Friday, 13th December 2024

ಕಸಾಪ ಸಾಗಿ ಬಂದ ಹಾದಿ ಸಾಮಾನ್ಯವಲ್ಲ

ಅವಲೋಕನ

ಸುರೇಶ ಗುದಗನವರ

ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1915ರಲ್ಲಿ ಸ್ಥಾಪಿಸ ಲಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನಿಂದಲೂ ಈ ಮಹಾಸಂಸ್ಥೆ ಅನೇಕ ವಿದ್ವಾಂಸರ, ನಾಡು ನುಡಿಯ ಅಭಿಮಾನಿ ಗಳ ಮತ್ತು ಸರಕಾರದ ಪ್ರೋತ್ಸಾಹ ಪಡೆದುಕೊಂಡು ಜನತೆಯಲ್ಲಿ ಹೊಸ ಹೊಸ ಉತ್ಸಾಹವನ್ನು ಭಾಷಾ ಅಭಿಮಾನವನ್ನೂ ತುಂಬುತ್ತಾ ಬಂದಿದೆ, ಅದರಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕರ್ನಾಟಕದ ಪ್ರಬಲ ಸಾಂಸ್ಕೃತಿಕ ಕೇಂದ್ರವಾಗಿದೆ.

ಕನ್ನಡ ಜನತೆ ಭಿನ್ನ – ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಮದ್ರಾಸು, ಮುಂಬೈ ಪ್ರಾಂತಗಳಿಗೆ ಹಾಗೂ ಮೈಸೂರು, ಹೈದ್ರಾಬಾದ್ ಸಂಸ್ಥಾನ ಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಸೇರಿದ್ದವು. ಬ್ರಿಟಿಷ್ ಇಂಡಿಯಾ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದ್ರಾಸು, ಮುಂಬೈ ಪ್ರಾಂತಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿಕಿರಿ ಯ ಸಂಸ್ಥಾನಗಳಿದ್ದವು. ಕೊಡಗು ಒಂದು ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿತ್ತು. ನಾಡಿನ ಬೇರೆ ಬೇರೆ ಭಾಗಗಳಲ್ಲಿದ್ದ ಅಭಿಮಾನಿಗಳು ಕನ್ನಡ ಭಾಷೆ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅವಶ್ಯಕತೆಯನ್ನು ಮನಗಂಡರು. ಈ ಹಿನ್ನೆಲೆಯಲ್ಲಿ ಭೌಗೋಳಿಕ ವಾಗಿ ಮತ್ತು ರಾಜಕೀಯ ವಾಗಿ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲು, ಕನ್ನಡ ಭಾಷೆ – ಸಂಸ್ಕೃತಿ ಗಳನ್ನು ಸಂರಕ್ಷಿಸಲು ನಾಡಿನ ಕನ್ನಡಾಭಿಮಾನಿಗಳು ಸಂಘಟಿತ ಪ್ರಯತ್ನ ಆರಂಭಿಸಿದರು.

ಸರ್.ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಪದಭ್ಯದಯ ಸಮಾಜವನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ನೀಡಿದರು. ಅದರ ಅಂಗವಾಗಿ ಕಾರ್ಖಾನೆ ಕೈಗಾರಿಕೆಗಳ ಸಮಿತಿ, ವಿದ್ಯಾಾ ಸಮಿತಿ, ಭೂ-ವ್ಯವಸಾಯ ಸಮಿತಿ ಎಂಬ ಮೂರು ಸಮಿತಿಗಳು ರಚನೆಯಾದವು. ಇದರಲ್ಲಿ ವಿದ್ಯಾ ಸಮಿತಿಯಲ್ಲಿ ಪರ್ಯಾಯಾಲೋಚನೆಗೆ ಬಂದ ಎರಡು ಯೋಜನೆಗಳು – ಮೈಸೂರು ವಿಶ್ವ ವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು. ಹೀಗಾಗಿ 1925 ಮೇ 3ರಂದು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ಸಮ್ಮೇಳನ ಜರುಗಿತು. ಕರ್ನಾಟಕದ ಎಲ್ಲಾ ಭಾಗಗಳಿಂದ ಮಾತ್ರವಲ್ಲದೇ ಮುಂಬೈ, ಮದ್ರಾಸ್ ನಗರಗಳಿಂದಲೂ ಸಾಹಿತಿಗಳು, ಕಲಾವಿದರು, ಸಾಂಸ್ಕೃತಿಕ ಚಿಂತಕರು, ಕನ್ನಡದ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಕ್ಷಣೆ ಸಂವರ್ಧನೆಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳ ಪ್ರತಿನಿಧಿಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಲಾ ಯಿತು.

ಮೇ 5, 1915ರಂದು ವಿಧಿವತ್ತಾಗಿ 113 ಜನ ಸದಸ್ಯರೊಡನೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಗೊಂಡಿತು. 1915 ರಿಂದ 1933 ರವರೆಗಿನ ಅವಧಿಯಲ್ಲಿ ಪರಿಷತ್ತು ಪ್ರಧಾನವಾಗಿ ಪಾಂಡಿತ್ಯ ಪರಿಪೋಷಣೆಯಲ್ಲಿ ಆಸಕ್ತವಾಗಿತ್ತು. ಪ್ರಾರಂಭದ ದಿನಗಳಲ್ಲಿ ಪರಿಷತ್ತಿಗೆ ಆರ್ಥಿಕವಾಗಿ ಬೆಂಬಲ ನೀಡಿದ ಮೈಸೂರು ಅರಸರ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ದಿವಾನ್ ಮಿರ್ಜಾ ಇಸ್ಮಾಯಿಲ್‌ರ ಜಾಣತನದಿಂದ ಸಾಹಿತ್ಯ ಪರಿಷತ್ತಿನ ಕಟ್ಟಡಕ್ಕೆ ಅನಾಯಾಸವಾಗಿ ದೊಡ್ಡದೊಂದು ಜಾಗ ಸಿಕ್ಕಿತು. ಸ್ವಾತಂತ್ರ್ಯ ಹೋರಾಟದ ಅನೇಕ ಕಾರ್ಯಕ್ರಮಗಳಿಗೆ ಸ್ಥಳವಾಗಿದ್ದ ಆ ಪ್ರದೇಶದಲ್ಲಿ ಪರಿಷತ್ತಿನ ಕಟ್ಟಡ ಎದ್ದು ನಿಂತಿತು. ಈ ಕಟ್ಟಡವು 1933ರಲ್ಲಿ ಶ್ರೀಕೃಷ್ಣರಾಜ ಪರಿಷನ್ಮಂದಿರವೆಂದು ನಾಮಕರಣವಾಗಿ ಲೋಕಾರ್ಪಣೆಗೊಂಡಿತು.

ಪಂಪ ಮಹಾಕವಿ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ, ಸಭಾಂಗಣ, ಗ್ರಂಥಾಲಯ ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಾರಂಭದಲ್ಲಿ 1938ರಲ್ಲಿ ಬಳ್ಳಾರಿಯಲ್ಲಿ ನಡೆದ 23ನೇ ಸಾಹಿತ್ಯ ಸಮ್ಮೇಳನದ ನಿರ್ಣಯದ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮಾರ್ಪಾಡುಗೊಂಡಿತು.

ಪರಿಷತ್ತಿನ ಪ್ರಾರಂಭವೂ ಸೇರಿದಂತೆ ಅದರ ಬೆಳವಣಿಗೆಯಲ್ಲಿ ಮೈಸೂರು ಸಂಸ್ಥಾನದ ಮಹಾರಾಜರ ಪಾತ್ರ ಮಹತ್ವದ್ದು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಕಂಠೀರವ ನರಸರಾಜ ಒಡೆಯರ್, ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್, ಕಾಂತಾರಾಜನ್ ಅರಸು ಇವರೆಲ್ಲರ ಉದಾರ ದೇಣಿಗೆ ಮತ್ತು ಆಸಕ್ತಿಯಿಂದ ಪರಿಷತ್ತು ಬೆಳೆದು ಬಂದಿತು. ಎಚ್. ನಂಜುಂಡಯ್ಯ ನವರ ಅಧ್ಯಕ್ಷತೆಯಲ್ಲಿ ಪ್ರಾರಂಭ ಗೊಂಡ ಪರಿಷತ್ 1920ರ ನಂತರ ಅಧ್ಯಕ್ಷ ಸ್ಥಾನ ಗೌರವ ಸ್ಥಾನವಾಗಿ ಚುನಾಯಿತ ಉಪಾ ಧ್ಯಕ್ಷರೇ ಕೆಲಸ ಕಾರ್ಯಗಳ ನಿರ್ವಹಣೆಯ ಜವಬ್ದಾರಿಯನ್ನು ಹೊರ ಬೇಕಾಗಿತ್ತು.

ರಾವ್ ಬಹದ್ದೂರ ಎಂ.ಶ್ಯಾಮರಾವ್, ಬೆಳ್ಳಾವೆ ವೆಂಕಟನಾರಣಪ್ಪ ಡಿ.ವಿ. ಗುಂಡಪ್ಪ, ಎ.ಆರ್.ಕೃಷ್ಣಶಾಸ್ತ್ರಿ, ತಿ.ತಾ. ಶರ್ಮ, ಮಾಸ್ತಿ ವೆಂಕಟೇಶ ಅಯ್ಯಂಗರ್ ಸೇರಿದಂತೆ ಅನೇಕ ಮೇಧಾವಿಗಳು ಕಾಲಕಾಲಕ್ಕೆ ಪರಿಷತ್ತಿನ ಬೆಳವಣಿಗೆಗೆ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ. ಡಿ.ವಿ.ಗುಂಡಪ್ಪನವರ ಕಾಲದಲ್ಲಿ ‘ಪರಿಷತ್ತಿನ ತೇರು’ ರಾಜಬೀದಿಗೆ ಬಂದಿತು ಎಂದು ಹಲವು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಬಿ.ಎಂ.ಶ್ರೀಕಂಠಯ್ಯನವರ ಕಾಲದಲ್ಲಿ – ಕನ್ನಡ ಬಾವುಟವನ್ನು ಏರಿಸಿ ಹಾರಿಸಿದ್ದು, ಕನ್ನಡ ಕಲಿಕೆಯ ಸಲುವಾಗಿ ಅಣಗು, ಕಾವ, ಜಾಣ ಎಂಬ ಮೂರು ಹಂತದ ಪರೀಕ್ಷೆಗಳನ್ನು ಆರಂಭಿಸಿದರ ಕೊಡುಗೆ ‘ಕನ್ನಡ ನುಡಿ’ ಪತ್ರಿಕೆ ಹುಟ್ಟಿನಲ್ಲಿಯೂ ಅವರ ಕೊಡುಗೆ ಮಹತ್ವದ್ದು, ಪರಿಷತ್‌ನ ಕಾರ್ಯಭಾರದ ರಥವನ್ನು ಎಳೆದ ಪ್ರತಿಯೋರ್ವರೂ ತಮ್ಮ
ಕಾಲಾವಧಿಯಲ್ಲಿ ತಮ್ಮದೇ ಆದ ಚಿಂತನೆ, ಕಾರ್ಯಶೈಲಿಯಲ್ಲಿ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ.

1956 – 64ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಬಿ.ಶಿವಮೂರ್ತಿ ಶಾಸ್ತ್ರಿಯವರು ವಿದ್ವಾಂಸರು ಮತ್ತು ಬರಹಗಾರರ ಸ್ವತ್ತು ಆಗಿದ್ದ ಪರಿಷತ್ತನ್ನು ಸ್ವಲ್ಪಮಟ್ಟಿಗೆ ಜನಸಮಾನ್ಯರ ಪ್ರವೇಶಕ್ಕೆ ತೆರೆದಿಟ್ಟರು. ನಂತರ ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಜಿ.ನಾರಾಯಣ (1964 – 78) ಹಾಗೂ ಹಂಪ ನಾಗರಾಜಯ್ಯ (1978 – 86). ಈ ಅವಧಿಯಲ್ಲಿ ಪರಿಷತ್ತಿನ ಸದಸ್ಯ ತ್ವದ ಬಾಗಿಲು ಕನ್ನಡ ಓದಲು, ಬರೆಯಲು ಬಲ್ಲ ಎಲ್ಲ ಕನ್ನಡಿಗರಿಗೂ ಮುಕ್ತವಾಗಿ ತೆರೆಯಲ್ಪಟ್ಟು ಪರಿಷತ್ತು ಕನ್ನಡಿಗರ ಪ್ರಾತಿ ನಿಧಿಕ ಸಂಸ್ಥೆಯಾಗಿ ರೂಪುಗೊಂಡಿತು. ಅದೇ ರೀತಿ ಸರಕಾರದಿಂದ ಧನ ಸಹಾಯ ಪಡೆಯುವಲ್ಲಿಯೂ ಯಶಸ್ವಿ ಯಾಯಿತು.

ಎಚ್.ಬಿ. ಜ್ವಾಲನಯ್ಯಾ, ಜಿ.ಎಸ್.ಸಿದ್ದಲಿಂಗಯ್ಯ, ಗೊ.ರು. ಚೆನ್ನಬಸಪ್ಪ, ಸಾ.ಶಿ. ಮರುಳಯ್ಯ, ಎನ್.ಬಸವಾರಾಧ್ಯ, ಹರಿಕೃಷ್ಣ ಪುನರೂರು, ಚಂದ್ರಶೇಖರ ಪಾಟೀಲ, ನಲ್ಲೂರ ಪ್ರಸಾದ ಆರ್.ಕೆ. ಮತ್ತು ಪುಂಡಲೀಕ ಹಾಲಂಬಿ ಅವರ ನೇತೃತ್ವದಲ್ಲಿ ಪರಿಷತ್ತು ತನ್ನ ಕಾರ್ಯ ಬಾಹುಳ್ಯವನ್ನು ವಿಸ್ತರಿಸಿಕೊಂಡಿದೆ. ನೂರೈದು ವರ್ಷ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಜನಸಾಮಾನ್ಯರೊಡನೆ ನೇರ ಸಂಬಂಧ ವನ್ನು ಹೊಂದಿದೆ. ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆೆ ಲಕ್ಷಾಂತರ ಜನ ಸೇರುವುದೇ ಇದಕ್ಕೆ ಅತ್ಯುತ್ತಮ ನಿದರ್ಶನ. ಪರಿಷತ್ತು ನಮ್ಮದು ಎಂಬ ಭಾವ ಕನ್ನಡಿಗರ ಮನಸ್ಸಿಗಿದೆ. ಇನ್ನು ಯಾವ ಸಮ್ಮೇಳನಗಳಿಗೂ ಪರಿಷತ್ತಿನ ಸಮ್ಮೇಳನಕ್ಕಿರುವ ಸಾಂಸ್ಕೃತಿಕ, ಸಾಮಾಜಿಕ ಮಹತ್ವವಿಲ್ಲ. ಇದರ ಮಹತ್ವವನ್ನು ಅರಿತೇ ಸರಕಾರ ಸಮ್ಮೇಳನದ ಸ್ವರೂಪದ ಮೇಲೂ ನಿಯಂತ್ರಣ ಸಾಧಿಸಿದೆ. ಪರಿಷತ್ತು ಇಂಥ ಅಧಿಕಾರ ಕೇಂದ್ರಗಳಿಂದ ರಕ್ಷಿಸಿಕೊಳ್ಳಬೇಕಾದುದು ತುರ್ತು
ಅಗತ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶಾಖೆಗಳು ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ರಾಜ್ಯದಾದ್ಯಂತ ಕಾರ್ಯ ನಿರ್ವಹಿಸು ತ್ತಿವೆ.

ಯಾವ ಸಂಸ್ಥೆಗೂ ಈ ಬಗೆಯ ವ್ಯಾಪಕ ಜಾಲವಿಲ್ಲ. ಈ ಎಲ್ಲಾ ಜಿಲ್ಲಾ ಶಾಖೆಗಳಿಗೂ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ಚುನಾವಣೆ ನಡೆದು ಜಿಲ್ಲಾಧ್ಯಕ್ಷರು ಆಯ್ಕೆಯಾಗುತ್ತಾರೆ. ಆಯ್ಕೆಯಾಗುವ ಜಿಲ್ಲಾಧ್ಯಕ್ಷರು ಅವರು ನೇಮಿಸಿಕೊಳ್ಳುವ ತಾಲೂಕು ಅಧ್ಯಕ್ಷರು, ಪ್ರತಿ ಜಿಲ್ಲೆ ಹಾಗೂ ತಾಲೂಕು ಹಂತದಲ್ಲಿ ಕಾರ್ಯಕಾರಿ ಸಮಿತಿ, ಪದಾಧಿಕಾರಿಗಳು ಹೀಗೆ ಸಾಹಿತ್ಯ ಪರಿಷತ್ತು ಎನ್ನುವುದು ರಾಜ್ಯದಲ್ಲಿ ಒಂದು ಬೃಹತ್ ವ್ಯವಸ್ಥೆಯಾಗಿ ರೂಪು ತಾಳಿದೆ. ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲ ವರ್ಷಗಳಿಂದ
ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾದದ್ದು ಇಲ್ಲವೇ ಇಲ್ಲ.

ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಈ ಸಂಸ್ಥೆ ಹಾಗೆ ನಡೆದುಕೊಂಡಿದ್ದು ಅಪರೂಪದಲ್ಲಿ ಅಪರೂಪ. ಚಾರಿತ್ರಿಕ ಮಹತ್ವದ ಈ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದವರು ಇತ್ತೀಚಿನ ದಿನಗಳಲ್ಲಿ ಅದರ ಘನತೆಗೆ ತಕ್ಕಂತೆ ವರ್ತಿಸದೇ ಇರುವುದಕ್ಕೂ ಸಾಕ್ಷಿಯಾಯಿತು. ಸರಕಾರದಿಂದ ಅನುದಾನಗಳು ಹೇರಳವಾಗಿ ಬರತೊಡಗಿದಂತೆ ಪರಿಷತ್ತಿನ ಜತೆಗೆ ರಾಜಕರಣಿಗಳ ನಂಟು ಬೆಳೆಯ ತೊಡಗಿರುವುದು ವಿಪರ್ಯಾಸ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಾಜಕೀಯ ಸೇರಿ ಕಲುಷಿತಗೊಂಡಿರುವುವುದು ನಿಜಕ್ಕೂ ಅಚ್ಚರಿಯೇ ಸರಿ.

ಆದರೆ ಅದು ಹೆಚ್ಚಾಗುತ್ತಲೇ ನಡೆದಿರುವುದು ವಿಪರ್ಯಾಸ. ಉಡುಪಿಯ ಕೋಟದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ
ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಅಧ್ಯಕ್ಷರ ಆಡಳಿತಾವಧಿಯನ್ನು 3 ರಿಂದ 5 ವರ್ಷಗಳಿಗೆ ಏರಿಸುವ ತಿದ್ದುಪಡಿ ವಿಧೇಯಕ ವನ್ನು ಅಧ್ಯಕ್ಷ ಮನು ಬಳಿಗಾರವರು ಬಹುಮತದಿಂದ ಅಂಗೀಕಾರಗೊಂಡಿದೆ ಎಂದು ಸಮರ್ಥಿಸಿಕೊಂಡ ಸಂಗತಿಗೂ ಕಸಾಪ ಸಾಕ್ಷಿಯಾಯಿತು. ಸಾಹಿತ್ಯ ಪರಿಷತ್ತಿನ ಇತಿಹಾಸ ಪರಂಪರೆಗೆ ‘ಕಪ್ಪು ಚುಕ್ಕೆ’ಯಾಗಿ ಪರಿಣಮಿಸಿತು.

ಹಾಗಾಗದಿದ್ದರೆ ಈ ಹಿಂದೆಯೇ ಚುನಾವಣೆ ನಡೆದು ಎರಡು ವರ್ಷ ಕಳೆಯಬೇಕಿತ್ತು. ಈಗ ಮತ್ತೆ ಕನ್ನಡ ಸಾಹಿತ್ಯ ಪರಿಷತ್
ಚುನಾವಣೆಗೆ ತಾಲೀಮು ತೆರೆಮರೆಯಲ್ಲೇ ಪ್ರಾರಂಭಗೊಂಡಿದೆ. ಕಸಾಪದಲ್ಲಿ ಪ್ರಸಕ್ತ 3 ಲಕ್ಷಕ್ಕಿಂತಲೂ ಹೆಚ್ಚು ಸದಸ್ಯರಿದ್ದು ಚುನಾವಣೆ ವೇಳೆಗೆ 4 ಲಕ್ಷಕ್ಕೆ ತಲುಪಲೂಬಹುದು. ಪ್ರಾರಂಭದಿಂದಲೂ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ವಾರ್ಷಿಕ ಸಮ್ಮೇಳನ ನಡೆಸುವ ಪರಿಪಾಠ ಇಟ್ಟುಕೊಂಡಿದೆ. ಆರಂಭದ ದಿನಗಳಲ್ಲಿ ಪರಿಷತ್ತಿನ ಅಧ್ಯಕ್ಷರೇ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುತ್ತಿದ್ದರು. ಕೆಲ ವರ್ಷಗಳ ನಂತರ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಸಾಹಿತಿ ಲೇಖಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಗೆ ಬಂದಿತು. ಇಲ್ಲಿಯವರೆಗೆ ಜರುಗಿದ ಸಮ್ಮೇಳನಗಳ ಅಧ್ಯಕ್ಷರ ಪಟ್ಟಿಯನ್ನು ಅವಲೋಕಿಸಿದರೆ ನಾಲ್ವರು ಮಹಿಳೆಯರು ಮಾತ್ರ ಅಧ್ಯಕ್ಷ ಪದವಿಯನ್ನು ಅಲಂಕರಿಸುವುದು ಗೊತ್ತಾಗುತ್ತದೆ.

1972ರಲ್ಲಿ ಮಂಡ್ಯದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ಜಯದೇವಿ ತಾಯಿ ಲಿಗಾಡೆ 1999ರಲ್ಲಿ ಬಾಗಲಕೋಟೆಯಲ್ಲಿ ನಡೆದ ಸಮ್ಮೇಳನದಲ್ಲಿ ಲೇಖಕಿ ಶಾಂತಾದೇವಿ ಮಾಳವಾಡ, 2003ರಲ್ಲಿ ಮೂಡಬಿದರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕಮಲಾ ಹಂಪನಾ ಮತ್ತು 2010 ರಲ್ಲಿ ಗದಗದಲ್ಲಿ ನಡೆದ ಸಮ್ಮೇಳನದಲ್ಲಿ ಗೀತಾ ನಾಗಭೂಷಣರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಾಗೆಯೇ, ಪ್ರಸ್ತುತ 30 ಜಿಲ್ಲೆಗಳಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರ ಪಟ್ಟಿಯಲ್ಲಿ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಾತ್ರ
ಮಹಿಳೆಯರಿದ್ದಾರೆ. ಇಂತಹವರ ಮಧ್ಯೆ ಅಪರೂಪವೆಂಬಂತೆ ಒಲಿದು ಬಂದ ಹಾಸನ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕವಯತ್ರಿ ರೂಪ ಹಾಸನ ಅವರು ತಿರಸ್ಕರಿಸಿದ್ದಾರೆ. ಪರಿಷತ್ತು ತನ್ನ ಉದ್ದೇಶಗಳನ್ನೇ ಮರೆತಿದೆ
ಎನ್ನುವುದು ಅವರೊಳಗಿನ ಬೇಸರವಾಗಿದೆ. ಅಲ್ಲದೇ ಕಸಾಪದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ ಎನ್ನುವುದನ್ನೂ ಕೇಳಿದ್ದೇನೆ. ಈ ದಿಶೆಯಲ್ಲಿ ಸಹೋದರಿ ರೂಪ ಹಾಸನ ಅವರ ಧೈರ್ಯವನ್ನು ಮೆಚ್ಚಲೇಬೇಕು.

ಶತಮಾನ ಗತಿಸಿದರೂ ಮಹಿಳೆಯೊಬ್ಬರು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಭಾಜನರಾಗದಿರುವುದು ಶೋಚನೀಯ ಸಂಗತಿ. ಕಸಾಪ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಘಟಾನು ಘಟಿಗಳು ಸ್ಪರ್ಧಿಸಲು ಸದ್ದಿಲ್ಲದೇ ಅಣಿಯಾಗುತ್ತಿರುವುದು ಕಂಡು ಬಂದಿದೆ. ಮಹೇಶ್ ಜೋಶಿ, ಮಹಾದೇವ ಪ್ರಕಾಶ, ಸಿ.ಸೋಮಶೇಖರ, ಸಿ.ಕೆ.ರಾಮೇಗೌಡ, ಶೇಖರಗೌಡ ಮಾಲಿಪಾಟೀಲ ಮುಂತಾದವರು ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯೊಬ್ಬರು ಅಧ್ಯಕ್ಷರಾದರೇ? ಎಂಬ ಚರ್ಚೆ, ಸಂವಾದ ಜೋರಾಗಿಯೇ ನಡೆಯುತ್ತಿದೆ. ನಿಜಕ್ಕೂ ಅಪರೂಪಕ್ಕೆ ಪರಿಷತ್ತು ಧನಾತ್ಮಕ ಕಾರಣಕ್ಕಾಗಿ ಚರ್ಚೆಗೆ ಒಳಗಾಗಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಸಮ್ಮೇಳನ ಗಳಲ್ಲಿ ಮಹಿಳೆಯರು ಕೇವಲ ಕುಂಭಗಳನ್ನು ಹೊರುವುದಕ್ಕೆ ಮಾತ್ರ ಮೀಸಲಾಗಬಾರದು.

ಇದಕ್ಕೆ ನನ್ನ ಬಲವಾದ ವಿರೋಧವಿದೆ. ಇಂತಹ ಸಂದರ್ಭದಲ್ಲಿ ಆದರ್ಶರಾಗಿ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದು ಒಳಿತು. ಸಾರ್ವಜನಿಕ ಹುದ್ದೆಗಳಲ್ಲಿ ಅಧಿಕಾರ ನಡೆಸಿದ ಅನುಭವ ಹೊಂದಿದ, ಸಾಹಿತ್ಯದ ಆಸಕ್ತಿ ಮತ್ತು ಬರವಣೆಗೆಯಲ್ಲಿ ಆಸಕ್ತಿಯಿರುವ ಮಹಿಳೆಯರು ಪರಿಷತ್ತಿನ ಅಧ್ಯಕ್ಷತೆ ವಹಿಸುವುದು ಸೂಕ್ತ. ಇನ್ಪೋಸಿಸ್ ಸಂಸ್ಥೆಯ ಸುಧಾಮೂರ್ತಿ, ವೈದೇವಿ, ಬಿ.ಟಿ. ಲಲಿತಾ ನಾಯಕ, ಪ್ರತಿಭಾ ನಂದಕುಮಾರ, ಎಚ್.ಎಸ್.ಅನುಪಮಾ, ವೀಣಾ ಶಾಂತೇಶ್ವರ, ಹೇಮಾ ಪಟ್ಟಣಶೆಟ್ಟಿ,
ಎಚ್.ಎಲ್ ಪುಷ್ಪ, ಮಲ್ಲಿಕಾ ಘಂಟಿ ಕೆ.ನೀಲಾ, ಆರ್. ಪೂರ್ಣಿಮಾ, ಗುರುದೇವಿ ಹುಲೆಪ್ಪನವರಮಠ ಸೇರಿದಂತೆ ಸಾಕಷ್ಟು ಮಹಿಳಾ ಸಾಹಿತಿಗಳು ಸಮರ್ಥವಾಗಿ ಆಡಳಿತ ನಿರ್ವಹಿಸುವವರೂ ಇದ್ದಾರೆ.

ಒಟ್ಟಿನಲ್ಲಿ ಇದೊಂದು ಅವಕಾಶವೆಂದು ತಿಳಿದುಕೊಂಡು ಮಹಿಳೆಯರನ್ನು ಅವಿರೋಧವಾಗಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
ಮಾಡುವುದು ಸೂಕ್ತ. ಒಟ್ಟಾರೆ ಕನ್ನಡಿಗರ ಸಬಲೀಕರಣ ಅಂದರೆ ಕನ್ನಡಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಆತ್ಮಶಕ್ತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಹಲವಾರು ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಂಡು ನಾಡಿನಾದ್ಯಂತ ಕನ್ನಡದ ಕಂಪು ಮತ್ತಷ್ಟು ಹರಡುವಂತೆ ನೋಡಿಕೊಳ್ಳುವ ಜವಬ್ದಾರಿ ಕಸಾಪದ ಮೇಲೆ ಇದೆ. ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸುವುವರು ಇಚ್ಛಾಶಕ್ತಿ, ಸಂಕಲ್ಪ ಬಲ ಪ್ರಕಟಿಸಿದ್ದೇ ಆದಲ್ಲಿ ಪರಿಷತ್ತು ಒಂದು ಪ್ರಬಲ ಜನದನಿಯಾಗಬಲ್ಲದು, ಸಂಸ್ಕೃತಿ –
ಸೃಜನಶೀಲತೆಯ ಕೇಂದ್ರವಾಗಬಲ್ಲದು.