Thursday, 12th December 2024

ಭಯೋತ್ಪಾದಕರು; ಯಾರಿಗೆ ಹೇಳಿದಿರಿ !?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಸೋತು ನಿರ್ಣಾಮವಾಗುತ್ತಿರುವ ಪಕ್ಷದ ಮುಖಂಡರು ಹೇಗೆ ನಡೆದುಕೊಳ್ಳಬೇಕು ಹೇಳಿ? ಅಯ್ಯೋ ನಮ್ಮ ಪಕ್ಷಕ್ಕೆ ಇಂಥ ಗತಿ ಬಂತಲ್ಲ, ನಮ್ಮದೇನು ತಪ್ಪಾಗಿದೆ, ಯಾಕೆ ನಮಗೆ ಹೀಗೆಲ್ಲಾ ಸೋಲಾಗುತ್ತಿದೆ ಎಂದು ಪಶ್ಚಾತ್ತಾಪ ಪಟ್ಟು ಆತ್ಮಾವಲೋಕನ ಮಾಡಿಕೊಳ್ಳುವುದು ಲೋಕರೂಢಿ.

ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದು ಅತಿಯಾದರೆ ಅಧೋಗತಿಯಾಗುತ್ತದೆ, ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಆಗುತ್ತದೆ. ರಾಜನೊಬ್ಬ ಜನರಿಂದ ತಿರಸ್ಕರಿಸಲ್ಪಟ್ಟರೆ ಆತ ಪ್ರಜೆಗಳಿಗೆ ಶರಣಾಗಿ ಅರಮನೆ ಬಿಟ್ಟು ತನ್ನ ಸೋಲನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರಜೆ ಗಳೊಂದಿಗೆ ಜೀವಿಸಲಾರಂಭಿಸಿ ಮತ್ತೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡು ಅರಮನೆ ಪ್ರವೇಶಿಸಲು ಯತ್ನಿಸುತ್ತಾನೆ.

ಇಲ್ಲವಾದರೆ ರಾಜ್ಯ ತೊರೆದು ಗಡಿಪಾರಾಗುತ್ತಾನೆ. ಆದರೆ ಅದೇ ರಾಜನೊಬ್ಬ ಪ್ರಜೆಗಳ ವಿಶ್ವಾಸ ಗಳಿಸಿಕೊಂಡು ರಾಜನಾಗುವುದನ್ನು ಬಿಟ್ಟು ಅದೇ ರಾಜ್ಯದೊಳಗೆ ಮತಿಹೀನನಾಗಿ ತನ್ನ ಪ್ರಜೆಗಳ ಕೆಂಗಣ್ಣಿಗೆ ಗುರಿಯಾಗಿ ಅಸಹನೆ ಸೃಷ್ಟಿಸಿ ಅವಿವೇಕಿಯಂತೆ ಮೆರೆದು ತನ್ನದೇ ರಾಜ್ಯದಲ್ಲಿ ಖಳನಾಯಕನಾದರೆ ಪ್ರಜೆಗಳೇ ಕಲ್ಲು ಹೊಡೆದು ಊರಾಚೆ ಅಟ್ಟುತ್ತಾರೆ. ಮುಂದೆ ಸಮರ್ಥನೊಬ್ಬ ರಾಜನಾಗಿ ಸಾಮ್ರಾಜ್ಯ ಕಟ್ಟಿ ಅದೇ ಪ್ರಜೆಗಳ ವಿಶ್ವಾಸಗಳಿಸಿ ರಾಜನಾಗುತ್ತಾನೆ.

ಈ ಸನ್ನಿವೇಶ ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸುತ್ತದೆ. ಒಂದು ಕಾಲದಲ್ಲಿ ದೇಶವೆಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ದೇಶ ಎಂಬಂತಿತ್ತು. ಆಗೆಲ್ಲಾ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂಬ ನೀತಿಯ ಅವಧಿಯಲ್ಲಿ ಮೆರೆಯುತಿತ್ತು. ಅದು ಈಗ ಮಿತಿ
ಅತಿಯಾದಾಗ ಅಧೋಗತಿಯಾಗುತ್ತದೆ ಎಂಬ ಫಲಿತಾಂಶದ ದೃಷ್ಟಾಂತಕ್ಕೆ ಬಂದು ತಲುಪಿದೆ. ಸೋಲು ಗೆಲುವು ಸಹಜ ಆದರೆ ದೇಶಾದ್ಯಂತ ಸೋತು ಸುಟ್ಟುಹೋಗುತ್ತಿರುವ ಕಾಂಗ್ರೆಸ್ ಪಕ್ಷದ ದರಿದ್ರವೇನೆಂದರೆ ಸೋಲುತಿದ್ದರೂ ಮುಂದೊಂದು ದಿನ ಗೆಲ್ಲುವ ನಂಬಿಕೆ ವಿಶ್ವಾಸದ ಅವಕಾಶವನ್ನೇ ಕಳೆದುಕೊಳ್ಳುತ್ತಿದೆ.

ಇದಕ್ಕೆ ಕಾರಣ ಪ್ರತಿಸ್ಪರ್ಧಿ ಪಕ್ಷಗಳಲ್ಲ, ವಿರೋಧ ಪಕ್ಷಗಳೂ ಅಲ್ಲ. ಸಾಕ್ಷಾತ್ ಅದರ ಒಳಗೇ ಇರುವ ರೋಗಾಣುವಿನಂಥ ನಾಯಕರು
ಪಿತಪಿತ ಕೊಳೆಯುವಂತೆ ಹುಟ್ಟಿಕೊಂಡು ಗ್ಯಾಂಗ್ರಿನ್ ತಗುಲಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಪಂಜಾಬ್‌ನಲ್ಲಿ ಸಿಧು ಎಂಬ ಯಡವಟ್ಟು ಮನುಷ್ಯ ಯಾವ ಮಟ್ಟದಲ್ಲಿ ಕಾಂಗ್ರೆಸ್‌ನ್ನು ನೆಲಸಮ ಮಾಡಿದನೆಂದರೆ ದಶಕಗಳ ಕಾಲ ಅಧಿಕಾರದಲ್ಲಿದ್ದ ಆ ಪಕ್ಷ ಸ್ವತಂತ್ರ ಅಭ್ಯರ್ಥಿಗಳಿಗಿಂತಲೂ ಹೀನಾಯ ಸೋಲುಂಡಿತು. ಈಗ ಕರ್ನಾಟಕದ ಮಂದಿ ಮಾತಾಡಿಕೊಳ್ಳುತ್ತಿರುವುದೇನೆಂದರೆ ಅಂಥ ಸಿಧುಗಳು ನಮ್ಮ ರಾಜ್ಯದಲ್ಲೂ ಅನೇಕರಿದ್ದಾರೆಂದು ಲೆಕ್ಕ ಹಾಕತೊಡಗಿದ್ದಾರೆ.

ಅಲ್ಲಾ, ಸೋತು ನಿರ್ಣಾಮವಾಗುತ್ತಿರುವ ಪಕ್ಷದ ಮುಖಂಡರು ಹೇಗೆ ನಡೆದುಕೊಳ್ಳಬೇಕು ಹೇಳಿ? ಅಯ್ಯೋ ನಮ್ಮ ಪಕ್ಷಕ್ಕೆ ಇಂಥ ಗತಿ ಬಂತಲ್ಲ, ಜನ ಯಾಕೆ ನಮ್ಮನ್ನು ಇಂಥ ಗತಿಗೆ ದೂಡುತ್ತಿದ್ದಾರೆ, ನಮ್ಮದೇನು ತಪ್ಪಾಗಿದೆ, ಯಾಕೆ ನಮಗೆ ಹೀಗೆಲ್ಲಾ ಸೋಲಾಗುತ್ತಿದೆ ಎಂದು ಪಶ್ಚಾತ್ತಾಪ ಪಟ್ಟು ಆತ್ಮಾವಲೋಕನ ಮಾಡಿಕೊಳ್ಳುವುದು ಲೋಕರೂಢಿ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ನಡೆದುಕೊಳ್ಳು ತ್ತಿರುವ ರೀತಿಯನ್ನು ನೋಡುತ್ತಿದ್ದರೆ ಅಯೋಧ್ಯೆಯ ಶ್ರೀರಾಮನ ದೇವಾಲಯವನ್ನು ಕೆಡವಿ ನೆಲಸಮ ಮಾಡಿ ಅದರ ಮೇಲೆ ಮತ್ತೆ ಬಾಬರಿ ಮಸೀದಿ ಕಟ್ಟುತ್ತಿರುವಂತೆ ಭಾಸವಾಗುತ್ತಿದೆ.

ಒಬ್ಬೊಬ್ಬರ ಕೈಯಲ್ಲೂ ಗಡಪಾರಿ ಗುದ್ದಲಿ ಪಿಕಾಸಿಯಂಥ ಆಯುಧಗಳು ಬಾಯಲ್ಲಿ ಬರುತ್ತಿರುವ ಹೇಳಿಕೆಗಳಾಗಿ ಝಳಪಿಸುತ್ತಿದೆ.
ಇವರ ಮಾತುಗಳನ್ನು ಯಾರು ಯಾರಿಗೆ ಹೇಳಿದರು ಎಂದು ಪ್ರಶ್ನೆಗಳನ್ನು ಹಾಕುತ್ತಾ ಹೋದರೆ ಇವರುಗಳನ್ನು ಹೊಂದಿಸಿ ಬರೆಯಲೇ ಆಗದಂಥ ಸ್ಥಿತಿ ತಲುಪುತ್ತಿದ್ದಾರೆ. ಸಮಾನತೆಯೇ ಸುಪ್ರಭಾತ ಎನ್ನುತ್ತಾ, ಸಮಾನತೆಯ ಭಜನೆ ಮಾಡುತ್ತೇವೆ ಎನ್ನುತ್ತಲೇ ಬಂದ ಕಾಂಗ್ರೆಸ್ ಪಕ್ಷ ಮಾಡಿಕೊಂಡು ಬಂದಿದ್ದು ಪರಿಶುದ್ದ ಆಜಾನ್ ಮಾತ್ರ. ಅವರ ಸಮಾನತೆಯ ದ್ಯೋತಕಗಳನ್ನೇ ನೋಡಿ, ದಲಿತರೇ
ಪಕ್ಷದ ಆಸ್ತಿ ಎನ್ನುತ್ತಾರೆ. ಆದರೆ ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟವರ ಅಟ್ಟಹಾಸವನ್ನು ಮಟ್ಟಹಾಕಿ ಎನ್ನುವುದಿಲ್ಲ.

ಸಂವಿಧಾನ, ಕಾನೂನು, ಸಮಾಜ ಎನ್ನುತ್ತಾರೆ ಆದರೆ ಅದನ್ನು ಕಾಯುವ ಪೊಲೀಸರ ಮೇಲೆ, ಪೊಲೀಸ್ ಠಾಣೆಯ ಮೇಲೆ ದಾಳಿ
ಮಾಡಿದವರನ್ನು ಖಂಡಿಸಿ ಪ್ರತಿಭಟಿಸುವುದಿಲ್ಲ. ಸಂವಿಧಾನ ಕಾನೂನು ಬಾಹಿರವಾಗಿ ಹಿಜಾಬ್ ಬೇಕೆನ್ನುವವರಿಗೆ ಪಾಠ ಹೇಳುವುದಿಲ್ಲ. ಆದರೆ ಹಿಜಾಬ್ ಪ್ರತಿಯಾಗಿ ಕೇಸರಿ ಶಾಲು ಬಂದಾಗ ಅದಕ್ಕೆ ಕೆಸರು ಮೆತ್ತಿಸಲು ಯತ್ನಿಸುತ್ತಾರೆ. ದೇಶದ ಕಾನೂನಿನ ವಿರುದ್ಧ ದಂಗೆ ಎದ್ದು ಪ್ರತಿಭಟಿಸಿ ಗೋಲಿಬಾರ್‌ನಿಂದ ಮೃತರಾದವರ ಮನೆಗೆ ತೆರಳಿ ಕಣ್ಣೀರು ಸುರಿಸಿ ಹಣಹರಿಸುತ್ತಾರೆ. ಆದರೆ ದೇಶಭಕ್ತ ಯುವಕರು ಧರ್ಮಾಂಧರಿಂದ ಹತ್ಯೆಯಾದಾಗ ಬೀದಿನಾಯಿ ಸತ್ತಿರುವಂತೆ ಸುಮ್ಮನಿರುತ್ತಾರೆ.

ಮಾತೆತ್ತಿದರೆ ಸಂವಿಧಾನ ನ್ಯಾಯಾಲಯ ಎನ್ನುತ್ತಾರೆ. ಆದರೆ ಅದರ ವಿರುದ್ಧವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದರೆ ಅದು ಅವರ ಹಕ್ಕು ಎಂದು ಹೊಸ ನೀತಿ ಹೇಳುತ್ತಾರೆ. ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ಕೇಳಿದರೆ ಮಂದಿರ ನಿರ್ಮಾಣವೇ ಅಕ್ರಮ ಎಂದು ಪರಮೋಚ್ಚ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸುತ್ತಾರೆ. ಸಮಾಜದಲ್ಲಿ ಮಚ್ಚು ಲಾಂಗು ಹಿಡಿದು, ಕಲ್ಲುಗಳನ್ನು ಸಂಗ್ರಹಿಸಿಕೊಂಡು ಹಿಂದೂ ದೇವರುಗಳ ಉತ್ಸವ ಮೆರವಣಿಗೆಗಳ ಮೇಲೆ ಎರಗುವುದು, ಪೊಲೀಸ್ ವಾಹನದ ಮೇಲೇರಿ ಮೆರೆಯುವುದು, ಪೊಲೀಸರನ್ನೇ ಅಟ್ಟಾಡಿಸಿಕೊಂಡು ಕೊಲ್ಲಲು ಯತ್ನಿಸುವುದು ಇಂಥ ರಿಯಲ್ ಸಾಹಸಗಳನ್ನು ಮಾಡಿದವರೆಲ್ಲಾ ಇವರಿಗೆ ಭಯೋತ್ಪಾದಕರಂತೆ ಕಾಣುವುದೇ ಇಲ್ಲ. ಜತೆಗೆ ಇಂಥ ಸಮಾಜಗೇಡಿಗಳಿಗೆ ತಮ್ಮದೇ ಪಕ್ಷದ ಮುಖಂಡರು ಅನುಕಂಪ ಹಣ ಸಹಾಯ ಮಾಡಿದರೆ
ಅದು ಮಹಾನ್ ಮಾನವೀಯತೆ.

ಹೀಗೆ ಸಮಾಜ ದ್ರೋಹಿಗಳನ್ನು ಖಂಡಿಸದೆ, ತಿದ್ದಲು ಪ್ರಯತ್ನಿಸದೆ ಎಲ್ಲರೂ ತಮ್ಮ ಬ್ರದರ್ಸ್‌ಗಳೆಂದು, ಅವರೊಂದಿಗೆ ಬದುಕುತ್ತೇವೆ ಅವರೊಂದಿಗೆ ಸಾಯುತ್ತೇವೆಂದು ಹೇಳುತ್ತಾ, ಹನುಮಾನ್ ಚಾಲೀಸ್ ಭಜನೆ ಮಾಡಿದವರನ್ನು ಭಯೋತ್ಪಾದಕರು ಕೋಮುವಾದಿ ಗಳೆಂದು ಹೇಳುವುದಿದೆಯಲ್ಲಾ ಅಂಥ ಅನಾಗರಿಕತನ ಮತ್ತು ವ್ಯಕ್ತಿತ್ವ ವಿವೇಕದ ದಿವಾಳಿತನವೇ ಇಂಥ ರಾಜಕೀಯ ಪಕ್ಷಗಳನ್ನು ಅಧೋಗತಿಗೆ ತಂದು ನಿಲ್ಲಿಸಿವೆ.

ಈ ಬಿ.ಕೆ.ಹರಿಪ್ರಸಾದ್ ಅವರಿಗೇನಾಗಿದೆ? ದೆಹಲಿ ಮಟ್ಟದ ಹಿರಿಯ ನಾಯಕ ಎನಿಸಿಕೊಂಡಿದ್ದಾರೆ. ತಮ್ಮ ಪಕ್ಷದ ಹೈಕಮಾಂಡ್‌ಗೂ ಪಕ್ಷದ ರಾಜ್ಯ ಘಟಕಕ್ಕೂ ಕೊಂಡಿಯಾಗಿ ದೆಹಲಿ ಮಟ್ಟದ ನಾಯಕರೆನಿಸಿರುವ ಇವರಿಗೆ ಸ್ಥಳೀಯ ಜನರ ವಿಶ್ವಾಸವನ್ನು ಗಳಿಸಿಕೊಂಡು ನೆಟ್ಟಗೆ ಒಂದು ಚುನಾವಣೆಯನ್ನು ಎದುರಿಸಿ ಗೆದ್ದು ಜನಪ್ರತಿನಿಧಿಯಾಗುವ ಅರ್ಹತೆಯನ್ನು ಸಿದ್ಧಿಸಿಕೊಳ್ಳಲಾಗಲಿಲ್ಲ. ಹೈಕಮಾಂಡ್ ವಿಶ್ವಾಸಿ ಎಂಬ ನಂಬಿಕೆಯ ಮೇಲೆ ಚುನಾವಣೆಯಲ್ಲಿ ಅನೇಕರು ತಮಗೆ ಟಿಕೆಟ್ ಕೊಡಿಸುತ್ತಾರೆಂದು ಕಾಯುತ್ತಿದ್ದಾಗ ಸ್ವತಃ ತಾವೇ
ಟಿಕೆಟ್ ಪಡೆದು ಚುನಾವಣೆಗೆ ನಿಂತರು. ಆಗ ಪತ್ರಿಕೆ ‘ಮಗನಿಗೆ ಹೆಣ್ಣು ನೋಡಲು ಹೊರಟ ಅಪ್ಪ ತಾನೇ ಮದುವೆ ಮಾಡಿಕೊಂಡ’ ಎಂದು ಬರೆದು ವಿಡಂಬನೆ ಮಾಡಿತು.

ಆಗಲೂ ತಮ್ಮ ಮುತ್ಸದ್ದಿತನವನ್ನು ಗಂಭೀರವಾಗಿ ಕಾಪಾಡಿಕೊಳ್ಳಲಿಲ್ಲ. ಬೆಂಗಳೂರು ದಕ್ಷಿಣ ಲೋಕಸಭೆಯ ಚುನಾವಣೆಯಲ್ಲಿ
ಇಪ್ಪತ್ತೆಂಟು ವರ್ಷದ ದೇಶಭಕ್ತ ರಾಜಕೀಯ ಅನನುಭವಿ ಹುಡುಗನ ಮುಂದೆ ಸೋತರು. ಆರ್ ಎಸ್‌ಎಸ್ ಎಂದರೇನೆಂದು ಪುಟ್ಟ ವಿದ್ಯಾರ್ಥಿಗೂ ತಿಳಿದಿದೆ. ಆದರೆ ಅಂಥ ದೇಶಭಕ್ತ ಸಂಘಟನೆಯನ್ನು ಜ್ಞಾನರಹಿತವಾಗಿ ತಾಲಿಬಾನ್ ಭಯೋತ್ಪಾದಕರಿಗೆ ಹೋಲಿಸಿ ಮಾತನಾಡಿದರು.

ಬಿ.ಕೆ. ಹರಿಪ್ರಸಾದ್ ಅವರೇ, ಸಾಮಾಜದ ಹಿತದೃಷ್ಟಿಯಿಂದ ಆಜಾನ್ ವಿರುದ್ಧ ದೇಶದ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯವೇ ಆದೇಶ ಹೊರಡಿಸಿ ಅದನ್ನು ನಿಯಂತ್ರಿಸಲು ಸರಕಾರಗಳಿಗೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶವನ್ನು ಸರಕಾರ ಪಾಲಿಸದಿದ್ದಾಗ ಅದರ ವಿರುದ್ಧವಾಗಿ ಹಿಂದೂಗಳು ಮಂದಿರದಲ್ಲಿ ಭಜನೆ ಮಾಡಿದರೆ ಅವರೆಲ್ಲಾ ನಿಮಗೆ ಭಯೋತ್ಪಾದಕರಾಗಿ
ಕಾಣಿಸುತ್ತಾರೆಯೇ.

ವಿರೋಧಪಕ್ಷದ ಒಬ್ಬ ವಿವೇಕವಂತ ನ್ಯಾಯಪರ ರಾಜಕಾರಣಿಯಾಗಿ ಮೊದಲಿಗೆ ನ್ಯಾಯಾಲಯದ ಆದೇಶವನ್ನು ಪಾಲಿಸಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರ ಮೇಲೆ ಒತ್ತಡ ಹೇರುವುದನ್ನು ಬಿಟ್ಟು ಆಜಾನ್ ವಿರುದ್ಧ ಭಜನೆ ಮಾಡುವ ಹಿಂದೂಗಳನ್ನು ಮತ್ತದೇ
ಭಯೋತ್ಪಾದಕರಿಗೆ ಹೋಲಿಸಿ ಹೊಲಸಿನಂಥ ಹೇಳಿಕೆ ನೀಡುವುದು ತರವಲ್ಲ. ಹೀಗೆ ಅಸಂಬದ್ಧವಾಗಿ ಬಾಲಿಶವಾಗಿ ಮಾತನಾಡುತ್ತಲೇ ತಮ್ಮ ಪಕ್ಷಕ್ಕಿರುವ ಅಷ್ಟಿಷ್ಟು ಗೌರವವನ್ನು ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ.

ಒಂದು ರಾಷ್ಟ್ರೀಯ ಪಕ್ಷದ ಸ್ಪೊಕ್ಸ್‌ಮನ್ ಆಗಿ ಇನ್ನೂ ಇಂಥ ಅತಿಶಯವಾದ ದರಿದ್ರ ಹೇಳಿಕೆಗಳನ್ನು ನೀಡುತ್ತಿದ್ದರೆ ಇನ್ನೆಷ್ಟು ದಿನ
ಇನ್ನೆಷ್ಟು ಜನ ಕಾಂಗ್ರೆಸ್ ಪಕ್ಷವನ್ನು ಸಹಿಸಿಕೊಂಡಿರುತ್ತಾರೆಂದು ಹರಿಪ್ರಸಾದ್ ಯೋಚಿಸಿದ್ದಾರೆಯೇ? ಬೇರೆಲ್ಲೂ ಬೇಡ ಸ್ವತಃ ಹರಿ ಪ್ರಸಾದ್ ಅವರ ಸೋದರರನ್ನೇ ನೋಡಿ ಬಿ.ಕೆ. ಶಿವರಾಮ್ ಎಂಬ ದಕ್ಷ ನಿವೃತ್ತ ಪೊಲೀಸ್ ಅಽಕಾರಿ ಸಮಾಜದಲ್ಲಿ ಬೆಂಕಿ ಶಿವರಾಮ್ ಎಂದು ಕರೆಸಿಕೊಂಡು ಸಂಭಾವಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಆದರೆ ಬಿ.ಕೆ.ಹರಿಪ್ರಸಾದ್ ಅವರು ಹಿರಿಯ ಮುತ್ಸದ್ದಿಯಾಗಿ ಇಂಥ ಅನ್ಯಾಯದ ಅವಿವೇಕದ ಹೇಳಿಕೆಗಳನ್ನು ನೀಡಿ ತಮ್ಮ ಪಕ್ಷವನ್ನು ಪಾತಳಕ್ಕಿಳಿಸುತ್ತಿರುವುದು ದುರದೃಷ್ಟಕರ. ಮೊನ್ನೆಯಷ್ಟೇ ಬೆಂಗಳೂರಿನ ನೆಮ್ಮದಿ ಹಾಳು ಮಾಡಲು ಸಜ್ಜಾಗಿ ಪೆಟ್ರೋಲ್ ಬಾಂಬ್‌ಗಳನ್ನು
ತಯಾರಿಸಿಟ್ಟಿದ್ದ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದರಲ್ಲಾ, ಅವರುಗಳು ನಿಮಗೆ ಭಯೋತ್ಪಾದಕರಂತೆ ಕಾಣಲಿಲ್ಲವೇ? ಮೊನ್ನೆ ಖ್ಯಾತ ಸುದ್ದಿ ವಾಹಿನಿಯ ಪತ್ರಕರ್ತರು ಇಂಥ ಪ್ರಶ್ನೆಗಳನ್ನೇ ಕೇಳಿದಾಗ ನೀವು ವರ್ತಿಸಿದ ರೀತಿ ನಿಜಕ್ಕೂ ಹೇಸಿಗೆ ಹುಟ್ಟಿಸಿದೆ.

ಅವರ ಪ್ರಶ್ನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಉತ್ತರಿಸದೆ, ಅವರನ್ನು ಬಿಜೆಪಿ ವಕ್ತಾರ ಎಂದೆಲ್ಲಾ ಜರಿದು ಅವರಿಗೇ ಅಮರಿಕೊಂಡಿ ರಲ್ಲಾ ಅದು ನಿಮ್ಮ ಹಿರಿತನಕ್ಕೆ ತಕ್ಕುದಾದ್ದಲ್ಲ. ಬಿ.ಕೆ. ಹರಿಪ್ರಸಾದ್ ಅವರೇ, ಜನ ಎಷ್ಟು ಜಾಗೃತರಾಗಿದ್ದಾರೆಂದರೆ ಸಚಿನ್ ತೆಂಡೂಲ್ಕರ್ ಐವತ್ತು ರನ್ ದಾಟುತ್ತಲೇ ಜನ ಈತ ದೇಶಕ್ಕಾಗಿ ಆಡುತ್ತಿದ್ದಾನೆಯೇ ಅಥವಾ ಸೆಂಚುರಿಗಾಗಿ ಆಡುತ್ತಿದ್ದಾನೆಯೇ ಎಂದು ಅನುಮಾನಿಸಿ ನೋಡುತ್ತಾರೆ. ಅಷ್ಟೇ ಅಲ್ಲಾ, ರಾಜ್ಯದ ಬಿಜೆಪಿ ಪಕ್ಷ ಪ್ರತಿಪಾದಿಸುತ್ತಿರುವ ರಾಷ್ಟ್ರೀಯತೆ ಹಿಂದುತ್ವ ಎಷ್ಟರ ಮಟ್ಟಿಗೆ ಪವಿತ್ರವಾಗಿದೆ ಎಂದೂ ತುಲನೆ ಮಾಡುತ್ತಾರೆ.

ಕೇವಲ ಅವರ ಹಿಂದುತ್ವವನ್ನೇ ನಂಬಿದ್ದರೆ ೨೦೧೩ರಲ್ಲಿ ಅವರನ್ನು ಹೀನಾಯವಾಗಿ ಸೋಲಿಸುತ್ತಿರಲಿಲ್ಲ. ಬಿಜೆಪಿಯವರ ನೈಜ ರಾಷ್ಟ್ರೀಯತೆ ದೇಶಾಭಿಮಾನ ಹಿಂದುತ್ವವು ಎಷ್ಟು ನಕಲಿಯಾಗುತ್ತದೆಯೋ ಅಷ್ಟೇ ನಿಮ್ಮಂಥವರ ಹಿಂದುತ್ವ ವಿರೋಧಿ ಹೇಳಿಕೆಗಳು, ಹಿಂದೂಗಳ ಭಾವನೆಗಳನ್ನು ಕಡೆಗಣಿಸುವ, ಅವರ ನಂಬಿಕೆಗಳನ್ನು ಅವಮಾನಿಸುವ ಮತ್ತು ಹಿಂದೂಗಳ ಮತಗಳೇ ನಮಗೆ ಗಣ್ಯವಲ್ಲ ಎಂಬಂಥ ನಿಮ್ಮ ಉಡಾಫೆತನ, ಧಾರ್ಷ್ಟ್ಯತೆಯ ನಡೆಗಳೂ ಅಪಾಯಕಾರಿ.

ಸೋತಿರುವ ರಾಜನ ಸ್ಥಾನದಲ್ಲಿ ನೀವು, ನಿಮ್ಮ ಪಕ್ಷ ಬಂದು ತಲುಪಿದೆ. ಅದಕ್ಕೆ ಕಾರಣಗಳು ಸ್ವಯಂಕೃತ ಅಪರಾಧಗಳನ್ನು ಅವಲೋಕನ ಮಾಡಿಕೊಂಡು ಆಗಿರುವ ಯಡವಟ್ಟುಗಳನ್ನು ಸರಿಪಡಿಸಿಕೊಂಡು ಎಲ್ಲಾ ಧರ್ಮದವರ ಮತದಾರರ ವಿಶ್ವಾಸವನ್ನು
ಗಳಿಸಿಕೊಂಡು ಸಂವಿಧಾನದ ಆಶಯದಂತೆ ಸಮಾನತೆಯ ಸಿದ್ಧಾಂತವನ್ನು ಸ್ಥಾಪಿಸುವ ಹೊಣೆಗಾರಿಕೆ ನಿಮ್ಮಂಥ ನಾಯಕರಿಗಿದೆ.

ಅದೆಲ್ಲಾ ಹಾಳುಬಿದ್ದು ಹೋಗಲಿ ಕನಿಷ್ಠ ಭಯೋತ್ಪಾದಕರು ಎಂಬ ಪದವನ್ನು ಯಾರಿಗೆ ಬಳಸಬೇಕು ಮತ್ತು ಹೊಂದಿಸಿ ಬರೆಯಬೇಕೆಂಬು ದನ್ನು ಕಲಿತರೂ ಸಾಕು. ಸಮಾಜ ನಿಮ್ಮನ್ನು ಗೌರವಿಸುತ್ತದೆ. ಕೊನೆಯದಾಗಿ, ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತಿದೆ; ಜನ ಸುತ್ತಲೂ ನಿಂತು ನೋಡುತ್ತಿದ್ದಾರೆ. ಚುನಾವಣೆ ಮುಂದಿನ ವರ್ಷವಿದೆ!