Sunday, 15th December 2024

ಈ ಸಾವು ನ್ಯಾಯವಲ್ಲ

Puneeth Death Anniversary

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಭಾವನಾತ್ಮಕವಾಗಿ ಪುನೀತರು ತಮ್ಮ ಸಿನೆಮಾಗಳ ಮೂಲಕ ಹಾಗೂ ಇತರ ನೆಲೆಗಳಲ್ಲೂ ಮಾನಸಿಕವಾದ ನಂಟನ್ನು ಹೊಂದಿರುವುದರಿಂದ ಅವರ ಬಗೆಗಿನ ಗಾಢ ಅಭಿಮಾನ ತೀವ್ರವಾಗಿ ಕಾಡುತ್ತಿದೆ.

ವಿಧಿ ಬರಹ, ಹಣೆ ಬರಹಕ್ಕೆ ಹೊಣೆ ಯಾರು?, ಅದು ಇದು ಅಂತ ಎಷ್ಟೇ ಬಡಕಾಯಿಸಿದರೂ ಅಥವಾ ಯಾರು ಏನೇ ವಾದ, ಸಮರ್ಥನೆ, ಹೂಡಿದರೂ ಈ ಸಾವು
ನ್ಯಾಯವಲ್ಲವೇ ಅಲ್ಲ!!! ಸಾಯುವವನಿಗೇ ಯಾವ ಅರಿವೂ ಇಲ್ಲದೇ ಬಂದ ಸಾವಿದು. ಬೆಳಗ್ಗೆ ಎಂದಿನಂತೆ ವಾಕಿಂಗ್ ಮುಗಿಸಿ, ಜಿಮ್ಮಿಗೆ ಹೋದ ಪುನೀತ್ ರಾಜಕುಮಾರರಿಗೆ ಕಾಣಿಸಿಕೊಂಡ ಎದೆನೋವು, ಸ್ವಲ್ಪಮಟ್ಟಿಗಿನ ಅಸ್ವಾಸ್ಥ್ಯ, ದೇಹದಲ್ಲಿ ಸುಸ್ತು ತನ್ನನ್ನು ಸಾಯಿಸಿ ಬಿಡುತ್ತದೆಂಬ ಸಣ್ಣ ಅಲೋಚನೆಯೂ, ಭಯವೂ, ಮುನ್ಸೂಚನೆಯೂ ಇದ್ದಿರಲು ಸಾಧ್ಯವಿಲ್ಲ.

ಬದುಕಿ ಬಾಳಿ ಇನ್ನೂ ಇನ್ನಷ್ಟು ಸಾಧನೆಯನ್ನು ಮಾಡಬೇಕಾದ, ಎತ್ತರವನ್ನು ಮುಟ್ಟಬೇಕಾದ ನಲವತ್ತಾರರ ಎಳೆಯ ಜೀವದ ಉಸಿರು ಅದೇ ಎದೆನೋ ವಿಂದಲೇ ನಿಂತು ಹೋಯಿತು ಎಂದರೆ ಯಾರು ನಂಬಿ ಯಾರು? ನೋ ಚಾನ್ಸ್. ಸಾಧ್ಯವೇ ಇಲ್ಲ. ಅಷ್ಟಕ್ಕೂ ನಂಬಿಕೆ ಹುಟ್ಟುವುದಾದರೂ ಸಾಧ್ಯವೇ ಹೇಳಿ?! ಯಾರೂ ಒಪ್ಪಲೇ ಬೇಕಾದ ಸತ್ಯ ಹೇಳುತ್ತೇನೆ; ಅವರ ಸಾವನ್ನು ಮನಸು ಒಪ್ಪುವುದಿಲ್ಲ! ಸ್ವೀಕರಿಸುವುದಿಲ್ಲ! ಈ ಸಾವು ನ್ಯಾಯವಲ್ಲ! ಮೊನ್ನೆ ಮೊನ್ನೆಯಷ್ಟೇ ಅಪಘಾತದಲ್ಲಿ ನಿಧನರಾದ ಸಂಚಾರಿ ವಿಜಯರ ಅಗಲಿಕೆಯ ನೋವು ಮಾಸುವ ಮುನ್ನವೇ ಈಗ ಮತ್ತೊಂದು ಆಘಾತದ ಸುದ್ದಿ ಕೇಳುವಂತಾದುದು ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕಷ್ಟೇ ಅಲ್ಲ ಸಮಸ್ತ ಕನ್ನಡಿಗರಿಗೂ, ವಿಶ್ವಾದಾದ್ಯಂತ ಇರುವ ಅವರ ಅಭಿಮಾನಿಗಳಿಗೂ ಅರಗಿಸಿಕೊಳ್ಳಲಾರದಷ್ಟು ನೋವನ್ನು
ತಂದಿದೆ.

Of course ಯಾರ ಸಾವೂ ಸಂಭವಿಸಿದಾಗಲೂ ನೋವು ಕಟ್ಟಿಟ್ಟದ್ದೇ. ಆದರೆ ಪುನೀತ್ ಸಾವು ಅಚ್ಚರಿ ಮಾತ್ರ ವಲ್ಲ, ದಿಗಿಲು ಬಡಿದ ಅನುಭವವನ್ನು ತಂದಿರುವುದು ಸತ್ಯ! ಸಾವಿನ ಅಪಾರ ಸಾಗರ ಎನ್ನುತ್ತಾರೆ ಅಡಿಗರು. ಕಡಲು ತನ್ನ ಅ-ಪಾರತೆಯಿಂದಲೇ ಸಾವಿಗೆ ಸಂಕೇತವಾಗಿದೆ; ಹೊರತು ಬದುಕಿಗಲ್ಲ. ಬದುಕು ಅಗಣಿತವೇ ವಿನಾ ಸಾವಲ್ಲ. ಸಾವು ಒಂದೇ! ಎಲ್ಲವೂ ಕಡಲನ್ನೇ ಸೇರಬೇಕು. ಅಗಣಿತವಾದ ಬದುಕೂ ಒಂದೇ ಆದ ಸಾವಿನಲ್ಲೇ ಬೆರೆಯಬೇಕು. ಕೊನೆಗೆ ಎಲ್ಲ ಜೀವಗಳು ಸಾವಿನಲ್ಲೇ ಬೆರೆಯುವುದು. ಐಕ್ಯಗೊಳ್ಳುವುದು. ಇದು ನಿಶ್ಚಿತವಾದರೂ ಸಾವು ತರುವ ನೋವು, ವಿಷಾದಕ್ಕೆ ಮಾತ್ರ ಕೊನೆಯೇ ಇರುವುದಿಲ್ಲ. ಈಗ ಆದದ್ದು ಇದೇ! ಅಥವಾ ಇಂಥದ್ದು ಆದಾಗಲೆಲ್ಲ ಆಗುವುದೂ ಇದೇ!

ಯಾಕೆಂದರೆ, ಸಂಚಾರಿ ವಿಜಯರದ್ದಾಗಲೀ, ಪುನೀತ್ ರಾಜಕುಮಾರದ್ದಾಗಲೀ ಸಾವಿನ ಅಂಚಿನಲ್ಲಿರುವ ಬದುಕಲ್ಲವಾಗಿತ್ತು. ಸಾವು ತನ್ನ ಹತ್ತಿರದಲ್ಲೂ ಸುಳಿಯು ತ್ತಿದೆ ಎಂಬ ಯಾವ ಸೂಚನೆಯೂ ಇರದ ಹೊತ್ತಲ್ಲಿ ಬರುವ ಸಾವು ನಿಜಾರ್ಥದಲ್ಲಿ ನ್ಯಾಯಯುತವಲ್ಲ ಎಂದೇ ತಿಳಿದರೂ ಸಾವು ಮಾತ್ರ ಜೀವದ ಸುತ್ತಲೂ ತಿರು ಗುವ ದಿಗ್ಬಂಧವೇ ಆಗಿರುತ್ತದೆ. ಜೀವ ವಿಕಾಸದ ಹಂತದಲ್ಲಿ ಸಾವು ಪರಿಧಿಯನ್ನೂ ಹೊಂದಿರುತ್ತದೆ. ಇಂಥ ಪರಿಽಯೂ ಆತ್ಯಂತಿಕವಾಗಿ ನಿಲ್ಲುವುದು ಸಾವಿನ ಮನೆಯನ್ನೇ ಆಗಿರುತ್ತದೆ. ಸಂಚಾರಿ ವಿಜಯರ ಮತ್ತು ಪುನೀತ್ ರಾಜಕುಮಾರರ ಅಪಕ್ವವಾದ ಸಾವು (ಸಾವಿಗೂ ಜೀವವು ಪಕ್ವತೆಯನ್ನು ಹೊಂದಬೇಕು ಎಂಬುದು ಸರ್ವವೇದ್ಯ) ಆಘಾತವನ್ನು ಸಹಜವಾಗಿ ತರುವುದು ಮೊದಲೇ ನಿರ್ಧರಿತವಾದ ಈ ಸಾವಿನ ದಿಗ್ಬಂಧ ಅಚಾನಕ್ಕಾಗಿ ಬಂದೆರಗಿದಾಗ! ಆದ್ದರಿಂದ ಈ ಸಾವು ನ್ಯಾಯವಲ್ಲ!

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಎಂಬಲ್ಲಿಯೂ ಪುನೀರದ್ದು ಇರುವುದನ್ನು ಬಿಟ್ಟ ವಯಸ್ಸಲ್ಲ! ಹಾಗೆ ಬಿಡುವ ವಯಸ್ಸೂ ಅಲ್ಲ. ಬಿಟ್ಟು ಇರಲಾರದ ವಯಸ್ಸೂ ಅಲ್ಲ. ಇಲ್ಲದ ತೀರವನ್ನು ಸಮೀಪಿಸಿದ ವಯಸ್ಸೂ ಅವರದ್ದಲ್ಲ. ತೀರವನ್ನು ಮುಟ್ಟಿದ ವಯಸ್ಸಂತೂ ಅಲ್ಲವೇ ಅಲ್ಲ. ಮುಟ್ಟಬೇಕೆಂಬ ಹಂಬಲವೂ ಇದ್ದ ಅಥವಾ ಇರುವಂಥ ವಯಸ್ಸಲ್ಲ. ವಯಸ್ಸೂ ಯಾವುದನ್ನೂ ಅನುಭವಿ ಸುವ, ಅನುಭವಿಸಿ ಗೆಲ್ಲುವ, ಗೆದ್ದು ದಕ್ಕಿಸಿಕೊಳ್ಳುವ, ದಕ್ಕಿಸಿಕೊಂಡು ಈ ಸಮಾಜವನ್ನು ಪ್ರೀತಿಸುತ್ತಿದ್ದ ವಯಸ್ಸು ಇವರದ್ದಾಗಿತ್ತು!

ಇಬ್ಬರದೂ ಬಲು ಚೈತನ್ಯ ದಿಂದ ಕೂಡಿದ ವ್ಯಕ್ತಿತ್ವ ಮತ್ತು ಸ್ವಭಾವ. ಖಂಡಿತವಾಗಿಯೂ, ಜೀವವಿಕಾಸದ ಹಂತದಲ್ಲಿ ಸಾವು ಆಗಬಾರದಲ್ಲ! ಆದ್ದರಿಂದ ಈ ಸಾವು ನ್ಯಾಯವಲ್ಲ! ಅವರು ನಿಧನರಾದ ಹೊತ್ತಿಂದ ಒಂದಿಷ್ಟು ಮೆಸೇಜುಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ದೂರದರ್ಶನಗಳಲ್ಲಿ ಪ್ರಸಾರವಾಗುತ್ತಿವೆ. ಅವು ಪುನೀತರ ದಾನದ ವಿಚಾರವಾಗಿ ಸಂಬಂಧಿಸಿದವುಗಳು. ದೇಹದಾರ್ಢ್ಯವನ್ನು ಸ್ಥಿರವಾಗಿಸಿಕೊಳ್ಳುವ ಮತ್ತು ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಅವರು ಮಾಡುತ್ತಿದ್ದ ದೈಹಿಕ ಕಸರತ್ತುಗಳಿಗೆ ಸಂಬಂಧಿಸಿದವುಗಳು. ದಾನದ ವಿಚಾರವಾಗಿ ಅವರು ಮಾಡಿದ್ದೆಲ್ಲವೂ ಸ್ವಯಾರ್ಜಿತ ಸಂಪತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆದ್ದರಿಂದ ಅವು ಜನಮಾನಸದಲ್ಲಿ ಚಿರಕಾಲ ಉಳಿಯುವಂಥದ್ದು. ಅವರಂತೇ ಅವಕ್ಕೂ ಸಾವಿಲ್ಲ.

ರಾಜಕುಮಾರರು ಮಾಡಿದ ದಾನಧರ್ಮಗಳು ಹೀಗೆಯೇ ಇತ್ತೆಂಬುದನ್ನು ಕೇಳಿದ್ದೇನೆ. ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ಎನ್ನುತ್ತಾರೆ. ತಂದೆಯಂತೆ ಪುನೀತರು ಮಾಡಿದ ದಾನ ಈ ತೆರನಾದದ್ದು. ಅಷ್ಟಕ್ಕೂ ಸುಖಕ್ಕೆ ಯಾವ ಔದಾರ್ಯ ಇರಲು ಸಾಧ್ಯ? ದಾನದಲ್ಲೇ ಅದರ ಔದಾರ್ಯವನ್ನೂ, ಸಾರ್ಥಕ್ಯವನ್ನೂ ಕಾಣುವ ಔದಾರ್ಯ ಮತ್ತು ಉದಾತ್ತತೆ ರಾಜಕುಮಾರ್, ಪುನೀತ ರಂಥ ಮಹನೀಯರಿಂದ ಮಾತ್ರ ಸಾಧ್ಯವಿದೆ. ಇಂಥವರು ಕನ್ನಡದ
ನೆಲದಲ್ಲಿ ಅನೇಕರಿದ್ದಾರೆ. ಪುನೀತರ ಸಾವು ನ್ಯಾಯವಲ್ಲ!

ಆದರೆ, ದೊಡ್ದವರ ಮನೆಯ ಮಕ್ಕಳು, ಅದರಲ್ಲೂ ಜನಪ್ರಿಯತೆಯ ತುತ್ತತುದಿಯಲ್ಲಿ ಮೆರೆದ ರಾಜಕುಮಾರರನ್ನು ತಂದೆಯನ್ನಾಗಿ ಪಡೆದ ಮಕ್ಕಳಿಗೆ ಎಲ್ಲ ಸೌಭಾಗ್ಯಗಳೂ ಹುಟ್ಟು ದೊರಕಿರುತ್ತದೆ. ಪರಿಸ್ಥಿತಿಯನ್ನು ತನಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಅವಕಾಶವಿರುತ್ತದೆ. ಅದೂ ಬಹುಮಟ್ಟಿಗೆ ಸತ್ಯವೂ ಆಗಿರುತ್ತದೆ. ಹಾಗೇ ನೋಡಿದರೆ ಒಬ್ಬ ದೊಡ್ಡ ಕಲಾವಿದನ ಮಗನಾಗಿ ತಲೆಕೆಡುವುದಕ್ಕೆ ಬೇಕಾದ ಜನಪ್ರಿಯತೆ, ಸಂಪರ್ಕ, ಸಂಪತ್ತು, ಪ್ರಭಾವ ಎಲ್ಲವೂ ಪುನೀತರಿಗೆ ವಿಫಲವಾಗೇ ಇತ್ತು; ಕೆಡುವುದಕ್ಕೆ ಇವುಗಳಲ್ಲಿ ಯಾವುದಾದರೊಂದು ಸಾಕಿತ್ತು.

ಆದರೆ, ಎಲ್ಲ ಇದ್ದೂ ಇಲ್ಲದವರಂತೆ ಕಾಣಿಸಿಕೊಳ್ಳುವುದು ಸಂಸ್ಕಾರವಂತರಿಗೆ ಮಾತ್ರ ಸಾಧ್ಯ. ಚಿತ್ರರಂಗಕ್ಕೂ, ಸಮಾಜಕ್ಕೂ ಅವರು ಮಾದರಿಯಾಗಿದ್ದದ್ದು ಈ
ಬಗೆಯಿಂದ! ಆದ್ದರಿಂದ ಈ ಸಾವು ನ್ಯಾಯವಲ್ಲ! ಅವರ ಎಲ್ಲ ಚಿತ್ರಗಳೂ ಶ್ರೇಷ್ಠ ಎನ್ನಲಾಗದು. ಆದರೆ ತುಂಬಾ ಚೆನ್ನಾಗಿದ್ದವು ಹಲವು ಇವೆ. ನಾಯಕ ನಟನ ವೈಭವೀಕರಣ ಚಿತ್ರಗಳಲ್ಲಿ ಸಹಜವೇ ಆಗಿರುವಂಥದ್ದು. ವಯಸ್ಸು ಹೆಚ್ಚಿದಂತೆ ಮಾಗುವ ಪ್ರೌಢಿಮೆ, ಅನುಭವದ ಪಕ್ವತೆಯಿಂದ ಪುನೀತ ಬೆಳೆಯತೊಡಗಿದ್ದು ಅವರ ಇತ್ತೀಚಿನ ಚಿತ್ರಗಳಲ್ಲಿ ಕಾಣುತ್ತಿದ್ದವು. ಬದುಕಿನಲ್ಲಿ ಗಳಿಸಿದ್ದೆಲ್ಲವನ್ನೂ ಸಮಭಾವ, ಸಮಚಿತ್ತದಿಂದ ಕಾಣುವ ಸ್ಥಿತಪ್ರಜ್ಞ ಸ್ಥಿತಿಯನ್ನು ಅವರು ಗಳಿಸಿದ್ದರು.

ವಯಸ್ಸಾದಂತೆ ಮನಸ್ಸು ಸೂಕ್ಷವಾಗ ಬೇಕು. ಸಂವೇದನೆಯನ್ನು ಹೊಂದಬೇಕು. ಪುನೀತರಿಗೆ ಆ ದೊಡ್ಡ ಗುಣಗಳಿತ್ತು. ಕಟ್ಟುಮಸ್ತಾದ ಅಂಗಸೌಷ್ಠವ ಪುನೀತರಿಗಿತ್ತು. ವೈಜ್ಞಾನಿಕವಾಗಿ, ಬೌದ್ಧಿಕವಾಗಿ ನಾವೆಷ್ಟೇ ಬೆಳೆದರೂ ಸತ್ತವರು ನಕ್ಷತ್ರಗಳಾಗುತ್ತಾರೆ. ಈಗಲೂ ಸಾವನ್ನು ನಮ್ಮ ಮನೆಯ ಮಕ್ಕಳಿಗೆ ಅರ್ಥ ಮಾಡಿಸುವುದು ಹೀಗೆಯೇ! ನಮ್ಮನ್ನು ಅಗಲಿದವರು ಸ್ವರ್ಗವನ್ನು ಸೇರುತ್ತಾರೆ ಎಂಬ ಉದಾತ್ತತೆಯಲ್ಲಿ ಪುನೀತರು ಅಲ್ಲಿಗೆ ಸೇರಿದರು ಎಂದೇ ಭಾವಿಸಿದ್ದೇವೆ. ಆದರೆ, ಅವರ ನಗುವಿಗೆ ಸಾವಿಲ್ಲ, ಅವರ ಮಾತುಗಳಿಗೆ ಸಾವಿಲ್ಲ, ಅವರ ಪ್ರೀತಿಗೆ ಸಾವಿಲ್ಲ.

ಬದುಕು, ಮಾತು, ಕೃತಿ, ಸಿನಿಮಾ, ಕನ್ನಡದ ಕೋಟ್ಯಧಿಪತಿ, ಜಾಹೀರಾತುಗಳು, ದಾನ ಧರ್ಮಗಳ ಮೂಲಕ ಕನ್ನಡದ ಮನಸುಗಳನ್ನು ಗೆದ್ದ ಪುನೀತರಿಗೆ ತನಗೆ ಸಾವು ಬಂದೀತು ಎಂಬ ಒಂದು ಸಣ್ಣ ಭಾವವೂ ಇದ್ದಿರಲಿಕ್ಕಿಲ್ಲ. ಎದೆನೋವು ಬಂದಿದೆ, ವೈದ್ಯರನ್ನು ಕಂಡು ಚಿಕಿತ್ಸೆ ಪಡೆದು ಹಾಗೇ ವಾಪಸ್ಸು ಮನೆಗೆ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರೆ ಸರಿಯಾದೀತು ಎಂದೇ ಮನೆಯಿಂದ ಹೊರಟ ಪುನೀತರಿಗೆ ಸಾವು ತನ್ನನ್ನು ಹಿಂಬಾಲಿಸುತ್ತಿದೆ ಎಂದಾಗಲೀ ಅಥವಾ ಅಂಥಾದ್ದೇನೋ ಮಹತ್ತಾದುದು ನನ್ನ ಬದುಕಿನಲ್ಲಿ ಘಟಿಸಲಿದೆ ಎಂಬ ಸಣ್ಣ ಸಂದೇಹವೂ ಇದ್ದಿರಲಿಕ್ಕಿಲ್ಲ.

ಅವಸರದ ಹಠಕ್ಕೆ ಬಿದ್ದವನಂತೆ ವಿಧಿ ಹಿಂಬಾಲಿಸುತ್ತಲೇ ಅಲ್ಲಿ ಇಲ್ಲಿ ಅಂತ ಸುತ್ತಾಡಿಸಿ ಕರೆದುಕೊಂಡು ಹೋಗಿಯೇ ಬಿಟ್ಟ! ಯಾವ ತಾದಾತ್ಮ್ಯವೂ ಸಲ್ಲವೆಂಬುದನ್ನು ಮನಗಾಣಬೇಕು ಎಂಬುದರ ಸತ್ಯದರ್ಶನವಾದಂತೆ ಪುನೀತರ ಸಾವು ಸಂಭವಿಸಿ ಬಿಟ್ಟಿತು! ಯಾವಾಗಲೂ ಅನಿಸುವುದುಈ ಸಾವು ಮಾತ್ರ
ನ್ಯಾಯವಲ್ಲವೆಂದೇ! ಹಾಗಾದರೆ ಪುನೀತರ ಸಾವನ್ನು ಎಲ್ಲ ಸಾವಿನಂತೆ ಭಾವಿಸಲಾಗಲೀ, ಒಪ್ಪಲಾಗಲೀ ಸಾಧ್ಯವಾಗುತ್ತಿಲ್ಲ? ಏಕೆಂದರೆ, ಅವರ ಸಹಜ ಬದುಕಿನೊಂದಿಗೆ ಅಥವಾ ಚಿತ್ರ ಬದುಕಿನೊಂದಿಗೆ ನಾವು ಹೊಂದಿರುವ ತಾದಾತ್ಮ್ಯವೇ ಅವರ ಸಾವನ್ನು ಅರಗಿಸಿಕೊಳ್ಳುವುದಕ್ಕೆ ಬಿಡುತ್ತಿಲ್ಲ! ಆದರೂ ಅವರದು
ಪುಣ್ಯವಂಥ ಮರಣ. ಇಂಥ ಮರಣ ಲಕ್ಷಕ್ಕೆ ಕೋಟಿಗೊಂದು ಎಂದು ಉತ್ಕಟವಾದ ಭಾವದಲ್ಲಿ, ಈ ಮರಣ ದೇವರು ಕೊಟ್ಟ ಕಾಣಿಕೆ ಎಂದೇ ಭಾವಿಸಿದರೂ ಅವರ ಅಗಲಿಕೆ ಅರಗಿಸಿಕೊಳ್ಳುವುದು ಅಸಾಧ್ಯವೇ ಸರಿ!

ಬೆಳಕು ಮುಗಿದ ಮೇಲೆ ಕತ್ತಲು; ಸುಖದ ಅನಂತರ ದುಃಖ ಇದ್ದದ್ದೇ! ಒಳಗೆ ಹೋಗುವುದು ಹೊರ ಬರುವುದಕ್ಕೆ, ಮೇಲೇರುವುದು ಕೆಳಗಿಳಿಯುವುದಕ್ಕೆ, ಸಾಯುವುದು ಹುಟ್ಟುವುದಕ್ಕೆ; ಹುಟ್ಟುವುದು ಸಾಯುವುದಕ್ಕೆ! ಬದುಕಿನಲ್ಲಿ ಏನೇನು ಮಹತ್ಕಾರ್ಯಗಳನ್ನು ಮಾಡಬೇಕು ಎಂದು ಪುನೀತರು ಕನಸು ಕಂಡಿದ್ದರೋ? ಅನೂಹ್ಯ! ರಾಜಕುಮಾರರನ್ನೂ ಮೀರಿಸುವ ಔನ್ನತ್ಯ ಅವರಲ್ಲಿತ್ತು. ಏನೇನೋ ಮಾಡಬೇಕು ಎಂಬ ಆಸಕ್ತಿಯನ್ನು ಅನ್ಯಾನ್ಯ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಪುನೀತರು ಚಿತ್ರನಟರಾದದ್ದು ಕನ್ನಡ ನೆಲದ ಸೌಭಾಗ್ಯವೆಂದೇ ಭಾವಿಸುತ್ತೇನೆ. ಅವರ ಗುಣಸ್ವಭಾವಕ್ಕೆ ಒಪ್ಪಓರಣವಾಗಿ ಅದು ಪ್ರತಿಫಲಿಸಿತು.

ಕಾಡುವಿಕೆಯ ಭಾವ ಸ್ಥಾಯಿಯಾಗೇ ಇರುವುದಂತೂ ಸತ್ಯ! ಡಾ.ರಾಜಕುಮಾರ್ ಅವರ ಪ್ರಭೆಯನ್ನೂ ಮೀರಿ ನಿಲ್ಲುವ ನಿಜ ಸಂಭವನೀಯ ಸಾಮರ್ಥ್ಯವನ್ನು ಸಂಪಾದಿಸಿದ್ದ ಪುನೀತ್ ಇನ್ನೊಂದು ಐವತ್ನಾಲ್ಕು ವರ್ಷ ಬದುಕಬೇಕಿತ್ತು! ಆತ್ಮಕ್ಕೀಗ ದೇಹ ಕಳಚಿಕೊಂಡಿದ್ದು ಅರಿವಾಗಿದೆ!