ಪ್ರಚಲಿತ
ವಿಕ್ರಮ ಜೋಶಿ
ಪ್ರತಿಭಟನೆಗೆ ಯಾವುದೇ ಒಂದು ರೂಪವಿಲ್ಲ. ನೀರಿನ ಹಾಗೆ ಅದು. ಅದಕ್ಕೆ ಬಣ್ಣವಿಲ್ಲ, ವಾಸನೆಯಿಲ್ಲ, ರುಚಿಯಿಲ್ಲ, ಜಾತಿ,ಮತ,
ಪಂಥ ಎನ್ನುವುದಿಲ್ಲ. ಸಮಾಜಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ.
ನಮ್ಮಲ್ಲಿ ಹೋರಾಟ ಅಂತ ಫ್ಯಾಕ್ಟರಿಗಳನ್ನು ಬಂದ್ ಮಾಡಿದರೆ, ಕೆಲವೆಡೆ ಹೆಚ್ಚು ಉತ್ಪಾದನೆ ಮಾಡಿ ಮಾರಲಾರದಷ್ಟು ರಾಶಿ ಹಾಕುತ್ತಾರೆ. ಒಂದಿಷ್ಟು ಜನ ಬಟ್ಟೆ ತೊಟ್ಟು ಪ್ರತಿಭಟನೆ ನಡೆಸಿದರೆ ಇನ್ನಷ್ಟು ಜನ ಬಟ್ಟೆ ಇಲ್ಲದೆ ಬೀದಿಗಿಳಿಯುತ್ತಾರೆ. ರಸ್ತೆಯ ಮೇಲೆ ಹಾಲು ಚೆಲ್ಲಿ, ತರಕಾರಿಗಳನ್ನು ತೋಡಿ, ಕೋಳಿ-ಕುರಿಗಳನ್ನು ಕಡಿದು ಆಕ್ರೋಶ ತೋರಿಸಿದರೆ ರಸ್ತೆಯ ಪಕ್ಕದಲ್ಲಿ ತಿಂಗಳು ಗಟ್ಟಲೆ ಕೋಟ್ಯಂತರ ಜನ ನಡೆದು ತಮ್ಮ ಬೇಡಿಕೆಯನ್ನು ಇಡುತ್ತಾರೆ. ವಿರೋಧಿಸಲೂ ಅದೆಷ್ಟು ಬೇರ ಬೇರೆ ರೀತಿಗಳಿವೆ. ಹೊರಗೆ ಬಂದು ಶಾಂತಿಯುತ ಹೋರಾಟ ಮಾಡಬಹುದು, ವಿಧ್ವಂಸಕ ಕೃತ್ಯ ಎಸಗಿ ವಿರೋಧ ವ್ಯಕ್ತಪಡಿಸಬಹುದು, ಉಪವಾಸ
ಸತ್ಯಾಗ್ರಹ, ಬರಹ, ಭಾಷಣ ಇಲ್ಲವೇ ಹೊಸ ಯುಗದಲ್ಲಿ ಸೋಷಿಯಲ್ ಮೀಡಿಯಾ ಇದ್ದೇ ಇದೆ.
ಇವೆಲ್ಲದಕ್ಕಿಂತ ಇತ್ತೀಚೆಗೆ ಹಾಂಗ್ಕಾಂಗ್ನಲ್ಲಿ ಜನರು ನಡೆಸಿದ ಹೋರಾಟ ಕೊಂಚ ವಿಭಿನ್ನವೇ ಆಗಿತ್ತು. ಜಗತ್ತು ಎಂದೂ ಕೇಳರಿಯದ ರೀತಿಯ ಪ್ರತಿಭಟನೆ! ಐವತ್ತು ವರ್ಷಗಳ ತನಕ ಆಂತರಿಕ ವಿಷಯದಲ್ಲಿ ಚೀನಾ ಮೂಗು ತೂರಿಸಬಾರದು ಎನ್ನುವ ಷರತ್ತಿಗೆ ಒಪ್ಪಿಯೇ 1997ರಲ್ಲಿ ಆಂಗ್ಲರು ಹಾಂಗ್ಕಾಂಗ್ನ್ನು ಚೀನಾದ ಕೈಗೆ ಒಪ್ಪಿಸಿದ್ದರು. ಚೀನಾಕ್ಕೆ ಎಲ್ಲಿದೆ ಅಷ್ಟು ಸಂಯಮ. ಸ್ವಲ್ಪ ಸ್ವಲ್ಪ ಅಂತ ತಮ್ಮ ಬುದ್ಧಿಯನ್ನು ತೋರಿಸಲು ಶುರು ಮಾಡಿಯೇ ಬಿಟ್ಟರು. ಬ್ರಿಟಿಷರು ಬಿಟ್ಟು ಹೋದ ನಂತರ ಎರಡೇ ದಶಕಗಳಲ್ಲಿ ಏಷ್ಯಾದ ಹಣಕಾಸಿನ ಕೇಂದ್ರಬಿಂದುವಾಗಿ ಹೊರಹೊಮ್ಮಿತು ಹಾಂಗ್ಕಾಂಗ್. ಅಲ್ಲಿರುವ ಜನರಿಗೆ ಹಣ ಬಿಟ್ಟರೆ
ಮತ್ತೇನು ಗೊತ್ತಿಲ್ಲವೋ ಎಂಬಂತೆ ಗಲ್ಲಿ ಗಲ್ಲಿಯಲ್ಲಿ ಹಣಕಾಸಿನ ಸಂಸ್ಥೆಗಳು.
ಭೂಮಿ, ಕಟ್ಟಡಗಳ ಬೆಲೆಯಂತೂ ಕೇಳುವುದೇ ಬೇಡ. ಬಂಗಾರದ ಅರಮನೆಯಲ್ಲಿ ಕಟ್ಟಿಟ್ಟ ಜಿಂಕೆಗೆ ಹೊರಗೆ ಓಡಾಡುವ ಮನಸ್ಸಾದಂತೆ ಅಲ್ಲಿಯ ನಿವಾಸಿಗಳಿಗೆ ಸಂಪೂರ್ಣ ಪ್ರಜಾಪ್ರಭುತ್ವದ ಆಸೆಯುಂಟಾಯಿತು. ಅಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದೆ, ವಾಕ್ ಸ್ವಾತಂತ್ರ್ಯ ಇದೆ ನಿಜ ಆದರೆ ಮುಕ್ತ ಪ್ರಜಾಪ್ರಭುತ್ವ ಇರಲಿಲ್ಲ. ಬೀಜಿಂಗ್ ನಿಂದಲೇ ಜನಪ್ರತಿನಿಧಿಗಳ ಮುಖ್ಯಸ್ಥರು ಆರಿಸಿ
ಬರುತ್ತಿದ್ದರು. ಒಂದು ದೇಶ ಎರಡು ನೀತಿ ಎನ್ನುವುದು ಇತ್ತೀಚೆಗೆ ಕೇವಲ ಕಾಗದದ ಮೇಲೆ ಎಂಬಂತೆ ವಾತಾವರಣ ಸೃಷ್ಟಿ ಯಾಯಿತು. ಇದನ್ನು ವಿರೋಧಿಸಿ ಜನರು ತಮ್ಮ ವಿರೋಧವನ್ನು ವ್ಯಕ್ತಪಡಿಸಲಾರಂಭಿಸಿದರು.
ಇದು ಚೀನಾದ ಮುಖ್ಯಭೂಭಾಗವನ್ನು ಕಂಪಿಸಿತು. ಇನ್ನು ತಡ ಮಾಡಿದರೆ ಆಗುವುದಿಲ್ಲ ಎಂದು ಹೊಸದೊಂದು ಕಾಯಿದೆ ತಂದರು. ಅದೇ ಹಾಂಗ್ಕಾಂಗ್ ನ್ಯಾಷನಲ್ ಸೆಕ್ಯುರಿಟಿ ಲಾ. ಸರಕಾರದ ನೀತಿಯ ವಿರುದ್ಧ ದನಿ ಎತ್ತಿದರೆ, ದೇಶದ ಸಾರ್ವ
ಭೌಮತ್ವಕ್ಕೆ ಧಕ್ಕೆ ಬರುವಂತಹ ನಡೆ ಇಟ್ಟರೆ ಅವರನ್ನು ಹಾಂಗ್ಕಾಂಗ್ನಿಂದ ಗಡಿಪಾರು ಮಾಡುವುದು ಆ ಕಾಯಿದೆಯ ಸಾರಾಂಶ. ಇದು ಅಲ್ಲಿನ ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಏಟು ಕೊಟ್ಟ ಹಾಗೆ. ಇದಾದ ನಂತರ ಅಲ್ಲಿಯ ಪ್ರಜಾಪ್ರಭುತ್ವ ಪರ ನಿಂತಿದ್ದ ಹತ್ತಾರು ಜನ ಪ್ರತಿನಿಧಿಗಳನ್ನು ಬೀಜಿಂಗ್ ಹಾಂಗ್ ಕಾಂಗ್ ಸಂಸತ್ತಿನಿಂದ ಉಚ್ಚಾಟನೆ ಮಾಡಿದೆ.
ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಹಾಂಗ್ ಕಾಂಗ್ ನಲ್ಲಿ ಕೋಮಾದಲ್ಲಿದ್ದ ಪ್ರಜಾಪ್ರಭುತ್ವ ಇಂದು ಸತ್ತೇ ಹೋಗಿದೆ. ಇನ್ನು ಅಲ್ಲಿ ಸರಕಾರವನ್ನು ವಿರೋಧಿಸಿ ಯಾವುದೇ ರ್ಯಾಲಿ ನಡೆಸುವಂತಿಲ್ಲ. ಹಾಗೇನಾದರೂ ನಡೆದರೆ ಅವರನ್ನು ಬಂಧಿಸಲಾಗು ತ್ತದೆ. ಎಲ್ಲಿ, ಯಾವ ಶಿಕ್ಷೆ, ಯಾಕೆ ಎನ್ನುವ ಪ್ರಶ್ನೆ ಏಳುವುದಕ್ಕೂ ಮುನ್ನ ಆ ವ್ಯಕ್ತಿ ಮಾಯವಾಗಿರುತ್ತಾನೆ. ಈ ಸನ್ನಿವೇಶದ ನಡುವೆ
ಹಾಂಗ್ ಕಾಂಗ್ ನಲ್ಲಿಯ ಅತ್ಯಂತ ಜನಪ್ರಿಯ, ಶ್ರೀಮಂತ ವ್ಯಕ್ತಿಯನ್ನು ಬಂಧಿಸಲಾಗುತ್ತದೆ.
ಇಷ್ಟು ದಿನ ಹಾಂಗ್ಕಾಂಗ್ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ಮತ್ತು ಸಿಪಿಸಿ (ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ) ನಾಯಕತ್ವ ವಿರೋಧಿಸಿದವರನ್ನು ಬಂಧಿಸುತ್ತಿದ್ದವರು. ಒಂದು ದಿನ ರಾತ್ರೋ ರಾತ್ರಿ ಅಲ್ಲಿನ ಮೀಡಿಯಾ ಟೈಕೂನ್ ಜಿಮ್ಮಿ ಲೈರನ್ನು ಪೋಲಿಸರು ಬಂಧಿಸಿಬಿಟ್ಟರು. 71 ವರ್ಷದ ವ್ಯಕ್ತಿಗೆ ಎಷ್ಟು ಕಿರುಕುಳ ಕೊಟ್ಟಿರಬಹುದು? ಅಲ್ಲಿಯ ಜನರಿಗೆ ಇದು ಸಹಿಸಲಾಗಲಿಲ್ಲ. ಅದಕ್ಕಾಗಿ ಅವರು ಹೊಸದೊಂದು ತಂತ್ರಗಾರಿಕೆಯನ್ನು ಹೆಣೆದರು.
ಜಿಮ್ಮಿ ಲೈ ಅವರ ಮೂಲ ಹೆಸರು ಯೀ ಚಿಂಗ್ ಲೀ. ಇವರು ಚಿಕ್ಕಂದಿನಲ್ಲೇ ಚೀನಾದಿಂದ ಓಡಿ ಬಂದವರು. ಶ್ರೀಮಂತ ತಂದೆ ತಾಯಿಯ ಮುದ್ದಿನ ಮಗ ಜಿಮ್ಮಿ ಲಾಯ್. ಬುದ್ಧಿ ಬಂದಿರದ ಸಮಯ ಆಗಲೇ ಅವರ ಪರಿವಾರ ಮಾವೋರವರ ಕಮ್ಯುನಿಸ್ಟ್ ನೀತಿಯ ತಾಂಡವಕ್ಕೆ ತತ್ತರಿಸಿ ಹೋಯಿತು. ತಂದೆ ಜೀವ ಉಳಿಸಿಕೊಳ್ಳಲು ಸಾಲ ಮಾಡಿಕೊಂಡು ಹಾಂಗ್ ಕಾಂಗ್ಗೆ ಓಡಿ ಹೋಗುತ್ತಾರೆ – ಅಲ್ಲಿಂದ ಇವರ ಸಂಪರ್ಕವೇ ಇಲ್ಲ. ಇವರ ತಾಯಿಯನ್ನು ಕಾರ್ಮಿಕರ ಕ್ಯಾಂಪಿನಲ್ಲಿ ಒತ್ತಾಯಪೂರ್ವಕವಾಗಿ ಭರ್ತಿ ಮಾಡಲಾಗುತ್ತದೆ. ಇಬ್ಬರು ಅಣ್ಣಂದಿರನ್ನು ಮಾವೋ ಸರಕಾರ ಶಾಲೆಗೆ ಕಳಿಸುತ್ತದೆ. ಉಳಿದಿದ್ದು ಲೈ, ಅವರ ಅವಳಿ ಸಹೋದರಿ ಹಾಗೆ ಒಂಬತ್ತು ವರ್ಷದ ಅಕ್ಕ.
ತಾಯಿಗೆ ವಾರಕ್ಕೊಮ್ಮೆ ಮಕ್ಕಳನ್ನು ನೋಡಲು ಮನೆಗೆ ಬರುವ ಅವಕಾಶವಿತ್ತು ಅಷ್ಟೇ. ಎಷ್ಟೊಂದು ಕ್ರೂರ ಆ ಕಮ್ಯುನಿಸ್ಟ್ ನೀತಿ. ತಬ್ಬಲಿ ಮಕ್ಕಳು ತಮ್ಮ ಆಹಾರವನ್ನು ತಾವೇ ಬೇಯಿಸಿಕೊಳ್ಳುತ್ತಿದ್ದರು, ಕೆಲವೊಮ್ಮೆ ಊಟಕ್ಕೆ ಗತಿ ಇಲ್ಲದಿರುವಾಗ ಹೊರಗಡೆಗೆ ಕೆಲಸಕ್ಕೆ ಹೋಗುತ್ತಿದ್ದರು. ಒಂದು ದಿನ ಎರಡು ಕಾಸಿಗೆ ಕೂಲಿ ಕೆಲಸ ಮಾಡುತ್ತಿರುವಾಗ ಲೈ ಅವರಿಗೆ ಹಾಂಗ್ಕಾಂಗ್
ನಿಂದ ಬಂದಿದ್ದ ಒಬ್ಬ ವ್ಯಕ್ತಿ ಭೇಟಿಯಾಗುತ್ತಾರೆ. ಅವರ ಲಗೇಜ್ ಹೊತ್ತುಕೊಂಡು ಬಂದಿದ್ದಕ್ಕಾಗಿ ಇವರ ಕೈಯಲ್ಲಿ ಎರಡು ಕಾಸು ಭಕ್ಷೀಸು ಮತ್ತು ತಾನು ಅರ್ಧ ತಿಂದು ಉಳಿದಿದ್ದ ಎಂಜಲು ಚಾಕೊಲೇಟ್ ಕೊಡುತ್ತಾರೆ.
ಹನ್ನೆರಡು ವರ್ಷ ವಯಸ್ಸಿನ ಹುಡುಗ ಅದೇ ಮೊದಲು ಬಾರಿಗೆ ಚಾಕೊಲೇಟ್ ರುಚಿ ನೋಡಿದ್ದ. ಲೈ ಅವರಿಗೆ ಭೂಮಿಯ ಮೇಲೆ
ಸ್ವರ್ಗ ಇರುವುದು ಹಾಂಗ್ಕಾಂಗ್ನಲ್ಲಿಯೇ ಅನಿಸಿಬಿಡುತ್ತದೆ. ಅಲ್ಲಿಂದ ತಂದ ಚಾಕೊಲೇಟ್ ಇಷ್ಟು ರುಚಿ ಇರಬೇಕಾದರೆ ಆ ಜಾಗ ಎಷ್ಟು ಸುಂದರವಿರಬೇಕು ಎನ್ನುವ ಕಲ್ಪನೆ ಕಣ್ಣನ್ನು ಕಟ್ಟುತ್ತದೆ. ತಾಯಿಯೊಡನೆ ಮಾತಾಡಿ ಮಕಾವುಗೆ ಹೋಗುತ್ತಾರೆ, ಅಲ್ಲಿಂದ
ಮೀನು ಹಿಡಿಯುವ ನಾವೆಯಲ್ಲಿ ಕೂತು ಹಾಂಗ್ ಕಾಂಗ್ಗೆ ಪರಾರಿ. ಅಲ್ಲಿ ಒಬ್ಬ ಬಾಲ ಕಾರ್ಮಿಕನಾಗಿ ಬಟ್ಟೆಯ ಮಿಲ್ನಲ್ಲಿ ಕೆಲಸ ಸಾಗುತ್ತದೆ, ಇಂಗ್ಲಿಷ್ ಭಾಷೆಯ ಪರಿಚಯವಾಗುತ್ತದೆ. ಇಲ್ಲಿ ಬೆಳೆಯಬೇಕು ಅಂದರೆ ಇಂಗ್ಲಿಷ್ ಬರಬೇಕು ಎನ್ನುವುದು ಅವರಿಗೆ ಮನವರಿಕೆಯಾಗುತ್ತದೆ. ಫ್ಯಾಕ್ಟರಿಯ ಲೆಕ್ಕಾಧಿಕಾರಿಯೊಬ್ಬ ಇವರಿಗೆ ಇಂಗ್ಲಿಷ್ ಗುರುವಾಗುತ್ತಾನೆ.
ಎರಡು ವರ್ಷಗಳಲ್ಲಿ ಇಂಗ್ಲಿಷ್ ಕಲಿತು, ವಿದೇಶದವರೊಂದಿಗೆ ವ್ಯಾಪಾರ ಮಾಡುವಷ್ಟು ಕೌಶಲ್ಯ ಹೊಂದುತ್ತಾರೆ. 21ನೇ ವಯಸ್ಸಿನಲ್ಲಿ ಅವರಿಗೆ ಇಡೀ ಫ್ಯಾಕ್ಟರಿಯ ದೇಖರೇಖೆ ನೋಡಿಕೊಳ್ಳುವಷ್ಟು ಪ್ರಬುದ್ಧತೆ ಒಲಿಯುತ್ತದೆ. ನಂತರ ಒಂದೊಂದೇ ಅವಕಾಶ ಅವರ ಪಾಲಿಗೆ ವರದಾನವಾಗಿ ಬಂತು. ಅಮೆರಿಕ ಪ್ರವಾಸ, ಬೋನಸ್ ಹಣ, ಅದರ ಹಣದಿಂದ ಖರೀದಿ ಮಾಡಿದ ಷೇರಿನ ಬೆಲೆ ಹೆಚ್ಚಾಗಿ ಒಂದು ಕಂಪನಿಯ ಖರೀದಿ ಹೀಗೆ ವಸಂತಗಳು ಉರಳುತ್ತಾ ಹಾಂಗ್ಕಾಂಗ್ ದೇಶದ ಪ್ರಭಾವಿ ಬ್ಯುಸಿನೆಸ್ ಮ್ಯಾನ್ ಆಗಿಬಿಡುತ್ತಾರೆ. ವ್ಯವಹಾರ ಒಂದು ಕಡೆ ಸ್ವಾತಂತ್ರ್ಯಕ್ಕೆ ಹೋರಾಟ ಇನ್ನೊಂದು ಕಡೆ. ಚೀನಾದ ಟಿಯಾ ನನ್ಮೆನ್ ಸ್ಕ್ವೇರ್ನಲ್ಲಿ ನಡೆದ ಮಾನವ ಹಕ್ಕುಗಳ ಹೋರಾಟ ಐತಿಹಾಸಿಕವಾದದ್ದು. ಅದಕ್ಕೂ ಜಿಮ್ಮಿ ಲೈರವರಿಗೂ ನಂಟಿದೆ. ಅಲ್ಲಿ ಒಗ್ಗೂಡಿದ ಹೋರಾಟಗಾರರಿಗೆ ಸಿಪಿಸಿಯ ವಿರುದ್ಧ ಸ್ಲೋಗನ್ ಪ್ರಿಂಟ್ ಮಾಡಿಸಿದ ಟೀ ಶರ್ಟ್ ಪೂರೈಕೆ ಮಾಡಿದ್ದು ಲೈ ಕಂಪ
ನಿಯೇ. ಆಗ ಈ ವಿಷಯ ಹೊರಗೆ ಬರದೇ ಹೋದರೂ ಕೆಲ ವರ್ಷಗಳ ನಂತರ ಸಿಪಿಸಿಯ ಗಮನಕ್ಕೆ ಬರುತ್ತದೆ. ಕೆಲವೇ ತಿಂಗಳಲ್ಲಿ ಲೈ ಕಟ್ಟಿ ಬೆಳೆಸಿದ ಕಂಪನಿಯ ಬಾಗಿಲು ಚೀನಾದಲ್ಲಿ ಮುಚ್ಚುತ್ತದೆ.
ಇದು ಸಿಪಿಸಿಯ ಪವರ್! ಇವರನ್ನು ಎದುರು ಹಾಕಿಕೊಂಡು ಹೋರಾಟ ಮಾಡುವುದು ಎಂದರೆ ಸುಲಭವೇ? ಪ್ರಜಾಪ್ರಭುತ್ವದ ಹೋರಾಟಕ್ಕೆ ಬಲವಾದ ಧ್ವನಿಯಾಗಿ ನಿಂತಿದ್ದು ಜಿಮ್ಮಿ ಲಾಯ್. ಹೋರಾಟದ ಬಾಯಿ ಮುಚ್ಚಲೆಂದೇ ಅವರನ್ನು ಬಂಧಿಸ ಲಾಗಿತ್ತು. ಜಿಮ್ ಲೈ ಅವರ ಬ್ಯುಸಿನೆಸ್ ಬಟ್ಟೆೆಯಲ್ಲಿ ಕೊನೆಗೊಳ್ಳಲಿಲ್ಲ. ಹಾಂಗ್ಕಾಂಗ್ನಲ್ಲಿ ದೊಡ್ಡ ಮಿಡೀಯಾ ಮನೆಯನ್ನೇ ಕಟ್ಟಿದ್ದಾರೆ. ಪ್ರಜಾಪ್ರಭುತ್ವದ ಪರ ದನಿಯಿಲ್ಲದ ದಿನಗಳವು. ಆಗ ಅವರು ಶುರು ಮಾಡಿದ್ದು ಆ್ಯಪಲ್ ಡೇಲಿ ಹಾಗೂ ನೆಕ್ಸ್ಟ್ ಎನ್ನುವ ಮ್ಯಾಗಜಿನ್.
ಇವೆರಡು ಎಷ್ಟು ಜನಪ್ರಿಯ ಆಯಿತು ಅಂದರೆ ಒಂದು ದಿನ ಜಿಮ್ ಲಾಯ್ ಅಲ್ಲಿಯ ಅತೀ ಶ್ರೀಮಂತ ವ್ಯಕ್ತಿ ಆಗಿಬಿಡುತ್ತಾರೆ. ಚೀನಾದ ಕಣ್ಣು ಇವರ ಮೇಲೆ ಬೀಳುತ್ತದೆ, ಅಮೆರಿಕದ ಗಮನವೂ ಜೊತೆ. ಟ್ರಂಪ್ ಅಧ್ಯಕ್ಷರಾದ ಮೇಲೆ ಅಮೆರಿಕದ ಅಧಿಕಾರಿಗಳ ಜೊತೆ ಲೈ ಅವರ ಒಡನಾಟ ಸ್ವಲ್ಪ ಹೆಚ್ಚೇ. ಜೋ ಬೈಡನ್ ಅವರ ಮಗ ಹಾಗೂ ಚೀನಾದ ಅಧಿಕಾರಿಗಳ ನಡುವಿನ ರಹಸ್ಯ ವ್ಯವಹಾರಗಳನ್ನು ಹೊರಗೆ ತರಲು ಸಹಕರಿಸಿದ್ದೂ ಇವರೇ ಎನ್ನುವ ಸುದ್ದಿಯೂ ಕೇಳಿ ಬರುತ್ತಿದೆ. ಇವೆಲ್ಲವೂ ಒಟ್ಟಿಗೆ ಸೇರಿ
ನಂತರ ನ್ಯಾಷನಲ್ ಸೆಕ್ಯುರಿಟಿ ಲಾ ಅಡಿಯಲ್ಲಿ ಅಮೆರಿಕದಿಂದ ಜಿಮ್ ಲೈಗೆ ಹಣ ಬರುತ್ತಿದೆ, ಅದನ್ನು ದಂಗೆಗೆ ಬಳಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಜೈಲಿಗೆ ತಳ್ಳುತ್ತದೆ ಚೀನಾ ಸರಕಾರ. ಮೊದಲೇ ಸಿಟ್ಟಿನಲ್ಲಿರುವ ಹಾಂಗ್ಕಾಂಗ್ ಜನತೆಗೆ ಜಿಮ್ಮಿ ಲೈ
ಅವರನ್ನು ಬಂಧಿಸಿದ್ದಕ್ಕೆ ಹೋರಾಟ ಇನ್ನಷ್ಟು ಉಗ್ರ ರೂಪವನ್ನು ತಾಳಲು ಕಾರಣವಾಗುತ್ತದೆ. ಆದರೆ ಹೋರಾಟ ನಡೆಸುವುದು ಹೇಗೆ? ಸತ್ಯಾಗ್ರಹ ಇಲ್ಲ, ಮೆರವಣಿಗೆ ಮಾಡುವಂತಿಲ್ಲ, ಆಂದೋಲನ ನಡೆಸುವಂತಿಲ್ಲ, ಇದಕ್ಕಾಗಿ ಹೊಸ ಬಗೆಯ ಹೋರಾಟ ವನ್ನು ಕಂಡುಕೊಳ್ಳುತ್ತಾರೆ. ಅದೇನು? ಜಿಮ್ ಲಾಯ್ ಮಾಲಿಕತ್ವದ ನೆಷ್ಟ್ ಡಿಜಿಟಲ್ ಷೇರುಗಳನ್ನು ಹಾಗೂ ಆ್ಯಪಲ್ ಡೈಲಿ ಪೇಪರ್ ಅನ್ನು ಆದಷ್ಟು ಹೆಚ್ಚು ಹೆಚ್ಚು ಖರೀದಿ ಮಾಡುವುದು!
ಜಿಮ್ ಲೈ ಅವರನ್ನು ಬಂಧಿಸಿದ ದಿನ ನೆಷ್ಟ್ ಡಿಜಿಟಲ್ ಷೇರು 9 ಸೆಂಟ್ ನಿಂದ 196 ಸೆಂಟ್ಗೆ ತಲುಪಿತ್ತು. ಒಂದು ದಿನವಂತೂ 2,000% ಹೆಚ್ಚಳವಾಗಿತ್ತು. ಅಷ್ಟೇ ಅಲ್ಲ ಅವರ ಮೀಡಿಯಾ ಮನೆಯಿಂದ ಪ್ರಕಟವಾಗುವ ಆ್ಯಪಲ್ ಡೈಲಿ ಕೂಡ ಅತೀ ಹೆಚ್ಚು ಮಾರಾಟವಾಗುತ್ತಿತ್ತು. ಮೊದಲು ದಿನಕ್ಕೆ 70,000 ಪ್ರತಿ ಮಾರಾಟವಾಗುತ್ತಿದ್ದರೆ ಈಗ 5.5 ಲಕ್ಷ ಪ್ರತಿಗಳ ಮಾರಾಟ!!! ಹೇಗಿದೆ ಈ ಹೊಸ ಬಗೆಯ ಪ್ರತಿಭಟನೆ? ಹಾಗಿದ್ದರೆ ಷೇರಿನ ಬೆಲೆ ಹೆಚ್ಚಾದರೆ ಲೈಗೆ ಏನು ಅನುಕೂಲ, ಪತ್ರಿಕೆ ಮಾರಾಟವಾದರೆ ಪ್ರಯೋಜನ ವೇನು? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಸುಲಭವಿಲ್ಲ. ಇಷ್ಟು ದಿನ ಕಂಪನಿಯ ಮೌಲ್ಯ HK230 ಮಿಲಿಯನ್ ಇದ್ದರೆ ಅದು ಈಗ ಏಓ 2.9 ಬಿಲಿಯನ್ಗೆ ಮುಟ್ಟಿತು.
ಜೈಲಿನಲ್ಲಿ ಕೂತು ದಿನೇ ದಿನೇ ಲೈ ಶ್ರೀಮಂತರಾಗುತ್ತಿದ್ದರು. ಜನರ ಹತ್ತಿರ ಷೇರನ್ನು ಖರೀದಿಮಾಡಬೇಡಿ ಎಂದು ಬೇಡಿಕೊಂಡರೂ ಜನ ಕೇಳಲಿಲ್ಲ. ಹೀಗೆ ಮಾಡಿದ್ದರಿಂದ ಅವರಿಗೆ ದುಬಾರಿ ವಕೀಲರನ್ನು ನೇಮಿಸಲು ಸಹಾಯವಾಯಿತು, ಕಂಪನಿಯ ಮೌಲ್ಯ ಹೆಚ್ಚಿತು, ಹಣಕಾಸಿನ ಭದ್ರತೆ ಇನ್ನಷ್ಟು ಸ್ಥಿರವಾಯಿತು. ಇವೆಲ್ಲದಕ್ಕಿಂತಲೂ ಹೆಚ್ಚಾಗಿ ಬೀಜಿಂಗ್ನಲ್ಲಿಯ ರಾಜಕೀಯಕ್ಕೆ ಕಡಕ್
ಸಂದೇಶ ರಾವಾನೆಯಾಗುತ್ತದೆ. ಹನಿ ಹನಿ ’ಷೇರಿ’ದರೆ ಹಳ್ಳ ಎಂದಂತೆ ಇದು. ಜನರು ಸರಕಾರದ ವಿರುದ್ಧ ಸಿಟ್ಟಿಗೆದ್ದು ಲೈಗೆ ಸಪೋರ್ಟ್ ಸೂಚಿಸಿ ತಮ್ಮಲ್ಲಿರುವ ಸಣ್ಣ ಪ್ರಮಾಣದ ಹಣವನ್ನು ಕೂಡ ಆ ಕಂಪನಿಗೆ ಹಾಕಿದರು.
ಇದು ಜಗತ್ತಿನ ಅತೀ ಶಕ್ತಿಶಾಲಿ ಸರಕಾರದ ಮೇಲೆ ಒತ್ತಡ ಹೇರಿತು. ಅವರಿಗೆ ಈ ಹೊಸ ಪ್ರತಿಭಟನೆಯ ವಿರುದ್ಧ ಏನು ಮಾಡಬೇಕು
ಗೊತ್ತಾಗಲಿಲ್ಲ. ಸರಕಾರ ಇದನ್ನು ನಿಷೇಧ ಮಾಡುವ ಹಾಗೂ ಇರಲಿಲ್ಲ. ಈ ಹೊಸ ಬಗೆಯ ಪ್ರತಿರೋಧ ಬೀಜಿಂಗ್ ರಾಜಕಾರಣಿ ಗಳ ನಿದ್ದೆಗೆಡಸಿ ತಕ್ಷಣವೇ ಬೇಲ್ ಮುಖಾಂತರ ಜಿಮ್ಮಿ ಲೈ ಹೊರಗೆ ಬರುವಂತೆ ಮಾಡಿದೆ. ನೋಡಿ, ಜನರು ಮನಸ್ಸು ಮಾಡಿದರೆ ಹೇಗೆಲ್ಲಾ ಪ್ರತಿಭಟನೆ ಮಾಡಬಹುದು!