ಅವಲೋಕನ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ವಿಶ್ವದ ಪರಮೋಚ್ಚ ಸಂಸ್ಥೆ ವಿಶ್ವಶಾಂತಿಗೆ ಭಂಗ ತರುವ ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸಬೇಕು. ಆದರೆ ಇದು ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಮುಗ್ಗರಿಸುತ್ತಿದೆ. ಇದರ ಅಂಗಸಂಸ್ಥೆ ಆರೋಗ್ಯ ಸಂಸ್ಥೆ, ಅದಲ್ಲದೆ ಅಂತಾರಾಷ್ಟ್ರೀಯ ನ್ಯಾಯಾಲಯವೂ ಗೊಂದಲದ ಗೂಡಾಗಿರುವುದು ದುರದೃಷ್ಟ. ವಿಶ್ವರಕ್ಷಣೆ ವಿಶ್ವಸಂಸ್ಥೆಯ ಉದ್ದೇಶ ಎಂಬ ಮಾತು ಅರ್ಥವನ್ನು ಕಳೆದುಕೊಂಡಿರುವುದೇ ರಾಷ್ಟ್ರ ರಾಷ್ಟ್ರಗಳ ಮೇಲಿರುವ ಮೈಮನಸ್ಸಿಗೆ ಮತ್ತು ದುರಂತಗಳಿಗೆ ಕಾರಣವೆಂದರೆ ತಪ್ಪುಂಟೇ?
ವಿಶ್ವದ ಸ್ವಾಸ್ಥ್ಯವನ್ನೇ ಕೆಡಿಸಿದ ಎಪಿಡೆಮಿಕ್ ಎಂದು ಗುರುತಿಸಿಕೊಂಡ ಕೋವಿಡ್ ಮಹಾದುರಂತ ವಿಶ್ವದ ಇತಿಹಾಸವನ್ನೇ
ತೀವ್ರವಾಗಿ ಬದಲಿಸಿದೆ. ಇದೊಂದು ಜಗತ್ತಿನ ಉದ್ದಗಲದಲ್ಲಿ ನಡೆದ ಭಯಾನಕ ದುರ್ಘಟನೆ.
ಇನ್ನೂ ಕೊನೆಗೊಂಡಿಲ್ಲ. ಒಂದೂವರೆ ವರ್ಷ ಪೂರ್ತಿ ಕಳೆದರೂ ಈ ಕೋವಿಡ್-೧೯ರ ಮೂಲ ಯಾವುದು ಎಂಬುದರ ಬಗ್ಗೆ ಇನ್ನೂ ವ್ಯಾಪಕ ಚರ್ಚೆ ನಡೆಯುತ್ತಲೇ ಇದೆ. ಪ್ರಾಮಾಣಿಕ ಅಸಲಿ, ನಂಬಲರ್ಹವಾದ ಸೂಕ್ತ ಉತ್ತರ ಸಿಕ್ಕಿಲ್ಲ. ವಿವೇಚನಾಯುಕ್ತ ಉತ್ತರ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಇದು ಮರುಕಳಿಸಬಹುದು ಮತ್ತು ಇಡೀ ವಿಶ್ವವೇ ಅಪಾರ ಬೆಲೆ ತೆರಬೇಕಾಗ ಬಹುದು.
ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮನುಕುಲದ ಹಿತದೃಷ್ಟಿಯಿಂದ ಪಾರದರ್ಶಕ ತನಿಖೆ ಮತ್ತು ತೀರ್ಮಾನವನ್ನು ನಿರ್ವಹಿಸಲೇಬೇಕು. ವಿಶ್ವ ಆರೋಗ್ಯ ಸಂಸ್ಥೆ ಕರೋನಾ ಮೂಲದ ಬಗ್ಗೆ ತನಿಖೆ ನಡೆಸಿ ವರದಿಯ ಸಾಧ್ಯಾಸಾಧ್ಯತೆಗಳ ಬಗ್ಗೆ
ಹೇಳಿತೇ ವಿನಃ ರೋಗಕಾರಕ ಮೂಲದ ಬಗ್ಗೆ ಖಚಿತವಾಗಿ ಹೇಳಿಲ್ಲ. ತನಿಖಾ ತಂಡವು ಸಾಕ್ಷ್ಯ ಗಳನ್ನು ಕಲೆ ಹಾಕಿಲ್ಲ. ವಿಧಿವತ್ತಾಗಿ ಕಾರ್ಯ ನಿರ್ವಹಿಸದಿರುವುದು ಮತ್ತು ಚೀನಾ ಅಸಹಕಾರವನ್ನು ವ್ಯಕ್ತಪಡಿಸಿರುವ ವಿದ್ಯಾಮಾನಗಳು ಎಲ್ಲರಲ್ಲೂ
ಅನುಮಾನವನ್ನು ಸೃಷ್ಟಿಸಿದೆ.
ಒಂದು ವಾದದ ಪ್ರಕಾರ ಕರೋನಾ ಸೋಂಕು ವುಹಾನ್ ಹಸಿಮಾಂಸ ಮಾರುಕಟ್ಟೆಯಿಂದ ಕಾಣಿಸಿಕೊಂಡಿತು. ಇನ್ನೊಂದು ವಾದದ ಪ್ರಕಾರ ಜೈವಿಕ ಅಸದ ಮೂಲಕ ಚೀನಾದ ವುಹಾನ್ ವೈರಾಣು ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಈ ಕರೋನಾ ಮೂಲದ ರಹಸ್ಯವನ್ನು ತುರ್ತಾಗಿ ಭೇದಿಸುವ ಅವಶ್ಯಕತೆಯಿದೆ. ಡಬ್ಲ್ಯುಎಚ್‌ಒ ತಂಡದ ಪ್ರಥಮ ತನಿಖೆಯ ವೇಳೆ ವುಹಾನ್ ಲ್ಯಾಬ್ ಪ್ರವೇಶಿಸಲು ಚೀನಾ ಅವಕಾಶ ನೀಡಿರಲಿಲ್ಲ. ಬದಲಿಗೆ ವೈರಸ್ ಮೊದಲು ಕಾಣಿಸಿಕೊಂಡಿತು ಎಂದು ಹೇಳಲಾದ ಮಾರುಕಟ್ಟೆಗಷ್ಟೇ ಸೀಮಿತಗೊಳಿಸಿತ್ತು.
ಅದಲ್ಲದೇ ಎಷ್ಟೇ ಆಗ್ರಹ ಕೇಳಿ ಬಂದರೂ ಚೀನಾದ ಪ್ರಯೋಗಾಲಯದ ದತ್ತಾಂಶವನ್ನು ಇದುವರೆಗೂ ಚೀನಾ ಹಂಚಿ ಕೊಂಡಿಲ್ಲ. ಆದುದರಿಂದ ತನಿಖೆಯೇ ನಿರರ್ಥಕವಾಯಿತೆಂಬ ತೀರ್ಮಾನಕ್ಕೆ ಬರಲೇ ಬೇಕಾಗುತ್ತದೆ ಮತ್ತು ಇಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವೈಫಲ್ಯವನ್ನು ಗಮನಿಸಬಹುದು. ವಿಶ್ವ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ವಾದುದು. ಇದರ ಉದ್ದೇಶ ವಿಶ್ವ ಸ್ವಾಸ್ಥ್ಯಪರಿಪಾಲನೆ.
ಇದರ ಮುಖ್ಯಸ್ಥ ಇತಿಯೋಪಿಯಾದ ಮಾಜಿ ಸಚಿವ ಡಾ.ಟೆಡ್ರೋಸ್ ಅದಾನಮ್. ಇವರ ಆಯ್ಕೆಯಲ್ಲಿ ಚೀನಾ ಮಹತ್ತರವಾದ ಪಾತ್ರ ವಹಿಸಿತ್ತು. ಈ ವ್ಯಕ್ತಿ ಚೀನಾದ ಹಂಗಿನಿಂದಾಗಿಯೇ ಚೀನಾ ಪರ ಸಂಪೂರ್ಣ ವಾಲುತ್ತಿದ್ದಾರೆ ಎಂಬ ಆರೋಪವಿದೆ.
ವಿಶ್ವ ಆರೋಗ್ಯ ಸಂಸ್ಥೆ ಆರಂಭದ ದಿನಗಳಲ್ಲಿ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಎನ್ನುವ ಮೂಲಕ ಜಗತ್ತಿಗೆ ತಪ್ಪು ಸಂದೇಶವನ್ನು ರವಾನೆ ಮಾಡಿತು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಒಂದು ಹಂತದ ತನಿಖೆ ನಡೆಸಿದ್ದು
ಕರೋನಾ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ ಎಂದಿದೆ. ಆದರೆ ಅಮೆರಿಕ, ನಾರ್ವೆ, ಕೆನಡಾ, ಬ್ರಿಟನ್ ಮತ್ತು ಇತರ ದೇಶಗಳು ಮತ್ತಷ್ಟು ತನಿಖೆಗೆ ಆಗ್ರಹಿಸಿವೆ.
ಪ್ರಮುಖ ವಿಚಾರವೇನೆಂದರೆ ಕರೋನಾ ವೈರಸ್ ಆಕ್ರಮಣದ ಸುದ್ದಿ ಜಗತ್ತಿಗೆ ಗೊತ್ತಾಗುವ ಒಂದು ತಿಂಗಳ ಮುಂಚೆಯೇ ಚೀನಾದ ಅಧಿಕಾರಿಗಳಿಗೆ ಅದರ ಪ್ರಮಾದದ ಅರಿವಾಗಿದೆ ಮತ್ತು ವಿಷಯವನ್ನು ಗೌಪ್ಯವಾಗಿಟ್ಟಿತ್ತು. ಚೀನಾ ಕ್ಲಪ್ತ ಸಮಯದಲ್ಲಿ ಕ್ಲಿಷ್ಟ ಪರಿಸ್ಥಿತಿಯ ನಿವಾರಣೆಗೆ ಸೂಕ್ತ ಕ್ರಮ ನಿರ್ವಹಿಸದಿರುವುದು ಮತ್ತು ರೋಗದ ತೀವ್ರತೆಯನ್ನು ಮುಚ್ಚಿ ಹಾಕಲೆತ್ನಿಸಿದ ಪರಿಣಾಮವೇ ಇಂದು ಇಡೀ ವಿಶ್ವ ಎದುರಿಸುತ್ತಿರುವ ಸಂಕಷ್ಟಕ್ಕೆ ಕಾರಣವೆಂಬುದನ್ನು ಚೀನಾ ಒಪ್ಪಿಕೊಳ್ಳಲೇ ಬೇಕು.
ಈ ವಿಷಯವನ್ನು ಜಗತ್ತು ಮರೆತಿಲ್ಲ. ಇದೀಗ ಇತ್ತೀಚಿನ ವಾಲ್‌ಸ್ಟ್ರೀಟ್ ಜರ್ನಲ್ ಈವರೆಗೆ ಬಹಿರಂಗವಾಗಿರದ ಅಮೆರಿಕದ ಗುಪ್ತಚರ ದಾಖಲೆಗಳನ್ನು ಉಲ್ಲೇಖಿಸಿ ಪ್ರಕಟಿಸಿದ ಕೋವಿಡ್ ಸಾಂಕ್ರಾಮಿಕದ ವರದಿಯ ಪ್ರಕಾರ ಚೀನಾ ಕರೋನಾ ಮಾಹಿತಿ ಯನು ಬಹಿರಂಗಗೊಳಿಸುವುದಕ್ಕೆ ಕೆಲವು ವಾರಗಳ ಮೊದಲೇ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರು 2019 ನವೆಂಬರ್‌ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ ಮತ್ತು ವುಹಾನ್ ಪ್ರಯೋಗಾ ಲಯದಲ್ಲಿ ಕೆಲಸ ಮಾಡುತ್ತಿದ್ದ ಹಲವರಲ್ಲಿ ಕೋವಿಡ್-19 ಮತ್ತು ಸಾಮಾನ್ಯ ಜ್ವರದ ಲಕ್ಷಣಗಳಿದ್ದವು ಎಂಬುದನ್ನು ವಾಲ್‌ಸ್ಟ್ರೀಟ್ ಜನರಲ್ ವರದಿ ಮಾಡಿದೆ.
ಆದರೆ ಈ ಮಾಹಿತಿಯನ್ನು ಚೀನಾ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇದು ಜಗದಗಲ ವ್ಯಾಪಿಸಿರುವ ಕರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್‌ನಲ್ಲಿ ಸೃಷ್ಟಿಯಾಗಿದೆ ಎಂಬ ವಾದಕ್ಕೆ ಪುಷ್ಠಿ ನೀಡುವ ಮತ್ತೊಂದು ಅಂಶವಾಗಿದೆ. ವಾಲ್
ಸ್ಟ್ರೀಟ್ ಜರ್ನಲ್ ವರದಿಯ ಬಗ್ಗೆ ಅಮೆರಿಕದ ರಾಷ್ಟ್ರೀಯ ಮಂಡಳಿಯ ವಕ್ತಾರರೂ ಕೂಡಾ ಪ್ರತಿಕ್ರಿಯೆ ನೀಡುವ ಬದಲು ಮೌನ ವಹಿಸಿದ್ದಾರೆ.
ಕೋವಿಡ್-19ರ ಆರಂಭದ ದಿನಗಳು ಮತ್ತು ಚೀನಾ ಮೂಲದ ಕುರಿತು ಪ್ರಸ್ತುತ ಆಡಳಿತದಲ್ಲಿರುವ ಅಮೆರಿಕ ಸರಕಾರವು ಗಂಭೀರವಾದ ಪ್ರಶ್ನೆಗಳನ್ನು ಎತ್ತಲಿದೆ ಎಂದಿದ್ದಾರೆ. ಇದೊಂದು ನಿರೀಕ್ಷಿತ ದೇಶಗಳಿಗೆ ಆತ್ಮವಿಶ್ವಾಸ ಮೂಡುವ ಸಂದೇಶವಾಗಿದೆ.
ವೈರಸ್ ಮೂಲದ ಕುರಿತು ಮುಂದಿನ ಹಂತದ ತನಿಖೆ ನಡೆಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶೀಘ್ರ ಸಭೆ ನಡೆಸುವ ಬಗ್ಗೆ ಪ್ರಕಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಮತ್ತು ಜಗತ್ತಿನ ಎದುರು ಜಗತ್ತಿನ ಹಲವಾರು ವಿಷಯಗಳ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ. ಪಾರದರ್ಶಕ ಸ್ವಯಂ ನಿರ್ಧಾರಗಳಿಲ್ಲ.
ಪ್ರಬಲ ರಾಷ್ಟ್ರಗಳ ಕೈವಾಡಕ್ಕೆ ಮಣಿದು ತನ್ನ ಗೌರವವನ್ನು ಕಳೆದುಕೊಂಡಿದೆ. ಕೋವಿಡ್-19ಕ್ಕೆ ಕಾರಣವಾಗಿರುವ ವೈರಾಣು
ಜೈವಿಕ ಪ್ರಯೋಗಾಲಯದಿಂದಲೇ ಹೊರಬಿದ್ದಿರಬೇಕು ಎಂದು ಹಲವಾರು ವಿಜ್ಞಾನಿಗಳು ಮತ್ತು ರಾಜಕಾರಣಿಗಳು ಬಲವಾಗಿ ಪ್ರತಿಪಾದಿಸುತ್ತಿರುವ ಸಮಯದಲ್ಲಿ ವಾಲ್‌ಸ್ಟ್ರೀಟ್ ವರದಿಯಿಂದ ಮತ್ತೆ ಪುಷ್ಠಿ ದೊರೆತಿದೆ. ತನ್ಮೂಲಕ ಇನ್ನೊಮ್ಮೆ ಸ್ವತಂತ್ರ
ಅಧ್ಯಯನ ನಡೆಸಬೇಕು ಎಂಬ ಆಗ್ರಹವು ತೀವ್ರವಾಗಿದೆ.
ಈ ವೈರಾಣುವಿನ ಹಿಂದಿರುವ ಸತ್ಯ, ಮಿಥ್ಯ, ಕುಕೃತ್ಯ ಮತ್ತು ರಹಸ್ಯಗಳನ್ನು ಭೇದಿಸಲೇಬೇಕೆಂಬುದು ಎಲ್ಲಾ ರಾಷ್ಟ್ರಗಳ ನಿಲುವು. ಇದು ಅವಶ್ಯಕ. ಒಂದೊಮ್ಮೆ ಬಲಿಷ್ಟ ರಾಷ್ಟ್ರಗಳಾದ ಜಪಾನ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳು ವೇದನೆಯನ್ನು ತಾಳಲಾರದೆ ಚೀನಾವನ್ನು ಜಗತ್ತಿನ ಭೂಪಟದಿಂದ ಬೇರ್ಪಡಿಸಬೇಕೆಂಬಷ್ಟು ಆಕ್ರೋಶ ದಿಂದ ಕುದಿಯುತ್ತಿದ್ದವು. ಚೀನಾ ಜಗತ್ತಿನ ಕಣ್ಣಿಗೆ ಮಣ್ಣೆರಚಲು ಹೊರಟರೆ ಅದಕ್ಕೆ ತಕ್ಕ ಬೆಲೆ ತೆರಲೇ ಬೇಕು. ಆದರೆ ಇದು ಸುಲಭದ ಮಾತಲ್ಲ.
ಅದೇ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ರಾಜಕೀಯ ಹಿತಾಸಕ್ತಿ ಪಕ್ಷಪಾತ ಮತ್ತು ಸಕಲ ಸ್ವಹಿತಾಸಕ್ತಿಗಳಿಗೂ ಪಾರದರ್ಶಕ ವಾದ ತನಿಖೆಯಿಂದ ಕರೋನಾದ ಮೂಲವನ್ನು ಭೇದಿಸುವುದು ಅಸಾಧ್ಯದ ಮಾತಲ್ಲ. ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಚೀನಾ ವನ್ನು ಹೊರತು ಪಡಿಸಿದ ರಾಷ್ಟ್ರವೊಂದು ತನಿಖೆಯ ನೇತೃತ್ವವನ್ನು ವಹಿಸಿಕೊಳ್ಳಬೇಕು. ಅದಲ್ಲದೆ ಈ ಎರಡು ದೇಶಗಳು ತನಿಖಾ ಕಾರ್ಯಕ್ಕೆ ಪ್ರಾಮಾಣಿಕವಾಗಿ ಸಹಕರಿಸಬೇಕು. ಈ ಘಾತಕ ವೈರಾಣುವಿನ ಕಾರಣ ಪತ್ತೆ ಹಚ್ಚದಿದ್ದಲ್ಲಿ, ಇದು
ನೈಸರ್ಗಿಕವಲ್ಲದಿದ್ದಲ್ಲಿ ವಿಶ್ವ ವಿನಾಶಕ್ಕೆ ಎಡೆಮಾಡಿದಂತಾಗುವುದಿಲ್ಲವೇ? ಇದರಿಂದ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ವಿಫಲವಾದ ಸಂದೇಶ ರವಾನೆ ಯಾಗುವುದಿಲ್ಲವೇ? ಪಾರದರ್ಶಕ ತನಿಖೆಯಿಂದ ಆರೋಗ್ಯದ ದೃಷ್ಟಿಯಲ್ಲಿ ಭವಿಷ್ಯದ ಮೂರು ಸಂಭವನೀಯ ಆಘಾತಗಳನ್ನು ತಪ್ಪಿಸಬಹುದಾಗಿದೆ.
ಕರೋನಾ ಸೋಂಕು ಬಾವಲಿಗಳಿಂದ ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ಮನುಷ್ಯನಿಗೆ ಬಂದಿದೆ ಎಂಬುದು ಖಚಿತವಾದರೆ ಮುಂದೆ ಕೈಗೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ತಿಳಿಯುತ್ತದೆ. ಅವಘಡದಿಂದ ಸೋರಿಕೆಯಾದರೆ ಅದು ಮರು ಕಳಿಸದಂತೆ ನೋಡಿಕೊಳ್ಳಲು ಸಹಾಯ ವಾಗುತ್ತದೆ. ಇದು ದುಷ್ಕೃತ್ಯವಾಗಿದ್ದಲ್ಲಿ, ಆರ್ಥಿಕ, ರಾಜಕೀಯ ಮಹತ್ವಾಕಾಂಕ್ಷೆಗಾಗಿ ಎಸಗಿದ ಕುಕೃತ್ಯವಾಗಿದ್ದರೆ ತಪ್ಪಿತ ರಾಷ್ಟ್ರವನ್ನು ಹೊಣೆಗಾರಿಕೆ ಮಾಡುವುದರ ಬಗ್ಗೆ ಮತ್ತು ಉತ್ತರದಾಯಿತ್ವದ ಪರಿಣಾಮಕ್ಕೆ ಉತ್ತರ ನೀಡುವಂತೆ ಒತ್ತಡ ಹಾಕಿದಲ್ಲಿ ಎಲ್ಲಾ ರಾಷ್ಟ್ರಗಳಿಗೂ ಕರೆ ಘಂಟೆಯಾಗುವುದು.
ವಿಶ್ವದ ಪರಮೋಚ್ಚ ಸಂಸ್ಥೆ ವಿಶ್ವಶಾಂತಿಗೆ ಭಂಗ ತರುವ ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸಬೇಕು. ಆದರೆ ಇದು ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಮುಗ್ಗರಿಸುತ್ತಿದೆ. ಇದರ ಅಂಗಸಂಸ್ಥೆ ಆರೋಗ್ಯ ಸಂಸ್ಥೆ, ಅದಲ್ಲದೆ ಅಂತಾರಾಷ್ಟ್ರೀಯ
ನ್ಯಾಯಾಲಯವೂ ಗೊಂದಲದ ಗೂಡಾಗಿರುವುದು ದುರದೃಷ್ಟ. ವಿಶ್ವರಕ್ಷಣೆ ವಿಶ್ವಸಂಸ್ಥೆಯ ಉದ್ದೇಶ ಎಂಬ ಮಾತು ಅರ್ಥವನ್ನು ಕಳೆದುಕೊಂಡಿರುವುದೇ ರಾಷ್ಟ್ರ ರಾಷ್ಟ್ರಗಳ ಮೇಲಿರುವ ಮೈಮನಸ್ಸಿಗೆ ಮತ್ತು ದುರಂತಗಳಿಗೆ ಕಾರಣವೆಂದರೆ ತಪ್ಪುಂಟೇ?