ಸಮಕಾಲೀನ
ಅರ್ಜುನ್ ಶೆಣೈ
arjunshny@gmail.com
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರೆಕಂಡ ಬಳಿಕ ಭಾರತೀಯ ಸಿನಿಮಾರಂಗದಲ್ಲಿ ಬದಲಾವಣೆಯ ಗಾಳಿ ಬೀಸಿರುವುದು ಸುಳ್ಳಲ್ಲ. ಅಷ್ಟರವರೆಗೂ ಬಾಲಿವುಡ್ ಎಂದರೆ ಮನರಂಜನೆಯ ಹೆಸರಿನಲ್ಲಿ ಹಿಂದುತ್ವವನ್ನು ಅಪಹಾಸ್ಯ ಗೈದು, ಹಿಂದುಗಳಿಂದಲೇ ಪ್ರಸಿದ್ಧರಾಗುವ ಹಿಂದೂ ವಿರೋಧಿ ಗಳ ತಂಡ ಎಂಬಂತಿತ್ತು. ತೆರೆಕಾಣುತ್ತಿದ್ದ ಅನೇಕ ಸಿನಿಮಾಗಳಲ್ಲಿ ಮುಸಲ್ಮಾನ ದಯಾಳುವಾಗಿಯೂ, ಕ್ರೈಸ್ತ ಗೌರವಾನ್ವಿತನಾಗಿಯೂ ಇದ್ದರೆ, ತಿಲಕ ಇಟ್ಟುಕೊಂಡವನು ಮಾತ್ರ ದರೋಡೆಕೋರನೋ, ಹಾಸ್ಯನಟನೋ, ಗ್ಯಾಂಗ್ ಸ್ಟರ್ನೋ ಆಗಿರುತ್ತಿದ್ದ.
ವಿಷಾದವೆಂದರೆ ಬಹುತೇಕ ಹಿಂದುಗಳಿಗೆ ಇದು ಇನ್ನೂ ಸ್ಪಷ್ಟವಾಗಿಲ್ಲ. ಯಾಕೆಂದರೆ ಸಹನೆ, ತಾಳ್ಮೆಯ ಗುಣ ಹಿಂದುಗಳ ರಕ್ತದಲ್ಲಿಯೇ ಇದೆ. ಕಾಶ್ಮೀರ್ ಫೈಲ್ಸ್’ ಇಟ್ಟ ಅಡಿಗಲ್ಲಿನ ಬಳಿಕ ಸಿನಿಮಾದ ವಸ್ತುಚಾರಗಳು ತುಸುಮಟ್ಟಿಗೆ ಬದಲಾವಣೆ ಹೊಂದುತ್ತಿರುವುದು ಸಮಾಧಾನಕರ ಸಂಗತಿ. ಅದರಲ್ಲೂ ಇತ್ತೀಚೆಗೆ ಪ್ರದರ್ಶನಗೊಂಡ ‘ಕೇರಳ ಸ್ಟೋರಿ’ ಈ ಅಭಿಪ್ರಾಯವನ್ನು ಮತ್ತಷ್ಟು ಪುಷ್ಟಿಕರಿಸಿದೆ.
ಕಾಶ್ಮೀರ ಫೈಲ್ಸ್ ಸಿನಿಮಾ ೩೦೦ ಕೋಟಿಗೂ ಹೆಚ್ಚು ಹಣ ಮಾಡಿದ್ದಲ್ಲದ್ದೇ, ಝೀ೫ನಲ್ಲಿ ಮೊದಲ ವಾರದಲ್ಲಿಯೇ ೯೦ ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಿಸಲ್ಪಟ್ಟಿದ್ದು ವಿಶೇಷ. ಕೇರಳ ಸ್ಟೋರಿ ಸಿನಿಮಾ ಕೂಡ ಇದುವರೆಗೆ ೨೩೦ ಕೋಟಿಗೂ ಹೆಚ್ಚು ಬಾಚಿಕೊಂಡಿದೆ. ಇವೆಲ್ಲ ಅಂಕಿ-ಅಂಶಗಳನ್ನು ಚಿತ್ರವಿಮರ್ಶಕರು ಮಾಡುತ್ತಾರೆ. ಆದರೆ ನಮಗೆ ವಾಸ್ತವದಲ್ಲಿ ಬೇಕಿರುವುದು ಅದಲ್ಲ. ಇಂತಹ ಸಿನಿಮಾಗಳು ನಮ್ಮ ಆಲೋಚನಾ ಪರಿಧಿಯನ್ನು, ಸ್ಥಿತಿಗತಿಯನ್ನು ಬದಲಿಸಿವೆಯೇ ಎಂಬುದು. ಸಿನಿಮಾ ನೋಡಿದ ಅನೇಕ ಹೆಣ್ಣುಮಕ್ಕಳು ತಾವು ಇಂತಹ ಸನ್ನಿವೇಶಗಳನ್ನು ದಾಟಿ ಬಂದಿದ್ದಾಗಿ ನೆನೆದುಕೊಂಡಿದ್ದಾರೆ.
ಲಿವ್-ಇನ್ ಸಂಬಂಧದಲ್ಲಿದ್ದ ಮಧ್ಯಪ್ರದೇಶದ ಹೆಣ್ಣುಮಗಳೊಬ್ಬಳು ಈ ಸಿನಿಮಾ ನೋಡಿದ ಕೂಡಲೇ ಪೋಲಿಸ್ ಠಾಣೆಗೆ ತೆರಳಿ ತನ್ನ ಸ್ನೇತನ ವಿರುದ್ಧ ಒತ್ತಾಯಪೂರ್ವಕ ಮತಾಂತರದ ದೂರು ದಾಖಲಿಸಿದ್ದಾಳೆ. ಇಂತಹ ಅನೇಕ ಪ್ರಕರಣಗಳು ಅಲ್ಲಲ್ಲಿ ದಾಖಲಾಗಿದ್ದು ಅತೀ ಕೆಲವರಾದರೂ ವಾಸ್ತವದ ಬಾಗಿಲನ್ನು ಮುಟ್ಟುತ್ತಿದ್ದಾರೆ ಎಂಬುದು ಸಮಾಧಾನಕರ. ಹೀಗಾಗಿ ನಾವೀಗ ಇರುವ ಈ ಕಾಲಘಟ್ಟದಲ್ಲಿ ಸಿನಿಮಾವನ್ನು ಕ್ಷುಲ್ಲಕವೆಂದು ನಿರ್ಲಕ್ಷಿಸುವುದಕ್ಕಂತೂ ಸಾಧ್ಯವಿಲ್ಲ.
ಕೊನೇಪಕ್ಷ ಹೂಡಿರುವ ಹಣವನ್ನು ವಾಪಸು ಪಡೆಯುವ ಹಾಗೆ ಸಿನಿಮಾ ಜನರಿಗೆ ತಲುಪಬೇಕು ಎಂದು ನಿರ್ದೇಶಕರು ಯೋಚಿಸುವುದರಲ್ಲಿ ತಪ್ಪಿಲ್ಲ. ಈ ಚಾರವಾಗಿ ಕಾಶ್ಮೀರ ಮತ್ತು ಕೇರಳದ ಕಥೆಗಳು ಇನ್ನಷ್ಟು ಹೊಸ ನಿರ್ದೇಶಕರಿಗೆ ಭರವಸೆಯನ್ನು ಕೊಟ್ಟಿದೆ. ನೈಜಕಥೆಯನ್ನು ಆಧರಿಸಿ, ಒಂದು ಸಂದೇಶವನ್ನು ವೀಕ್ಷಕನಿಗೆ ಮುಟ್ಟಿಸಿದರೆ ಆತ ಸಿನಿಮಾ ಗೆಲ್ಲಿಸದೇ ಇರಲಾರ ಎಂಬ ಸತ್ಯಾಂಶ ಗೊತ್ತಾಗಿದೆ. ಈಗ ಇದೇ ಪಥವನ್ನು ತುಳಿದಿರುವ ಇತರ ಕೆಲ ನಿರ್ದೇಶಕರು ಇನ್ನಷ್ಟು ವಿಚಾರಗಳನ್ನಿಟ್ಟುಕೊಂಡು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಅವುಗಳಲ್ಲಿ ಪ್ರಮುಖವು ಹೀಗಿವೆ: ೧. ಅಜ್ಮೇರ್ ೯೨: ೧೯೯೨ರ ‘ಅತ್ಯಾಚಾರ ಹಗರಣ’ದ ಸುತ್ತಲಿನ ವಾಸ್ತವವನ್ನು ತೆರೆದಿಡುವ ಪ್ರಯತ್ನಕ್ಕೆ ಕೈ
ಹಾಕಲಾಗಿದೆ. ನೂರಕ್ಕೂ ಹೆಚ್ಚು ಶಾಲಾ ಕಾಲೇಜಿನ ವಿದ್ಯಾರ್ಥಿನಿಯರನ್ನು ಬೆದರಿಸಿ ಕಾಮತೃಷೆಗೆ ಬಳಸಿಕೊಂಡ ಈ ಪ್ರಕರಣದಲ್ಲಿ ಸಮಾಜದ ಪ್ರಭಾವಿಗಳು ಶಾಮೀಲಾಗಿದ್ದು, ಅದೇ ಕಾರಣಕ್ಕೆ ಎಲ್ಲರ ಕೈಬಾಯಿ ಮುಚ್ಚಿಸಿತ್ತು. ಆಗ ಯುವ ಕಾಂಗ್ರೆಸ್ನ ಅಧ್ಯಕ್ಷನಾಗಿದ್ದ ಫಾರೂಖ್ ಕ್ರಿಸ್ಟಿ ಸ್ಥಳೀಯ ಶಾಲೆಯ ಒಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಆಕೆಯ ಬೆತ್ತಲೆ ಚಿತ್ರವನ್ನು ತೆಗೆದು ಆಕೆಗೆ ಜೀವ ಬೆದರಿಕೆ ಒಡ್ಡುತ್ತಾನೆ.
ಆ ಬಳಿಕ ಅದೇ ವಿದ್ಯಾರ್ಥಿನಿಯನ್ನು ಬಳಸಿಕೊಂಡು ತನಗೆ ಇತರ ಹೆಣ್ಣುಮಕ್ಕಳನ್ನು ಪರಿಚುಸುವಂತೆ ಒತ್ತಾಯಿಸಿ ಅವರನ್ನೂ ತನ್ನ ಮತ್ತು
ಸ್ನೇಹಿತರ ಕಾಮಕ್ಕೆ ಬಳಸಿಕೊಳ್ಳುತ್ತಾನೆ. ಇದು ಕೆಲವು ವರ್ಷಗಳವರೆಗೂ ನಡೆಯುತ್ತದಾದರೂ ಅಪರಾಧಿಗಳೆಲ್ಲ ಖಾದಿಮ್ ವರ್ಗಕ್ಕೆ ಸೇರಿದ್ದು ಪ್ರಸಿದ್ಧ ಅಜ್ಮೇರ್ ಷರೀಫ್ ದರ್ಗಾದ ಜತೆ ಗುರುತಿಸಿಕೊಂಡಿದ್ದರಿಂದ ಈ ಕುಕೃತ್ಯ ಎಲ್ಲೂ ಬಹಿರಂಗಗೊಳ್ಳುವುದಿಲ್ಲ. ಕೆಲ ಸಮಯದವರೆಗೂ
ನಡೆದು ಅದು ದೇಶದ ದೊಡ್ಡ ‘ಕಾಮ ಹಗರಣ’ ಎಂದು ಕುಖ್ಯಾತಿ ಪಡೆಯಿತು. ಆ ಬಳಿಕ ಸ್ಥಳೀಯ ದಿನಪತ್ರಿಕೆಯೊಂದು ಧೈರ್ಯ ಮಾಡಿ ಜಾಹೀರು
ಮಾಡಿದ ಬಳಿಕ ಹೊರಜಗತ್ತಿಗೆ ತಿಳಿಯಿತಾದರೂ ರಾಜಕೀಯ ಹಸ್ತಕ್ಷೇಪ, ಸಾಕ್ಷಿನಾಶ, ಬೆದರಿಕೆ ಅವ್ಯಾಹತವಾಗಿ ನಡೆಯಿತು. ಈಗ ಈ ಪ್ರಕರಣವೇ
ಒಂದು ಸಿನಿಮಾದ ಕಥಾವಸ್ತುವಾಗಿದೆ. ‘ಶಾಂತಿಯುತ ಸಮುದಾಯ’ಕ್ಕೆ ನೋವಾದೀತೆಂಬ ಕಾರಣದಿಂದ ಆಂದೋಲನ ಜೀವಿಗಳು ಈ ಸಿನಿಮಾವನ್ನು ಬಹಿಷ್ಕರಿಸುವ ಸಾಧ್ಯತೆ ನಿಚ್ಚಳವಾಗಿದೆ.
೨. ಟಿಪ್ಪು : ಇತಿಹಾಸದ ಪಠ್ಯಗಳಲ್ಲಿ ವೈಭವೀಕೃತಗೊಂಡು ವಾಸ್ತವವನ್ನು ಮುಚ್ಚಿಟ್ಟು ಎಲ್ಲರ ಮನಸೆಳೆದಿದ್ದ ಟಿಪ್ಪುವಿನ ‘ನಿಜ ಇತಿಹಾಸ’ವನ್ನು ಸಿನಿಮಾದ ಮುಖಾಂತರ ತೋರಿಸಲು ತಂಡವೊಂದು ನಿರ್ಧರಿಸಿದೆ. ೮೦೦೦ ದೇಗುಲ, ೨೭ ಚರ್ಚುಗಳನ್ನು ಹಾಳುಗೆಡವಿ, ೪೦ ಲಕ್ಷ ಹಿಂದೂ ಗಳನ್ನು ಮತಾಂತರಗೈದು, ೨೦೦೦ ಬ್ರಾಹ್ಮಣ ಕುಟುಂಬಗಳನ್ನು ಕ್ಯಾಲಿಕಟ್ನಿಂದ ಒದ್ದೋಡಿಸಿದ ಟಿಪ್ಪುವಿನ ‘ಸಾಹಸಗಾಥೆ’ಯನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ಮಸಿ ಬಳಿದ ಟಿಪ್ಪುವಿನ ಮುಖವನ್ನು ಸಿನಿಮಾದ ಪೋಸ್ಟರ್ ನಲ್ಲಿ ತೋರಿಸ ಲಾಗಿದ್ದು ಚಿತ್ರ ಕುತೂಹಲಕ್ಕೆ ಕೆಡವಿದೆ. ಟಿಪ್ಪು ಆರಾಧಕ ಆಂದೋಲನ ಜೀವಿಗಳ ತಂಡ ಸಿನಿಮಾಕ್ಕೆ ವಿರೋಧ ತೋರಿದರೆ ಅಚ್ಚರಿಯಿಲ್ಲ.
೩. ಸ್ವಾತಂತ್ರ್ಯ ವೀರ ಸಾವರ್ಕರ್: ‘ಸ್ವಾತಂತ್ರ್ಯ ಹೋರಾಟ ೯೦ ವರ್ಷಗಳವರೆಗೂ ನಡೆಯಿತು. ಆದರೆ ಈ ಹೋರಾಟದಲ್ಲಿ ಕೆಲವರಷ್ಟೇ ಭಾಗಿಯಾಗಿದ್ದರು. ಉಳಿದ ಹಲವರು ಅಽಕಾರದ ಹಸಿವಿನಲ್ಲಿದ್ದರು’ ಎಂದು ಪ್ರಾರಂಭವಾಗುವ ಸಿನಿಮಾದ ಟ್ರೇಲರ್ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಣದೀಪ್ ಹೂಡಾ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಸಾವರ್ಕರ್ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ
ಚಿತ್ರೀಕರಣಕ್ಕೂ ಮುನ್ನ ಸಾವರ್ಕರ್ರ ಮೊಮ್ಮಗನ ಬಳಿ ಸಿನಿಮಾಕ್ಕೆ ಅನುಮತಿಯನ್ನೂ ಕೇಳಿದ್ದರು. ಸಿನಿಮಾ ಮಹಾಬಲೇಶ್ವರದ ಒಂದು ಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಟ್ರೇಲರ್ನ ಕೊನೆಗೆ ‘ಇವರ ಕಥೆಯನ್ನು ಕೊಂದವರ್ಯಾರು’ ಎಂಬ ಪ್ರಶ್ನೆ ಈ ಸಿನಿಮಾದ ಬಗ್ಗೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಸಾವರ್ಕರರನ್ನು ಮೂಲೆಗುಂಪು ಮಾಡುವತ್ತ ಸಕಲ ಯತ್ನಗಳನ್ನೂ ಮಾಡುವ ಆಂದೋಲನ ಜೀವಿಗಳಿಗೆ ಈ ಸಿನಿಮಾ ನುಂಗಲಾರದ ತುತ್ತಂತಾಗುವುದು ಖಂಡಿತಾ.
೪. ೭೨ ಹೂರೆ: ಭಯೋತ್ಪಾದನೆಯನ್ನು ಕೇಂದ್ರೀಕರಿಸಿಕೊಂಡು ನಿರ್ಮಿಸಿರುವ ಈ ಸಿನಿಮಾ ಹೇಗೆ ಮಾನವಹೇಡಿಗಳು ಧರ್ಮವನ್ನು ಬಳಸಿಕೊಂಡು
ಸಾಮಾನ್ಯರ ತಲೆಹಾಳುಗೆಡವಿ ಮನುಕುಲಕ್ಕೆ ಶತ್ರುಗಳಾಗುತ್ತಾರೆ ಎಂಬುದನ್ನು ಹೇಳುತ್ತದೆ. ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು ವಿಶ್ವಾದ್ಯಂತ ನಡೆದ ಭೀಭತ್ಸ ಹತ್ಯಾಕಾಂಡಗಳ ಮುಖ್ಯ ರೂವಾರಿಗಳನ್ನು ತೋರಿಸಲಾಗಿದೆ. ೭೨ ಹೂರೇ ಎಂದರೆ ೭೨ ಕನ್ಯೆಯರು ಎಂದರ್ಥ. ಪಾಪಕೃತ್ಯಗಳನ್ನು ಎಸಗಿ ‘ಹುತಾತ್ಮ’ರಾದರೆ ಸ್ವರ್ಗದಲ್ಲಿ ೭೨ ಕನ್ಯೆಯರು ಸಿಗುತ್ತಾರೆ ಎಂದು ಮೆದುಳಿಗೆ ವಿಷ ಸಿಂಪಡಿಸಿ ಸಾಮಾನ್ಯರನ್ನು
ಮಾನವಬಾಂಬುಗಳಂತೆ ಹೇಗೆ ಮಾರ್ಪಡಿಸಲಾಗುತ್ತದೆ ಎಂಬುದು ಸಿನಿಮಾದ ತಿರುಳು ಎನ್ನಲಾಗಿದೆ. ಈ ಸಿನಿಮಾ ಜುಲೈ ೭ಕ್ಕೆ ಬಿಡುಗಡೆಯಾಗಲಿದೆ. ಭಯೋತ್ಪಾದನೆಯ ಹೆಸರಿನಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಂದೋಲನ
ಜೀವಿಗಳ ತಂಡ ಬೀದಿಗೆ ಬರುವುದು ಖಚಿತ.
೫. ೬೯೫: ಶ್ರೀರಾಮಜನ್ಮಭೂಮಿಯ ಶತಮಾನಗಳ ಹೋರಾಟವನ್ನು ಸಿನಿಮಾವಾಗಿ ಕಟ್ಟಿಕೊಡಲು ತಂಡವೊಂದು ನಿರ್ಧರಿಸಿ ತಯಾರಿಯಲ್ಲಿ ತೊಡಗಿದೆ. ೨೦೨೪ರಲ್ಲಿ ಉದ್ಘಾಟನೆಗೊಳ್ಳಲಿರುವ ಮಂದಿರಕ್ಕೂ ಮೊದಲೇ ಸಿನಿಮಾವನ್ನು ಬಿಡುಗಡೆಗೊಳಿಸುವ ಹುಮ್ಮಸ್ಸಿನಲ್ಲಿದೆ. ಸಿನಿಮಾದ ಶೀರ್ಷಿಕೆ ‘೬೯೫’ ಎಂದು ಹೇಳಲಾಗುತ್ತಿದ್ದು ಇದರ ಅರ್ಥವೇನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಒಂದು ವಾದದ ಪ್ರಕಾರ ೬೯೫ ರಾಮಜನ್ಮ ಭೂಮಿಗೆ ಸಂಬಂಧಿಸಿದ ಮೂರು ಪ್ರತ್ಯೇಕ ದಿನಗಳು ಎನ್ನಲಾಗಿದೆ. ೬ನೇ ತಾರೀಕು ಬಾಬ್ರಿ ಮಸೀದಿ ಧ್ವಂಸವಾಗಿದ್ದು, ೯ನೇ ತಾರೀಕಿಗೆ ಸರ್ವೋಚ್ಚ
ನ್ಯಾಯಾಲಯದ ತೀರ್ಪು ರಾಮಮಂದಿರದ ಪರವಾಗಿ ಬಂದ ದಿನವಾಗಿದೆ. ಇನ್ನು ೫ನೇ ತಾರೀಕಿಗೆ ಪ್ರಧಾನಿ ಮೋದಿ ರಾಮಮಂದಿರಕ್ಕೆ ಅಡಿಗಲ್ಲನ್ನು ಹಾಕಿದ್ದರು.
ಹೀಗಾಗಿ ಈ ಹೆಸರು ಬಂದಿದ್ದೀತು ಎಂಬುದು ಒಂದು ಊಹೆ. ಸಿನಿಮಾದ ಬಗೆಗೆ ಇನ್ನಷ್ಟು ಮಾತಿ ಹೊರಬರಬೇಕಿದೆ. ಒಂದಂತೂ ಸತ್ಯ. ಸಿನಿಮಾ ಗಳು ನಡೆದ ಘಟನೆಗಳನ್ನು ಎರಡೂವರೆ ಗಂಟೆಗಳ ಅವಽಯಲ್ಲಿ ಕರಾರುವಕ್ಕಾಗಿ ತೋರಿಸಬೇಕೆಂದಿಲ್ಲ. ಆದರೆ ಕನಿಷ್ಠ ಜಾಗೃತಗೊಳಿಸುವ
ಕೆಲಸವನ್ನಂತೂ ಮಾಡಬಲ್ಲವು ಎಂಬುದಕ್ಕೆ ‘ಕೇರಳ ಸ್ಟೋರಿ’ ಸಿನಿಮಾದಿಂದ ವಾಸ್ತವತೆಯತ್ತ ಹೊರಳಿದ ಹೆಣ್ಣುಮಕ್ಕಳೇ ಸಾಕ್ಷಿ. ಭಾರತೀಯ ಚಿತ್ರರಂಗದಲ್ಲಿ ಇಂತಹ ಇನ್ನಷ್ಟು ಕಣ್ತೆರೆಸುವ ಸಿನಿಮಾಗಳು ತೆರೆಕಾಣಲಿ ಎಂಬುದೇ ಸದ್ಯದ ನಿರೀಕ್ಷೆ.