Saturday, 23rd November 2024

ದೇವಾಲಯ ಉಳಿಸಬೇಕಾದ ಪರಿಸ್ಥಿತಿ

ವೀಕೆಂಡ್ ವಿತ್ ಮೋಹನ್

camohanbn@gmail.com

ದೇವಸ್ಥಾನಗಳೆಂದರೆ ಥಟ್ಟನೆ ನೆನಪಾಗುವುದು ತಮಿಳುನಾಡು, ಮನೆಗಳಲ್ಲಿ ದಕ್ಷಿಣ ಭಾರತದ ತೀರ್ಥಯಾತ್ರೆಯೆಂದರೆ ಸಾಕು ತಮಿಳುನಾಡನ್ನು ನೆನಪಿಸಿಕೊಳ್ಳುತ್ತಾರೆ. ದಕ್ಷಿಣದ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಉತ್ತರದ ಕಂಚಿ ಕಾಮಾಕ್ಷಿಯವರೆಗೂ ನೂರಾರು ದೇವಸ್ಥಾನಗಳಿವೆ. ಇತ್ತ ಪೂರ್ವದಲ್ಲಿ ‘ತಂಜಾವೂರಿನ ಬೃಹದೇಶ್ವರ’ ದೇವಸ್ಥಾನದಿಂದ ಶುರುವಾಗಿ, ಪಶ್ಚಿಮದಲ್ಲಿನ ’ಭವಾನಿ’ಯ ದೇವಸ್ಥಾನದವರೆಗೂ ನೂರಾರು ಪುಣ್ಯಕ್ಷೇತ್ರ ಗಳಿವೆ.

ಇಡೀ ತಮಿಳುನಾಡಿನ ದೇವಸ್ಥಾನಗಳನ್ನು ಕೇವಲ ಪ್ರವೇಶಿಸಿ ದರ್ಶನ ಮಾಡಿ ಬರಲು ಕನಿಷ್ಠವೆಂದರೂ ಒಂದು ವರ್ಷವಾದರೂ ಬೇಕು ಎಂದರೆ ಅತಿಶಯೋಕ್ತಿಯಲ್ಲ. ಪ್ರತಿಯೊಂದು ದೇವಸ್ಥಾನವೂ ಬೃಹದಾಕಾರದ ಪ್ರಾಂಗಣಗಳನ್ನು ಹೊಂದಿದೆ. ತಮಿಳುನಾಡಿನ ಪ್ರಮುಖ ದೇವಸ್ಥಾನಗಳಿಗೆ ನಾಲ್ಕು ದಿಕ್ಕುಗಳಲ್ಲಿ ಪ್ರವೇಶ ಮಂದಿರಗಳನ್ನು ನೂರಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ‘ಪಾಂಡ್ಯರು’ ‘ಚೋಳರ’ ಆಡಳಿತದಲ್ಲಿ ತಮಿಳು ನಾಡಿನ ಪ್ರಮುಖ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ.

ಪ್ರತಿಯೊಂದು ದೇವಸ್ಥಾನವು ತನ್ನದೇ ಆದಂತಹ ಸುದೀರ್ಘ ಇತಿಹಾಸವನ್ನು ಹೊಂದಿದೆ. ಸಾವಿರಾರು ವರ್ಷ ಗಳ ಕೆಳಗೆ ತಮಿಳುನಾಡಿನಲ್ಲಿ ಹಿಂದೂ ಧರ್ಮವು ಎಷ್ಟು ಆಳವಾಗಿ ಬೇರೂರಿತ್ತೆಂಬುದಕ್ಕೆ ಅಲ್ಲಿರುವ ದೇವಾಲಯಗಳೇ ಸಾಕ್ಷಿ. ತಮಿಳುನಾಡಿನ ಪ್ರತಿಯೊಂದು ದೇವಸ್ಥಾನದಲ್ಲಿ ಇಂದಿಗೂ ಸಹ ನೂರಾರು ವರ್ಷಗಳ ಹಿಂದೆ ಅಲ್ಲಿನ ರಾಜರು ಆಚರಿಸಿಕೊಂಡು ಬಂದಂತಹ ಸನಾತನ ಧರ್ಮದ ಕುರುಹುಗಳಿವೆ. ಪ್ರತಿ ದೇವಾಲಯದ ಕಂಬದ ಮೇಲಿನ ಕೆತ್ತನೆಗಳ ಮೇಲೆ ಹಿಂದೂ ಧರ್ಮದ ಆಚರಣೆಗಳ ಕುರುಹುಗಳಿವೆ.

ಒಂದು ಅಂದಾಜಿನ ಪ್ರಕಾರ ತಮಿಳುನಾಡಿನಲ್ಲಿ ಸುಮಾರು ೩೩,೦೦೦ ಪುರಾತನ ದೇಗುಲಗಳಿವೆ. ಇವುಗಳಲ್ಲಿ ಬಹುತೇಕ ದೇವಾಲಯಗಳು ೮೦೦ ರಿಂದ ೫೦೦೦ ವರ್ಷಗಳ ಹಿಂದೆ ನಿರ್ಮಿಸಿರುವುದು. ತಮಿಳುನಾಡಿನ ದೇವಸ್ಥಾನಗಳಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಿಸಿದ ಸುಮಾರು ೨೩೫೯ ಕಲ್ಯಾಣಿ ಗಳಿವೆ. ಆದರೆ ೧೯೫೦ರ ದಶಕದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಹೋರಾಟದಲ್ಲಿ ಬ್ರಾಹ್ಮಣತ್ವವನ್ನು ದಿಕ್ಕರಿಸಲಾಯಿತು. ಹಿಂದೂ ಧರ್ಮದ ಆಚರಣೆಗಳನ್ನು ಕೇವಲ ಮೂಡನಂಭಿಕೆ ಎಂದು ಬಿಂಬಿಸಲಾಯಿತು. ಇಡೀ ದಕ್ಷಿಣ ಭಾರತ ದ್ರಾವಿಡರ ನಾಡು, ಉತ್ತರ ಭಾರತದಿಂದ ಬಂದಂತಹ ಜನರು ದ್ರಾವಿಡರ ಮೇಲೆ ಆಕ್ರಮಣ ಮಾಡಿ ಹಿಂದೂ ಧರ್ಮವನ್ನು ಹೇರಿದರೆಂಬ ಚಳುವಳಿ ಶುರುವಾಯಿತು.

ಬ್ರಾಹ್ಮಣರು ಹಾಗು ಉತ್ತರ ಭಾರತದವರು ಆರ್ಯರು, ದಕ್ಷಿಣ ಭಾರತದ ದ್ರಾವಿಡ ನಾಡಿನ ಮೇಲೆ ತಮ್ಮ ಧರ್ಮವನ್ನು ಬಲವಂತವಾಗಿ ಹೇರಿದರೆಂಬ ಸುಳ್ಳು ಇತಿಹಾಸವನ್ನು ಹೇಳಲಾಯಿತು. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಪ್ರಾರಂಭವಾಗುವುದರ ಹಿಂದೆ ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರ ವಿತ್ತು. ಪಾಶ್ಚಿಮಾತ್ಯ ದೇಶಗಳಿಂದ ಬಂದಂತಹ ಕ್ರಿಶ್ಚಿಯನ್ ಧರ್ಮಗುರುಗಳಿಗೆ, ಬ್ರಿಟನ್ನಿನ ರಾಣಿ ಭಾರತ ದಲ್ಲಿ ಮತಾಂತರ ಮಾಡಲು ನೂರಾರು ಕೋಟಿ ಹಣ ನೀಡುತ್ತಿದ್ದರು. ಮತಾಂತರಕ್ಕೆ ತಮಿಳುನಾಡಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹೆಚ್ಚಿನ ಸಮಯ ಕಳೆದರು. ಹಿಂದೂ ಧರ್ಮಕ್ಕೆ ಹೋಲುವ ಕ್ರಿಶ್ಚಿಯನ್ ಆಚರಣೆಗಳ ಮೂಲ ಬೈಬಲ್ ಎಂದು ಹೇಳುವ ಮೂಲಕ ಜನರ ಕಣ್ಣಿಗೆ ಮಂಕು ಬೂದಿ ಎರಚಿದ್ದರು. ಹಿಂದೂ ಧರ್ಮದ ಹಲವು ಆಚರಣೆ ಗಳು ‘ಬೈಬಲ’ ಮೂಲದಿಂದ ಬಂದಿವೆಯೆಂದು ಹೇಳಿ ಜನರ ತಲೆಕೆಡಿಸಿದರು.

ಶ್ರೀ ಕೃಷ್ಣನ ಮತ್ತೊಂದು ಅವತಾರವೇ ‘ಯೇಸು’ವೆಂದು ಹೇಳಿದರು, ಶ್ರೀ ಕೃಷ್ಣನ ‘ಗೀತೋ ಪದೇಶ’ದ ರೀತಿಯಲ್ಲಿ ಯೇಸುವೂ ಸಹ ಜೀವನದ ನೀತಿ
ಪಾಠಗಳನ್ನು ಹೇಳಿದ್ದನೆಂದರು. ವೇದಗಳ ಮೂಲ ‘ಬೈಬಲ್’ ಎಂದೆಲ್ಲ ಸುಳ್ಳು ಹೇಳಿ ತಮಿಳುನಾಡಿನ ಜನರ ತಲೆಯಲ್ಲಿ ಹಿಂದೂ ಧರ್ಮದ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಿಸಿದರು. ಇಂದಿಗೂ ಕನ್ಯಾಕುಮಾರಿ ಜಿಯಲ್ಲಿ ‘ವೇತ ಕೋಯಲ’ಗಳಿವೆ. ತಮಿಳುನಾಡಿನ ಜನ ಹಿಂದೂ ಧರ್ಮದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಪ್ರಾರಂಭವಾದಾಗ, ದ್ರಾವಿಡರ ಹೋರಾಟ ಮುನ್ನೆಲೆಗೆ ಬಂದಿತು.

ಬ್ರಾಹ್ಮಣರನ್ನು ದ್ರಾವಿಡರ ಶತ್ರುಗಳಂತೆ ಬಿಂಬಿಸಿ ದ್ರಾವಿಡ ಹಾಗು ಬ್ರಾಹ್ಮಣರ ನಡುವೆ ದೊಡ್ಡದೊಂದು ಕಂದಕವನ್ನೇ ಸೃಷ್ಟಿಸಲಾಯಿತು. ಆದರೆ ಬ್ರಾಹ್ಮಣನು ಪೂಜಿಸುವ ಯಾವ ದೇವರೂ ಬ್ರಾಹ್ಮಣನಲ್ಲ. ‘ಶ್ರೀ ಕೃಷ್ಣ’ ಯಾದವ ಕುಲದಲ್ಲಿ ಬೆಳೆದವನು. ‘ಶ್ರೀ ರಾಮಚಂದ್ರ’ ಕ್ಷತ್ರಿಯ ಕುಲದಲ್ಲಿ ಹುಟ್ಟಿದವನು, ‘ರಾವಣ’ ಬ್ರಾಹ್ಮಣನಾದರೂ ಅವನನ್ನು ಪೂಜಿಸುವುದಿಲ್ಲ, ಸ್ಮಶಾನದಲ್ಲಿ ಶಿವ ನೆಲೆಸಿರುತ್ತಾನೆಂದರೂ ಹೇಳಿದರೂ ಬ್ರಾಹ್ಮಣರು ಅವನನ್ನು ಪೂಜಿಸುತ್ತಾರೆ.

ಅಷ್ಟೇ ಏಕೆ ವೇದ ಗಳನ್ನು ಬರೆದ ‘ವ್ಯಾಸರು’ ಬ್ರಾಹ್ಮಣರಲ್ಲ, ‘ರಾಮಾಯಣ’ ಬರೆದ ‘ವಾಲ್ಮೀಕಿ’ ಒಬ್ಬ ಬೇಡ. ‘ಭಾರತದ ಸಂವಿಧಾನದ ಪಿತಾಮಹ’ ‘ಸಾಮಾಜಿಕ ಕ್ರಾಂತಿ ಸೂರ್ಯ’ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರು. ಇಷ್ಟೆ ಉದಾಹರಣೆಗಳು ಕಣ್ಣ ಮುಂದಿದ್ದರೂ ಸಹ ಕ್ರಿಶ್ಚಿಯನ್ ಮಿಷಿ‘ನರಿ’ಗಳ
ಸತತ ಹಣ ಬಲದ ಪ್ರಯತ್ನದಿಂದಾಗಿ ತಮಿಳುನಾಡಿನಲ್ಲಿ ಬ್ರಾಹ್ಮಣರು ಹಾಗು ದ್ರಾವಿಡರೆಂದು ಎರಡು ಬಾಗ ಮಾಡಲಾಯಿತು.

ಕ್ರಿಶ್ಚಿಯನ್ ಮಿಷನರಿಗಳ ಹುನ್ನಾರದಿಂದ ಶುರು ವಾದಂತಹ ದ್ರಾವಿಡ ಚಳುವಳಿಯನ್ನು ಹೈಜಾಕ್ ಮಾಡಿದ ರಾಜಕೀಯ ಪಕ್ಷಗಳು ತಮಿಳುನಾಡಿನಲ್ಲಿ ದ್ರಾವಿಡ ಸಿದ್ಧಾಂತ ವನ್ನೇ ಬಂಡವಾಳವನ್ನಾಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿದವು. ಕರುಣಾನಿಧಿ ನೇತೃತ್ವದಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ, ಎಂ.ಜಿ.ಆರ್ ನೇತೃತ್ವದಲ್ಲಿ ಎಐಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಎಂ.ಜಿ.ಆರ್ ನಿಧನದ ನಂತರ ಜಯಲಲಿತ ಪಕ್ಷವನ್ನು ಮುನ್ನಡೆಸಿ ಕೊಂಡು ಹೋಗಿ ಮಾಡಿದ್ದೂ ಮತ್ತದೇ ದ್ರಾವಿಡ ರಾಜಕಾರಣ. ಹಿಂದೂ ಧರ್ಮದ ಸಾವಿರಾರು ದೇವಸ್ಥಾನಗಳ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಮಾಡಿದ ಅಪಮಾನಗಳು ಒಂದೆರಡಲ್ಲ.

ಜನಿವಾರ ಧರಿಸಿದವರನ್ನು ನೋಡಿ ನಗುವಂತೆ ಮಾಡಲಾಯಿತು, ದೇವಸ್ಥಾನಗಳನ್ನು ಸರಕಾರದ ಸುಪರ್ದಿಗೆ ತೆಗೆದು ಕೊಳ್ಳಲಾಯಿತು. ಆದರೆ ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಶುರುವಾದಂತಹ ದ್ರಾವಿಡ ರಾಜಕಾರಣದಲ್ಲಿ ಬಳಕೆಯಾದದ್ದು ಹಿಂದೂ ದೇವಸ್ಥಾನಗಳ ಹಣ. ತಮಿಳುನಾಡಿನ
ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಚುನಾಯಿತವಾಗುತ್ತವೆ. ದೇವಸ್ಥಾನದ ಆಡಳಿತ ಮಂಡಳಿ ಯನ್ನು ಸರಕಾರಗಳು ನಿಯಂತ್ರಿಸುತ್ತವೆ.

ಇಶಾ ಫೌಂಡೇಶನ್‌ನ ಸಂಸ್ಥಾಪಕ ಜಗ್ಗಿ ವಾಸುದೇವ್ ‘ಫ್ರೀ ತಮಿಳುನಾಡು ಟೆಂಪಲ್ಸ’ಎಂಬ ಅಭಿಯಾನವನ್ನು ಶುರುಮಾಡಿದ್ದರು. ದೇವಸ್ಥಾನದ ಜಾಗ,
ಒಡವೆ, ಹಣವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸವು ಸುಮಾರು ೩೦೦ ವರ್ಷಗಳ ಕೆಳಗೆ ಬ್ರಿಟಿಷರ ಈ ಇಂಡಿಯಾ ಕಂಪನಿಯಿಂದ ಶುರುವಾಯಿತು. ವಿಪರ್ಯಾಸ ವೆಂದರೆ ಸ್ವಾತಂತ್ರ್ಯ ಬಂದು ೭೪ ವರ್ಷಗಳು ಕಳೆದರೂ ಸಹ ತಮಿಳುನಾಡಿನಲ್ಲಿ ಇಂದಿಗೂ ಅದೇ ಮಾದರಿಯ
ಆಡಳಿತವನ್ನು ಸರಕಾರಗಳು ನಡೆಸಿಕೊಂಡು ಬರುತ್ತಿವೆ.

ದೇವಸ್ಥಾನಗಳನ್ನು ಭಕ್ತರಿಗೆ ನಡೆಸಿಕೊಂಡು ಹೋಗಲು ಬಿಟ್ಟರೆ, ಇತಿಹಾಸದಲ್ಲಿ ಹಾಳಾಗಿರುವ ತಮಿಳುನಾಡಿನ ಹಲವು ದೇವಸ್ಥಾನಗಳನ್ನು ಪುನರು ಜ್ಜೀವನಗೊಳಿಸುವಲ್ಲಿ ಯಶಸ್ವಿಯಾಗಬಹುದು. ದೇವಸ್ಥಾನದಲ್ಲಿನ ಹುಂಡಿಯ ಹಣ, ಚಿನ್ನ, ಪೂರ್ವಜರು ದಾನ ಮಾಡಿದ್ದಂತಹ ಸಾವಿರಾರು ಎಕರೆ ದೇವಸ್ಥಾನದ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದು ಸರಕಾರಗಳು ಹೇಳಿದಂತೆ ದೇವಸ್ಥಾನದ ಆಡಳಿತ ಮಂಡಳಿ ಕೇಳುವಂತೆ ನೋಡಿಕೊಂಡರು. ಭಾರತೀಯ ಸಮಾಜದಲ್ಲಿನ ಅಸ್ಪೃಶ್ಯತೆಯನ್ನೇ ಅಸವನ್ನಾಗಿಸಿಕೊಂಡು ಲಂಡನ್ ಚರ್ಚಿನ ಬಿಷಪ್‌ಗಳ ಮೂಲಕ ಭಾರತದಲ್ಲಿ ದಲಿತರನ್ನು ಹೆಚ್ಚಾಗಿ
ಮತಾಂತರ ಮಾಡಲಾಯಿತು.

ಸ್ವಾತಂತ್ರ್ಯ ಬಂದಮೇಲೂ ಸಹ ತಮಿಳುನಾಡಿನ ಸರಕಾರಗಳು ಅದೇ ಕೆಲಸವನ್ನೇ ಮಾಡಿಕೊಂಡು ಬಂದಿವೆ. ದ್ರಾವಿಡರ ಹೆಸರಿನಲ್ಲಿ ಹಿಂದೂ
ದೇವಸ್ಥಾನಗಳ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮಗಿಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ ಕಣ್ಣಿಗೆ ಕಾಣುವ ದೇವಸ್ಥಾನಗಳ ಪರಿಸ್ಥಿತಿ ಇದಾದರೆ, ಪೂಜೆಯೇ ಮಾಡದೆ ಸುಮಾರು ೧೧,೯೯೯ ದೇವಸ್ಥಾನಗಳು ಪಾಳುಬಿದ್ದಿವೆ. ಸರಕಾರಗಳು ಇದರ ಬಗ್ಗೆ ಇದುವರೆಗೂ
ಗಮನವನ್ನೇ ಹರಿಸಿಲ್ಲ. ಕಳೆದ ೨೫ ವರ್ಷಗಳಲ್ಲಿ ಸುಮಾರು ೧೨೦೦ ಪುರಾತನ ವಿಗ್ರಹಗಳ ಕಳ್ಳಸಾಗಣೆಯಾಗಿವೆ. ೩೭,೦೦೦ ದೇವಸ್ಥಾನಗಳಲ್ಲಿ ಕೇವಲ ಒಬ್ಬ ಪೂಜಾರಿಯಿದ್ದಾನೆ, ಅಂದರೆ ಭಕ್ತರೇ ಇಲ್ಲದ ದೇಗುಲಗಳಿವು. ೩೪,೦೦೦ ದೇವಸ್ಥಾನಗಳು ವರ್ಷಕ್ಕೆ ೧೦,೦೦೦ ರುಪಾಯಿಗಿಂತಲೂ ಕಡಿಮೆ ಆದಾಯ
ದಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿವೆ.

ಮೊದಲಿಗೆ ತಮಿಳುನಾಡಿನಲ್ಲಿ ಕ್ರಿಶ್ಚಿಯನ್ ಮಿಷನರಿ, ಆರ್ಯರು ಹಾಗೂ ಬ್ರಾಹ್ಮಣರ ನಡುವೆ ತಂದಿಟ್ಟು ಬ್ರಾಹ್ಮಣರ ಪರವಾಗಿ ನಿಂತರು. ನಂತರ ಬ್ರಾಹ್ಮಣರು ಹಾಗು ಇತರ ವರ್ಗದವರ ಮಧ್ಯೆ ತಂದಿಟ್ಟು, ದ್ರಾವಿಡರೆಂಬ ಹೊಸ ಧರ್ಮವನ್ನು ಹುಟ್ಟುಹಾಕಿದರು. ಆದರೆ ಆರ್ಯರೆಂಬ ಕಲ್ಪನೆಯೇ ಶುದ್ಧ ಸುಳ್ಳೆಂದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಹಲವು ನಿರಂತರ ಸಂಶೋಧನೆಗಳು ಹೇಳುತ್ತಿವೆ. ಇದೇ ಆರ್ಯರ ಸುಳ್ಳನ್ನು ಬಳಸಿ ಕೊಂಡು ಕ್ರಿಶ್ಚಿಯನ್ ಮಿಷನರಿಗಳು ಉತ್ತರ ಭಾರತ, ದಕ್ಷಿಣ ಭಾರತವೆಂಬ ಎರಡು ಭಾಗಗಳನ್ನಾಗಿ ಮಾಡಲು ಪ್ರಯತ್ನಿಸಿ, ತಮಿಳುನಾಡಿನಲ್ಲಿ ದ್ರಾವಿಡರ ಸಿದ್ದಾಂತವನ್ನು ಪೋಷಿಸತೊಡಗಿದರು.

ಹಿಂದೂ ಧರ್ಮದ ದೇವರ ವಿಷಯದಲ್ಲೂ ಸಹ ಉತ್ತರ ಭಾರತದ ದೇವರುಗಳನ್ನು ದಕ್ಷಿಣ ಭಾರತದ ಪೂಜಿಸುತ್ತಾರೆಂದು ಹೇಳಿದರು. ಶಿವ, ರಾಮ, ಕೃಷ್ಣ ಎಲ್ಲರೂ ಉತ್ತರ ಭಾರತದವರು. ಅಲ್ಲಿ ಹುಟ್ಟಿದ ದೇವರುಗಳನ್ನು ದಕ್ಷಿಣ ಭಾರತದ ದೇವಸ್ಥಾನದಲ್ಲಿ ಪೂಜಿಸಲಾಗುತ್ತಿಯೆಂದು ಹೇಳಿದರು.
ಶ್ರೀರಾಮನ ಕುರುಹುಗಳು ಅಯೋದ್ಯೆಯಿಂದ ಹಿಡಿದು, ಶ್ರೀಲಂಕಾದವರೆಗೂ ಇದೆ. ಹಾಗಾದರೆ ಶ್ರೀ ರಾಮನು ದಕ್ಷಿಣಕ್ಕೆ ಬಂದಿರಲಿಲ್ಲವೇ? ಹನುಮಂತ ಹುಟ್ಟಿದ ಕ್ಷೇತ್ರ ’ಅಂಜನಾದ್ರಿ’ ಬೆಟ್ಟವಿರುವುದು ಕರ್ನಾಟಕದ ಕೊಪ್ಪಳದಲ್ಲಿ, ಹಾಗಾದರೆ ಹಿಂದೂಗಳು ಪೂಜಿಸುವ ಹನುಮಂತನು ದಕ್ಷಿಣದವನಲ್ಲವೇ? ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಜನ ಇಂದಿಗೂ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸಿಕೊಂಡು ರಾಜಕೀಯ ಮಾಡುವ ಪಕ್ಷಕ್ಕೆ
ಮತಹಾಕಿ ಗೆಲ್ಲಿಸಿಕೊಂಡು ಬಂದಿದ್ದಾರೆ.

ಅವರಿಗ್ಯಾರಿಗೂ ತಮ್ಮ ಧರ್ಮದ ಮೇಲೆ ಆಗಿರುವ ದಾಳಿಯ ಅರಿವೇ ಇಲ್ಲ. ತಮಿಳುನಾಡಿನ ರಾಜರು ಸಾವಿರಾರು ವರ್ಷಗಳ ಹಿಂದೆ ಕಟ್ಟಿರುವ ದೇವಸ್ಥಾನಗಳು ಹಿಂದೂ ಧರ್ಮದ ಆಚರಣೆಗಳನ್ನು ಸಾರಿ ಸಾರಿ ಹೇಳುವಾಗ, ಹಿಂದೂ ಧರ್ಮದ ಆಚರಣೆಗಳನ್ನೇ ನಂಬದ ದ್ರಾವಿಡರ ಸಿದ್ದಾಂತ
ಅಲ್ಲಿ ಉದ್ಭವವಾಯಿತು. ತಮಿಳುನಾಡಿನ ದೇವಸ್ಥಾನಗಳನ್ನು ಅಲ್ಲಿನ ಸರ್ಕಾರದ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳದಿದ್ದರೆ ಇನ್ನೊಂದು ಶತಮಾನದಲ್ಲಿ ಸಾವಿರಾರು ದೇಗುಲಗಳು ನಶಿಸಿಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.