Thursday, 12th December 2024

ತರೂರ್‌ ಹೇಳಿದ ರಾಜಕೀಯ ನಾಯಕರ ತಮಾಷೆ ಪ್ರಸಂಗಗಳು

shashi Tharoor Book

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ರಾಜಕಾರಣಿಗಳಲ್ಲಿ ಉತ್ತಮ ಹಾಸ್ಯಪ್ರಜ್ಞೆಯುಳ್ಳವರೂ ಇದ್ದಾರೆ. ಇಂದಿಗೂ ನಮ್ಮ ಸಂಸದೀಯ ಸಂವಾದ ಕುತೂಹಲ ಕರವಾಗಿದ್ದರೆ, ಇಂದಿಗೂ ಚರ್ಚೆಯಲ್ಲಿ ಜೀವಂತಿಕೆ ಇದ್ದರೆ, ಅದಕ್ಕೆ ಮುಖ್ಯ ಕಾರಣ ಸಂಸದರ ಅಥವಾ ಶಾಸಕರ ಹಾಸ್ಯ ಪ್ರಜ್ಞೆ. ಇಡೀ ದಿನ ನಡೆಯುವ ಸಂಪೂರ್ಣ ಕಲಾಪಗಳು ಗಂಭೀರವಾಗಿರುವುದಿಲ್ಲ.

ಕಾಂಗ್ರೆಸ್ ನಾಯಕ ಶಶಿ ತರೂರ್ ಬರೆದ Pride, Prejudice, and Punditry ಎಂಬ ಬಹುನಿರೀಕ್ಷಿತ ಪುಸ್ತಕ ಬಿಡುಗಡೆ ಯಾಗಿದೆ. ಅವರು ಆಯಾ ಕಾಲಕ್ಕೆ ಬರೆದ ಬಿಡಿ ಲೇಖನಗಳು ಮತ್ತು ಈ ಪುಸ್ತಕಕ್ಕಾಗಿಯೇ ಬರೆದ ಕೆಲವು ಲೇಖನಗಳೂ ಈ ಕೃತಿಯಲ್ಲಿ ಸೇರಿವೆ. ಶಶಿ ತರೂರ್‌ ಬರಹಕ್ಕೆ ಓದಿಸಿಕೊಳ್ಳುವ, ಓದುಗರನ್ನು ಪಟ್ಟಾಗಿ ಕುಳ್ಳಿರಿಸುವ ಗುಣವಿದೆ.

ಹೀಗಾಗಿ ಅವರು ಯಾವ ವಿಷಯದ ಬಗ್ಗೆ ಬರೆದರೂ, ಓದಬೇಕೆಂಬ ತುಡಿತ ಸಹಜವಾಗಿ ಮೂಡುತ್ತದೆ. ಈ ಕೃತಿಯಲ್ಲಿ ಅವರು Humour in Indian Politics ಎಂಬ ಒಂದು ಅಧ್ಯಾಯವನ್ನು ಬರೆದಿದ್ದಾರೆ. ಅದರಲ್ಲಿ ರಾಜಕಾರಣಿಗಳ ಅನೇಕ ತಮಾಷೆಯ ಪ್ರಸಂಗಗಳನ್ನು ಬರೆದಿದ್ದಾರೆ. 1970 ರ ದಿನಗಳವು. ಅಂದಿನ ಕೇಂದ್ರ ಆರೋಗ್ಯ ಸಚಿವ ಕರಣ್ ಸಿಂಗ್ ಮುಂದೆ ಕಿರಿಯ ವೈದ್ಯರು ತಮ್ಮ ಬೇಡಿಕೆಗಳನ್ನು ಇಟ್ಟಿದ್ದರು. ಅವರು ಸುಮಾರು ಒಂದು ವರ್ಷವಾದರೂ ಆ ಬಗ್ಗೆ ಕ್ರಮವನ್ನೇ ತೆಗೆದುಕೊಳ್ಳಲಿಲ್ಲ. ಈ ವಿಷಯ ವನ್ನು ಕಿರಿಯ ವೈದ್ಯರು ಪದೇ ಪದೆ ಅವರ ಗಮನಕ್ಕೆ ತಂದರೂ ಅದರಿಂದ ಪ್ರಯೋಜನ ಆಗಲಿಲ್ಲ.

ನಂತರ ಬೇರೆ ದಾರಿ ಕಾಣದೇ, ವೈದ್ಯರು ಮುಷ್ಕರ ಹೂಡಲು ನಿರ್ಧರಿಸಿದರು. ಆಗ ಮುಷ್ಕರ ನಿರತ ವೈದ್ಯರು ಕರಣ್ ಸಿಂಗ್ ಅವರಿಗೆ ನಾಟುವಂತೆ ಬೋರ್ಡ್ ಹಿಡಿದು ಕುಳಿತಿದ್ದರು. ಅದನ್ನೇ ಪತ್ರಿಕೆಗಳು ಮುಖಪುಟದಲ್ಲಿ ಜೋರಾಗಿ ಪ್ರಕಟಿಸಿದವು. ಆ
ಫಲಕಗಳ ಮೇಲೆ ಬರೆದಿತ್ತು – ‘ನೀವು ಕರಣ್ ಅವರೋ?  ಕುಂಭ ಕರಣ್ ಅವರೋ?’ ಆದರೆ ಲೋಕಸಭೆಯಲ್ಲಿ ಯಾವ ಸದಸ್ಯರೂ ಅವರನ್ನು ಹಾಗೆ (ಕುಂಭಕರಣ) ಕರೆದಿರಲಿಲ್ಲ. ಪ್ರಧಾನಿಯಾಗಿದ್ದಾಗ, ರಾಜೀವ ಗಾಂಧಿಯವರು ಆಗಾಗ ವಿದೇಶ ಪ್ರವಾಸ ಹೋಗು ತ್ತಿದ್ದರು. ಒಂದು ಸಂದರ್ಭದಲ್ಲಿ ಅವರು ಎರಡು ತಿಂಗಳ ಅವಧಿಯಲ್ಲಿ ಐದು ಸಲ ವಿದೇಶ ಪ್ರವಾಸಕ್ಕೆ ಹೋಗುವ ಸಂದರ್ಭ ಬಂದಿತ್ತು. ಅವರ ವಿದೇಶ ಪ್ರವಾಸ ಸಹಜವಾಗಿ ಟೀಕೆಗೆ ಗುರಿಯಾಗಿತ್ತು.

ಒಮ್ಮೆ ಲೋಕಸಭೆಯಲ್ಲಿ ತೆಲುಗುದೇಶಂ ನಾಯಕ ಪಿ. ಉಪೇಂದ್ರ ಅವರು ರಾಜೀವ ಗಾಂಧಿಯವರನ್ನುದ್ದೇಶಿಸಿ, ‘ಅಪರೂಪ ಕ್ಕೊಮ್ಮೆ ದಿಲ್ಲಿಗೆ ಆಗಮಿಸುವ ಪ್ರಧಾನಿ ರಾಜೀವ ಗಾಂಧಿಯವರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಮೂದ ಲಿಸಿದ್ದರು. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರನ್ನು ಕೂಡ ಜನ ಹಾಸ್ಯ ಮಾಡಿದ್ದುಂಟು. ’ಆಗಾಗ ಭಾರತಕ್ಕೆ ಬರುವ ಭಾರತದ ಪ್ರಧಾನಿ ಮೋದಿಯವರಿಗೆ ಸ್ವಾಗತ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವ್ಯಂಗ್ಯ ವಾಡಿದ್ದನ್ನು ನೆನಪಿಸಿಕೊಳ್ಳಬಹುದು.

ಒಮ್ಮೆ ಲೋಕಸಭೆಯಲ್ಲಿ, ಪೀಲೂ ಮೋದಿಯವರು ಮಾತಾಡುವಾಗ, ಕಾಂಗ್ರೆಸ್ ಸದಸ್ಯ ಜೆ.ಸಿ.ಜೈನ್ ಒಂದೇ ಸಮನೆ ಕೂಗಾ ಡುತ್ತಾ, ಮಾತಿಗೆ ಅಡ್ಡಿಪಡಿಸಿದರು. ಆಗ ಮೋದಿ ಸಿಟ್ಟಿನಿಂದ ’ನೀವು ಬೊಗಳುವುದನ್ನು ನಿಲ್ಲಿಸಿ’ ಎಂದು ಕಿರುಚಿದರು. ಇದರಿಂದ ಕ್ರುದ್ಧರಾದ ಜೈನ, ’ಪೀಲೂ ಮೋದಿಯವರು ಅಸಂಸದೀಯ ಪದ ಬಳಸಿದ್ದಾರೆ. ಅದನ್ನು ಸದನದ ದಾಖಲೆಯಿಂದ ಕಿತ್ತು ಹಾಕಬೇಕು’ ಎಂದು ಆಗ್ರಹಿಸಿದರು. ಅವರ ಕೋರಿಕೆ ಮೇರೆಗೆ ಸ್ಪೀರ್ಕ ಆ ಪದವಿರುವ ಮಾತನ್ನು ಕಡತದಿಂದ ತೆಗೆದು ಹಾಕಿದರು.

ಅಷ್ಟಾದರೂ ಪೀಲೂ ಮೋದಿ ಕೋಪ ತಣ್ಣಗಾಗಿರಲಿಲ್ಲ. ’’All right then, stop braying’’ ಎಂದು ಹೇಳಿದರು. ಜೈನ್ ಅವರಿಗೆ braying ಪದದ ಅರ್ಥ ಗೊತ್ತಿರಲಿಲ್ಲ. ಹೀಗಾಗಿ ಸುಮ್ಮನಾದರು ಮತ್ತು ಆ ಮಾತು ಕಡತದಲ್ಲಿಯೇ ಉಳಿಯಿತು. (ಅಂದ ಹಾಗೆ braying ಅಂದರೆ ಗಹಗಹಿಸಿ ನಗುವುದು, ಕರ್ಕಶ ಮತ್ತು ಅಹಿತಕರ ದನಿಯಲ್ಲಿ ನಗುತ್ತ ಜೋರಾಗಿ ಅರಚುವುದು. Speak or laugh loudly and harshly ಎಂದರ್ಥ.)

ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಕೂಡ ತೀಕ್ಷ್ಣ ಹಾಸ್ಯಪ್ರಜ್ಞೆ ಹೊಂದಿದ್ದರು. ನಟವರ ಸಿಂಗ್ ಭಾರತೀಯ ವಿದೇಶಾಂಗ ಸೇವೆಗೆ ರಾಜೀನಾಮೆ ನೀಡಿ, ರಾಜಕೀಯ ಪ್ರವೇಶಿಸಿ ಕೆಲವು ದಿನಗಳ ಬಳಿಕ ನಡೆದ ಒಂದು ಪ್ರಸಂಗ. ಸಿಂಗ್ ಅವರನ್ನು ಇಂದಿರಾ ತಮ್ಮ ಸಂಪುಟಕ್ಕೆ ಸೇರಿಸಿಕೊಂಡರು. ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟವರ ಸಿಂಗ್ ಪಾಶ್ಚಿಮಾತ್ಯ ದಿರಿಸನ್ನು ಧರಿಸಿ ಹೋಗಿದ್ದ ರಂತೆ. ಇದನ್ನು ಇಂದಿರಾ ಗಮನಿಸಿದರು.

ಆಗ ನಟವರ ಸಿಂಗ್‌ಗೆ ಏನನಿಸಿತೋ ಏನೋ, ಪ್ರಧಾನಿ ಬಳಿ ಹೋಗಿ, ’ಮೇಡಂ, ನಾನು ಆದಷ್ಟು ಬೇಗ ಭಾರತೀಯ ಬಂದ್
ಗಲಾ (ಕುತ್ತಿಗೆವರೆಗಿನ ಕಾಲರ್ ಇರುವ ಕೋಟು) ಧರಿಸುತ್ತೇನೆ’ ಎಂದು ಹೇಳಿದರಂತೆ. ಅದಕ್ಕೆ ಇಂದಿರಾ ಹೇಳಿದರಂತೆ – ‘ರಾಜಕೀಯ ದಲ್ಲಿ ಬಂದ್ ಗಲಾ ಧರಿಸುವುದು ಮುಖ್ಯವಲ್ಲ. ಸಾಧ್ಯವಾದಷ್ಟು ಮಟ್ಟಿಗೆ ದಪ್ಪ ಚರ್ಮ ಬೆಳೆಸಿಕೊಳ್ಳಿ. ಅದನ್ನೇ
ಸದಾ ಹೊದ್ದುಕೊಂಡಿರಬೇಕು.’ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರಿಗೂ ಉತ್ತಮ ಹಾಸ್ಯಪ್ರಜ್ಞೆ ಇತ್ತು.

1949 ರಲ್ಲಿ ಅವರು ಮೊದಲ ಬಾರಿಗೆ ಅಮೆರಿಕಕ್ಕೆ ಹೋಗಿದ್ದರು. ಒಂದು ರೀತಿಯಲ್ಲಿ ಅವರಿಗೆ ಸಣ್ಣ culture&shock ಆಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಯಾರೋ, ‘ನೆಹರೂಜೀ, ನಿಮ್ಮ ಮೊದಲ ಅಮೆರಿಕ ಪ್ರವಾಸ ಹೇಗಿತ್ತು?’ ಎಂದು ಕೇಳಿದರು. ಅದಕ್ಕೆ ನೆಹರು ಥಟ್ಟನೆ ಹೇಳಿದರು – ‘One should never visit America for the first time’ ರಾಜಕಾರಣಿಗಳಲ್ಲಿ ಉತ್ತಮ ಹಾಸ್ಯಪ್ರಜ್ಞೆ ಯುಳ್ಳವರೂ ಇದ್ದಾರೆ. ಇಂದಿಗೂ ನಮ್ಮ ಸಂಸದೀಯ ಸಂವಾದ ಕುತೂಹಲಕರವಾಗಿದ್ದರೆ, ಇಂದಿಗೂ ಚರ್ಚೆಯಲ್ಲಿ ಜೀವಂತಿಕೆ ಇದ್ದರೆ, ಅದಕ್ಕೆ ಮುಖ್ಯ ಕಾರಣ ಸಂಸದರ ಅಥವಾ ಶಾಸಕರ ಹಾಸ್ಯಪ್ರಜ್ಞೆ.

ಇಡೀ ದಿನ ನಡೆಯುವ ಸಂಪೂರ್ಣ ಕಲಾಪಗಳು ಗಂಭೀರವಾಗಿರುವುದಿಲ್ಲ. ಮಧ್ಯೆ ಮಧ್ಯೆ ಹಾಸ್ಯ ಚಟಾಕಿ, ವಿಡಂಬನೆ, ಚಾಟೂಕ್ತಿ, ಕಟಕಿ, ವ್ಯಂಗ್ಯಗಳು ಇರುವುದು ಸಹ ಕಾರಣ. ಕೆಲವು ರಾಜಕಾರಣಿಗಳಂತೂ ತಮ್ಮ ಹಾಸ್ಯ ಚಟಾಕಿಗಳಿಗೇ ಪ್ರಸಿದ್ಧ. ಕೆಲವು ಗಂಭೀರ ವ್ಯಕ್ತಿತ್ವದ ನಾಯಕರ ಮಾತುಗಳು ಹಾಸ್ಯದ ಹೊನಲನ್ನು ಹರಿಸುವುದುಂಟು.

ಧರಮ್ ಸಿಂಗ್ ಸಿಎಂ ಆಗಿದ್ದು ಹೇಗೆ?

‘ಮುಖ್ಯಮಂತ್ರಿ ಹುದ್ದೆಗೆ ನಿಮ್ಮ ಅಭ್ಯರ್ಥಿ ಯಾರು?’ ಗೆಂದು ದೇವೇಗೌಡರನ್ನು ಕೇಳಿದವರು ಸಿ.ಎಂ. ಇಬ್ರಾಹಿಂ. ‘ಆ ಎಸ್ಸೆಂ ಕೃಷ್ಣ ಬಂದು ನನ್ನ ಬೆಂಬಲ ಕೇಳಿದರು. ಆದರೆ ಅವರು ಅಧಿಕಾರದಲ್ಲಿದ್ದಾಗ ನಮಗೆಷ್ಟು ಕಿರುಕುಳ ನೀಡಿದರು ಅಂತ ನಿಮಗೆ ಗೊತ್ತಲ್ಲ ಇಬ್ರಾಹಿಂ? ಹೀಗಾಗಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಕ್ಕೆ ಸಮ್ಮತಿಸಲಿಲ್ಲ. ಇನ್ನು ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಅವರು ಒಳ್ಳೆಯ ಆಡಳಿತ ನೀಡಬಹುದು. ಆದರೆ ನಡೆಯಬೇಕಿರುವುದು ಒಂದು ಪಕ್ಷದ ಸರಕಾರ ಅಲ್ಲವಲ್ಲ? ತುಂಬಾ ಬಿಗಿ ಆಡಳಿತ ನೀಡಲು ಮುಂದಾದರೆ ಮೈತ್ರಿಕೂಟ ಸರಕಾರ ನಡೆಯುವುದು ಕಷ್ಟ. ಹೀಗಾಗಿ ಉಭಯ ಪಕ್ಷಗಳಿಗೂ ಸಮ್ಮತವಾಗಬಲ್ಲ ಡಾ.ಜಿ.ಪರಮೇಶ್ವರ ಇದ್ದಾರಲ್ಲ? ಅವರನ್ನು ಸಿಎಂ ಹುದ್ದೆ ಮೇಲೆ ಕೂರಿಸುವುದು ಬೆಸ್ಟು ಅಂತ ಯೋಚಿಸು ತ್ತಿದ್ದೇನೆ’ ಎಂದರು ದೇವೇಗೌಡರು.

ಆಗ ಇಬ್ರಾಹಿಂ, ಒಮ್ಮೆ ತಮ್ಮ ತಂಪು ಕನ್ನಡಕ ತೆಗೆದು, ಗೌಡರನ್ನು ದಿಟ್ಟಿಸಿ ನೋಡಿದರು. ‘ಯಾಕೆ ಇಬ್ರಾಹಿಂ? ಸಿಎಂ ಹುದ್ದೆಗೆ ಡಾ.ಪರಮೇಶ್ವರ ಬೆಸ್ಟ್ ಅಭ್ಯರ್ಥಿ ಅಂತ ಅನಿಸಲ್ವಾ?’ ಎಂದು ದೇವೇಗೌಡರು ಕೇಳಿದರು. ‘ಹಾಗೇನಿಲ್ಲ ಗೌಡರೇ, ಸಿಎಂ ಹುzಗೆ ಡಾ.ಪರಮೇಶ್ವರ ಬೆಸ್ಟ್ ಅಭ್ಯರ್ಥಿ ನಿಜ. ಆದರೆ ಒಂದು ಟೆಕ್ನಿಕಲ್ ಪ್ರಾಬ್ಲಮ್ ಇದೆ’ ಎಂದರು ಇಬ್ರಾಹಿಂ.

ಆಗ ದೇವೇಗೌಡರು ಇಬ್ರಾಹಿಂ ಮುಖವನ್ನು ದಿಟ್ಟಿಸಿದರು. ‘ಏನು ಇಬ್ರಾಹಿಮ್ಮು? ಏನದು ಟೆಕ್ನಿಕಲ್ ಪ್ರಾಬ್ಲಮ್ಮು?’ ಎಂದು ಗೌಡರು ಕೇಳಿದರು. ಆಗ ಇಬ್ರಾಹಿಂ, ‘ಅಲ್ಲ ಗೌಡರೇ, ಸ್ವಲ್ಪ ಯೋಚಿಸಿ, ಡಾ.ಪರಮೇಶ್ವರ ಯಾವ ಸಮುದಾಯಕ್ಕೆ ಸೇರಿದವರು?
ಪ್ರಬಲ ದಲಿತ ಸಮುದಾಯಕ್ಕೆ ಸೇರಿದವರು ತಾನೇ. ಅವರನ್ನು ನೀವು ಸಿಎಂ ಮಾಡಿದರೆ ನಾಳೆ ಜೆಡಿಎಸ್ ಪಕ್ಷದ ಬಗ್ಗೆ ದಲಿತರಿಗೆ ವಿಶ್ವಾಸ ಬೆಳೆಯುತ್ತದೆ. ಅದೇ ರೀತಿ ನಿಮ್ಮ ಪಕ್ಷದ ವೋಟ್ ಬ್ಯಾಂಕ್ ಕೂಡ ಗಟ್ಟಿಯಾಗುತ್ತದೆ. ಆದರೆ ಮೈತ್ರಿಕೂಟ ಸರಕಾರ
ಐದು ವರ್ಷಗಳ ಕಾಲ ನಡೆಯುತ್ತದೆ ಎಂಬ ವಿಶ್ವಾಸ ನಿಮಗಿದೆಯಾ? ಸ್ವಲ್ಪ ಹೆಚ್ಚು ಕಮ್ಮಿಯಾಗಿ ಸರಕಾರ ಬಿದ್ದು ಹೋದರೆ, ಡಾ.ಪರಮೇಶ್ವರ ಕೆಳಗಿಳಿದರೆ, ದಲಿತರಿಗೆ ಏನು ಸಂದೇಶ ಹೋಗುತ್ತದೆ? ತಮ್ಮ ಸಮುದಾಯದ ಒಬ್ಬ ನಾಯಕ ಐದು ವರ್ಷಗಳ ಕಾಲ ಸಿಎಂ ಆಗಿರುವುದನ್ನು ನೋಡಲು ದೇವೇಗೌಡರಿಗೆ ಆಗಲಿಲ್ಲ ಎಂಬ ಆಕ್ರೋಶ ಮೇಲೇಳುವುದಿಲ್ಲವೇ? ಹಾಗೇನಾದರೂ ಆಗಿ ದಲಿತ ವಿರೋಧಿ ಎಂಬ ಹಣೆಪಟ್ಟಿ ನಿಮಗೆ ತಗುಲಿಕೊಂಡರೆ ನಾಳೆ ನೆಮ್ಮದಿಯಾಗಿ ರಾಜಕೀಯ ಮಾಡಲು ಸಾಧ್ಯವಾ?’ ಎಂದು ಕೇಳಿದರು.

ಇಬ್ರಾಹಿಂ ಹೇಳುವುದನ್ನು ಶಾಂತಚಿತ್ತರಾಗಿ ಗೌಡರು ಕೇಳಿಸಿಕೊಂಡರು. ಅವರ ಮಾತಿನಲ್ಲಿ ತಥ್ಯವಿದೆ ಎಂದು ಗೌಡರಿಗೆ
ಅನಿಸಿತು. ಆಗ ಗೌಡರು, ‘ಹಾಗಿದ್ದರೆ ಈಗೇನು ಮಾಡುವುದು? ಯಾರನ್ನು ಮುಖ್ಯಮಂತ್ರಿಯನ್ನಾಗಿ ಕೂರಿಸುವುದು?’ ಎಂದು
ಕೇಳಿ ತುಸು ಯೋಚನೆಗೆ ಜಾರಿದರು. ಆಗ ಇಬ್ರಾಹಿಂ, ‘ಇಂದಿನ ಸ್ಥಿತಿಯಲ್ಲಿ ಮೈತ್ರಿಕೂಟ ಸರಕಾರವನ್ನು ಮುನ್ನಡೆಸಿಕೊಂಡು ಹೋಗುವ ನಾಯಕರಿಗೆ ಜಾತಿಬಲ ಇರಬಾರದು ಗೌಡರೇ. ಅದೇ ರೀತಿ ಎಲ್ಲರ ಜತೆಗೆ ಹೊಂದಿಕೊಂಡು ಹೋಗುವ ಗುಣವಿರಬೇಕು. ಸದ್ಯದ ಸ್ಥಿತಿ ನೋಡಿದರೆ ಧರಮ್ ಸಿಂಗ್ ಇದಕ್ಕೆ ಹೊಂದಿಕೆಯಾಗುತ್ತಾರೆ’ ಎಂದರು.

ಇಬ್ರಾಹಿಂ ಮಾತನ್ನು ಕೇಳಿದ ತಕ್ಷಣ ದೇವೇಗೌಡರ ತಲೆಯಲ್ಲಿ ಗುಂಗಿಹುಳು ಕೊರೆಯಲಾರಂಭಿಸಿತು. ತಕ್ಷಣ ಕುಮಾರಸ್ವಾಮಿ
ಯನ್ನು ಕರೆದು ಈ ವಿಷಯದ ಬಗ್ಗೆ ಚರ್ಚಿಸಿದರು. ಅಂತಿಮವಾಗಿ ಧರಮ್ ಸಿಂಗ್ ಹೆಸರನ್ನು ಅಖೈರುಗೊಳಿಸಿದರು. ಧರಮ್ ಸಿಂಗ್ ರಜಪೂತರು. ಅವರ ಸ್ವಕ್ಷೇತ್ರ ಜೇವರ್ಗಿ. ರಾಜ್ಯದಲ್ಲಿ ರಜಪೂತರು ಒಂದೆರಡು ಸಾವಿರದಷ್ಟಿರಬಹುದು. ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ಯಾರೂ ಪ್ರತಿಭಟಿಸುವುದಿಲ್ಲ. ಯಾರೂ ಕಣ್ಣೀರು ಹಾಕುವುದಿಲ್ಲ. ಹೀಗಾಗಿ ಅವರೇ ಸೂಕ್ತ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ದೇವೇಗೌಡರು ಬಂದರು.

ಇದಾದ ಬಳಿಕ, ದೇವೇಗೌಡರು ಫೋನಿನಲ್ಲಿ ಧರಮ್ ಸಿಂಗ್ ಅವರನ್ನು ಸಂಪರ್ಕಿಸಿ, ಮುಖ್ಯಮಂತ್ರಿ ಹುದ್ದೆಗೆ ಏರಲು ಸಿದ್ಧರಾಗಿರಿ ಎಂದು ತಿಳಿಸಿದರು. ಇದ್ಯಾವುದರ ಅರಿವಿಲ್ಲದ ಡಾ.ಪರಮೇಶ್ವರ, ಅತ್ತ ಮೋಹಿಸಿನ ಕಿದ್ವಾಯಿ ಮೂಲಕ ಸೋನಿಯಾ ಗಾಂಧಿ ಯವರಿಗೆ ಸಂದೇಶ ಕಳಿಸಿ ಸಿಎಂ ಹುದ್ದೆಗೇರುವ ಪ್ರಯತ್ನ ನಡೆಸಿದ್ದರೆ, ಇತ್ತ ದೇವೇಗೌಡರು ಸೋನಿಯಾ ಗಾಂಧಿಯವರಿಗೇ ಫೋನ್ ಮಾಡಿ ಧರಮ್ ಸಿಂಗ್ ಸಿಎಂ ಆದರೆ ನಮ್ಮ ಅಭ್ಯಂತರವಿಲ್ಲ ಎಂಬ ಸಂದೇಶ ನೀಡಿದ್ದರು.

ಮುಖ್ಯಮಂತ್ರಿ ಹುದ್ದೆ ಡಾ.ಪರಮೇಶ್ವರ ಅವರ ಕೈ ಸವರಿಕೊಂಡು ಹೋಯಿತು. ಈ ಎಲ್ಲ ವಿಷಯಗಳನ್ನೂ ಪತ್ರಕರ್ತ ಮತ್ತು ನಮ್ಮ ಅಂಕಣಕಾರ ಆರ್.ಟಿ.ವಿಠ್ಠಲಮೂರ್ತಿ, ಇತ್ತೀಚೆಗೆ ಬಿಡುಗಡೆಯಾದ ತಮ್ಮ ‘ರಾಜಚರಿತೆ’ ಪುಸ್ತಕದಲ್ಲಿ ಬರೆದಿದ್ದಾರೆ. ಜನ ಸಾಮಾನ್ಯರಿಗೆ ಇಂದಿಗೂ ಗೊತ್ತಿಲ್ಲದ, ಕರ್ನಾಟಕ ರಾಜಕಾರಣದ ಇಂಥ ಅವೆಷ್ಟೋ ಸ್ವಾರಸ್ಯಕರ ಘಟನೆಗಳು ಈ ಕೃತಿ ಯಲ್ಲಿವೆ. ಓದಬೇಕಾದ ಪುಸ್ತಕವಿದು.

ಪ್ರೆಗ್ನೆಂಟ್ ಸುದ್ದಿ ಹೊಟ್ಟೆಗೆ ಹಾಕಿಕೊಳ್ಳಬೇಡಿ!
ಕೆಲವು ಸಲ ನಾವು ಮಾಡಿದ್ದು ತಪ್ಪು ಎಂಬುದು ಮರುದಿನ ನಮ್ಮ ಅರಿವಿಗೆ ಬರುತ್ತದೆ. ಅದರಲ್ಲೂ ದಿನಪತ್ರಿಕೆಗಳಲ್ಲಿ ನಾವು ನಿತ್ಯವೂ ಒಂದಿಂದು ರೀತಿಯಲ್ಲಿ ತಪ್ಪುಗಳನ್ನು ಮಾಡುತ್ತೇವೆ. ಯಾರೂ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಆದರೆ
ನಮಗೆ ಗೊತ್ತಿಲ್ಲದಂತೆ ತಪ್ಪುಗಳಾಗುತ್ತವೆ. ಲಕ್ಷಾಂತರ ಜನ ಓದುವ ಪತ್ರಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ರೂಪಿಸಿದರೂ, ಒಂದು
ಪುಟವನ್ನು ಮೂರ್ನಾಲ್ಕು ಜನ ಓದಿದರೂ, ಎಲ್ಲರ ಕಣ್ಣುಗಳನ್ನು ತಪ್ಪಿಸಿಕೊಂಡು ಪ್ರಮಾದಗಳು ನುಸುಳಿ ಬಿಡುತ್ತವೆ. ಏನೂ
ಮಾಡಲಾಗುವುದಿಲ್ಲ.

ಆಗ ಸಂಪಾದಕರಾದವರು ಮಾಡಬೇಕಾದ ಮೊದಲ ಕೆಲಸವೆಂದರೆ, ‘ತಪ್ಪಾಯ್ತು’ ಎಂದು ಒಪ್ಪಿಕೊಳ್ಳುವುದು. ಓದುಗರ ಮುಂದೆ ತಪ್ಪಾಯ್ತು ಎಂದು ಕ್ಷಮೆ ಯಾಚಿಸುವುದು ಅವಮಾನ ಅಥವಾ ಅವಮರ್ಯಾದೆ ಅಲ್ಲ, ಆದರೆ ಹಾಗೆ ಕೇಳದಿರುವುದು. ‘ತಪ್ಪಾಯ್ತು’ ಎಂದರೆ ಓದುಗರು ಬಂದು ತಲೆ ಕಡಿಯುವುದಿಲ್ಲ. ಓದುಗರಿಗೆ ಯಾವತ್ತೂ ನಿಖರ ಮತ್ತು ಸರಿಯಾದ ವಿಷಯ, ಮಾಹಿತಿಯನ್ನೇ ಕೊಡಬೇಕಾದುದು ನಮ್ಮ ಕರ್ತವ್ಯ. ಕೆಲಸದ ಒತ್ತಡದಿಂದ ಅಥವಾ ಕಣ್ತಪ್ಪಿನಿಂದ ಪ್ರಮಾದಗಳಾಗಿ ಬಿಡುತ್ತವೆ. ಇನ್ನು ಕೆಲವು ಸಲ ದಡ್ಡತನದಿಂದಲೂ ಪ್ರಮಾದಗಳಾಗುತ್ತವೆ.

‘ನ್ಯೂಯಾರ್ಕ್ ಟೈಮ್ಸ್’ನಂಥ ಪತ್ರಿಕೆ ನಲವತ್ತೆಂಟು ವರ್ಷ ಗಳ ಹಿಂದೆ ತಾನು ಮಾಡಿದ ವರದಿಯಲ್ಲಿ ಪ್ರಮಾದವಾಗಿರುವುದು ಗಮನಕ್ಕೆ ಬಂದಾಗ, ಓದುಗರ ಮುಂದೆ ಕ್ಷಮೆ ಕೇಳಿದ ನಿದರ್ಶನವಿದೆ. ಒಟ್ಟಾರೆ ಓದುಗರಿಗೆ ತಪ್ಪು ಮಾಹಿತಿ ರವಾನೆಯಾಗಬಾರದು ಎಂಬುದಷ್ಟೇ ಕಾಳಜಿ. ಓದುಗರ ಮುಂದೆ ಕ್ಷಮೆಯಾಚಿಸುವುದು, ತಪ್ಪೊಪ್ಪಿಕೊಳ್ಳುವುದು ನಾವು ಓದುಗರಿಗೆ ನೀಡುವ ಗೌರವ. ಪತ್ರಕರ್ತರಿಗೆ ಅಷ್ಟು ಸೌಜನ್ಯ ಇರಲೇಬೇಕು. ನಾನಂತೂ ‘ತಪ್ಪಾಯ್ತು, ತಿದ್ಕೋತೀವಿ’ ಎಂಬ ನಿತ್ಯ ಅಂಕಣವನ್ನೇ ಆರಂಭಿಸಿದ್ದು ನೆನಪಿರಬಹುದು.

ಮೊನ್ನೆ ಕನ್ನಡದ ನ್ಯೂಸ್ ಚಾನೆಂದು ನಟಿ ಅಮೂಲ್ಯ ಅವರಿಗೆ ಸಂಬಂಧಿಸಿದ ತೀರಾ ವೈಯಕ್ತಿಕ ಸುದ್ದಿಯನ್ನು ಬ್ರೇಕಿಂಗ್ ಸುದ್ದಿಯನ್ನಾಗಿ ಪ್ರಸಾರ ಮಾಡಿದ್ದಕ್ಕೆ, ಸರ್ವತ್ರ ಟೀಕೆಗಳು ಕೇಳಿ ಬಂದವು. ಅದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದರು. ಅಂಥ ಸಂದರ್ಭದಲ್ಲಿ ಚಾನೆಲ್ ಮುಖ್ಯಸ್ಥರು ‘ಹೌದು ಸ್ವಲ್ಪ ಎಡವಟ್ಟಾಗಿದೆ, ಮನ್ನಿಸಿ’ ಎಂದು ಹೇಳುವುದು ಸೌಜನ್ಯ, ಸಭ್ಯತೆ. ಆದರೆ ನಾವು ಮಾಡಿದ್ದೇ ಸರಿ ಎಂಬ ಹಾಕ್ಯಾಟಕ್ಕೆ ಎಂದೂ ಬೀಳಬಾರದು. ಟ್ರೋಲ್ ಮಾಡಿದವರ ಮೇಲೆಯೇ ಎಗರಿ ಹೋಗಬಾರದು. ಅವರೇನೂ ಬೇರೆಯವರಲ್ಲ. ಅವರೂ ವೀಕ್ಷಕರೇ ಅಲ್ಲವೇ? ಅವರ ಮುಂದೆ ‘ಪ್ರೆಗ್ನೆಂಟ್ ಸುದ್ದಿಯನ್ನು
ಹೊಟ್ಟೆಗೆ ಹಾಕಿಕೊಳ್ಳಬೇಡಿ, ಮನ್ನಿಸಿ’ ಎಂದು ಕೇಳಲು ಅಹಂ ಅಡ್ಡಬಾರದು. ಏನಂತೀರಿ?