Monday, 16th September 2024

ತಾಪಮಾನಕ್ಕೆ ಲಗಾಮು ಹಾಕದಿದ್ದರೆ ಅಪಾಯ

ವಿದೇಶವಾಸಿ

dhyapaa@gmail.com

‘ಪರಿಸರಕ್ಕಿಂತ ಆರ್ಥಿಕತೆ, ಹಣ, ಆಭರಣಗಳೇ ಮುಖ್ಯ ಎಂದಾದರೆ, ನಿಮ್ಮ ಹಣ ಎಣಿಸುವಾಗ, ಒಡವೆ ತೊಡುವಾಗ ನಿಮ್ಮ ಉಸಿರನ್ನು ಹಿಡಿದಿಟ್ಟು ಕೊಳ್ಳಲು ಪ್ರಯತ್ನಿಸಿ’- ಯಾರೋ ಹೇಳಿದ ಮಾತಿದು. ಯಾರೇ ಆಗಿರಲಿ, ಆ ಪುಣ್ಯಾತ್ಮ ಇಂದಿನ ಪರಿಸರ ಮತ್ತು ಪರಿಸ್ಥಿತಿಯ ಸತ್ಯದ ಬುತ್ತಿಯನ್ನು ಒಂದೇ ವಾಕ್ಯದಲ್ಲಿ ಕಟ್ಟಿ ಕೊಟ್ಟಿದ್ದಾನೆ. ಹವಾಮಾನ ಪರಿವರ್ತನೆ, ಹೆಚ್ಚುತ್ತಿರುವ ಜಾಗತಿಕ ತಾಪಮಾನದ ವಿಷಯದ ಕುರಿತು ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೆ ಇಂದು ಅದು ಕೇವಲ ತರ್ಕವಾಗಿ, ಚರ್ಚಾ ಕೂಟದ ವಿಷಯವಾಗಿ ಅಥವಾ ಭವಿಷ್ಯತ್ತಿನಲ್ಲಿ ಒದಗಿ ಬರಬಹುದಾದ ಆತಂಕದ ಸಂಕೇತವಾಗಿ ಉಳಿದಿಲ್ಲ.

ಅದು ಇಂದಿನ ವಾಸ್ತವ, ಅದೇ ನಿತ್ಯದ ಕಟುಸತ್ಯ. ‘ಅಬ್ಬಾ… ಈ ವರ್ಷದಷ್ಟು ಸೆಖೆ ಮುಂಚೆ ಯಾವತ್ತೂ ಇರಲಿಲ್ಲ’, ‘ಅಯ್ಯೋ… ಇಷ್ಟು ಮಳೆ ನೂರು ವರ್ಷದ ಮೊದಲು ಆಗಿತ್ತಂತೆ’, ‘ನಾವು ಸಣ್ಣವರಿದ್ದಾಗ ಈ ರೀತಿ ಇರಲಿಲ್ಲ…’ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಹಾಗಾದರೆ ತಪ್ಪಿದ್ದೆಲ್ಲಿ? ವಾತಾವರಣ ಇದ್ದಕ್ಕಿದ್ದಂತೆ ಬದಲಾಯಿತೆ? ಮನುಕುಲದ ಮೇಲೆ ಅದಕ್ಕೆ ಯಾವ ಹಗೆ? ತನ್ನಷ್ಟಕ್ಕೆ ತಾನೇ ಬದಲಾಗಬೇಕಾದ ಯಾವ ಜರೂರತ್ತೂ ಅದಕ್ಕಿಲ್ಲ. ಪರಿಸರದ ಇಂದಿನ ಪರಿಸ್ಥಿತಿಗೆ ಕಾರಣ ಮನುಷ್ಯನೇ, ಮನುಷ್ಯನೇ ಮತ್ತು ಮನುಷ್ಯನೇ!

ಹವಾಮಾನ ಬದಲಾವಣೆಗೆ, ಏರುತ್ತಿರುವ ತಾಪಮಾನಕ್ಕೆ ಇರುವ ಪ್ರಮುಖ ಕಾರಣಗಳು ಒಂದೆರಡಲ್ಲ. ಇದರಲ್ಲಿ ಪೆಟ್ರೋಲ್, ಡೀಸೆಲ್‌ನಂಥ ತೈಲಗಳು, ಅನಿಲ, ಕಲ್ಲಿದ್ದಲು ಇತ್ಯಾದಿಗಳ ಪಾತ್ರ ದೊಡ್ಡದು. ಜತೆಗೆ, ಗಣಿಗಾರಿಕೆ, ಅರಣ್ಯ ನಾಶ, ಕೈಗಾರಿಕೆಗಳ ಪಾತ್ರವೂ ಸಾಕಷ್ಟಿದೆ. ಅದರಲ್ಲೂ ಕಬ್ಬಿಣ, ಉಕ್ಕು, ಸಿಮೆಂಟ್, ಪ್ಲಾಸ್ಟಿಕ್, ಬಟ್ಟೆ ಇತ್ಯಾದಿಗಳ ಕೊಡುಗೆ ಗಣನೀಯವಾಗಿದೆ. ಇದರ ಪರಿಣಾಮ ವಾಗಿ ತಾಪಮಾನದಲ್ಲಿ ಏರಿಕೆ, ಹಿಮ ಪ್ರದೇಶದಲ್ಲಿ ತ್ವರಿತ ಗತಿಯಲ್ಲಿ ಹಿಮ ಕರಗುವಿಕೆ, ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ ಇತ್ಯಾದಿಗಳು ಸಂಭವಿಸುತ್ತವೆ.

ಕಾಡ್ಗಿಚ್ಚು ಸುಲಭವಾಗಿ ಆರಂಭವಾಗುವುದಲ್ಲದೆ, ವೇಗವಾಗಿ ಹರಡುತ್ತದೆ. ಬಿಸಿಗೆ ಸಂಬಂಧಿಸಿದ ರೋಗಗಳು ಹೆಚ್ಚುತ್ತವೆ. ಬಿರುಗಾಳಿ, ಚಂಡಮಾರುತ
ಗಳಿಂದ ಕಟ್ಟಡ, ರಸ್ತೆ, ಸೇತುವೆಗಳಿಗೆ ಹಾನಿಯಾಗುತ್ತದೆ. ಬರಗಾಲ ಹೆಚ್ಚುತ್ತದೆ, ಬೆಳೆಯ ಮೇಲೆ ಪರಿಣಾಮ ಬೀರುತ್ತದೆ, ಹೆಚ್ಚು ಸಾವು ಸಂಭವಿಸುತ್ತದೆ.
ಆರೋಗ್ಯ, ಬಡತನ, ಸ್ಥಳಾಂತರ ಇತ್ಯಾದಿ ಪರಿಣಾಮಗಳು ಉಂಟಾಗುತ್ತವೆ. ‘ಜಾಗತಿಕ ತಾಪಮಾನದ ಏರಿಕೆ ಎಂದರೆ ಒಂದು ಭಯೋತ್ಪಾದಕ ದಾಳಿ ಇದ್ದಂತೆ. ಭಯೋತ್ಪಾದಕರ ದಾಳಿಗೆ ಹೇಗೆ ಗಡಿ, ದೇಶ, ಧರ್ಮ, ವಯಸ್ಸು, ಲಿಂಗ ಇತ್ಯಾದಿಗಳ ಭೇದ ಇಲ್ಲವೋ, ಹಾಗೆಯೇ, ಏರುತ್ತಿರುವ ಜಾಗತಿಕ ತಾಪಮಾನಕ್ಕೂ ಇದ್ಯಾವುದರ ಸೀಮೆಯೂ ಇಲ್ಲ, ಹಂಗೂ ಇಲ್ಲ’ ಎಂದು ಎಲ್ಲೋ ಓದಿದ ನೆನಪು. ಎಷ್ಟು ಸತ್ಯವಾದ ಮಾತು!

ಅಂತರ ಎಂದರೆ, ಭಯೋತ್ಪಾದಕರ ದಾಳಿಯಲ್ಲಿ ಒಬ್ಬ ಮನುಷ್ಯ ಶಸಾಸ ಹಿಡಿದು ಇನ್ನೊಬ್ಬ ಮನುಷ್ಯನನ್ನು ನೇರಾನೇರ ಕೊಲ್ಲುತ್ತಾನೆ. ಅದೇ ಜಾಗತಿಕ ತಾಪಮಾನದ ಏರಿಕೆಯಲ್ಲಿ ಮನುಷ್ಯ ತನಗೆ ಅರಿವಿದ್ದೋ ಇಲ್ಲದೆಯೋ, ತನ್ನ ವಿನಾಶದ ವಾತಾವರಣವನ್ನು ಪ್ರತಿ ನಿಮಿಷವೂ ತಾನೇ  ಸೃಷ್ಟಿಸಿಕೊಳ್ಳು ತ್ತಾನೆ. ಆದರೆ ಇಲ್ಲಿ ಬಹಳಷ್ಟು ಸಲ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಾರೆ. ನಿಜ, ಯಾವುದೋ ದೇಶದಲ್ಲಿ ಆದ ಮಾಲಿನ್ಯದ ಪರಿಣಾಮ ಇನ್ಯಾವುದೋ ದೇಶದಲ್ಲಿ ಆಗುತ್ತದೆ.

ದೇಶ, ಗಡಿ, ನಾಡು, ಇವೆಲ್ಲ ಕೆಲವು ಕಡೆಗಳಲ್ಲಿ ಮನುಷ್ಯ ನಿರ್ಮಿಸಿಕೊಂಡ ವಿಭಜನೆಯ ರೇಖೆಗಳು. ಇನ್ನು ಎಷ್ಟೋ ಕಡೆಗಳಲ್ಲಿ ಇವು ಕಾಲ್ಪನಿಕ ರೇಖೆ ಗಳು. ಆದರೆ ಪರಿಸರಕ್ಕೆ, ಮಾಲಿನ್ಯಕ್ಕೆ, ಹವಾಮಾನಕ್ಕೆ ಯಾವ ರೇಖೆ? ಯಾವ ಸೀಮೆ? ಎಲ್ಲಿಯ ಪರಿಧಿ? ನೀರನ್ನು ಹೇಗಾದರೂ ಸ್ವಲ್ಪ ಮಟ್ಟಿಗೆ ಹಿಡಿದಿಟ್ಟು ಕೊಳ್ಳ ಬಹುದು ಅಂದುಕೊಳ್ಳಿ. ಆದರೆ ಗಾಳಿಯನ್ನು ಕಟ್ಟಿಹಾಕುವವರು ಯಾರು? ಆದ್ದರಿಂದ ಯಾವ ದೇಶದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತ ದೆಯೋ, ಅನಾಹುತವೂ ಅದೇ ದೇಶದಲ್ಲಿಯೇ ಆಗಬೇಕೆಂದಿಲ್ಲ. ಅದು ಬೇರೆ ಖಂಡದ ಇನ್ಯಾವುದೋ ದೇಶದಲ್ಲಿಯೂ ಆಗ ಬಹುದು. ಅದು ಪ್ರವಾಹ, ಚಂಡಮಾರುತ, ಬಿರು ಗಾಳಿ, ಅತಿವೃಷ್ಟಿ, ಅನಾವೃಷ್ಟಿ, ಬಿಸಿಲಿನ ತಾಪ, ಯಾವ ರೂಪದಲ್ಲಿಯೂ ಇರಬಹುದು. ಇದನ್ನು ಶ್ರೀಮಂತ ರಾಷ್ಟ್ರ ಗಳು ಒಂದು ಹಂತದವರೆಗೆ ಎದುರಿಸಿ ಹೇಗೋ ಬಚಾವ್ ಆಗಬಹುದು.

ಬಡ ರಾಷ್ಟ್ರಗಳ ಪರಿಸ್ಥಿತಿ ಏನು? ವಾತಾವರಣದಲ್ಲಿ ಬದಲಾವಣೆ ಎಂದರೆ ಮನುಷ್ಯನ ‘ಮೂಡ್’ ಬದಲಾದಂತೆ ಅಲ್ಲ. ಮೂಡ್ ಬದಲಾದರೆ ಔಷಧಿ-ಮಾತ್ರೆ ತೆಗೆದುಕೊಂಡು ಹದ್ದುಬಸ್ತಿಗೆ ತರಬಹುದು. ವಾತಾವರಣಕ್ಕೆ ಯಾವ ಸರ್ಜರಿಯೂ ಇಲ್ಲ, ಔಷಧಿಯೂ ಇಲ್ಲ. ಅದಕ್ಕೆ ಮುಂಜಾಗರೂಕತೆಯೇ ಮಹಾಮಂತ್ರ. ನಿಯಂತ್ರಣವೇ ದಿವ್ಯ ಔಷಧಿ. ಹವಾಮಾನ ಬದಲಾವಣೆ ಯಾರಿಗೂ ಕಾಯುವುದಿಲ್ಲ, ಯಾರ ಮಾತನ್ನೂ ಕೇಳುವುದಿಲ್ಲ. ಅದು ಪ್ರತಿನಿತ್ಯ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಮುನ್ನಡೆಯುತ್ತಲೇ ಇರುತ್ತದೆ.

ಇತ್ತೀಚೆಗೆ ನಡೆಯುತ್ತಿರುವ ಪ್ರಕೃತಿ ವಿಕೋಪಗಳ ಕಡೆಗೆ ಒಮ್ಮೆ ಗಮನ ಹರಿಸಿ. ಬೊಲಿವಿಯಾದ ಕಾಡ್ಗಿಚ್ಚು ತನ್ನ ಕೆನ್ನಾಲಿಗೆಯನ್ನು ಚಾಚಿ ಏಳೂವರೆ ಮಿಲಿಯನ್ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಭಸ್ಮಮಾಡಿದೆ. ಕಳೆದ ಒಂದೇ ವರ್ಷದಲ್ಲಿ ಆ ದೇಶದಲ್ಲಿ ಹನ್ನೆರಡು ಸಾವಿರಕ್ಕೂ ಹೆಚ್ಚು ಅಗ್ನಿ ಅವಘಡ ಗಳು ಸಂಭವಿಸಿವೆ. ಇತ್ತೀಚೆಗೆ ಭಾರತದ ರಾಜಧಾನಿ ದೆಹಲಿ ಹೇಗೆ ಹೊಗೆಯ ಮುಸುಕಿನಲ್ಲಿ ಮುಳುಗಿ ಹೋಗಿತ್ತೋ, ಹಾಗೆಯೇ ಬೊಲಿವಿಯಾ ಕೂಡ ಹೊಗೆಯಲ್ಲಿ ಹುದುಗಿಹೋಗಿತ್ತು. ಗಿಡಗಳಲ್ಲಿ ಅತಿಹೆಚ್ಚು ನೀರಿನಂಶ ಇರುವ ಗಿಡ ಎಂದರೆ ಬಾಳೆಗಿಡ. ಅಂಥ ಬಾಳೆಗಿಡ ಹೊಂದಿದ ಸಾವಿರಾರು ಹೆಕ್ಟೇರ್ ಭೂಮಿ ಕರಕಲಾಯಿತು. ಬ್ರೆಜಿಲ್ ದೇಶದಲ್ಲಿ ಜಲಚರಗಳೂ ಸೇರಿದಂತೆ ಸಾವಿರಾರು ಪ್ರಾಣಿಗಳು ಹವಾಮಾನ ಬದಲಾವಣೆಯಿಂದ ಸಾವನ್ನಪ್ಪಿದವು.

ಕಳೆದ ವರ್ಷದ ಚಳಿಗೆ ಯುರೋಪ್‌ನಲ್ಲಿ ಹಿಂದೆಂದೂ ಸಾಯದಷ್ಟು ಜನ ಸತ್ತರು. ಬಿರುಗಾಳಿಯಿಂದ ವಿದ್ಯುತ್ ವ್ಯತ್ಯಯವಾಯಿತು. ಉಕ್ರೇನ್-ರಷ್ಯಾ ಯುದ್ಧದ ಪರಿಣಾಮವಾಗಿ ಲಕ್ಷಾಂತರ ಜನ ಊರು ಬಿಟ್ಟರೆ, ಆ ಪ್ರದೇಶದಲ್ಲಿ ಬಿದ್ದ ಚಳಿಯಿಂದಾಗಿ ಎರಡು ಲಕ್ಷಕ್ಕೂ ಹೆಚ್ಚು ಜನ ಸ್ಥಳಾಂತರಗೊಂಡರು. ಯಾವತ್ತೂ ಬರಗಾಲದಿಂದ ಬಳಲುತ್ತಿದ್ದ ಸೊಮಾಲಿಯಾ ದೇಶದಲ್ಲಿ ಈ ವರ್ಷ ಮಳೆಯಿಂದ ಐದು ನೂರು ಜನ ಸತ್ತರು. ಕಳೆದ ನಾಲ್ಕು ದಶಕಗಳಿಂದ ಬರಗಾಲ ಪೀಡಿತವಾಗಿ, ಹದಿನೈದು ಲಕ್ಷ ಮಕ್ಕಳೂ ಸೇರಿದಂತೆ ಒಟ್ಟು ನಲವತ್ತು ಲಕ್ಷ ಜನ ಹಸಿವಿನಿಂದ ಬಳಲುತ್ತಿದ್ದ ಈ ದೇಶದಲ್ಲಿ ಮಳೆಯ ನೀರು ಮನೆಗೆ ನುಗ್ಗಿದ ಪರಿಣಾಮವಾಗಿ ಎರಡು ಲಕ್ಷಕ್ಕೂ ಹೆಚ್ಚು ಜನ ಊರು ತೊರೆದರು. ಈ ವರ್ಷ ಕೆನ್ಯಾ, ಇಥಿಯೋಪಿಯಾ, ದಕ್ಷಿಣ ಸುಡಾನ್ ಸೇರಿದಂತೆ ಆಫ್ರಿಕಾ ಖಂಡದ ಕೆಲವು ದೇಶಗಳು ಮಳೆಯ ತೋಳಿನ ತೆಕ್ಕೆಯಲ್ಲಿ ಸಿಕ್ಕು ನಲುಗಿಹೋದವು.

ಹವಾಮಾನ ಬದಲಾವಣೆ ಕೆಲವು ದೇಶಗಳಿಗಷ್ಟೇ ಅಲ್ಲ, ಇಡೀ ವಿಶ್ವದ ಆರ್ಥಿಕತೆಗೇ ಪೆಟ್ಟು ಕೊಟ್ಟಿದೆ. ಕಳೆದ ವರ್ಷ ಇದು ವಿಶ್ವದ ಆರ್ಥಿಕತೆಗೆ ಆರು ಪ್ರತಿಶತ ಕ್ಕಿಂತ ಹೆಚ್ಚು ಹೊಡೆತ ನೀಡಿದೆ. ಆಫ್ರಿಕಾ ಖಂಡದ ದೇಶಗಳು ಎಂಟೂವರೆ ಬಿಲಿಯನ್ ಡಾಲರ್ ನಷ್ಟ ಅನುಭವಿಸಿವೆ. ಮುಂದಿನ ಹತ್ತು ವರ್ಷದಲ್ಲಿ ಹತ್ತರಿಂದ ಇಪ್ಪತ್ತು ಬಿಲಿಯನ್ ಡಾಲರ್ ನಷ್ಟ ಅನುಭವಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಕೃಷಿಯೇ ಪ್ರಧಾನವಾಗಿರುವ ದಕ್ಷಿಣ ಏಷ್ಯಾ ದೇಶಗಳಲ್ಲೂ ಹೆಚ್ಚು ಕಮ್ಮಿ ಇದೇ ಪರಿಸ್ಥಿತಿ ಇದೆ.

ಬಿರುಗಾಳಿ, ಬಿಸಿ ಹವೆ, ಚಂಡಮಾರುತ ಇತ್ಯಾದಿಗಳು ಕೃಷಿಯ ಮೇಲೆ ಸಾಕಷ್ಟು ಪರಿಣಾಮ ಬೀರಲಿವೆ. ಈ ಸಮಸ್ಯೆ ಬಗೆಹರಿಸಲು ಶ್ರೀಮಂತ ರಾಷ್ಟ್ರಗಳು ಬಡರಾಷ್ಟ್ರಗಳಿಗೆ ಹಣ ಸಹಾಯ ಮಾಡಬೇಕು ಎಂಬ ಒಪ್ಪಂದವೂ ಆಗಿದೆ. ಪ್ರತಿ ವರ್ಷವೂ ಬಡ ರಾಷ್ಟ್ರಗಳಿಗೆ ಸಹಾಯ ಮಾಡಬೇಕು, ೨೦೩೦ರ ವೇಳೆಗೆ ಒಟ್ಟು ನೂರು ಬಿಲಿಯನ್ ಡಾಲರ್ ಇದಕ್ಕಾಗಿಯೇ ಕೂಡಿಡಬೇಕು ಎಂದೂ ನಿರ್ಧಾರವಾಗಿದೆ. ಆದರೆ ಇದುವರೆಗೆ ಯಾವ ಬಡ ರಾಷ್ಟ್ರವೂ ಈ ಹಣವನ್ನು ಪಡೆದಿಲ್ಲ. ಅಲ್ಲದೆ, ೨೦೧೫ರಲ್ಲಿ ಆದ ಪ್ಯಾರಿಸ್ ಒಪ್ಪಂದದಲ್ಲಿ ಭಾಗವಹಿಸಿದ ದೇಶಗಳು ವಿಶ್ವದ ತಾಪಮಾನದಲ್ಲಿ ಒಂದೂವರೆ ಡಿಗ್ರಿ ಸೆಲ್ಸಿಯಸ್ ಕಡಿತಗೊಳಿಸಬೇಕೆಂದು ಸಮ್ಮತಿಸಿದ್ದವಾದರೂ ಸಾಧಿಸುವಲ್ಲಿ ವಿಫಲವಾಗಿವೆ.

ನಿಮಗೆ ತಿಳಿದಿರಲಿ, ಈ ವಿಷದ ವ್ಯೂಹಕ್ಕೆ ಅತಿಹೆಚ್ಚು ಕೊಡುಗೆ ನೀಡುತ್ತಿರುವ ದೇಶಗಳೆಂದರೆ ಅಮೆರಿಕ ಮತ್ತು ಚೀನಾ. ವಿಶ್ವದ ಶೇಕಡ ಹದಿನೇಳರಷ್ಟು ಜನಸಂಖ್ಯೆ ಹೊಂದಿರುವ ಭಾರತ, ವಾಯುಮಾಲಿನ್ಯಕ್ಕೆ ಶೇಕಡ ನಾಲ್ಕಕ್ಕಿಂತಲೂ ಕಡಿಮೆ ಕೊಡುಗೆ ನೀಡುತ್ತಿದೆ. ಅಷ್ಟೇ ಅಲ್ಲ, ಭಾರತ ಮಾಲಿನ್ಯದ ಪ್ರಮಾಣವನ್ನು ಇಳಿಸುತ್ತಲೂ ಇದೆ. ಕಳೆದ ಹದಿನಾಲ್ಕು ವರ್ಷದಲ್ಲಿ ಭಾರತ ಶೇಕಡ ಮೂವತ್ತಮೂರು ಪ್ರತಿಶತ ಇಳಿಸುವಲ್ಲಿಯೂ ಸಫಲವಾಗಿದೆ.

ಹವಾಮಾನ ಬದಲಾವಣೆಯನ್ನು ಗಮನಿಸಿ, ನಿಯಂತ್ರಣಕ್ಕೆ ತರಲು ೧೯೯೨ರಲ್ಲಿ ವಿಶ್ವಸಂಸ್ಥೆ ತನ್ನ ಸದಸ್ಯ ದೇಶಗಳನ್ನೆಲ್ಲ ಸೇರಿಸಿ ಒಂದು ಚೌಕಟ್ಟು ನಿರ್ಮಿಸಿದೆ. ಅದಕ್ಕಾಗಿ ಪ್ರತಿವರ್ಷ ಇಟ್ಞ್ಛಛ್ಟಿಛ್ಞ್ಚಿಛಿ ಟ್ಛ ಠಿeಛಿ PZಠಿಜಿಛಿo (ಇuP) ಸಮ್ಮೇಳನವನ್ನು ಆಯೋಜಿಸುತ್ತಾ ಬಂದಿದೆ. ಈ ವರ್ಷ ಇಪ್ಪತ್ತೆಂಟ ನೆಯ ಸಮಾವೇಶ, ಯುಎಇಯ ದುಬೈನಲ್ಲಿ ಈಗ ನಡೆಯುತ್ತಿದೆ. ಇದರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದಾರೆ. ಕಳೆದ ವರ್ಷ ನಡೆದ ಸಮಾವೇಶದಲ್ಲಿ ಸುಮಾರು ನಲವತ್ತು ಸಾವಿರ ಜನ ಭಾಗವಹಿಸಿದ್ದರಂತೆ. ಈ ವರ್ಷ ಇನ್ನೂರು ದೇಶಗಳಿಂದ ಸುಮಾರು ಎಪ್ಪತ್ತು ಸಾವಿರ ಜನ ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

ಇವರೆಲ್ಲ ಬಂದಿರುವುದು ವಾಯುಮಾಲಿನ್ಯ ನಿಲ್ಲಿಸುವುದು ಹೇಗೆ, ಹವಾಮಾನ ಬದಲಾವಣೆಯನ್ನು ತಡೆಯುವುದು ಹೇಗೆ ಎಂಬ ವಿಷಯದ ಬಗ್ಗೆ ಚರ್ಚಿಸುವುಕ್ಕೆ, ಅದಕ್ಕೆ ಒಂದು ಉಪಾಯ ಕಂಡುಹಿಡಿಯುವುದಕ್ಕೆ. ಆದರೆ ಇವರೆಲ್ಲ ಬಂದಿರುವುದು ನಡೆದುಕೊಂಡಾಗಲಿ, ಸೈಕಲ್ ತುಳಿದುಕೊಂಡಾ ಗಲಿ ಅಲ್ಲ, ಹಾರಲು ಪೆಟ್ರೋಲ್ ಬಳಸುವ ವಿಮಾನದಲ್ಲಿ!

ಕಳೆದ ವರ್ಷ ನಡೆದ ಸಮಾವೇಶದಲ್ಲಿ ಸೇರಿದ ದೇಶಗಳು ಕಲ್ಲಿದ್ದಲಿನ ಬಳಕೆ ಕಡಿಮೆ ಮಾಡಲು ಒಪ್ಪಿದ್ದವು. ಅದು ಎಷ್ಟರ ಮಟ್ಟಿಗೆ ಸಾಧ್ಯವಾಯಿತೋ
ದೇವರೇ ಬಲ್ಲ. ಈ ವರ್ಷ, ಪೆಟ್ರೋಲ್-ಡೀಸೆಲ್ ಬಳಕೆ ಕಮ್ಮಿ ಮಾಡಬೇಕು ಎನ್ನುವುದರ ಕುರಿತು ದುಬೈನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಚರ್ಚೆ
ನಡೆಯುತ್ತಿದೆ. ಹೆಚ್ಚೇನೂ ಅಲ್ಲ, ಯುಎಇ ಪ್ರತಿನಿತ್ಯ ನಾಲ್ಕು ಮಿಲಿಯನ್ ಬ್ಯಾರಲ್ ತೈಲ ಉತ್ಪಾದಿಸುತ್ತಿದೆ. ದೇಶದ ಶೇಕಡ ಮೂವತ್ತೈದರಷ್ಟು ಆದಾಯವು ತೈಲ ಮತ್ತು ಅನಿಲದಿಂದ ಬರುತ್ತದೆ ಎಂದಷ್ಟೇ ಹೇಳುತ್ತೇನೆ.

ಮುಂದಿನದ್ದನ್ನು ನೀವೇ ಊಹಿಸಿಕೊಳ್ಳಿ. ಮುಂದಿನ ವರ್ಷ ಈ ಸಮಾವೇಶ ಪೂರ್ವ ಯುರೋಪ್‌ನಲ್ಲಿ ಆಗಬೇಕಿತ್ತು. ರಷ್ಯಾ-ಉಕ್ರೇನ್ ಯುದ್ಧದಿಂದ ಅದು ಸಂಭವ ಎಂದು ಅನಿಸುತ್ತಿಲ್ಲ. ಮೊದಲೆಲ್ಲ ಅಧಿಕಾರಿಗಳು, ಕೆಲವು ಮಂತ್ರಿಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದರು. ಈಗ ಹಾಗಲ್ಲ,
ದೇಶದ ಪ್ರಧಾನಿಗಳು, ಅಧ್ಯಕ್ಷರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದುಬೈನಲ್ಲಿ ನಡೆದ ಸಮಾವೇಶದಲ್ಲಿ ಭಾರತದ ಪ್ರಧಾನಿ ಮೋದಿಯವರು ಮೂವತ್ತ ಮೂರನೆಯ ಸಮಾವೇಶವನ್ನು ಆಯೋಜಿಸಲು ಭಾರತ ಉತ್ಸುಕ ವಾಗಿದೆ ಎಂದು ಹೇಳಿದ್ದಾರೆ. ಅಂದರೆ ಇನ್ನೂ ಐದು ವರ್ಷ ಬಾಕಿ ಇದೆ. ಅಲ್ಲಿಯವರೆಗೆ ಎಲ್ಲ ದೇಶಗಳೂ ಸೇರಿ ಇದನ್ನು ಗಂಭೀರವಾಗಿ ಪರಿಗಣಿಸಿ, ಮಾಲಿನ್ಯದ ತಡೆ ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಣಕ್ಕೆ ಒಳಪಡಿಸಿದರೆ ಒಳ್ಳೆಯದು.

ಇಲ್ಲವಾದರೆ ಎಲ್ಲದರಂತೆ ಅದೂ ಒಂದು ವೇದಿಕೆಯ ಭಾಷಣವಾಗಿ, ಚರ್ಚೆಯ ವಿಷಯವಾಗಿ ಉಳಿಯುತ್ತದೆಯೇ ವಿನಾ ಇನ್ನೇನೂ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಉಳಿದ ದೇಶಗಳು ಭಾರತವನ್ನು ಮಾದರಿಯಾಗಿ ಪರಿಗಣಿಸಬಹುದು. ಗೃಹ ನಿರ್ಮಾಣಕ್ಕೆ ಸರಿಯಾದ ಗ್ರಹವೇ ಇಲ್ಲದಿದ್ದರೆ ನಿರ್ಮಾಣ ಮಾಡುವುದಾದರೂ ಎಲ್ಲಿ? ಒಂದು ವೇಳೆ ಅದೇ ಮಲಿನವಾದ ಪರಿಸರದಲ್ಲಿ ಮನೆ ನಿರ್ಮಿಸಿಕೊಂಡರೆ ಆ ಮನೆ ಕೇವಲ ಕಟ್ಟಡವಾಗಿ ಉಳಿಯುತ್ತದೆಯೇ ವಿನಾ ಮನೆಯಾಗುವುದಿಲ್ಲ. ಈ ಮಾತು ಒಬ್ಬ ಮನುಷ್ಯನಿಗೆ ಎಷ್ಟು ಅನ್ವಯವೋ, ಒಂದು ದೇಶಕ್ಕೂ ಅಷ್ಟೇ ಅನ್ವಯ, ಇರುವ ಒಂದೇ ಒಂದು ಭೂಮಿಗೂ ಅನ್ವಯ. ಮನುಷ್ಯನ ಬಹುತೇಕ ಆ ಗಳನ್ನು ಈಡೇರಿಸುವ ಸತ್ವ ಭೂಮಿತಾಯಿಯಲ್ಲಿದೆ.

ಆದರೆ ಮಾನವನ ಅತಿಯಾದ ದುರಾಸೆಯನ್ನು ಈಡೇರಿಸುವ ವಿಷಯದಲ್ಲಿ ಭೂಸಿರಿಯೂ ಬಡವಳು. ಹವಾಮಾನ ಬದಲಾವಣೆ ಅಥವಾ ಹೆಚ್ಚುತ್ತಿರುವ
ಜಾಗತಿಕ ತಾಪಮಾನವನ್ನು ಸಾಕ್ಷೀಕರಿಸುತ್ತಿರುವ ಮೊದಲ ಪೀಳಿಗೆಯವರು ನಾವು. ಅದರ ಕುರಿತು ಚಿಂತಿಸಿ, ಅದನ್ನು ಹದ್ದುಬಸ್ತಿಗೆ ತರಬಹುದಾದ
ಕೊನೆಯ ಪೀಳಿಗೆಯವರೂ ನಾವೇ! ಮನುಕುಲ ಮತ್ತು ಭೂಮಾತೆಯ ನಡುವಿನ ಹಸನಾದ ಸಂಬಂಧ ವನ್ನು ಮಧುರಗಾಥೆಯನ್ನಾಗಿ ಉಳಿಸಿಕೊಳ್ಳು ವುದು,  ಅಥವಾ ಭೂಮಾತೆಯ ಹಸುರಿನ ವೈಭವ ಮಸಣ ವಾಗಿ ಮಣ್ಣಿನೊಂದಿಗೆ ಮಣ್ಣಾಗಿಸುವುದು, ಎರಡೂ ಆಯ್ಕೆಗಳು ನಮ್ಮ ಕೈಯಲ್ಲೇ ಇವೆ. ನಮ್ಮ ವಾತಾವರಣ ಬದಲಾಗುತ್ತಿದೆ, ಈಗ ನಾವೂ ಬದಲಾಗುವ ಸಮಯ ಬಂದಿದೆ!

Leave a Reply

Your email address will not be published. Required fields are marked *