Monday, 25th November 2024

ದ ವ್ಯಾಕ್ಸಿನ್ ವಾರ್‌ ಚಿತ್ರವನ್ನು ನೀವು ನೋಡಲೇಬೇಕು ಏಕೆಂದರೆ…

ತಿಳಿರು ತೋರಣ

srivathsajoshi@yahoo.com

ಅಭೂತಪೂರ್ವ ಎಂಬ ವಿಶೇಷಣದಿಂದಲೇ ಬೇಕಿದ್ದರೆ ಆರಂಭಿಸೋಣ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಸಂಪೂರ್ಣವಾಗಿ ವೈದ್ಯ-ವಿಜ್ಞಾನ ವಿಷಯದ ಸಿನೆಮಾ. ಏಕಕಾಲದಲ್ಲಿ ಹಿಂದೀ, ಇಂಗ್ಲಿಷ್, ಬಂಗಾಲಿ, ಮರಾಠಿ, ತೆಲುಗು, ತ ಮಿಳು, ಕನ್ನಡ, ಪಂಜಾಬಿ, ಮಲಯಾಳಂ, ಗುಜರಾತಿ, ಮತ್ತು ಭೋಜ ಪುರಿ- ಹೀಗೆ ೧೧ ಭಾಷೆಗಳಲ್ಲಿ ಬಿಡುಗಡೆ ಯಾಗುತ್ತಿದೆ. ಈ ಅಂಶವೂ ಮೊದಲುಗಳ ಸಾಲಿಗೆ ಸೇರುವಂಥದ್ದೇ.

ಅಷ್ಟು ಸಾಲದೆಂದಾದರೆ ಇದನ್ನೂ ಪರಿಗಣಿಸಿ: ಚಿತ್ರವಿನ್ನೂ ಪ್ರಪಂಚದಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವ ಮೊದಲೇ, ನ್ಯೂಯಾರ್ಕ್ ನಗರದ ಜಗದ್ವಿಖ್ಯಾತ ಟೈಮ್ ಸ್ಕ್ವೇರ್‌ನಲ್ಲಿ ಇದರದೊಂದು ಗೀತೆಗೆ- ಈ ಪ್ರಪಂಚದ ಸೃಷ್ಟಿ ಹೇಗೆ ಆಯಿತೆಂದು ತಿಳಿಸುವ ಋಗ್ವೇದದ ನಾಸದೀಯ ಸೂಕ್ತದ ಹಿಂದೀ ಭಾಷಾಂತರ ರೂಪಕ್ಕೆ- ಕಥಕ್ ನೃತ್ಯಗಾರ್ತಿಯರು ಹೆಜ್ಜೆ ಹಾಕಿ ಅಲ್ಲಿ ಸೇರಿದ್ದ ಜನಸಮೂಹದ ಉತ್ಸಾಹದ ವಾತಾವರಣ ಮುಗಿಲುಮುಟ್ಟಿತ್ತು ಎನ್ನುವುದೂ ಇದೇ ಮೊದಲು!

ಇದು ‘ದ ವ್ಯಾಕ್ಸಿನ್ ವಾರ್’ ಸಿನೆಮಾ. ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನ ಮತ್ತು ಪಲ್ಲವಿ ಜೋಶಿ ನಿರ್ಮಾಣದ ಮಹತ್ವಾ ಕಾಂಕ್ಷೆಯ ಯೋಜನೆ. ಇದೇ ಗುರುವಾರ ಸೆಪ್ಟೆಂಬರ್ ೨೮ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಸಾರ್ವಜನಿಕ ಪ್ರದರ್ಶನ ಆರಂಭ. ಒಂದು ತಿಂಗಳ ಹಿಂದೆ, ಆಗಸ್ಟ್ ೨೭ರಂದು ಇಲ್ಲಿ ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಈ ಚಿತ್ರದ ಪ್ರೀಮಿಯರ್ ಪ್ರದರ್ಶನದಲ್ಲಿ ಭಾಗವಹಿಸುವ ಮತ್ತು ವಿವೇಕ್-ಪಲ್ಲವಿ ದಂಪತಿಯನ್ನು ಅಲ್ಲಿ ಕಣ್ಣಾರೆ ಕಂಡು ಭೇಟಿ ಯಾಗಿ ಮಾತನಾಡಿಸುವ ಅವಕಾಶವೂ ನನಗೆ ಸಿಕ್ಕಿದ್ದರಿಂದ ಇದನ್ನು ಅಧಿಕೃತ ಅನುಭವದಿಂದಲೇ ಬರೆಯುತ್ತಿದ್ದೇನೆ.

ಕೋವಿಡ್-೧೯. ಹೆಸರು ಕೇಳಿದೊಡನೆ ಕಹಿನೆನಪುಗಳೇ ಒತ್ತರಿಸಿ ಬರುವಂತೆ ಮಾಡುವ ಮಹಾಮಾರಿ. ಪುಣ್ಯಕ್ಕೆ ಈಗ ಬಹು ಮಟ್ಟಿಗೆ ಭೂತಕಾಲಕ್ಕೆ ಸರಿದಿರುವ ವಿದ್ಯಮಾನ. ಹಾಗಾಗಿ ಒಂದಿಷ್ಟು ಸಿಂಹಾವಲೋಕನಕ್ಕೆ ಸಕಾಲ. ಅದು ಬಿಟ್ಟು ಹೋಗಿರುವ ಅಳಿಸಲಾಗದ ಗಾಯಗಳನ್ನು ಗಮನಿಸುತ್ತಲೇ, ಕಷ್ಟಕಾಲದಲ್ಲಿ ಮೂಡಿದ ಭರವಸೆಯ ಕಿರಣಗಳನ್ನು, ಮಾನವತೆಯ ಉದ್ಧಾರಕ್ಕೆ ಪಟ ತೊಟ್ಟು ಸಾಧನೆ ತೋರಿದವರನ್ನು ಗುರುತಿಸಿ ಗೌರವಿಸುವ ಕಾಲ. ಕರೋನಾ ಕರಾಳಕಾಲದಲ್ಲಿ ಆದ ಅತಿದೊಡ್ಡ ಸಾಧನೆ ಯೆಂದರೆ ರೋಗನಿರೋಧಕ ಲಸಿಕೆಗಳ ಅಭಿವೃದ್ಧಿ.

ಅದೂ ಕಾಲಚಕ್ರದ ಗತಿಯಲ್ಲಿ ಕಂಡುಕೇಳರಿಯದ ನಾಗಾಲೋಟದಿಂದ. ಇದುವರೆಗೂ ಲಸಿಕೆ ಸಂಶೋಧನೆ ಅಲ್ಲದಿದ್ದರೂ ತಯಾರಿ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದ ಭಾರತ ಈಬಾರಿ ಕೈ ಬೆರಳೆಣಿಕೆಯ ಇತರ ಶ್ರೀಮಂತ ದೇಶಗಳಂತೆ ತಾನೂ ಲಸಿಕೆ
ಸಂಶೋಧನೆಗೆ ಕೈಹಾಕಿತು. ಹಲವಾರು ಬಾಹ್ಯ ಹಾಗೂ ಆಂತರಿಕ ಒತ್ತಡಗಳು ಮತ್ತು ತಾತ್ಕಾಲಿಕ ಸೋಲುಗಳ ನಡುವೆಯೂ
ಅಂತಿಮವಾಗಿ ಅತ್ಯಂತ ಪರಿಣಾಮಕಾರಿ ವಿಕ್ರಮವನ್ನು ಸಾಧಿಸಿತು. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅಮೆರಿಕದಿಂದ ವ್ಯಾಕ್ಸಿನ್ ತರಿಸಿಕೊಳ್ಳಬೇಕಾದ, ತನ್ಮೂಲಕ ಮಂಡಿಯೂರಿ ಕೂರ ಬೇಕಾದ ಯಾವುದೇ ಹುನ್ನಾರಗಳಿಗೆ ಮಣೆ ಹಾಕದೆ ತಾನೇ ಸಂಪೂರ್ಣವಾಗಿ ಭಾರತೀಯ ‘ಕೋವ್ಯಾಕ್ಸಿನ್’ ತಯಾರಿಸಿ ದೇಶದ ಪ್ರಜೆಗಳಿಗೆಲ್ಲ ಒದಗಿಸಿತು.

ಮಾತ್ರವಲ್ಲ ನೂರಾರು ದೇಶ ಗಳಿಗೆ ಉಚಿತವಾಗಿ ಸರಬರಾಜು ಮಾಡಿ ಮಾನವೀಯತೆಯ ಅತ್ಯುನ್ನತ ಔದಾರ್ಯವನ್ನು ಮೆರೆ ಯಿತು. ವಿಶ್ವಗುರುವಾಗಿ ತಲೆಯೆತ್ತಿ ನಿಂತಿತು. ಇದು ಹೇಗೆ ಸಾಧ್ಯವಾಯಿತು ಎಂದು ಎಳೆಎಳೆ ಯಾಗಿ ತೋರಿಸಲಾಗಿದೆ ‘ದ ವ್ಯಾಕ್ಸಿನ್ ವಾರ್’ ಸಿನೆಮಾದಲ್ಲಿ. ಪುಣೆಯಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಅದರ ಅಂಗಸಂಸ್ಥೆ ನ್ಯಾಷ ನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ, ಮತ್ತು ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್- ಈ ಮೂರರ ಸಂಯುಕ್ತ ಪ್ರಯತ್ನಕ್ಕೆ ಸಿಕ್ಕಿದ ಫಲವೇ ಕೋವ್ಯಾಕ್ಸಿನ್ ಲಸಿಕೆ. ಅಭಿಮಾನದ ವಿಷಯವೆಂದರೆ ಇದರ ಸಂಶೋಧನೆ ಮಾಡಿದ ವಿಜ್ಞಾನಿಗಳ ತಂಡದಲ್ಲಿ ೭೦ ಪ್ರತಿಶತಕ್ಕಿಂತಲೂ ಹೆಚ್ಚು ಮಹಿಳೆಯರೇ ಇದ್ದದ್ದು!

ಆವತ್ತು ಪ್ರೀಮಿಯರ್ ಪ್ರದರ್ಶನದ ಬಳಿಕ ಮಾತನಾಡುತ್ತಿದ್ದಾಗ ಪಲ್ಲವಿ ಜೋಶಿ ಅದನ್ನೇ ಹೇಳಿದರು: ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಯು ಭಾರತದ ನಾರೀಶಕ್ತಿಯ ಇನ್ನೊಂದು ಅದ್ಭುತ ನಿದರ್ಶನ. ಆದ್ದರಿಂದಲೇ ಈ ಚಿತ್ರವನ್ನು ನಾವು ಭಾರತೀಯ ಮಹಿಳೆಯ ರೆಲ್ಲರಿಗೂ ಸಮರ್ಪಿಸುತ್ತಿದ್ದೇವೆ ಎಂದು. ಐಸಿಎಮ್‌ಆರ್‌ನ ನಿವೃತ್ತ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಬರೆದ Going Viral-The Making of Covaxin: The Inside Story ಪುಸ್ತಕವನ್ನು ಆಧರಿಸಿದ ಚಿತ್ರಕಥೆ ಇದರದು. ಆ ಪುಸ್ತಕ ವಾದರೋ ಯಾವುದೋ ಮೆಡಿಕಲ್ ಫಿಕ್ಷನ್ ಕಟ್ಟುಕತೆ ಅಲ್ಲ.

ಡಾ.ಭಾರ್ಗವರ ಸ್ವಾನುಭವಗಳು, ಕಣ್ಮುಂದೆ ನಡೆದಿದ್ದರ ದಾಖಲಾತಿ, ಡೈರಿಯ ಪುಟಗಳಂತೆ. ಚಿತ್ರದ ಒಂದೊಂದು ದೃಶ್ಯವೂ
ಅಧಿಕೃತವೆನ್ನುವುದಕ್ಕೆ ಇನ್ನೇನು ಬೇಕು? ಪಾತ್ರಗಳ ಹೆಸರುಗಳೂ ಹೆಚ್ಚೂಕಡಿಮೆ ಆ ಎಲ್ಲ ವಿಜ್ಞಾನಿಗಳ, ಅಧಿಕಾರಿಗಳ ಹೆಸರು ಗಳೇ ಇವೆ. ಚಿತ್ರದ ಕೊನೆಯಲ್ಲಿ ಅವರೆಲ್ಲರ ನೈಜ ಭಾವಚಿತ್ರಗಳನ್ನೂ ವಿವರಗಳನ್ನೂ ಗೌರವಪೂರ್ವಕವಾಗಿ ತೋರಿಸಿ ದ್ದಾರೆ. ಉಳಿದಂತೆ ಆ ಸಂದಿಗ್ಧ ಕಾಲಘಟ್ಟದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿಗಳು ಹೇಗೆ ನಡೆದುಕೊಂಡರು, ಆಸ್ಪತ್ರೆ ಹಾಸಿಗೆಗಳ ಮತ್ತು ಆಕ್ಸಿಜನ್ ಸಿಲಿಂಡರ್‌ಗಳ ವಿಚಾರದಲ್ಲಿ ಏನೇನೆಲ್ಲ ಹಗರಣಗಳು ನಡೆದುವು, ಕೋವ್ಯಾಕ್ಸಿನ್ ಸಂಶೋ ಧನೆ ಆಗುತ್ತಿರುವಾಗಲೂ ಆಮೇಲೆ ಜನಸಾಮಾನ್ಯರಿಗೆ ಅದು ಸಂಜೀವಿನಿಯಂತೆ ಲಭಿಸಿದಾಗಲೂ ದುಷ್ಕರ್ಮಿಗಳು ದೇಶದ್ರೋಹಿಗಳು ಅದರ ಬಗ್ಗೆ ಏನೆಲ್ಲ ಅಪಪ್ರಚಾರ ಮಾಡಿದರು, ಮೋದಿದ್ವೇಷವನ್ನೇ ಮೈಯೆಲ್ಲ ತುಂಬಿಕೊಂಡ ಟೂಲ್‌ಕಿಟ್ ಗ್ಯಾಂಗ್ ಹೇಗೆ ನಡೆದುಕೊಂಡಿತು, ಉರಿಯುತ್ತಿರುವ ಚಿತೆಗಳ ಚಿತ್ರಗಳನ್ನು ವಿದೇಶೀ ಮಾಧ್ಯಮಗಳಿಗೆ ಮಾರಿ ಯಾರೆಲ್ಲ ನೀಚರು ಎಂಜಲು ಕಾಸಿಗೆ ಕೈಯೊಡ್ಡಿ ತಮ್ಮನ್ನು ಮಾರಿ ಕೊಂಡರು ಇತ್ಯಾದಿಯನ್ನು ಕೂಡ ಮುಲಾಜಿಲ್ಲದೆ ತೋರಿಸಿದ್ದಾರೆ.

ಅಷ್ಟೆಲ್ಲ ವಿಘ್ನಸಂತೋಷಿಗಳ ಅವ್ಯಾಹತ ಉಪದ್ವ್ಯಾಪಗಳ ನಡುವೆಯೂ ಆ ವಿeನಿಗಳು, ಅದರಲ್ಲೂ ಮಹಿಳೆಯರು, ಅದೆಂತಹ ಏಕಾಗ್ರತೆಯಿಂದ ಕೆಲಸ ಮಾಡಿದರು, ಭಾರತದ ಕೈಲಾಗದ ವಿಷಯ ಎಂದು ನಿರಾಶಾವಾದಿಗಳು ಗೋಡೆ ಮೇಲೆ ಬರೆದಿಟ್ಟಿದ್ದನ್ನೇ ಸವಾಲೆಂಬಂತೆ ಸ್ವೀಕರಿಸಿ ಯಶ ಗಳಿಸಿದರು, ಅದಕ್ಕಾಗಿ ಏನೆಲ್ಲ ತ್ಯಾಗ ಮಾಡಿದರು ಎಂಬುದನ್ನು ಚಿತ್ರದಲ್ಲಿ ನೋಡಿದಾಗ ದೇಶ ಪ್ರೇಮಿ ಪ್ರೇಕ್ಷಕನ ಹೃದಯ ಬೆಚ್ಚಗಾಗದಿರದು.

ಗಂಟಲು ಉಬ್ಬಿ ಕಣ್ಣುಗಳು ಮಂಜಾಗದಿರವು. ಕರ್ತವ್ಯದ ಕರೆಯ ಮೇರೆಗೆ ಈಗಿಂದೀಗಲೇ ಪ್ರಯೋಗಾಲಯಕ್ಕೆ ತೆರಳಬೇಕು ಎಂದು ಧಾವಿಸುವ ಅಮ್ಮನ ಕಾಲು ಹಿಡಿದು, ಹೋಗಬೇಡ ನನಗೆ ಕಥೆ ಹೇಳು, ನಾನು ಹೇಳುವ ಪದ್ಯ ಕೇಳು ಎಂದು ಅಂಗಲಾಚಿ ಬೇಡುವ ಪುಟ್ಟ ಹುಡುಗನ ಆಕ್ರಂದನ ಒಂದೇ ಸಾಕು ಆ ಕರಾಳ ಕಾಲದಲ್ಲಿ ಕರ್ತವ್ಯನಿಷ್ಠ ಒಬ್ಬೊಬ್ಬರ ವೈಯಕ್ತಿಕ ಪರಿಸ್ಥಿತಿಯೂ ಹೇಗಿತ್ತೆಂಂದು ಅರ್ಥ ಮಾಡಿಕೊಳ್ಳಲು. ಇಲಿಗಳ ಮೇಲೆ ಪ್ರಯೋಗ ಯಶಸ್ವಿಯಾಯ್ತು… ಪ್ರಯೋಗಾರ್ಥಿ ಮಂಗಗಳೂ ಲಸಿಕೆಯ
ಧನಾತ್ಮಕ ಪರಿಣಾಮ ಸಾರಿ ಹೇಳಿದುವು… ಆದರೂ ಸಾಧಿಸಿ ತೋರಿಸಬೇಕಾದ್ದು ಇನ್ನೂ ದೊಡ್ಡ ಪರ್ವತವೇ ಇದೆ ಎಂಬುದನ್ನ ರಿತು ಒಂದು ಹಂತದಲ್ಲಿ ಹತಾಶಳಾಗಿ ತಾಳ್ಮೆಯ ಕಟ್ಟೆಯೊಡೆದು ಕಣ್ಣೀರ ಕೋಡಿ ಹರಿಸುವ ಇನ್ನೊಬ್ಬ ಮಹಿಳಾ ವಿಜ್ಞಾನಿ ಇತ್ತ
ಮನೆಗೂ ಹೋಗಲಾರದೆ ಯಾರಲ್ಲೂ ದುಃಖ ತೋಡಿಕೊಳ್ಳಲಾರದೆ ಸಂಸ್ಥೆಯ ಕಟ್ಟಡದ ಟೆರೇಸ್‌ನಲ್ಲಿ ಒಬ್ಬಳೇ ರೋದಿಸುವ ದೃಶ್ಯ…

ನೋಡುವಾಗ ಅಲ್ಲ, ಈಗ ಇದನ್ನು ಟೈಪ್ ಮಾಡುವಾಗಲೂ ನನಗೆ ಕಣ್ಣೀರು ಬಳಬಳನೆ ಹರಿಯುತ್ತಿದೆ. ಹಾಗಂತ ರೋದನೆ ಒಂದೇ ಅಲ್ಲ. ಛಲ, ಸ್ಥೈರ್ಯ, ಕಾಠಿಣ್ಯಗಳಿಗೆ ಹೇಳಿಮಾಡಿಸಿದ ನಾನಾ ಪಾಟೇಕರ್ ಇದ್ದಾರೆ. ನನ್ನ ಆಲ್‌ಟೈಮ್ ಫೇವರಿಟ್. ಮನಸ್ಸಿಗೆ ನಾಟುವ, ಹೃದಯಕ್ಕೆ ತಟ್ಟುವ ಅಭಿನಯ, ಮಾತು. ಮೃಗನಯನಿ ಧಾರಾವಾಹಿ ನೋಡಿದಾಗಿಂದ ಮನಸ್ಸಲ್ಲು ಳಿದಿರುವ ಪಲ್ಲವಿ ಜೋಶಿಯೂ ಕಮ್ಮಿಯೇನಲ್ಲ.

ವ್ಯಾಕ್ಸಿನ್ ವಾರ್ ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇಬೇಕು ಎಂದು ನಾನು ಹೇಳುವುದಕ್ಕೆ ಇನ್ನೂ ಒಂದು ಮುಖ್ಯ ಕಾರಣ ವಿದೆ. ಒಂದು ತಿಂಗಳ ಹಿಂದೆಯಷ್ಟೇ ನಾವೆಲ್ಲರೂ ಚಂದ್ರಯಾನ-೩ರ ಯಶಸ್ಸನ್ನು, ಇಸ್ರೋ ವಿಜ್ಞಾನಿಗಳ (ಅಲ್ಲೂ ಹೆಚ್ಚಿನವರು ಮಹಿಳೆಯರೇ) ಸಂಭ್ರಮಾಚರಣೆಯನ್ನು ಟಿವಿಯಲ್ಲಿ ಲೈವ್ ನೋಡಿ ಕಣ್ತುಂಬಿಸಿಕೊಂಡೆವು. ನಮ್ಮೆಲ್ಲರ ಫೇಸ್‌ಬುಕ್ ಗೋಡೆ ಗಳಲ್ಲಿ, ವಾಟ್ಸ್ಯಾಪ್ ಮೆಸೇಜುಗಳಲ್ಲಿ ದೇಶಾಭಿಮಾನ ಉಕ್ಕಿ ಹರಿಯಿತು.

ಕ್ರಿಕೆಟ್‌ನಲ್ಲಿ ವರ್ಲ್ಡ್‌ಕಪ್ ಗೆದ್ದದ್ದಕ್ಕಿಂತ ಹೆಚ್ಚಿನ ಸಂಭ್ರಮ-ಸಂತಸ ಅನುಭವಿಸಿದೆವು. ಇಸ್ರೋ ವಿeನಿಗಳನ್ನು ಕೊಂಡಾಡಿದೆವು.
ಪ್ರಧಾನಿ ಮೋದಿಯವರು ದಕ್ಷಿಣ ಆಫ್ರಿಕ ಪ್ರವಾಸ ಮುಗಿಸಿ ಬಂದವರು ದೆಹಲಿಗೆ ಹೋಗದೆ ವಿಮಾನವನ್ನು ಬೆಂಗಳೂರಿನತ್ತ
ತಿರುಗಿಸಿ ನಿಲ್ದಾಣದಲ್ಲಿಳಿದವರು ಇಸ್ರೋ ಕೇಂದ್ರಕಚೇರಿಗೆ ಹೋಗಿ ಅಲ್ಲಿ ಉದ್ಯೋಗಿಗಳನ್ನುದ್ದೇಶಿಸಿ ‘ಅದ್ಭುತ ಸಾಧನೆ ತೋರಿದ
ನಿಮ್ಮೆಲ್ಲರ ದರ್ಶನ ಪಡೆದು ಪುನೀತನಾಗಲು ಹಾತೊರೆಯುತ್ತಿದ್ದೆ!’ ಎಂದು ಭಾವುಕರಾಗಿ ನುಡಿದರು.

ಅದು ಇಸ್ರೋ ವಿಜ್ಞಾನಿಗಳು ಶತಪ್ರತಿಶತ ಅರ್ಹತೆಯಿಂದ, ಪ್ರಯತ್ನ-ತ್ಯಾಗ-ಛಲ-ಪರಿಶ್ರಮಗಳಿಂದ ಗಳಿಸಿದ ಮನ್ನಣೆ ಎಂಬು ದರಲ್ಲಿ ಎರಡು ಮಾತಿಲ್ಲ. ನನ್ನ ಪ್ರಕಾರ, ಅಷ್ಟೇ ಅಥವಾ ತುಸು ಹೆಚ್ಚೇ ಮನ್ನಣೆಗೆ ಅರ್ಹರು ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿ ಪಡಿಸಿ ಭಾರತೀಯರಿಗಷ್ಟೇ ಅಲ್ಲ, ನೂರಾರು ದೇಶಗಳ ಸಾಮಾನ್ಯ ಜನತೆಗೆ ಅಶ್ವಿನೀದೇವತೆಗಳಾಗಿ ಒದಗಿಬಂದ ಐಸಿಎಮ್‌ಆರ್-ಎನ್‌ಐವಿ ವಿಜ್ಞಾನಿಗಳು.

ಚಂದ್ರ ಯಾನವಾದರೂ ವಿಫಲವಾಗಿದ್ದಿದ್ದರೆ ಹೆಚ್ಚೆಂದರೆ ಶ್ರಮ, ಸಮಯ, ಮತ್ತು ಹಾಕಿದ ಬಂಡವಾಳ ನಷ್ಟವೆಂದಾಗುತ್ತಿತ್ತು. ಇಲ್ಲಿ ಹಾಗಲ್ಲ, ಇದು ಜೀವನ್ಮರಣ ಹೋರಾಟ. ನಿರಾಶಾವಾದಿಗಳು ಹೆದರಿಸಿದ್ದಂತೆ (ಒಳಗೊಳಗೇ ಅಪೇಕ್ಷಿಸಿದ್ದಂತೆ) ಭಾರತದಲ್ಲಿ ಕೋಟಿಗಟ್ಟಲೆ ಜನ ಸಾಯುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು! ಎಣಿಸಿ ಕೊಂಡರೆ ಮೈ ಝುಮ್ಮೆನ್ನುತ್ತದೆ. ಅಂಥದ್ರಲ್ಲಿ, ಲಸಿಕೆ ಅಭಿವೃದ್ಧಿ ಪಡಿಸಿದ್ದಷ್ಟೇ ಅಲ್ಲ, ಸಮರೋಪಾದಿಯಲ್ಲಿ ವಿತರಣೆ- ಇದನ್ನೀಗ ಊಹಿಸಿದರೂ ಮೈಯೆಲ್ಲ ಗೂಸ್‌ಬಂಪ್ಸ್!

ವಾಷಿಂಗ್ಟನ್‌ನಲ್ಲಿ ಆವತ್ತಿನ ಪ್ರೀಮಿಯರ್ ಪ್ರದರ್ಶನ ಏರ್ಪಡಿಸಿದ್ದವರು ಇಲ್ಲಿಯ ಕಾಶ್ಮೀರಿ ಪಂಡಿತ್ಸ್ ಡಯಾಸ್ಪೊರಾದ ಪ್ರಮುಖರು. ಮೋಹನ್ ಸಪ್ರು ಮತ್ತವರ ಸ್ನೇಹಿತರು. ‘ದ ಕಾಶ್ಮೀರ್ ಫೈಲ್ಸ್’ ಚಿತ್ರದಿಂದಾಗಿ ವಿವೇಕ್ ಅಗ್ನಿಹೋತ್ರಿ ಆ ಸಮುದಾ ಯಕ್ಕೆ ಇನ್ನಷ್ಟು ಆಪ್ತರು. ನನಗೆ ಆಹ್ವಾನ ಸಿಕ್ಕಿದ್ದು ಮೋಹನ್ ಸಪ್ರು ಅವರ ಪರಿಚಯ ಒಡನಾಟ ಇರುವ ಕನ್ನಡಿತಿ ಶಾಂತಿ ತಂತ್ರಿ ಅವರಿಂದಾಗಿ. ಶಾಂತಿ ಮತ್ತು ಉದಯ್ ತಂತ್ರಿ ಸಹ ಬಂದಿದ್ದರು. ‘ಯಾವುದೋ ಸಾಕ್ಷ್ಯಚಿತ್ರದಂತೆ ಇರಬಹುದು ಎಂದು ಕೊಂಡಿದ್ದೆ. ಆದರೆ ಇದೊಂದು ಫೀಚರ್ ಫಿಲ್ಮ್‌ನಂತೆಯೇ ಇದೆ. ನಾಯಕ-ಖಳನಾಯಕ, ಸಂಘರ್ಷ, ಇಮೋಷನ್ಸ್, ಮೆಲೋ ಡ್ರಾಮಾಗಳೊಂದಿಗೆ ಸಸ್ಪೆನ್ಸ್ ಥ್ರಿಲ್ಲರ್ ಕೂಡ ಆಗಿದೆ!

ವ್ಯಾಕ್ಸೀನ್ ಸಂಶೋಧನೆಯ ಇಡೀ ಘಟನಾವಳಿಯನ್ನು ಕಾದಂಬರಿಯ ಅಧ್ಯಾಯಗಳಂತೆ ಬಿಚ್ಚಿಟ್ಟದ್ದು, ಭಾರತೀಯ ವಿಜ್ಞಾನಿ ಗಳ ಸಾಮರ್ಥ್ಯದ ಅನಾವರಣ, ಭಾರತದಿಂದ ಇದು ಸಾಧ್ಯ ಎಂದು ಜಗತ್ತಿಗೆ ತೋರಿಸಿದ ರೀತಿ, ಪ್ರತಿಯೊಂದು ಫ್ರೇಮ್ ನಲ್ಲೂ ವಿವೇಕ್ ಅಗ್ನಿಹೋತ್ರಿಯ ಸಿಗ್ನೇಚರ್ ಸ್ಟೈಲ್ ಕುಸುರಿ… ಇದನ್ನು ಚಿತ್ರಮಂದಿರದಲ್ಲಿ ನೋಡಿದರೇನೇ ಪೂರ್ಣ ನ್ಯಾಯ ಒದಗಿಸಿ ದಂತೆ’ ಎಂದು ಅವರಿಂದ ಮುಕ್ತಕಂಠದ ಪ್ರಶಂಸೆ. ಇನ್ನೊಬ್ಬ ಕನ್ನಡಿಗ, ಅಪ್ಪಟ ದೇಶಾಭಿಮಾನಿ ಡಾ.ರವಿ ಹರಪ್ಪನಹಳ್ಳಿ
ಸಹ ಬಂದಿದ್ದರು. ಅವರು ಕೆಲಸ ಮಾಡುವ ಕ್ಷೇತ್ರ ಕೂಡ ಬಯೋಟೆಕ್ ಆದ್ದರಿಂದ ಚಿತ್ರವನ್ನು ಇನ್ನಷ್ಟು ರಿಲೇಟ್ ಮಾಡಿ
ಕೊಳ್ಳಬಲ್ಲರು.

‘ಕೋವಿಡ್ ಮಹಾಮಾರಿಯನ್ನೆದುರಿಸಲು ಭಾರತದ ವಿಜ್ಞಾನಿಗಳು ಪಟ್ಟ ಶ್ರಮ ಮತ್ತು ಗಳಿಸಿದ ಅದ್ಭುತ ಯಶವನ್ನು ಇದರಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ. ಮುಖ್ಯವಾಗಿ ಮಹಿಳಾ ವಿಜ್ಞಾನಿಗಳ ಛಲ-ತ್ಯಾಗಗಳು ಖಂಡಿತವಾಗಿಯೂ ಮೆಚ್ಚಬೇಕಾದುವು. ಪಾಶ್ಚಾತ್ಯ ದೇಶಗಳು ಅಭಿವೃದ್ಧಿಪಡಿಸಿದ್ದ ದುಬಾರಿ ವ್ಯಾಕ್ಸಿನ್‌ಗಳನ್ನು ಭಾರತಕ್ಕೆ ಮಾರಬೇಕೆಂದಿದ್ದ ರಾಜಕೀಯ ಹಿತಾಸಕ್ತಿಗಳು ಮತ್ತು ಅವುಗಳ ದಾಹಕ್ಕೆ ತುಪ್ಪ ಸುರಿಯುವ ಮಾಧ್ಯಮಗಳ ಒತ್ತಡ, ಮಾನ್ಯತೆ ಕೊಡಲು ಮೀನ ಮೇಷ ಎಣಿಸಿದ ವಿಶ್ವ ಆರೋಗ್ಯ ಸಂಸ್ಥೆಯ ತಂತ್ರಗಾರಿಕೆಗಳಿಗೆಲ್ಲ ಮಣಿಯದೆ ಭಾರತ ಸರಕಾರದ ನಿರಂತರ ಪ್ರೋತ್ಸಾಹದಿಂದ ಈ ವಿಜ್ಞಾನಿಗಳು ಮಾಡಿದ ಸಾಧನೆ ಅಪ್ರತಿಮವಾದದ್ದು.

ಪ್ರಬುದ್ಧ ನಟನಟಿಯರು ಟೀಮ್ ವರ್ಕ್‌ನಂತೆ ಸಿದ್ಧಗೊಳಿಸಿರುವ ಈ ಸಿನೆಮಾವನ್ನು ಪ್ರತಿಯೊಬ್ಬರೂ ಬಂಧುಮಿತ್ರರನ್ನೂ ಕೂಡಿ ಕೊಂಡು ನೋಡಬೇಕು. ಭಾರತೀಯನೆಂದು ಹೆಮ್ಮೆಪಡಬೇಕು’ ಎಂದು ರವಿಯವರ ಅನಿಸಿಕೆ. ಆವತ್ತು ನಮಗೆಲ್ಲ ಇನ್ನೊಂದು ಸಿಹಿ ಅಚ್ಚರಿಯೆಂದರೆ ತಮಿಳು/ಹಿಂದೀ ಚಿತ್ರರಂಗದ ಪ್ರಖ್ಯಾತ ನಟ-ನಿರ್ದೇಶಕ, ಸ್ವಪ್ರತಿಭೆಯಿಂದ ಪ್ರಶಸ್ತಿಗಳನ್ನೆಲ್ಲ ಕೊಳ್ಳೆ ಹೊಡೆಯುವ ಆರ್. ಮಾಧವನ್ ಸಹ ನಮ್ಮೊಟ್ಟಿಗೆ ಪ್ರೇಕ್ಷಕರಾಗಿ ಕುಳಿತು ದ ವ್ಯಾಕ್ಸಿನ್ ವಾರ್ ಚಿತ್ರವನ್ನು ನೋಡಿದರು. ಪ್ರದರ್ಶ ನದ ಬಳಿಕ ಚಿತ್ರದ ಬಗ್ಗೆ, ವಿವೇಕ್ ಅಗ್ನಿಹೋತ್ರಿಯ ಬಗ್ಗೆ ಮಾತನಾ ಡುತ್ತ ‘ವಿವೇಕ್ ಒಬ್ಬ ಮಾಸ್ಟರ್ ಸ್ಟೋರಿಟೆಲ್ಲರ್. ಎರಡೂವರೆ ಗಂಟೆ ಅವಧಿಯ ಸಿನೆಮಾದಲ್ಲಿ ನಿಮ್ಮ ಭಾವಕೋಶಗಳೊಳಗೆ ನವರಸಗಳೂ ಹದವಾಗಿ ಹರಿಯುವಂತೆ ಮಾಡಬಲ್ಲ ಅತ್ಯದ್ಭುತ ಕಲಾವಿದ. ಈ ಚಿತ್ರವಂತೂ ಇಟ್ ಹ್ಯಾಸ್ ಬ್ಲೋನ್ ಮೈ ಮೈಂಡ್ ಎನ್ನುವಂತಿದೆ’ ಎಂದಿದ್ದರು.

ದೇಶಪ್ರೇಮದ ವಿಷಯ ಬಂದಾಗ ನಾವು ಅನಿವಾಸಿ ಭಾರತೀಯರು ತುಸು ಹೆಚ್ಚೇ ಭಾವುಕರಾಗುತ್ತೇವೆ. ಅಮೆರಿಕದ ಬೇರೆ ಆರೇಳು ನಗರಗಳಲ್ಲೂ ದ ವ್ಯಾಕ್ಸಿನ್ ವಾರ್ ಚಿತ್ರದ ಪ್ರೀಮಿಯರ್ ಪ್ರದರ್ಶನ ಏರ್ಪಾಡಾಗಿತ್ತು. ವಿವೇಕ್ ಮತ್ತು ಪಲ್ಲವಿ ಎಲ್ಲ ಕಡೆಯೂ ಖುದ್ದಾಗಿ ಹೋಗಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದ್ದರು. ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಸಂಕಲಿಸಿದ ವಿಡಿಯೊ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಭಾರತದ ‘ಸಾಫ್ಟ್ ಪವರ್’ ಎಷ್ಟು ಪ್ರಬಲವಾಗಿ ಇದೆ ಮತ್ತು ಪ್ರಖರವಾಗಿ ಇದೆ ಎಂದು ಈ ಚಿತ್ರದಿಂದಾಗಿ ಮತ್ತಷ್ಟು ಮನವರಿಕೆ ಯಾಗಿ ಅನಿವಾಸಿ ಭಾರತೀಯರಿಗೆ ಸಹಜವಾಗಿಯೇ ಅಭಿಮಾನ ಹೆಚ್ಚಿದೆ.

ಆದಾಗ್ಯೂ ಭಾರತದೊಳಗೆ ಈ ಚಿತ್ರಕ್ಕೆ ಎಂಥ ಸ್ಪಂದನ ಸಿಗಬಹುದು, ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂದು ನನಗೆ ಕುತೂಹಲವಿದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ, ಸುಧಾ ಮೂರ್ತಿ ಮತ್ತಿತರ ಗಣ್ಯರೆಲ್ಲ ಭಾಗವಹಿಸಿದ್ದ, ಪ್ರೀಮಿಯರ್ ಪ್ರದರ್ಶನ ನೋಡಿ ಬಂದ ಬಳಿಕ ಫೇಸ್‌ಬುಕ್‌ನಲ್ಲಿ ಸ್ನೇಹಿತ ಅಜಿತ್ ಬೊಪ್ಪನಳ್ಳಿ ಒಂದು ವಿಡಿಯೊ ಹಾಕಿದ್ದಾರೆ. ದಿಗ್ಗಜರ ಮಧ್ಯ
ನೋಡಿದ ಅದ್ಭುತ ಸಿನಿಮಾ ಅನುಭವ ಎಂದು ಪೋಸ್ಟ್ ಮಾಡಿದ್ದಾರೆ. ಅವರಂತೂ ಚಿತ್ರಕ್ಕೆ ಫುಲ್ ಫಿದಾ. ‘ಎಷ್ಟು ಚಂದ
ಇದೆ ಈ ಸಿನೆಮಾ! ದೇಶದ ಮೇಲೆ ಪ್ರೀತಿಯಿರುವವರು ಇದನ್ನು ತುಂಬ ರಿಲೇಟ್ ಮಾಡಿಕೊಳ್ಳಬಲ್ಲರು. ನಾನು ಝೀರೊ ಎಕ್ಸ್‌ ಪೆಕ್ಟೇಷನ್ಸ್ ಇಟ್ಕೊಂಡು ಹೋಗಿದ್ದೆ.

ಸೈನ್ಸ್ ಜಾಸ್ತಿ ಇರುತ್ತೆ, ವ್ಯಾಕ್ಸೀನ್ ಕಂಡುಹಿಡ್ದಿದ್ದು ಹೇಗೆ, ಬೇರೆಬೇರೆ ದೇಶಗಳಿಗೆ ಹಂಚಿದ್ದು ಹೇಗೆ ಅಂತೆಲ್ಲ ಕಥೆ ಇರುತ್ತೆ, ತುಂಬ ಅಕ್ಯಾಡೆಮಿಕ್ ಸಬ್ಜೆಕ್ಟು ಬೋರಿಂಗ್ ಇರಬಹುದು ಅನ್ನೋ ಫೀಲಲ್ಲಿ ಹೋಗಿದ್ದೆ. ಆದರೆ… ಸೈನ್ಸಿನ ಗಂಧಗಾಳಿ ಗೊತ್ತಿಲ್ಲದ ನನಗೆ ಈ ಸಿನೆಮಾ ಸಿಳ್ಳೆ ಹೊಡೆಯೋ ಥರ ಪ್ರೇರಣೆ ನೀಡ್ತು. ಜೋರಾಗಿ ಚಪ್ಪಾಳೆ ಹೊಡ್ದೆ. ಎಲ್ಲೂ ಬೋರ್ ಅನಿಸಲಿಲ್ಲ. ಆ ಮಹಿಳಾ ವಿಜ್ಞಾನಿಗಳ ಒಂದೊಂದು ಸ್ಯಾಕ್ರಿಫೈಸ್ ಕೂಡ ಒಂದೊಂದು ಪ್ರತ್ಯೇಕ ಸಿನೆಮಾ ಆಗುವಷ್ಟು ಹೃದಯಸ್ಪರ್ಶಿ.

ಇದು ಬರೀ ಒಳ್ಳೇ ಸಿನೆಮಾ ಅಷ್ಟೇಅಲ್ಲ, ಭಾರತೀಯರು ಹೆಮ್ಮೆಯಿಂದ ನೋಡ್ಬೇಕಾದ ಸಿನೆಮಾ’ ಎಂದು ಪ್ರಶಂಸೆಯ ಸುರಿಮಳೆ ಗೈದಿದ್ದಾರೆ. ‘ಕೊನೆಯಲ್ಲಿ ಎದ್ದುನಿಂತು ಚಪ್ಪಾಳೆ ಹೊಡೀಬೇಕು ಅಂತ ನಿಮಗೆ ಅನಿಸ್ದೇ ಇದ್ದರೆ… ಈ ಸಿನೆಮಾ ಬೋರಾಯ್ತು ಅಥವಾ ನಾನು ಹೇಳಿದ್ದು ಅತಿಶಯೋಕ್ತಿ ಆಯ್ತು ಅಂದ್ರೆ… ನಿಮ್ಮ ಟಿಕೆಟ್ ದುಡ್ಡನ್ನ ನಾನು ಕೊಡ್ತೀನಿ. ಇದು ಪಕ್ಕಾ.’ ಎಂದು ಚಾಲೆಂಜ್ ಕೊಟ್ಟಿದ್ದಾರೆ!

ವಿವೇಕ್ ಅಗ್ನಿಹೋತ್ರಿ ಸಹ ಆವತ್ತು ಈ ಭಾವನೆಯನ್ನೇ ಹೈಲೈಟ್ ಮಾಡಿದ್ದರು. ವ್ಯಾಕ್ಸೀನ್ ಕಂಡುಹಿಡಿದ ವಿಜ್ಞಾನಿಗಳು ಮಾತ್ರವಲ್ಲ, ಕೊರೊನಾ ವಾರಿಯರ್ಸ್, ವೈದ್ಯರು, ದಾದಿಯರು, ಮನೆಮನೆಯ ಗೃಹಿಣಿಯರು, ಕೊನೆಗೆ ಮೆಯ್ಡ್ ಸರ್ವೆಂಟ್ಸ್ ಸಹ
ಆ ಒಂದೆರಡು ವರ್ಷಗಳಲ್ಲಿ ಮಾಡಿದ ತ್ಯಾಗಗಳು ಒಂದೆರಡಲ್ಲ. ಅವರೆಲ್ಲರ ಗೌರವಕ್ಕಾಗಿಯಾದರೂ ಚಿತ್ರವನ್ನು ವೀಕ್ಷಿಸಿ ಎಂದು
ವಿವೇಕ್ ಕಳಕಳಿ. ಹಾಂ! ಮರೆತ ಮಾತು. ಆವತ್ತು ಪ್ರೀಮಿಯರ್ ಪ್ರದರ್ಶನ ಮುಗಿದಮೇಲೆ ಪಲ್ಲವಿ-ವಿವೇಕ್ ಜೊತೆ ಫೋಟೊ
ಕ್ಲಿಕ್ಕಿಸಿಕೊಂಡಾದ ಮೇಲೆ ನಾನು ಪರಿಚಯ ತಿಳಿಸಿದೆ.

‘ಓಹ್! ನೀವು ಕನ್ನಡ ಭಾಷೆಯವ್ರಾ? ಕರ್ನಾಟಕದವ್ರಾ? ಹಾಗಿದ್ರೆ ಎಸ್.ಎಲ್.ಭೈರಪ್ಪ ಗೊತ್ತಿರ್ಬೇಕು ಅಲ್ವಾ? ನನಗೆ ಅತಿ ಹೆಮ್ಮೆಯ ವಿಚಾರ ವೇನೆಂದರೆ ನಾನು ಅವರ ಪರ್ವ ಕಾದಂಬರಿಯ ರೈಟ್ಸ್ ತಗೊಂಡಿದ್ದೀನಿ. ಶೀಘ್ರದಲ್ಲೇ ಪರ್ವ ಸಿನೆಮಾ ಮಾಡ್ತೀನಿ!’ ಎಂದು ವಿವೇಕ್ ಅತ್ಯುತ್ಸಾಹದಿಂದ ಹೇಳಿದರು. ಆ ಪರ್ವಕಾಲ ಸಾಕ್ಷಾತ್ಕಾರಗೊಳ್ಳಲು ಅನುಕೂಲ ಮಾಡಿ ಕೊಡುವೆವು ಎಂಬ ಇನ್ನೂ ಒಂದು ಕಾರಣ, ಕನ್ನಡಿಗರು ದ ವ್ಯಾಕ್ಸಿನ್ ವಾರ್ ಚಿತ್ರ ವನ್ನು ವೀಕ್ಷಿಸುವುದಕ್ಕೆ! ನೋಡಿದ ಮೇಲೆ ನಿಮ್ಮ ಅನಿಸಿಕೆ ತಿಳಿಸ್ತೀರಲ್ಲ?