Saturday, 10th June 2023

ಎತ್ತರಕ್ಕೆ ಹೋದರೂ, ಕಟ್ಟಕಡೆಯವನಿಗೂ ಸಿಗುವುದೇ ನಿಜವಾದ ಬೆಳವಣಿಗೆ !

ಇದೇ ಅಂತರಂಗ ಸುದ್ದಿ

vbhat@me.com

ಮುರಕಮಿ ಪುಸ್ತಕ ನೋಡಿದಾಗ ಅದನ್ನು ಎತ್ತಿಕೊಳ್ಳದಿರಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಆ ಕೃತಿಯ ಶೀರ್ಷಿಕೆ. ಮುರಕಮಿ ಅಂಥ ಪುಸ್ತಕವನ್ನೂ ಬರೆದಿರಬಹುದಾ ಎಂದು ನಾನು ಊಹಿಸಿಯೂ ಇರಲಿಲ್ಲ. ಅಂದ ಹಾಗೆ ಆ ಪುಸ್ತಕದ ಶೀರ್ಷಿಕೆ – The T-Shirts I Love ಅರ್ಥಾತ್ ನಾನು ಮೆಚ್ಚಿದ ಟಿ-ಶರ್ಟುಗಳು. ಮುರಕಮಿಯಂಥ ಜಗತ್ಪ್ರಸಿದ್ಧ ಲೇಖಕ ಈ ರೀತಿಯ ಪುಸ್ತಕವನ್ನು ಬರೆಯೋದುಂಟಾ ಎಂಬ ಅನುಮಾನ, ಅಚ್ಚರಿಯೊಂದಿಗೆ ಪುಸ್ತಕವನ್ನು ಖರೀದಿಸಿದೆ.

ಒಬ್ಬ ಸೃಜನಶೀಲ ಲೇಖಕನನ್ನು ಹಾಳು ಮಾಡಬೇಕೆಂದರೆ, ಅವನಿಗೊಂದು ಪ್ರಶಸ್ತಿ ಕೊಡಬೇಕಂತೆ. ನಿನ್ನೆ-ಮೊನ್ನೆ ತನಕ ಜೋಕು, ಚುಟುಕು ಬರೆದುಕೊಂಡಿದ್ದ ಕವಿಗೆ ಒಂದು ಪ್ರತಿಷ್ಠಿತ ಪ್ರಶಸ್ತಿ ಕೊಟ್ಟ ನಂತರ, ಆತ ಮೊದಲು ಮಾಡೋದು ಬರೆಯುವು ದನ್ನು ನಿಲ್ಲಿಸುವುದು. ಆಗ ಆತನ ತಲೆಯಲ್ಲಿ ಇಲ್ಲದ ಯೋಚನೆಗಳು ಸುಳಿಯಲಾರಂಭಿಸುತ್ತವೆ. ನಾನು ಇನ್ನು ಮುಂದಾದರೂ ಗಂಭೀರವಾಗಿ ವರ್ತಿಸಬೇಕು, ಒಳ್ಳೆಯದನ್ನು ಬರೆಯಬೇಕು, ಜನ ನನ್ನನ್ನು ಗಮನಿಸುತ್ತಾರೆ, ನನ್ನ ಬರಹಗಳನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ, ಇನ್ನು ಮುಂದೆ ಪೋಲಿಪೋಲಿ ಬರೆಯಬಾರದು.. ಹೀಗೆ ಯೋಚಿಸಲಾರಂಭಿಸುತ್ತಾನೆ.

ಆಗ ಲೇಖಕ ತನ್ನ ಸಹಜತೆಯನ್ನು ಕಳೆದುಕೊಳ್ಳುತ್ತಾನೆ. ಅದಕ್ಕಿಂತ ಮುನ್ನ ಬರೆಯುವುದನ್ನು ನಿಲ್ಲಿಸುತ್ತಾನೆ. ಹೊಸತೇನನ್ನೋ ಬರೆಯಬೇಕು ಎಂದು ತಡಕಾಡುತ್ತಾನೆ, ತನ್ನನ್ನು ಎತ್ತರಕ್ಕೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ, ಅದು ಸಫಲವಾಗದೇ ಬರವಣಿಗೆ ನಿಲ್ಲಿಸುತ್ತಾನೆ. ಬಹುತೇಕ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ, ಬರಹಗಾರರು ಪ್ರಶಸ್ತಿ ಪಡೆದ ಬಳಿಕ ನೇಪಥ್ಯಕ್ಕೆ ಸರಿದಿದ್ದೇ ಜಾಸ್ತಿ. ಅವರಿಗೆ ಮೊದಲಿನಂತೆ ಬರೆಯಲು ಆಗುವುದಿಲ್ಲ.

ಆತ ತನ್ನ ಇಂದಿನ ಲಾಲಿತ್ಯವನ್ನು ಕಳೆದುಕೊಳ್ಳುತ್ತಾನೆ. ತನ್ನನ್ನು ತಾನಿರುವುದಕ್ಕಿಂತ ದೊಡ್ಡದಾಗಿ ಭ್ರಮಿಸಿಕೊಳ್ಳಲಾ ರಂಭಿಸುತ್ತಾನೆ. ಪ್ರಶಸ್ತಿ ಸ್ವೀಕರಿಸುವುದಕ್ಕಿಂತ ಮುನ್ನ ಇದ್ದ ನವಿರು, ಸಹಜ ಭಾವ, ನಿರ್ಲಿಪ್ತ ಗುಣವೆ ಮಾಯವಾಗಿ, ಕೃತಕ ಗುಣ ಆವರಿಸಿಕೊಳ್ಳುತ್ತದೆ. ಆಗ ವಿನಾಕಾರಣ ಪೋಸು ಕೊಡಲಾರಂಭಿಸುತ್ತಾನೆ. ನಾಟಕೀಯತೆ ಇಣುಕಿ, ಸೋಗು ವಿಜೃಂಭಿಸುತ್ತದೆ. ಪ್ರತಿಷ್ಠಿತ ಪ್ರಶಸ್ತಿ ಪಡೆದ ಸಾಹಿತಿ, ಲೇಖಕ ತನ್ನ ಸುತ್ತ ಬೇಲಿ ಕಟ್ಟಿಕೊಳ್ಳುತ್ತಾನೆ. ತಾನು ಇಷ್ಟಪಡುತ್ತಿದ್ದ ಓದುಗರವಲಯದಿಂದ ಅಂತರ ಕಾಪಾಡಿಕೊಳ್ಳಲು ಬಯಸುತ್ತಾನೆ. ತನ್ನೊಳಗೆ ಇಲ್ಲದ ಭಾವನೆ, ಭ್ರಮೆಗಳೆ ಬರಲಾರಂಭಿಸುತ್ತವೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ, ಲೇಖಕರ ಪಾಡು ಸಹ ಇದಕ್ಕಿಂತ ಭಿನ್ನವಾಗಿಲ್ಲ. ಜ್ಞಾನವಿರುವುದು ಪೀಠದಲ್ಲಿ ಅಲ್ಲ, ಮಿದುಳಲ್ಲಿ ಎಂಬುದನ್ನು ಅವರು ಮರೆತು ಬಿಡುತ್ತಾರೆ. ಆ ಪ್ರಶಸ್ತಿ ಪಡೆದ ಶೇ.ತೊಂಬತ್ತರಷ್ಟು ಸಾಹಿತಿಗಳು, ಪ್ರಶಸ್ತಿ ಪಡೆದ ಬಳಿಕ ಬರೆದಿಲ್ಲವಂತೆ. ಅದಕ್ಕೆ ಕಾರಣ ತಮ್ಮ ಬಗ್ಗೆ ಇಲ್ಲದ ಭಾವನೆಗಳನ್ನು ತಲೆಯೊಳಗೆ ತುಂಬಿಕೊಂಡು ನರಳಿ ಒದ್ದಾಡುವುದು ಮತ್ತು ಸಹಜ ಭಾವದಿಂದ ದೂರವಾಗಿ, ಭ್ರಮೆಯೊಳಗೆ ಸುತ್ತಿ, ಬಿಡಿಸಿಕೊಳ್ಳಲಾಗದೇ ಪರಿತಪಿಸುವುದು. ‘ನಾವು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ, ನಾನು ಇಂಥ ಲೇಖನ ಬರೆದರೆ ಜನ ಏನೆಂದು ಭಾವಿಸಬಹುದು?, ನನ್ನ ಹೊಸ ಕೃತಿ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರವಾಗದಿದ್ದರೆ, ಈ ರೀತಿ ಕೃತಿಗಳನ್ನು ರಚಿಸಿದರೆ
ಇವರಿಗೆ ಜ್ಞಾನಪೀಠ ಪ್ರಶಸ್ತಿ ಹೇಗೆ ಬಂತು ಎಂದು ಓದುಗರು ಯೋಚಿಸಬಹುದು, ಈ ಕೃತಿ ಓದುಗರಿಂದ ಮೆಚ್ಚುಗೆ ಗಳಿಸದಿದ್ದರೆ…’ ಈ ಯೋಚನೆಯ ಬಹುತೇಕ ಸಾಹಿತಿಗಳು ಹೊಸ ಕೃತಿ ರಚನೆಗೆ ಮುಂದಾಗುವುದಿಲ್ಲ.

ಇತ್ತೀಚೆಗೆ ನನಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಹುಕಾಲದ ಸ್ನೇಹಿತ ಮತ್ತು ತಮಿಳು ಪತ್ರಕರ್ತ ಸುನಿಲ್ ಸಿಕ್ಕಿದ್ದರು. ಅವರ ಕೈಯಲ್ಲಿ ಖ್ಯಾತ ಸಾಹಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಮಿಳು ಸಾಹಿತಿ ಜಯಕಾಂತನ್ ಬರೆದ ಕಾದಂಬರಿ ಇತ್ತು. ನಾನು ಸಹಜ ಕುತೂಹಲದಿಂದ ಆ ಪುಸ್ತಕವನ್ನು ತೆಗೆದುಕೊಂಡು ಪುಟ ತಿರುವಿದೆ. ಅದು ‘ಇಧಯ ರಾಣಿಕ್ಕುಲಮ್ ಇಸ್ಪೇಡು ರಾಜಕ್ಕುಲಮ’ ಎಂಬ ಕಾದಂಬರಿ. ಜಯಕಾಂತನ್ ಅವರು 1983 ರಲ್ಲಿ ಬರೆದಿದ್ದು. ಅವರು 1980 ರಿಂದ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು ಹದಿಮೂರು ಕಾದಂಬರಿಗಳನ್ನು ಬರೆದರಂತೆ. 1986 ರ ನಂತರ ಅವರು ಕಾದಂಬರಿ ಬರೆಯುವುದನ್ನು ಬಿಟ್ಟರಂತೆ. ನಂತರ ಸಿನಿಮಾ ನಿರ್ದೇಶನ ಮತ್ತು ಸಂಭಾಷಣೆಗೆ ತೊಡಗಿದರಂತೆ.

ಅವರಿಗೆ 2002 ರಲ್ಲಿ ಜ್ಞಾನಪೀಠ ಬಂತು. ಜಯಕಾಂತನ್ ಬರೆಯುವುದನ್ನು ಬಿಟ್ಟುಬಿಟ್ಟರಂತೆ. ಮುಂದಿನ ಹದಿಮೂರು ವರ್ಷ (2015) ಅಂದರೆ ಅವರು ನಿಧನರಾಗುವವರೆಗೆ, ಅವರಿಗೆ ಏನನ್ನೂ ಬರೆಯಲು ಸಾಧ್ಯವಾಗಲಿಲ್ಲವಂತೆ. ಇದು ಅವರzಂದೇ ಕಥೆ ಅಲ್ಲ. ಬಹುತೇಕ ಜ್ಞಾನಪೀಠ ಮತ್ತು ನೊಬೆಲ್ ಪ್ರಶಸ್ತಿ ಪಡೆದ ಸಾಹಿತಿ, ಲೇಖಕರ ಕತೆಯೂ ಹೌದು. ತನ್ನ ಪಾಡಿಗೆ ತಾನು ಬರೆದುಕೊಂಡಿರುವ ಲೇಖಕನ ಕೈಯಲ್ಲಿರುವ ಪೆನ್ನಿಗೆ ಶಾಶ್ವತ ಮುಚ್ಚಳ ತೊಡಿಸಬೇಕು ಅಂತ ಮನಸ್ಸು ಮಾಡಿದರೆ, ಮತ್ತೇನೂ ಮಾಡಬೇಕಿಲ್ಲ. ಆತನಿಗೆ ಜ್ಞಾನಪೀಠ ಅಥವಾ ನೊಬೆಲ್ ಪ್ರಶಸ್ತಿ ಕೊಟ್ಟರೆ ಸಾಕು! (ಈ ಕಾರಣದಿಂದಾದರೂ ವೀರಪ್ಪ ಮೊಯಿಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡಿಸಬೇಕು) ನೀವು ಹರುಕಿ ಮುರಕಮಿ ಎಂಬ ಜಪಾನಿ ಲೇಖಕ, ಕಾದಂಬರಿಕಾರನ ಹೆಸರನ್ನು ಕೇಳಿರುತ್ತೀರಿ.

ಆತನಿಗೆ ಇಪ್ಪತ್ತೊಂಬತ್ತು ವರ್ಷವಾಗಿzಗ, ಟೋಕಿಯೋದಲ್ಲಿ ಜಾಜ್ ಬಾರ್ ನಡೆಸುತ್ತಿದ್ದ. ಒಂದು ದಿನ ಬೇಸ್ ಬಾಲ್ ಆಟ ನೋಡುವಾಗ, ಕಾದಂಬರಿ ಬರೆಯಬೇಕು ಎಂದು ಬಲವಾಗಿ ಅನಿಸಿತು. ಅದರ ಪರಿಣಾಮ, Hear The Wind Sing. ಮೊದಲ ಕೃತಿಗೆ ಬಹುಮಾನ ಬಂತು. ಅದಾದ ಬಳಿಕ, Norwegian Wood ಎಂಬ ಪುಸ್ತಕ ಬರೆದ. ಅದು ಆತನಿಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿತು. ಅದಾದ ಬಳಿಕ ಆತ ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ಆತ ಏನನ್ನೇ ಬರೆಯಲಿ, ಅದು ಜಗತ್ತಿನ ಕನಿಷ್ಠ ಐವತ್ತು ಭಾಷೆಗಳಿಗೆ ಅನುವಾದವಾಗುತ್ತವೆ.

ಇಂಗ್ಲಿಷಿನಲ್ಲಿ ಕನಿಷ್ಠ ಹತ್ತು ಲಕ್ಷ ಪ್ರತಿಗಳು ಮಾರಾಟವಾಗುತ್ತವೆ. He is one of the World’s most acclaimed and well-loved writers. ಮುರಕಮಿ ಒಬ್ಬ ಸಹಜ ಲೇಖಕ. ಆತ ತನ್ನ ಒಂದು ಗಂಟೆಯ ರೈಲು ಪ್ರಯಾಣದ ಅನುಭವವನ್ನು ಜಪಾನಿನ ಪತ್ರಿಕೆಗಳಿಗೆ ಲೇಖನವಾಗಿ ಕಳಿಸಿಕೊಡುತ್ತಾನೆ. ತಾನು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ ಅಪರಿಚಿತ ವ್ಯಕ್ತಿಯ ಜತೆಗಿನ ಸಂಭಾಷಣೆಯನ್ನೇ ಒಂದು ಅನೂಹ್ಯ ಅನುಭವದಂತೆ ವಿವರಿಸುತ್ತಾನೆ. ಇಂದಿಗೂ ಸಮಯ ಸಿಕ್ಕರೆ ಜಾಜ್ ಬಾರ್‌ಗೆ ಹೋಗಿ ಕೆಲ ಸಮಯ
ಕಳೆಯುತ್ತಾನೆ. ಆ ಅನುಭವಕ್ಕೆ ದಿವ್ಯತೆ ಸ್ಪರ್ಶ ಕೊಡುತ್ತಾನೆ. ಆತನಿಗೆ ಜಗತ್ತಿನ ಅನೇಕ ಪ್ರಶಸ್ತಿಗಳು ಸಿಕ್ಕಿದ್ದರೂ, ಆತನ ಬರವಣಿಗೆ ನಾಟಕೀಯತೆಗೆ ಬಲಿಯಾಗಿಲ್ಲ.

ಈತನನ್ನು eccentric ವ್ಯಕ್ತಿ ಎಂದು ಬಣ್ಣಿಸುವುದುಂಟು. ಕೆಲವು ತಿಂಗಳುಗಳ ಹಿಂದೆ, ‘ನ್ಯೂಯಾರ್ಕರ್’ ಪತ್ರಿಕೆ ಆತನನ್ನು ಸಂದರ್ಶಿಸಿತು. ‘ನನಗೆ ಬರವಣಿಗೆ ವಿಷಯದಲ್ಲಿ
ಮಡಿ-ಮೈಲಿಗೆ ಇಲ್ಲ. ನಾನು ಯಾವ ವಿಷಯದ ಬಗ್ಗೆ ಬೇಕಾದರೂ ಬರೆಯಬ. ನನ್ನ ಓದುಗನಿಗೆ ಹೊಸ ಅನುಭವ ಸಿಗುವಂತಾದರೆ, ಅದೇ ನನಗೆ ಹೊಸ ಸಂಗತಿ. ನನಗೆ
ನ್ಯೂಯಾರ್ಕ್ ಬೀದಿಯಲ್ಲಿರುವ ಭಿಕ್ಷುಕ ಎಂದೂ ಮುಗಿಯದ ಅಚ್ಚರಿ. ಜಪಾನಿನ ರೈತ ಪ್ರತಿ ಕ್ಷಣವೂ ಹೊಸ ಸಂಗತಿ ಹೇಳುತ್ತಾನೆ. ಆದರೆ ನನ್ನ ಪ್ರಕಾಶಕರು ನನಗೆ ವಿಷಯ ನಿರ್ಬಂಧ ಹಾಕುತ್ತಾರೆ. ನಾನು ಕೆಲವು ವಿಷಯಗಳ ಬಗ್ಗೆ ಬರೆಯಬಾರದು ಎಂದು ಹೇಳುತ್ತಾರೆ.

ಲಿಟರರಿ ಏಜಂಟರು ಎಲ್ಲಾ ವಿಷಯಗಳ ಬಗ್ಗೆ ಬರೆಯುವುದನ್ನು ಇಷ್ಟಪಡುವುದಿಲ್ಲ. ನನ್ನ ವ್ಯಕ್ತಿತ್ವಕ್ಕೆ ಅದು ಮಾರಕವಾಗುತ್ತೆ, ನಾನು ಕೆಲವು ವಿಷಯಗಳ ಬಗ್ಗೆ ಬರೆಯಲೇಬಾರದು ಎಂದು ಹೇಳುತ್ತಾರೆ. ಆದರೆ ನಾನು ಅಂಥ ಕಿವಿಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ’ ಎಂದು ಮುರಕಮಿ ಹೇಳಿದ್ದ. ನಾನು ಮೂರು ತಿಂಗಳ ಹಿಂದೆ, ಲಂಡನ್ನಿನ ವಾಟರ್ ಸ್ಟೋನ್ (ಎಂಬ ಅದ್ಭುತ) ಪುಸ್ತಕದ ಅಂಗಡಿಯಲ್ಲಿದ್ದಾಗ, ಮುರಕಮಿ ಪುಸ್ತಕ ನೋಡಿದಾಗ ಅದನ್ನು ಎತ್ತಿಕೊಳ್ಳದಿರಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಆ ಕೃತಿಯ ಶೀರ್ಷಿಕೆ. ಮುರಕಮಿ ಅಂಥ ಪುಸ್ತಕವನ್ನೂ ಬರೆದಿರಬಹುದಾ ಎಂದು ನಾನು ಊಹಿಸಿಯೂ ಇರಲಿಲ್ಲ. ಅಂದ ಹಾಗೆ ಆ ಪುಸ್ತಕದ ಶೀರ್ಷಿಕೆ – The T-Shirts I Love ಅರ್ಥಾತ್ ನಾನು ಮೆಚ್ಚಿದ ಟಿ-ಶರ್ಟುಗಳು. ಮುರಕಮಿಯಂಥ ಜಗತ್ಪ್ರಸಿದ್ಧ ಲೇಖಕ ಈ ರೀತಿಯ ಪುಸ್ತಕವನ್ನು ಬರೆಯೋದುಂಟಾ ಎಂಬ ಅನುಮಾನ, ಅಚ್ಚರಿಯೊಂದಿಗೆ ಪುಸ್ತಕವನ್ನು ಖರೀದಿಸಿದೆ.

ಮೂಲತಃ ಮುರಕಮಿ ಟಿ-ಶರ್ಟ್ ಪ್ರೇಮಿಯಂತೆ. ಯಾವ ದೇಶಕ್ಕೆ ಹೋದರೂ ರಾಶಿ ರಾಶಿ ಟಿ-ಶರ್ಟ್ ಖರೀದಿಸಿ ತರುತ್ತಾರಂತೆ. ದಿನಕ್ಕೊಂದು ಟಿ-ಶರ್ಟ್ ಧರಿಸುವುದು ಅವರ
ಶೋಕಿ. ತಾವು ಧರಿಸಿದ ಟಿ-ಶರ್ಟುಗಳನ್ನು ಸಂಗ್ರಹಿಸಿ ಇಡುತ್ತಾರಂತೆ. ‘ಪ್ರತಿ ಟಿ-ಶರ್ಟ್ ಹಿಂದೆ ಒಂದು ಉತ್ತಮ, ಸೃಜನಶೀಲ ಮನಸ್ಸಿರುತ್ತದೆ. ಟಿ-ಶರ್ಟ್ ಬರಹಗಾರ ಉತ್ತಮ ಲೇಖಕನೂ ಆಗಿರುತ್ತಾನೆ. ಅತ್ಯಂತ ಕಡಿಮೆ ಪದಗಳಲ್ಲಿ ಆತ ತಾನು ಹೇಳಬೇಕಾದ ದೀರ್ಘ ವಿಚಾರವನ್ನು ಹೇಳುವ ಪ್ರಯತ್ನ ಮಾಡುತ್ತಾನೆ. ‘ಪ್ರತಿ ಟಿ-ಶರ್ಟ್‌ಗೂ
ಅದರದ್ದೇ ಆದ ಹಿನ್ನೆಲೆಯಿದೆ.

ಸಾಮಾನ್ಯವಾಗಿ ಟಿ-ಶರ್ಟ್ ಬೆಲೆ ಹೆಚ್ಚಿರುವುದಿಲ್ಲ. ನನಗೆ ಟಿ-ಶರ್ಟ್ ಶೋಕಿ ಇದೆ ಎಂಬುದು ಅನೇಕರಿಗೆ ಗೊತ್ತಿದೆ. ಹೀಗಾಗಿ ನಾನು ಎಲ್ಲಿಗೆ ಹೋದರೂ, ಜನ ನನಗೆ ಅವನ್ನು ಉಡುಗೊರೆಯಾಗಿ ಕೊಡುತ್ತಾರೆ. ನಾನು ಟಿ-ಶರ್ಟ್ ಕೊಟ್ಟರೆ ಬೇಡ ಎನ್ನುವುದಿಲ್ಲ. ಒಮ್ಮೊಮ್ಮೆ ಬೇರೆ ಊರುಗಳಿಂದ ಬರುವಾಗ ನನ್ನ ಸೂಟ್ ಕೇಸ್ ತುಂಬಾ ಟಿ-ಶರ್ಟುಗಳೇ
ತುಂಬಿರುತ್ತವೆ. ನಾನು ಅವನ್ನೆ ಜೋಪಾನವಾಗಿ ಎತ್ತಿಡುತ್ತೇನೆ. ನನ್ನ ವಾರ್ಡ್ರೋಬ್‌ನಲ್ಲಿ ಈಗ ಜಾಗವೇ ಇಲ್ಲದಂತಾಗಿದೆ. ನಾನು ಅವನ್ನೆ ಕಾರ್ಡ್ ಬೋರ್ಡ್ ಬಾಕ್ಸ್  ನಲ್ಲಿಡಲಾ ರಂಭಿಸಿದ್ದೇನೆ. ಈಗ ನನ್ನ ಸಂಗ್ರಹ ಒಂದು ಅಪರೂಪದ ಮ್ಯೂಸಿಯಂ ಆಗಬಹುದಾ ಎಂದು ನನಗೆ ಅನಿಸಲಾರಂಭಿಸಿದೆ. ಅನೇಕ ಮ್ಯಾಗಜಿನ್‌ಗಳು ನನ್ನ ಟಿ-ಶರ್ಟ್ ಬಗ್ಗೆಯೇ ಸಂದರ್ಶನ ಮಾಡಿವೆ. ಟಿ-ಶರ್ಟ್ ಮೂಲಕ ನಾನು ನೋಡಿದ ದೇಶ, ನಗರ, ಊರುಗಳ ಕತೆ ಹೇಳುವ, ಅಲ್ಲಿನ ನೆನಪುಗಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಟಿ-ಶರ್ಟ್ ಬರೀ ವಸ್ತ್ರ ಅಥವಾ ಉಡುಪು ಅಲ್ಲ, ಅದೊಂದು ಅನುಭವ’ ಅಂತಾರೆ ಮುರಕಮಿ ಆ ಪುಸ್ತಕದಲ್ಲಿ.

ಲೇಖಕನಾದವನು ದೊಡ್ಡವನಾದ ನಂತರ, ದೊಡ್ಡ ಲೇಖಕನಾದ ನಂತರ, ತನ್ನ ಜರ್ಬು ಬಿಟ್ಟು ಬರೆಯುವಂತಾದರೆ, ಓದುಗರು ಅವನನ್ನು ಕಳೆದುಕೊಳ್ಳುವುದಿಲ್ಲ. ಆತನೂ ತನ್ನ
ಓದುಗರನ್ನು ಕಳೆದುಕೊಳ್ಳುವುದಿಲ್ಲ. ಎತ್ತರಕ್ಕೆ ಹೋದರೂ, ಕಟ್ಟಕಡೆಯವನಿಗೂ ಸಿಗಬೇಕು! ಅದು ನಿಜವಾದ ಬೆಳವಣಿಗೆ.

ಒಳ್ಳೆಯವಳಲ್ಲ, ನೀನು ಹೆಂಡತಿ

ಪ್ರತಿದಿನ ಸಾಯಂಕಾಲ ಓಶೋ ಒಂದು ಗಂಟೆ ಪ್ರವಚನ ಮಾಡುತ್ತಿದ್ದರು. ನಂತರ ಸಂವಾದ. ಕೆಲವೊಮ್ಮೆ ಓಶೋ, ಪ್ರವಚನ ಬದಲು ಪ್ರಶ್ನೋತ್ತರವನ್ನೇ ಇಷ್ಟಪಡುತ್ತಿದ್ದರು. ಯಾರು ಯಾವ ಪ್ರಶ್ನೆಯನ್ನಾದರೂ ಕೇಳಬಹುದಿತ್ತು. ಓಶೋ ಅದಕ್ಕೆ ಉತ್ತರಿಸುತ್ತಿದ್ದರು. ಕೆಲವು ಸಲ ಒಂದು ಪ್ರಶ್ನೆಗೆ ಉತ್ತರಿಸಲು ಒಂದು ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳು ತ್ತಿದ್ದರು. ಅಷ್ಟು ಸುದೀರ್ಘ ಉತ್ತರ ನೀಡುತ್ತಿದ್ದರು.

ಉಪನ್ಯಾಸದ ಕೊನೆಯಲ್ಲಿ ಯಾರಾದರೂ ಒತ್ತಾಯಿಸಿದರೆ, ಜೋಕುಗಳನ್ನು ಹೇಳುತ್ತಿದ್ದರು. ಸಾಮಾನ್ಯವಾಗಿ ಯಾರೂ ಅವರ ಬಾಯಿಂದ ಜೋಕುಗಳನ್ನು ಕೇಳುವುದನ್ನು
ತಪ್ಪಿಸಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಅವರು ಸೆಕ್ಸ್ ಜೋಕುಗಳನ್ನು ಹೇಳಲು ಹಿಂದೇಟು ಹಾಕುತ್ತಿರಲಿಲ್ಲ. ಓಶೋ ದೃಷ್ಟಿಯಲ್ಲಿ ಜೋಕುಗಳು ಮತ್ತು ಪೋಲಿ ಜೋಕುಗಳು ಎಂಬ
ವರ್ಗಗಳಿರಲಿಲ್ಲ. ಅವರ ಪಾಲಿಗೆ ಎಲ್ಲವೂ ಜೋಕುಗಳೇ. ಒಮ್ಮೆ ಓಶೋಗೆ ಒಬ್ಬಳು ಕೇಳಿದಳು – ‘ಓಶೋ, ನನಗೆ ಚೆನ್ನಾಗಿ ಗೊತ್ತಿದೆ, ನನ್ನ ಗಂಡ ನನಗೆ ಮೋಸ ಮಾಡುತ್ತಿದ್ದಾ ನೆಂದು.

ನಿನ್ನೆ ರಾತ್ರಿ ನನ್ನ ಗಂಡ ರಾತ್ರಿ ಮನೆಗೆ ಬಂದಾಗ ಅವನ ಶರ್ಟ್ ಮೇಲೆ ಲಿಪ್ ಸ್ಟಿಕ್ ಕಲೆಯಿತ್ತು. ಈ ಬಗ್ಗೆ ನಾನು ಕೇಳಿದಾಗ, ‘ಅದು ಟೊಮ್ಯಾಟೋ ಜ್ಯೂಸು ಕಲೆ’ ಎಂದ. ‘ಈಗ ನಾನು ಏನು ಮಾಡಬೇಕು?’ ಅದಕ್ಕೆ ಓಶೋ ಹೇಳಿದ್ದು – ‘ನಾನು ಹೇಳಿದಂತೆ ನೀನು ಮಾಡುವುದಿಲ್ಲ. ಈಗಾಗಲೇ ಗಂಡನೊಂದಿಗೆ ಎರಡು ಸುತ್ತು ಜಗಳ ಮತ್ತು ಒಂದು ಸುತ್ತು ಹೊಡೆದಾಟ ಆಗಿದೆ. ಕಾರಣ ಈ ಘಟನೆ ನಡೆದು ಇಪ್ಪತ್ತು ತಾಸಾದರೂ ನಿನ್ನ ಕೋಪ ಶಮನ ಆಗಿಲ್ಲ.

ಇನ್ನೊಂದು ಘಟನೆ ಆಗುವ ತನಕ ಈ ಘಟನೆ ಮನಸ್ಸಿನಲ್ಲಿ ಇರುತ್ತದೆ. ಇನ್ನು ಇಪ್ಪತ್ತು ವರ್ಷ ಕಳೆದರೂ ನಿನ್ನ ಮನಸ್ಸಿನಿಂದ ಟೊಮ್ಯಾಟೋ ಜ್ಯೂಸ್ ಕಲೆ ಅಳಿಸಿರುವುದಿಲ್ಲ. ಅಷ್ಟಕ್ಕೂ ಕಲೆ ಜ್ಯೂಸಿನದ್ದಲ್ಲ. ಕಲೆ ಮನಸ್ಸಿನದ್ದು. ಅದನ್ನು ತೆಗೆಯದೇ ಟೊಮ್ಯಾಟೋ ಜ್ಯೂಸ್ ಕಲೆ ಹೋಗುವುದಿಲ್ಲ.’

ಇನ್ನೊಂದು ಪ್ರಶ್ನೆ.
‘ನನ್ನ ಗಂಡ ಒಳ್ಳೆಯವನು. ಎಷ್ಟು ಒಳ್ಳೆಯವನು ಅಂದ್ರೆ ಬೇರೆ ಹೆಂಗಸರನ್ನು ಕತ್ತೆತ್ತಿಯೂ ನೋಡುವುದಿಲ್ಲ. ಇದು ಒಳ್ಳೆಯ ಗುಣವಾ ಅಥವಾ…?’ ಅದಕ್ಕೆ ಓಶೋ ಹೇಳಿದರು – ‘ಈ ವಿಷಯದ ಬಗ್ಗೆಯೂ ಗಂಡನ ಬಗ್ಗೆ ಸಂದೇಹಪಡ್ತೀಯಲ್ಲ ನೀನು… ನೀನು ಖಂಡಿತವಾಗಿಯೂ ಒಳ್ಳೆಯವಳಲ್ಲ… ನೀನು ಹೆಂಡತಿ’

ಒಂದು ಪ್ರಸಂಗ, ಹಲವು ಯೋಚನೆ
ಒಬ್ಬ ಬ್ರಿಟಿಷ್, ಒಬ್ಬ ಸ್ಕಾಟಿಷ್ ರೈಲಿನಲ್ಲಿ ಹೋಗುತ್ತಿದ್ದರು.

ಅವರು ಪ್ರವೇಶಿಸಿದ ಕಂಪಾರ್ಟ್‌ಮೆಂಟಿನಲ್ಲಿ ತಾಯಿ ಮತ್ತು ಅವಳ ಸುಂದರ ಮಗಳು ಇದ್ದರು. ಆ ನಾಲ್ವರ ಹೊರತಾಗಿ ಮತ್ಯಾರೂ ಇರಲಿಲ್ಲ. ಅದಾಗಿ ಸ್ವಲ್ಪ ಹೊತ್ತಿನಲ್ಲಿ ರೈಲು
ಸುರಂಗದೊಳಗೆ ಪ್ರವೇಶಿಸಿತು. ಅದಾಗಿ ಕೆಲ ಕ್ಷಣಗಳಲ್ಲಿ ಯಾರೋ ‘’ ಎಂದು ಮುತ್ತಿಕ್ಕಿದ ಮತ್ತು ‘ಪಾ..ಟ’ ಎಂದು ಹೊಡೆದ ಸದ್ದು ಕೇಳಿಸಿತು.

ಅದಾಗಿ ಕೆಲ ಕ್ಷಣಗಳಲ್ಲಿ ರೈಲು ಸುರಂಗದ ಹೊರಗೆ ಬಂದಿತು. ಈ ಒಂದು ಸಣ್ಣ ಪ್ರಸಂಗ ಆ ನಾಲ್ವರಲ್ಲಿ ಅದೆಂಥ ಯೋಚನೆ ಹುಟ್ಟಿಸಿರಬಹುದು, ನೋಡೋಣ.

ಬ್ರಿಟಿಷ್ ಪ್ರಜೆ ಯೋಚಿಸಿದ: ‘ಸ್ಕಾಟಿಷ್ ಇದ್ದಾನಲ್ಲ… ದರಿದ್ರವ.. ಆತ ಆಕೆಗೆ ಕಿಸ್ ಮಾಡಿದ. ನಾನು ಹೊಡೆತ ತಿಂದೆ’ ತಾಯಿ ಯೋಚಿಸಿದಳು: ‘ಇವರಿಬ್ಬರ ಪೈಕಿ ಒಬ್ಬ ನನ್ನ
ಮಗಳಿಗೆ ಕಿಸ್ ಕೊಟ್ಟಿರಬೇಕು. ಎಷ್ಟೆಂದರೂ ನನ್ನ ಮಗಳಲ್ಲವಾ? ಏನು ಮಾಡಬೇಕು ಎಂಬುದು ಅವಳಿಗೆ ಗೊತ್ತಿದೆ. ಅದು ಯಾರೇ ಆಗಿರಲಿ, ಸರಿಯಾಗಿಯೇ ಬಿದ್ದಿದೆ.’

ಮಗಳು ಯೋಚಿಸಿದಳು: ‘ಪಾಪ, ಇವರಿಬ್ಬರ ಪೈಕಿ ಒಬ್ಬ, ನಾನು ಎಂದು ಭಾವಿಸಿ, ನನ್ನ ತಾಯಿಗೆ ಕಿಸ್ ಕೊಟ್ಟಿರಬೇಕು.’ ಸ್ಕಾಟಿಷ್ ಯೋಚಿಸಿದ: ‘ರೈಲು ಮುಂದಿನ ಸುರಂಗದೊಳಗೆ ಹೊಕ್ಕಾಗ, ನಾನು ನನ್ನ ಕೈಗೆ ಇನ್ನೊಮ್ಮೆ ಕಿಸ್ ಕೊಟ್ಟು, ಬ್ರಿಟಿಷ್ ಪ್ರಜೆಯ ಇನ್ನೊಂದು ಕೆನ್ನೆಗೆ ಹೊಡೆತ ಕೊಡಿಸಬೇಕು.

error: Content is protected !!