ಯಕ್ಷ ಪ್ರಶ್ನೆ
ರಮಾನಂದ ಶರ್ಮಾ
ಉಗ್ರಗಾಮಿ ಚಟುವಟಿಕೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಉದ್ದೇಶಪೂರ್ವಕ ಅಪಘಾತದ ಸಾಧ್ಯತೆಯನ್ನು ಅಲ್ಲಗಳೆ ಯಲಾಗುವುದಿಲ್ಲ. ಬಹುತೇಕ ಪ್ರಸಂಗಗಳಲ್ಲಿ ಇದು ‘ಜಸ್ಟ್ ಆಕ್ಸಿಡೆಂಟ್’ ಆಗಿದ್ದು, ಕೆಲವರ ತಪ್ಪಿನಿಂದ ಅಥವಾ ಅರಿವಿಲ್ಲದೆ ಆಗಬಹುದು. ಕೆಲವೊಮ್ಮೆ ತಾಂತ್ರಿಕ ದೋಷದಿಂದ, ಸಾಮೂಹಿಕ ವೈಫಲ್ಯದಿಂದಲೂ ಆಗಬಹುದು.
೧೯೫೬ರಲ್ಲಿ ನೆಹರು ಸಂಪುಟದಲ್ಲಿ ಲಾಲ್ ಬಹಾದುರ್ ಶಾಸ್ತ್ರಿಯವರು ರೈಲುಮಂತ್ರಿ ಯಾಗಿದ್ದರು. ಉತ್ತರ ಪ್ರದೇಶದಲ್ಲಿ ನಡೆದ ರೈಲು ದುರಂತವೊಂದರಲ್ಲಿ ೧೪೬ ಮಂದಿ ಜೀವ ಕಳೆದುಕೊಂಡಾಗ, ಅದರ ನೈತಿಕಹೊಣೆ ಹೊತ್ತು ಶಾಸ್ತ್ರಿಯವರು ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಇದೊಂದು ಶ್ಲಾಘನೀಯ ಕ್ರಮವೆಂದು ದೇಶಾದ್ಯಂತ ಹಾಡಿಹೊಗಳಲಾಗಿತ್ತು, ಮಾಧ್ಯಮಗಳೂ ಇದನ್ನು ಹೈಲೈಟ್ ಮಾಡಿ ಪ್ರಶಂಸಿಸಿದ್ದವು.
ಆದರೆ ಶಾಸ್ತ್ರಿಯವರ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡುವಲ್ಲಿ ಪ್ರಧಾನಿ ನೆಹರು ಸಫಲರಾಗಿದ್ದರು. ೧೯೯೯ರಲ್ಲಿ ವಾಜಪೇಯಿ ಸರಕಾರದಲ್ಲಿ ರೈಲು ಮಂತ್ರಿಯಾಗಿದ್ದ ನಿತೀಶ್ ಕುಮಾರ್ ಕೂಡ, ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ದುರಂತದ ನೈತಿಕಹೊಣೆ ಹೊತ್ತು ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಇವೆಲ್ಲ ಈಗ ಇತಿಹಾಸ.
ಶಾಸ್ತ್ರಿ ಹಾಗೂ ನಿತೀಶರ ಈ ನಡೆಗಳು ‘ಟ್ರೆಂಡ್’ ಆಗಿ ಮುಂದುವರಿಯದಿದ್ದರೂ, ದೇಶದಲ್ಲಿ ರೈಲು ಅಪಘಾತವಾದಾಗಲೆಲ್ಲ ಈ ನಡೆಗಳನ್ನು ಉಲ್ಲೇಖಿಸಿ ಆಯಾ ಕಾಲಘಟ್ಟದ ರೈಲುಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುವುದು ಒಂದು ‘ಟ್ರೆಂಡ್’ ಆಗಿ, ಸ್ವಲ್ಪವೂ ಬ್ರೇಕ್ ಇಲ್ಲದೇ ನಡೆದು ಕೊಂಡು ಬಂದಿದೆ! ಅಪಘಾತಗಳು ಸಣ್ಣದಿರಲಿ ಅಥವಾ ದೊಡ್ಡದಿರಲಿ, ರೈಲುಮಂತ್ರಿಗಳ ರಾಜೀನಾಮೆ ಬೇಡಿಕೆ ಮಾತ್ರ ಇದ್ದೇ ಇರುವುದು ತೀರಾ ಮಾಮೂಲಾಗಿಬಿಟ್ಟಿದೆ.
ಇತ್ತೀಚೆಗೆ ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ೩೦೦ ಜನ ಅಸುನೀಗಿದರಲ್ಲವೇ? ಇವರ ಬಗ್ಗೆ ಅನುಕಂಪ ತೋರದೆ, ಗಾಯಗೊಂಡವರ ರಕ್ಷಣೆಯ ಬಗ್ಗೆ ಚಿಂತಿಸದೆ ‘ರೈಲುಮಂತ್ರಿ ಅಶ್ವಿನ್ ವೈಷ್ಣವ್ ಅವರು ಅಪಘಾತದ ನೈತಿಕಹೊಣೆ ಹೊತ್ತು ತಮ್ಮ ಪದವಿಗೆ ರಾಜೀನಾಮೆ ನೀಡಲಿ’ ಎಂದು ಹಲವರು ಒತ್ತಾಯಿಸಿದ್ದಿದೆ! ಪಡ್ಡೆ ಹುಡುಗರಿಂದಲೋ, ಆಡಳಿತ ವ್ಯವಸ್ಥೆಯ ‘ಎಬಿಸಿಡಿ’ ತಿಳಿಯದವರಿಂದಲೋ, ರಾಜಕಾರಣಕ್ಕೆ ಆಗಷ್ಟೇ ಕಾಲಿಟ್ಟ ಮರಿಪುಢಾರಿಗಳಿಂದಲೋ ಇಂಥ ಆಗ್ರಹ ಬಂದಿದ್ದರೆ ಆ ಮಾತು ಬೇರೆ. ಆದರೆ ಈ ಆಗ್ರಹ ಹೊಮ್ಮಿದ್ದು ಕೆಲವು ‘ಹಿರಿತಲೆ’ ರಾಜಕಾರಣಿಗಳಿಂದ, ಬುದ್ಧಿಜೀವಿಗಳಿಂದ ಮತ್ತು ಪ್ರಜ್ಞಾವಂತರೆನಿಸಿಕೊಂಡವರಿಂದ.
Read E-Paper click here
ರೈಲುಮಂತ್ರಿ ಅಶ್ಚಿನ್ ಅವರು ಅಪಘಾತ ಸ್ಥಳದಲ್ಲಿ ೪೮ ಗಂಟೆಗಳ ಕಾಲ ಇದ್ದು, ಊಟ-ತಿಂಡಿ-ನಿದ್ರೆಯಗೊಡವೆಗೆ ಹೋಗದೆ ಪರಿಹಾರ ಕಾರ್ಯಾಚರಣೆಯಲ್ಲಿ ಸ್ವತಃ ತೊಡಗಿದ್ದು ಜನಮೆಚ್ಚುಗೆಯನ್ನು ಪಡೆದಿದೆ. ಭಾರತದಲ್ಲಿನ ರೈಲು ಅಪಘಾತದ ಇತಿ
ಹಾಸದಲ್ಲಿ ಇಲಾಖಾ ಮಂತ್ರಿಯೊಬ್ಬರು ಇಷ್ಟು ಸುದೀರ್ಘಕಾಲ ಸ್ಥಳದಲ್ಲೇ ಇದ್ದು ಪರಿಹಾರದ ಮೇಲ್ವಿಚಾರಣೆ ನಡೆಸಿದ್ದು ಬಹುಶಃ ಮೊದಲ ಉದಾಹರಣೆ ಇರಬೇಕು. ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುವ ಪರಿಪಾಠ ರೈಲು ಅಪಘಾತಗಳಿಗಷ್ಟೇ
ಸೀಮಿತವಾಗಿರದೆ, ವಿಮಾನಾಪಘಾತ ಆದಾಗಲೂ ಸಂಬಂಧಿತ ಸಚಿವರ ರಾಜೀನಾಮೆಗೆ ಆಗ್ರಹಿಸುವವರೆಗೆ ಮುಂದುವರಿದಿದ್ದಿದೆ.
ಆದರೆ ವಿಮಾನಯಾನ ಖಾತೆ ನೋಡಿಕೊಳ್ಳುತ್ತಿದ್ದ ಯಾವ ಸಚಿವರೂ ರಾಜೀನಾಮೆ ನೀಡಿಲ್ಲ, ನೀಡುವುದೂ ಇಲ್ಲ; ಅದು ಬೇರೆ ಮಾತು! ಬಾಲಾಸೋರ್ ರೈಲುದುರಂತದ ನಂತರ, ಅಲ್ಲಿನ ಆಗ್ನೇಯ ರೇಲ್ವೆ ವಲಯದ ಮಹಾಪ್ರಬಂಧಕ ಅರ್ಚನಾ ಜೋಷಿ ಯವರನ್ನು ಬೆಂಗಳೂ ರಿನ ರೈಲುಗಾಲಿ ಮತ್ತು ಅಚ್ಚು ಕಾರ್ಖಾನೆಗೆ ಎತ್ತಂಗಡಿ ಮಾಡಲಾಗಿದೆಯಂತೆ. ೧೯೮೫ರ ಬ್ಯಾಚ್ ನ ರೇಲ್ವೆ ಸಂಚಾರ ಸೇವೆ ಅಧಿಕಾರಿಯಾದ ಅವರು ೨೦೨೧ರಲ್ಲಿ ಆಗ್ನೇಯ ರೇಲ್ವೆ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿ ದ್ದರು. ಈ ದುರಂತದ ನಂತರ ಈವರೆಗೆ ಒಟ್ಟು ೬ ವಲಯಾಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆಯಂತೆ.
ಬಾಲಸೋರ್ ದುರಂತದಲ್ಲಿ ರೇಲ್ವೆ ಮಂತ್ರಿ ರಾಜೀನಾಮೆ ನೀಡುವುದರಿಂದ ತಪ್ಪಿಸಿಕೊಂಡಿದ್ದು, ಇಲಾಖೆಯ ಹಲವು ಹಿರಿಯ ಅಽಕಾರಿಗಳಿಗೆ ಎತ್ತಂಗಡಿ ಶಿಕ್ಷೆಯಾಗಿರುವುದು ಒಂದು ವಿಶೇಷ. ಇದರಲ್ಲಿ ಈ ಅಧಿಕಾರಿಗಳು ನಿಜವಾಗಿ ತಪ್ಪಿತಸ್ಥರೋ ಅಥವಾ
ಇಂಥ ದುರಂತಗಳಾದಾಗ, ಕೆಲವರನ್ನು ಬಲಿಪಶು ಮಾಡಬೇಕು ಮತ್ತು ತನ್ಮೂಲಕ ‘ಇಲಾಖೆ ಕಾರಣಗಳನ್ನು ಹುಡುಕಿದೆ ಹಾಗೂ ಮೇಲ್ನೋಟಕ್ಕೆ ತಪ್ಪಿತಸ್ಥರಾಗಿ ಕಂಡವರನ್ನು ಶಿಕ್ಷಿಸಿದೆ’ ಎಂಬ ಸಂದೇಶವನ್ನು ನೀಡುವ ಪ್ರಹಸನ ಇದಾಗಿರುತ್ತದೋ ತಿಳಿಯದು.
ಅಥವಾ ಇಂಥ ದುರಂತಗಳಾದಾಗ, ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂಬ ಅಲಿಖಿತ ನಿಯಮಾವಳಿಯನ್ನು
ಅನುಸರಿಸಲಾಗಿದೆಯೋ ತಿಳಿಯದು. ಅಪಘಾತಗಳನ್ನಾಗಲೀ ದುರಂತಗಳನ್ನಾಗಲೀ ಸಾಮಾನ್ಯವಾಗಿ ಯಾರೂ ಉದ್ದೇಶ ಪೂರ್ವಕವಾಗಿ ಮಾಡುವುದಿಲ್ಲ ಎಂದು ಸಾರಾಸಗಟಾಗಿ ಹೇಳಲಾಗುವುದಿಲ್ಲ. ಉಗ್ರಗಾಮಿ ಚಟುವಟಿಕೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಇಂಥ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
ಬಹುತೇಕ ಪ್ರಸಂಗಗಳಲ್ಲಿ ಇದು ‘ಜಸ್ಟ್ ಆಕ್ಸಿಡೆಂಟ್’ ಆಗಿದ್ದು, ಕೆಲವರ ತಪ್ಪಿನಿಂದ ಅಥವಾ ಅರಿವಿಲ್ಲದೆ ಆಗಬಹುದು. ಹಲವು ಬಾರಿ ತಾಂತ್ರಿಕ ದೋಷದಿಂದಲೂ ಆಗಬಹುದು. ಇದು ಒಬ್ಬರ ತಪ್ಪಿನಿಂದ ಅಥವಾ ಸಾಮೂಹಿಕ ವೈಫಲ್ಯದಿಂದ ಆಗಬಹುದು. ಮೇಲಿನಿಂದ ತಳಮಟ್ಟದವರೆಗೆ ಎಲ್ಲೋ ಆಗಬಹುದು. ಆದರೆ ಈ ತಪ್ಪಿಗಾಗಿ ಸಂಬಂಧಪಟ್ಟ ಮಂತ್ರಿಗಳು ಅಥವಾ ಉನ್ನತಾಧಿ ಕಾರಿಗಳ ತಲೆದಂಡ ಯಾವ ನ್ಯಾಯ? ಕೆಲವರು ಆರೋಪಿಸುವುದು ನೋಡಿದರೆ, ಈ ಮಂತ್ರಿಗಳು ಅಥವಾ ಉನ್ನತಾಧಿಕಾರಿಗಳೇ
ಅಪಘಾತದ ಸ್ಥಳದಲ್ಲಿದ್ದು, ಅವರ ಕಾರ್ಯವೈಫಲ್ಯದಿಂದಲೇ ಈ ದುರಂತ ಸಂಭವಿಸಿದೆ ಎನ್ನುವ ಅರ್ಥ ಬರುತ್ತದೆ.
ಮಂತ್ರಿಗಳು ತಮ್ಮ ಇಲಾಖೆಯ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ, ಇಲಾಖೆಯ ಆಗು-ಹೋಗುಗಳನ್ನು
ನಿಯಂತ್ರಿಸುತ್ತಾರೆ, ಟಾರ್ಗೆಟ್ ನಿಗದಿಪಡಿಸುತ್ತಾರೆ, ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಾರೆಯೇ ವಿನಾ, ಎಲ್ಲೋ ಕುಳಿತು ರೈಲುಗಳ ಚಲನವಲನಗಳ ಮೇಲ್ವಿಚಾರಣೆ ನಡೆಸುವುದಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿಯಿದ್ದು ಅವರಿಗೆ
ಸಾಕಷ್ಟು ಅಧಿಕಾರ ಮತ್ತು ಕರ್ತವ್ಯಗಳು ಇರುತ್ತವೆ. ಅವರ ಕಾರ್ಯವೈಖರಿಯ ಮೇಲೆ ಹದ್ದಿನಕಣ್ಣಿಡುವ ಅಧಿಕಾರಿ ವ್ಯವಸ್ಥೆ ಯೂ ಇರುತ್ತದೆ.
ಹೀಗಾಗಿ, ಇಲಾಖೆಯ ವ್ಯಾಪ್ತಿಯಲ್ಲಿ ಎಲ್ಲೋ ನಡೆದ ತಪ್ಪಿಗೆ ಅದರ ಮುಖ್ಯಸ್ಥನನ್ನು ವರ್ಗಾವಣೆಯಂಥ ಶಿಸ್ತುಕ್ರಮಕ್ಕೆ ಒಳಪಡಿ ಸುವುದು ಅಥವಾ ಸಂಬಂಧಿತ ಸಚಿವರ ರಾಜೀನಾಮೆಗೆ ಒತ್ತಾಯಿಸುವುದು ಸರಿಯಾದ ಕ್ರಮವೇ? ನಿಗದಿತ ಕೆಲಸಕ್ಕಾಗಿ ನಿರ್ದಿಷ್ಟ ಜನರನ್ನು ನೇಮಕ ಮಾಡಲಾಗುತ್ತದೆ ಮತ್ತು ಅವರಿಂದ ಶೇ.೧೦೦ರಷ್ಟು ಕಾರ್ಯತತ್ಪರತೆಯನ್ನು ನಿರೀಕ್ಷಿಸಲಾಗುತ್ತದೆ. ತಪ್ಪು ನಡೆದಿರುವ ಸ್ಥಳ ಮತ್ತು ತಪ್ಪು ಮಾಡಿದವರನ್ನು ಗುರುತಿಸಿ ಶಿಕ್ಷಿಸುವುದು ಸರಿಯಾದ ಕ್ರಮ ಎನ್ನಬಹುದು. ಆದರೆ, ಅವರ ಕರ್ತವ್ಯಲೋಪಕ್ಕೆ ಮೇಲಧಿಕಾರಿಗಳನ್ನು ಶಿಕ್ಷಿಸಬಹುದೇ? ಇದೇ ಮಾನದಂಡವನ್ನು ದೇಶಾದ್ಯಂತದ ಆಡಳಿತದಲ್ಲಿ ಬಳಸಿದರೆ, ದೇಶದ ಆಡಳಿತ ಸುಗಮವಾಗಿ ನಡೆಯಲು ಸಾಧ್ಯವೇ? ನ್ಯಾಯಶಾಸದಲ್ಲಿ ಹೇಳುವ vicarious liability ಯನ್ನು ಬದುಕಿನ ಮತ್ತು ಆಡಳಿತದ ಎಲ್ಲ ಕ್ಷೇತ್ರಗಳಲ್ಲೂ ಅಳವಡಿಸಬಹುದೇ? ಇದರಿಂದಾಗುವ ಅನಾಹುತವೆಂದರೆ, ನಿಜವಾದ ತಪ್ಪಿತಸ್ಥರು ತಪ್ಪಿಸಿ ಕೊಂಡು ಅಮಾಯಕರು ಬಲಿಪಶು ಆಗುತ್ತಾರೆ ಮತ್ತು ಹೊಣೆಗಾರಿಕೆ ಹುದ್ದೆಯನ್ನು ಪಡೆಯಲು ಅವರು ಹಿಂದೇಟು ಹಾಕುವಂತೆ ಆಗುತ್ತದೆ.
ರೈಲುಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುವ ಮತ್ತು ಕೆಲವು ಹಿರಿಯ ಅಧಿಕಾರಿಗಳಿಗೆ ಎತ್ತಂಗಡಿ ಶಿಕ್ಷೆ ವಿಧಿಸುವ ಪರಿಪಾಠವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವರದಿಗಾರ, ಅಂಕಣಕಾರ, ಪ್ರೂಫ್ ರೀಡರ್ ಮಾಡುವ ತಪ್ಪಿಗೆ ಪತ್ರಿಕೆಯ ಸಂಪಾದಕ ರನ್ನು ತೆಗೆದುಹಾಕಬಹುದೇ? ದೇಶದಲ್ಲಿ ಯಾರೋ ಹಸಿವಿನಿಂದ ಸತ್ತರು ಎಂದು ದೇಶದ ಪ್ರಧಾನಿಯ ರಾಜೀನಾಮೆ ಕೇಳಬಹುದೇ? ಬ್ಯಾಂಕುಗಳಿಗೆ ಕೆಲವರು ಸಾವಿರಾರು ಕೋಟಿ ರು. ವಂಚಿಸಿ ದೇಶಭ್ರಷ್ಟರಾದರೆಂದು ಬ್ಯಾಂಕ್ ಚೇರ್ಮನ್ ಮತ್ತು ಹಿರಿಯ ಅಧಿಕಾರಿಗಳ ರಾಜೀನಾಮೆಗೆ ಆಗ್ರಹಿಸಬಹುದೇ? ಶಾಲಾ-ಕಾಲೇಜು ಗಳಲ್ಲಿ ತೇರ್ಗಡೆ ಪ್ರಮಾಣ ಕಡಿಮೆಯಾಗಿದೆ ಎಂದು
ಅಧ್ಯಾಪಕರು ಮತ್ತು ಮುಖ್ಯೋಪಾಧ್ಯಾಯರನ್ನು ಕೆಲಸದಿಂದ ತೆಗೆದುಹಾಕಬಹುದೇ? ವಿವಾಹವೊಂದು ವಿಚ್ಛೇದನದಲ್ಲಿ ಕೊನೆಗೊಂಡಿತು ಎಂಬ ಕಾರಣಕ್ಕೆ ಆ ವಿವಾಹ ಮಾಡಿಸಿದ/ಜಾತಕಗಳನ್ನು ತಾಳೆ ನೋಡಿದ ಪುರೋಹಿತರನ್ನು ತರಾಟೆಗೆ ತೆಗೆದು
ಕೊಳ್ಳಬಹುದೇ? ಬಸ್ ಅಪಘಾತಕ್ಕೀಡಾಯಿತು ಎಂಬ ಕಾರಣಕ್ಕೆ ಬಸ್ ಮಾಲೀಕರನ್ನು ದಂಡಿಸಬಹುದೇ? ಇದರರ್ಥ ಇವರೆಲ್ಲ ಶಿಕ್ಷಾತೀತರು ಎಂದಲ್ಲ; ಶಿಕ್ಷೆ ನೀಡುವುದಕ್ಕೂ ಒಂದು ಇತಿ-ಮಿತಿ ಮತ್ತು ಪದ್ಧತಿ ಇರುತ್ತದೆ.
ಇಂಥ ಮಾನದಂಡಗಳನ್ನು ನಿರ್ಲಕ್ಷಿಸಿ ಮುಂದುವರಿಯಲಾಗದು. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಸಾಕ್ಷಿ-ಪುರಾವೆ ಗಳಿಂದ ಕೆಲವರ ತಪ್ಪು ಸಾಬೀತಾದರೂ, ಯಾವುದೋ ನೆವದ ಅಡಿಯಲ್ಲಿ, ತಾಂತ್ರಿಕ ಅಡಚಣೆಗಳ ಹೆಸರಿನಲ್ಲಿ, ಅಧಿಕಾರದ ವ್ಯಾಮೋಹದಲ್ಲಿ ಸಂಬಂಧಪಟ್ಟವರು ಕುರ್ಚಿಗೆ ಅಂಟಿಕೊಳ್ಳುತ್ತಾರೆ. ಇಂಥ ಸಂದರ್ಭಗಳಲ್ಲಿ ರಾಜೀನಾಮೆಗೆ ಒತ್ತಾಯಿಸುವುದು ಅಥವಾ ಎತ್ತಂಗಡಿ ಮಾಡುವುದು ಅನಿವಾರ್ಯವಾಗುತ್ತದೆ.
ಇಂಗ್ಲೆಂಡ್‌ನಲ್ಲಿ King Can Do No Wrong ಎನ್ನುವಂತೆ, ನಮ್ಮ ದೇಶದಲ್ಲಿ ದೊಡ್ಡವರು, ರಾಜಕಾರಣಿಗಳು/ಜನಪ್ರತಿನಿಧಿ ಗಳು/ಮಂತ್ರಿಗಳು, ಬುದ್ಧಿಜೀವಿಗಳು, ಹಿರಿಯ ಅಧಿಕಾರಿಗಳು ತಪ್ಪುಮಾಡುವುದೇ ಇಲ್ಲ, ತಪ್ಪುಗಳೇನಿದ್ದರೂ ಕೆಳಗಿನವರಿಂದ ಆಗುತ್ತದೆ ಎಂಬ ಗ್ರಹಿಕೆಯಿದೆ. ದೊಡ್ಡವರಿಗೆ ‘ಬಾರಾ ಖೂನ್ ಮಾಫ್’, ಆದರೆ ಶಿಕ್ಷೆ ಏನಿದ್ದರೂ ಕೆಳಗಿನವರಿಗೆ. ಇದು ನಮ್ಮ ವ್ಯವಸ್ಥೆಯಲ್ಲಿ ಅನುದಿನವೂ ಕಾಣುವ ದೃಶ್ಯಾವಳಿ.
ದ್ವಿತೀಯ ದರ್ಜೆಯ ಸಾವಿರ ಗುಮಾಸ್ತರಿಗೆ ಶಿಕ್ಷೆಯಾದರೆ, ಈ ಬಾಬತ್ತಿನಲ್ಲಿ ದೊಡ್ಡವರ ಸಂಖ್ಯೆ ಕೈಯಲ್ಲಿ ಎಣಿಸುವಷ್ಟು ಮಾತ್ರ! ದಿನಾಲು ಪತ್ರಿಕೆಗಳನ್ನು ಓದುವವರಿಗೆ ಈ ಸತ್ಯ ಅರಿವಾಗದಿರದು. ಅಂತೆಯೇ, ದೊಡ್ಡವರಿಗೆ ಶಿಕ್ಷೆಯಾಗಲಿ ಎನ್ನುವ ಕೂಗು ಮುಗಿ ಲೆತ್ತರಕ್ಕೆ ಏಳುತ್ತದೆ, ಕೇಳುತ್ತದೆ. ಮಂತ್ರಿಗಳ ರಾಜೀನಾಮೆಯನ್ನು ಕೇಳುವುದು ತಪ್ಪು ಎನ್ನಲಾಗದು; ಮೇಲುನೋಟಕ್ಕೆ ತಪ್ಪೆನಿಸಿ ದರೆ ಕೇಳಬಹುದು.