ಅವಲೋಕನ
ಮಲ್ಲಿಕಾರ್ಜುನ ಹೆಗ್ಗಳಗಿ
ಒಂದು ಕೆಲಸವಾಗಬೇಕಾದರೆ ಜನಸಾಮಾನ್ಯರು ರಾಜಕೀಯ ಮುಖಂಡರ ಕಚೇರಿಗೆ ನೂರಾರು ಬಾರಿ ಅಲೆಯುವ ಸಂದರ್ಭದಲ್ಲಿ ‘ನಿಮ್ಮ ಕೆಲಸವನ್ನು ನಾನು ಇಂದೇ ಮಾಡಿಕೊಡುತ್ತೇನೆ, ನಾಳೆ ನಾನು ಅಧಿಕಾರದಲ್ಲಿ ಇರುವ ಭರವಸೆ ಇಲ್ಲ.’ ಎನ್ನುವ ಈ
ಮನದಟ್ಟುವ ಮಾತುಗಳನ್ನು ವಿಧಾನ ಪರಿಷತ್ ನೂತನ ಸಭಾಪತಿಯಾದ ಬಸವರಾಜ ಹೊರಟ್ಟಿ ಒಂದು ಫಲಕದಲ್ಲಿ
ಬರೆಸಿ ತಮ್ಮ ಹುಬ್ಬಳ್ಳಿಯ ಗೃಹ ಕಚೇರಿಯಲ್ಲಿ ತೂಗು ಹಾಕಿದ್ದಾರೆ. ಇದು ಅವರ ಸೂಕ್ಷ್ಮ ಮನಸ್ಸಿಗೆ ಸಾಕ್ಷಿ.
ಇದೀಗ ವಿಧಾನ ಪರಿಷತ್ ಸಭಾಪತಿ ಗದ್ದಿಗೆ ಮೇಲೆ ಕುಳಿತುಕೊಳ್ಳಲು ಸಜ್ಜಾಗಿರುವ ಬಸವರಾಜ ಹೊರಟ್ಟಿ ಅವರು ಅರೆಕಾಲಿಕ ಶಿಕ್ಷಕನಿಂದ ಸಭಾಪತಿಯ ಸ್ಥಾನದಡವರೆಗೆ ಸಾಗಿ ಬಂದ ಹೋರಾಟದ ಹಾದಿ ಒಂದು ರೋಚಕ ಕಥನ. ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿಯವರು ೧೯೭೦- ೮೦ರ ದಶಕದಲ್ಲಿ ತಮ್ಮ ಶಾಲೆಯ ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದವರನ್ನು ಬಹಳಷ್ಟು ಶೋಷಣೆ ಮಾಡುತ್ತಿದ್ದರು. ಸರಕಾರದಿಂದ ಬಂದ ಸಂಬಳದಲ್ಲಿ ಹೆಚ್ಚಿನ ಭಾಗವನ್ನು ಆಡಳಿತ ಮಂಡಳಿಯವರೇ ಕಸಿದುಕೊಳ್ಳು
ತ್ತಿದ್ದರು. ಕೆಲಸದ ಭದ್ರತೆ ಇರಲಿಲ್ಲ.
ಸಣ್ಣ ಪುಟ್ಟ ಕಾರಣ ಗಳಿಗಾಗಿ ಶಿಕ್ಷಕರನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಕೆಲಸದಿಂದ ಕಿತ್ತುಹಾಕುತ್ತಿದ್ದರು. ಮಕ್ಕಳಿಗೆ ಪಾಠ ಹೇಳುವ ಗುರು ಸ್ಥಾನದಲ್ಲಿದ್ದ ಶಿಕ್ಷಕರು ಆಡಳಿತ ಮಂಡಳಿಯವರ ಮುಂದೆ ಕೈಕಟ್ಟಿ ಜೀತದಾಳುಗಳಂತೆ ನಿಂತುಕೊಳ್ಳುವ ಹೀನ ಪರಿಸ್ಥಿತಿ ಇತ್ತು.1976ರಲ್ಲಿ ನಡೆದ ಒಂದು ಸಣ್ಣ ಘಟನೆ ಕರ್ನಾಟಕ ಮಾಧ್ಯಮಿಕ ಶಾಲೆಗಳ ನೌಕರರ ಸಂಘ ಜನ್ಮ ತಾಳುವುದಕ್ಕೆ
ಕಾರಣವಾಯಿತು. ಆಗ ಹುಬ್ಬಳ್ಳಿ ಲ್ಯಾಮಿಂಗ್ಟನ್ ಹೈಸ್ಕೂಲ್ ನಲ್ಲಿ ಎಫ್.ಎಸ್. ಶಿರೂರ ಎಂಬುವರು ಶಿಕ್ಷಕರಾಗಿದ್ದರು.
ಅವರು ೯ನೇ ವರ್ಗದ ಒಬ್ಬ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ೩೬ಕ್ಕೆ ತಪ್ಪಿ ೨೬ ಅಂಕ ಹಾಕಿದರು (ಅದು ಕೂಡ ೬ ತಿಂಗಳ ಆಂತರಿಕ ಪರೀಕ್ಷೆಯಲ್ಲಿ) ಇದೇ ಕಾರಣಕ್ಕೆ ಅವರನ್ನು ಕೆಲಸದಿಂದ ಕಿತ್ತುಹಾಕಲು ಆಡಳಿತ ಮಂಡಳಿ ನಿರ್ಧಾರ ಮಾಡಿತು. ಆಗ ಲ್ಯಾಮಿಂಗ್ ಟನ್ ಸ್ಕೂಲ್ ಆಡಳಿತಾಧಿಕಾರಿಯಾಗಿದ್ದ ಮಹಾನಗರ ಪಾಲಿಕೆಯ ಕಮಿಷನರ್‌ಗೆ ವರದಿ ಕಳಿಸಿ ಶಿಕ್ಷಕ ಶಿರೂರರನ್ನು ತಕ್ಷಣ ವಜಾಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಈ ಘಟನೆ ಆಗ ಅದೇ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ಅವರ ಮನ ಕೆರಳಿಸಿತು.
ಶಿರೂರ ಮಾಸ್ತರ್‌ಗೆ ನೆರವಾಗುವ ದೃಷ್ಟಿಯಿಂದ ಹುಬ್ಬಳ್ಳಿಯ ತಮ್ಮ ೭-೮ ಸ್ನೇಹಿತರೊಂದಿಗೆ ನಗರ ಪಾಲಿಕೆ ಕಮೀಷನರ್
ಆಗಿದ್ದ ಐ.ಎ.ಎಸ್. ಅಽಕಾರಿ ಕೆ.ಎಂ. ಪೊನ್ನಪ್ಪ ಅವರನ್ನು ಭೇಟಿ ಮಾಡಿಮಶಿರೂರ ತಮಗೆ ಕಲಿಸಿದ ಶಿಕ್ಷಕರು. ಅವರು ಉತ್ತಮ ಶಿಕ್ಷಕರಾಗಿದ್ದಾರೆ. ಅವರನ್ನು ಕೆಲಸದಿಂದ ವಜಾ ಮಾಡಬಾರದೆಂದು’ ಮನವಿ ಮಾಡಿದರು. ಒಂದು ತೀರ ಸಣ್ಣ ತಪ್ಪಿಗೆ ಶಿಕ್ಷಕರನ್ನು ವಜಾ ಮಾಡುವ ಕ್ರೂರ ನಿರ್ಧಾರ ಕಮೀಷನರ್ ಅವರಿಗೂ ಸರಿ ಕಾಣಲಿಲ್ಲ. ಅವರು ಪ್ರಾಚಾರ್ಯರನ್ನು ಹಾಗೂ ಆಡಳಿತ ಮಂಡಳಿಯವರನ್ನು ಕರೆದು ಒಂದು ಸಣ್ಣ ತಪ್ಪಿಗೆ ಶಿಕ್ಷಕನನ್ನು ವಜಾ ಮಾಡುವ ದೊಡ್ಡ ಶಿಕ್ಷೆ ಕೊಡುವುದು ತಪ್ಪು ಎಂದು ಗದರಿಸಿ ಛೀಮಾರಿ ಹಾಕಿದರು.
ಶಿರೂರ ಮಾಸ್ತರರ ನೌಕರಿ ಉಳಿಯಿತು. ಈ ಗೆಲುವಿನಿಂದ ಉತ್ಸಾಹಿತರಾದ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರೆಲ್ಲಾ ಸೇರಿ ಸಂಘ ಕಟ್ಟುವ ನಿರ್ಧಾರ ಮಾಡಿದರು. ೧೨-೧೧-೧೯೭೬ ರಂದು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಜನ್ಮ ತಾಳಿತು. ಬಸವರಾಜ ಹೊರಟ್ಟಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು.
ಸಂಘ ಅಸ್ತಿತ್ವಕ್ಕೆ ಬಂದ ನಂತರ ಶಿಕ್ಷಕರ ಹಕ್ಕುಗಳಿಗಾಗಿ ದಿಟ್ಟ ಹೋರಾಟ ಆರಂಭವಾಯಿತು. ಸಂಬಳದಲ್ಲಿ ಆಡಳಿತ
ಮಂಡಳಿಗೆ ಹಣ ಕೊಡುವುದನ್ನು ಸಿಬ್ಬಂದಿ ವರ್ಗದವರು ಧೈರ್ಯವಾಗಿ ನಿಲ್ಲಿಸಿದರು. ಇದರಿಂದ ಆಡಳಿತ ಮಂಡಳಿ
ಯವರ ಪಿತ್ತ ನೆತ್ತಿಗೇರತೊಡಗಿತು. ಇದೇ ಕಾರಣಕ್ಕೆ ಹುಬ್ಬಳ್ಳಿಯ ಕೃಪಾನಂದ ಹೈಸ್ಕೂಲಿನ ಶಿಕ್ಷಕರಾಗಿದ್ದ ಬಾಲರೆಡ್ಡಿ
ಯವರನ್ನು ಆಡಳಿತ ಮಂಡಳಿಯವರು ಕೆಲಸದಿಂದ ವಜಾ ಮಾಡಿದರು. ಅವರ ಪರವಾಗಿ ಶಿಕ್ಷಕರ ಸಂಘ ಹುಬ್ಬಳ್ಳಿಯಲ್ಲಿ
ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹ ಹಾಗೂ ಧರಣಿ ಸತ್ಯಾಗ್ರಹ ಆರಂಭಿಸಿತು.
ಈ ಹೋರಾಟಕ್ಕೆ ಅನೇಕ ಕಾರ್ಮಿಕ ಸಂಘಟನೆಗಳು, ಜನಪರ ಸಂಘಟನೆಗಳು ನೇರವಾಗಿ ಬೆಂಬಲ ಸೂಚಿಸಿದವು. ಕೆ.ಎಸ್.ಆರ್.ಟಿ.ಸಿ, ಎಲ್.ಐ.ಸಿ ಹಾಗೂ ಕಾರ್ಖಾನೆಗಳ ಕಾರ್ಮಿಕ ಸಂಘಗಳು ಸಕ್ರಿಯವಾಗಿ ಹೋರಾಟದಲ್ಲಿ ಭಾಗವಹಿಸಿದವು. ಆದರೆ ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾಗಿದ್ದ ಪರವಾಗಿ ಆಯ್ಕೆಯಾಗಿದ್ದ ಆಗಿನ ವಿಧಾನ ಪರಿಷತ್ ಸದಸ್ಯರು ಆಡಳಿತ
ಮಂಡಳಿಯವರೊಂದಿಗೆ ಶಾಮೀಲಾಗಿ ಹೋರಾಟ ಮುರಿಯುವುದಕ್ಕೆ ಪ್ರಯತ್ನಿಸಿದರು. ಅದು ಹೋರಾಟ ನಿರತ ಶಿಕ್ಷಕರನ್ನು ಬಹಳಷ್ಟು ಕೆರಳಿಸಿತು. ಸಂಘದ ಅಧ್ಯಕ್ಷ ಬಸವರಾಜ ಹೊರಟ್ಟಿ ತಾವೇ ಚುಣಾವಣೆಗೆ ಸ್ಪರ್ಧಿಸಿ ಶಾಲಾ ನೌಕರರ ನೋವಿಗೆ ಗಟ್ಟಿ ಧ್ವನಿ ಒದಗಿಸಲು ನಿರ್ಧಾರ ಮಾಡಿದರು.
೧೯೮೦ರಲ್ಲಿ ನಡೆದ ವಿಧಾನ ಪರಿಷತ್ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದರು. ಇದರಿಂದ ಶಿಕ್ಷಕರ ಸಂಘಕ್ಕೆ ಆನೆ ಬಲ ಬಂದಿತು. ಚುನಾವಣೆಯ ಸಂದರ್ಭದಲ್ಲಿ ಮಿತ್ರರೆಲ್ಲ ಸೇರಿ ಚುನಾವಣೆ ಪ್ರಚಾರಕ್ಕೆ ೧೨ ಸಾವಿರ ರು. ಸಂಗ್ರಹಿಸಿಕೊಟ್ಟರು. ಮುಧೋಳ ತಾಲೂಕು ಇಂಗಳಗಿ – ಯಡಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಅವರ ತಾಯಿ ಮನೆಯಲ್ಲಿದ್ದ ಜೋಳ ಮಾರಿ, ೫೦೦ ರು. ಚುನಾವಣೆಗೆ ಕೊಟ್ಟರು. ಈ ಎರಡೂ ಸಂಗತಿಗಳನ್ನು
ಹೊರಟ್ಟಿ ಅವರು ಕಣ್ಣಲ್ಲಿ ನೀರು ತುಂಬಿಕೊಂಡು ಇಂದಿಗೂ ಸ್ಮರಿಸುತ್ತಾರೆ.
ಶಿಕ್ಷಕರ ಸಂಘಟನೆ ಕಳೆದ ನಾಲ್ಕು ದಶಕಗಳಿಂದ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಸತತ ಹೋರಾಟದ ಫಲವಾಗಿ ಸರಕಾರಿ ಶಾಲೆಗಳ ಶಿಕ್ಷಕರು ಪಡೆಯುವ ಮಾದರಿಯ ವೇತನ ಇತರ ಸೌಲಭ್ಯಗಳನ್ನು ಖಾಸಗಿ ಶಾಲೆಯ ಶಿಕ್ಷಕರು ಪಡೆಯುತ್ತಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಖಾಸಗಿ ಶಾಲೆಯ ಶಿಕ್ಷಕರು ಆತ್ಮಗೌರವದಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ. ವರ್ಗಾವಣೆ ಪಿಂಚಣಿ ಮುಂತಾದ ಸೌಲಭ್ಯಗಳ ವಿಷಯದಲ್ಲಿ ಕೆಲವು ತಾರತಮ್ಯಗಳು ಉಳಿದಿವೆ. ಇವುಗಳನ್ನು ಸರಿಪಡಿಸಲು
ಸಂಘ ಹೋರಾಟ ನಡೆಸಬೇಕು.
ಬಸವರಾಜ ಹೊರಟ್ಟಿ ೧೯೮೦ರಿಂದ ಸತತ ೭ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ಬರೋಬ್ಬರಿ ೪೦ ವರ್ಷವಾಯಿತು. ಭಾರತದ ರಾಜಕೀಯ ಚರಿತ್ರೆಯಲ್ಲಿ ಇದೊಂದು ದಾಖಲೆ. ಸತತ ೭ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಮತ್ತೊಬ್ಬ ನಾಯಕ ಇಡೀ ಭಾರತದಲ್ಲಿಯೇ ಇಲ್ಲ. ಪಾರ್ಟ್‌ಟೈಮ್ ಶಿಕ್ಷಕರಾಗಿ ಬದುಕು ಆರಂಭಿಸಿದ ಹೊರಟ್ಟಿ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ಮಾಡುವ ಅವಕಾಶ ದೊರೆಯಿತು. ಈ ಅವಧಿಯಲ್ಲಿ ೧೦೧೪ ಸರಕಾರಿ ಪ್ರೌಢ ಶಾಲೆ, ೪೯೨ ಪದವಿಪೂರ್ವ ಕಾಲೇಜ ಆರಂಭಿಸಿದ್ದು, ಒಂದು ದೊಡ್ಡ ದಾಖಲೆ. ಅತಂತ್ರವಾಗಿದ್ದ ೪೮ ಸಾವಿರ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ನೇಮಕ ಮಾಡಿದರು.
ಹೊರಟ್ಟಿಯವರ ಸದನದಲ್ಲಿಯೂ ಪ್ರಬುದ್ಧ ಮಾತುಗಾರಿಕೆಯಿಂದ ಹೆಸರಾಗಿದ್ದಾರೆ. ಅವರು ಯಾವ ಮುತುವರ್ಜಿಗೆ ಒಳಗಾಗದೆ ಸ್ಪಷ್ಟ ಮಾತುಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ರಾಜಕಾರಣದ ಹೊರಗೆ ನಿಂತು ಸತ್ಯವನ್ನು ಸದನದಲ್ಲಿ ಬಿಚ್ಚಿಡು ತ್ತಾರೆ. ತಮ್ಮ ತಾಯಿಯ ನೆನಪನ್ನು ಹಸಿರಾಗಿಡಲು ‘ಅವ್ವ’ ಪ್ರತಿಷ್ಠಾನ ಸ್ಥಾಪಿಸಿ ಅನೇಕ ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಹಲವಾರು ಸಾಧಕರಿಗೆ ಸನ್ಮಾನಿಸಿದ್ದಾರೆ.
ಇಂದಿಗೂ ತಮ್ಮ ಹುಟ್ಟೂರಿನೊಂದಿಗೆ ಭಾವನಾತ್ಮಕ ನಂಟನ್ನಿಟ್ಟುಕೊಂಡಿದ್ದಾರೆ. ತಮ್ಮದೇ ೧೦ ಎಕರೆ ಜಮೀನನ್ನು ಸರಕಾರಕ್ಕೆ ದೇಣಿಗೆಯಾಗಿ ನೀಡಿ ರಾಜ್ಯಕ್ಕೆ ಮಾದರಿ ಯಾಗುವಂಥ ಶಾಲೆಯನ್ನು ಪ್ರಾರಂಭಿಸಿದ್ದಾರೆ. ತಮ್ಮ ಮೂಲನೆಲೆಯಾದ ಇಂಗಳಗಿ – ಯಡಹಳ್ಳಿಯಲ್ಲಿ ತಮ್ಮ ಸರಳತನ ಮತ್ತು ಗಾಂಭೀರ್ಯತೆಯಿಂದ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.
ಹೊರಟ್ಟಿಯವರಿಗೆ ಈಗ ೭೪ರ ಇಳಿ ವಯಸ್ಸು. ಆದರೆ ಅವರು ತಮ್ಮ ಹೋರಾಟದ ಕಾವನ್ನು ಎಳ್ಳಷ್ಟೂ ಕಳೆದುಕೊಂಡಿಲ್ಲ. ಎಲ್ಲಿಯೇ ಶಿಕ್ಷಕರ ನೋವಿನ ಕೂಗನ್ನು ಕೇಳಿದರೆ ಹೊರಟ್ಟಿ ಅವರು ಅಲ್ಲಿ ಹಾಜರಿರುತ್ತಾರೆ.