ಯವಾ ಎಂಬುದನ್ನು ಎಚ್.
ಆರ್. ವಿಭಾಗದವರನ್ನು ಕೇಳಬೇಕು.

ಅದು ಸಾಧ್ಯವಾಗದಿದ್ದರೆ ನಿರ್ಗಮನ ಸಂದರ್ಶನದಲ್ಲಿ ಭಾಗವಹಿಸಬಾರದು. ನೀವು ಸಂಸ್ಥೆಯನ್ನು ಬಿಡುವ ಸಂದರ್ಭದಲ್ಲಿ, ಆ ಸಂಸ್ಥೆಯನ್ನು ಉತ್ತಮಗೊಳಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರಿಸುವುದು ಅರ್ಥಹೀನ. ಉತ್ತಮ ಸಂಸ್ಥೆಗಳನ್ನು ಅಲ್ಲಿ
ಕೆಲಸ ಮಾಡುವ ಸಿಬ್ಬಂದಿ ಜತೆ ನಿರಂತರ ಮಾತುಕತೆ ನಡೆಸುವ ಮೂಲಕ ಕಟ್ಟಲಾಗುತ್ತದೆಯೇ ಹೊರತು, ಅವರು ಬಿಟ್ಟು
ಹೋಗುವಾಗ ಹೇಳುವ ಅಭಿಪ್ರಾಯಗಳಿಂದ ಅಲ್ಲ. ನಿಮಗೆ ಕೆಲಸ ಮಾಡುವಾಗ ಹೇಳಲು ಸಾಧ್ಯವಾಗದ್ದನ್ನು, ಕೆಲಸ
ಬಿಡುವಾಗ ಹೇಳುವುದರಲ್ಲಿ ಅರ್ಥವಿಲ್ಲ.
***

ಜೀವನದ ಧನ್ಯತೆ
ಕಳೆದ ಹತ್ತು ವರ್ಷಗಳಿಂದ ನಾನು ಕ್ಯಾನ್ಸರ್ ಮುಕ್ತ ಜೀವನವನ್ನು ಸಾಗಿಸುತ್ತಿದ್ದೇನೆ. ಈ ಭೂಮಿಯ ಮೇಲೆ ನಾಲ್ಕು
ದಶಕ ಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ನಾನು ಮೊನ್ನೆಯಷ್ಟೇ ಹೊಸ ಅಥವಾ ಎರಡನೇ ಜನ್ಮ ತಾಳಿದ ಅನುಭವ
ನನ್ನದಾಗಿದೆ.

ಈ ಮೊದಲು ಕಾಯುವುದು ಅಂದ್ರೆ ವೈದ್ಯರಿಗೆ ಕಾಯುವುದು, ಅವರು ನೀಡಲಿರುವ ವರದಿಗಳಿಗೆ ಕಾಯುವುದು ಎಂದು ನಾನು ಭಾವಿಸಿದ್ದೆ. ಆದರೆ ಈಗ ಹಾಗಲ್ಲ, ಕಾಯುವುದು ಅಂದ್ರೆ ಒಳ್ಳೆಯ ಕ್ಷಣಗಳಿಗೆ ಕಾಯುವುದು, ಹೊಸ ಭರವಸೆಗಳಿಗೆ ಕಾಯು ವುದು ಎಂದು ಅನಿಸುತ್ತಿದೆ. ನಾನು ಹೊಸತನಕ್ಕೆ ಪ್ರತಿಕ್ಷಣ ಕಾಯುತ್ತೇನೆ. ನಾನು ಪವಾಡಗಳಿಗೆ, ಹೊಸ ಸಾಧ್ಯತೆಗಳಿಗೆ ಮತ್ತು ಹೊಸ ಮ್ಯಾಜಿಕ್‌ಗೆ ಕಾಯಲಾರಂಭಿಸಿದ್ದೇನೆ.

ಬದುಕಿರುವಾಗಲೇ ಸಾವಿನ ದವಡೆ ಹೊಕ್ಕಿ ಬರುವುದು ನಿಜಕ್ಕೂ ಜೀವಮಾನದ ಅದ್ಭುತ ಘಳಿಗೆ. ನಾನು ಹುಟ್ಟಿದ್ದು, ಸತ್ತು
ಬದುಕಿದ್ದು ಮತ್ತು ಹೊಸ ಬದುಕು ಆರಂಭಿಸಿರುವುದು.. ಈ ಎಲ್ಲ ಅನುಭವ ಎಲ್ಲರಿಗೂ ಸಿಗುವಂಥದ್ದಲ್ಲ. ನಾನು ಧನ್ಯ.
ಹೀಗೆಂದು ಹೇಳಿದವಳು ಬಾಲಿವುಡ್ ಖ್ಯಾತ ನಟಿ ಮನಿಷಾ ಕೊಯಿರಾಲ.

Healed : How cancer gave me a new lifeಎಂಬ ಪುಸ್ತಕದ ಕೊನೆಯಲ್ಲಿ ಆಕೆ ಬರೆದ ಈ ಸಾಲುಗಳು ಅಂತಃಕರಣ ವನ್ನು ಕಲಕಿದವು.
***

ಮೂರು ಪ್ರಸಂಗಗಳು
ಒಮ್ಮೆ ಅಮೆರಿಕದ ಪ್ರಸಿದ್ಧ ಕವಿ, ಸಾಹಿತಿ, ಪತ್ರಕರ್ತ ಕಾರ್ಲ್ ಸ್ಯಾಂಡ್ ಬರ್ಗ್ ಅವರನ್ನು ಭೇಟಿಯಾದ ಯುವ
ನಾಟಕಕಾರನೊಬ್ಬ ತಾನು ಬರೆದ ನಾಟಕವೊಂದರ ಪ್ರದರ್ಶನ ನೀಡುವುದಾಗಿಯೂ, ಅದನ್ನು ನೋಡಿ ತನ್ನ ಅಭಿಪ್ರಾಯ
ತಿಳಿಸುವಂತೆಯೂ ಕೇಳಿಕೊಂಡ. ಅದಕ್ಕೆ ಸ್ಯಾಂಡ್ ಬರ್ಗ್ ಸಮ್ಮತಿಸಿದ.

ಆ ಪ್ರಕಾರ, ಸ್ಯಾಂಗ್ ಬರ್ಗ್‌ನನ್ನು ನಾಟಕ ನೋಡಲು ಆಹ್ವಾನಿಸಿದ. ಆದರೆ ನಾಟಕ ಆರಂಭವಾದ ಅರ್ಧ ಗಂಟೆಯೊಳಗೆ ಸ್ಯಾಂಡ್ ಬರ್ಗ್ ನಿz ಹೋದ. ಇದರಿಂದ ಆ ಯುವ ನಾಟಕಕಾರನಿಗೆ ಅತೀವ ಬೇಸರವಾಯಿತು. ಆತ ತನ್ನ ಕೋಪವನ್ನು ತೋರಿಸಿಕೊಳ್ಳದೇ ಸ್ಯಾಂಡ್ ಬರ್ಗ್‌ನನ್ನು ಮೆಲ್ಲಗೆ ಎಬ್ಬಿಸುತ್ತ, ‘ಸರ್, ನಾನು ನಿಮ್ಮನ್ನು ಆಹ್ವಾನಿಸಿರುವುದು ನಾಟಕ
ನೋಡಿ ಅಭಿಪ್ರಾಯ ತಿಳಿಸಿ ಎಂದು. ಆದರೆ ಇಲ್ಲಿ ಬಂದು ನಿದ್ದೆ ಮಾಡಿ ಎಂದಲ್ಲ’ ಎಂದು ಹೇಳಿದ.

ಆಗ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಸ್ಯಾಂಡ್ ಬರ್ಗ್ ಹೇಳಿದ – ‘ತಪ್ಪು ಭಾವಿಸಬೇಡಿ, ನನ್ನ ನಿದ್ದೆಯೂ ಒಂದು ಅಭಿಪ್ರಾಯವೇ
ಎಂಬುದು ಗೊತ್ತಿರಲಿ.’ ಇನ್ನೊಂದು ಪ್ರಸಂಗ. ಒಮ್ಮೆ ಹಾಲಿವುಡ್ ನಟ ಎಡ್ವರ್ಡ್ ನೋರ್ಟನ್, ಲಾಸ್ ಏಂಜಲೀಸ್ ಕಂಟ್ರಿ ಕ್ಲಬ್ ಸದಸ್ಯನಾಗಬೇಕು ಎಂದು ಬಯಸಿ ಅರ್ಜಿ ಸಲ್ಲಿಸಿದ. ಆ ಅರ್ಜಿಯಲ್ಲಿ ಒಂದೆಡೆ, ‘ನಮ್ಮ ಕ್ಲಬ್ಬಿನ ಸದಸ್ಯರಾಗಬಯಸುವವರು ಯಹೂದಿ ಆಗಿರಕೂಡದು, ಕ್ಯಾಥೋಲಿಕ್ ಆಗಿರಕೂಡದು, ನಟ-ನಟಿಯಾಗಿರಬಾರದು’ ಎಂದು ಬರೆದಿತ್ತು.

ಇದನ್ನು ಓದಿದ ನೋರ್ಟನ್ ಬರೆದ – ‘ನಾನು ನಟಿಸಿದ ಸಿನಿಮಾಗಳನ್ನು ನೀವು ನೋಡಿದ್ದರೆ, ನಾನು ನಟ ಅಲ್ಲವೆಂಬುದನ್ನು ನೀವೇ ಒಪ್ಪಿಕೊಳ್ಳುತ್ತೀರಿ.’ ಮತ್ತೊಂದು ಪ್ರಸಂಗ. ಶೋಮ್ಯಾನ್ ಯುಬಿ ಬ್ಲೇಕ್ ನೂರು ವರ್ಷ ಪೂರೈಸಿದಾಗ, ಅವನ ಅಭಿಮಾನಿಗಳು ಒಂದು ಪಾರ್ಟಿಯನ್ನು ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಬ್ಲೇಕ್‌ನನ್ನು ಕೇಳಿದರು – ‘ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ನಿಮಗೆ ಏನನಿಸುತ್ತದೆ?’ ಅದಕ್ಕೆ ಬ್ಲೇಕ್ ಹೇಳಿದ – ‘ನಾನು ನೂರು ವರ್ಷಗಳ ಕಾಲ ಬದುಕುತ್ತೇನೆ ಎಂಬುದು ಮೊದಲೇ ಗೊತ್ತಿದ್ದರೆ, ನಾನು ನನ್ನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ.