Wednesday, 18th September 2024

ಸಮಾಜ ಸ್ವಪರೀಕ್ಷೆಯ ರಗಳೆ ಎದುರಿಸುತ್ತಲೇ ಇರಬೇಕು

ಶಿಶಿರ ಕಾಲ

shishirh@gmail.com

ಈ ಪಟ್ಟಣಗೆರೆ ಶೆಡ್ ಕೊಲೆ ನಡೆದಾಗಿನಿಂದ ನಮ್ಮೆಲ್ಲರ ಕಾನೂನು ಜ್ಞಾನ ನಾಲ್ಕಾರು ಪಟ್ಟು ಹೆಚ್ಚಿರುವುದಂತೂ ಹೌದು. ಎ೧, ಎ೨.. ಎ೧೫ ಇತ್ಯಾದಿ
ಅನುಕ್ರಮಗಳಿಂದ ಹಿಡಿದು ಆರೆಂಟು ಸೆಕ್ಷನ್‌ಗಳು ಏನೇನು ಎಂದು ಇಂದು ಕರ್ನಾಟಕದ ಎಲ್ಲರಿಗೂ ತಿಳಿದಿದೆ. ಅಪರಾಧ- ಕೊಲೆಯ ತನಿಖೆಯ ಇಂಚಿಂಚು ಬೆಳವಣಿಗೆಯೂ ಗೊತ್ತು. ಸದ್ಯದ ಚಾರ್ಜ್‌ಶೀಟ್ ಸಲ್ಲಿಸಿದಾಗ ಅದರ ಸರಿತಪ್ಪನ್ನೂ ಸಾರ್ವಜನಿಕರೇ ಚರ್ಚಿಸುವ ಮಟ್ಟಿಗಿನ ವಿವರಗಳನ್ನು ನಮ್ಮ ಕನ್ನಡ ಟಿವಿ ವಾಹಿನಿಗಳು, ಪತ್ರಿಕೆಗಳು ನಮಗೆ ನಮ್ಮ ಬಯಕೆಯಂತೆ ನೀಡಿವೆ.

ಇಂಥ ಸುದ್ಧಿಗಳು ಇಂದು ಧಾರಾವಾಹಿಗಳಿಗೆ, ಮನರಂಜನಾ ಚಾನಲ್ಲುಗಳಿಗೆ ಪೈಪೋಟಿ ಕೊಡುತ್ತಿವೆ ಎನ್ನು ವುದು ಕಹಿಯೆನಿಸುವ ಸತ್ಯ. ಆಗೀಗ ಇಂಥ ಹೈ-ಪ್ರೊಫೈಲ್ ಕೇಸ್‌ಗಳು ಜನರನ್ನು ಈ ಪ್ರಮಾಣದಲ್ಲಿ ಆವರಿಸುವುದುಂಟು. ಒ.ಜೆ.ಸಿಂಪ್ಸನ್ ಅಮೆರಿಕದ ಫುಟ್ಬಾಲ್ ಆಟಗಾರ- ದಂತಕತೆ. ಕ್ರಿಕೆಟ್‌ನಲ್ಲಿ ಸಚಿನ್ ಇದ್ದಂತೆ ೧೯೬೦-೭೦ರ ಅಮೆರಿಕನ್ ಫುಟ್ಬಾಲ್‌ನಲ್ಲಿ ಒ.ಜೆ.ಸಿಂಪ್ಸನ್. ಟಿವಿ ಸೆಲೆಬ್ರಿಟಿಯಾಗಿ, ರಿಯಾಲಿಟಿ ಷೋಗಳಲ್ಲಿ, ಜಾಹೀರಾತುಗಳಲ್ಲಿ, ಚಲನಚಿತ್ರಗಳಲ್ಲಿ ಹೀಗೆ ಕ್ರೀಡಾ ನಿವೃತ್ತಿಯ ನಂತರವೂ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ವ್ಯಕ್ತಿ. ಅವನು ಕಪ್ಪು ವರ್ಣೀಯ. ಆ ಕಾಲದಲ್ಲಿದ್ದ ಜನಾಂಗೀಯ ಒಡಕಿನ ಸಮಾಜದಲ್ಲಿ ಕಪ್ಪು ವರ್ಣೀಯರು ಆತನನ್ನು ‘ರೋಲ್ ಮಾಡೆಲ್’ ಎಂದೇ ಆರಾಧಿಸುತ್ತಿದ್ದರು. ಬಿಳಿಯರಿಗೆ ಅಸಹನೆ ಇತ್ತು.

ಹೀಗಿರುವಾಗ ಇದ್ದ ಕ್ಕಿದ್ದಂತೆ ಒಂದು ದಿನ ಅವನ ಸ್ನೇಹಿತನ ಮನೆಯಲ್ಲಿ ಸ್ನೇಹಿತ ಮತ್ತು ಸಿಂಪ್ಸನ್‌ನ ಪತ್ನಿ ಕೊಲೆಯಾಗಿ ಹೋದರು. ಸಹಜವಾಗಿ ಅನುಮಾನ ಸಿಂಪ್ಸನ್‌ನತ್ತ. ಒಂದೆರಡು ದಿನ ಅಮೆರಿಕದ ಅಷ್ಟೂ ಚಾನಲ್ಲುಗಳು ಇದೇ ಸುದ್ದಿಯನ್ನು ಹಗಲು ರಾತ್ರಿ ಬಿತ್ತರಿಸಿದವು. ಇಡೀ ಅಮೆರಿಕ ದೇಶ ಟಿವಿ ಮುಂದೆ ಕೂತಿತ್ತು. ಒ.ಜೆ. ಸಿಂಪ್ಸನ್‌ನನ್ನು ಬಂಽಸಲಿಕ್ಕೆಂದು ಪೊಲೀಸರು ಸ್ಟೇಷನ್ನಿನಿಂದ ಹೊರಟ ಸುದ್ದಿಯೂ ಟಿವಿಯಲ್ಲಿ ಬಂತು. ಆಗ ಸಿಂಪ್ಸನ್
ಕಾರು ಹತ್ತಿ ತಪ್ಪಿಸಿಕೊಂಡು ಓಡಿ ಹೊರಟ. ಅವನನ್ನು ಒಂದಿ ಪ್ಪತ್ತು ಪೊಲೀಸ್ ಕಾರುಗಳು ಹಿಂಬಾಲಿಸಿದವು. ಇದೆಲ್ಲವನ್ನು ಟಿವಿ ಚಾನಲ್ ಹೆಲಿಕಾಪ್ಟರಿ ನಿಂದ ವಿಡಿಯೋ ಲೈವ್ ಚಿತ್ರೀಕರಿಸಿ ಬಿತ್ತರಿಸುತ್ತಿತ್ತು. ಈ ಕಳ್ಳ-ಪೊಲೀಸ್ ಆಟ ಲಾಸ್ ಏಂಜಲೀಸ್‌ನ ಹೈವೇಯಲ್ಲಿ ೪೫ ನಿಮಿಷ ನಡೆಯಿತು. ಕೊನೆಯಲ್ಲಿ
ಸಿಂಪ್ಸನ್ ಬಂಧನವಾಯ್ತು. ಅಂದು ಈ ಒಂದು ಕೇಸ್‌ನಿಂದಾಗಿ ಇಡೀ ಅಮೆರಿಕ ದೇಶ ತಾತ್ವಿಕವಾಗಿ ಇಬ್ಭಾಗವಾಗಿತ್ತು.

ಇದು ರಾಜಕೀಯ ಬಣ್ಣ ಪಡೆಯಿತು, ಕೆಲವರು ಅವನು ನಿರ್ದೋಷಿ ಎಂದರು, ಆತನೇ ಕೊಂದದ್ದು ಎಂದರು. ಕಪ್ಪು ವರ್ಣೀಯರ ಮೇಲಿನ ಬಿಳಿ ವರ್ಣೀಯರ ದಬ್ಬಾಳಿಕೆ ಎಂಬ ಇನ್ನೊಂದು ಬಣ್ಣ ಪಡೆಯಿತು. ಹೀಗೆ ಬಹುಚರ್ಚಿತ ಘಟನೆಯಾಯಿತು. ಕೊನೆಯಲ್ಲಿ ಕೋರ್ಟು, ತೀರ್ಪು, ಅಪೀಲ್ ಮೊದಲಾದದ್ದು ದಶಕಗಳ ಕಾಲ ನಡೆಯಿತು. ಆ ಇಡೀ ಕೇಸ್ ಅನ್ನು ಜನರು ಮರೆಯದಂತೆ ನೆನಪಿಸಿಟ್ಟದ್ದೇ ಮಾಧ್ಯಮ. ಕೊನೆಗೊಂದು ದಿನ ಸಾಕ್ಷ್ಯದ ಕೊರತೆಯಿಂದಾಗಿ ಆತ ನಿರ್ದೋಷಿ ಎಂದಾಯಿತು.

ಈಗೆರಡು ವರ್ಷದ ಹಿಂದೆ ಹಾಲಿವುಡ್ಡಿನ ಚಿತ್ರೀಕರಣದ ಸಮಯದಲ್ಲಿ ಹೀಗೊಂದು ಘಟನೆ ನಡೆಯಿತು. ಅಲೆಕ್ ಬಾಲ್ಡ್‌ವಿನ್ ಎಂಬ ಖ್ಯಾತ ನಟ. ಅರಿಝೋನಾದ ಬಯಲೊಂದರಲ್ಲಿ ಅವನ ಚಲನಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆ ದಿನ ಸಿನಿಮಾದಲ್ಲಿ ಕ್ಯಾಮರಾದತ್ತ ಗನ್ ತೋರಿಸಿ ಗುಂಡು
ಹಾರಿಸುವ ಸೀನ್ ಚಿತ್ರೀಕರಣವಾಗಬೇಕಿತ್ತು. ಎಲ್ಲ ತಯಾರಿ ಮೇಕಪ್ ಇತ್ಯಾದಿ ಆಯಿತು. ಆ ದೃಶ್ಯವನ್ನು ಚಿತ್ರೀಕರಿಸಲು ‘ಆಕ್ಷನ್’ ಹೇಳಿದಾಗ ಅಲೆಕ್ ಬಾಲ್ಡ್‌ವಿನ್ ಡಮ್ಮಿ ಪಿಸ್ತೂಲನ್ನು ಕ್ಯಾಮರಾದತ್ತ ತೋರಿಸಿ ಟ್ರಿಗರ್ ಎಳೆದ. ತಕ್ಷಣ ಆ ಪಿಸ್ತೂಲಿನಿಂದ ನಿಜವಾದ ಗುಂಡು ಹಾರಿ ಹೋಗಿ ಎದುರಿಗಿದ್ದ
ಕ್ಯಾಮರಾ ವುಮೆನ್ ಸ್ಥಳದಲ್ಲಿಯೇ ಕುಸಿದುಬಿದ್ದಳು, ಕೊನೆಯುರಿಸೆಳೆದಳು.

ಅದು ಡಮ್ಮಿ ಪಿಸ್ತೂಲ್ ಆಗಿರಲಿಲ್ಲ ಮತ್ತು ಅದರಲ್ಲಿ ನಿಜವಾದ ಗುಂಡುಗಳಿದ್ದವು. ಈ ಫೇಕ್ ವಸ್ತುಗಳನ್ನು ಸರಬರಾಜು ಮಾಡುವವಳು ನಕಲಿ ಪಿಸ್ತೂಲಿನ ಬದಲಿಗೆ ಅಸಲಿ ಗುಂಡು ತುಂಬಿದ ಪಿಸ್ತೂಲನ್ನೇ ನಟನಿಗೆ ಕೊಟ್ಟುಬಿಟ್ಟಿದ್ದಳು. ಈ ಕೇಸ್ ಕೂಡ ಅಷ್ಟೆ. ಪರ-ವಿರೋಧದ ವಾದ ವಿವಾದ ಗಳಲ್ಲಿ ಯಾರದು ತಪ್ಪು, ಯಾರು ನಿರ್ದೋಷಿ ಎಂದು ಸಾರ್ವಜನಿಕವಾಗಿ ಬಹಳ ಚರ್ಚೆಯಾದವು. ಆಗೊಂದಿಷ್ಟು ದಿನ ಟಿವಿ ಹಚ್ಚಿದರೆಂದರೆ ಇದೇ ಸುದ್ದಿ.

ಇತ್ತೀಚೆಗೆ ಪೊಲೀಸ್ ಸ್ನೇಹಿತರೊಬ್ಬರ ಜತೆ ಮಾತನಾಡುತ್ತಿರುವಾಗ ಡಿಸಿಪಿ ಸೋಮಶೇಖರ್ ಕಥೆಯನ್ನು ಅವರು ನೆನಪಿಸಿಕೊಂಡು ಹೇಳಿದರು. ಸೋಮಶೇಖರ್ ಖಡಕ್ ಪೊಲೀಸ್, ಡಿಸಿಪಿ ಮೈಸೂರು. ಜತೆಗೆ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರ ಜತೆಯಲ್ಲಿ ಷಟ್ಲ್ ಬ್ಯಾಡ್ಮಿಂಟನ್ ಆಡುವಷ್ಟು
ಆಪ್ತ. ಅವರೊಂದು ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡುಬಿಡುತ್ತಾರೆ. ಆದದ್ದು ಇಷ್ಟು- ಅವರು, ಅವರ ಪತ್ನಿ, ಮಕ್ಕಳು ಮತ್ತು ಅವರ ಸ್ನೇಹಿತರು ಲಲಿತ್ ಮಹಲಿನ ಈಜುಕೊಳಕ್ಕೆ ಹೋಗಿದ್ದರು.

ಅಬ್ಬ ಅರೆವಿಕೃತ ವ್ಯಕ್ತಿ. ಆ ಈಜುಕೊಳಕ್ಕೆ ಬರುತ್ತಿದ್ದ ಹೆಣ್ಣುಮಕ್ಕಳನ್ನು ನೋಡುವುದು, ಅಲ್ಲಿಯೇ ಸುತ್ತಾಡುವುದು ಮಾಡುತ್ತಿದ್ದ. ಅದನ್ನು ಆ ದಿನ ಡಿಸಿಪಿ ನೋಡಿದರು. ಆತ ತಮ್ಮ ಪತ್ನಿಯನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಡಿಸಿಪಿಗೆ ಸಹಿಸಿಕೊಳ್ಳಲಾಗಲಿಲ್ಲ. ಅವನನ್ನು ಹತ್ತಿರಕ್ಕೆ ಕರೆದರು. ಅವನಿಗೆ ಇವರು ಡಿಸಿಪಿ ಎಂಬ ಅಂದಾಜಿಲ್ಲ. ವಾಗ್ವಾದವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಲುಪಿ ಡಿಸಿಪಿ ಅವನ ಕೆನ್ನೆಯ ಮೇಲೆ ಒಂದೇ ಒಂದು ಬಲವಾದ ಹೊಡೆತ ಕೊಟ್ಟರು. ದುರದೃಷ್ಟವಶಾತ್, ಅವರು ಕೊಟ್ಟ ಹೊಡೆತ ಟೆಂಪೊರಲ್ ಬೋನ್, ಮೇಲ್ದವಡೆಯನ್ನು ಜೋಡಿಸುವ ಮೂಳೆಯ ಸುತ್ತ ಪೆಟ್ಟು
ಬಿದ್ದುಬಿಡುತ್ತದೆ. ಅವನು ಧೊಪ್ ಎಂದು ನೀರಿಗೆ ಬೀಳುತ್ತಾನೆ. ಅಷ್ಟಕ್ಕೇ ಸತ್ತುಹೋಗಿಬಿಡುತ್ತಾನೆ.

ಮುಂದೆ ಡಿಸಿಪಿ ಅಲ್ಲಿ ಘಟನೆಯಾಗುವಾಗ ತಾವಿದ್ದದ್ದನ್ನು ಮರೆಮಾಚುತ್ತಾರೆ. ಆ ವ್ಯಕ್ತಿ ಕಾಲುಜಾರಿ ಬಿದ್ದು ಮುಳುಗಿದ ಎಂದು ಎಫ್ ಐಆರ್ ತಯಾ ರಾಗುತ್ತದೆ. ಇದೊಂದು ಆಕಸ್ಮಿಕ ಘಟನೆ ಎಂದು ಕೇಸ್ ಮುಚ್ಚುವ ಸಮಯದಲ್ಲಿ ಒಂದು ಘಟನೆ ನಡೆಯುತ್ತದೆ. ಈ ಡಿಸಿಪಿ ಮಕ್ಕಳ  ಸ್ನೇಹಿತರಬ್ಬ ನಾದ ಹೈಸ್ಕೂಲ್ ಹುಡುಗ ಇನ್ನೊಬ್ಬ ಪೊಲೀಸ್ ಅಧಿಕಾರಿಯ ಮಗ. ಆತ ತನ್ನ ತಂದೆಯ ಮುಂದೆ, ‘ಅಂಕಲ್ ಹೊಡೆದರು, ಅವನು ಬಿದ್ದು ಸತ್ತ’ ಎಂದು ಸತ್ಯ ಹೇಳಿಬಿಡುತ್ತಾನೆ.

ಅಲ್ಲಿಂದ ಮುಂದೆ ಸುದ್ದಿ ಹೊರಗೆಬೀಳುತ್ತದೆ. ಕೇಸ್ ಮುಚ್ಚಿಹಾಕುವ ದೊಂಬರಾಟ ಇತ್ಯಾದಿ ನಡೆಯುತ್ತದೆ. ಆಗ ಈ ಗುಸುಗುಸು ಸುದ್ದಿ ಪ್ರಶ್ನೆಯಾಗಿ ಪತ್ರಿಕೆಗಳಲ್ಲಿ ವರದಿ ಯಾಗಿಬಿಡುತ್ತದೆ. ಅಲ್ಲಿಂದ ಕೇಸ್ ಸಿಒಡಿ ಕೈಸೇರುತ್ತದೆ. ರೇವಣಸಿದ್ಧಯ್ಯನವರು ಎಡಿಜಿಪಿ. ಸೋಮಶೇಖರ್ ಮೊದಲೇ ವಿಜೃಂಭಿತ ಪೊಲೀಸ್ ಅಽಕಾರಿ. ಅಲ್ಲದೆ ದೊಡ್ಡ ರಾಜಕಾರಣಿಗಳ ಸಾಮೀಪ್ಯದಿಂದಾಗಿ ರಾಜಕೀಯವಾಗಿ ಕೂಡ ಪ್ರಬಲ. ಆದರೆ ಇಂಥzಂದು ಘಟನೆ ನಡೆದದ್ದು
ಹೌದು ಎಂದೆನಿಸಿದಾಕ್ಷಣ ಇಡೀ ವ್ಯವಸ್ಥೆ ಆ ವ್ಯಕ್ತಿಯಿಂದ ದೂರಸರಿದು ಮೇಲೆ ತಿರುಗಿಬಿತ್ತು. ಮೊದಲೇ ಅತ್ಯಂತ ದರ್ಪದಿಂದ ಮೆರೆಯುತ್ತಿದ್ದ ಡಿಸಿಪಿ. ಆತನೇ ಅಪರಾಧ ಮಾಡಿದ್ದಾನೆ ಎಂದಾಕ್ಷಣ ಸಾರ್ವಜನಿಕ ಜಾಗ್ರತೆ ಎಲ್ಲಿಲ್ಲದಷ್ಟು ಉಂಟಾಯಿತು. ಖುದ್ದು ಪೊಲೀಸ್ ವ್ಯವಸ್ಥೆಗೆ ಆತ ಅಪರಾಧಿ ಯಾದಲ್ಲಿ ಶಿಕ್ಷಿಸಲೇಬೇಕಾದ ನೈತಿಕ ಒತ್ತಡ.

ಇದೆಲ್ಲದರ ನಡುವೆ ಅವರು ಎರಡನೇ ಮದುವೆಯಾಗಿದ್ದಾರೆ ಎನ್ನುವ ವರದಿಗಳು ಬಂದವು. ಅವರ ಮನೆಯನ್ನು ಶೋಧಿಸಲು ಹೋದಾಗ ಅಲ್ಲಿ ಹೊರ ದೇಶದಿಂದ ಆಮದು ಮಾಡಿಕೊಂಡ ಪಿಸ್ತೂಲ್ ಒಂದು ಸಿಕ್ಕಿಬಿಟ್ಟಿತು. ಅದರ ಕುರಿತಾದ ವಿಚಾರಣೆಯಲ್ಲಿ ಡಿಸಿಪಿ, ಯಾರೋ ಅದನ್ನು ತನಗೆ ಗಿಫ್ಟ್ ಕೊಟ್ಟದ್ದು ಎಂದರು. ಶಸಾಸ ಕಾಯ್ದೆಯ ಅನ್ವಯ ಕಾನೂನುಬಾಹಿರವಾಗಿ ಪಿಸ್ತೂಲ್ ಇಟ್ಟುಕೊಂಡ ಕೇಸಿನ ಜತೆ ಗಿಫ್ಟ್ ಏಕೆ ಕೊಟ್ಟರು ಎಂದು ಭ್ರಷ್ಟಾಚಾರದ ಕೇಸ್ ಕೂಡ ಅವರ ಮೇಲಾಯಿತು. ಪಿಸ್ತೂಲ್ ಕೊಟ್ಟದ್ದು ಒಬ್ಬ ಸ್ಮಗ್ಲರ್.

ಹೀಗೆ ಒಂದರ ಮೇಲೆ ಇನ್ನೊಂದರಂತೆ ಆರೋಪಗಳು. ಕೊನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕೊಟ್ಟ ಮುಚ್ಚಿದ ಲಕೋಟೆಯ ವರದಿಯನ್ನಾಧರಿಸಿ ಡಿಸಿಪಿ ಖುಲಾಸೆಯಾದರು. ಆದರೆ ಇದೆಲ್ಲ ನಡೆಯುವಾಗ ಅವರು ಸಂಪೂರ್ಣ ಮಾನಸಿಕ ಸ್ಥಿಮಿತ ಕಳೆದುಕೊಂಡುಬಿಟ್ಟಿದ್ದರು. ಡೈವೋರ್ಸ್ ಆಗಿತ್ತು. ಕರ್ನಾಟಕ ಸರಕಾರ ಹೈಕೋರ್ಟಿಗೆ, ‘ಡಿಸಿಪಿ ಕೊಲೆ ಕೇಸಿನಲ್ಲಿ ಅಪರಾಽ’ ಎಂದು ಪುನಃ ಅಪೀಲ್ ಮಾಡಿತು. ಶಿಕ್ಷೆಯಾಯಿತು. ಅಷ್ಟಾಗುವಾಗ ಡಿಸಿಪಿ ತೀರಿಹೋದರು.

ಸಾಮಾನ್ಯವಾಗಿ ಇಂಥ ಹೈ-ಪ್ರೊಫೈಲ್ ಆರೋಪಿಗಳಿರುವಾಗ ಸಾರ್ವಜನಿಕರು ಅದನ್ನು ಅತಿಯಾಗಿ ಹಿಂಬಾಲಿಸುವುದು ಎಡೆಯೂ ಸಾಮಾನ್ಯ. ಅದರಲ್ಲಿಯೂ ಸಿನಿಮಾ ದವರಾದರೆ, ಅಥವಾ ಖುದ್ದು ನ್ಯಾಯವ್ಯವಸ್ಥೆಯವರೇ ಆಗಿ ಕ್ರಿಮಿನಲ್ ಅಪರಾಧವೆಂದಾದರೆ ಮುಗಿದೇಹೋಯಿತು.
ಘಟನೆ, ಬೆಳವಣಿಗೆಗಳ ಪ್ರತಿಯೊಂದು ವಿವರಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ, ಚರ್ಚೆಗಳಾಗುತ್ತವೆ. ಜನರಲ್ಲೂ ಅಷ್ಟೇ ಕುತೂಹಲ. ಇಲ್ಲಿ ನಮ್ಮೆಲ್ಲರ ನಡವಳಿಕೆಯನ್ನು ಒಂದು ಕ್ಷಣ ನಿಂತು ಗ್ರಹಿಸಿ ನೋಡಿ. ಇಡೀ ಸಮಾಜ ಒಂದು ವ್ಯಾನ್ ಡಯಾಗ್ರಾಮ್‌ನಂತಾಗಿಬಿಡುತ್ತದೆ. ನಾವೆ ಆ ವ್ಯಕ್ತಿಯ
ಜಾತಿ, ಹಿನ್ನೆಲೆ, ಮುನ್ನೆಲೆ, ಸಾಧನೆ, ಗಂಡು-ಹೆಣ್ಣು ಇತ್ಯಾದಿ ಒಂದೊಂದು ದೃಷ್ಟಿಕೋನದೊಂದಿಗೆ ವಾದ ಪ್ರತಿವಾದದಲ್ಲಿ ತೊಡಗುತ್ತೇವೆ. ‘ಆತ ಮಹಾ ಹೆಣ್ಣುಬಾಕ, ಅವನಿಗೆ ಶಿಕ್ಷೆಯಾಗಬೇಕು’ ಎಂದು ಒಬ್ಬರು, ‘ಅವನು ನಿಜವಾದ ಹೀರೊ’ ಎಂದು ಇನ್ನೊಬ್ಬರು.

‘ಅವನು ಈ ಜಾತಿ ಧರ್ಮದವನದಾದ್ದರಿಂದಲೇ ಹೀಗೆ’ ಎಂದು ಒಬ್ಬರು, ‘ಆ ಧರ್ಮವೇ ಹಾಗೆ’ ಎಂದು ಇನ್ನೊಬ್ಬರು. ಪ್ರತಿಯೊಬ್ಬರ ವಾದವೂ ವೈಯಕ್ತಿಕ
ಹಿನ್ನೆಲೆಯಲ್ಲಿ ಸತ್ಯವೆನಿಸುತ್ತಿರುತ್ತದೆ. ಇದೆಲ್ಲದರ ನಡುವೆ ಇನ್ನೊಂದು ಮಗ್ಗುಲಲ್ಲಿ ಸಮಾಜ ಒಗ್ಗಟ್ಟಾಗುತ್ತದೆ. ಈ ಒಗ್ಗಟ್ಟು ಎಷ್ಟು ಪ್ರಬಲವೆಂದರೆ ಆರೋಪಿ ನಿರಪರಾಧಿ ಇರಬಹುದು ಎಂದು ಹೇಳಿದರೆ ಸಹಿಸಿಕೊಳ್ಳಲಾಗುವುದಿಲ್ಲ. ‘ಇಂಥ ದರಿದ್ರರು ಸಮಾಜದಲ್ಲಿದ್ದಾರೆ’ ಎಂದು ಹೀಯಾಳಿಸಲು
ಮುಂದಾಗುತ್ತೇವೆ. ಅಪದ್ಧ ಮಾತಾಡುವವರು ಕೆಲವರೇ ಇದ್ದರೂ, ಅವರೇ ಬಹು ದೊಡ್ಡ ವರ್ಗವಿದೆ ಎಂಬಂತೆ ಈ ದೊಡ್ಡ ಗುಂಪು ಬಿಂಬಿಸುತ್ತದೆ.

ಕಳೆದ ಕೆಲವು ವಾರಗಳಿಂದ ಇಡೀ ದಿನ ಪಟ್ಟಣಗೆರೆ ಶೆಡ್ಡಿನ ಸುದ್ದಿಯೇ. ಸಾಕಾಗಿಹೋಗಿದೆ ಎಂದು ಆಗೀಗ ನಮಗೆಲ್ಲರಿಗೂ ಅನಿಸುವುದು ಸಹಜ. ಹಾಗನಿಸಲು ಸಕಾರಣವಿದೆ. ಕಾನೂನು, ಸಾಮಾಜಿಕ ವ್ಯವಸ್ಥೆಯಲ್ಲಿ ನಾವೆ ಒಪ್ಪಿಕೊಂಡು ಮಾಡಿಕೊಂಡ ಕೆಲವೊಂದಿಷ್ಟು ನಿಬಂಧನೆಗಳು. ಇಂಥದ್ದನ್ನು ಮಾಡಬೇಕು, ಇಂಥದ್ದನ್ನು ಮಾಡಬಾರದು. ಮಾಡಬಾರದ್ದು ಮಾಡಿದರೆ ಶಿಕ್ಷೆ, ಹಾಗಾಗಿ ಮಾಡಬಾರದು. ಆದಾಗ್ಯೂ ಸಮಾಜ ಒಪ್ಪದ ಕೆಲಸ ಮಾಡಿದರೆ ಅವರನ್ನು ಪ್ರತ್ಯೇಕಿಸಿ ಇಡಲು, ಬದಲಾಗಲು ಅವಕಾಶ ಮಾಡಿಕೊಡಲು ಜೈಲು ವ್ಯವಸ್ಥೆ. ಈ ಇಡೀ ವ್ಯವಸ್ಥೆಯ ಗಟ್ಟಿತನ ಪರೀಕ್ಷೆ ಗೊಳಪಡುವುದು ಇಂಥ ಸಂದರ್ಭದಲ್ಲಿ.

ನಾವೆಲ್ಲರೂ ನ್ಯಾಯಾಂಗ ವ್ಯವಸ್ಥೆಯ ಮೇಲಿಟ್ಟಿರುವ ನಂಬಿಕೆ ದೃಢಪಡಿಸಿಕೊಳ್ಳುವ ಹವಣಿಕೆ ಅದು. ಜನರು, ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗ ಕೂಡ ಈ ಒತ್ತಡದೊಳಕ್ಕೆ ಬರುವುದು ಇಲ್ಲಿ ಗಮನಿಸಲೇಬೇಕಾದ ವಿಶೇಷ. ಈಗ ನಮ್ಮ ವ್ಯವಸ್ಥೆ ಹೇಗಿದೆ ನೋಡಿ. ಅಪರಾಧ ಸಂಭವಿಸುತ್ತದೆ. ಜನರ ಗಮನಕ್ಕೆ ಬರುತ್ತದೆ. ಪೊಲೀಸರು ಅವರ ಹಿಂದೆ ಮಾಧ್ಯಮ ಬೀಳುತ್ತದೆ. ಕೆಲವು ಘಟನೆಗಳು ಅದರದೇ ಭೀಕರತೆಯ ಕಾರಣಕ್ಕೆ ಜನಾನುರಾಗ ಪಡೆಯು ತ್ತವೆ. ಪ್ರತಿಯೊಬ್ಬರೂ ನಾವು ಆ ಜಾಗದಲ್ಲಿದ್ದರೆ ಏನಾಗುತ್ತಿತ್ತು ಎಂದು ಒಂದು ಕ್ಷಣ ಯೋಚಿಸುತ್ತೇವೆ. ತಕ್ಷಣ ಇಡೀ ಜನಸ್ತೋಮದ ಭಯ ಜಾಗೃತವಾ ಗುತ್ತದೆ. ಭಯ ಘಟನೆಯದಲ್ಲ.

ಭಯ ನಾವೆ ನಿರ್ಮಿಸಿಕೊಂಡ ಕಾನೂನೆಂಬ ವ್ಯವಸ್ಥೆಯ ಗಟ್ಟಿತನದ ಬಗ್ಗೆ. ಏಕೆಂದರೆ ನಮ್ಮೆಲ್ಲರ ಸುರಕ್ಷತೆಗೆ ಅದು ಸರಿಯಿರುವುದು ಬಹಳ ಮುಖ್ಯ. ನಾವು ಮಾಡಿಕೊಂಡ ಆ ವ್ಯವಸ್ಥೆ ಸರಿಯಿದ್ದರೆ ಚಿಂತೆಪಡಬೇಕಿಲ್ಲ. ಈ ಸ್ವಯಂ ಪರೀಕ್ಷೆಯೇ ಸಮಾಜದಲ್ಲಿ ಬಹಳಷ್ಟು ಉದ್ವೇಗ ಹುಟ್ಟುಹಾಕುವುದು. ಪ್ರತಿಯೊಬ್ಬರಿಗೂ ವ್ಯವಸ್ಥೆ ಸರಿಯಿದೆಯೋ ಇಲ್ಲವೋ ಎಂಬ ಪ್ರಶ್ನೆ. ನಂಬಿಕೆ ದೃಢವಾಗಬೇಕಿದೆ. ಈ ಸಿಗರೇಟ್ ಫೋಟೋ ವಿಚಾರ ಬಂತಲ್ಲ, ಆಗ ನಮಗಿದ್ದ ಜೈಲ್ವ್ಯವಸ್ಥೆಯ ಮೇಲಿನ ಅನುಮಾನ ಸತ್ಯವೆಂದು ತಿಳಿದದ್ದು.

ಇತ್ತೀಚೆಗೆ ಜೈಲೆಂದರೆ ನಾವಂದುಕೊಂಡಂತೆಯೇ ಇದೆ ಎಂದುಕೊಂಡಿದ್ದವರಿಗೆಲ್ಲ ಅದು ಹಿಂದಿನಂತೆಯೇ, ಚಲನಚಿತ್ರಗಳಲ್ಲಿ ತೋರಿಸಿದಂತೆಯೇ ಇದೆ ಎಂದು ಭ್ರಮನಿರಸನವಾಯಿತು. ದರ್ಶನ್ ಕೇಸ್‌ನಲ್ಲಿ ನ್ಯಾಯವ್ಯವಸ್ಥೆ ಸೋಲುತ್ತದೆ ಎಂಬ ಆತಂಕವೇ ಇಷ್ಟೆ ಮಂದಿ ಇದನ್ನು ಹಿಂಬಾಲಿಸಲು ಕಾರಣ.
ದರ್ಶನ್ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಎ ಹಿನ್ನೆಲೆಯಲ್ಲಿ ಅತ್ಯಂತ ಪ್ರಶಂಸನೀಯ. ಏಕೆಂದರೆ ಈ ಘಟನೆಯ ತರುವಾಯ ಇಲ್ಲಿ ಎದ್ದದ್ದು ವ್ಯವಸ್ಥೆಯ ಮೇಲಿನ ಅನುಮಾನ. ಈ ಅನುಮಾನವನ್ನು ವ್ಯಕ್ತಪಡಿಸಿ, ಆ ಮೂಲಕ ವ್ಯವಸ್ಥೆಯನ್ನು ಸ್ವಪರೀಕ್ಷೆ ಮಾಡಿಕೊಳ್ಳುವುದು
ತ್ರಾಸದಾಯಕ, ಆದರೆ ಆಗೀಗ ಮಾಡಿಕೊಳ್ಳುತ್ತಲೇ ಇರಬೇಕಿದೆ. ಕನ್ನಡದ ಕೆಲವು ಟಿವಿ ಆಂಕರ್‌ಗಳು ಸೋಷಿಯಲ್ ಮೀಡಿಯಾ ಬಗ್ಗೆ ಕೇವಲವಾಗಿ ಆಡಿಕೊಳ್ಳುವುದನ್ನು ಕೇಳಿದ್ದೇನೆ.

ಆದರೆ ಜನರಿಗೆ ಅದು ಧ್ವನಿಯಾಗಿ ನಿಲ್ಲುತ್ತಿರುವುದರಿಂದಲೇ ಇದೆಲ್ಲ ನಡೆಯುತ್ತಿರುವುದು ಎನ್ನುವುದು ಇಲ್ಲಿನ ಸತ್ಯ. ಅದೇ ಸೋಷಿಯಲ್ ಮೀಡಿಯಾ ಟ್ರೆಂಡ್ ಅನ್ನು ಗ್ರಹಿಸಿ ಟಿವಿ ವಾಹಿನಿಗಳು ಕಾರ್ಯನಿರ್ವಹಿಸುವುದು ಗುಟ್ಟೇನಲ್ಲ. ಇಂದು ಇಂಥ ಒಂದು ಪರೀಕ್ಷೆಯಲ್ಲಿ ಟಿವಿ ಮತ್ತು ಪತ್ರಿಕೆಗಳ ಕೆಲಸವೂ
ಅನನ್ಯವೇ. ಟಿವಿ ವಾಹಿನಿಗಳು ಇಂಥ ಘಟನೆಯನ್ನು ಅದೆಷ್ಟೇ ದಿನ ಎಳೆಯಲಿ, ಅದೆಂಥಾ ನಾನ್ಸೆ ಅನ್ನಿಸುವ ವರದಿಗಳನ್ನೇ ಮಾಡಲಿ, ಇಂಥ ಘಟನೆಯನ್ನು ಜೀವಂತವಿಡುವಲ್ಲಿ ಕೂಡ ಅವುಗಳ ಪಾತ್ರ ದೊಡ್ಡದು. ಇದೇ ಘಟನೆ ದೂರದರ್ಶನ ವಾರ್ತೆಯ ಕಾಲದಲ್ಲಿ ನಡೆದಿದ್ದರೆ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿಕೊಂಡು ನೋಡಿ. ಆ ಕಾರಣಕ್ಕೆ ಪ್ರೈವೇಟ್ ಸುದ್ದಿವಾಹಿನಿಗಳು ಸಮಾಜಕ್ಕೆ ಅತ್ಯವಶ್ಯಕ ಮತ್ತು ಅವೇ ಈ ಸಮಾಜ ವ್ಯವಸ್ಥೆಯ ಮೂಲಾಧಾರ.

ಇಂದು ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಇವೆಲ್ಲ ಇಂಥ ಪರೀಕ್ಷೆಯ ಪರಿವ್ಯಾಪ್ತಿಯನ್ನು ಹೆಚ್ಚಿಸಿವೆ. ಈಗ ಪ್ರಪಂಚದ ಯಾವುದೇ ಮೂಲೆ ಯಲ್ಲಿದ್ದರೂ ಯಾವುದೇ ಈ ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಹಾಗಾಗಿ ಇಂಥದ್ದರಲ್ಲಿ ಜನರು ಹೆಚ್ಚೆಚ್ಚು ಭಾಗವಹಿಸಿದಷ್ಟು ಒಳ್ಳೆಯದು. ನಮ್ಮ ಸಮಾಜ ಏನೆಂಬುದರ ಅರಿವಾದರಷ್ಟೇ ಸರಿಮಾಡಿಕೊಳ್ಳಲು ಸಾಧ್ಯವಲ್ಲವೇ? ಅಲ್ಲದೆ ಸಮಾಜದ ಭಾಗವಾದ ನಮ್ಮೆಲ್ಲರ ಕರ್ತವ್ಯ, ಜವಾಬ್ದಾರಿ ಕೂಡ ಈಗಲೇ ಪರೀಕ್ಷೆಗೊಳಗಾಗುವುದು.

ಹೈ-ಪ್ರೊಫೈಲ್ ಸೆಲೆಬ್ರಿಟಿಯೊಬ್ಬ ಅಪರಾಧವೆಸಗಿದರೆ ಆತನಿಗೂ ಜನಸಾಮಾನ್ಯರಷ್ಟೇ ಶಿಕ್ಷೆ ಎಂಬುದು ಏಕತೆ ಹೌದು. ಆದರೆ ಸೆಲೆಬ್ರಿಟಿ ಎಂದರೆ ಆತ ಪ್ರಭಾವಿ ವ್ಯಕ್ತಿ. ಆತ ಅದನ್ನು ಪಡೆಯುವುದು ಜನಾನುರಾಗದಿಂದಲೇ ಆಗಿರುತ್ತದೆ. ಆ ನಿಟ್ಟಿನಲ್ಲಿ ಅವರಿಗೆ ಹೆಚ್ಚಿಗೆ ಶಿಕ್ಷೆಯಾಗಬೇಕು ಎಂದು ಸಮಾಜ
ಬಯಸುವುದಿದೆ. ಇದು ಒಂದು ದೃಷ್ಟಿಕೋನದಲ್ಲಿ ಹೌದೆನ್ನಿಸಬಹುದು. ಆದರೆ ಒಂದಂತೂ ನಿಜ. ಇಂದಿನ ನಮ್ಮ ವ್ಯವಸ್ಥೆ, ಮಾಧ್ಯಮ ಹೇಗೆ ರೂಪು ಗೊಂಡಿವೆಯೆಂದರೆ ಆದರ್ಶವೆನಿಸಿಕೊಂಡ ಅಪರಾಧಿ ಉಳಿದವರಿಗಿಂತ ಹೆಚ್ಚಿನ ವಿಚಾರಣೆ ಎದುರಿಸಬೇಕಿದೆ. ಅಲ್ಲದೆ ಸಿಕ್ಕಿಬಿದ್ದು ಮಾಧ್ಯಮ, ಜಾಲತಾ ಣಕ್ಕೆ ವಿಷಯ ತಿಳಿದಮೇಲೆ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಂತೂ ಆಗುವುದಿಲ್ಲ.

ಅಸಂಖ್ಯ ಹಿಂಬಾಲಕರಿರುವ ಕಾರಣಕ್ಕೆ ಅವರ ಸಾಮಾಜಿಕ ಜವಾಬ್ದಾರಿ ದೊಡ್ಡದು, ಹಾಗಾಗಿ ಇದು ಸರಿ. ಒಟ್ಟಾರೆ ಸಮಾಜದ ಭಾಗವೇ ಆಗಿರುವ ನಾವೆ ಇಂಥ ಘಟನೆಯಾದಾಗ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಹೌದು, ಕೇಳಿದ್ದೇ ಕೇಳಿ ಒಂದಿಷ್ಟು ಕಾಲದ ನಂತರ ಸುಸ್ತೆನಿಸುತ್ತದೆ. News fatigue  ಸಾಕೆನಿಸುತ್ತದೆ. ಇಂಥ ಘಟನೆಯನ್ನು ಸಮಾಜ ಬಿಡುವ ವೇಗ ಹೆಚ್ಚಿದಷ್ಟೂ ಸಮಾಜ ಕೆಳಕ್ಕಿಳಿಯುತ್ತದೆ. ಇಂದು ಆಧುನಿಕ ಸಮಾಜಗಳು ಇದೆಲ್ಲವನ್ನು ಬಹುಬೇಗ ಪಕ್ಕಕ್ಕಿಟ್ಟುಬಿಡುತ್ತವೆ. ಆದರೆ ಭಾರತ, ಕರ್ನಾಟಕ ಹಾಗಲ್ಲ ಎಂಬುದು ಈಗ ಸಾಬೀತಾಗಿದೆ. ನಮ್ಮಲ್ಲಿನ ಈ ಸ್ವಪರೀಕ್ಷೆಯ ತೀಕ್ಷ್ಣತೆ ಹೆಚ್ಚಿದಷ್ಟೂ ಒಳಿತು. ಒಳ್ಳೆಯ ಸಮಾಜ ಇನ್ನಷ್ಟು ಸುಧಾರಿಸುತ್ತಿರುವ ಲಕ್ಷಣ ಅದು.

Leave a Reply

Your email address will not be published. Required fields are marked *