Friday, 18th October 2024

Archimedes: ರಾಜೇಂದ್ರ ಭಟ್‌ ಅಂಕಣ: ‘ಯುರೇಕಾ ಯುರೇಕಾ’ ಎಂದು ಬಟ್ಟೆ ಹಾಕದೆ ಓಡಿದವನ ಕತೆ!

archemedes

ಸ್ಫೂರ್ತಿಪಥ ಅಂಕಣ: ಆತನನ್ನು ಕೊಂದ ಸೈನಿಕನಿಗೆ ಆರ್ಕಿಮಿಡೀಸ್ ಯಾರೆಂದು ಗೊತ್ತಿರಲಿಲ್ಲ!

Rajendra Bhat K
  • ರಾಜೇಂದ್ರ ಭಟ್ ಕೆ.

Archimedes: ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಬದುಕಿದ್ದ ಆತ ಜಗತ್ತಿನ ಅತ್ಯಂತ ಶ್ರೇಷ್ಠ ಗಣಿತಜ್ಞರಲ್ಲಿ (Mathematician) ಒಬ್ಬನು ಎಂದು ಎಲ್ಲರಿಂದ ಕರೆಸಿಕೊಂಡಿದ್ದಾನೆ. ಆತನ ಇಡೀ ಬದುಕು ರೇಖಾಗಣಿತ, ಬಾಹ್ಯಾಕಾಶ ವಿಜ್ಞಾನ, ಭೌತಶಾಸ್ತ್ರಗಳಲ್ಲಿ (physics) ಕಳೆದುಹೋಗಿತ್ತು!

ಇವತ್ತು ಮೂರು ಕಾರಣಕ್ಕೆ ಆತನ ಸ್ಮರಣೆ ಮಾಡೋಣ.

ಕಾರಣ ಒಂದು – ಸನ್ನೆಗೋಲು, ತಿರುಪು ಕೊಳವೆ

ಯಾವುದೇ ಭಾರವಾದ ವಸ್ತುಗಳನ್ನು ಎತ್ತಲು ಬಳಸುವ ಸನ್ನೆಗೋಲನ್ನು ಮೊತ್ತಮೊದಲು ಕಂಡು ಹಿಡಿದವನು ಇದೇ ಆರ್ಕಿಮಿಡೀಸ್! ಅಂದಿನ ದೊರೆಗೆ ಆತ ಹೇಳಿದ ಮಾತು “ನನಗೆ ನಿಲ್ಲಲು ಸ್ವಲ್ಪ ಜಾಗ ಕೊಡಿ. ಒಂದು ಗಟ್ಟಿಯಾದ ಮೀಟುಗೋಲು ಕೊಡಿ. ನಾನು ಇಡೀ ಭೂಮಿಯನ್ನು ಎತ್ತಿ ಇನ್ನೊಂದು ಕಡೆ ಇಡಬಲ್ಲೆ!”

ಅದು ಅಹಂಕಾರದ ಮಾತಾಗಿರಲಿಲ್ಲ!

ಹಾಗೆಯೇ ಆಳವಾದ ಹಳ್ಳದಲ್ಲಿ ನೀರು ಸಂಗ್ರಹವಾಗಿದ್ದ ಸಂದರ್ಭ ಅದನ್ನು ಮೇಲಕ್ಕೆತ್ತಲು ಸಹಾಯ ಮಾಡುವ ತಿರುಪು ಕೊಳವೆಯನ್ನು ಆವನು ಆವಿಷ್ಕಾರ ಮಾಡಿದನು. ಅದರಿಂದ 10-12 ಅಡಿಗಳಷ್ಟು ಆಳದಿಂದ ನೀರನ್ನು ಮೇಲೆ ಎತ್ತಲು ಅವನಿಗೆ ಸಾಧ್ಯವಾಯಿತು! ಅಂದಿನ ಇಟೆಲಿ ದೇಶದ ಜನರು ಆತನನ್ನು ಎಂದಿಗೂ ಮರೆಯಲು ಸಾಧ್ಯವೇ ಇರಲಿಲ್ಲ!

ಕಾರಣ ಎರಡು – ಯುರೇಕಾ ಯುರೇಕಾ!

ಒಮ್ಮೆ ಏನಾಯಿತು ಅಂದರೆ ಸಿರಾಕ್ಯುಸ್ ನಗರದ ಅರಸ ಹೀರಾನನಿಗೆ ಒಬ್ಬ ಅಕ್ಕಸಾಲಿಗನು ಒಂದು ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ಕೊಟ್ಟನು. ಅದರ ಶುದ್ಧತೆಯ ಬಗ್ಗೆ ಅರಸನಿಗೆ ಸಂಶಯ ಆರಂಭ ಆಯಿತು. ಅದನ್ನು ಕರಗಿಸದೆ ಅದರ ಶುದ್ಧತೆಯನ್ನು ಪರಿಶೀಲನೆ ಮಾಡುವ ಸವಾಲು ಎದುರಾದಾಗ ಅರಸನು ಆಗಿನ ಕಾಲದ ಮಹಾವಿಜ್ಞಾನಿಯಾದ ಆರ್ಕಿಮಿಡೀಸ್ ಸಲಹೆ ಕೇಳುತ್ತಾನೆ.

ಆಗ ಆರ್ಕಿಮಿಡೀಸ್ ಅದನ್ನು ಸವಾಲಾಗಿ ಸ್ವೀಕರಿಸಿ ಹಲವು ಪ್ರಯೋಗಗಳನ್ನು ಮಾಡುತ್ತಾನೆ. ನಿದ್ದೆ ಬಿಟ್ಟು ಯೋಚನೆ ಮಾಡುತ್ತಾನೆ. ಆದರೆ ಪರಿಹಾರವು ದೊರೆಯಲಿಲ್ಲ. ಕೊನೆಗೆ ಮೈಯೆಲ್ಲ ಬೆವರಾಗಿ ಸ್ನಾನ ಮಾಡಲು ಮನಸ್ಸಾಗಿ ಎಲ್ಲ ಬಟ್ಟೆಗಳನ್ನು ಕಳಚಿ ಬಾತ್ ಟಬಗೆ ಇಳಿಯುತ್ತಾನೆ. ಅದರಲ್ಲಿ ತುಂಬಾ ನೀರಿತ್ತು.

ಥಟ್ಟನೆ ಏನೋ ಹೊಳೆಯಿತು!

ಆತನು ನೀರಿಗೆ ಇಳಿದಾಗ ನೀರು ಹೊರಚೆಲ್ಲುವುದನ್ನು ಗಮನಿಸುತ್ತಾನೆ. ಅಂದರೆ ನನ್ನ ದೇಹದ ಘನ ಅಳತೆಯಷ್ಟೇ ನೀರು ಹೊರಚೆಲ್ಲಿತ್ತು ಎಂದು ಅವನಿಗೆ ಥಟ್ಟ ಹೊಳೆಯಿತು! ಆಗಿನ ಕಾಲದಲ್ಲಿ ಶುದ್ಧ ಚಿನ್ನದ ಸಾಂದ್ರತೆಯನ್ನು ಕಂಡು ಹಿಡಿದಿದ್ದ ಕಾರಣ ಕಿರೀಟವನ್ನು ನೀರಲ್ಲಿ ಮುಳುಗಿಸಿ ಅದು ಹೊರಗೆ ಚೆಲ್ಲಿದ ನೀರಿನ ಗಾತ್ರವನ್ನು ಅಳತೆ ಮಾಡಿ ಅದು ಶುದ್ಧವೋ, ಅಶುದ್ಧವೋ ಎಂದು ಕಂಡು ಹಿಡಿಯಲು ಸಾಧ್ಯ ಇದೆ ಎಂದು ಅವನಿಗೆ ತಟ್ಟನೆ ಗೊತ್ತಾಯ್ತು.

ಆಗ ಉಂಟಾದ ಎಕ್ಸೈಟ್‌ಮೆಂಟ್‌ನ ಭಾವನೆಗಳನ್ನು ಅವನಿಗೆ ತಡೆದುಕೊಳ್ಳಲು ಸಾಧ್ಯವಾಗದೆ ರಸ್ತೆಗಳಲ್ಲಿ ‘ಯುರೇಕಾ ಯುರೇಕಾ’ ಎಂದು ಕಿರುಚುತ್ತಾ ಓಡುತ್ತಾನೆ! ಬಟ್ಟೆಗಳನ್ನು ಹಾಕುವುದು ಅವನಿಗೆ ಮರೆತು ಹೋಗುತ್ತದೆ!

ಯುರೇಕಾ ಎಂದರೆ ನಾನು ಕಂಡುಹಿಡಿದೆ ಎಂದರ್ಥ ಇತ್ತು. ಈ ಸಂಶೋಧನೆಯಿಂದ ಆರ್ಕಿಮಿಡೀಸ್ ವಿಶ್ವಮಟ್ಟದ ಕೀರ್ತಿಯನ್ನು ಪಡೆದುಕೊಂಡನು.

ಕಾರಣ ಮೂರು – ಆತನ ದುರಂತ ಅಂತ್ಯ!

ಮುಂದೆ ಸಿರಾಕ್ಯುಸ್ ಸಾಮ್ರಾಜ್ಯದ ಮೇಲೆ ರೋಮನ್ನರ ಆಕ್ರಮಣವು ಆಯಿತು. ಆಗ ಯುದ್ಧವನ್ನು ಗೆಲ್ಲಲು ಆರ್ಕಿಮಿಡೀಸನು ದೊರೆ ಹಿರಾನಗೆ ಸಹಾಯ ಮಾಡಿದ್ದ. ಆದರೂ ರೋಮ್ ಸೈನ್ಯದ ಕೈಯು ಮೇಲಾಯಿತು. ಆಗ ರೋಮ್ ಸೇನೆಯ ದಳಪತಿ ಆಗಿದ್ದ ಮಾರ್ಸೇಲೆಸ್ ತನ್ನ ಒಬ್ಬ ಸೈನಿಕನಿಗೆ ಆರ್ಕಿಮಿಡೀಸನನ್ನು ಗೌರವದಿಂದಲೆ ಕರೆತರಲು ಆಜ್ಞೆ ಮಾಡುತ್ತಾನೆ. ಆತನನ್ನು ಯಾವುದೇ ಕಾರಣಕ್ಕೆ ಬಂಧಿಸದೆ ಗೌರವದಿಂದ ಕರೆತರಬೇಕು ಎಂದು ದಳಪತಿ ಆಜ್ಞೆ ಮಾಡಿದ್ದ.

ಆ ಸೈನಿಕನು ಆರ್ಕಿಮಿಡೀಸ್ ಇದ್ದಲ್ಲಿಗೆ ಬಂದಾಗ ಆತ ನೆಲದ ಮೇಲೆ ಯಾವುದೋ ರೇಖಾಗಣಿತದ ಚಿತ್ರವನ್ನು ಬಿಡಿಸುತ್ತಿದ್ದ. ಆತನಿಗೆ ರೋಮನ್ನರು ಯುದ್ದವನ್ನು ಗೆದ್ದ ವಿಷಯ ಗೊತ್ತಿರಲಿಲ್ಲ. ಆಗ ಆ ಸೈನಿಕನು ಈಗಲೇ ಬರಲು ಮಾರ್ಸೆಲ್ ಹೇಳಿದ್ದಾನೆ ಎಂದು ಎರಡು ಬಾರಿ ಗಟ್ಟಿಯಾಗಿ ಹೇಳಿದ.

ಮಹಾ ವಿಜ್ಞಾನಿಯ ದುರಂತ ಸಾವು!

ಆರ್ಕಿಮಿಡೀಸ್ ತಲೆ ಎತ್ತದೆ ಈ ಆಕೃತಿಯು ಪೂರ್ತಿ ಆಗದೆ ಎಲ್ಲಿಗೂ ಬರಲಾರೆ ಎಂದು ಗಟ್ಟಿಯಾಗಿ ಹೇಳಿದ. ಸೈನಿಕನಿಗೆ ತುಂಬಾ ಸಿಟ್ಟು ಬಂತು. ಆತನಿಗೆ ಆರ್ಕಿಮಿಡೀಸ್ ಯಾರು? ಆತನ ಸಾಧನೆ ಏನು ಎಂಬುದು ಗೊತ್ತೇ ಇರಲಿಲ್ಲ. ಆತ ಸಿಟ್ಟಿನಿಂದ ಕತ್ತಿ ತೆಗೆದು ಆರ್ಕಿಮಿಡೀಸನನ್ನು ಕೊಂದೇ ಬಿಟ್ಟನು!

73 ವರ್ಷ ಬದುಕಿದ್ದ ಆರ್ಕಿಮಿಡೀಸನ ಸಾಧನೆಯನ್ನು ಉಲ್ಲೇಖ ಮಾಡದೆ ಯಾವ ಪ್ರೌಢಶಾಲೆಯ ವಿದ್ಯಾರ್ಥಿ ಕೂಡ ಮುಂದೆ ಹೋಗಲು ಸಾಧ್ಯವೇ ಇಲ್ಲ!

ಇದನ್ನೂ ಓದಿ: Amitabh Bachchan: ರಾಜೇಂದ್ರ ಭಟ್‌ ಅಂಕಣ: ಬಚ್ಚನ್ ಎಂಬ ಮಹಾನಟನ ಬದ್ಧತೆ, ಪ್ರಯೋಗಶೀಲತೆಗಳ ಸಾಕ್ಷಿ!