ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ದುಬೈನಲ್ಲಿ ಎಲ್ಲರೂ ಶ್ರೀಮಂತರೇ ಅಲ್ವಾ? ಅಲ್ಲಿಯ ಶೇಖ್‌ಗಳ ಮನೆಯ ಹಿತ್ತಲಿನಲ್ಲಿ ಪೆಟ್ರೋಲ್ ಬಾವಿಗಳಂತೆ ಹೌದಾ? ಅಲ್ಲಿ ಬಾವಿ ತೋಡಿದರೆ ನೀರಿನ ಬದಲು ಪೆಟ್ರೋಲ್ ಬರುತ್ತದಂತೆ, ನಿಜವಾ?’ ಇವು ನಾನು ಪ್ರತಿಸಲ ಊರಿಗೆ ಬಂದಾಗಲೂ ಉತ್ತರಿಸಬೇಕಾಗಿದ್ದ ಪ್ರಶ್ನೆಗಳು.
ಇಂದಿನ ಮೊಬೈಲ್ ಯುಗದಲ್ಲಿ ಸಾಕಷ್ಟು ಮಾಹಿತಿ ಅಂಗೈಯ ಲಭ್ಯವಿರುವುದರಿಂದ ಈ ರೀತಿಯ ಪ್ರಶ್ನೆಗಳು ಕಡಿಮೆಯಾಗುತ್ತಿವೆ. ಆದರೂ ಕೆಲವು ಹಳೆಯ ತಲೆಗಳು ಇಂದಿಗೂ ಈ ಪ್ರಶ್ನೆ ಕೇಳುವುದಿದೆ. ಕೆಲವರ ಲೆಕ್ಕದಲ್ಲಿ ಎಲ್ಲಾ ಕೊಲ್ಲಿ ರಾಷ್ಟ್ರಗಳೂ ದುಬೈ, ಎಲ್ಲಾ ಅರಬ್ ಪ್ರಜೆಗಳೂ ಶ್ರೀಮಂತರು. ತಪ್ಪೇನಿಲ್ಲ, ಎಲ್ಲರಿಗೂ ಪ್ರಪಂಚದ ಎ ವಿಷಯಗಳೂ ತಿಳಿದಿರಬೇಕೆಂದೇನೂ ಇಲ್ಲ.
ಆದರೆ ವಾಸ್ತವಿಕತೆ ಹಾಗಿಲ್ಲ, ದುಬೈ ಎನ್ನುವುದು ಯುಎಇ ರಾಷ್ಟ್ರದ ಆಧುನಿಕತೆಯನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಅಭಿವೃದ್ಧಿ ಹೊಂದಿದ ಒಂದು ನಗರವೇ ಹೊರತು ಪ್ರತ್ಯೇಕ ರಾಷ್ಟ್ರವೂ ಅಲ್ಲ, ರಾಜಧಾನಿಯೂ ಅಲ್ಲ. ಯುಎಇ, ಸೌದಿ ಅರೇಬಿಯಾ, ಖತಾರ್, ಒಮಾನ್, ಕುವೈತ್ ಮತ್ತು ಬಹ್ರೈನ್, ಈ ಆರು ಕೊಲ್ಲಿ ರಾಷ್ಟ್ರಗಳ ಒಕ್ಕೂಟದ (ಈ ಆರು ರಾಷ್ಟ್ರಗಳನ್ನು ಗಲ ಕೊ ಆಪರೇಷನ್ ಕೌನ್ಸಿಲ್ ಅಥವಾ ಜಿಸಿಸಿ ದೇಶಗಳು ಎಂದು ಕರೆಯುವುದುಂಟು) ಎಲ್ಲಾ ನಗರಗಳ ಪೈಕಿ ತನ್ನ ವೈಭವ ದಿಂದ, ವೈಭೋಗದಿಂದ ಜಗತ್ತನ್ನು ಆಕರ್ಷಿಸಿದ್ದು ದುಬೈ.
ಉಳಿದವುಗಳಿಗಿಂತ ಮೊದಲೇ ಎಲ್ಲಾ ಹೊಸತನವನ್ನೂ ಒಗ್ಗೂಡಿಸಿಕೊಳ್ಳುವುದರಿಂದ ದುಬೈ ಎಲ್ಲರಿಗೂ ಅಚ್ಚುಮೆಚ್ಚು. ಈಗ ಪ್ರವಾಸೋದ್ಯಮ, ವಾಣಿಜ್ಯ ಇತ್ಯಾದಿಗಳೆಡೆಗೆ ಕೈ ಚಾಚಿದರೂ, ದುಬೈನ ಅಭಿವೃದ್ಧಿಗೆ ಮೂಲ ಕಾರಣ ದೇಶದ ತೈಲೋತ್ಪನ್ನ.
ಕೇವಲ ದುಬೈ ಮಾತ್ರವಲ್ಲ, ಈ ಪ್ರಾಂತ್ಯದ ಎಲ್ಲಾ ರಾಷ್ಟ್ರಗಳೂ ತೈಲ ಉತ್ಪನ್ನದಿಂದಲೇ ಶ್ರೀಮಂತವಾದವು ಎನ್ನುವುದು ಸಾರ್ವ ಕಾಲಿಕ ಸತ್ಯ.
ಇನ್ನೊಂದು ವಿಷಯ, ಯಾವದೇಶದ ಆದರೂ ತೈಲ ಸರಕಾರದ ಸ್ವತ್ತೇ ವಿನಃ ವೈಯಕ್ತಿಕ ಸ್ವತ್ತಲ್ಲ. ಅದನ್ನು ಭೂಮಿಯಿಂದ
ಹೊರತೆಗೆಯುವುದೆಂದರೆ ಮಕ್ಕಳಾಟಿಕೆಯಲ್ಲ, ನೀರಿನ ಬಾವಿ ತೋಡಿದಷ್ಟು ಸುಲಭವೂ ಅಲ್ಲ. ಕೆಲವು ಗಂಟೆ ಕಚ್ಚಾ ತೈಲದ ವಾಸನೆ ಮೂಗಿಗೆ ಬಡಿಯುತ್ತಿದ್ದರೆ ಮುಂದಿನ ಜನ್ಮಕ್ಕೆ ಆಹ್ವಾನ ನೀಡಿದಂತೆಯೇ. ಈ ಕಾರ್ಯದಲ್ಲಿ ಬಾವಿ ಕೊರೆಯು ವುದರಿಂದ ಹಿಡಿದು, ಸಂಸ್ಕರಿಸುವ ಸ್ಥಾವರಕ್ಕೆ ಕೊಂಡು ಹೋಗುವವರೆಗೆ ವಿಧವಿಧದ ಯಂತ್ರಗಳು, ಉಪಕರಣಗಳು ಬೇಕು. ಎಲ್ಲ
ಇದ್ದರೂ ಅದು ಅದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ.
ಅದಕ್ಕೊಂದು ಸಂಪೂರ್ಣ ವ್ಯವಸ್ಥೆ ಇರಬೇಕು. ನೂರು ಇನ್ನೂರು ಮೀಟರ್‌ನಿಂದ ಹಿಡಿದು, ಹತ್ತು ಹನ್ನೆರಡು ಕಿಲೋ ಮೀಟರ್ ವರೆಗೆ ಭೂಮಿಯಲ್ಲಿ ಪುಟ್ಟ ರಂಧ್ರ ಕೊರೆಯುವುದೆಂದರೆ ಸಣ್ಣ ಮಾತಾ? ತೈಲದ ಬಾವಿ ಇಷ್ಟು ಆಳವಾಗಿರುತ್ತದಾ ಎಂದರೆ, ಖಂಡಿತ ವಾಗಿಯೂ ಹೌದು. ಇದರಿಂದ ಬರುವ ಉತ್ಪನ್ನವೂ ಅಮೂಲ್ಯವಾದದ್ದರಿಂದ ಇದೆಲ್ಲ ಯಾವ ಲೆಕ್ಕವೂ ಅಲ್ಲ. ಅದು ಅತಿ ಲಾಭದಾಯಕ, ಜತೆಗೆ ಅವಶ್ಯಕ ಉದ್ಯಮವಾದ್ದರಿಂದ ಸರಕಾರ ತೈಲ ಉತ್ಪನ್ನದ ಕಾರ್ಯವನ್ನು ಕೆಲವು ಸಂಸ್ಥೆಗಳೊಂದಿಗೆ ಪಾಲುಗಾರರಾಗಿ ಭಾಗವಹಿಸುವುದೋ, ಗುತ್ತಿಗೆ ನೀಡುವುದೋ ಇದೆ.
ಹೇಗೆ ಯಾರ ಮನೆಯ ಹಿತ್ತಲಲ್ಲಿ ಹೂತಿಟ್ಟ ಚಿನ್ನ ಸಿಕ್ಕರೂ ಅದು ಸರಕಾರದ ಸ್ವತ್ತೋ, ತೈಲವೂ ಹಾಗೆಯೇ. ಅಂದಹಾಗೆ, ತೈಲ ಯಾವ ಚಿನ್ನಕ್ಕೂ ಕಮ್ಮಿಯಿಲ್ಲ ಬಿಡಿ. ಅದೂ ಭೂಮಿಯ ಅಡಿಯಲ್ಲಿರುವ ಚಿನ್ನವೇ. ಕ್ರೂಡ್ ಆಯಿಲ್ ಅಥವಾ ಕಚ್ಚಾ ತೈಲ ಕೊಲ್ಲಿ ರಾಷ್ಟ್ರಗಳ ಜೀವಾಳ. ಎಂಟು ದಶಕದ ಹಿಂದಷ್ಟೇ ತೀರಾ ಬಡತನದಲ್ಲಿದ್ದ ಈ ರಾಷ್ಟ್ರಗಳನ್ನೆಲ್ಲ ಕೈ ಹಿಡಿದು ಮೇಲೆತ್ತಿದ್ದೇ ತೈಲ. ತೈಲವೊಂದು ಇಲ್ಲದಿದ್ದರೆ ಈ ರಾಷ್ಟ್ರಗಳ ಪಾಡು ಇಂದಿಗೂ ಊಹಿಸಿಕೊಳ್ಳುವುದು ಕಷ್ಟ.
ಈ ರಾಷ್ಟ್ರಗಳ ಭೂಗರ್ಭದಲ್ಲಿ ಅಡಗಿದ ಕೃಷ್ಣ ಸುಂದರಿಯೇ ಈ ದೇಶಗಳಿಗೆ ಜೀವ ಸೆಲೆ, ಪ್ರಾಣವಾಯು. ಜಗತ್ತಿನ ಭೂಪಟದಲ್ಲಿ ಇಂದು ಕೊಲ್ಲಿ ರಾಷ್ಟ್ರಗಳು ಗುರುತಿಸಲ್ಪಡುವುದು ಇದೇ ತೈಲ ನಿಧಿಯಿಂದ. ಪ್ರಪಂಚದಲ್ಲಿ ಇಂದು ಈ ರಾಷ್ಟ್ರಗಳು ತಲೆ ಎತ್ತಿ ನಿಲ್ಲುವಂತಾದದ್ದು, ಇತರ ರಾಷ್ಟ್ರಗಳಂತೆ ಅಭಿವೃದ್ಧಿಯ ಪಥದಲ್ಲಿ ನಡೆಯುವಂತಾದದ್ದು ಇದೇ ತೈಲೋತ್ಪನ್ನದಿಂದ. ಇಂದಿಗೂ ಈ ದೇಶಗಳಿಗೆ ತೈಲವಿದ್ದರೆ ಎ, ಅದಿಲ್ಲವಾದರೆ ಏನೂ ಇಲ್ಲ. ಕೊಲ್ಲಿ ರಾಷ್ಟ್ರಗಳ ಮಟ್ಟಿಗೆ ಕಪ್ಪು ಬಣ್ಣದ ಕಚ್ಚಾ ತೈಲವೇ
ಬಂಗಾರ, ಅದನ್ನು ತುಂಬಿಸುವ ಬ್ಯಾರೆಲ್‌ಗಳೇ ಭರಣ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಮುವತ್ತೈದು ಹಲಾಲ (ಭಾರತದಲ್ಲಿ ರುಪಾಯಿ, ಪೈಸೆ ಇದ್ದಂತೆ ಸೌದಿ ಅರೇಬಿಯಾದಲ್ಲಿ ರಿಯಾಲ, ಹಲಾಲ) ಇತ್ತು. ಅಂದರೆ ಆ ಸಮಯದಲ್ಲಿ ಭಾರತದ ನಾಲ್ಕು ರುಪಾಯಿ ಅಂದುಕೊಳ್ಳಿ. ಡಿಸೆಲ್ ಬೆಲೆ ಲೀಟರ್ ಒಂದಕ್ಕೆ ಇಪ್ಪತ್ತೈತೈದು ಹಲಾಲ, ಅಬ್ಬಬ್ಬಾ ಅಂದರೆ ಮೂರು ರುಪಾಯಿಗಳು. ಆ ದಿನಗಳಲ್ಲಿ ನಾನು ತೈಲದ ಬಾವಿ ಕೊರೆಯುವ ಕಂಪನಿಗಳಿಗೆ ಬೇಕಾಗುವ ಸೌಕರ್ಯ ಒದಗಿಸಿ ಕೊಡುವ
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ದಿನಗಳಲ್ಲಿ ಮೊಬೈಲ್ ಬಿಡಿ, ಸಾಧಾರಣ ದೂರವಾಣಿ ಕರೆ ಮಾಡುವುದಿದ್ದರೂ ಐವತ್ತು ಅರವತ್ತು ಕಿಲೋ ಮೀಟರ್ ದೂರ ಬರಬೇಕಾಗುತ್ತಿತ್ತು.
ನಮ್ಮ ಕಂಪನಿಯ ಮುಖ್ಯ ಕಚೇರಿಗೂ ತೈಲದ ಬಾವಿ ಗಳಿರುವ ಸ್ಥಳಕ್ಕೂ ನೂರಾರು ಕಿಲೋಮೀಟರ್ ಅಂತರವಾದರೂ ಪ್ರತಿನಿತ್ಯ ಕೆಲಸ ನಡೆಯುವ ಸ್ಥಳಕ್ಕೆ ಭೇಟಿ ನೀಡಬೇಕಾಗುತ್ತಿತ್ತು. ತೈಲದ ಬಾವಿಗಳು ನಗರ ಪ್ರದೇಶದಿಂದ ಸಾಕಷ್ಟು ದೂರ ದಲ್ಲಿರುತ್ತಿದ್ದವಾದ್ದರಿಂದ ಕೆಲವೊಮ್ಮೆ ದಿನಕ್ಕೆ ಏಳು ಎಂಟು ನೂರು ಕಿಲೋಮೀಟರ್ ವಾಹನ ಓಡಿಸಬೇಕಾಗುತ್ತಿತ್ತು. ಎಂಟು ಸಿಲಿಂಡರ್ ಇಂಜಿನ್‌ನ ಬಕಾಸುರ ವಂಶದ ವಾಹನಗಳಿಗೆ ಪ್ರತಿನಿತ್ಯ ಎರಡೆರಡು ಬಾರಿ ಪೆಟ್ರೋಲ್ ತುಂಬಿಸ ಬೇಕಾಗುತ್ತಿತ್ತು. ಈ ವಿಷಯವನ್ನು ರಜೆಗೆ ಬಂದಾಗ ಮಿತ್ರರಲ್ಲಿ, ಸಂಬಂಧಿಗಳಲ್ಲಿ ಹೇಳಿದರೆ, ‘ಹಳಿಯಿಲ್ಲದ ರೈಲು ಬಿಡುತ್ತಾನೆ’ ಎಂದವರೇ ಹೆಚ್ಚು.
ಈಗ ಕೊಲ್ಲಿ ರಾಷ್ಟ್ರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಒಂದಕ್ಕೆ ಸುಮಾರು ಇಪ್ಪತ್ತೆಂಟು ರುಪಾಯಿಗಳು. ಒಂದೆರಡು ರುಪಾಯಿ ಆಚೆ, ಈಚೆ. ಕಳೆದ ಇಪ್ಪತ್ತೈದು ವರ್ಷದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲೂ ತೈಲದ ಬೆಲೆ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚಾಗಿದೆ.
ವಿಶ್ವದಾದ್ಯಂತ ತೈಲೋತ್ಪನ್ನ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಅಮೆರಿಕ. ಸೌದಿ ಅರೇಬಿಯಾ ಮತ್ತು ರಷ್ಯಾ ಕ್ರಮೇಣ ಎರಡು ಮತ್ತು ಮೂರನೆಯ ಸ್ಥಾನದಲ್ಲಿವೆ. ನಾಲ್ಕು ಮತ್ತು ಐದನೆಯ ಸ್ಥಾನ ಇರಾಕ್ ಮತ್ತು ಇರಾನ್‌ಗೆ ಸಲ್ಲುತ್ತದೆ.
ಅಮೆರಿಕ ಪ್ರತಿನಿತ್ಯ ಒಂದು ಕೋಟಿ ತೊಂಬತ್ತು ಲಕ್ಷ ಬ್ಯಾರೆಲ್ (ತೈಲದ ಒಂದು ಬ್ಯಾರೆಲ್ ಎಂದರೆ ನೂರ ಐವತ್ತೊಂಬತ್ತು ಲೀಟರ್) ತೈಲ ಉತ್ಪಾದಿಸುತ್ತದೆ. ಅಂದರೆ ವಿಶ್ವದ ಶೇಕಡಾ ಹತ್ತೊಂಬತ್ತರಷ್ಟನ್ನು ಅಮೆರಿಕ ಒಂದೇ ಉತ್ಪಾದಿಸುತ್ತದೆ. ಸೌದಿ ಅರೇಬಿಯಾ ಪ್ರತಿದಿನ ಒಂದು ಕೋಟಿ ಇಪ್ಪತ್ತೈದು ಲಕ್ಷ (ಶೇಕಡಾ ಹದಿಮೂರು) ಮತ್ತು ರಷ್ಯಾ ಒಂದು ಕೋಟಿ ಹತ್ತು ಲಕ್ಷ ಬ್ಯಾರೆಲ್ (ಶೇಕಡಾ ಹನ್ನೆರಡು) ತೈಲ ಉತ್ಪಾದಿಸುತ್ತವೆ.
ಹಾಗೆಯೇ ಕುವೈತ್ ಒಂಬತ್ತು, ಖತಾರ್ ಹದಿನೇಳು ಮತ್ತು ಒಮಾನ್ ಹತ್ತೊಂಬತ್ತನೆ ಯ ಸ್ಥಾನದಲ್ಲಿವೆ. ಭಾರತ ಪ್ರತಿನಿತ್ಯ ಏಳು ಲಕ್ಷ ಬ್ಯಾರೆಲ್ ಉತ್ಪಾದಿಸುತ್ತಿದ್ದು, ಈ ಪಟ್ಟಿಯಲ್ಲಿ ಇಪ್ಪತ್ತೈದನೆಯ ಸ್ಥಾನದಲ್ಲಿದೆ. ಜಿಸಿಸಿ ರಾಷ್ಟ್ರಗಳೊಂದಿಗೆ ಇರಾನ್, ಇರಾಕ್ ಸೇರಿಸಿದರೆ ವಿಶ್ವದಾದ್ಯಂತ ಇರುವ ತೈಲದ ಬೇಡಿಕೆಯ ಅರ್ಧದಷ್ಟನ್ನು ಪೂರೈಸುತ್ತವೆ. ತೈಲವನ್ನು ಬಳಸುವ ರಾಷ್ಟ್ರಗಳಲ್ಲಿಯೂ ದೊಡ್ದಣ್ಣನೇ ಮುಂದೆ. ಅಮೆರಿಕ ಅತಿ ಹೆಚ್ಚು ತೈಲ ಉತ್ಪಾದಿಸಿದರೂ ಬಹುತೇಕ ತೈಲವನ್ನು ದೇಶದಲ್ಲಿಯೇ ಉಪಯೋಗಿಸು ತ್ತದೆ. ಅದೇ ಸೌದಿ ಅರೇಬಿಯಾ ಪ್ರತಿನಿತ್ಯ ಉಪಯೋಗಿಸುವುದು ಮೂವತ್ತೊಂದು ಲಕ್ಷ ಬ್ಯಾರೆಲ್ ಮಾತ್ರ.
ಅಂದರೆ ತಾನು ಉತ್ಪಾದಿಸಿದ ತೈಲದ ಇಪ್ಪತ್ತೈದು ಪ್ರತಿಶತ ಮಾತ್ರ. ಉಳಿದದ್ದೆಲ್ಲ ರಫ್ತಿನ ಬಾಬತ್ತಿಗೆ. ನಿತ್ಯ ಒಂದು ಕೋಟಿ ನಲವತ್ತು ಲಕ್ಷ ಬ್ಯಾರೆಲ್ ತೈಲ ಬಳಸುವ ಚೀನಾ ಎರಡನೆಯ ಸ್ಥಾನದಲ್ಲಿದ್ದರೆ ನಲವತ್ತೇಳು ಲಕ್ಷ ಬ್ಯಾರೆಲ್ ತೈಲ ಬಳಸುವ ಭಾರತ ಮೂರನೆಯ ಸ್ಥಾನದಲ್ಲಿದೆ. ಅಂದರೆ ಭಾರತ ತಾನು ಪ್ರತಿನಿತ್ಯ ಉತ್ಪಾದಿಸುವುದಕ್ಕಿಂತ ನಲವತ್ತು ಲಕ್ಷ ಬ್ಯಾರೆಲ್ ಹೆಚ್ಚಿಗೆ ಬಳಸುತ್ತಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನ ರಷ್ಯಾ ಮತ್ತು ಜಪಾನ್ ದೇಶಕ್ಕೆ. ಸೌದಿ ಅರೇಬಿಯಾ ಅದರ ನಂತರದ ಸ್ಥಾನ ದಲ್ಲಿದೆ.
ಎಲ್ಲಾ ಕೊಲ್ಲಿ ರಾಷ್ಟ್ರಗಳಲ್ಲೂ ಬಳಕೆಗಿಂತ ಹೆಚ್ಚಿನ ಉತ್ಪಾದನೆಯಿದ್ದು, ರಫ್ತು ಮಾಡುವುದರಿಂದಲೇ ಈ ದೇಶಗಳೆಲ್ಲ ಶ್ರೀಮಂತ ವಾಗಿರುವುದು ಎಂದು ಪ್ರತ್ಯೇಕ ಹೇಳಬೇಕಿಲ್ಲ ತಾನೆ? ಇನ್ನೊಂದು ವಿಷಯ ಗೊತ್ತಾ? ಇದೇ ಲೆಕ್ಕದಲ್ಲಿ ಸೌದಿ ಅರೇಬಿಯಾ ಮುಂದಿನ ಇನ್ನೂರ ಇಪ್ಪತ್ತು ವರ್ಷಗಳವರೆಗೆ ತೈಲ ಉತ್ಪಾದಿಸಬಹುದಂತೆ! ಅಷ್ಟು ದೊಡ್ದ ತೈಲ ಸಮುದ್ರವೇ ಸೌದಿ
ಅರೇಬಿಯಾದ ಭೂಗರ್ಭದಲ್ಲಿದೆ.
ಈ ತೈಲ ಉತ್ಪನ್ನಕ್ಕೆ ತಗಲುವ ವೆಚ್ಚ ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾಗಿರುತ್ತದೆ. ವಿಶ್ವದ ಮೂರು ಪ್ರಮುಖ ತೈಲ ಉತ್ಪಾದಿಸುವ ರಾಷ್ಟ್ರಗಳಾದ ಅಮೆರಿಕ, ಸೌದಿ ಅರೇಬಿಯಾ ಮತ್ತು ರಷ್ಯಾದಲ್ಲಿ ಆಯಾ ಸ್ಥಳಕ್ಕೆ ತಕ್ಕಂತೆ ಉತ್ಪನ್ನದ ವೆಚ್ಚವೂ ವಿಭಿನ್ನವಾಗಿದೆ. ಜಾಗತಿಕ ಲೆಕ್ಕಾಚಾರದ ಪ್ರಕಾರ, ಸಾಮಾನ್ಯವಾಗಿ ಹೊಸ ತೈಲ ನಿಕ್ಷೇಪ ದೊರೆತ ನಂತರ ಬಾವಿ ಕೊರೆದು ಕಚ್ಚಾ ತೈಲವನ್ನು ಸಂಸ್ಕರಣಾ ಕೇಂದ್ರಕ್ಕೆ ತರುವಲ್ಲಿವರೆಗಿನ ವೆಚ್ಚ (ಬ್ರೇಕ್ ಈವನ್) ಬ್ಯಾರೆಲ್ ಒಂದಕ್ಕೆ ಸರಾಸರಿ ಐವತ್ತು ಡಾಲರ್‌ಗಳು. ಅದರ ಮೇಲೆ ಎಷ್ಟೇ ಬಂದರೂ ಅದು ಲಾಭವೇ.
ಅದೇ ಹಳೆಯ ಬಾವಿಯಾದರೆ ಈ ಮೊತ್ತ ಮೂವತ್ತು ಡಾಲರ್ ಗಿಂತ ಕೆಳಗೆ ಇಳಿಯುತ್ತದೆ. ಕೊಲ್ಲಿ ದೇಶದಲ್ಲಿ ಇದು ಇನ್ನೂ ಕಡಿಮೆ. ಆದರೆ ಸೌದಿ ಅರೇಬಿಯಾ ದಂಥ ದೇಶಗಳಿಗೆ ಪ್ರಮುಖ ಉತ್ಪನ್ನವೇ ತೈಲವಾದದ್ದರಿಂದ, ದೇಶ ನಡೆಸಲು ಎಂಬತ್ತು ಡಾಲರ್‌ಗೆ ಒಂದು ಬ್ಯಾರೆಲ್ ಮಾರಬೇಕಾಗುತ್ತದೆ. ಹಾಗಂತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಅದಕ್ಕಿಂತ ಕಮ್ಮಿಯಾದರೆ ಮಾರಾಟ ಮಾಡುವುದಿಲ್ಲ ಎಂದಲ್ಲ. ಆಗ ದೇಶಕ್ಕೆ ಬೇಕಾದ ಬೊಕ್ಕಸ ತುಂಬಿಸಲು ಕಷ್ಟವಾಗುತ್ತದೆ, ಪ್ರಗತಿ
ಕುಂಠಿತವಾಗುತ್ತದೆ.
ಕೆಲವೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ತಮ್ಮ ದೇಶದಲ್ಲಿ ತೈಲ ಉತ್ಪಾದಿಸಲು ತಗುಲುವ ವೆಚ್ಚಕ್ಕಿಂತ
ಕಮ್ಮಿಯಾಗುವುದೂ ಇದೆ. ಆ ಸಂದರ್ಭದಲ್ಲಿ ಅಂತಹ ದೇಶಗಳು ತಮ್ಮ ತೈಲ ಉತ್ಪಾದನೆ ನಿಲ್ಲಿಸಿ ಹೊರಗಿನಿಂದ ಆಮದು ಮಾಡಿಕೊಳ್ಳುವುದೂ ಇದೆ. ಈ ಕಚ್ಚಾ ತೈಲದಲ್ಲೂ ಹಲವು ಬಗೆಯಿದೆ. ಕಚ್ಚಾ ತೈಲದ ಸಾಂದ್ರತೆ, ಸ್ಥಿರತೆ, ಸ್ನಿಗ್ದತೆಯಲ್ಲಿ ವ್ಯತ್ಯಾಸ
ವಿರುತ್ತದೆ. ಅದರಲ್ಲಿ ಕೂಡಿರುವ ಖನಿಜಾಂಶಗಳು, ಟ್ರೋಲಿಯಂ ಉತ್ಪನ್ನಗಳು ಮತ್ತು ವಿಷಕಾರಿ ಅಂಶಗಳೂ ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ. ಅದಕ್ಕೆ ತಕ್ಕಂತೆ ಬಣ್ಣದಲ್ಲಿಯೂ ಸ್ವಲ್ಪ ಭಿನ್ನವಾಗಿರುತ್ತದೆ.
ಕಡು ಕಪ್ಪು, ಕಂದು ಕಪ್ಪು, ತಿಳಿ ಕಪ್ಪು (ಕಪ್ಪು ಬಣ್ಣದಲ್ಲಿಯೇ ಸ್ವಲ್ಪ ಬಿಳಿಯದು ಅಂದಂತೆ!) ಇತ್ಯಾದಿ. ಅದಕ್ಕೆ ತಕ್ಕಂತೆ ಬೆಲೆ ಯಲ್ಲಿಯೂ ವ್ಯತ್ಯಾಸ ವಿರುತ್ತದೆ. ಇದರಲ್ಲಿ ಪ್ರಮುಖವಾದ ನಾಲ್ಕು ಬಗೆಯಿದೆ. ಮೊದಲನೆಯದು ತೀರಾ ಲಘು ತೈಲ. ಜೆಟ್ ಫ್ಯೂಯೆಲ್ ಅಥವಾ ವಿಮಾನಗಳಲ್ಲಿ ಬಳಸುವ ಇಂಧನ, ಪೆಟ್ರೋಲಿಯಂ ಸ್ಪಿರಿಟ್, ನಾಫ್ತಾ, ಈಥರ್, ಸೀಮೆ ಎಣ್ಣೆ ಮೊದಲಾದ ವನ್ನು ಈ ವರ್ಗದ ಕಚ್ಚಾ ತೈಲದಿಂದ ಉತ್ಪಾದಿಸುತ್ತಾರೆ.
ಎರಡನೆಯದು ಲಘು ತೈಲ, ಮೂರನೆಯದು ಮಧ್ಯಮ ಕ್ರಮಾಂಕದ ತೈಲ. ಈ ಎರಡು ಕ್ರಮಾಂಕದ ತೈಲದಿಂದ ಒಂದು ಮತ್ತು ಎರಡನೆ ಶ್ರೇಣಿಯ ಪೆಟ್ರೋಲ್ ಹಾಗೂ ಡಿಸೆಲ್ ಉತ್ಪಾದಿಸುತ್ತಾರೆ. ನಾವು ವಾಹನಗಳಿಗೆ ಬಳಸುವ ಇಂಧನ ಈ ವರ್ಗಕ್ಕೆ ಸೇರಿದ್ದು. ಮೂರನೆಯ ಕ್ರಮಾಂಕದ ತೈಲದಲ್ಲಿ ವಿಷಕಾರಿ ಅಂಶಗಳು ಹೆಚ್ಚು. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತದೆ. ಇನ್ನು
ನಾಲ್ಕನೆಯದು, ಸಮುದ್ರದಲ್ಲಿ ಚಲಿಸುವ ನೌಕೆ, ನೀರಿನಲ್ಲಿ ಉಪಯೋಗಿಸುವ ಉಪಕರಣಗಳಿಗೆ ಬೇಕಾಗುವ ಇಂಧನ ತಯಾರಿ ಸುವ ಭಾರಿ ಇಂಧನ ತೈಲ. ಇದರಲ್ಲಿಯೂ ವಿಷಕಾರಿ ಅಂಶಗಳು ಹೆಚ್ಚೇ.
ಈ ತೈಲದ ಬಗೆಗಳಲ್ಲಿ ಮತ್ತೆ ಹಲವು ಬಗೆಗಳಿವೆ. ನಮ್ಮ ಅಕ್ಕಿಯಲ್ಲಿ ಹೇಗೆ ಕೊಚ್ಚಿಗೆ, ಬೆಣತಿಗೆ, ಬ್ರೌನ್ ರೌಸ್ ಇತ್ಯಾದಿ, ಅದರಲ್ಲಿ ಮತ್ತೆ ಕೆಂಪು ಕೊಚ್ಚಿಗೆ, ಬಿಳಿ ಕೊಚ್ಚಿಗೆ ಅಥವಾ ಬೆಣತಿಗೆಯಲ್ಲಿ ಬಾಸುಮತಿ, ಸೋನಾ ಮಸೂರಿ, ಆಲೂರು ಸಣ್ಣ, ಮೈಸೂರು ಸಣ್ಣ ಇರುತ್ತದಲ್ಲ ಹಾಗೆಯೇ ಕಚ್ಚಾ ತೈಲದಲ್ಲೂ ಅಲ್ ಶಹೀನ್, ಅಬು ಬುಖೂಷ್, ಅರೇಬಿಯನ್ ಲೈಟ್, ಅರೇಬಿಯನ್ ಹೆವಿ, ಅಲ್ಬಾ, ಕಿರ್ಕುಕ್ ಹೀಗೆ ವಿವಿಧ ಬಗೆಯಿದೆ. ರುಚಿ ಹೇಗಿದೆ ಎನ್ನುವುದನ್ನು ಅದನ್ನುಂಡ ವಾಹನಗಳೇ ಹೇಳಬೇಕು!
ಬಹುತೇಕ ದೇಶಗಳು ಕಚ್ಚಾ ತೈಲವನ್ನೇ ಆಮದು ಮಾಡಿಕೊಳ್ಳುವ ಕಾರಣವೆಂದರೆ ಅದರಲ್ಲಿರುವ ಇತರ ಉತ್ಪನ್ನಗಳು. ಗಂಧಕ, ಸೀಸ, ಪ್ರೊಪೆಲಿನ್, ರಸ್ತೆ ನಿರ್ಮಾಣಕ್ಕೆ ಬಳಸುವ ಡಾಂಬರ್, ಇತ್ಯಾದಿಗಳು ಇದೇ ಕಚ್ಚಾ ತೈಲದ ಮಕ್ಕಳು, ಮರಿಮಕ್ಕಳು. ಇವರಲ್ಲಿ
ದೊಡ್ಡಣ್ಣನ ಸ್ಥಾನ ಮಾತ್ರ ಪೆಟ್ರೋಲ್ ಮತ್ತು ಡಿಸೆಲ್‌ಗೆ. ಕಚ್ಚಾ ತೈಲದಿಂದ ಇಂತಹ ನೂರ ನಲವತ್ತಕ್ಕೂ ಹೆಚ್ಚು ಉಪ ಉತ್ಪನ್ನಗಳು ದೊರಕುತ್ತವೆ.
ಅವುಗಳನ್ನು ದೇಶದ ಪ್ಲಾಸ್ಟಿಕ್, ರಬ್ಬರ್ ಇತ್ಯಾದಿ ಕಾರ್ಖಾನೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಕೊನೆಯದಾಗಿ, ಹೆಚ್ಚಿನ ಭಾರತೀಯ ರಲ್ಲಿರುವ ಪ್ರಶ್ನೆ ಒಂದೇ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಮ್ಮಿ ಇದ್ದರೂ ಭಾರತದಲ್ಲಿ ಪೆಟ್ರೋಲ, ಡಿಸೆಲ್ ಬೆಲೆ ಏಕೆ ಹೆಚ್ಚು ಎನ್ನುವುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಬ್ಯಾರೆಲ್ ಒಂದಕ್ಕೆ ಐವತ್ತು ಡಾಲರ್ ಅಥವಾ ಮೂರು ಸಾವಿರದ ಎಂಟುನೂರು ರುಪಾಯಿ ಅಂದುಕೊಳ್ಳಿ.
ಅಂದರೆ ಲೀಟರ್ ಒಂದಕ್ಕೆ ಸುಮಾರು ಇಪ್ಪತ್ತೈದು ರುಪಾಯಿಗಳು. ಇದು ಕಚ್ಚಾ ತೈಲದ ಬೆಲೆ. ಈಗ ಆ ತೈಲ ಅಲ್ಲಿಂದ ಹೊರಟು ನಮ್ಮ ಕೈ ತಲುಪುವವರೆಗಿನ ಎಲ್ಲಾ ಖರ್ಚನ್ನು ಪಟ್ಟಿಮಾಡಿ. ಅದರ ಪ್ಯಾಕಿಂಗ್ ಮತ್ತು ನಿರ್ವಹಣೆಯ ವೆಚ್ಚ, ಸಾರಿಗೆ ವೆಚ್ಚ ಮತ್ತು ಅದನ್ನು ಹಡಗಿನಲ್ಲಿ ತುಂಬಿಸುವವರೆಗಿನ ಖರ್ಚು ಗಳೆಲ್ಲ ನಾವು ಆಮದು ಮಾಡಿಕೊಳ್ಳುವ ದೇಶವನ್ನು ಬಿಡುವವರೆಗಿನ ಖರ್ಚು ಗಳು. ಅಲ್ಲಿಂದ ಸಮುದ್ರ ಮಾರ್ಗವಾಗಿ ಸಾಗಾಟ, ಬಂದನಂತರದ ನಿರ್ವಹಣೆ, ಸಂಸ್ಕರಣಾ ಸಂಸ್ಥೆಗೆ ಸಾಗಿಸುವವರೆಗಿನ ವೆಚ್ಚ, ಸಂಸ್ಕರಣೆಯ ಖರ್ಚು ಎಲ್ಲವನ್ನೂ ಸೇರಿಸಿ.
ಕಚ್ಚಾ ತೈಲ ಅಥವಾ ಪೆಟ್ರೋಲಿಯಮ್ ಉತ್ಪನ್ನಗಳ ನಿರ್ವಹಣೆ ಮತ್ತು ಸಾಗಾಟ ಇತರ ಉತ್ಪನ್ನಗಳಂತೆ ಅಲ್ಲ ಎನ್ನುವುದು
ನೆನಪಿರಲಿ. ಆದರೂ ಇಷ್ಟು ಖರ್ಚಾಗುತ್ತದಾ ಎಂದರೆ, ಖಂಡಿತ ಇಲ್ಲ. ಆದರೆ, ತೆರಿಗೆ ಚೋರರೇ ತುಂಬಿರುವ ದೇಶದಲ್ಲಿ ಸರಕಾರಕ್ಕೆ ಇರುವ ಆದಾಯದ ಮೂಲಗಳಲ್ಲಿ ಪೆಟ್ರೋಲ, ಡಿಸೆಲ್ ಮೇಲಿನ ತೆರಿಗೆ ಅತ್ಯಂತ ಪ್ರಮುಖವಾದದ್ದು ಎಂಬುದು
ಖಂಡಿತ ಹೌದು.