Wednesday, 11th December 2024

ಹೊಯ್, ನಮ್ಮಲ್ಲಿ ದಿನಗಳು ಮಾರಾಟಕ್ಕಿವೆ

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ದೇವಸ್ಥಾನದಲ್ಲಿ ದೇವರು ಇರಬೇಕು ಅಲ್ಲವೇ? ಇದೆಂಥ ಪ್ರಶ್ನೆ! ದೇವಸ್ಥಾನ ಎಂದಾದ ಮೇಲೆ ದೇವರು, ಪೂಜಾರಿ ಇವೆಲ್ಲ ಇರಲೇ ಬೇಕು. ಆದರೆ ದೇವಸ್ಥಾನವೊಂದು ಉಳಿಯಬೇಕು ಎಂದರೆ ಅದಕ್ಕೆ ಭಕ್ತರು ಕೂಡ ಬೇಕು. ಭಕ್ತರೇ ಇಲ್ಲದ, ಬಾರದ ದೇವಸ್ಥಾನ
ಎಂದರೆ ದೇವರು ಕೂಡ ಕ್ರಮೇಣ ಸ್ಥಾನ ಕಳೆದುಕೊಳ್ಳುತ್ತಾನೆ.

ಡಾ. ರಾಜಕುಮಾರ್ ತಮ್ಮ ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದು ಬಾಯಿ ತುಂಬಾ ಕರೆಯುತ್ತಿದ್ದರು. ಅದು
ಅವರು ತಮ್ಮ ಅಭಿಮಾನಿಗಳಿಗೆ ಕೊಟ್ಟ ಸ್ಥಾನ. ಅವರಿಲ್ಲದಿದ್ದರೆ ನಾನಿಲ್ಲ ಎನ್ನುವ ಸೂಕ್ಷ್ಮತೆ. ಅಂಗಡಿಗೆ ಗ್ರಾಹಕನೇ ದೇವರು.
ಅಂಗಡಿಕಾರ ಸ್ವಲ್ಪವೇ ಅಸಡ್ಡೆ ತೋರಿದರೂ ಅಂದು ಅನಿವಾರ್ಯತೆಯಿಲ್ಲ ಎಂದಾದರೆ ಆತನ ಅಂಗಡಿಯನ್ನು ಯಾರೂ ಮೂಸಿ ಸಹಿತ ನೋಡುವುದಿಲ್ಲ. ಅವ ಮಹಾ ಅಧಿಕ ಪ್ರಸಂಗಿ ಎಂದು ಅಲ್ಲಿಗೆ ಹೋಗುವುದನ್ನೇ ಬಿಟ್ಟುಬಿಡುತ್ತಾರೆ.

ಹೀಗೆ ಹಲವು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಗ್ರಾಹಕ ನಿದ್ದರೆ ಮಾತ್ರ ಉತ್ಪಾದಕ ಮತ್ತು ಮಾರಾಟಗಾರನ
ಅಸ್ತಿತ್ವ. ಈ ಲೇಖನವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಓದುಗನೇ ಇಲ್ಲಿ ಮಹಾಪ್ರಭು. ಲೇಖಕ ಉತ್ಪಾದಕ.
ಓದುಗ ಓದಿದರೆ, ಒಪ್ಪಿಕೊಂಡರೆ ಮಾತ್ರ ಲೇಖನಕ್ಕೊಂದು ಬೆಲೆ ಮತ್ತು ಸ್ಥಾನ. ಉತ್ಪಾದನೆಯ ಗುಣಮಟ್ಟ ಇದ್ದರೆ,
ಕಾಪಿಟ್ಟುಕೊಂಡರೆ ಮಾತ್ರ ಅಲ್ಲಿ ಗ್ರಾಹಕ ಉಳಿಯುತ್ತಾನೆ.

ವಿಶ್ವೇಶ್ವರ ಭಟ್ಟರು ಈ ಮಾತನ್ನು ತುಂಬಾ ಮಾರ್ಮಿಕವಾಗಿ ಒಮ್ಮೆ ಹೇಳಿದ್ದುಂಟು. ಅಂಕಣಕಾರ ಸರಿಯಾಗಿ ಬರೆಯುತ್ತಿಲ್ಲ,
ಬರವಣಿಗೆಯಲ್ಲಿ ಹೊಸತಿಲ್ಲ, ತನಗೆ ಬೇಕಾದದ್ದು ಅಂಕಣದಿಂದ ಸಿಗುತ್ತಿಲ್ಲ ಎಂದಾದರೆ ಅಂಥ ಅಂಕಣಕಾರರನ್ನು ನಿರ್ದಾಕ್ಷಿಣ್ಯ ವಾಗಿ, ಊಟದಲ್ಲಿ ಸಿಗುವ ಬೇವಿನಸೊಪ್ಪಿನಂತೆ ಓದುಗ ಪಕ್ಕಕ್ಕಿಡುತ್ತಾನೆ. ಇದು ಅಕ್ಷರಶಃ ಸತ್ಯ. ಇದೊಂದು ಹೆದರಿಕೆ
ಅಂಕಣಕಾರನಾದವನಿಗೆ ಯಾವತ್ತೂ ಇರಬೇಕು. ಆ ಹೆದರಿಕೆ ಅಂಕಣಕಾರನನ್ನು ಎಚ್ಚರದಿಂದ ಬರೆಯುವ ಕೆಲಸಕ್ಕೆ ಹಚ್ಚಬೇಕು.

ಲೇಖನ ಬರೆಯುವವನಿಗೆ ಒಂದಿಷ್ಟು ಜವಾಬ್ದಾರಿ ಯಿರುತ್ತದೆ ಎನ್ನುವುದನ್ನು ಜರ್ನಲಿಸಂ ಶಾಸ್ತ್ರೀಯವಾಗಿ ಕಲಿಯದ
ನನ್ನಂಥವರಿಗೆ ಸಂಪಾದಕರಾಗಲಿ ಅಥವಾ ಪತ್ರಿಕೆಯಾಗಲಿ ಹೇಳುವುದೇ ಇಲ್ಲ. ಅದನ್ನು ತಿಳಿಸುವವರೇ ಓದುಗರು. ನಾನೇನು ದಶಕಗಳಿಂದ ನಿಯಮಿತವಾಗಿ ಲೇಖನ ಬರೆದವನಲ್ಲ. ಈಗ ಒಂದು ವರ್ಷಕ್ಕಿಂತ ಹಿಂದೆ ನಾನು ಮನಸ್ಸಿಗೆ ಬಂದಾಗಲೆಲ್ಲ ಲೇಖನವನ್ನು ಬರೆಯುತ್ತಿದ್ದೆ.

ವಿಶ್ವೇಶ್ವರ ಭಟ್ಟರು ನಿಯಮಿತವಾಗಿ ಬರೆಯಬೇಕು ಎಂದು ಹೇಳುತ್ತಲೇ ಇದ್ದದ್ದು ಸುಮಾರು ವರ್ಷವೇ ಆಗಿತ್ತು. ಅವರು ಹಾಗೆ ಹೇಳಿದಾಗಲೆಲ್ಲ ‘ಆಯ್ತು ಸರಿ ಖಂಡಿತ’ ಎಂದು ಒಂದೆರಡು ವಾರ ಬರೆದು ಆಮೇಲೆ ಒಂದೆರಡು ವಾರ ಕಳ್ಳಬೀಳುತ್ತಿದ್ದೆ. ಕರೋನಾ ಸಮಯದಲ್ಲಿ ಪ್ರತಿ ದಿನ ಅಮೆರಿಕಾದ ಸ್ಥಿತಿಗತಿಯ ಬಗ್ಗೆ ಬರೆಯಬೇಕು ಎಂದು ಫೋನ್ ಮಾಡಿ ಹೇಳಿದಾಗ ಅವರ ಓದುಗ ಅಭಿಮಾನಿ ಯಾದ ನನಗೆ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಮೊದಲೇ ಅಲ್ಲಿತ್ತು.

ಸುಮಾರು ಎರಡೂವರೆ ತಿಂಗಳು ಪ್ರತಿ ದಿನ ಬರೆದೆ. ಆಮೇಲೆ ಸುಸ್ತಾಗಿ ಹೋಗಿತ್ತು. ಇನ್ನು ಮೇಲೆ ವಾರಕ್ಕೊಮ್ಮೆ ಬರೆಯುತ್ತೇನೆ ಎಂದು ಅವರಿಗೆ ಮೆಸೇಜ್ ಮಾಡಿ ಜಾರಿಕೊಳ್ಳುವ ಕೆಲಸ ಮಾಡಿದೆ. ಆಮೇಲೆ ಯಥಾಪ್ರಕಾರ ನಾಯಿ ಬಾಲ ಡೊಂಕು ಎಂದಂತೆ, ಯಾವ ಯಾವಾಗಲೋ ಬರೆಯೋಕೆ ಶುರುಮಾಡಿದೆ. ಇದೆಲ್ಲದರ ಮಧ್ಯೆ ಕೆಲವು ಓದುಗರು ನಿಯಮಿತವಾಗಿ ಬರೆಯೋಕೆ ಏನು ರೋಗ ಎಂಬಂತೆ ಇಮೇಲ್ ಕಳಿಸುತ್ತಿದ್ದರು. ಉಹು, ಬಾಲ ಡೊಂಕಾಗಿಯೇ ಉಳಿಯಿತು.

ಆದರೆ ಒಂದು ದಿನ ಬಂದ ಇಮೇಲ್ ಮಾತ್ರ ವಿಭಿನ್ನವಾಗಿತ್ತು. ಅದನ್ನು ಕಳುಹಿಸಿದವರು ಮಹಾಲಕ್ಷ್ಮಿ ಟಿ.ವಿ, ಕುಂದಾಪುರ
ದವರು. ಅವರು ಇಮೇಲ್‌ನಲ್ಲಿ – ನೀವು ಯಾವಯಾವಗಲೋ ಬರೆಯುತ್ತೀರಿ, ಪ್ರತಿ ದಿನ ನಿಮ್ಮ ಲೇಖನ ಬಂದಿದೆಯೋ ಎಂದು ನೋಡುತ್ತೇನೆ. ಇನ್ನು ಮುಂದೆ ನಿಯಮಿತವಾಗಿ ಬರೆದು ನನ್ನನ್ನು ಈ ಕಷ್ಟದಿಂದ ಹೊರತರಬೇಕು ಎನ್ನುವ ಧಾಟಿಯಲ್ಲಿ ಬರೆದರು. ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ – ಅಂಥದ್ದೇ ಇಮೇಲ್ ಅನ್ನು ವಿಶ್ವೇಶ್ವರ ಭಟ್ಟರಿಗೂ ಕಳುಹಿಸಿದರು. ಭಟ್ಟರು
ಅಷ್ಟಕ್ಕೆ ಬಿಡುವವರೇ ಅಲ್ಲ. ಆ ಇಮೇಲ್ ಅನ್ನು ನನಗೆ ಕಳುಹಿಸಿ ಇನ್ನೊಮ್ಮೆ ತಿವಿದರು.

ಅದೇ ದಿನ ಇನ್ನು ಮುಂದೆ ವಾರಕ್ಕೊಮ್ಮೆ ಬರೆಯುತ್ತೇನೆ – ಒಂದು ದಿನ ನಿಗದಿಪಡಿಸಿ ಎಂದು ಒಪ್ಪಿಕೊಂಡದ್ದು. ಮಹಾಲಕ್ಷ್ಮಿ ಇವತ್ತಿಗೂ ಅಂಕಣವನ್ನು ಅರ್ಧ ಪುಟದಷ್ಟು ವಿಶ್ಲೇಷಿಸಿ ಇಮೇಲ್ ಮಾಡುತ್ತಾರೆ. ಅದರ ಜತೆ ಅವರಿಗೆ ತಿಳಿದ, ಲೇಖನದಲ್ಲಿ ನಮೂದಿಸದ ಹೊಸ ವಿಚಾರ ಗಳನ್ನು ಹಂಚಿಕೊಳ್ಳುತ್ತಾರೆ. ಈ ರೀತಿ ಅದೆಷ್ಟೋ ಓದುಗರಿಂದ ನಾನು ಕಲಿತದ್ದು ಬಹಳವಿದೆ. ಹೆಚ್ಚಿನ ಲೇಖನಗಳಲ್ಲಿ ಕೆಲವೊಂದು ವಿಚಾರಗಳನ್ನು ಬೇಕೆಂತಲೇ ಮುಟ್ಟದೆ ಬಿಡುವುದು ನನ್ನ  ಅಭ್ಯಾಸ. ಓದುಗನಿಗೆ ಒಂದಿಷ್ಟು ಆಯಾಮ ಹುಟ್ಟುಹಾಕಬೇಕು ಮತ್ತು ಆ ಮೂಲಕ ವಿಚಾರಕ್ಕೆ ಅವಕಾಶ ಇಡಬೇಕು ಎನ್ನುವುದು ನನ್ನ ನಂಬಿಕೆ.

ಅಂತಹ ವಿಚಾರಗಳನ್ನು ಇಮೇಲ್ ಮೂಲಕ ಓದುಗರು ಬರೆದು ತಿಳಿಸಿದಾಗ ಅದೊಂದು ಸಾರ್ಥಕ್ಯದ ಭಾವ. ಇದರಿಂದ ನನ್ನ ಅರಿವಿಗೆ ಬರುವ ಇನ್ನೊಂದು ವಿಚಾರ ಎಂದರೆ ಓದುಗರು ಯಾವತ್ತೂ ಬರಹಗಾರನಿಗಿಂತ ಬುದ್ಧಿವಂತರು ಎನ್ನುವುದು. ನನ್ನ ಮಟ್ಟಿಗೆ ಇದೆಲ್ಲ ಹೊಸತು. ಇನ್ನೊಬ್ಬರು ಸುಜಯಾ ಕೊಣ್ಣೂರ್. ನನಗೆ ಲೇಖನ ಬರೆದ ನಂತರ ಅದನ್ನು ಮತ್ತೆ ಪತ್ರಿಕೆಯಲ್ಲಿ ಓದುವುದು ಒಂಥರಾ ಆಲಸ್ಯ. ಅಡುಗೆ ಭಟ್ಟರಿಗೆ ಪಂಕ್ತಿಯಲ್ಲಿ ಕೂತು ಊಟ ಮಾಡುವ ಅನುಭವ.

ಪತ್ರಿಕೆ ಪ್ರಿಂಟ್ ಆಗಿ ಕೆಲವೇ ಗಂಟೆಗಳಲ್ಲಿ ಮೊಬೈಲ್ ನೋಡಿದರೆ ಅದರ ತಪ್ಪು ಒಪ್ಪುಗಳ ಸಂದೇಶ ಸುಜಯಾ ಅವರಿಂದ
ಬಂದಿರುತ್ತದೆ. ಚಿಕ್ಕ ತಪ್ಪಿದ್ದರೂ ಪ್ರೀತಿಯಿಂದ ಮೊಟಕುತ್ತಾರೆ. ಇದನ್ನು ಸರಿಮಾಡಿಕೊ ಎನ್ನುತ್ತಾರೆ. ಲೇಖನ ಇಷ್ಟವಾಯಿ ತೆಂದರೆ ಏಕೆ ಇಷ್ಟವಾಯಿತು ಎಂದು ವಿವರಿಸುತ್ತಾರೆ. ಇದೇ ರೀತಿ ಫೇಸ್ಬುಕ್‌ನಲ್ಲಿ ಸರಿ ತಪ್ಪುಗಳನ್ನು ಹೇಳುವ ಶಂಕರ್ ಮಂದಗೆರೆ,
ಹೀಗೆ ಬಹಳಷ್ಟು ಓದುಗರಿದ್ದಾರೆ. ಓದುಗರ ಅಭಿಪ್ರಾಯ ಎಂದರೆ ಲೇಖಕನಿಗೆ – ಯಕ್ಷಗಾನದಲ್ಲಿ ಮೃದಂಗ ಬಾರಿಸುವವರ, ಸಂಗೀತ ಕಚೇರಿಯಲ್ಲಿ ತಬಲಾ ಬಾರಿಸುವವರ ಬಳಿ ಇರುವ ಸುತ್ತಿಗೆಯಂತೆ.

ಶ್ರುತಿ ಸ್ವಲ್ಪವೇ ತಪ್ಪಿದರೂ ಕುಟ್ಟಿ ಅದನ್ನು ಸರಿಮಾಡುವವರೇ ಓದುಗರು. ಸುತ್ತಿಗೆಯ ಹೊಡೆತ ಬೀಳುತ್ತಿದೆ ಎಂದಾದರೆ ವಾದ್ಯ ಜೀವಂತವಾಗಿದೆ ಎಂದರ್ಥ. ಇವರೆಲ್ಲ ಸ್ಟಾರ್ ಓದುಗರು. ಪೀಠಿಕೆ ತುಂಬಾ ಉದ್ದವಾಯಿತು ಅಲ್ಲವೇ! ಆದರೂ ಇದಿಷ್ಟನ್ನು ಹೇಳಲೇ ಬೇಕಿತ್ತು. ಅದು ಸಾಮಾನ್ಯ ಬರಹಗಾರನೊಬ್ಬ ಓದುಗನಿಗೆ ಕೊಡಲೇಬೇಕಾದ ಗೌರವ. ಅದನ್ನು ಹೊರಹಾಕದೇ ಹೆಚ್ಚು ದಿನ ಇಟ್ಟುಕೊಳ್ಳಲಾಗುವುದಿಲ್ಲ.

ಈಗ ಹೇಳಬೇಕಾದ ಇನ್ನೊಂದು ವಿಷಯಕ್ಕೆ ಬರೋಣ. ಹಿಂದಿನ ವಾರ ಪ್ರಾಣಿಯ ಉಪ್ಪಿನ ಅವಶ್ಯಕತೆಯ ಬಗ್ಗೆ ಬರೆದಿದ್ದೆ. ಕಾಗೆ
ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಹೊಂದಿಕೆಯಾದಂತೆ ಅದೇ ದಿನ ಉಪ್ಪಿನ ಸತ್ಯಾಗ್ರಹ ಶುರುವಾದ ದಿನವಾಗಿತ್ತಂತೆ. ಅದನ್ನು ಹೇಳಿದವರೂ ಸುಜಯಾ ಅವರೇ. ಹೀಗೆ ಒಂದೆರಡು ಬಾರಿ ಕಾಕತಾಳೀಯ ಪ್ರಸಂಗವಾದಾಗ ಓದುಗರೇ ಅದನ್ನು ಗಮನಕ್ಕೆ ತಂದದ್ದು ಉಂಟು. ನನಗಂತೂ ಲೇಖನಕ್ಕೆ ವಿಷಯ ಆರಿಸಿಕೊಳ್ಳುವುದೆಂದರೆ ಅದೇ ದೊಡ್ಡ ಕಷ್ಟದ ಕೆಲಸ. ಒಂದು ರೀತಿಯಲ್ಲಿ ಹೆಂಗಸರಿಗೆ ಸೀರೆ ಅಂಗಡಿ ಹೊಕ್ಕ ಅನುಭವ ಅದು – ರಾಶಿಬೀಳುವ ಸೀರೆಯಲ್ಲಿ ಯಾವುದು ಆರಿಸಿಕೊಳ್ಳಬೇಕು ಎನ್ನುವುದೇ ಪ್ರಶ್ನೆಯಾದಂತೆ. ಏನೇನೋ ತಿಳಿದದ್ದೆಲ್ಲ ಉದ್ದದ ಲೇಖನಕ್ಕೆ ಸರಕಾಗುವುದೇ ಇಲ್ಲ. ಚಿಕ್ಕ ವಿಷಯ ಹಿಡಿದು ಅದನ್ನು ಹಿಗ್ಗಿಸುವ ಚಾಕಚಕ್ಯತೆ ಕೂಡ ನನ್ನಲ್ಲಿಇಲ್ಲ. ಈ ವಿಷಯ ಆಯ್ಕೆಯ ಕಷ್ಟ ಎಲ್ಲ ಲೇಖಕನಿಗೂ ಆಗುವ ಅನುಭವವೇ ಇರಬೇಕು. ಕೆಲವು ಲೇಖಕರು ಲೇಖನಕ್ಕೆ ಆಯ್ದುಕೊಳ್ಳುವ ವಿಷಯ ಅದು ಯಾವ ದಿನ ಪ್ರಕಟವಾಗುತ್ತದೆ ಮತ್ತು ಆ ದಿನದ ವಿಶೇಷ ಏನು ಎನ್ನುವುದರ ಮೇಲೆ.

ಓದುಗನಾದ ನನಗೆ ಅದೆಷ್ಟೋ ಬಾರಿ ಇದು ಹಬ್ಬದ ದಿನ ಸಿಗುವ ಹೋಳಿಗೆಯಂತೆ. ಆದರೆ ಅದು ಹೇಗೆ ಕರಾರುವಾಕ್ಕಾಗಿ ಅದೇ
ದಿನ ನೋಡಿಕೊಂಡು ಬರೆಯುತ್ತಾರೆ ಎನ್ನುವುದು ಕೆಲವೊಮ್ಮೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ
ಯಾವತ್ತೂ ಕಾಡುವುದು ಈ ದಿನಗಳನ್ನೆಲ್ಲ ಮಾಡಿದವರು ಯಾರು ಎನ್ನುವುದು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ನಾಗರಪಂಚಮಿ ಎಂಬಿತ್ಯಾದಿ ಹಬ್ಬಗಳು, ದಿನಗಳಿಗೆ ಅದರದೇ ಆದ ಇತಿಹಾಸವಿದೆ. ಇನ್ನು ಹುಡುಕಿ ಪಶ್ಚಿಮಕ್ಕೆ ಹೊರಟರೆ
ವ್ಯಾಲಂಟೈನ್ ಡೇ, ಹ್ಯಾಲೋವೀನ್ ಡೇ ಮೊದಲಾದವು ಗಳಿಗೆ ಕೂಡ ಸಾಂಸ್ಕೃತಿಕ, ಐತಿಹಾಸಿಕ ಕಾರಣಗಳು ಸಿಗುತ್ತವೆ. ಆದರೆ ಈ
ಮದರ್ಸ್ ಡೇ, -ದರ್ಸ್ ಡೇ, ಅಜ್ಜಾ ಅಜ್ಜಿ ಡೇ, ಪಿಜ್ಜಾ ಡೇ, ನಾಯಿ ಡೇ, ಬಟಾಟೆ ಚಿ ಡೇ, ಐಸ್ಕ್ರೀಮ್ ಡೇ ಇವೆಲ್ಲ ಯಾರ ಸೃಷ್ಟಿ? ಈ ದಿನಗಳ ಮದರ್ ಫಾದರ್‌ಗಳು ಯಾರು ಎನ್ನುವುದು.

ಇದೆಲ್ಲ ದಿನಗಳು ಹೇಗೆ ಮತ್ತು ಎಲ್ಲಿ ಹುಟ್ಟಿಕೊಂಡವು, ಅದನ್ನು ಒಪ್ಪಿಕೊಂಡವರು ಯಾರು, ಯಾರು ಈ ದಿನಗಳ ತಯಾರಕರು
ಎನ್ನುವುದು. ಮಾರ್ಚ್ 8 ವುಮೆನ್ಸ್ ಡೇ ಇತ್ತು. ಮಹಿಳೆಯರ ದಿನದಂದು ವಿಶ್ವವಾಣಿ ಕೂಡ ಗುಲಾಬಿ ಬಣ್ಣದಿಂದ ಶೃಂಗರಿಸಿ ಕೊಂಡಿತ್ತು. ಈ ಮಹಿಳಾ ದಿನದ ಮೂಲ ಹುಡುಕುತ್ತ ಹೋದಾಗ ಶತಮಾನದ ಹಿಂದಿನ ಘಟನೆಯೊಂದು ಇದಕ್ಕೆ ಪ್ರೇರಕ ಎನ್ನುವುದು ತಿಳಿದು ಬರುತ್ತದೆ. ನ್ಯೂಯಾರ್ಕ್ ನಗರದಲ್ಲಿ ಗಾರ್ಮೆಂಟ್ ಕಾರ್ಖಾನೆಯೊಂದರ ಮಹಿಳಾ ನೌಕರರು ಅವರ ಮೇಲೆ ಆಗುತ್ತಿದ್ದ ಶೋಷಣೆ ಮತ್ತು ತಾರತಮ್ಯದ ವಿರುದ್ಧ 1857ರ ಮಾರ್ಚ್ ೮ರಲ್ಲಿ ಬೀದಿಗಿಳಿದಿದ್ದರು. ಅಲ್ಲಿಂದ ಮುಂದೆ ಮಹಿಳೆಯರ ಮೇಲೆ ಆಗುತ್ತಿದ್ದ ಶೋಷಣೆಯ ವಿರುದ್ಧ ಧ್ವನಿ ಎತ್ತಲು ದಿನವೊಂದು ಗುರುತಾಗುವ ಅವಶ್ಯಕತೆಯಿತ್ತು.

ನಂತರದಲ್ಲಿ ಮಹಿಳಾ ದಿನ ಎಂದು ಗುರುತಿಸಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಮಹಿಳಾ ಧ್ವನಿಗಳು ಎದ್ದವು. ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ, ಸ್ವಿಜರ್‌ಲ್ಯಾಂಡ್ ಮಹಿಳೆಯರು ಒಂದೊಂದು ದಿನ ಧ್ವನಿ ಎತ್ತಲು ದಿನಗಳನ್ನು ಆಯ್ಕೆ ಮಾಡಿಕೊಂಡರು. ನಂತರದಲ್ಲಿ ನ್ಯೂಯಾರ್ಕ್‌ನ ಇತಿಹಾಸವಿದ್ದ ಮಾರ್ಚ್ ೮ನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ವಿಶ್ವಸಂಸ್ಥೆ ಅನುಮೋ ದಿಸಿತು. ಅಲ್ಲಿಂದ ಮುಂದೆ ಮಾರ್ಚ್ 8, ಮಹಿಳಾ ದಿನವಾಯಿತು. ಹೇಗೆ ದಿನವೊಂದು ಹುಟ್ಟಿಕೊಳ್ಳುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ. ಈ ಅಂತಾರಾಷ್ಟ್ರೀಯ ದಿನಗಳನ್ನು ಒಪ್ಪಿಕೊಳ್ಳುವ ಅನುಮೋದಿಸುವ ಕೆಲಸ ವಿಶ್ವಸಂಸ್ಥೆ ಯದ್ದು. ಇವತ್ತು ವಿಶ್ವಸಂಸ್ಥೆ ಘೋಷಿಸಿದ ಇಂಥ 125 ದಿನಗಳಿವೆ.

ಅದೆಲ್ಲವುದಕ್ಕೆ ಒಂದೊಂದು ಇತಿಹಾಸವಿದೆ, ಕಾರಣವಿದೆ. ಈ ದಿನಗಳ ಹಿನ್ನೆಲೆಯಲ್ಲಿ ನಾವು ಮತ್ತೊಮ್ಮೆ ನೆನಪು ಮಾಡಿಕೊಳ್ಳ ಬೇಕಾದ ಮತ್ತು ಅರಿವು ಜಾಗೃತಗೊಳಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಮನಗಂಡು ಅದನ್ನು ಒಪ್ಪಿಕೊಳ್ಳ ಲಾಗಿದೆ. ಹಾಗಂತ ದಿನಗಳನ್ನು ವಿಶ್ವಸಂಸ್ಥೆ ಸುಮ್ಮನೆ ಯಾರೋ ಹೇಳಿದ್ದಾರೆಂದು, ಅರ್ಜಿ ಹಾಕಿದ್ದಾರೆಂದು ಒಪ್ಪಿಕೊಂಡು ಬಿಡುವುದಿಲ್ಲ. ಎಲ್ಲ ಬಾರಿ ವಿಶ್ವಸಂಸ್ಥೆಯ ಒಳ್ಳೆಯತನ ಜಾಗೃತಗೊಂಡದ್ದಕ್ಕೆ ದಿನವೊಂದು ಹುಟ್ಟಿ ಬಿಡುವುದಿಲ್ಲ. ಕೆಲವು ದಿನ ಗಳನ್ನು ವಿಶ್ವಸಂಸ್ಥೆ ಒಪ್ಪಿಕೊಳ್ಳುವಂತೆ ಮಾಡಲು ರಾಜಕೀಯ ಶಕ್ತಿಯ ಬಳಕೆ ಕೂಡ ಆಗಬೇಕಾಗುತ್ತದೆ.

ಅದಕ್ಕೆ ಒಂದು ಉದಾಹರಣೆ ಆಫ್ರಿಕಾ ವಲ್ಡ್ ಹೆರಿಟೇಜ್ ಡೇ. ಜಗತ್ತಿನ ಶೇ.12ರಷ್ಟು ಪಾರಂಪರಿಕ ಸ್ಥಳಗಳು ಆಫ್ರಿಕಾದಲ್ಲಿದ್ದರೂ ಇಂಥದ್ದೊಂದು ದಿನವನ್ನು ಕೀನ್ಯಾ ಅನುಮೋದಿಸಿ ದಶಕ ಕಳೆದರೂ ಯುನೈಟೆಡ್ ನೇಶನ್ಸ್ ಕ್ಯಾರೇ ಅನ್ನಲಿಲ್ಲ. ಆಮೇಲೆ ಆಫ್ರಿಕಾದ 23 ದೇಶಗಳು ಗಲಾಟೆ ಮಾಡಿದಾಗ ಕೊನೆಗೆ ಮೇ 5 ಅನ್ನು ಜಾಗತಿಕ ಆಫ್ರಿಕಾ ಪಾರಂಪರಿಕ ದಿನ ಎಂದು ವಿಶ್ವಸಂಸ್ಥೆ ಒತ್ತಾಯಕ್ಕೆ ಒಪ್ಪಿಕೊಳ್ಳಬೇಕಾಯಿತು. ಎರಡನೆಯ ಉದಾಹರಣೆ ಅಂತಾರಾಷ್ಟ್ರೀಯ ಯೋಗ ದಿನ.

ನರೇಂದ್ರ ಮೋದಿ ವಿಶ್ವಸಂಸ್ಥೆಯ ಡಯಾಸ್‌ನಲ್ಲಿ ನಿಂತು ಅಂತಾರಾಷ್ಟ್ರೀಯ ಯೋಗ ದಿನವನ್ನು ಅನುಮೋದಿಸಿದ್ದರು. ಆದರೆ ಅಸಲಿಗೆ ಹೀಗೆ ಅನುಮೋದಿಸು ವುದಕ್ಕಿಂತ ಮೊದಲೇ ಬಹಳ ತಯಾರಿ ನಡೆಸಿಕೊಂಡಿದ್ದರು. ಅದನ್ನು ಎಷ್ಟು ದೇಶಗಳು ಒಪ್ಪುತ್ತವೆ ಎಂದೆಲ್ಲ ಮೊದಲೇ ಲೆಕ್ಕ ಹಾಕಲಾಗಿತ್ತು, ಸಾಧ್ಯತೆಯನ್ನು ತಿಳಿದುಕೊಳ್ಳಲಾಗಿತ್ತು. ಹೀಗೆ ಅನುಮೋದಿಸಿದ ನಂತರ ಅದು ವಿಶ್ವಸಂಸ್ಥೆಯಲ್ಲಿ ವೋಟ್ ಗೆ ಹಾಕಲಾಗುತ್ತದೆ. ಅದರಲ್ಲಿ ಆ ದಿನ ಒಪ್ಪಿಕೊಳ್ಳಲು ಬೇಕಾದಷ್ಟು ವೋಟ್ ಸಿಗಲಿಲ್ಲ ಎಂದರೆ ಅದು ನಾಯಕನಿಗೆ ಆಗುವ ಜಾಗತಿಕ ಅವಮಾನದ ವಿಚಾರ. ಆ ಅನುಮೋದನೆಯನ್ನು 177 ದೇಶಗಳು ಒಪ್ಪಿಕೊಂಡ
ಮೇಲೆಯೇ ಯೋಗದಿನ ಜಾರಿಗೆ ಬಂದದ್ದು. ಈ ಕೆಲಸವನ್ನು ಕೆಲವರ್ಷದ ಹಿಂದೆ ಐ.ಕೆ. ಗುಜ್ರಾಲ್, ಚರಣ್ ಸಿಂಗ್,
ಚಂದ್ರಶೇಖರ್ ಅಥವಾ ಮನಮೋಹನ್ ಸಿಂಗ್ ಅನುಮೋದಿಸಿದ್ದರೆ ಹೀಗೊಂದು ಒಪ್ಪಿಗೆ ಸಿಗುವ ಸಾಧ್ಯತೆಯಿರಲಿಲ್ಲ.

ಅದೇ ಕಾರಣಕ್ಕೆ ಹಿಂದೆ ಬಂದ ಅದೆಷ್ಟೋ ಪ್ರಧಾನಿಗಳು ಇಂಥದ್ದೊಂದು ಅನುಮೋದಿಸುವ ಹರಸಾಹಸಕ್ಕೆ ಕೈ ಹಾಕಿರಲೇ ಇಲ್ಲ. ಇದು ಅಂತಾರಾಷ್ಟ್ರೀಯ ದಿನಗಳ ಕಥೆಯಾಯಿತು. ಇನ್ನು ಕೆಲವು ಚಿತ್ರವಿಚಿತ್ರ ದಿನಗಳಿವೆಯಲ್ಲ. ಕೇಕ್ ಡೇ, ಶುಂಠಿ ಡೇ, ಐರಿಷ್ ಕಾಫಿ ಡೇ, ವೆಜಿಟೇರಿಯನ್ ಡೇ, ಪರ್ಪಲ್ ಡೇ, ಲಿಂಬು ಡೇ, ನರ್ಸ್ ಡೇ, ಟೀಶರ್ಟ್ ಡೇ, ಕೋಳಿಮೊಟ್ಟೆ ಡೇ, ಚಿಕನ್ ಡೇ, ಕೂದಲು ಡೇ, ನಿಮಗೆ ಬೇಕಾದದ್ದನ್ನು ತಿನ್ನುವ ಡೇ ಹೀಗೆ ಬರೋಬ್ಬರಿ ಆರು ಸಾವಿರಕ್ಕಿಂತ ಜಾಸ್ತಿ ದಿನಗಳಿವೆ. ಈ ಲಿಸ್ಟ್ ಅನ್ನು ನೋಡುತ್ತಾ ಹೋದಂತೆಲ್ಲ ನಗಬೇಕೋ ಏನುಮಾಡಬೇಕು ಎಂದು ಗೊತ್ತಾಗುವುದಿಲ್ಲ.

ಕೆಲವು ದಿನಗಳಿಗೆ ಯಾವುದೇ ಮಹತ್ವವಿಲ್ಲ. ಇದನ್ನೆ ಅಮೆರಿಕಾದ ಅಧಿಕೃತ ಮಾನ್ಯತೆಯೇ ಇಲ್ಲದ ಸಂಸ್ಥೆಯೊಂದು ತನ್ನ ವೆಬ್‌ಸೈಟ್‌ನಲ್ಲಿ ಹಾಕುತ್ತ ಹೋಗುತ್ತದೆ. ಇದಕ್ಕೆ ನೀವು ಕೂಡ ಒಂದು ಎಂಟ್ರಿ ಹಾಕಬಹುದು. ಒಂದಿಷ್ಟು ಮಾಹಿತಿ ಕೊಟ್ಟರಾ ಯಿತು ಅಷ್ಟೇ. ಇದರಿಂದ ಯಾರಿಗೆ ಏನು ಉಪಯೋಗ ಎನ್ನುವ ಪ್ರಶ್ನೆ ಸಹಜ. ಕೆಲವು ದಿನಗಳು ಸುಮ್ಮನೇ ಇವೆ. ಆದರೆ ಈ ದಿನಗಳನ್ನು ಇತ್ತೀಚಿಗೆ ಬಳಸಿಕೊಳ್ಳುವಲ್ಲಿ ಕೆಲವು ಕಂಪನಿಗಳು ಯಶಸ್ವಿಯಾಗಿವೆ. ಉದಾಹರಣೆಗೆ ಪಿಜ್ಜಾ ಡೇ ಅನ್ನು ಪಿಜ್ಜಾ
ರೆಸ್ಟೋರೆಂಟ್‌ಗಳು ಬಳಸಿಕೊಂಡರೆ ವೆಲಂಟೈನ್ ಡೇ ಅನ್ನು ಮುನ್ನೆಲೆಗೆ ತಂದದ್ದೇ ಹಾಲ್ಮಾರ್ಕ್ ಎನ್ನುವ ಗ್ರೀಟಿಂಗ್ಸ್ ಕಾರ್ಡ್
ಮಾಡಿ ಮಾರುವ ಕಂಪನಿ. ಹುಟ್ಟುಹಬ್ಬಕ್ಕೆ ವ್ಯಾಪಕತೆ ಕೊಟ್ಟದ್ದು ಕೂಡ ಹಾಲ್ಮಾರ್ಕ್ ಕಂಪನಿಯೇ.

ಈ ದಿನಗಳನ್ನು ಅದು ಹೇಗೆ ಕಮರ್ಷಿಯಲೈಜ್ / ವ್ಯಾಪಾರೀಕರಿಸಬಹುದು ಎನ್ನುವುದನ್ನೇ ನಿಭಾಯಿಸಲು ಕಂಪನಿಗಳು ಡಿಪಾರ್ಟ್ಮೆಂಟ್ ಒಂದನ್ನು ಇಟ್ಟುಕೊಂಡಿರುತ್ತವೆ. ಅದೇ ಕಾರಣಕ್ಕೆ ಇತ್ತೀಚಿಗೆ ನೀವು ಆಗೀಗ ಹಿಂದೆಂದೂ ಕೇಳದ ದಿನಗಳ ಹೆಸರು ಕೇಳುತ್ತಿರುವುದು. ಈ ವ್ಯಾಪಾರೀಕರಣಕ್ಕೆ ಹತ್ತು ಹಲವು ಉದಾಹರಣೆಗಳನ್ನು ಕೊಡಬಹುದು. ಮಹಿಳಾದಿನ, ಅಪ್ಪನ ದಿನ ಇವೆಲ್ಲ ಸಣ್ಣಗೆ ಸಮಾಜಕ್ಕೆ ಹೇಳಿಕೊಡುತ್ತಿರುವುದೇ ಈ ಕಂಪನಿಗಳ ವ್ಯಾಪಾರೀ ಕುಮ್ಮಕ್ಕು. ಈ ರೀತಿ ತಮ್ಮ ವ್ಯಾಪಾರಕ್ಕೆ ಅನುಗುಣವಾಗುವ ದಿನವೊಂದನ್ನು ದುಡ್ಡು ಕೊಟ್ಟು ಖರೀದಿಸಿ ಅದು ಸೋಷಿಯಲ್ ಮೀಡಿಯಾದಲ್ಲಿ, ಟಿವಿಯಲ್ಲಿ ಪ್ರಚಾರಕ್ಕೆ ಬರುವಂತೆ ಮಾಡುವುದೇ ಒಂದು ದೊಡ್ಡ ಜಾಲ.

ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಮದರ್ಸ್ ಡೇ. ಅನ್ನಾ ಜಾರ್ವಿಸ್ ತಾಯಿ 1905ರಲ್ಲಿ ತೀರಿಕೊಂಡಾಗ ಆಕೆ ತಾಯಿಯ ದಿನವನ್ನು ಆಚರಿಸುವಂತೆ ಅಮೆರಿಕಾ ದೇಶದುದ್ದಗಲಕ್ಕೂ ಪ್ರಚಾರ ಕೈಗೊಂಡಳು ಮತ್ತು ಯಶಸ್ವಿಯಾದಳು. ತಾಯಿಯ ಪ್ರೀತಿ ತ್ಯಾಗ ಗಳನ್ನು ಆಚರಿಸಲು ಅಂದು ಒಂದು ದಿನ ನಿಗದಿಯಾಗುವ ಅವಶ್ಯಕತೆ ಸಮಾಜ ದಲ್ಲಿತ್ತು. ಆದರೆ ಮುಂದಿನ ಕೆಲವೇ ವರ್ಷಗಳಲ್ಲಿ ಇಂಥದ್ದೊಂದು ಸಮಾಜದ ಅವಶ್ಯಕತೆಯನ್ನು ಗ್ರಹಿಸಿದ ಗ್ರೀಟಿಂಗ್ಸ್, ಹೂವು, ಗಿಫ್ಟ್ ಮಾರುವ ಕಂಪನಿಗಳು ಮದರ್ಸ್ ಡೇ ಅನ್ನು ವ್ಯಾಪಾರೀಕರಿಸಲು ಶುರುಮಾಡಿಕೊಂಡವು.

ಆಕೆ ನೋಡನೋಡುತ್ತಲೇ 1920ರ ಸಮಯದಲ್ಲಿ ತಾಯಿಯ ದಿನ ಎನ್ನುವುದು ಸಂಪೂರ್ಣ ವ್ಯಾಪಾರೀಕರಣವಾಗಿತ್ತು. ತಾಯಿಯ ದಿನದ ಅವಶ್ಯಕತೆಯನ್ನು ಅಮೆರಿಕಾ ದೇಶಕ್ಕೇ ಹೇಳಿಕೊಟ್ಟ ಅನ್ನಾ ನಂತರದಲ್ಲಿ ಈ ತಾಯಿಯದಿನದ ವಿರುದ್ಧವೇ ಬೀದಿಗಿಳಿದಳು. ತಾಯಿಯ ದಿನದ ಮೂಲ ಉದ್ದೇಶವೇ ಕುಲಗೆಟ್ಟು ಹೋಗಿದೆ ಎಂದು ಪ್ರಚಾರ ಶುರುವಿಟ್ಟುಕೊಂಡು ಇದು ನಿಲ್ಲಬೇಕು ಎಂದು ಹೋರಾಟ ನಡೆಸಿದಳು. ಆದರೆ ಅದಾಗಲೇ ತಾಯಿಯ ದಿನದ ಆಚರಣೆಯನ್ನು ಕಂಪನಿಗಳು ತಮ್ಮ ತೆಕ್ಕೆಗೆ ತೆಗೆದುಕೊಂಡಾಗಿತ್ತು.

ಆಗಲೇ ಹಲವಾರು ದೇಶಗಳಲ್ಲಿ ಈ ಆಚರಣೆ ಶುರುವಾಗಿ ಬಿಟ್ಟಿತ್ತು. ನಂತರದಲ್ಲಿ ಈ ವ್ಯಾಪಾರಿ ಹಿತಾಸಕ್ತಿಯುಳ್ಳ ಕಂಪನಿಗಳು ತಾಯಿಯ ದಿನದಂದು ಉಡುಗೊರೆ ಸಿಗದ ತಾಯಿಯ ಬೇಸರಗಳ ವರದಿಗಳನ್ನು ಟಿವಿ ಬಿತ್ತರಿಸುವಂತೆ ನೋಡಿಕೊಂಡವು. ಇದರಿಂದ ಸಾಮಾಜಿಕ ಒತ್ತಡ ಜನರ ಮೇಲೆ ವಿಧಿಸಲಾಯಿತು. ಇದೇ ಕೆಲಸ ವ್ಯಾಲೆಂಟೈನ್ ಡೇ ಮೊದಲಾದ ದಿನಗಳಿಗೂ ಲಾಗುವಾಯಿತು. ಇಂದು ಅದು ಹೇಗಾಗಿ ಬಿಟ್ಟಿದೆ ಎಂದರೆ ವ್ಯಾಲಂಟೈನ್ ಡೇ ದಿನ ಪ್ರೇಯಸಿಗೆ ಗಿಫ್ಟ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಸಂಬಂಧಗಳು ಮುರಿದುಬೀಳುವ ಮಟ್ಟಿಗೆ.

ಅಕ್ಷಯ ತೃತೀಯವನ್ನು ಚಿನ್ನದಂಗಡಿಗಳು ಬಳಸಿಕೊಳ್ಳುವುದು ನಮ್ಮೆದುರಿಗೆ ಇರುವ ಉದಾಹರಣೆ. ನಂತರದಲ್ಲಿ ಇತ್ತೀಚಿಗೆ ಬಂದದ್ದು ಬಿಗ್ ಬಿಲಿಯನ್ ಡೇ, ಬ್ಲಾಕ್ ಶುಕ್ರವಾರ, ಸೈಬರ್ ಸೋಮವಾರ ಎಂಬಿತ್ಯಾದಿ. ಇದನ್ನು ಹುಟ್ಟಿ ಹಾಕಿದ್ದು ಇ-ಕಾಮರ್ಸ್ ಕಂಪನಿಗಳು. ಆ ದಿನಗಳಲ್ಲಿ ಅಗ್ಗದ ಬೆಲೆಗೆ ವಸ್ತುಗಳನ್ನು ಮಾರಲಾಗುತ್ತದೆ ಎನ್ನುವ ಪ್ರಚಾರ. ಅಸಲಿಗೆ ವಾರ್ಷಿಕ ಸ್ಟಾಕ್ ಕ್ಲೀಯರನ್ಸ್ ಮಾಡಿಕೊಳ್ಳಲು ಮಾಡುವ ಕರಾಮತ್ತು ಅದು. ಈಗ ಹೇಗಾಗಿಬಿಟ್ಟಿದೆ ಎಂದರೆ ಬೇಕೋ ಬೇಡವೋ, ಅಗ್ಗದ ಬೆಲೆಗೆ ಸಿಗುತ್ತಿದೆ ಎಂದರೆ ಖರೀದಿಸುವುದೇ ಲಾಭ ಎಂಬಂತೆ ಜನರು ವರ್ತಿಸುತ್ತಾರೆ.

ಅವಶ್ಯಕತೆಯೇ ಇಲ್ಲದಿದ್ದರೂ, ಬೇಡದ ಸಾಮಾನುಗಳನ್ನು ಮನೆಗೆ ಬಂದು ಸೇರುತ್ತವೆ. ಹೀಗೊಂದು ನವ್ಯ ಸಂಸ್ಕೃತಿಯನ್ನೇ ಮನುಷ್ಯಕುಲದ ಮೇಲೆ ಹೇರುವ ಕೆಲಸವನ್ನು ಈ ಗಿಫ್ಟ್ ಕಂಪನಿಗಳು, ವಾಣಿಜ್ಯ ವ್ಯಾಪಾರೀ ಕಂಪನಿಗಳು ಮಾಡಿದವು ಮತ್ತು ಮಾಡುತ್ತಲೇ ಇವೆ. ಇವು ಸಮಾಜದಲ್ಲಿ ತಾನೊಬ್ಬ ಹೊರತಾಗಿರಬಾರದು ಎನ್ನುವ ಪೀಯರ್‌ಒತ್ತಡವನ್ನು ಕೃತಕವಾಗಿ ಹುಟ್ಟಿ ಹಾಕಿ ಅದನ್ನು ವ್ಯಾಪಾರೀಕರಿಸುವ ವ್ಯವಸ್ಥಿತ ಕೆಲಸ. ಈಗ ಮಹಿಳಾ ದಿನ, ವ್ಯಾಲಂಟೈನ್ ಡೇ, ಹುಟ್ಟುಹಬ್ಬ ಇವೆಲ್ಲ ದಿನ ಹೆಂಡತಿ ಗಂಡನಿಗೆ ಏನು ಕೊಡಿಸ್ತೀರಾ ಎಂದು ಕೇಳುತ್ತಾಳೆ.

ಮದರ್ಸ್, ಫಾದರ್ಸ್ ಡೇ ದಿನ ಅಪ್ಪ ಅಮ್ಮನಿಗೆ ಶುಭಾಶಯ ಕೋರಿ ಗಿಫ್ಟ್ ಕಳಿಸಿಲ್ಲ ಎಂದಾದರೆ ನೀನೆಂಥ ಮಗ/ ಮಗಳು ಎಂದು ಪ್ರಶ್ನಿಸುವುದು ಬಾಲಿಶವೆಂದೆನಿಸುತ್ತಿಲ್ಲ. ಇತ್ತೀಚೆಗೆ ಹ್ಯಾಲೋವೀನ್ ಮೊದಲಾದ ದಿನಗಳಂದು ಅದಕ್ಕೆ ತಕ್ಕುದಾದ ವೇಷ ಭೂಷಣ ಮಾರಾಟ ಮಾಡುವ – ಖರೀದಿಸುವ ಸಂಸ್ಕೃತಿ ಭಾರತಕ್ಕೂ ಕಾಲಿಟ್ಟಾಗಿದೆ. ಹೀಗೆ ಸಮಾಜದಲ್ಲಿ ದಿನಗಳೆದಂತೆ ಇವೆಲ್ಲ ದಿನ ಆಚರಣೆಗಳು ಅಂತರ್ಗತವಾಗುತ್ತಿವೆ -ನಮ್ಮ ಅರಿವಿಗೇ ಬಾರದಂತೆ.

ನಾವು ಇನ್ನಷ್ಟು ರಾಷ್ಟ್ರೀಯ ದಿನಗಳನ್ನು ಸಂಸ್ಕೃತಿ, ಇತಿಹಾಸ ಬಿಂಬಿಸುವ ಹಿನ್ನೆಲೆಯಲ್ಲಿ ಬಳಸಿಕೊಳ್ಳದಿದ್ದರೆ ಪಾಶ್ಚಾತ್ಯ ದಿನಗಳನ್ನು ನಮ್ಮ ಮೇಲೆ ಹೇರುವ ಕೆಲಸ ಈ ಕಂಪನಿಗಳು ಮಾಡುತ್ತವೆ ಅಷ್ಟೆ.