Wednesday, 11th December 2024

ಚಿಂತನಾ ಶಿಬಿರದ ನಿರ್ಣಯ, ನಿಜಕ್ಕೂ ಸಾಧ್ಯವೇ ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಈ ಹಿಂದಿನ ಏಕಚಕ್ರಾದಿಪತ್ಯದ ಬದಲಿಗೆ, ಹಿರಿಯರ ಮಾತನ್ನು ಆಲಿಸುವ ಮಟ್ಟಿಗಾದರು ಕಾಂಗ್ರೆಸ್‌ನಲ್ಲಿ ಬದಲಾವಣೆಯಾಗಿರುವುದು ಉತ್ತಮ ಬೆಳವಣಿಗೆಯೇ. ಆದರೆ ನಿರ್ಣಯಗಳಿಗೂ, ನೈಜ ಸ್ಥಿತಿಗೂ ಅಜಗಜಾಂತರವಿರುವುದರಿಂದ, ಅದನ್ನು ಯಾವ ರೀತಿ ಬದಲಾಯಿಸುತ್ತಾರೆ?

ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತಾಯಿತು ಕಾಂಗ್ರೆಸ್‌ನ ನಡೆ. ಪಕ್ಷದ ಭದ್ರ ಕೋಟೆಗಳಾಗಿದ್ದ ರಾಜ್ಯಗಳೆಲ್ಲ ಕೈಬಿಟ್ಟ ಬಳಿಕ ಪಕ್ಷವನ್ನು ಪುನಶ್ಚೇತನಗೊಳಿಸುವ, ಅಳಿದು ಹೋಗಿರುವ ಸಂಘಟನೆಗೆ ಬಲ ತುಂಬುವ ನಿಟ್ಟಿನಲ್ಲಿ ‘ಚಿಂತನಾ ಶಿಬಿರ’ವನ್ನು ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ನಡೆಸಿ, ಹತ್ತು ಹಲವು ನಿರ್ಣಯ ಗಳನ್ನು ಕೈಗೊಂಡಿದೆ ಪುರಾತನ ರಾಷ್ಟ್ರೀಯ ಪಕ್ಷ. ಕುಟುಂಬಕ್ಕೊಂದೇ ಟಿಕೆಟ್, ಒಬ್ಬರಿಗೆ ಒಂದೇ ಸ್ಥಾನ, ಅಧಿಕಾರ ಅನುಭವಿಸಿದ ಬಳಿಕ ಕೂಲಿಂಗ್ ಪೀರಿಯಡ್ ಸೇರಿ ಹಲವು ಮಹತ್ವದ ನಿರ್ಣಯ ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೆ ಈ ಎಲ್ಲ ನಿರ್ಣಯಗಳು ಕಾರ್ಯರೂಪಕ್ಕೆ ಬರುವುದು ಸುಲಭವಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ.

ಎಐಸಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ 430ಕ್ಕೂ ಹೆಚ್ಚು ಪ್ರಮುಖ ನಾಯಕರು ಭಾಗ ವಹಿಸಿದ್ದ ಚಿಂತನಾ ಶಿಬಿರ ಮೂರು ದಿನಗಳ ನಡೆದಿದ್ದು, ಅದರಲ್ಲಿ ಪಕ್ಷದ ಪುನಶ್ಚೇತನಕ್ಕೆ, ಮುಂದಿನ ಲೋಕಸಭಾ ಚುನಾವಣೆ ಸಂಘಟನೆ ದೃಷ್ಟಿಯಿಂದ ಹಲವು ನಿರ್ಣಯಗಳಿಗೆ ಅನುಮೋದನೆ ನೀಡಲಾಗಿದೆ. ಈ ಎಲ್ಲವನ್ನು ಜಾರಿಗೊಳಿಸುವ ಭರವಸೆಯನ್ನು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದ ಆಯಕಟ್ಟಿನ ಹುದ್ದೆಯಲ್ಲಿರುವ ನಾಯಕರ ಪ್ರಕಾರ ಉದಯ ಪುರದ ಶಿಬಿರದಲ್ಲಿ ಕೈಗೊಂಡಿರುವ ನಿರ್ಣಯಗಳು ಜಾರಿಯಾದರೆ, ಪುನಃ ದೇಶದಲ್ಲಿ ಕಾಂಗ್ರೆಸ್ ಉದಯಿಸುವು ದರಲ್ಲಿ ಅನುಮಾನವಿಲ್ಲ.

ಆದರೆ ಬಹುತೇಕ ತೀರ್ಮಾನಗಳು ಪೇಪರ್‌ಗೆ ಸೀಮಿತವಾಗುವ ಆತಂಕವೇ ಹೆಚ್ಚಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಈ ರೀತಿ ಆತಂಕ ವ್ಯಕ್ತಪಡಿಸುವುದಕ್ಕೆ ಕಾರಣವೂ ಇದೆ. ಚಿಂತನಾ ಶಿಬಿರದಲ್ಲಿ ತೆಗೆದುಕೊಂಡಿರುವ ಹಲವು ನಿರ್ಣಯಗಳು ಸಂಪೂರ್ಣವಾಗಿ ಜಾರಿಯಾದರೆ, ಪಕ್ಷದ ಆಯಕಟ್ಟಿನ ಸ್ಥಾನದಲ್ಲಿರುವ ಅನೇಕರಿಗೆ ಅವಕಾಶ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಅದರಲ್ಲಿಯೂ ಗಾಂಧಿ ಕುಟುಂಬದೊಂದಿಗೆ ಉತ್ತಮ ಒಡನಾಟವನ್ನಿಟ್ಟುಕೊಂಡು ಆಯಕಟ್ಟಿನ ಸ್ಥಾನದಲ್ಲಿರುವ ಅನೇಕರು, ‘ಕೂಲಿಂಗ್ ಪಿರಿಯಡ್’ ನೆಪದಲ್ಲಿ ಸುಮ್ಮನೆ ಕೂರಬೇಕಾದ ಅನಿವಾರ್ಯತೆ ನಿರ್ಮಾಣವಾಗುವುದರಿಂದ, ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸುವುದಕ್ಕೆ ಬಿಡುವುದು ಬಹುತೇಕ ಅನುಮಾನ ಎನ್ನುವ ಅನುಮಾನಗಳು ಶುರುವಾಗಿದೆ.

ಚಿಂತನಾ ಶಿಬಿರದಲ್ಲಿ ಶೇ.೫೦ರಷ್ಟು ಸ್ಥಾನಗಳನ್ನು ಅಹಿಂದದವರಿಗೆ ನೀಡಬೇಕು, ಶೇ.50ರಷ್ಟು ಸ್ಥಾನವನ್ನು ಪಕ್ಷದಲ್ಲಿರುವ ಯುವಕರಿಗೆ ನೀಡಬೇಕು, ದೇಶಾ ದ್ಯಂತ ರಾಷ್ಟ್ರವ್ಯಾಪಿ ರ‍್ಯಾಲಿ  ನಡೆಸಬೇಕು, ಪದಾಽಕಾರಿಗಳ ಹುದ್ದೆ ಖಾಲಿಯಾದ 90 ದಿನದಲ್ಲಿ ಹೊಸಬರನ್ನು ನೇಮಿಸಬೇಕು, ಎಐಸಿಸಿ ಸೇರಿದಂತೆ ರಾಜ್ಯಗಳ ಪಿಸಿಸಿಯಲ್ಲಿರುವ ವಿವಿಧ ಘಟಕಗಳು, ಪದಾಽಕಾರಿಗಳು ಮಾಡುವ ಕೆಲಸಗಳ ಮೇಲೆ ನಿಗಾವಹಿಸಲು ಪ್ರತ್ಯೇಕ ವಿಭಾಗವನ್ನು ಆರಂಭಿಸಬೇಕು ಎನ್ನುವ ನಿರ್ಣಯ ಗಳ ಬಗ್ಗೆ ಎಲ್ಲರೂ ಒಪ್ಪಿಕೊಂಡು ಸ್ವಾಗತಿಸಿದ್ದಾರೆ. ಈ  ಎಲ್ಲವನ್ನು ಪ್ರಾಯೋಗಿಕವಾಗಿಯೂ ಜಾರಿಗೊಳಿಸುವುದು ದೊಡ್ಡ ವಿಷಯವೇನಲ್ಲ.

ಆದರೆ ಈ ಎಲ್ಲ ನಿರ್ಣಯಗಳಿಗಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಇನ್ನೆರೆಡು ತೀರ್ಮಾನಗಳು ಎಂದರೆ, ‘ಒಂದು ಕುಟುಂಬ-ಒಂದು ಟಿಕೆಟ್’ ಹಾಗೂ ‘ಒಬ್ಬರಿಗೆ ಒಂದೇ ಸ್ಥಾನ’ ಎನ್ನುವುದು. ಒಬ್ಬರಿಗೆ ಒಂದೇ ಸ್ಥಾನ ಎನ್ನುವುದು ಇದೇ ಮೊದಲಿಗೆ ಬಂದಿರುವ ನಿಯಮವೇನಲ್ಲ. ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿ ಯಾಗಿದ್ದ ವೇಳೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಮರಾಜ್, ಎಸ್. ನಿಜಲಿಂಗಪ್ಪ, ಜಗಜೀವನ್ ರಾಮ್, ಶಂಕರ್ ದಯಾಳ್ ಶರ್ಮ, ದೇವಾಕಾಂತ್ ಬರುವಾ ಅವರನ್ನು ನೇಮಿಸಲಾಗಿತ್ತು. ಈ ಎಲ್ಲರೂ ಎಐಸಿಸಿ ಅಧ್ಯಕ್ಷರಾಗಿ ನಾಮ್‌ಕೆ ವಾಸ್ತೆಯಲ್ಲಿ ಕೂತಿದ್ದರೂ, ಇಡೀ ಪಕ್ಷದ ಪ್ರತಿಯೊಂದನ್ನು ಇಂದಿರಾ ಗಾಂಧಿ ಅವರೇ ನಿಭಾಯಿಸುತ್ತಿದ್ದರು ಎನ್ನುವುದು ಬೇರೆ ಮಾತು.

ಇಂದಿರಾ ಗಾಂಽ ಅವರ ಮರಣದ ಬಳಿಕ ಪ್ರಧಾನಿಯಾಗಿ ರಾಜೀವ್ ಗಾಂಧಿ ಅವರು ಅಧಿಕಾರಕ್ಕೆ ಬಂದರು. ಪ್ರಧಾನಿ ಹುದ್ದೆಯ ಜತೆಜತೆಗೆ ಎಐಸಿಸಿ ಅಧ್ಯಕ್ಷ ರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದರು. ರಾಜೀವ್ ಗಾಂಧಿ ಅವರ ತನಕ ಒಬ್ಬರಿಗೆ ಒಂದೇ ಸ್ಥಾನ ಎನ್ನುವ ನಿಯಮ ಕೈಬಿಡಲಾಯಿತು. ಇದಾದ ಬಳಿಕ ರಾಜೀವ್ ಗಾಂಧಿ ಅವರ ನಿಧನದ ಬಳಿಕ ಗಾಂಧಿ ಕುಟುಂಬ ಕೆಲ ವರ್ಷಗಳ ಕಾಲ ರಾಜಕೀಯದಿಂದ ದೂರವಿದ್ದ ಕಾರಣಕ್ಕೆ, ಎಐಸಿಸಿ ಅಧ್ಯಕ್ಷ ಸ್ಥಾನ ಬೇರೆಬೇರೆ ಯವರಿಗೆ ನೀಡಲಾಗಿತ್ತು. ಇದಾದ ಬಳಿಕ ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕಾರಣಕ್ಕೆ ಬಂದು ಬಳಿಕ 19 ವರ್ಷಗಳ ಕಾಲ ‘ಅವಿರೋಧ’ವಾಗಿ ಅವರೇ ಎಐಸಿಸಿ ಅಧ್ಯಕ್ಷೆಯಾಗಿದ್ದರು. ಇದೇ ಅವಧಿಯಲ್ಲಿ ಅವರು ಯುಪಿಎ ಅಧ್ಯಕ್ಷೆಯಾಗಿಯೂ, ಸಂಸದೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ರಾಹುಲ್ ಗಾಂಽ ಅವರು, ೨೦೧೭ರಿಂದ ೨ ವರ್ಷ ಅಧಿಕಾರ ನಡೆಸಿ ಪುನಃ ಸೋನಿಯಾ ಗಾಂಧಿ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಈ ಎಲ್ಲ ಅವಧಿಯಲ್ಲಿ ಒಬ್ಬರಿಗೆ ಒಂದೇ ಸ್ಥಾನ ಎನ್ನುವ ನಿಯಮ ಗಾಂಧಿ ಕುಟುಂಬಕ್ಕೆ ಒಗ್ಗಿಲ್ಲ ಎನ್ನುವುದು ಸತ್ಯ. ಆಡಳಿತ ಅಥವಾ ಪ್ರತಿ ಪಕ್ಷ ಸ್ಥಾನದಲ್ಲಿನ ಆಯಕಟ್ಟಿನ ಹುದ್ದೆಯ ಜತೆಜತೆಗೆ ಪಕ್ಷದ ಮಹತ್ವದ ಹುದ್ದೆಯಲ್ಲಿಯೂ ಮುಂದುವರಿಯುತ್ತಾರೆ.

ಹೀಗಿರುವಾಗ, ಕಾಂಗ್ರೆಸ್‌ನ ಚಿಂತನಾ ಶಿಬಿರದಲ್ಲಿ ತಗೆದುಕೊಂಡಿರುವ ‘ಒಬ್ಬರಿಗೆ ಒಂದು ಸ್ಥಾನ’ ಎನ್ನುವುದು ಗಾಂಽ ಕುಟುಂಬವನ್ನೂ ಸೇರಿಸಿ ಕೊಂಡು ಪ್ರಾಯೋ ಗಿಕವಾಗಿ ಜಾರಿಗೆ ತರಲು ಸಾಧ್ಯವೇ ಎನ್ನುವುದನ್ನು ಕಾದು ನೋಡಬೇಕಿದೆ. ಮತ್ತೊಂದು ಮಹತ್ವದ ತೀರ್ಮಾನವಾಗಿರುವ ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್’ ಎನ್ನುವುದು ಈಗಿನ ಕಾಂಗ್ರೆಸ್‌ನ ಪರಿಸ್ಥಿತಿಯಲ್ಲಿ ಅಸಾಧ್ಯ ಎನ್ನುವ ಮಾತುಗಳೇ ಕೇಳಿಬಂದಿದೆ. ಸ್ವತಃ ರಾಹುಲ್ ಗಾಂಧಿ ಕುಟುಂಬದಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಈಗಾಗಲೇ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಪ್ರಿಯಾಂಕಾ ಗಾಂಧಿ ಅವರನ್ನು ಚುನಾವಣಾ ರಾಜಕೀಯಕ್ಕೆ ತರಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಇನ್ನು ಕರ್ನಾಟಕದ ವಿಷಯದಲ್ಲಿ ನೋಡುವುದಾದರೆ, ಘಟಾನುಘಟಿ ನಾಯಕರ ಕುಟುಂಬದವರೇ ಎರಡೆರೆಡು ಟಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಹೀಗಿರು ವಾಗ, ಯಾರಿಗೆ ಟಿಕೆಟ್ ಕೈಬಿಟ್ಟು ಯಾರಿಗೆ ಟಿಕೆಟ್ ಕೊಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವ ಕುಮಾರ್, ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬದ ಇಬ್ಬರಿಬ್ಬರು ಸದಸ್ಯರು ಈಗಾಗಲೇ ವಿಧಾನಸಭೆ, ಪರಿಷತ್, ಲೋಕಸಭೆ ಹಾಗೂ ರಾಜ್ಯ ಸಭೆಗೆ ಆಯ್ಕೆಯಾಗಿರುವುದರಿಂದ ಈ ಎಲ್ಲರೂ ಮತ್ತೊಂದು ಅವಽಗೆ ಸಹಜವಾಗಿಯೇ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇದೀಗ ಇವರಲ್ಲಿ ಯಾರನ್ನು ಕೈಬಿಡಬೇಕು? ಯಾರನ್ನು ಉಳಿಸಿಕೊಳ್ಳಬೇಕು ಎನ್ನುವ ಗೊಂದಲಕ್ಕೆ ಉತ್ತರ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಸ್ಪಷ್ಟ. ಇದು ಕೇವಲ ಕರ್ನಾಟಕದಲ್ಲಿರುವ ರಾಜ್ಯಮಟ್ಟದ ಚುನಾವಣಾ ಲೆಕ್ಕಾಚಾರ. ಕರ್ನಾಟಕದ ರೀತಿಯಲ್ಲಿಯೇ ದೇಶಾದ್ಯಂತ ಇದೇ ರೀತಿಯ ಕುಟುಂಬ ರಾಜಕಾರಣ ವನ್ನೂ ಕಾಂಗ್ರೆಸ್ ಮೊದಲಿನಿಂದಲೂ ಪೋಷಿಸಿಕೊಂಡು ಬಂದಿದೆ. ಈ ಜಟಿಲ ಸಮಸ್ಯೆಯನ್ನು ಅರಿತುಕೊಂಡೇ, ಈ ನಿರ್ಣಯಕ್ಕೆ ಒಂದು ರಿಯಾಯಿತಿಯನ್ನು  ನೀಡಲಾಗಿದೆ. ಅದೇನೆಂದರೆ ಒಂದು ವೇಳೆ ಯಾವುದಾದರೂ ಒಂದು ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಟಿಕೆಟ್ ನೀಡಬೇಕು ಎಂದರೆ ಅವರು ಕನಿಷ್ಠ ಐದು ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಮಾಡಿರಬೇಕು ಎಂದು.

ಹಾಗೇ ನೋಡಿದರೆ ಯಾವುದೇ ನಾಯಕನ ಮಕ್ಕಳು, ಸಹಜವಾಗಿಯೇ 18 ವರ್ಷದ ಬಳಿಕ ಸಕ್ರಿಯ ರಾಜಕಾರಣದಲ್ಲಿ ತಮ್ಮ ಪೋಷಕರಿಗೆ ಸಹಾಯ ಮಾಡಲು ನಿಂತಿರುತ್ತಾರೆ. ಅದೇ ಮಾನದಂಡ ಎನ್ನುವುದಾದರೆ, ಬಹುತೇಕ ಎಲ್ಲ ಕುಟುಂಬದಲ್ಲಿಯೂ ಒಂದಕ್ಕಿಂತ ಹೆಚ್ಚು ಸೀಟು ಪಡೆಯಲು ಸಾಧ್ಯ. ಹಾಗಾದರೆ ಈ ನಿರ್ಣಯ ತಂದ ಪ್ರಯೋಜನವಾದರೂ ಏನು ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಇನ್ನು ಮೂರನೇ ನಿರ್ಣಯವಾಗಿರುವ ‘ಒಬ್ಬರಿಗೆ ಒಂದು ಬಾರಿಯೇ ಅವಕಾಶ’ ಎನ್ನುವುದು ಕಾಂಗ್ರೆಸ್ ಮಟ್ಟಿಗೆ ಸಾಧ್ಯವೇ ಎನ್ನುವುದು ಬಹುತೇಕ ಪ್ರಶ್ನೆ.

ಒಂದು ವೇಳೆ ಹಾಗಾದರೆ, ಕಳೆದ ೨ ದಶಕದಿಂದ ಅಧ್ಯಕ್ಷ ಸ್ಥಾನದಲ್ಲಿಯೇ ಇರುವ ಗಾಂಽ ಕುಟುಂಬ ಈ ಬಾರಿ ಕೆಳಗೆ ಇಳಿಯುವುದು ನಿಶ್ಚಿತವೇ? ಇದರೊಂದಿಗೆ ಈ ನಿರ್ಣಯದಲ್ಲಿ ಮೂರು ವರ್ಷ ಕೂಲಿಂಗ್ ಪಿರಿಯಡ್ ಅನ್ನು ನೀಡಿರುವುದರಿಂದ, ಯಾರಿಗೆ ಅಧ್ಯಕ್ಷ ಸ್ಥಾನ ನೀಡಲಾಗುವುದು? ಇನ್ನು ರಾಹುಲ್ ಪರಮಾಪ್ತ ವಲಯ ದಲ್ಲಿರುವ ಕೆ.ಸಿ ವೇಣುಗೋಪಾಲ್ ಹಾಗೂ ರಂದೀಪ್ ಸುರ್ಜೇವಾಲ ಅವರನ್ನು ಸ್ಥಾನದಿಂದ ಕೆಳಗೆ ಇಳಿಸಲು ರಾಹುಲ್ ಒಪ್ಪುವರೇ ಎನ್ನುವ ಪ್ರಶ್ನೆಗಳಿಗೆ ಕಾಂಗ್ರೆಸಿ ಗರ ಬಳಿ ಉತ್ತರವಿಲ್ಲ.

ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ತನ್ನ ಅಽಪತ್ಯವನ್ನು ಪುನರ್‌ಸ್ಥಾಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತಗೆದುಕೊಳ್ಳುವು ದರಲ್ಲಿ ಏನೋ ಯಶಸ್ವಿಯಾಗಿದೆ. ಈ ಹಿಂದಿನ ಏಕಚಕ್ರಾಽಪತ್ಯದ ಬದಲಿಗೆ, ಹಿರಿಯರ ಮಾತನ್ನು ಆಲಿಸುವ ಮಟ್ಟಿಗಾದರು ಕಾಂಗ್ರೆಸ್‌ನಲ್ಲಿ ಬದಲಾವಣೆ ಯಾಗಿರುವುದು ಉತ್ತಮ ಬೆಳವಣಿಗೆಯೇ. ಆದರೆ ತಗೆದುಕೊಂಡಿರುವ ನಿರ್ಣಯಗಳಿಗೂ, ನೈಜ ಸ್ಥಿತಿಗೂ ಅಜಗಜಾಂತರವಿರುವುದರಿಂದ, ಅದನ್ನು ಯಾವ ರೀತಿ ಬದಲಾಯಿಸುತ್ತಾರೆ? ನಿಜಕ್ಕೂ ತಗೆದುಕೊಂಡಿರುವ ನಿರ್ಣಯ ಇತರ ಕುಟುಂಬಗಳಂತೆ ಗಾಂಽ ಕುಟುಂಬಕ್ಕೂ ಅನ್ವಯಿಸಿಕೊಂಡು ಪಕ್ಷವನ್ನು ಮುನ್ನಡೆ ಸಲು ಸಾಧ್ಯವೇ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.