ಅವಲೋಕನ
ಡಾ.ಆರ್.ಜಿ.ಹೆಗಡೆ
ಕಳೆದ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲವನ್ನು ಮೊದಲು ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾಗಿ ನಿರಂತರವಾಗಿ ಉನ್ನತ ರಾಜಕೀಯ ಹುದ್ದೆಗಳನ್ನು ನಿರ್ವಹಿಸುತ್ತ ಕಳೆದವರು ನರೇಂದ್ರ ಮೋದಿ.
ದೇಶದ ರಾಜಕೀಯದಲ್ಲಿ ಇದು ಒಂದು ಚಾರಿತ್ರಿಕ ಘಟನೆ. ಹಾಗಾಗಿ ಮೋದಿ ರಾಜಕೀಯವನ್ನು ವಿವಿಧ ಅಕಾಡೆಮಿಕ್ ಆಯಾಮ ಗಳಿಂದ ಚಿಂತನೆಗೆ ಒಳಪಡಿಸಬೇಕಾದ ಸಮಯ ಇದು. ಅವುಗಳಲ್ಲಿ ಒಂದು ಪ್ರಾಥಮಿಕ ಪ್ರಶ್ನೆ ಇಷ್ಟು ಸುದೀರ್ಘಕಾಲ ಅಧಿಕಾರ ದಲ್ಲಿ ಸಕ್ರಿಯರಾಗಿ, ಅಪರಿಮಿತ ಶಕ್ತಿ ಹೊಂದಿ ಉಳಿದುಬರಲು, ಬೆಳೆದುಬರಲು ಬೇಕಾಗುವ ದೈಹಿಕ, ಮಾನಸಿಕ ಮತ್ತು ರಾಜ ಕೀಯ ಇಂಧನ ಮೋದಿಯವರಿಗೆ ಎಲ್ಲಿಂದ ಪ್ರಾಪ್ತವಾಗುತ್ತದೆ ಎನ್ನುವುದು. ಉತ್ತರ ಕಂಡು ಹಿಡಿಯುವ ಪ್ರಯತ್ನ ಈ ಲೇಖನ. ವಿಶಾಲಾರ್ಥದಲ್ಲಿ ಈ ಲೇಖನ ನಾಯಕತ್ವದ ಶಕ್ತಿಯ ಮೂಲಗಳ ಅವಲೋಕನ ಕೂಡ.
ವಿಷಯ-೧: ರಾಜಕೀಯದಲ್ಲಿ ಸಮಯ ವೇಗವಾಗಿ ಓಡುತ್ತಿರುತ್ತದೆ. ಅಲ್ಲಿ ಕ್ಷಣಗಳು ವರ್ಷಗಳ ಹಾಗಿರುತ್ತವೆ. ರಾತ್ರಿ ಬೆಳಗಾಗುವ ತನಕ ರಾಜಕೀಯ ಯುಗಗಳೇ ಕಳೆದುಹೋಗಬಹುದು ಕೂಡ. ಅಧಿಕಾರ ರಾಜಕೀಯವಂತೂ ತುಂಬ ಚಂಚಲ. ಎಷ್ಟು ಹೊತ್ತಿಗೆ ಏನು ಬೇಕಾದರೂ ಆಗಬಹುದು. ರಾಜಕೀಯದ ಮೂಲ ಸ್ವರೂಪವೇ ಹಾಗೆ. ಅರಸೊತ್ತಿಗೆಯಲ್ಲಿ ಮಾತ್ರವಲ್ಲ. ಪ್ರಜಾಪ್ರಭುತ್ವ ದಲ್ಲಿ ಕೂಡ. ಮುಖ್ಯವಾಗಿ ಇಂದಿನ ಭಾರತದಂಥ ರೆಸ್ಟ್‌ಲೆಸ್ ಪ್ರಜಾಪ್ರಭುತ್ವದಲ್ಲಿ – ಅಂದರೆ ಜನ ರಾಜಕಾರಣಿಗಳ ಕುರಿತು, ನಾಯಕರ ಕುರಿತು ತೀವ್ರ ಸಿನಿಕಲ್ ಆಗಿರುವ ಈ ದಿನಗಳಲ್ಲಿ ಅಧಿಕಾರ, ನಾಯಕತ್ವ ಎಷ್ಟು ಹೊತ್ತಿಗೆ ಅಲುಗಾಡಿ ಹೋಗುತ್ತದೆ
ಎಂಬುದು ಹೇಳಲಾಗುವುದೇ ಇಲ್ಲ.
ಪ್ರಚಂಡ ವೇಗದ ಹರಿವು ಸಮಕಾಲೀನ ರಾಜಕೀಯದ ಗುಣಲಕ್ಷಣಗಳಲ್ಲೊಂದು. ಇದನ್ನೆಲ್ಲ ಏಕೆ ಹೇಳಿದ್ದೆಂದರೆ ನಾಯಕ ನೊಬ್ಬ, ಅದೂ ಮೋದಿಯಂಥ ನಾಯಕರು ಸಮಯದಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚು ವೇಗವಾಗಿ ಓಡುತ್ತಿರ ಬೇಕಾಗು ತ್ತದೆ. ಕಠಿಣ ದೈಹಿಕ, ಮಾನಸಿಕ, ರಾಜಕೀಯ ಶಕ್ತಿಯನ್ನು ಬೇಡುವ ಕೆಲಸ ಅದು. ಶಕ್ತಿ ಪರೀಕ್ಷೆಯಲ್ಲಿ ವಿಫಲರಾದವರನ್ನು ಕಾಲವೇ ಮೂಲೆಗೆಸೆಯುತ್ತದೆ.
ಇಂತಹ ಮ್ಯಾರಥಾನ್ ಓಟದಲ್ಲಿ ಯಶಸ್ವಿಗಳಾಗಿರುವರು ಮೋದಿ. ಇದು ಮೋದಿಯವರ ಅಪರಿಮಿತ ದೈಹಿಕ, ಮಾನಸಿಕ, ರಾಜಕೀಯ ಶಕ್ತಿಯನ್ನು ಎತ್ತಿ ಹೇಳುವ ಅಂಶ. ವಿಷಯ-೨: ಇನ್ನೂ ಒಂದು ವಿಶೇಷವೆಂದರೆ ಪ್ರಧಾನಿ ಮೋದಿ ಹರಿವಿನ ವಿರುದ್ಧ ಈಜಿದವರು. ಅಂದರೆ ರಾಜಕೀಯ ಹುದ್ದೆಗಳು ಅವರಿಗೆ ಒಲಿದು ಬಂದಿದ್ದು ಹೆಜ್ಜೆ ಹೆಜ್ಜೆಗೂ ಎದುರಾದ ಕಠಿಣ ಸವಾಲುಗಳ ವಿರುದ್ಧದ ಹೋರಾಟದಲ್ಲಿ ಜಯಗಳಿಸಿದ ನಂತರ ಮಾತ್ರ. ಹದಿಮೂರು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಅಕ್ಷರಶಃ ಅಗ್ನಿ ಯಲ್ಲಿ ಪರೀಕ್ಷೆಗೆ ಒಳಗಾದವರು ಅವರು. ಹಾಗೆಯೇ ಅಭಿವೃದ್ಧಿಯ ಸವಾಲುಗಳನ್ನು ಎದುರಿಸಿ ನಿಂತು ಗುಜರಾತ್ ರಾಜ್ಯವನ್ನು ದೇಶಕ್ಕೆ ಮಾದರಿಯಾಗಿಸಿದವರು. ಅಲ್ಲಿಂದಲೇ ಮುಂದುವರಿದು ಪ್ರಧಾನಿಯಾಗಿದ್ದು ಕೂಡ ಪ್ರವಾಹದ ವಿರುದ್ಧ ಈಜಿಯೇ.
ಅಂದರೆ ಪಕ್ಷದ ಒಳಗಿನ ಮತ್ತು ಹೊರಗಿನ ನಾಯಕತ್ವ ಅವರಿಗೆ ದೊರೆತಿದ್ದು ಹೋರಾಟದ ನಂತರವೇ. ನಂತರ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಜವಾಬ್ದಾರಿ ಅವರ ಹೆಗಲ ಮೇಲೆಯೇ ಬಂತು. ಪಕ್ಷವನ್ನು ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ತಂದಿದ್ದು ಕೂಡ ಮೋದಿ ಮಹಿಮೆಯೇ. ವಿಶೇಷತೆ ಎಂದರೆ ವರ್ಷಗಳು ಉರುಳಿದಂತೆ ಹೆಚ್ಚು ಹೆಚ್ಚು ಶಕ್ತಿಯುತರಾಗುತ್ತಲೇ, ಜನಪ್ರಿಯತೆಯನ್ನು ಹೆಚ್ಚಿಸಿ ಕೊಳ್ಳುತ್ತಲೇ ಹೋಗಿರುವವರು ಅವರು. ನಿಜ, ರಾಜಕೀಯ ಅಧಿಕಾರಗಳನ್ನು ದೀರ್ಘ ಕಾಲ ಅನುಭವಿಸಿದ ದೇಶದ ಬೇರೆ ಮಹಾನ್ ನಾಯಕರನ್ನೂ ಇಲ್ಲಿ ನೆನಪಿಸಬೇಕು. ಜ್ಯೋತಿ ಬಸು ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದರು.
ನೆಹರು ಹದಿನಾರು ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ನಿಜ. ಆದರೆ ಗಮನಿಸಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ
ಬೇರೆಯವರ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಅದೆಂದರೆ ನೆಹರೂ ಒಂದು ಪರಂಪರೆಯಿಂದ ಹುಟ್ಟಿ ಬಂದವರು. ಅದೇ
ಪರಂಪರೆಯಿಂದ ರಕ್ಷಿಸಲ್ಪಟ್ಟವರು. ಈ ಮಾತುಗಳನ್ನು ನೆಹರು ಅವರ ನಾಯಕತ್ವವನ್ನು ಅವಗಣನೆ ಮಾಡಲು ಹೇಳುತ್ತಿಲ್ಲ. ಅವರು ಶ್ರೇಷ್ಟರೇ. ಇನ್ನು ಜ್ಯೋತಿ ಬಸು ಕೂಡ ಘನವಂತರು. ಆದರೆ ಒಂದು ರಾಜ್ಯವನ್ನು ಆಳಿದವರು. ಮೋದಿ ಇವರಿಬ್ಬರ ಹಾಗೂ ಅಲ್ಲವೇ ಅಲ್ಲ. ಕೌಟುಂಬಿಕ ಹಿನ್ನೆಲೆ ಇತ್ಯಾದಿ ಇಲ್ಲದೆ ಸ್ವಯಂಭೂ ಆಗಿ ಉದ್ಭವವಾಗಿ, ಕಾರ್ಯಕರ್ತರಾಗಿ, ಪರಿಶ್ರಮ ಹಾಗೂ ಬದ್ಧತೆಯ ಆಧಾರದ ಮೇಲೆ ತಮ್ಮನ್ನು ತಾವೇ ಕಟ್ಟಿಕೊಂಡವರು ಮೋದಿ.
ನಾಯಕರಾಗಿ ಒಂದು ಪಕ್ಷವನ್ನೇ ಎತ್ತಿಹಿಡಿದು ದೀರ್ಘ ಕಾಲ ಪಯಣಿಸಿದವರು. ತಮ್ಮ ಹೆಸರಿನಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು
ಬಂದವರು. ಒಂದಲ್ಲ, ಎರಡಲ್ಲ ಹಲವು ಬಾರಿ. ರಾಷ್ಟ್ರೀಯ ವಾಗಿಯೂ ಎರಡು ಬಾರಿ. ಹೀಗೆ ತಮ್ಮದೇ ಆದ ವರ್ಚಸ್ಸು ಸೃಷ್ಟಿಸಿ
ಕೊಂಡು, ಬೆಳೆಸಿಕೊಂಡು ಉನ್ನತ ಮಟ್ಟದ ನಾಯಕತ್ವದಲ್ಲಿ, ದೀರ್ಘಕಾಲ ನೆಲೆ ನಿಂತವರು ಮೋದಿ. ಅಪಸ್ವರಗಳು, ಬೇರೆ
ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಮೋದಿ ಮಹಾನಾಯಕ ಎನ್ನುವುದನ್ನು ದೇಶದ ಜನತೆ ಒಪ್ಪಿಕೊಂಡಿದೆ.
ಇಲ್ಲವಾದರೆ ಪ್ರಚಂಡ ಜನಬೆಂಬಲ ಅವರಿಗೆ ಅದೂ ಎರಡು ಬಾರಿ ಪ್ರಾಪ್ತವಾಗಿರುತ್ತಿರಲಿಲ್ಲ.
ಇಂದಿನ ಸಂಕಟಮಯ ಸನ್ನಿವೇಶದಲ್ಲಿ ಕೂಡ ಬೆಂಬಲ ಬೆಳೆಯುತ್ತಲೇ ಹೋಗುತ್ತಿರಲಿಲ್ಲ. ಇವೆಲ್ಲ ವಾಸ್ತವಿಕ ವಿಷಯಗಳು. ಈ ಅಂಶಗಳೂ ಮೋದಿಯವರ ವಿಶಿಷ್ಟ ಶಕ್ತಿಯ ಕುರಿತು ಹೇಳುತ್ತವೆ.
ವಿಷಯ- ೩: ಇನ್ನೂ ಒಂದು ವಿಷಯ ಗಮನಿಸಬೇಕು. ಮೋದಿ ಹೇಗೋ ಏನೋ ತಮ್ಮ ಕ್ಷೇತ್ರದಿಂದ ಗೆದ್ದು ಬಂದು ಬೇರೆಯವರ
ಸಂಪುಟಗಳಲ್ಲಿ, ಅಥವಾ ಬೇರೆಯವರ ರಾಜಕೀಯ ಕೃಪಾಶೀರ್ವಾದದ ಬಲದಿಂದ ಉನ್ನತ ಹುದ್ದೆಗಳಲ್ಲಿ ಸಮಯ ಕಳೆದವ ರೇನೂ ಅಲ್ಲ. ಮಹಾದಂಡನಾಯಕನಾಗಿ ಮುಂದೆ ನಿಂತು ಹೋರಾಡಿ ಸಾಮ್ರಾಜ್ಯ ಕಟ್ಟಿದವರು. ಮತ್ತೆ ರಾಜನಾಗಿ ಸುಮ್ಮನೆ
ಏನೂ ಮಾಡದೆ ಸಮಯ ಕಳೆದವರೂ ಅಲ್ಲ. ಗಮನಿಸಬೇಕು.
ಇಂತಹ ನಾಯಕತ್ವಕ್ಕೆ ಮಾಂತ್ರಿಕ ಶಕ್ತಿ ಬೇಕಾಗುತ್ತದೆ. ಏನೋ ಒಂದು ರೀತಿಯ ಪ್ರಚಂಡ ಶಕ್ತಿ. ದೈಹಿಕ, ಮಾನಸಿಕ ಹಾಗೂ ಆತ್ಮ ಶಕ್ತಿ. ನಮಗೆ ಗೊತ್ತಿದೆ. ರಾಜಕೀಯ ಎಂಬುದು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ನಾಯಕನ ಮೇಲೆ ಮಿತಿ ಮೀರಿ ಒತ್ತಡ ತರುವ ಕ್ಷೇತ್ರ. ಅಲ್ಲಿಯ ಒತ್ತಡಕ್ಕೆ ಹಗಲು ರಾತ್ರಿ ಇರುವುದಿಲ್ಲ. ಮೇರೆ ಇರುವುದಿಲ್ಲ. ಪ್ರಧಾನಿಯಂಥ ಹುದ್ದೆಯಲ್ಲಿಯಂತೂ ಒತ್ತಡ ವಿಪರೀತ. ಏಕೆಂದರೆ ಭಾರತದಂಥ ದೊಡ್ಡ ಮತ್ತು ಸೂಕ್ಷ್ಮ ದೇಶದಲ್ಲಿ ಎಷ್ಟು ಹೊತ್ತಿಗೂ ಏನೂ ಆಗಿಹೋಗಬಹುದು. ದೇಶಿ ಆಕ್ರಮಣ ಆಗಿ ಹೋಗಬಹುದು. ಉಗ್ರಗಾಮಿಗಳ ದಾಳಿ ನಡೆಯಬಹುದು.
ಚುನಾವಣೆಯಲ್ಲಿ ಪಕ್ಷವನ್ನು ಆರಿಸಿತರಬೇಕಾದ ಜವಾಬ್ದಾರಿ ಜತೆ ಸೇರಿಕೊಂಡರಂತೂ ಒತ್ತಡ ನೂರು ಪಟ್ಟು ಜಾಸ್ತಿಯಾಗುತ್ತದೆ. ನಮಗೆ ಗೊತ್ತಿದೆ. ಚುನಾವಣಾ ರಾಜಕೀಯದಲ್ಲಿಯಂತೂ ಸಾವಿರ ಜನ ಸಾವಿರ ಕಡೆ ಕಾಲೆಳೆಯುತ್ತಿರುತ್ತಾರೆ. ಒಡೆದು ಹೋಗು ವಂಥ ಒತ್ತಡವಿರುತ್ತದೆ. ಯಾವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕ್ಷಣ ಕ್ಷಣವೂ ಯೋಚಿಸಬೇಕಾಗುತ್ತದೆ. ಕೆಲವೊಮ್ಮೆ ಅವಮಾನ ಸಹಿಸಿಕೊಳ್ಳಬೇಕಾಗುತ್ತದೆ. ಘಳಿಗೆ ಘಳಿಗೆಗೂ ಅಸ್ಥಿರತೆ ಇರುತ್ತದೆ. ದೊಡ್ಡ ದೊಡ್ಡ ಕ್ರೌಡ್‌ಗಳಲ್ಲಿ ಸುರಕ್ಷತೆಯ ಅಪಾಯ ಕೂಡ ಇರುತ್ತದೆ. ಇವೆಲ್ಲವನ್ನೂ ಎದುರಿಸಿ ನಿಂತವರು ಮೋದಿ.
ವಿಷಯ- ೪: ಮೋದಿಯವರ ಮೇಲೆ ಇಂತಹ ಒತ್ತಡಗಳು ಸಾಧಾರಣವಾಗಿ ಎಲ್ಲ ನಾಯಕರ ಮೇಲೆ ಇರುವ ಒತ್ತಡಗಳಿಗಿಂತಲೂ ಹೆಚ್ಚೇ ಇದ್ದವು. ಅವರ ರಾಜಕೀಯದ ಪ್ರತಿಯೊಂದು ಮೆಟ್ಟಿಲು ಕೂಡ ಜಾರುತ್ತಿತ್ತು. ಅಲ್ಲದೆ ಬಹುಶಃ ಅವರು ಎದುರಿಸಿದ
ರೀತಿಯ ಟೀಕೆಯನ್ನು ಮತ್ತು ಮಾನಸಿಕ ಹಿಂಸೆಯನ್ನು ದೇಶದ ಬೇರಾವ ರಾಜಕಾರಣಿಯೂ ಎದುರಿಸಿರಲಿಕ್ಕಿಲ್ಲ. ಅಂತಹ ತೀವ್ರ
ಸ್ವರೂಪದ, ಕಠಿಣ ಆಪಾದನೆಗಳು ಬಂದವು. ಮೊಕದ್ದಮೆಗಳು ಬಂದಿದ್ದವು. ಕಟುಟೀಕೆಗಳಿಗೆ ಕಿವಿ ಕೊಡಬೇಕಾಯಿತು. ಇವೆಲ್ಲವನ್ನೂ ಹೇಳಿಕೊಳ್ಳುತ್ತಿರುವ ಕಾರಣವೆಂದರೆ ಸಾಧಾರಣ ಲೋಹದಿಂದ ಮಾಡಲಾದ ವ್ಯಕ್ತಿಯೊಬ್ಬ ಮೋದಿಯವರ ಸ್ಥಾನದಲ್ಲಿದ್ದರೆ ಅತ ಯಾವಾಗಲೋ ಸುಟ್ಟು ಭಸ್ಮವಾಗಿ ಹೋಗುತ್ತಿದ್ದರು.
ವಿಷಯ- ೫: ಮೋದಿಯವರ ಶಾರೀರಿಕ, ಮಾನಸಿಕ ದಣಿವನ್ನು ಗಮನಿಸಬೇಕು. ಭಾರತದಂಥ ದೊಡ್ಡ ದೇಶದಲ್ಲಿ ಮುನ್ನೂರ
ಐವತ್ತಕ್ಕಿಂತಲೂ ಹೆಚ್ಚು ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ನಲವತ್ತೈದು ದಿನದಲ್ಲಿ ಮಾತನಾಡುವುದು, ವಿಪರೀತ ಒತ್ತಡ
ಹೇರುವ ಕೆಲಸ.ಪ್ರಯಾಣದ ಸುಸ್ತಂತೂ ಹೇಗಿರುತ್ತದೆ ಎನ್ನುವುದು ಊಹೆಗೆ ಬಿಟ್ಟ ವಿಷಯ. ಮತ್ತೆ ಪ್ರಧಾನಿಗೆ ಅಂತಾರಾಷ್ಟ್ರೀಯ
ಸಂದರ್ಭಗಳ ತೀವ್ರ ದೈಹಿಕ ಒತ್ತಡ ಇರುತ್ತದೆ. ಇಡೀ ದೇಶ ಮತ್ತು ಜಗತ್ತು ಅವರನ್ನು ನೋಡುತ್ತಿರುತ್ತದೆ. ಪ್ರಧಾನಿಯಾಗಿ ಮೋದಿ
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕಾಗಿ ಬಂತು. ಬೆಳ್ಳಂಬೆಳಿಗ್ಗೆ ದಾಳಿ ಮಾಡಿಸಬೇಕಾಗಿ ಬಂತು. ಚೀನಾ ಆಕ್ರಮಣವನ್ನು ಹಿಮ್ಮೆಟ್ಟಿಸ ಬೇಕಾಗಿ ಬಂತು. ಕಾಶ್ಮೀರದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ ಬಂತು. ನಂತರ ಕರೋನಾ ತಂದಿಟ್ಟಿರುವ ಆರ್ಥಿಕ ಸಂಕಟವನ್ನು ಎದುರಿಸಬೇಕಾಗಿ ಬಂತು.
ಇಂತಹವನ್ನೆಲ್ಲ ಎದುರಿಸಲು ಗುಂಡಿಗೆ ಗಟ್ಟಿ ಇರಬೇಕಾಗುತ್ತದೆ. ಅಪಾರವಾದ ವೈಯಕ್ತಿಕ, ಮಾನಸಿಕ, ಶಾರೀರಿಕ, ರಾಜಕೀಯ ಶಕ್ತಿ ಬೇಕಾಗುತ್ತದೆ. ನಮಗೆ ತಿಳಿದಿರುವಂತೆ ಪಾಕಿಸ್ತಾನದ ಮೇಲೆ ದಾಳಿ ನಡೆದಾಗ ಬೆಳತನಕ ವರದಿಗಳಿಗೆ ಕಾಯುತ್ತಲೇ ಇದ್ದವರು ಅವರು.
ವಿಷಯ- ೬: ಅಚ್ಚರಿಯ ವಿಷಯವೆಂದರೆ ಶಾರೀರಿಕ ಅಥವಾ ಮಾನಸಿಕ ಸುಸ್ತು ಮೋದಿಯವರನ್ನು ಬಾಧಿಸಿದಂತೆಯೇ ಇಲ್ಲ. ಅವರ ಶಕ್ತಿ ಕಡಿಮೆಯಾದಂತೆ ಅನಿಸುತ್ತಲೇ ಇಲ್ಲ. ಕ್ರಿಯೇಟಿವಿಟಿ ಕುಂದಿದಂತಿಲ್ಲ. ಮೋದಿ ಶರೀರ ಭಾಷೆ, ಮಾತು, ನಡಿಗೆಯಲ್ಲಿನ ಶಕ್ತಿಯಲ್ಲಿ ಇಳಿಕೆ ಬಂದಂತೆ ಅನಿಸುವುದೇ ಇಲ್ಲ. ಮೋದಿ ವ್ಯಕ್ತಿತ್ವ ಹೊರಸೂಸುವುದು ಅದೇ ಒಂದು ಮುಗಿಯದ ಚೈತನ್ಯವನ್ನು. ಈಗ ಪ್ರಶ್ನೆಗೆ ಮರಳಿ ಬರೋಣ. ಮೋದಿಯವರಿಗೆ, ಅಥವಾ ಅವರಂಥ ನಾಯಕರಿಗೆ ಅಸಾಧಾರಣ ದೈಹಿಕ, ಮಾನಸಿಕ, ರಾಜಕೀಯ ಶಕ್ತಿ ಎಲ್ಲಿಂದ ಬರುತ್ತದೆ? ಬಹುಶಃ ಮೋದಿಯವರ ಶಕ್ತಿ ಇರುವುದು ಹಲವು ಸಂಕೀರ್ಣ ಆಕರಗಳ ಸಂಯೋಗದಲ್ಲಿ. ಬಹುಶಃ ಅವರ ದೈಹಿಕ ಇಂಧನದ ಮೂಲವಿರುವುದು ತಿಳಿದಂತೆ ಯೋಗಾಸನ, ಪ್ರಾಣಾಯಾಮ ಮತ್ತು ವ್ಯಾಯಾಮಕ್ಕೆ ಬದ್ಧತೆಯಲ್ಲಿ. ಅವರು ತಾಸುಗಟ್ಟಲೆ ಸುಗಮವಾಗಿ, ಸುಲಲಿತವಾಗಿ ವ್ಯಾಯಾಮ ನಡೆಸಿದ್ದನ್ನು ನೋಡಿದ್ದೇವೆ. ಬಹುಶಃ ಅವರ ದೈಹಿಕ ಶಕ್ತಿ ಹುಟ್ಟಿಕೊಳ್ಳುವುದು ಇಲ್ಲಿ. ಬಹುಶಃ ಬೆಳಗಿನ ಜಾವವೇ ಆರಂಭವಾಗುವ ಅವರ ದೈಹಿಕ ವ್ಯಾಯಾಮದಿಂದ ದೈಹಿಕ ಫಿಟ್ನೆಸ್‌ಗೆ ಮಾದರಿ ಅವರು.
ಎಪ್ಪತ್ತರ ಹರೆಯದಲ್ಲಿದ್ದರೂ ಸತತ ಒಂದು ಒಂದೂವರೆ ತಾಸು ನಿಂತು ನಿರರ್ಗಳವಾಗಿ ಅವರ ಹಾಗೆ ಭಾಷಣ ಮಾಡಬಲ್ಲ ಅವರ ದೈಹಿಕ ಶಕ್ತಿಯ ಮೂಲವಿರುವುದು ಬಹುಶಃ ಇಲ್ಲಿ. ಹಾಗೆಯೇ ಅವರ ಅಪರಿಮಿತ ಮಾನಸಿಕ ಶಕ್ತಿ ಹುಟ್ಟಿಕೊಳ್ಳುವುದು ಬಹುಶಃ ಅವರ ಶ್ರದ್ಧೆಯ ಮೂಲದಿಂದ. ಅವರು ಧಾರ್ಮಿಕರು ಎನ್ನುವ ವಿಷಯ ನಮಗೆ ಗೊತ್ತು. ಅಮೆರಿಕ ಭೇಟಿಯಲ್ಲಿ ದ್ದಾಗಲೂ ನವರಾತ್ರಿ ಹಬ್ಬದಲ್ಲಿ ಅವರು ಕೇವಲ ನೀರು ಕುಡಿದು ಉಪವಾಸವಿದ್ದಿದ್ದನ್ನು ನಾವು ನೋಡಿದ್ದೇವೆ. ಇವೆಲ್ಲ ತುಂಬ
ಕುತೂಹಲದ ವಿಷಯಗಳು. ಬಹುಶಃ ವೈದ್ಯಕೀಯ ಲೋಕ ಕಣ್ತೆರೆದು ನೋಡಬೇಕಾದ ಕುತೂಹಲಗಳು, ವಿಸ್ಮಯಗಳು. ನಮಗೆ
ತಿಳಿದ ಹಾಗೆ ಗಾಂಧೀಜಿಗೂ ವಿಚಿತ್ರ ಶಕ್ತಿ ಇತ್ತು. ಸ್ವತಃ ಹೇಳಿಕೊಂಡಂತೆ ಅವರು ತಮ್ಮ ಆತ್ಮಶಕ್ತಿಯನ್ನು ಪ್ರಾರ್ಥನೆಯಿಂದ ಪಡೆಯುತ್ತಿದ್ದರು.
ಅಲ್ಲದೆ ಅವರ ಶಕ್ತಿಯ ಮೂಲದಲ್ಲಿದ್ದುದು ನಿಸ್ವಾರ್ಥ ಮತ್ತು ಅಪ್ಪಟ ಪ್ರಾಮಾಣಿಕತೆ ತಂದುಕೊಟ್ಟ ಶಕ್ತಿ. ಒಂದು ಉದ್ದೇಶಕ್ಕೆ
ಆಳವಾಗಿ ಬದ್ಧರಾಗಿ ತಮ್ಮ ವಯಕ್ತಿಕತೆಯನ್ನೆಲ್ಲ ಮೀರಿ ನಿಂತು ಆ ಉದ್ದೇಶದಲ್ಲಿ ಲೀನವಾಗಿ ಹೋದಾಗ ಹುಟ್ಟಿಕೊಳ್ಳುವಂಥ ಶಕ್ತಿ. ಗಮನಿಸಬೇಕಾದ ವಿಷಯ ಇದು. ಏನೆಂದರೆ ಏನೋ ಒಂದು ಚಿತ್ರವಾದ ಅತಿಮಾನುಷ ಶಕ್ತಿ ಇದೆ. ಬಹುಶಃ ಅದನ್ನು ಮನುಷ್ಯ ಪಡೆಯಲೂ ಬರುತ್ತದೆ. ಪಡೆಯುವುದನ್ನು ಕಲಿಯಬೇಕು ಮತ್ತು ಪಳಗಿಸಬೇಕು ಅಷ್ಟೇ. ಏನೋ ಶಿಸ್ತುಬದ್ಧವಾದ, ನಿಯತ್ತು ಬದ್ಧವಾದ, ಆಳದ ದೈಹಿಕ ಮಾನಸಿಕ ಸಾಧನೆಯಲ್ಲಿ ತೊಡಗಿದಾಗ.
ಋಷಿಮುನಿಗಳಿಗೆ, ಕಲಾವಿದರಿಗೆ, ವಿಶೇಷ ಸಾಧಕರಿಗೆ, ತಮ್ಮನ್ನು ಸಂಪೂರ್ಣವಾಗಿ ಯಾವುದೋ ಶಕ್ತಿಗೆ ಸಮರ್ಪಣೆ ಮಾಡಿ ಕೊಂಡಾಗ ಹುಟ್ಟಿಕೊಳ್ಳುವ ಶಕ್ತಿ. ನೆಪೋಲಿಯನ್ ಬೋನಾಪಾರ್ಟಗೆ ಯುದ್ಧದ ನಡುವೆಯೇ ಕೆಲ ಕ್ಷಣ ನೆಲದ ಮೇಲೆ ಬಿದ್ದು ನಿದ್ದೆ ಮಾಡಿ ಮತ್ತೆ ಕ್ಷಣಗಳಲ್ಲಿ ಯುದ್ಧ ಮುಂದುವರಿಸಬಲ್ಲ ಶಕ್ತಿ ಇದೆಯೆಂದು ಹೇಳಲಾಗಿತ್ತು. ಅಣ್ಣಾ ಹಜಾರೆಯವರಿಗೆ ಕೆಲವು
ದಿನಗಳ ಕಾಲ ಊಟ ನೀರು ಬಿಟ್ಟು ಇರಬಲ್ಲ ಶಕ್ತಿ ಇದೆ ಎಂಬ ಮಾತು ಅವರ ಉಪವಾಸದ ಸಂದರ್ಭದಲ್ಲಿ ಬಂದಿತ್ತು. ತಾನ್ ಸೇನ್‌ನ ಸಂಗೀತಕ್ಕೆ ವಿಚಿತ್ರ ಶಕ್ತಿ ಇತ್ತು ಎಂದು ಇತಿಹಾಸದ ಕಥೆಗಳು ಹೇಳುತ್ತವೆ. ಮೋದಿಯವರನ್ನು ಗಮನಿಸಿದರೆ ಅನ್ನಿಸುವು ದೆಂದರೆ ಬಹುಶಃ ಅವರಿಗೆ ಇರುವುದು ಇಂತಹ ವಿಚಿತ್ರ ಶಕ್ತಿ. ಬಹುಶಃ ಅವರು ಮಾಡಿದ ಹಾಗೆ ಹರಿದ್ವಾರದ ಗುಹೆಯಲ್ಲಿ ಒಂದು ದಿನ ಏಕಾಂತವಾಗಿ ಸಮಯ ಕಳೆಯಲು ಹೆಚ್ಚಾಗಿ ಉನ್ನತ ಹುದ್ದೆಯಲ್ಲಿ ಜೀವನ ಕಳೆದವರಿಗೆ ಸಾಧ್ಯವಿಲ್ಲ ಎನ್ನುವುದು ನಮಗೆ ಗೊತ್ತಿದೆ. ಅದಕ್ಕೆಲ್ಲ ಏನೋ ಒಂದು ವಿಚಿತ್ರ ಶಕ್ತಿ ಬೇಕಾಗುತ್ತದೆ.
ಅಂತಹ ಶಕ್ತಿಯನ್ನೇ ಮೋದಿ ಇಪ್ಪತ್ತು ವರ್ಷಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಉಳಿದು, ಬೆಳೆದು ಬರಲು ಯಶಸ್ವಿ ಯಾಗಿ ಬಳಸಿದ್ದು ಇಂತಹ ಅಪರೂಪದ ಆತ್ಮಶಕ್ತಿಯನ್ನು ಎಂದೇ ಅನ್ನಿಸುತ್ತದೆ.