Sunday, 24th November 2024

ಯಾರಿಗೂ ಕೆಡಕು ಬಯಸದ ಸಾಮ್ರಾಟ

ಅಶ್ವತ್ಥಕಟ್ಟೆ

ranjith.hoskere@gmail.com

ಕೊಟ್ಟ ಕುದುರೆ ಏರಲರಿಯದವನು ವೀರನೂ ಅಲ್ಲ, ಧೀರನೂ ಅಲ್ಲ’ ಎನ್ನುವ ಮಾತಿದೆ. ವಿಧಾನಸಭಾ ಚುನಾವಣೆಯ ಬಳಿಕ ಸೋತು ಸುಣ್ಣವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂತಿರುವ ಬಿಜೆಪಿಯ ಹಲವು ನಾಯಕರಿಗೆ ಈ ಮಾತು ಇಂದು ಪ್ರಸ್ತುತ ಎನಿಸುತ್ತಿದೆ.

ಸುಮಾರು ಆರು ತಿಂಗಳ ಹುಡುಕಾಟದ ಬಳಿಕ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನವನ್ನು ಬಿಜೆಪಿ ವರಿಷ್ಠರು ತುಂಬಿದ್ದರು. ಆದರೆ ಈ ಆಯ್ಕೆಗೆ ಬಿಜೆಪಿಯಲ್ಲಿಯೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದರಲ್ಲಿಯೂ ಪ್ರತಿಪಕ್ಷ ನಾಯಕನಾಗಿ ಆರ್.ಅಶೋಕ್ ಆಯ್ಕೆಯ ವಿಷಯದಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ರಾಜ್ಯ ಮಟ್ಟದ ನಾಯಕರವರೆಗೆ ಹಲವು ಪ್ರಶ್ನೆಗಳಿದ್ದವು. ಈ ಎಲ್ಲರಿಗೂ ತಮ್ಮ ನೇತೃತ್ವದಲ್ಲಿ ನಡೆಯುವ ಮೊದಲ ಸದನದ
ಮೂಲಕವೇ ಉತ್ತರಿಸಲಿದ್ದಾರೆ ಎನ್ನುವ ಕೇವಲ ಆಶಾಭಾವನೆಯೂ ಬೆಳಗಾವಿ ಅಧಿವೇಶನದಲ್ಲಿ ಛಿದ್ರವಾಗಿದೆ.

ರಾಜ್ಯದಲ್ಲಿ ಚಳಿ ಏರುವ ವೇಳೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಎರಡು ವಾರಗಳ ಕಾಲ ನಡೆದ
ಅಧಿವೇಶನದಲ್ಲಿ ಹಲವು ವಿಧೇಯಕ, ಪೂರಕ ಅಂದಾಜು, ಉತ್ತರ ಕರ್ನಾಟಕ ಹಾಗೂ ಬರಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆದ ಹೊರತಾಗಿಯೂ ಆಡಳಿತ ಪಕ್ಷದಲ್ಲಿದ್ದವರು ‘ರಿಲ್ಯಾಕ್ಸ್’ ಆಗಿದ್ದರು ಎನ್ನುವುದು ಸ್ಪಷ್ಟ. ಸಾಮಾನ್ಯವಾಗಿ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಚಿವರಿಗೆ ಒಂದು ರೀತಿಯ ಆತಂಕವಿರುತ್ತದೆ. ಯಾವ ವಿಷಯದ ಬಗ್ಗೆ ಪ್ರತಿಪಕ್ಷಗಳು ಧ್ವನಿ ಎತ್ತುತ್ತವೋ? ಅದನ್ನು ಯಾವ ರೀತಿ ಡಿಫೆಂಡ್ ಮಾಡಬೇಕು? ಸರಕಾರದ ಇಮೇಜ್‌ಗೆ ಧಕ್ಕೆಯಾಗದಂತೆ ಏನೆಲ್ಲ ಮಾಡಬೇಕು? ಎನ್ನುವ ಆತಂಕವಿರುತ್ತದೆ. ಆದರೆ ಈ ಬಾರಿಯ ಅಧಿವೇಶನದಲ್ಲಿ, ಕಾಂಗ್ರೆಸ್‌ನಲ್ಲಿನ ಆತಂರಿಕ ಗೊಂದಲದ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಲ್ಯಾಕ್ಸ್ ಆಗಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಗೆಸ್ಟ್’ ರೀತಿ ಬಂದು ಹೋದಂತೆ ಕಾಣಿಸಿಕೊಂಡರು.

ಕಾಂಗ್ರೆಸ್ ನಾಯಕರು ನಿರೀಕ್ಷಿಸಿದಂತೆಯೇ ಪ್ರತಿಪಕ್ಷಗಳಿಂದ ಯಾವ ವಿರೋಧವೂ ಇಲ್ಲದೇ, ಸುಗಮವಾಗಿಯೇ ವಿಧಾನಮಂಡಲ ಅಧಿವೇಶನ ಪೂರ್ಣಗೊಳಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಇದರೊಂದಿಗೆ ಈ ರಿಲ್ಯಾಕ್ಸ್ ಮೋಡ್ ಇನ್ನೈದು ವರ್ಷವೂ ಮುಂದುವರಿಯಲಿದೆ ಎನ್ನುವ ವಿಶ್ವಾಸವೂ ಆಡಳಿತ ಪಕ್ಷಕ್ಕೆ ಬಂದಿದೆ ಎಂದರೆ ತಪ್ಪಾಗುವುದಿಲ್ಲ. ಪ್ರತಿಪಕ್ಷ ನಾಯಕರನ್ನಾಗಿ ಆರ್. ಅಶೋಕ್ ಅವರನ್ನು ನೇಮಿಸುತ್ತಿದ್ದಂತೆ ಆಡಳಿತ ಪಕ್ಷದಲ್ಲಿ ನಿಟ್ಟುಸಿರು ಬಿಟ್ಟಿದ್ದರು. ಇದಕ್ಕೆ ಕಾರಣ ಕಳೆದ ಮೂರ‍್ನಾಲ್ಕು ದಶಕಗಳಿಂದ ಅಶೋಕ್ ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಂಡು ಬಂದಿರುವ ರೀತಿ. ‘ಸಾಮ್ರಾಟ’ ಎನಿಸಿಕೊಂಡರೂ, ಯಾರಿಗೂ ‘ಕೆಡಕು’
ಬಯಸದೇ ಎಲ್ಲರೊಂದಿಗೂ ಒಂದಾಗಿರುವ ಅಶೋಕ್ ಪ್ರತಿಪಕ್ಷ ನಾಯಕನಾಗಿದ್ದರಿಂದ ಸುಗಮ ಕಲಾಪ ನಡೆಸಬಹುದು ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಸರಕಾರ ಬಂದಿತ್ತು. ಆದರೆ ನಾಯಕನಾಗಿ ಬೆಳೆಯಲು ತಮಗೆ ಸಿಕ್ಕಿರುವ ಎರಡನೇ ಅವಕಾಶವನ್ನು ಬಳಸಿಕೊಂಡು, ಬೆಳಗಾವಿ ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ ಎಂದು ಕೆಲವರು ಭಾವಿಸಿದ್ದರು.

ಹಾಗೆ ನೋಡಿದರೆ, ಹಲವರ ವಿರೋಧದ ನಡುವೆಯೂ ವಿಧಾನಸಭಾ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ ನಾಯಕನಾಗಿ ಹೊರಹೊಮ್ಮಲು ಸಿಕ್ಕಿರುವುದು ಇದೇ ಮೊದಲ ಅವಕಾಶವೇನಲ್ಲ. ಈ ಹಿಂದೆ ೨೦೧೩ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಉಪಮುಖ್ಯಮಂತ್ರಿ ಯಾಗುವ, ಮುಂದೊಂದು ದಿನ ರಾಜ್ಯ ಮಟ್ಟದ ನಾಯಕ, ಒಕ್ಕಲಿಗ ಸಮುದಾಯದ ಮಾಸ್ ನಾಯಕತ್ವ ಹಿಡಿಯುವ ಅವಕಾಶವನ್ನು ಅವರು ಪಡೆದಿದ್ದರು. ಆದರೆ ಅಶೋಕ್ ತಮ್ಮಲ್ಲಿನ ‘ಹೊಂದಾಣಿಕೆ’ ಮನಸ್ಥಿತಿಯಿಂದಾಗಿ ಸಿಕ್ಕ ಅವಕಾಶವನ್ನು ಕಳೆದುಕೊಂಡು ‘ಎಲ್ಲರಲ್ಲಿ ಒಂದಾಗಿ’ ಹೋದರು.

ಅದರಲ್ಲಿಯೂ ೨೦೧೮ರಲ್ಲಿ ಬೆಂಗಳೂರಿನಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಐದು ಸಾವಿರ ಬೈಕ್ ರ‍್ಯಾಲಿ ನಡೆಸಲು ಹೋಗಿ, ಕೈಸುಟ್ಟುಕೊಂಡು ವೇದಿಕೆಯಲ್ಲೇ ಶಾ ಕೆಂಗಣ್ಣಿಗೆ ಗುರಿಯಾಗಿದ್ದ ಅಶೋಕ್, ಇದೀಗ ಸಿಕ್ಕ ಎರಡನೇ ಅವಕಾಶವನ್ನೂ ಬಳಸಿಕೊಳ್ಳುವಂತೆ ಕಾಣುತ್ತಿಲ್ಲ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಽವೇಶನದಲ್ಲಿ ಸರಕಾರದ ಚಳಿ ಬಿಡಿಸುವಷ್ಟು ವಿಷಯ ಪ್ರತಿಪಕ್ಷ ನಾಯಕನ ಕೈಯಲ್ಲಿತ್ತು. ಸ್ಪೀಕರ್ ಕುರ್ಚಿಗೆ ಸಂಬಂಽಸಿದಂತೆ ಜಮೀರ್ ಅಹ್ಮದ್ ನೀಡಿದ್ದ ಹೇಳಿಕೆ, ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲಿದ್ದ ಸಿಬಿಐ ಪ್ರಕರಣವನ್ನು ಹಿಂಪಡೆದದ್ದಿರ ಬಹುದು, ಗುತ್ತಿಗೆದಾರರ ಆರೋಪ, ಗುತ್ತಿಗೆದಾರರ ಮನೆ ಮೇಲಿನ ದಾಳಿ, ರಾಷ್ಟ್ರೀಯ ಶಿಕ್ಷಣ ನೀತಿಯ ರದ್ದು ಸೇರಿದಂತೆ ಸಾಲು ಸಾಲು ವಿಷಯಗಳಿದ್ದವು. ಈ ಎಲ್ಲ ವಿಷಯಗಳನ್ನು
ಒಂದೊಂದಾಗಿ ಎತ್ತಿಕೊಂಡು ಹೋರಾಡಿದ್ದರೆ, ೧೦ ದಿನಗಳ ಕಾಲ ನಡೆದ ಸದನ ಚರ್ಚೆಯಿಲ್ಲದೇ ಸಮಾಪ್ತಿಯಾಗಬೇಕಿತ್ತು.

ಆದರೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಈ ಎಲ್ಲ ವಿಷಯಗಳನ್ನು ಎತ್ತಿಕೊಂಡ ರೀತಿ, ಎತ್ತಿಕೊಂಡ ಸಮಯದಿಂದಾಗಿ ಈ ಯಾವ ವಿಷಯವೂ ದೊಡ್ಡದಾಗಿ ಕಾಣಿಸಲೇ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ, ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಈ ರೀತಿಯ ವಿಷಯಗಳು ಬಂದಾಗ ಎತ್ತಿಕೊಳ್ಳುತ್ತಿದ್ದ
ರೀತಿಯನ್ನು ಒಮ್ಮೆ ನೆನಪಿಸಿಕೊಂಡರೂ ಸರಕಾರವನ್ನು ಯಾವ ರೀತಿ ಇಕ್ಕಟ್ಟಿಗೆ ಸಿಲುಕಿಸಬಹುದು ಎನ್ನುವುದನ್ನು ತಿಳಿಯಬಹುದಾಗಿತ್ತು. ಅಷ್ಟೆಲ್ಲ ಏಕೆ, ಇದೇ ಅಧಿವೇಶನದಲ್ಲಿ ಈ ವಿಷಯಗಳನ್ನು ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ಎತ್ತಿಕೊಂಡಿರುವ ರೀತಿಯನ್ನು ನೋಡಿದ್ದರೂ, ಅಶೋಕ್‌ಗೆ ವಿಷಯಗಳ ಮಹತ್ವ ತಿಳಿಯುತ್ತಿತ್ತು. ಆದರೆ ಎರಡು ವಾರಗಳಲ್ಲಿ ಈ ಯಾವುದನ್ನೂ ಮಾಡದೇ, ಮುಂದೆ ನೋಡೋಣ ಎನ್ನುವ ಮನಸ್ಥಿತಿಯಲ್ಲಿಯೇ ಅವರು ದಿನ ಕಳೆದಿದ್ದು ಗಮನಿಸಿದರೆ ಬಿಜೆಪಿಯ ಹಲವು ನಾಯಕರು ಮಾಡುತ್ತಿರುವ ‘ಹೊಂದಾಣಿಕೆ’ ಆರೋಪ ಸುಳ್ಳಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಅಧಿವೇಶನದಲ್ಲಿ ಸುನೀಲ್‌ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಕೆಲ ಶಾಸಕರು ಕೆಲವೊಂದು ವಿಷಯವನ್ನು ಎತ್ತಿಕೊಂಡು ಸರಕಾರದ ವಿರುದ್ಧ ಮುಗಿಬೀಳಲು ಮುಂದಾದರೂ, ಅಶೋಕ್ ಎಲ್ಲರನ್ನು ತಣ್ಣಗಾಗಿಸುವ ಪ್ರಯತ್ನವನ್ನು ‘ಅಚ್ಚುಕಟ್ಟಾಗಿ’ ಮಾಡುತ್ತಿದ್ದುದು ಸ್ಪಷ್ಟವಾಗಿತ್ತು ಎಂಬ ಆರೋಪವಿದೆ. ಪೃಥ್ವಿ
ಸಿಂಗ್ ಹಾಗೂ ಬೆಳಗಾವಿ ಕಾರ್ಪೊರೇಟರ್ ಹಲ್ಲೆ ಪ್ರಕರಣದಲ್ಲಿಯೂ, ಅಶೋಕ್ ತೋರಿದ ‘ಡಿಫೆನ್ಸಿವ್’ ನಡೆಯೇ ಬಿಜೆಪಿಯ ಹಲವು ಶಾಸಕರ ಅಸಮಾಧಾನಕ್ಕೆ
ಕಾರಣವಾಯಿತು.

ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯನ್ನೇ ಮರೆತಿದ್ದ ರಾಷ್ಟ್ರೀಯ ಬಿಜೆಪಿ ನಾಯಕರು ಹಲವು ಒತ್ತಡದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.
ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕರನ್ನಾಗಿ ಆರ್.ಅಶೋಕ್‌ರನ್ನು ನೇಮಿಸುತ್ತಿದ್ದಂತೆ ಹಲವು ಹಿರಿಯ ನಾಯಕರು, ನಿಷ್ಠಾವಂತ ಕಾರ್ಯಕರ್ತರು ವರಿಷ್ಠರ ಈ ನಡೆಯನ್ನು ವಿರೋಽಸಿದ್ದರು. ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಯಡಿಯೂರಪ್ಪ ಅವರನ್ನು ಓಲೈಸಲು ಈ ಎರಡು
ನೇಮಕಗಳಾಗಿವೆ ಎನ್ನುವ ಮಾತುಗಳನ್ನಾಡಿದ್ದರು. ಪಕ್ಷದ ವಿರುದ್ಧ ಎಂದೂ ಧ್ವನಿ ಎತ್ತದ ಅರವಿಂದ ಲಿಂಬಾವಳಿ, ಸಿ.ಟಿ.ರವಿ ಅಂಥವರೂ ಬಹಿರಂಗವಾಗಿಯೇ ವಿರೋಽಸಿದ್ದರೆ, ಅಶ್ವತ್ಥನಾರಾಯಣ, ಸುನೀಲ್‌ಕುಮಾರ್, ಅರವಿಂದ ಬೆಲ್ಲದ್‌ರಂಥ ನಾಯಕರೂ ವರಿಷ್ಠರ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಎರಡೂ ನೇಮಕಗಳಿಗೆ ವಿರೋಧ ವ್ಯಕ್ತವಾಗಲು ಪ್ರಮುಖ ಕಾರಣ ತಮಗೆ ಅಽಕಾರ ಸಿಕ್ಕಿಲ್ಲ ಎನ್ನುವುದಕ್ಕಿಂತ ‘ಹೊಂದಾಣಿಕೆ’ ಮಾಡಿಕೊಂಡೇ ಬಂದಿರುವ ನಾಯಕರನ್ನು ಇಂಥ ಆಯಕಟ್ಟಿನ ಸ್ಥಳದಲ್ಲಿ ಕೂರಿಸಿದ್ದಾರೆ ಎಂಬುದು. ವಿಜಯೇಂದ್ರ ಸರಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸದೇ ಹೋದರೂ ಸಂಘಟನೆಯ ವಿಷಯದಲ್ಲಿ ಪಕ್ಷವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ, ಲಿಂಗಾಯತರನ್ನು ಹಾಗೂ ಯುವಕರನ್ನು ಪಕ್ಷದಲ್ಲಿಯೇ ಹಿಡಿದಿಟ್ಟುಕೊಳ್ಳುವು ದಕ್ಕೆ ಬೇಕಿರುವ ಎಲ್ಲ ಪ್ರಯೋಗಗಳನ್ನು ಮಾಡುತ್ತಾರೆ ಎನ್ನುವುದು ಕೆಲವರ ವಾದವಾಗಿದೆ. ಆದರೆ ಬಿಜೆಪಿಯ ಹಿರಿಯ ನಾಯಕ ಎನಿಸಿಕೊಂಡಿರುವ ಅಶೋಕ್ ಮಾತ್ರ ಈ
ರೀತಿಯ ಯಾವುದೇ ಭರವಸೆಯನ್ನು ಉಳಿಸಿಕೊಳ್ಳುತ್ತಿಲ್ಲ.

ಸದನದಲ್ಲಿ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿ, ಸದನದ ಹೊರಗೆ ಹೋರಾಟ ಮಾಡುತ್ತೇವೆ ಎನ್ನುವ ಹೇಳಿಕೆಯಲ್ಲಿಯೇ ಹೊಂದಾಣಿಕೆಯ ನೆರಳಿದೆ ಎನ್ನುವುದು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ‘ಆಫ್ ದಿ ರೆಕಾರ್ಡ್’ ಮಾತನಾಡುವಾಗ, ಸದನದೊಳಗಿನ ಹೋರಾಟದ ಬಗ್ಗೆ ಕೇಳಿದರೆ ‘ಸಂಖ್ಯಾಬಲ’ ಕಡಿಮೆಯಿದೆ. ನಾವು ಧರಣಿ ಮಾಡಿದರೂ, ಅವರಿಷ್ಟಕ್ಕೆ ಅವರು ಸದನ ನಡೆಸಿಕೊಂಡು, ಬಿಲ್ ಪಾಸ್ ಮಾಡಿಕೊಂಡು ಹೋಗುತ್ತಾರೆ. ಹೀಗಿರುವಾಗ ನಾವೇನು ಮಾಡಲು ಸಾಧ್ಯ? ಎನ್ನುವ ಅಸಹಾಯಕತೆಯನ್ನು ಅಶೋಕ್ ಪತ್ರಕರ್ತರ ಎದುರು ಹೇಳಿಕೊಂಡಿದ್ದಾರೆ. ಅದರಲ್ಲಿಯೂ ಜಮೀರ್
ಪ್ರಕರಣದಲ್ಲಿ ಇಡೀ ದಿನ ಬಾವಿಯಲ್ಲಿಯೇ ಕಾಲಕಳೆಯುವಂತೆ ಮಾಡಿದ್ದ ಬಳಿಕ ಸದನದ ಬಾವಿಗಿಳಿಯುವುದಕ್ಕೆ ಹೆದರುವ ಪರಿಸ್ಥಿತಿಯನ್ನು ಬಿಜೆಪಿ
ಸೃಷ್ಟಿಸಿಕೊಂಡಿದೆ.

ಯಾವುದೇ ಪ್ರತಿಪಕ್ಷಕ್ಕಾದರೂ ಇದೇ ಪರಿಸ್ಥಿತಿಯಿರುತ್ತದೆ. ಆದರೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೂತವರು ಯಾವ ರೀತಿ ಕಲಾಪವನ್ನು ನಿಭಾಯಿಸುತ್ತಾರೆ
ಎನ್ನುವುದರ ಮೇಲೆ, ಪ್ರತಿಪಕ್ಷ ನಾಯಕನ ‘ಗಟ್ಟಿತನ’ ಪ್ರದರ್ಶನವಾಗುತ್ತದೆ. ಹಾಗೆ ನೋಡಿದರೆ, ಸದನದೊಳಗೆ ಮಾತ್ರವಲ್ಲದೆ ಸದನ ಹೊರಗೂ ಬಿಜೆಪಿ ಹೋರಾಟದಲ್ಲಿ ಹಿಂದೆ ಬಿದ್ದಿದೆ ಎನ್ನುವುದು ಹಲವರ ವಿಶ್ಲೇಷಣೆಯಾಗಿದೆ. ಈ ಹಿಂದೆ ಯಡಿಯೂರಪ್ಪ, ಅನಂತಕುಮಾರ್ ಅವರ ಕಾಲದಲ್ಲಿ ಸಣ್ಣ ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಬೀದಿಗಿಳಿದು ಹೋರಾಡುತ್ತಿತ್ತು. ಬಿಜೆಪಿ ಸಂಘಟನೆ ಗಟ್ಟಿಯಾಗುವುದಕ್ಕೆ ಸಂಘ-ಪರಿವಾರದ ಶ್ರೀರಕ್ಷೆಯೊಂದಿಗೆ
ಜನಪರ ವಿಷಯದಲ್ಲಿ ನಡೆಸಿದ ಹೋರಾಟವೂ ಕಾರಣ.

ಆದರೀಗ ನೆಪಮಾತ್ರಕ್ಕೆ ಒಂದು ಪ್ರತಿಭಟನೆ ನಡೆಸಿ, ಅಲ್ಲಿಂದ ಒಂದು ವರದಿ ಸಿದ್ಧಪಡಿಸಿ ಅದನ್ನು ರಾಜ್ಯಾಧ್ಯಕ್ಷರಿಗೆ ಅಥವಾ ರಾಷ್ಟ್ರೀಯ ಅಧ್ಯಕ್ಷರಿಗೆ ರವಾನಿಸಿ ತಮ್ಮ ಕೆಲಸ ಮುಗಿಯಿತು ಎನ್ನುವ ಮನಸ್ಥಿತಿಯಲ್ಲಿ ಬಿಜೆಪಿಯ ಹಲವರಿದ್ದಾರೆ. ಬೆಳಗಾವಿ, ಕೋಲಾರದ ಪ್ರಕರಣಗಳಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಿ, ಅಲ್ಲಿಗೊಂದು ಭೇಟಿ ನೀಡಿ, ಅಲ್ಲಿ ಸಂತೈಸಿ ನಾಯಕರು ವಾಪಾಸಾಗುತ್ತಿರುವುದು ಇದಕ್ಕೆ ತಾಜಾ ಉದಾಹರಣೆ ಎಂದರೆ ತಪ್ಪಾಗುವುದಿಲ್ಲ. ಸದನದ ಹೊರಗಿನ ಹೋರಾಟಗಳೊಂದಿಗೆ, ಪ್ರತಿಪಕ್ಷಗಳಿಗೆ ಆಡಳಿತಪಕ್ಷವನ್ನು ಕಟ್ಟಿಹಾಕಲು ಇರುವ ಸುವರ್ಣ ಅವಕಾಶವೆಂದರೆ ಅದು ಕಲಾಪದ ಸಮಯ.

ಬಹುಮತವಿಲ್ಲ ಎನ್ನುವ ಕಾರಣಕ್ಕೆ ಸುಮ್ಮನೆ ಕೂರಬೇಕಾಗಿಲ್ಲ. ಬಹುಮತವಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಸದನದೊಳಗೆ ಹೋರಾಟವನ್ನೇ ಮಾಡದೇ ಎಲ್ಲದಕ್ಕೂ ‘ಓಕೆ’ ಎಂದರೆ ಪ್ರತಿಪಕ್ಷಕ್ಕಿರುವ ಮಹತ್ವವೇ ಕಡಿಮೆಯಾಗುತ್ತದೆ. ಈ ಅಧಿವೇಶನದಲ್ಲಿ ಕಾಣಿಸಿದ ಬಹುದೊಡ್ಡ ಕೊರತೆಯೆಂದರೆ,
ಸ್ವತಃ ಪ್ರತಿಪಕ್ಷ ನಾಯಕನಿಗೆ ಸದನದ ನಡಾವಳಿಯ ಅರಿವಿಲ್ಲ. ಯಾವ ವಿಷಯವನ್ನು ಯಾವಾಗ ಎತ್ತಿಕೊಳ್ಳಬೇಕು, ಅದಕ್ಕೆ ಸದನದ ನಿಯಮಾವಳಿಯಲ್ಲಿರುವ
ಅವಕಾಶ ಇತ್ಯಾದಿಗಳ ಬಗ್ಗೆ ಅವರಿಗೆ ಮಾಹಿತಿಯ ಕೊರತೆಯಿರುವುದು ಸ್ಪಷ್ಟವಾಗಿತ್ತು. ಈ ಹಿಂದೆ ಅಮಿತ್ ಶಾ ಸಮಾವೇಶದ ಫ್ಲಾಪ್‌ಶೋನಿಂದ ವಿಶ್ವಾಸ ಕಳೆದುಕೊಂಡಿದ್ದ ಅಶೋಕ್, ಎರಡನೇ ಬಾರಿಗೆ ಸಿಕ್ಕಿರುವ ಅವಕಾಶವನ್ನು ‘ಹೊಂದಾಣಿಕೆ’ ಕಾರಣಕ್ಕೆ ಕೈಚೆಲ್ಲುವ ಮೂಲಕ ಸಿಕ್ಕ ಬಂಗಾರದಂಥ ಅವಕಾಶವನ್ನು ಕಳೆದುಕೊಳ್ಳುವರೇ ಎನ್ನುವ ಪ್ರಶ್ನೆಯು ಅಧಿಕಾರ ಹಿಡಿದ ಎರಡೇ ತಿಂಗಳಿಗೆ ಕಾಣಿಸಿಕೊಳ್ಳುವಂತೆ ಮಾಡಿಕೊಂಡಿದ್ದು ವಿಪರ್ಯಾಸ.