Thursday, 12th December 2024

ಪಕ್ಷ ಪುಸ್ತಕಗಳಾಗುತ್ತಿರುವ ಶಾಲಾ ಪಠ್ಯಪುಸ್ತಕಗಳು

ಜನ ಧ್ವನಿ

ಮಾರುತೀಶ್ ಅಗ್ರಾರ

ಪ್ರತಿ ಬಾರಿಯೂ ಸರಕಾರ ಬದಲಾದಾಗ ಪಠ್ಯ ಪರಿಷ್ಕರಣೆ ಎನ್ನುವುದು ವಿವಾದದ ರೂಪ ತಾಳುವುದು ಮಾಮೂಲಿ. ಈಗ ಕಾಂಗ್ರೆಸ್ ಸರದಿ.
ಮಾನ್ಯ ಶಿಕ್ಷಣ ಸಚಿವರೇ, ಸರಕಾರ ನಿಮ್ಮದೇ ಆಗಿರುವುದರಿಂದ ಪಠ್ಯ ಪರಿಷ್ಕರಣೆ ಮಾಡುವ ಹಕ್ಕು ಆಡಳಿತಾತ್ಮಕವಾಗಿ ನಿಮಗೆ ಸಿಕ್ಕಿದೆ. ಅದರಂತೆ ನೀವು ಕೂಡ ಈ ಹಿಂದಿನ ಸರಕಾರದ ಅವಧಿಯಲ್ಲಿನ ಪಠ್ಯ ಪುಸ್ತಕಗಳಲ್ಲಿದ್ದ ಅನೇಕ ಪಾಠಗಳಿಗೆ ಕತ್ತರಿ ಹಾಕುವುದಕ್ಕೆ ಮುಂದಾಗಿದ್ದೀರಿ, ಇರಲಿ. ರಾಜಕೀಯ ಪಕ್ಷಗಳ ಸೈದ್ಧಾಂತಿಕ ಭಿನ್ನತೆಯ ಕಾರಣದಿಂದ ಪಠ್ಯ ಪರಿಷ್ಕರಣೆ ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ.

ಆ ಮೂಲಕ ಮಕ್ಕಳ ಶೈಕ್ಷಣಿಕ ಬದುಕಿನ ಜತೆ ಚೆಟವಾಡುವುದು ನಿಜಕ್ಕೂ ದುರಂತವೇ ಸರಿ. ಆದರೆ ರಾಜಕಾರಣಿಗಳ ಅನಿವಾರ್ಯ ಹಾಗೂ ಸೈದ್ಧಾಂತಿಕ ನಿಲುವುಗಳ ಕಾರಣದಿಂದ ಗೊಂದಲ ಕ್ಕಿಡಾಗುತ್ತಿರುವುದು ಮಾತ್ರ ವಿದ್ಯಾರ್ಥಿಗಳು. ಮಕ್ಕಳನ್ನು ಈಗಿನಿಂದಲೇ ದಾರಿ ತಪ್ಪಿಸಿ ಭವಿಷ್ಯದಲ್ಲಿ ಅವರ ಅಭಿಪ್ರಾಯಗಳ ಜತೆ ದೃಢತೆ ಕಾಯ್ದು ಕೊಳ್ಳುವ ಮುನ್ನವೇ ಅವರಲ್ಲಿ ಗೊಂದಲ ಉಂಟು ಮಾಡು ವುದು ಶಿಕ್ಷಣದ ಆಶಯವೇ? ಅಥವಾ ಶಿಕ್ಷಣದಲ್ಲಿ ಮೌಲ್ಯ ವಾದುದ್ದನ್ನು ಬದಿಗೆ ಸರಿಸಿ, ರಾಜಕೀಯ ಸಿದ್ಧಾಂತಗಳನ್ನು ತಿಳಿಸಿಕೊಡುವುದೇ ಶಿಕ್ಷಣದ ಆಶಯವಾಗಬೇಕೆ? ಏಕೆಂದರೆ
ಇಂದು ಎಲ್ಲ ರಾಜಕೀಯ ಪಕ್ಷಗಳು ಸಹ ಅಧಿಕಾರದ ಆಸೆಗಾಗಿ ಎಲ್ಲ ರಂಗಗಳಲ್ಲೂ ತನ್ನ ಪ್ರಭಾವ ವನ್ನು ಬೀರಿವೆ; ಬೀರುತ್ತಿವೆ.

ಹಾಗಾಗಿ ಶಿಕ್ಷಣ ವ್ಯವಸ್ಥೆ ಕೂಡ ರಾಜಕೀಯಕರಣಗೊಂಡು ದಶಕಗಳೇ ಕಳೆದಿವೆ. ಇದರಿಂದಾಗಿ ಮಕ್ಕಳು ಓದುವ ಪಠ್ಯ ಪುಸ್ತಕಗಳು ಸಹ ರಾಜಕಾರಣದ ತಲೆ ದಿಂಬುಗಳಾಗಿ ಮಾರ್ಪಟ್ಟಿವೆ! ಒಂದು ಅರ್ಥದಲ್ಲಿ ಪಠ್ಯಪುಸ್ತಕಗಳು ‘ಪಕ್ಷ ಪುಸ್ತಕ’ ಗಳಾಗುತ್ತಿವೆ. ಅದರ ಪರಿಣಾಮವೇ ಇಂದು ಪಠ್ಯ ಪರಿಷ್ಕರಣೆ ಇಷ್ಟು ವಿವಾದಕ್ಕೆ ಕಾರಣವಾಗಿದೆ ಎನ್ನಬಹುದು. ಮಾನ್ಯ ಶಿಕ್ಷಣ ಮಂತ್ರಿಗಳೇ, ನಿಮ್ಮ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿದ್ಯಾರ್ಥಿಗಳ ತಲೆಯೊಳಗೆ ಇಲ್ಲ ಸಲ್ಲದ ಗೊಂದಲಗಳನ್ನು ಸೃಷ್ಟಿಸುವುದೇಕೆ? ಎನ್ನುವುದೇ ಅರ್ಥ ವಾಗದ ಪ್ರಶ್ನೆ.

ನೋಡಿ, ಕಳೆದ ಬಾರಿಯ ಪಠ್ಯವೊಂದರ ಅಧ್ಯಾಯದಲ್ಲಿ ಟಿಪ್ಪು ಸುಲ್ತಾನ್ ಒಬ್ಬ ಮತಾಂಧ ರಾಜನಾಗಿದ್ದ ಎಂದಷ್ಟೇ ಹೇಳಿದ್ದರೆ, ಈಗ ತಾವು ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎಂದೆಲ್ಲ ಹೇಳಿದರೆ ಮಕ್ಕಳು ಯಾವುದನ್ನು ಮನಗಾಣಬೇಕು? ನಂಬಬೇಕು?
ಇಂಥ ಅಪಸವ್ಯಗಳು, ವಿತಂಡವಾದಿತ ವಿಷಯಗಳು ಮಕ್ಕಳ ಬೌದ್ಧಿಕತೆಯ ಮೇಲೆ ದಾಳಿ ಮಾಡಿದಂತಾಗುವುದಿಲ್ಲವೇ? ಯಾವಾಗ ಪಠ್ಯಪುಸ್ತಕಗಳು ಪಕ್ಷದ ಸಿದ್ಧಾಂತಗಳ ಅಡಿಯಲ್ಲಿ ರೂಪುಗೊಳ್ಳುತ್ತವೋ ಆಗೆಲ್ಲ ಪಠ್ಯ ಪುಸ್ತಕಗಳು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತವೆ.

ಇದು ಎಲ್ಲ ಪಕ್ಷಗಳಿಗೂ ಅನ್ವಯ. ಅದು ಬಿಡಿ. ಅಂದಹಾಗೆ ನಿಮ್ಮ ನಿಮ್ಮ (ಬಿಜೆಪಿ, ಕಾಂಗ್ರೆಸ್ಸಿಗರ) ರಾಜಕೀಯ ತೀಟೆ-ತೆವಲುಗಳು ಏನೇ ಇದ್ದರೂ
ಅದು ನಿಮ್ಮ ನಿಮ್ಮ ಪಕ್ಷದ ವೇದಿಕೆ, ಸಭೆ-ಸಮಾರಂಭಗಳಲ್ಲಿ ಇಟ್ಟುಕೊಳ್ಳುವುದನ್ನು ಬಿಟ್ಟು ಅದನ್ನು ಸಹ ಮಕ್ಕಳ ವಿದ್ಯಾಭ್ಯಾಸದ ಜತೆ ಸೇರಿಸಿ ರಾಜಕೀಯಕರಣಗೊಳಿಸುವುದು ಎಷ್ಟು ಸರಿ? ಉದಾಹರಣೆಗೆ, ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ ಕುರಿತಂತೆ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿಯ ಅಮರಪುತ್ರರು’ ಪಾಠವನ್ನು ತೆಗೆಯುವ ಅವಶ್ಯಕತೆ ಏನಿತ್ತು? ರಾಜಕೀಯವಾಗಿ ಚಕ್ರವರ್ತಿ ಸೂಲಿಬೆಲೆ ಹಾಗೂ ಕಾಂಗ್ರೆಸ್ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿರಬಹುದು, ಇವೆ.

ಬೇಕಿದ್ದರೆ ಸೂಲಿಬೆಲೆಯ ವರನ್ನು ನೀವು ರಾಜಕೀಯವಾಗಿ ವಿರೋಧಿಸಿ. ಸೂಲಿಬೆಲೆಯವರು ತಪ್ಪು ಮಾಡಿದ್ದರೆ ಅವರನ್ನು ಜೈಲಿಗೆ ಬೇಕಾದರೂ
ಹಾಕಬಹುದು! ಆದರೆ, ನಿಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ದೇಶಭಕ್ತರ ಕುರಿತಾದ ಪಾಠ ತೆಗೆಯುವುದು ಅದ್ಯಾವ ಸೀಮೆ ನ್ಯಾಯ ಹೇಳಿ? ಅಂದರೆ ನಿಮ್ಮ ರಾಜಕೀಯ ವೈರತ್ವ ಸೂಲಿಬೆಲೆಯವರ ಮೇಲೆಯೋ ಅಥವಾ ಭಗತ್ ಸಿಂಗ್ ಅವರ ರಾಷ್ಟ್ರಪ್ರೇಮದ ಮೇಲೆಯೋ? ಅಥವಾ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ ಚಕ್ರವರ್ತಿಯ ನೆಪ ಇಟ್ಟುಕೊಂಡು ರಾಷ್ಟ್ರಪ್ರೇಮಿಗಳ ಪಾಠವನ್ನು ಪಠ್ಯದಿಂದ ಕೈಬಿಡುವ ನಿರ್ಧಾರ ಮಾಡಿ ವಿದ್ಯಾರ್ಥಿಗಳ ತಲೆಯೊಳಗೆ ದೇಶಾಭಿಮಾನ ಬೆಳೆಯದಂತೆ ಮಾಡುವುದೋ? ಏನು? ಅರ್ಥಾತ್ ಇಂತಹ ನಿರ್ಧಾರಗಳು ಪರೋಕ್ಷವಾಗಿ ಭಗತ್, ರಾಜಗುರು ಹಾಗೂ ಸುಖದೇವ್ ಅವರುಗಳನ್ನು ಅವಮಾನಿಸಿದಂತೆ ಆಗುವುದಿಲ್ಲವೇ? ಜತೆಗೆ ಮಕ್ಕಳು ಸಹ ದೇಶಭಕ್ತರ ಹೋರಾಟ, ತ್ಯಾಗ-ಬಲಿದಾನಗಳ ಕಥೆಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾದಂತಾಗುವುದಿಲ್ಲವೇ? ಇಂಥ ರಾಜಕೀಯ ಪ್ರೇರಿತ ನಿರ್ಧಾರಗಳಿಂದ, ಯಾರೋ ನಾಲ್ಕು ಬಿಳಿ ಮಂಡೆ ಸಾಹಿತಿಗಳ ಅವಿವೇಕದ ಸಲಹೆಗಳಿಂದ ನಷ್ಟವಾಗಿದ್ದು ಯಾರಿಗೆ? ಮಕ್ಕಳಿಗೆ ಅಲ್ಲವೇ.

ಬೇಡ, ಭಗತ್ ಸಿಂಗ್ ಅವರ ಪಾಠ ತೆಗೆದು ಬೇರೆ ಯಾವ ಸ್ವಾತಂತ್ರ್ಯ ಹೋರಾಟಗಾರರ ಪಾಠವನ್ನು ಪಠ್ಯದಲ್ಲಿ ಸೇರಿಸಿದ್ದೀರಿ? ಹೇಳಿ ನೋಡೋಣ. ಇನ್ನು ಬನ್ನಂಜೆ ಗೋವಿಂದಾಚಾರ್ಯ, ಶತಾವಧಾನಿ ಗಣೇಶ್ ಅವರುಗಳ ಪಾಠಗಳನ್ನು ಕೈಬಿಟ್ಟಿದ್ದೀರಿ. ಇದಕ್ಕೆ ಕಾರಣಗಳೇನು? ಬನ್ನಂಜೆ ಮತ್ತು ಶತಾವಧಾನಿ ಗಣೇಶ್ ಅವರು ಇಬ್ಬರೂ ಕೂಡ ಕನ್ನಡದ ಬಹುದೊಡ್ಡ ವಿದ್ವಾಂಸರು. ಇಂಥ ಲೇಖಕರ ಪಾಠಗಳನ್ನು ಕೈಬಿಟ್ಟಿದ್ದು ಸಹ ಸೈದ್ಧಾಂತಿಕ ರಾಜಕಾರಣದ ವೈರತ್ವವೇ ಅಲ್ಲವೇ.

ಯಾಕೆಂದರೆ ಆ ಇಬ್ಬರೂ ಮಹನೀಯರು ಕೂಡ ಹಿಂದುತ್ವದ ಪ್ರತಿಪಾದಕರು. ಇದೇ ನಿಮಗೆ ಸಮಸ್ಯೆಯೇ? ಇರಲಿ ಕಾಂಗ್ರೆಸ್ ಸರಕಾರಕ್ಕೆ ಹಿಂದುತ್ವವಾದಿಗಳನ್ನು ಕಂಡರೆ ವಿರೋಧ ಎನ್ನುವುದು ಗೊತ್ತಿದೆ! ಆದರೆ ಶಾಲಾ ಪಠ್ಯಗಳಲ್ಲೂ ಇಂಥ ವರ್ತನೆ ತೋರುವುದು ಅವಿವೇಕಲ್ಲವೇ? ಹೋಗಲಿ, ಬನ್ನಂಜೆ ಗೋವಿಂದಾಚಾರ್ಯ, ಶತಾವಧಾನಿ ಗಣೇಶ್ ಹಾಗೂ ಇನ್ನಿತರ ಕೆಲವು ಲೇಖಕರ ಪಾಠಗಳನ್ನು ಕೈಬಿಟ್ಟು ಆ ಜಾಗಕ್ಕೆ ಮರು
ಸೇರ್ಪಡೆ ಮಾಡಿರುವ ಪಾಠಗಳು ಯಾವುವು ಎಂದರೆ ಅವೂ ವಿವಾದಿತ ಪಾಠಗಳೇ ಆಗಿದ್ದವು. ಈ ಹಿಂದೆ ೬ನೇ ತರಗತಿಯ ಸಮಾಜ ವಿeನ ಪಠ್ಯಪುಸ್ತಕದಲ್ಲಿದ್ದ ‘ವೇದ ಕಾಲದ ಸಂಸ್ಕೃತಿ’ ಹಾಗೂ ‘ಹೊಸ ಧರ್ಮಗಳ ಉದಯ’ ಎನ್ನುವ ಪಾಠವನ್ನು ಮರು ಸೇರ್ಪಡೆ ಮಾಡುವ ತೀರ್ಮಾನ ಮಾಡಿದ್ದೀರಿ. ಇದರ ಅವಶ್ಯಕತೆ ಏನಿತ್ತು? ಯಾಕೆಂದರೆ ಈ ಎರಡೂ ಪಾಠಗಳಿಗೆ ಈ ಹಿಂದೆಯೂ ವಿರೋಧ ವ್ಯಕ್ತವಾಗಿತ್ತು.

ಕಾರಣ, ವೇದ ಕಾಲದ ಸಂಸ್ಕೃತಿ ಹಾಗೂ ಹೊಸ ಧರ್ಮಗಳ ಉದಯ ಎರಡರಲ್ಲೂ ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿರುವ ಅಂಶಗಳಿದ್ದವು.
ಆ ಮೂಲಕ ಪಠ್ಯಪುಸ್ತಕಗಳಲ್ಲಿ ಹಿಂದೂ ಧರ್ಮವನ್ನು ತೆಗಳುವ ಕೆಲಸವಾಗಿದೆ ಎಂದು ಈ ಹಿಂದೆಯೇ ವಿವಾದವೆದ್ದ ಕಾರಣ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಮಕ್ಕಳಿಗೆ ಈ ಪಾಠಗಳನ್ನು ಬೋಧಿಸದಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಈಗ ಮತ್ತೆ ಅದೇ ವಿವಾದಿತ ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ಮರು ಸೇರ್ಪಡೆ ಮಾಡುವುದರ ಉದ್ದೇಶವಾದರೂ ಏನು? ಹಿಂದೂ ಧರ್ಮ ದ್ವೇಷವೇ? ಅಥವಾ ಮಕ್ಕಳಲ್ಲಿ ಹಿಂದೂಧರ್ಮದ ಬಗ್ಗೆ ಕೀಳು ಭಾವನೆ ಮೂಡಿಸುವ ಉದ್ದೇಶವೇ? ಇದೂ ಬಿಡಿ.

ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿದ್ದ ಪರಿಷ್ಕರಣೆಯ ಹೆಚ್ಚು ಕಡಿಮೆ ಎಲ್ಲ ಪಾಠಗಳನ್ನು ಈಗ ತೆಗೆದಿದ್ದೀರಿ ಅಥವಾ ಕೈಬಿಡುವ ಮನಸ್ಸು ಮಾಡಿದ್ದೀರಿ. ಆದರೆ ಆ ಜಾಗಗಳಿಗೆ ಹೊಸ ಹೊಸ ರಾಷ್ಟ್ರನಾಯಕರ ಜೀವನ ಚರಿತ್ರೆಯನ್ನೋ, ಸಮಾಜ ಸುಧಾರಕರ ಸಾಧನೆಯ ಕುರಿತಾದ
ಲೇಖನಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಬಹುದಿತ್ತು. ಉದಾಹರಣೆಗೆ, ‘ವೃಕ್ಷಮಾತೆ’ ಎಂದೇ ಪ್ರಸಿದ್ಧಿ ಪಡೆದಿರುವ, ಲಕ್ಷಾಂತರ ಮರಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸೀಗೌಡ ಅವರ ಸಾಧನೆ ಕುರಿತಾದ ಸಂದೇಶವನ್ನು ಪಠ್ಯದಲ್ಲಿ ಸೇರಿಸಬಹುದಿತ್ತು.
ಇಲ್ಲದಿದ್ದರೆ ಕಿತ್ತಳೆ ಹಣ್ಣುಗಳನ್ನು ಬೀದಿ ಬೀದಿಗಳಲ್ಲಿ ಮಾರಾಟ ಮಾಡಿ ಶಾಲೆಕಟ್ಟಿದ ‘ಅಕ್ಷರ ಸಂತ’, ಇನ್ನೊಬ್ಬ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರ ಸಾಧನೆ ಕುರಿತಾದ ವಿಚಾರ ವನ್ನು ಪಠ್ಯಪುಸ್ತಕಗಳ ಮೂಲಕ ಮಕ್ಕಳಿಗೆ ಹೇಳಬಹುದಿತ್ತು.

ಇದರಿಂದ ಅನೇಕ ಮಕ್ಕಳಿಗೆ ಚಿಕ್ಕ ವಯಸ್ಸಿನ ಸಾಧನೆ ಹಾಗೂ ಸಮಾಜದ ಸೇವೆಯ ಬಗ್ಗೆ ಭಾವನೆ ಮೂಡುತ್ತಿತ್ತು. ಇದು ಮಕ್ಕಳಿಗೆ ಪ್ರೇರಣಾದಾಯಿಯಾಗುತ್ತಿತ್ತು. ಅದನ್ನು ಬಿಟ್ಟು ದಶಕಗಳಿಂದ ಓದುತ್ತ ಬರುತ್ತಿರುವ ಅದೇ ನೆಹರು ಸಂಬಂಧಿತ ಪಾಠಗಳನ್ನು ಈಗಲೂ ಪಠ್ಯಪುಸ್ತಕಗಳಲ್ಲಿ ಸೇರಿಸುವ ಮೂಲಕ ಯಾರ ಋಣ ಸಂದಾಯ ಮಾಡುತ್ತಿದ್ದೀರಿ ಸಚಿವರೇ? ನೆಹರು ‘ಮಗಳಿಗೆ ಬರೆದ ಪತ್ರ’ ಈಗ ಪಠ್ಯದಲ್ಲಿ ಸೇರಿಸುವ ಅವಶ್ಯಕತೆ ಏನಿತ್ತು ಹೇಳಿ? ಮಗಳಿಗೆ ಖಾಸಗಿಯಾಗಿ ಹುಟ್ಟುಹಬ್ಬದ ನೆಪದಲ್ಲಿ ನೆಹರು ಬರೆದ ಪತ್ರವನ್ನು ಮಕ್ಕಳ್ಯಾಕೆ ಓದಬೇಕು?
ಹಾಗೂ ಮಕ್ಕಳು ಇನ್ನು ಎಷ್ಟು ವರ್ಷ ಇದೇ ನೆಹರು, ಇಂದಿರಾಗಾಂಽ ಅವರ ಕಥೆಗಳನ್ನೇ ಓದಬೇಕು? ದೇಶದಲ್ಲಿ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವ ಸಾಧಕರು ಇಲ್ಲವೇ? ಕ್ರೀಡಾ ಪಟುಗಳ, ಸಮಾಜ ಸುಧಾರಕರ, ಶೈಕ್ಷಣಿಕ ರಂಗದಲ್ಲಿ ಬಹುದೊಡ್ಡ ಸಾಧನೆಗೈದವರ, ಸಾಧನೆ ಮಾಡಿದ ವಿeನಿಗಳ ಸಂದೇಶಗಳನ್ನೇಕೆ ಪಠ್ಯಪುಸ್ತಕಗಳಲ್ಲಿ ಸೇರಿಸಬಾರದು? ನಿಜವಾಗಿಯೂ ತುಳಸೀಗೌಡ, ಸುಕ್ರಿ ಬೊಮ್ಮಗೌಡ, ಹರೇಕಳ ಹಾಜಬ್ಬ ಇಂಥವರ ಸಾಧನೆಗಳೇ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವುದು.

ಸರಕಾರಗಳು ಸಹ ಇಂಥವರ ಸಾಧನೆಗಳನ್ನೇ ಮಕ್ಕಳಲ್ಲಿ ಬಿತ್ತಬೇಕಾಗಿದ್ದು. ದುರ್ದೈವ, ನಿಮ್ಮನಿಮ್ಮ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ನಿಮ್ಮನಿಮ್ಮ ಪಕ್ಷದ ವರಿಷ್ಠರನ್ನು ಮೆಚ್ಚಿಸುವುದಕ್ಕಾಗಿ ಮಕ್ಕಳ ಪಠ್ಯದಲ್ಲಿ ಅದೇ ಹಳಸಲು ರಾಗವನ್ನು ಯಾಕೆ ಓದಿಸುತ್ತೀರಿ? ಈಗ ತಾತ್ಕಾಲಿಕವಾಗಿ ಪರಿಷ್ಕರಣೆ ಸಮಿತಿಯನ್ನು ರಚಿಸಲಾಗಿದೆ. ಅದಕ್ಕೆ ರಾಜಪ್ಪ ದಳವಾಯಿ ಅನ್ನುವವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಆದರೆ ಈ ರಾಜಪ್ಪ ದಳವಾಯಿ ಬರಗೂರು ರಾಮಚಂದ್ರಪ್ಪನವರ ಬಲಗೈ ಎಂಬುದನ್ನು ಬಿಟ್ಟರೆ ಅವರ ಸಾಧನೆ ಏನೂ ಇಲ್ಲ! ಅಂಥವರನ್ನು ಪಠ್ಯಪುಸ್ತಕಗಳ
ವಿಚಾರದಲ್ಲಿ ಸಲಹೆಗಳನ್ನು ಕೇಳುವುದು ಒಂದೇ, ಬಾವಿಯಲ್ಲಿನ ಮಂಡೂಕನ ಕಥೆ ಕೇಳುವುದು ಒಂದೇ! ಅಂಥದ್ದರಲ್ಲಿ ಅವರನ್ನು ಯಾವ ಆಧಾರದ ಮೇಲೆ ಪಠ್ಯಪುಸ್ತಕಗಳ ಪರಿಷ್ಕರಣೆಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆಯೋ ಗೊತ್ತಿಲ್ಲ.

ಗೊಂದಲಗಳ ಮೂಲ ಇರುವುದೇ ಇಲ್ಲಿ. ಪ್ರಶಸ್ತಿ- ಫಲಕಗಳಿಗಾಗಿ ಪಕ್ಷಗಳ ಬಕೇಟು ಹಿಡಿಯುವ ಕೆಲ ಸಾಹಿತಿಗಳ ಮಾತುಗಳು, ನಿರ್ಧಾರಗಳು ಸಮಾಜದ ದಾರಿ ತಪ್ಪಿಸುತ್ತವೇ. ಅದಕ್ಕೆ ಪಠ್ಯಪುಸ್ತಕಗಳ ಬದಲಾವಣೆಗಳೇ ಉದಾಹರಣೆ. ಅದನ್ನು ಸರಿಪಡಿಸುವ ಬದಲು ಮಕ್ಕಳು ಓದುವ ಪಠ್ಯಗಳಲ್ಲಿ ರಾಜಕೀಯವನ್ನು ಬಲವಂತವಾಗಿ ತುರುಕಿದರೆ ಅದೇ ಮಕ್ಕಳೇ ಮುಂದಿನ ದಿನಗಳಲ್ಲಿ ಸತ್ಯದ ಅರಿವಾಗಿ ಪಕ್ಷ ಹಾಗೂ ಸರಕಾರಗಳ ವಿರುದ್ಧ ತಿರುಗಿ ಬೀಳುತ್ತವೇ. ಕುವೆಂಪು ಅವರು ಹೇಳಿದಂತೆ, ಸತ್ಯವು ಕೆಣಕಿದಂತೆಲ್ಲ ವಿಶಾಲವಾಗುವುದು, ಕೆಣಕಿದಂತೆಲ್ಲ ತಳತಳಿಸುವುದು, ಹೊಗೆಯಾಡುವ ಬೆಂಕಿಯಂತೆ, ಬೂದಿಮುಚ್ಚಿದ ಕೆಂಡದಂತೆ ಎನ್ನುವ ಮಾತುಗಳು ಮಾನ್ಯ ಸಚಿವರಿಗೆ ನೆನಪಿರಲಿ. ಹಾಗಾಗಿ ಪಠ್ಯಪುಸ್ತಕ ಪರಿಷ್ಕರಣೆ
ವಿಚಾರದಲ್ಲಿ ನೀವು ತೆಗೆದುಕೊಂಡಿರುವ ಈಗಿನ ನಿಮ್ಮ ನಿರ್ಧಾರಗಳನ್ನೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ.