Saturday, 14th December 2024

ಕನ್ನಡಕ್ಕೂ ಭುವನೇಶ್ವರಿಗೂ ಏನು ಸಂಬಂಧ ?

ಸಕಾಲಿಕ

ಡಾ.ನಾ.ಸೋಮೇಶ್ವರ

ನವೆಂಬರ್ 1 ಬಂದಿತು. ಕುಂಭಕರ್ಣನು ಆರು ತಿಂಗಳಿಗೆ ಒಮ್ಮೆ ಏಳುತ್ತಿದ್ದನಂತೆ. ಕುಂಭಕರ್ಣನ ಸಂತತಿಯಾದ ಕನ್ನಡಿಗರು, ಕುಂಭಕರ್ಣನನ್ನು ಮೀರಿಸಿದವರು. ಇವರಲ್ಲಿ ಹಲವರು ಏಳುವುದು 11 ತಿಂಗಳಿಗೆ ಒಮ್ಮೆ. ಉಳಿದವರಿಗೆ ನವೆಂಬರ್ ಬಂದದ್ದೂ ಗೊತ್ತಾಗುವುದಿಲ್ಲ. ಹೋದದ್ದೂ ಗೊತ್ತಾಗುವುದಿಲ್ಲ. ಅದಕ್ಕೆ ಕುವೆಂಪುರವರು ಕನ್ನಡಿಗರನ್ನು ಕುರಿತು ಸತ್ತಂತಿಹರನು ಬಡಿದೆ ಚ್ಚರಿಸು ಎಂದದ್ದು.

ನವೆಂಬರ್ 1 ಬರುತ್ತಿದೆ ಎಂದರೆ, ಕೆಲವರು ಒಮ್ಮೆಲೆ ಜಾಗೃತರಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರೆ, ಉಳಿದವರು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಸಿದ್ಧರಾಗುತ್ತಾರೆ. ವಾಸ್ತವದಲ್ಲಿ ನವೆಂಬರ್ 1ರಂದು ಯಾವ ಉತ್ಸವವನ್ನು ಆಚರಿಸ ಬೇಕು ಎನ್ನುವುದನ್ನು ನಿಖರವಾಗಿ ತಿಳಿದವರು ಕಡಿಮೆ. ನಮ್ಮ ಭಾಷಣಕಾರರು ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಗಳೆರಡು ಪರ್ಯಾಯ ನಾಮಗಳು ಎಂದು ಭಾವಿಸಿ, ಎರಡನ್ನು ಮನಬಂದಂತೆ ಹಿಗ್ಗಾಮುಗ್ಗಾ  ಜಡಿಯುವು ದುಂಟು.

ಕನ್ನಡಮ್ಮನು ಅವರನ್ನು ಕ್ಷಮಿಸಲಿ ಹಾಗೂ ರಕ್ಷಿಸಲಿ. ನವೆಂಬರ್ 1, 1956ರಂದು ಸುಮಾರು 20 ಭೌಗೋಳಿಕ ಪ್ರದೇಶಗಳಲ್ಲಿ ವ್ಯಾಪಿಸಿದ್ದ ಕನ್ನಡ ಭಾಷಾ ಪ್ರದೇಶಗಳನ್ನು ಮೈಸೂರು ರಾಜ್ಯ ಎನ್ನುವ ಹೆಸರಿನಡಿಯಲ್ಲಿ ಏಕೀಕೃತಗೊಳಿಸಿದ್ದು, ಒಟ್ಟುಗೂಡಿ ಸಿದ್ದು ಇತಿಹಾಸ. ಹಾಗಾಗಿ ಪ್ರತಿವರ್ಷ ನವೆಂಬರ್ 1ರಂದು ಮೈಸೂರು ಎನ್ನುವ ಹೊಸ ರಾಜ್ಯ ಉದಯವಾದ ಹಿನ್ನೆಲೆಯಲ್ಲಿ ಮೈಸೂರು ರಾಜ್ಯೋತ್ಸವವನ್ನು ಆಚರಿಸುವ ಪದ್ಧತಿ ಆರಂಭವಾಯಿತು. ನವೆಂಬರ್ 1, 1973ರಲ್ಲಿ ಅಂದಿನ ಮುಖ್ಯಮಂತ್ರಿ ಗಳಾಗಿದ್ದ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಅಧಿಕೃತ ವಾಗಿ ಕರ್ನಾಟಕ ಎಂದು ನಾಮಕರಣವನ್ನು ಮಾಡಿದರು.

ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಯಿತು. ಹಾಗಾಗಿ ಮೈಸೂರು ರಾಜ್ಯೋತ್ಸವವು, ಕರ್ನಾಟಕ ರಾಜ್ಯೋತ್ಸವವಾಯಿತು. ಹಾಗಿದ್ದ ಮೇಲೆ ಕನ್ನಡ ರಾಜ್ಯೋತ್ಸವ ಎನ್ನುವ ಪ್ರಯೋಗವು ತಪ್ಪೇ? ಖಂಡಿತಾ ತಪ್ಪು. ನೂರಕ್ಕೆ ನೂರರಷ್ಟು ತಪ್ಪು. ಭೌಗೋಳಿಕ ಕರ್ನಾಟಕವು ಉದಯವಾಗಿದೆಯೇ ಹೊರತು, ಭಾಷಿಕ/ಭಾವನಾತ್ಮಕವಾಗಿ ಕನ್ನಡ ರಾಜ್ಯವಿನ್ನೂ ಉದಯವಾಗಿಲ್ಲ.
(ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವವರ ಪ್ರಮಾಣ ಶೇ.65; ಕೇರಳದಲ್ಲಿ ಮಲಯಾಳವನ್ನು ಮಾತನಾಡುವವರ
ಪ್ರಮಾಣ 96.7%) ಹಾಗಾಗಿ ‘ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಎಂದರೆ ಸುಳ್ಳನ್ನು ನಿಜವೆಂದು ನಂಬಿ, ಆತ್ಮವಂಚನೆ ಯನ್ನು ಮಾಡಿಕೊಳ್ಳುತ್ತಾ, ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲನ್ನು ಕುಡಿದಂತಾಗುತ್ತದೆ.

ಭುವನೇಶ್ವರಿ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಭೀಷಣ ಭಾಷಣಗಳಾಗಿ ಕೊನೆಯಲ್ಲಿ ಜೈ ಭುವನೇಶ್ವರೀ ಎಂಬ
ಘೋಷಣೆಯೊಡನೆ ಭಾಷಣವನ್ನು ಮುಗಿಸುವುದುಂಟು. ಯಾರು ಈ ಭುವನೇಶ್ವರಿ? ಕನ್ನಡಕ್ಕೂ ಈಕೆಗೆ ಏನು ಸಂಬಂಧ? ಎಂದಿ ನಿಂದ ಸಂಬಂಧ? ಯಾವ ರಾಜಮನೆತನದ ಕುಲದೇವತೆಯಾಗಿದ್ದಳು? ಈಕೆಗಾಗಿ ಯಾರು ಆಲಯಗಳನ್ನು ಕಟ್ಟಿಸಿದ್ದಾರೆ? ಎಲ್ಲಿ ಕಟ್ಟಿಸಿದ್ದಾರೆ? ಭಾಷಣಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು, ಈಕೆಗಾಗಿ ಕನ್ನಡಿಗರು ಏನು ಮಾಡಿದ್ದಾರೆ? ಯಾಕೆ ಭುವನೇಶ್ವರಿಯು
ಕನ್ನಡವನ್ನು, ಕನ್ನಡಿಗರನ್ನು ಹಾಗೂ ಕರ್ನಾಟಕವನ್ನು ರಕ್ಷಿಸಬೇಕು? ನಾನು ಚರ್ಚೆ ಮಾಡಿದ 100 ಜನ ಕನ್ನಡಿಗರಲ್ಲಿ 99 ಜನರಿಗೆ ನಿಖರ ಉತ್ತರವು ಗೊತ್ತಿಲ್ಲ. ವಾಸ್ತವದಲ್ಲಿ ಯಾರು ಈ ಭುವನೇಶ್ವರಿ?

ಪರಬ್ರಹ್ಮ: 8ನೆಯ ಶತಮಾನದಲ್ಲಿ ಶಂಕರಾಚಾರ್ಯರು ಭಾರತದಲ್ಲಿದ್ದ ಹಿಂದು ಧರ್ಮ ಎಂದು ಪ್ರಸಿದ್ಧವಾದ ಸನಾತನ
ಧರ್ಮವನ್ನು ಪರಿಪಾಲಿಸುತ್ತಿದ್ದವರಲ್ಲಿ ಐದು ಪಂಥಗಳನ್ನು ಗುರುತಿಸಿದ್ದರು. ಶಾಕ್ತಪಂಥ, ಶೈವಪಂಥ, ಸೌರಪಂಥ, ಗಾಣ ಪತೇಯ ಪಂಥ ಹಾಗೂ ವೈಷ್ಣವ ಪಂಥ. ಉಪನಿಷತ್ತುಗಳು ವರ್ಣಿಸುವ ಪರಬ್ರಹ್ಮ ವಾಸ್ತವದಲ್ಲಿ ನಮ್ಮ ಆದಿ ಪರಾಶಕ್ತಿ ಎಂದು
ಶಾಕ್ತರು, ಶಿವ ಎಂದು ಶೈವರು, ಸೂರ್ಯ ಎಂದು ಸೌರಿಗಳು, ಗಣಪತಿ ಎಂದು ಗಾಣಪತೇಯರು ಹಾಗೂ ವಿಷ್ಣು ಎಂದು
ವೈಷ್ಣವರು ವಾದ ವಿವಾದದಲ್ಲಿ ಮುಳುಗಿದ್ದರು.

ಇವರಲ್ಲಿ ಒಗ್ಗಟ್ಟಿಲ್ಲದ ಕಾರಣ, ಒಬ್ಬರನ್ನೊೊಬ್ಬರು ಖಂಡಿಸುವುದರಲ್ಲಿಯೇ ಮಗ್ನವಾಗಿದ್ದ ಕಾರಣ, ಜೈನ ಮತ್ತು ಬೌದ್ಧ ಧರ್ಮಗಳು ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿದವು. ಈ ಹಿನ್ನೆಲೆಯಲ್ಲಿ ಶಂಕರಾಚಾರ್ಯರು, ಹಿಂದುಗಳಲ್ಲಿ ಒಗ್ಗಟ್ಟನ್ನು ಸ್ಥಾಪಿಸುವ ದೃಷ್ಟಿಯಿಂದ ಪಂಚಾಯತನ ಪೂಜಾ ಪದ್ಧತಿಯನ್ನು ಜಾರಿಗೆ ತಂದರು. ಈ ಐವರು ದೇವತೆಗಳು ಒಂದೇ. ಬೇರೆ ಬೆರೆಯಲ್ಲ. ಪ್ರತಿಯೊಬ್ಬರು ಈ ಐದೂ ದೇವತೆಗಳನ್ನು ಮಾನ್ಯ ಮಾಡಬೇಕು, ಗೌರವಿಸಬೇಕು ಹಾಗೂ ಪೂಜಿಸಬೇಕು ಎಂದರು. ಇಷ್ಟದೇವತೆಯನ್ನು ಮಧ್ಯ ದಲ್ಲಿಟ್ಟು, ಉಳಿದ ನಾಲ್ಕು ದೇವತೆಗಳನ್ನು ನಾಲ್ಕು ಮೂಲೆಯಲ್ಲಿಟ್ಟು ಪೂಜಿಸುವ ಆಚಾರ್ಯರ ಪರಿಕಲ್ಪನೆಯು ಸ್ವಲ್ಪ ಮಟ್ಟಿಗೆ ವಿವಿಧ ಪಂಥಗಳ ನಡುವೆ ಇದ್ದ ಕಚ್ಚಾಟವನ್ನು ಕಡಿಮೆ ಮಾಡಿತಾದರೂ, ಅದು ಪೂರ್ಣ ಅಳಿಯಲಿಲ್ಲ.

ಹಾಗಾಗಿ ಪಂಚಾಯತನ ಪೂಜೆ / ಆಲಯಗಳು ಅಲ್ಲಲ್ಲಿ ಕಂಡುಬರುತ್ತವೆಯೇ ಹೊರತು, ಇದು ಇಡೀ ಭಾರತದಲ್ಲಿ ಜನಪ್ರಿಯ ವಾಗಲಿಲ್ಲ. ಕರ್ನಾಟಕದಲ್ಲಿ ಕೆಲವೇ ಕೆಲವು ಪಂಚಾಯತನ ದೇವಾಲಯಗಳಿವೆ. ಬೆಂಗಳೂರಿನ ಶ್ರೀಚಕ್ರನಗರದಲ್ಲಿ ಒಂದು ಶಿವ ಪಂಚಾಯತನ ಆಲಯ, ತುಮಕೂರಿನ ತುಂಬಾಡಿಯಲ್ಲಿ ಶಿವ ಪಂಚಾಯತನ ಆಲಯ, ಚೆನ್ನಗಿರಿ ತಾಲೂಕಿನ ಬಸವಾಪಟ್ಟಣ ದಲ್ಲಿ ಶಿವಪಂಚಾಯತನ ಆಲಯವಿದೆ. ಐಹೊಳೆಯ ಲಾಡಖಾನ್ ಆಲಯವೂ ಸಹ ಮೂಲತಃ ಶಿವಪಂಚಾಯತನ ಆಲಯ ಎನ್ನಲಾಗಿದೆ.

ತಂತ್ರಶಾಸ್ತ್ರ: ಶಾಕ್ತರು ಉಪನಿಷತ್ತುಗಳು ವರ್ಣಿಸುವ ಪರಬ್ರಹ್ಮನು ವಾಸ್ತವದಲ್ಲಿ ಆದಿ ಪರಾಶಕ್ತಿ ಎಂದು ಸಾರಿ ಅನೇಕ
ಪುರಾಣ ಗ್ರಂಥಗಳನ್ನು ಹಾಗೂ ಕಥೆಗಳನ್ನು ಬರೆದರು. ಅವುಗಳಲ್ಲಿ ತಂತ್ರಶಾಸ್ತ್ರವು ಒಂದು. ಈ ತಂತ್ರಶಾಸ್ತ್ರವು ಆದಿ ಪರಾ ಶಕ್ತಿಯ ಹತ್ತು ರೂಪಗಳನ್ನು ವರ್ಣಿಸುತ್ತದೆ. ಇವು ದಶ ಮಹಾವಿದ್ಯೆಗಳೆಂದು ಹೆಸರುವಾಸಿ ಯಾಗಿವೆ. ಕಾಳೀ, ತಾರಾ,
ಷೋಡಶೀ (ತ್ರಿಪುರ ಸುಂದರಿ), ಭುವನೇಶ್ವರೀ, ಛಿನ್ನಮಸ್ತ, ಭೈರವೀ, ಧೂಮವತಿ, ಬಗಲಾಮುಖಿ, ಮಾತಂಗಿ ಮತ್ತು ಕಮಲಾತ್ಮಿಕೆ. ಶಾಕ್ತರು ದೇವಿಯ ತಮ್ಮ ಇಚ್ಚೆಗೆ ಅನುಗುಣವಾಗಿ ದೇವಿಯ ನಿರ್ದಿಷ್ಟ ರೂಪವನ್ನು ಆರಾಧಿಸಿ ಸಿದ್ಧಿಗಳನ್ನು ಪಡೆಯುತ್ತಿದ್ದರು. ಹತ್ತು ರೂಪಗಳಲ್ಲಿ ನಾಲ್ಕನೆಯದು ಭುವನೇಶ್ವರಿ. ಹೀಗೆ ನಮ್ಮ ಭಾರತೀಯ ಪುರಾಣಗಳಲ್ಲಿ ಮೊದಲ ಬಾರಿಗೆ ಭುವನೇಶ್ವರಿಯ ಪ್ರಸ್ತಾಪ ದಶ ಮಹಾವಿದ್ಯೆಗಳ ಆರಾಧನೆಯಲ್ಲಿ ಕಂಡುಬರುತ್ತದೆ.

ಭುವನೇಶ್ವರಿ ಎಂದರೆ ಮೂರು ಲೋಕಗಳ ಒಡತಿ. ಮೂರು ಲೋಕಗಳೆಂದರೆ ನಮ್ಮ ಭೂಃ (ಭೂಮಿ), ಭುವಃ (ಆಕಾಶ) ಮತ್ತು ಸ್ವಃ (ಸ್ವರ್ಗ). ಹಾಗಾಗಿ ಭುವನೇಶ್ವರಿಯು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ದೇವತೆಯಲ್ಲ. ಭುವನೇಶ್ವರಿಯ ಪತಿ ಭುವನೇಶ್ವರ ಅಥವ ತ್ರಯಂಬಕ ಭೈರವ. ಭುವನೇಶ್ವರಿಯ ಬಣ್ಣ ಅಚ್ಚಕೆಂಪು. ಮೂರು ಕಣ್ಣುಗಳು. ಕೆಂಪು ಬಣ್ಣದ ಉಡುಪು. ಕೆಂಪು ಬಣ್ಣದ ಆಭರಣಗಳು. ಚತುರ್ಭುಜೆ. ಒಂದು ಕೈಯಲ್ಲಿ ಅಂಕುಶ, ಮತ್ತೊಂದು ಕೈಯಲ್ಲಿ ಪಾಶ. ಉಳಿದ ಎರಡು ಹಸ್ತಗಳಲ್ಲಿ ವರದ ಮತ್ತು ಅಭಯ ಮುದ್ರೆಗಳು. ಮೈತುಂಬಾ ರಕ್ತಚಂದನದ ಲೇಪನ. ತಾವರೆ ಹೂವುಗಳ ಮಾಲೆ. ಕಿರೀಟ. ಮುಡಿಯಲ್ಲಿ ಅರ್ಧಚಂದ್ರ ವಿರಾಜಮಾನ.

ಭುವನೇಶ್ವರಿಯು ಸಾಮಾನ್ಯವಾಗಿ ಭುವನೇಶ್ವರನ/ ತ್ರಯಂಬಕ ಭೈರವನ ಎಡ ತೊಡೆಯ ಮೇಲೆ ಆಸೀನಳು. ಭುವನೇಶ್ವರ ಅಥವ ತ್ರಯಂಬಕ ಭೈರವನ ಬಣ್ಣ ಅಚ್ಚಬಿಳಿ. ಮೂರು ಕಣ್ಣುಗಳು. ಐದು ಮುಖಗಳು. ಬಿಳಿಯ ಉಡುಪು ಮತ್ತು ಆಭರಣಗಳು. ಕೂದಲು ಜಡೆಗಟ್ಟಿವೆ. ಮುಡಿಯಲ್ಲಿ ಅರ್ಧ ಚಂದ್ರನಿದ್ದಾನೆ. ಗಂಗೆಯೂ ಇದ್ದಾಳೆ. ನಾಲ್ಕು ಕೈಗಳು. ಎರಡು ಕೈಗಳಲ್ಲಿ ತ್ರಿಶೂಲ ಮತ್ತು ಪರಶು. ಮತ್ತೆರಡು ಹಸ್ತಗಳಲ್ಲಿ ವರದ ಮತ್ತು ಅಭಯ ಮುದ್ರೆಗಳು. ಇವರಿಬ್ಬರು ಪಂಚ ಪ್ರೇತಾಸನದಲ್ಲಿ ಕುಳಿತಿರು ತ್ತಾರೆ.  ಪರಶಿವನೇ ಆಸನ ಪೀಠ.

ಸದಾಶಿವ, ಈಶ್ವರ, ರುದ್ರ, ವಿಷ್ಣು ಮತ್ತು ಬ್ರಹ್ಮ ಪ್ರೇತಾಸನದ ಐದು ಕಾಲುಗಳು. ಸುತ್ತಮುತ್ತಲೂ ನಾನಾ ಸೇವೆಗಳಲ್ಲಿ ತಲ್ಲೀನ ರಾಗಿರುವ ಯೋಗಿನಿಯರು. ಇದು ಭುವನೇಶ್ವರಿಯ ಸ್ಥೂಲ ವರ್ಣನೆ.

ಜಗತ್ ಸೃಷ್ಟಿಯಾದಾಗ ತ್ರಿದೇವರ ಸೃಷ್ಟಿಯಾಗಿರುತ್ತದೆ. ಬ್ರಹ್ಮ, ವಿಷ್ಣು ಮತ್ತು ರುದ್ರ. ಅವರಿಗೆ ತಾವು ಯಾರು, ತಮ್ಮನ್ನು ಸೃಷ್ಟಿಸಿ ದವರು ಯಾರು, ತಮ್ಮ ಕೆಲಸವೇನು ಎನ್ನುವುದು ತಿಳಿದಿರುವುದಿಲ್ಲ. ಆಗ ಒಂದು ಪ್ರಜ್ವಲ ರಥವು ಹಾರಿ ಬಂದು ಅವರ ಮುಂದೆ ನಿಲ್ಲುತ್ತದೆ. ಜೊತೆಗೆ ಗಂಭೀರ ಧ್ವನಿಯು ಮೊಳಗಿ ರಥವನ್ನೇರುವಂತೆ ಸೂಚಿಸುತ್ತದೆ. ಮೂವರು ರಥವನ್ನು ಏರುತ್ತಾರೆ. ಆ ರಥವು ಮನೋವೇಗದಲ್ಲಿ ಸಾಗುತ್ತದೆ. ಆ ರಥವು, ಅಮೃತ ಸಮುದ್ರದ ನಡುವೆ ಇರುವ ಒಂದು ಅಪರಿಚಿತ ರತ್ನಖಚಿತ ಮಣಿ ದ್ವೀಪದಲ್ಲಿ ಇಳಿಯುತ್ತದೆ.

ತ್ರಿದೇವರು ರಥದಿಂದ ಕೆಳಗೆ ಇಳಿಯುತ್ತಾರೆ. ಇಳಿಯುತ್ತಿದ್ದಂತೆಯೇ ಮೂವರು ಸ್ತ್ರೀಯರಾಗಿ ಪರಿವರ್ತನೆಯಾಗುತ್ತಾರೆ. ಅವರಿಗೆ ಬೆರಗಾಗುತ್ತಾರೆ. ಆ ದ್ವೀಪದಲ್ಲಿ ಮೂವರು ನಡೆಯುತ್ತಾ ಹೋದಾಗ, ಅಲ್ಲೊಂದು ‘ಶ್ರೀಪುರ ಎಂಬ ನಗರವು ಕಾಣುತ್ತದೆ. ಆ ನಗರವನ್ನು ಭೈರವರು, ಮಾತೃಕೆಯರು, ಕ್ಷೇತ್ರಪಾಲರು, ದಿಕ್ಪಾಲರು ಕಾಯುತ್ತಿರುತ್ತಾರೆ. ತ್ರಿದೇವರು ಆ ನಗರದೊಳಗೆ ಪ್ರವೇಶಿಸಿ,
ಹಾಗೆ ಮುಂದಕ್ಕೆ ನಡೆಯುತ್ತಾ ಹೋದಾಗ, ಅಲ್ಲಿ ‘ಚಿಂತಾಮಣಿಗೃಹ ಎಂಬ ಅರಮನೆಯು ಕಂಡಿತು. ಆ ಅರಮನೆಯನ್ನು ಯೋಗಿನಿಯರು ಕಾಯುತ್ತಿದ್ದರು.

ಒಳಗೆ ಪ್ರವೇಶಿಸಿದರು. ಅಲ್ಲಿ ಪಂಚಪ್ರೇತಾಸನದ ಮೇಲೆ ಭುವನೇಶ್ವರಿ ಯು ತನ್ನ ಪತಿ ತ್ರಯಂಬಕ ಭೈರವನೊಡನೆ ರಾರಾಜಿಸು ತ್ತಿದ್ದಳು. ಮಣಿದ್ವೀಪವು ಆದಿಪರಾಶಕ್ತಿಯ ಆವಾಸ ಸ್ಥಾನ. ಆಕೆಯು ಭುವನೇಶ್ವರಿಯ ರೂಪದಲ್ಲಿ ಚಿಂತಾಮಣಿ ಗೃಹದಲ್ಲಿರು ತ್ತಾಳೆ. ತ್ರಿದೇವರು ಭುವನೇಶ್ವರಿಯನ್ನು ಸಮಗ್ರವಾಗಿ ವೀಕ್ಷಿಸಿದರು.

ಕೊನೆಗೆ ಅವರ ದೃಷ್ಟಿಯು ದೇವಿಯ ಹೆಬ್ಬೆರಳ ಉಗುರಿನ ಮೇಲೆ ಕೇಂದ್ರೀಕೃತವಾಯಿತು. ಆ ಉಗುರಿನಲ್ಲಿ ಕೋಟಿಗಟ್ಟಲೆ ವಿಶ್ವ ಗಳನ್ನು ನೋಡಿದರು. ಪ್ರತಿಯೊಂದು ವಿಶ್ವದಲ್ಲಿಯೂ ತಮ್ಮ ಹಾಗೆಯೇ ಇರುವ ಅಸಂಖ್ಯ ತ್ರಿದೇವರನ್ನು ನೋಡಿದರು. ಸ್ತಂಬೀಭೂತರಾದ ತ್ರಿದೇವರು ದೇವಿಯ ಕಡೆ ನೋಡಿದರು.

ತ್ರಯಂಬಕನು ಎಲ್ಲ ವಿಶ್ವಗಳ ಅಸ್ತಿತ್ವಕ್ಕೆ ಕಾರಣನಾದ ಪರಬ್ರಹ್ಮನ ರೂಪದಲ್ಲಿ ಕಂಡನು. ಭುವನೇಶ್ವರಿಯು ಬ್ರಹ್ಮಶಕ್ತಿಯಾಗಿ
ಗೋಚರಿಸಿದಳು. ನೋಡಲು ಇಬ್ಬರಂತೆ ಕಂಡರೂ, ಇಬ್ಬರೂ ಸಮಗ್ರ ರೂಪದ ಎರಡು ಬಿಂಬಗಳು ಎಂದು ಅವರಿಗೆ ತೋರಿದವು. ಈ ಬ್ರಹ್ಮಾಂಡದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲು ಭುವನೇಶ್ವರಿಯು, ಭುವನೇಶ್ವರನಿಂದ ಮೂರು ರೂಪ ಗಳನ್ನು ಸೃಜಿಸಿ, ಅವರನ್ನು ಬ್ರಹ್ಮ, ವಿಷ್ಣು, ರುದ್ರ ಎಂದು ಕರೆದಳು. ನಂತರ ತನ್ನ ಒಡಲಿನಿಂದ ಸರಸ್ವತಿಯನ್ನು ಸೃಜಿಸಿ ಬ್ರಹ್ಮನಿಗೆ ನೀಡಿದಳು. ಲಕ್ಷ್ಮೀಯನ್ನು ಸೃಜಿಸಿ ವಿಷ್ಣುವಿಗೆ ಹಾಗೂ ಕಾಳಿಯನ್ನು ಸೃಜಿಸಿ ರುದ್ರನಿಗೆ ನೀಡಿದಳು. ಅಲ್ಲಿಂದ ಅವರು ತಮ್ಮ ತಮ್ಮ ಲೋಕಗಳಿಗೆ ಹೊರಟರು. ಬ್ರಹ್ಮ ಮತ್ತು ಸರಸ್ವತಿಯರು ಸೇರಿ ಬ್ರಹ್ಮಾಂಡ ಎಂಬ ಮೊಟ್ಟೆಯನ್ನು ರೂಪಿಸಿದರು. ರುದ್ರ ಮತ್ತು ಕಾಳಿಯು ಆ ಮೊಟ್ಟೆಯನ್ನು ಸೀಳಿದರು. ಆಗ ಮೊಟ್ಟೆಯಿಂದ ಪಂಚಭೂತಗಳು ಹೊರಬಂದವು. ಈ ಪಂಚಭೂತಗಳನ್ನು ಬಳಸಿ ಬ್ರಹ್ಮ ಮತ್ತು ಸರಸ್ವತಿ ವಿಶ್ವವನ್ನು, ವಿಶ್ವದಲ್ಲಿರುವ ಎಲ್ಲ ಚರಾಚರ ವಸ್ತುಗಳನ್ನು ಸೃಜಿಸಿದರು. ವಿಷ್ಣು ಮತ್ತು ಲಕ್ಷ್ಮೀಯರು ಈ ವಿಶ್ವವನ್ನು ಪರಿಪಾಲಿಸತೊಡಗಿದರು. ರುದ್ರ ಮತ್ತು ಕಾಳಿಯರು ಬ್ರಹ್ಮ – ಸರಸ್ವತಿಯರ ಸೃಷ್ಟಿಯನ್ನು ಸಕಾಲದಲ್ಲಿ ನಾಶಮಾಡ
ತೊಡಗಿದರು. ಆ ವಿನಾಶವನ್ನೇ ಬಳಸಿಕೊಂಡು ಬ್ರಹ್ಮ – ಸರಸ್ವತಿಯರು ವಿಶ್ವವನ್ನು ಹೊಸದಾಗಿ ಸೃಷ್ಟಿ ಮಾಡಿದರು.

ಈ ಎಲ್ಲ ಮಾಹಿತಿಯು ತ್ರಿದೇವರಿಗೆ ತಿಳಿಯಿತು. ತಮ್ಮನ್ನು ಸೃಜಿಸಿದ್ದು ಯಾರು, ತಮ್ಮ ತಮ್ಮ ಕೆಲಸವೇನು ಎನ್ನುವುದು
ಅವರಿಗೆ ಅರಿವಾಯಿತು. ವಾಸ್ತವ ದಲ್ಲಿ ಇಡೀ ಭುವನವನ್ನು ಸೃಜಿಸಿ, ನಡೆಸಿ, ನಾಶಗೊಳಿಸು ವವಳು ಭುವನೇಶ್ವರಿಯೇ ಎನ್ನು ವುದು ತ್ರಿಮೂರ್ತಿಗಳಿಗೆ ಮನದಟ್ಟಾಯಿತು.

ಆರಾಧನೆ: ಭುವನೇಶ್ವರಿಯ ಆರಾಧನೆಯ ಬಗ್ಗೆ ತಂತ್ರಶಾಸ್ತ್ರವು ವಿವರಿಸುತ್ತದೆ. ಈ ಆರಾಧನೆಯನ್ನು ಗುರುಮುಖೇನ ಕಲಿತು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಅತ್ಯಂತ ಸರಳ ವಿಧಾನವೆಂದರೆ ರಾತ್ರಿ 10 ಗಂಟೆಗೆ ಸ್ನಾನವನ್ನು ಮಾಡಬೇಕು. ಪೂರ್ವಾಭಿ ಮುಖವಾಗಿ ಕುಳಿತುಕೊಳ್ಳಬೇಕು.

ಮುಂದೆ ಮಣೆಯ ಮೇಲೆ ಭುವನೇಶ್ವರಿ ಯಂತ್ರವಿರಬೇಕು. ದೇಹವನ್ನು ಮಂತ್ರಪಠನದಿಂದ ಶುದ್ಧೀಕರಿಸಿಕೊಳ್ಳಬೇಕು. ಗುರು ವನ್ನು ಸ್ಮರಿಸಿ ಮಾನಸಿಕ ಪೂಜೆಯನ್ನು ಸಲ್ಲಿಸಿದ ನಂತರ ಯಂತ್ರವನ್ನು ಪೂಜಿಸಬೇಕು. ಕೊನೆಗೆ ಭುವನೇಶ್ವರಿಯ ಮಂತ್ರವನ್ನು 101 ಸಲ ಜಪಿಸಬೇಕು. ಓಂ ಹ್ರೀಂ ಓಂ ಎನ್ನುವುದು ಭುವನೇಶ್ವರಿಯ ಮಂತ್ರ. ಒಂಬತ್ತು ದಿನಗಳ ಕಾಲ ಭುವನೇಶ್ವರಿಯನ್ನು ಆರಾಧಿಸಬೇಕು. ನಂತರ ಯಂತ್ರಾದಿಗಳನ್ನು ನದಿಯಲ್ಲಿ ವಿಸರ್ಜಿಸಬೇಕು. ಭುವನೇಶ್ವರಿಯ ಕೃಪೆಗೆ ಪಾತ್ರರಾದವರಿಗೆ ಸಕಲ ಜೀವರಾಶಿಯನ್ನು ಆಕರ್ಷಿಸುವ ಅಪೂರ್ವ ತೇಜಸ್ಸು, ಸುಖಮಯ ಸಾಂಸಾರಿಕ ಬದುಕು, ಜಗತ್ಪ್ರಸಿದ್ಧಿ, ರೋಗಗಳು, ಶತ್ರುಗಳು ಹಾಗೂ ಅಕಾಲ ಮೃತ್ಯುವಿನಿಂದ ರಕ್ಷಣೆ, ಪ್ರಾಪಂಚಿಕ ಭೋಗ ಭಾಗ್ಯಗಳು ಹಾಗೂ ಇಷ್ಟಕಾಮ್ಯಗಳು ಪೂರ್ಣಗೊಳ್ಳುತ್ತವೆ.

(ಮುಂದುವರಿಯುವುದು)