Saturday, 23rd November 2024

ಮೂರನೆಯ ಜಗತ್ತಿನ ಆವಿಷ್ಕಾರ ಲ್ಯೂವೆನ್’ಹುಕ್

ಹಿಂದಿರುಗಿ ನೋಡಿದಾಗ

ಲ್ಯೂವೆನ್‌ಹುಕ್ ರೂಪಿಸಿದ ಅತ್ಯಂತ ಉದ್ದನೆಯ ಸೂಕ್ಷ್ಮದರ್ಶಕವು ಕೇವಲ ೫ ಸೆಂ.ಮೀ. ಉದ್ದವಿತ್ತು ಎಂದರೆ ಅದೆಷ್ಟು ಚಿಕ್ಕ ಸೂಕ್ಷ್ಮದರ್ಶಕವಾಗಿತ್ತು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳಬಹುದು. ಲ್ಯೂವೆನ್‌ಹುಕ್ ತನ್ನ ಜೀವಮಾನದಲ್ಲಿ ೫೦೦ ಮಸೂರಗಳನ್ನು ಹಾಗೂ ೨೫ ಸೂಕ್ಷ್ಮದರ್ಶಕಗಳನ್ನು ರೂಪಿಸಿದ. ಅವುಗಳಲ್ಲಿ ೯ ಸೂಕ್ಷ್ಮದರ್ಶಕಗಳು ಮಾತ್ರ ನಮಗೆ ದೊರೆತಿವೆ.

ನಮ್ಮ ಪೂರ್ವಜರಿಗೆ ಎರಡು ವರ್ಗದ ಜೀವಿಗಳು ಗೊತ್ತಿದ್ದವು- ಸಸ್ಯಗಳು ಮತ್ತು ಪ್ರಾಣಿಗಳು. ಈ ಎರಡು ವರ್ಗಗಳನ್ನು ಬಿಟ್ಟು ಮೂರನೆಯ ವರ್ಗದ ಅದೃಶ್ಯ ಲೋಕ ವೊಂದಿದೆ, ಅದರಲ್ಲಿ ಅಗೋಚರ ಜೀವಿಗಳಿವೆ, ಆ ಮಹಾಸಾಗರದಲ್ಲಿ ನಾವು ಮಾತ್ರವಲ್ಲ, ಸಮಸ್ತ ಜೀವರಾಶಿಯೇ ಮುಳುಗಿದೆ ಎನ್ನುವ ವಿಚಾರವು ತಿಳಿದಿರಲಿಲ್ಲ. ಭಾರತದಲ್ಲಿ ಜೈನಮುನಿಗಳು (ಮಹಾವೀರರು) ಹಾಗೂ ಗ್ರೀಕರಲ್ಲಿ ವ್ಯಾರೋ ಹಾಗೂ ಮಧ್ಯಯುಗೀನ ಇಸ್ಲಾಂ ದೇಶದ ಅವಿಸೆನ್ನ ಮುಂತಾದವರು ನಮ್ಮ ಬರಿಗಣ್ಣಿಗೆ ಕಾಣದ ಜೀವಿಗಳಿರ ಬಹುದು ಎನ್ನುವ ಪರಿಕಲ್ಪನೆಯನ್ನು ಮಂಡಿಸಿದ್ದರು. ಆದರೆ ಅವರಲ್ಲಿ ಯಾರೂ ನಿರ್ವಿವಾದವಾಗಿ ಈ ಅಗೋಚರ ಜೀವಿಗಳ ರೋಚಕ ಲೋಕದ ಪರಿಚಯ ವನ್ನು ಮಾಡಿಕೊಡಲಿಲ್ಲ.

ಈ ಕೀರ್ತಿಯು ಹಾಲೆಂಡ್ ದೇಶದ ಬಟ್ಟೆ ವ್ಯಾಪಾರಿ ಆಂಟನ್ ಫಾನ್ ಲ್ಯೂವೆನ್‌ಹುಕ್ ಅಥವಾ ಆಂಟಾಯಿನ್ -ನ್ ಲ್ಯೂವೆನ್‌ ಹುಕ್‌ನಿಗೆ (೧೬೩೨-೧೭೨೩) ಸಂದಿದೆ. ವಿಜ್ಞಾನ ಜಗತ್ತಿನಲ್ಲಿ ಲ್ಯೂವೆನ್‌ಹುಕ್ ಅಪರೂಪದ ವ್ಯಕ್ತಿ. ಈತ ಶ್ರೀಮಂತನಲ್ಲ, ಗಣ್ಯ ವಂಶದಲ್ಲಿ ಹುಟ್ಟಿದವನಲ್ಲ. ಈತನು ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪಡೆದಿದ್ದ. ಯಾವುದೇ ಕಾಲೇಜಿಗಾಗಲಿ ಅಥವಾ ವಿಶ್ವ ವಿದ್ಯಾಲಯಕ್ಕಾಗಲಿ ಹೋಗಿರಲಿಲ್ಲ. ಯಾವುದೇ ವಿಷಯವನ್ನು ಕುರಿತು ತಜ್ಞತೆಯನ್ನು ಈತ ಗಳಿಸಿರಲಿಲ್ಲ. ಮಧ್ಯ ಯುರೋಪಿನ ಜ್ಞಾನ ಭಾಷೆಯಾದ ಲ್ಯಾಟಿನ್ ಆಗಲಿ ಅಥವಾ ಗ್ರೀಕ್ ಆಗಲಿ ಇವನಿಗೆ ಏನೇನೂ ಗೊತ್ತಿರ ಲಿಲ್ಲ. ಇಂಗ್ಲಿಷ್ ಸಹ ಬರುತ್ತಿರಲಿಲ್ಲ.

ಡಚ್ ಆಡುಭಾಷೆಯೊಂದನ್ನು ಬಿಟ್ಟು ಬೇರೆ ಯಾವ ಭಾಷೆಯೂ ಅವನಿಗೆ ತಿಳಿದಿರಲಿಲ್ಲ. ಅವನು ಜ್ಞಾನ-ವಿಜ್ಞಾನಕ್ಕೆ ಸಂಬಂಧಿ ಸಿದ ಯಾವ ಗ್ರಂಥವನ್ನೂ ಅಧ್ಯಯನ ಮಾಡಿರಲಿಲ್ಲ. ಹೆತ್ತವರ ಅಥವಾ ಹಿರಿಯ ವಿಜ್ಞಾನಿಗಳ ಮಾರ್ಗದರ್ಶನವೂ ಇರಲಿಲ್ಲ. ಆದರೂ ಆಧುನಿಕ ವೈದ್ಯಕೀಯದಲ್ಲಿ ಒಂದು ಹೊಸ ವಿಜ್ಞಾನ ಶಾಖೆಯು ಹುಟ್ಟಲು ಕಾರಣನಾದ. ಜತೆಗೆ ‘ಸೂಕ್ಷ್ಮಜೀವಿ ವಿಜ್ಞಾನದ ಪಿತಾಮಹ’ ಎಂಬ ಅಭಿದಾನವನ್ನು ಗಳಿಸಿದ. ‘ಬ್ಯಾಕ್ಟೀರಿಯ ವಿಜ್ಞಾನ’ (Bacteriology) ಹಾಗೂ ‘ಆದಿಜೀವವಿಜ್ಞಾನ’ (Protozoology) ಎಂಬ ಉಪಶಾಖೆಗಳ ಅಭಿವರ್ಧನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣನಾದ.

ಈತನು ಸಾರ್ವಕಾಲಿಕ ಸ್ಮರಣೀಯ ಮಾತೊಂದನ್ನು ಹೇಳಿದ್ದಾನೆ: ‘ನಾನು ಈಗ ಗಳಿಸಿರುವ ಖ್ಯಾತಿಗೆ ಕಾರಣವಾದ ಸಂಶೋಧನೆ ಯನ್ನು ಕ್ರಮ ಬದ್ಧವಾಗಿ ನಡೆಸಲಿಲ್ಲ. ಆದರೆ ಅದು ಕೇವಲ ಜ್ಞಾನ ಪಿಪಾಸುವಾಗಿ ಶ್ರಮಿಸಿದ ಫಲ’. ಒಬ್ಬ ವ್ಯಕ್ತಿಗೆ ಒಂದು ವಿಷಯದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕೆನ್ನುವ ಅದಮ್ಯ ಆಸೆಯಿದ್ದು, ಅದಕ್ಕಾಗಿ ಏಕಾಗ್ರತೆಯಿಂದ ಕೆಲಸ ಮಾಡಲು ಸಿದ್ಧನಾಗಿದ್ದು, ಯಶಸ್ಸು ದೊರೆಯುವವರೆಗೆ ಅಪಾರ ತಾಳ್ಮೆಯಿಂದ ಕೆಲಸ ಮಾಡಿದರೆ, ಎಂಥ ಕಠಿಣ ವಿಚಾರವೇ ಆಗಲಿ, ಒಂದಲ್ಲ ಒಂದು ದಿನ ನಮಗೆ ವಶವಾಗಲೇಬೇಕು.

ಇದಕ್ಕೆ ಅತ್ಯುತ್ತಮ ಉದಾಹರಣೆ ಲ್ಯೂವೆನ್‌ಹುಕ್. ಲ್ಯೂವೆನ್‌ಹುಕ್ ಡಚ್ ರಿಪಬ್ಲಿಕ್ಕಿಗೆ ಸೇರಿದ ಡೆಲ್ತ್ ಎಂಬ ನಗರದಲ್ಲಿ ಅಕ್ಟೋ ಬರ್ ೨೪, ೧೬೩೨ರಂದು ಹುಟ್ಟಿದ. ತಂದೆ ಬುಟ್ಟಿಯನ್ನು ಹೆಣೆಯುವ ಹಿನ್ನೆಲೆಯವನಾದರೆ ತಾಯಿಯು ಮದ್ಯ ತಯಾರಿಕಾ ಮನೆಯಿಂದ ಬಂದವಳು. ಈತನ ಚಿಕ್ಕಪ್ಪ ಬೆಂಥೂಯಿಜ಼ೆನ್, ವಾರ್ಮಂಡ್ ಎನ್ನುವ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ನೆರವಾದ. ೧೬೪೮ರಲ್ಲಿ ಜವಳಿ ವ್ಯಾಪಾರಿಯ ಬಳಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ೬ ವರ್ಷಗಳ ಕಾಲ ಕೆಲಸ ಮಾಡಿದ. ೧೬೫೪ರಲ್ಲಿ ಈತನು ಡೆಲ್ತ್ ನಗರಕ್ಕೆ ಹಿಂದಿರುಗಿದ. ತನ್ನದೇ ಆದ ಜವಳಿ ವ್ಯಾಪಾರವನ್ನು ಆರಂಭಿಸಿದ. ಈ ಊರಿನಲ್ಲಿಯೇ ತನ್ನ ಉಳಿದ ಜೀವಮಾನವನ್ನು ಕಳೆದು ತನ್ನ ೯೦ನೆಯ ವಯಸ್ಸಿನಲ್ಲಿ ಆಗಸ್ಟ್ ೨೬, ೧೭೨೩ರಂದು ಮರಣಿಸಿದ.

ಲ್ಯೂವೆನ್‌ಹುಕ್ ಜವಳಿಯ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕಾರಣ, ನೂಲಿನ ಹಾಗೂ ಬಟ್ಟೆಯ ಗುಣಮಟ್ಟ ವನ್ನು ಪರೀಕ್ಷಿಸಬೇಕಾಗಿತ್ತು. ಅದಕ್ಕಾಗಿ ಆತ ಭೂತಕನ್ನಡಿಯನ್ನು ಬಳಸುತ್ತಿದ್ದ. ಈ ಭೂತಕನ್ನಡಿಯು ದಾರವನ್ನು ಹಿಗ್ಗಿಸಿ ತೋರಿಸುತ್ತಿದ್ದ ಕಾರಣ, ಅದರ ಗುಣಮಟ್ಟದ ನಿರ್ಣಯ ಸುಲಭವಾಗುತ್ತಿತ್ತು. ಇದೇ ವೇಳೆಗೆ ಆತನಿಗೆ ರಾಬರ್ಟ್ ಹೂಕ್ (೧೬೩೫-೧೭೦೩) ಎಂಬ ಇಂಗ್ಲಿಷ್ ವಿಜ್ಞಾನಿಯು ಪ್ರಕಟಿಸಿದ ‘ಮೈಕ್ರೋಗ್ರಾಫಿಯ’ ಎಂಬ ಪುಸ್ತಕವು ದೊರೆಯಿತು. ಈ ಪುಸ್ತಕ ವನ್ನು ಕುತೂಹಲದಿಂದ ನೋಡಿದ. ಲಂಡನ್ನಿನ ಕ್ರಿಸ್ಟೋ-ರ್ ವೈಟ್ ಎಂಬಾತ ಹೂಕನಿಗೆ ಒಂದು ಸೂಕ್ಷ್ಮದರ್ಶಕವನ್ನು ನಿರ್ಮಿಸಿಕೊಟ್ಟ. ಹೂಕ್ ಸೂಕ್ಷ್ಮದರ್ಶಕದಡಿಯಲ್ಲಿ ಕಾಣುವ ಅದ್ಭುತ ಲೋಕವನ್ನು ಕಂಡು ರೋಮಾಂಚಿತನಾದ! ತಾನು ಕಂಡದ್ದನ್ನು ಸುಂದರ ಚಿತ್ರಗಳಲ್ಲಿ ಬಿಡಿಸಿದ.

ಆತನ ಸೂಕ್ಷ್ಮದರ್ಶಕವು ಒಂದು ವಸ್ತುವನ್ನು ೩೦-೪೦ ಪಟ್ಟು ಹಿಗ್ಗಿಸಿ ತೋರಿಸುತ್ತಿತ್ತು. ಮರದ ತೊಗಟೆಯ (ಕಾರ್ಕ್) ತೆಳು ಲೇಪನವನ್ನು ತನ್ನ ಬಳಿಯಿದ್ದ ಸೂಕ್ಷ್ಮದರ್ಶಕದಲ್ಲಿ ನೋಡಿದ. ಅದು ಜೇನುಗೂಡಿನ ಷಷ್ಟಭುಜವಿರುವ ಕೋಣೆಗಳಂತೆ ಕಂಡಿತು. ಒಂದೊಂದು ಕೋಣೆಯು ಆತನಿಗೆ ಪಾದ್ರಿಗಳು ವಾಸಿಸುವ ‘ಸೆಲ್’ ಅನ್ನು ನೆನಪಿಗೆ ತಂದಿತು. ಹಾಗಾಗಿ ಆ ರಚನೆಯನ್ನು ಸೆಲ್ ಎಂದೇ ಕರೆದ. ಇದೇ ಹೆಸರು ಮುಂದೆ ಸಸ್ಯ ಮತ್ತು ಪ್ರಾಣಿಗಳನ್ನು ರೂಪಿಸುವ ಜೀವಕೋಶಗಳಿಗೆ ಅನ್ವಯವಾಯಿತು.
ಮ್ಯೂಕಾರ್ ಎಂಬ ಶಿಲೀಂಧ್ರದ, ಜೇನುನೊಣದ ರೆಕ್ಕೆಯ, ನವಿರಾದ ರಚನೆಯನ್ನು, ಚಿಗಟವನ್ನು, ಹೇನು ಮುಂತಾದವುಗಳ ಸೊಗಸಾದ ಚಿತ್ರಗಳನ್ನು ಬಿಡಿಸಿದ. ಈ ಪುಸ್ತಕವು ಲ್ಯೂವೆನ್‌ಹುಕ್‌ನನ್ನು ಅಪಾರವಾಗಿ ಆಕರ್ಷಿಸಿತು.

ಅವನು ತನ್ನ ಅಧ್ಯಯನಕ್ಕೆ ಅಗತ್ಯವಾದ ಸೂಕ್ಷ್ಮದರ್ಶಕವನ್ನು ತಾನೇ ತಯಾರಿಸಿಕೊಳ್ಳಲು ನಿರ್ಧರಿಸಿದ. ಸೂಕ್ಷ್ಮದರ್ಶಕದ ಅತ್ಯಂತ ಮುಖ್ಯ ಭಾಗವೆಂದರೆ ಮಸೂರ ಅಥವಾ ಲೆನ್ಸ್. ಸೋಡ ಲೈಮ್ ಗಾಜಿನ ಸಲಾಖೆಯ ಮಧ್ಯಭಾಗವನ್ನು ಜ್ವಾಲೆಗೆ ಒಡ್ಡಿದ. ಶಾಖಕ್ಕೆ ಮಧ್ಯಭಾಗವು ಕರಗಿತು. ಹಾಗೆಯೇ ಗಾಜಿನ ಎರಡೂ ತುದಿಗಳನ್ನು ಎಳೆದ. ಎರಡೂ ತುದಿಯಲ್ಲಿ ಗಾಜಿನ ಎರಡು ಎಳೆಗಳು ರೂಪುಗೊಂಡವು. ಒಂದು ಎಳೆಯನ್ನು ಮತ್ತೆ ತೆಗೆದುಕೊಂಡು ಜ್ವಾಲೆಗೆ ಒಡ್ಡಿ ಕರಗಿಸಿದ. ಅಲ್ಲಿ ಅತ್ಯಂತ ಪುಟ್ಟ ಹಾಗೂ ನವಿರಾದ ಮಸೂರವನ್ನು ನಿರ್ಮಿಸಿದ. ಇದು ಹೂಕ್ ಬಳಸಿದ ಸೂಕ್ಷ್ಮದರ್ಶಕದಲ್ಲಿದ್ದ ಮಸೂರಕ್ಕಿಂತ ತುಂಬಾ ಶಕ್ತಿಶಾಲಿ ಯಾಗಿತ್ತು. ವಸ್ತುಗಳನ್ನು ೨೫೦ ಪಟ್ಟು ಹಿಗ್ಗಿಸಿ ತೋರಿಸುತ್ತಿತ್ತು. ಲ್ಯೂವೆನ್‌ಹುಕ್ ತಾನು ಮಸೂರಗಳನ್ನು ತಯಾರಿಸುವ ವಿಧಾನವನ್ನು ಗುಟ್ಟಾಗಿಯೇ ಇಟ್ಟುಕೊಂಡ, ಯಾರಿಗೂ ಹೇಳಲಿಲ್ಲ.

ಅಂದಿನ ದಿನಗಳಲ್ಲಿ, ಗಾಜನ್ನು ಉಜ್ಜಿ ಉಜ್ಜಿ ನಯಗೊಳಿಸುವುದರ ಮೂಲಕ ಮಸೂರವನ್ನು ತಯಾರಿಸುವುದು ಎಲ್ಲರಿಗೂ ತಿಳಿದಿತ್ತು. ತಾನೂ ಹಾಗೆಯೇ ಮಾಡುತ್ತಿರುವುದಾಗಿ ಎಲ್ಲರಿಗೂ ಹೇಳುತ್ತಿದ್ದ. ಆದರೆ ತನ್ನ ರಹಸ್ಯ ವಿಧಾನದಿಂದ ದಿನೇದಿನೆ
ಶಕ್ತಿಶಾಲಿಯಾದ ಮಸೂರಗಳನ್ನು ರೂಪಿಸುತ್ತಾ ಹೋದ. ಕೊನೆಗೆ ವಸ್ತುಗಳನ್ನು ೫೦೦ ಪಟ್ಟು ಹಿಗ್ಗಿಸಬಲ್ಲ ಮಸೂರಗಳನ್ನು ರೂಪಿಸಿದ. ಈತನು ತನ್ನ ಮಸೂರವನ್ನು ಒಂದು ಲೋಹದ ಫಲಕದ ಮೇಲೆ ಅಳವಡಿಸಿದ.

ಮಸೂರದ ಮುಂದಿನ ಭಾಗದಲ್ಲಿ ಪರೀಕ್ಷಾ ವಸ್ತುಗಳನ್ನು ಇಡಲೆಂದೇ ಒಂದು ಸೂಜಿಯನ್ನಿರಿಸಿದ. ಮಸೂರ ಮತ್ತು ಸೂಜಿಯ ಅಂತರವನ್ನು ಹತ್ತಿರ-ದೂರ ಮಾಡಬಲ್ಲ ಮೂರು ತಿರುಪಣಿಗಳನ್ನು (ಸ್ಕ್ರೂ) ಅಳವಡಿಸಿದ. ಒಂದು ವಸ್ತುವನ್ನು ಸೂಜಿಯ ಮೇಲಿರಿಸಿ, ಮಸೂರದ ಮತ್ತೊಂದು ತುದಿಯನ್ನು ತನ್ನ ಕಣ್ಣಿನ ಬಳಿ ಇಟ್ಟುಕೊಂಡು ಉಜ್ವಲ ಬೆಳಕಿಗೆ ಮುಖಮಾಡಿ ವೀಕ್ಷಿಸು ತ್ತಿದ್ದ. ಆಗ ಆತನ ಮುಂದೆ ಅದೃಶ್ಯ ಲೋಕವು ಅನಾವರಣವಾಗಲಾರಂಭಿಸಿತು.

ಲ್ಯೂವೆನ್‌ಹುಕ್ ರೂಪಿಸಿದ ಅತ್ಯಂತ ಉದ್ದನೆಯ ಸೂಕ್ಷ್ಮದರ್ಶಕವು ಕೇವಲ ೫ ಸೆಂ.ಮೀ. ಉದ್ದವಿತ್ತು ಎಂದರೆ ಅದೆಷ್ಟು ಚಿಕ್ಕ-ಚಿಕ್ಕ ಸೂಕ್ಷ್ಮದರ್ಶಕವಾಗಿತ್ತು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳಬಹುದು. ಲ್ಯೂವೆನ್‌ಹುಕ್ ತನ್ನ ಜೀವಮಾನದಲ್ಲಿ ೫೦೦ ಮಸೂರಗಳನ್ನು ಹಾಗೂ ೨೫ ಸೂಕ್ಷ್ಮದರ್ಶಕಗಳನ್ನು ರೂಪಿಸಿದ. ಅವುಗಳಲ್ಲಿ ೯ ಸೂಕ್ಷ್ಮದರ್ಶಕಗಳು ಮಾತ್ರ ನಮಗೆ ದೊರೆತಿವೆ. ಉಳಿದ ಚಿನ್ನ ಮತ್ತು ಬೆಳ್ಳಿಯ ಸೂಕ್ಷ್ಮದರ್ಶಕಗಳನ್ನು ಆತನ ಮರಣಾನಂತರ ಅವನ ಮನೆಯವರು ಮಾರಿಬಿಟ್ಟರು.

ಲ್ಯೂವೆನ್‌ಹುಕ್ ತನ್ನ ಸೂಕ್ಷ್ಮದರ್ಶಕದಲ್ಲಿ ಕಂಡದ್ದನ್ನೆಲ್ಲ ತನಗೆ ತಿಳಿದಿದ್ದ ಡಚ್ ಆಡುಭಾಷೆಯಲ್ಲಿ ಬರೆದ. ಮುಂದೇನು ಮಾಡಬೇಕೆಂದು ಅವನಿಗೆ ಹೊಳೆಯಲಿಲ್ಲ. ಕೊನೆಗೆ ತನ್ನ ಮಿತ್ರನಾಗಿದ್ದ ಡಚ್ ವೈದ್ಯ ಹಾಗೂ ಸಂಶೋಧಕ ರೆನೀರ್ ಡಿ ಗ್ರಾಫ್ (೧೬೪೧-೧೬೭೩) ಎಂಬುವನಿಗೆ ತೋರಿಸಿದ. ಅವನು ಆಗತಾನೆ ರೂಪುಗೊಂಡಿದ್ದ ಲಂಡನ್ನಿನ ರಾಯಲ್ ಸೊಸೈಟಿಗೆ
ಕಳುಹಿಸಬೇಕೆಂದು ಸೂಚಿಸಿದ. ಲ್ಯೂವೆನ್‌ಹುಕ್ ಬರೆದ ಪತ್ರದ ಜತೆಯಲ್ಲಿ ತನ್ನ ಶಿ-ರಸು ಪತ್ರವನ್ನಿರಿಸಿದ. ಲ್ಯೂವೆನ್ ಹುಕ್ ಮಾಡಿರುವ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರಾರ್ಥಿಸಿದ. ರಾಯಲ್ ಸೊಸೈಟಿಯು ‘ಫಿಲಸಾಫಿಕಲ್ ಟ್ರಾನ್‌ಸ್ಯಾಕ್ಷನ್ಸ್ ಆಫ್ ದಿ ರಾಯಲ್ ಸೊಸೈಟಿ’ ಎನ್ನುವ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಇದರ ಸಂಪಾದಕ ಹೆನ್ರಿ ಓಲ್ಡನ್‌ಬರ್ಗ್ (೧೬೧೯-೧೬೭೭).

ಈತನು ಲ್ಯೂವೆನ್‌ಹುಕ್ ಬರೆದ ಪತ್ರಗಳನ್ನು ಅರ್ಥಮಾಡಿಕೊಳ್ಳಲು ಸ್ವಯಂ ಡಚ್ ಭಾಷೆಯನ್ನು ಕಲಿತ. ಲ್ಯೂವೆನ್‌ಹುಕ್ ಪತ್ರಗಳನ್ನೆಲ್ಲ ಲ್ಯಾಟಿನ್ ಮತ್ತು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ. ನಂತರ ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲು
ಆರಂಭಿಸಿದ. ಲ್ಯೂವೆನ್‌ಹುಕ್ ಬರೆದ ಮೊದಲ ಪತ್ರವು ೧೬೭೩ರಲ್ಲಿ ಪ್ರಕಟವಾಯಿತು. ಇದರಲ್ಲಿ ಲ್ಯೂವೆನ್‌ಹುಕ್ ತನ್ನ ಸೂಕ್ಷ್ಮ ದರ್ಶಕದ ವಿವರಣೆಯನ್ನು ನೀಡುವುದರ ಜತೆಯಲ್ಲಿ, ಅದನ್ನು ಬಳಸಿ ತಾನು ಕಂಡಂಥ ಶಿಲೀಂಧ್ರಗಳ ರಚನೆಯನ್ನು,
ಜೇನುನೊಣದ ಬಾಯಿಯ ರಚನೆಯನ್ನು, ಹೇನನ್ನು ವಿವರಿಸಿದ್ದ. ಹೀಗೆ ಲ್ಯೂವೆನ್‌ಹುಕ್ ತನ್ನ ಜೀವಮಾನದಲ್ಲಿ ೧೯೦ ಪತ್ರಗಳನ್ನು ಬರೆದ. ಲ್ಯೂವೆನ್‌ಹುಕ್ ತನ್ನ ಜೀವಮಾನದಲ್ಲಿ ಯಾವುದೇ ಪುಸ್ತಕವನ್ನು ಬರೆಯಲಿಲ್ಲ.

ಆದರೆ ಅವನು ಬರೆದ ಪತ್ರಗಳನ್ನೆಲ್ಲ ಸೇರಿಸಿ ಲಂಡನ್ ರಾಯಲ್ ಸೊಸೈಟಿಯು ‘ಅರ್ಕನಾ ನ್ಯಾಚುರೋ ಡಿಟೆಕ್ಟ್’ ಎಂಬ ಪುಸ್ತಕವನ್ನು ೧೬೯೫ರಲ್ಲಿ ಪ್ರಕಟಿಸಿತು. ಸೆಪ್ಟೆಂಬರ್ ೭, ೧೬೭೪. ತನ್ನ ಮನೆಯ ಬಳಿಯಿದ್ದ ಕೆರೆಯ ಬಳಿಗೆ ಹೋದ. ಅಲ್ಲಿದ್ದ ನೀರನ್ನು ಸಂಗ್ರಹಿಸಿದ. ಅದರಿಂದ ಒಂದು ಹನಿ ನೀರನ್ನು ತೆಗೆದುಕೊಂಡು ಸೂಜಿಯ ಮೊನೆಯ ಮೇಲೆ ಇರಿಸಿದ. ಬೆಳಕಿನ ಕಡೆಗೆ ತಿರುಗಿಸಿ ಮಸೂರದ ಮೂಲಕ ನೋಡಿದ. ಆಗ ಆತನ ಮುಂದೆ ಹಸಿರು ಕೂದಲಿನಂಥ ರಚನೆಯು ಕಂಡಿತು. ಮತ್ತಷ್ಟು ಗಮನಿಸಿ
ನೋಡಿದಾಗ, ಆ ರಚನೆಯಲ್ಲಿ ಹಸಿರು ಮಣಿಗಳನ್ನು ಪೋಣಿಸಿದಂತೆ ಕಂಡಿತು. ಇವನ್ನು ಏನೆಂದು ಕರೆಯಬೇಕೆಂದು ಅವನಿಗೆ ಹೊಳೆಯಲಿಲ್ಲ. ಇದು ಶೈವಲ ಅಥವಾ ಆಲ್ಗ. ಇದಕ್ಕೆ ‘ಸ್ಪೈರೋಗೈರ’ ಎಂದು ನಾಮಕರಣವನ್ನು ಮಾಡಿದ್ದೇವೆ.

ಲ್ಯೂವೆನ್‌ಹುಕ್ ಪ್ರತಿದಿನ ತನ್ನ ಸೂಕ್ಷ್ಮದರ್ಶಕದಲ್ಲಿ ಹೊಸ ಹೊಸ ಸೂಕ್ಷ್ಮಜೀವಿಗಳನ್ನು ನೋಡಲು ಆರಂಭಿಸಿದ. ಆತ ಅನೇಕ ಶೈವಲಗಳನ್ನು (ಆಲ್ಗೆ), ಅಮೀಬ, ಯೂಗ್ಲೀನ, ಪ್ಯಾರಾಮೀಸಿಯಂ, ವೋರ್ಟಿಸೆಲ್ಲ ಮುಂತಾದ ಜೀವಿಗಳನ್ನು ಗಮನಿಸಿದ. ಈ ಸೂಕ್ಷ್ಮಜೀವಿಗಳನ್ನು ತನ್ನ ಡಚ್ ಭಾಷೆಯಲ್ಲಿ ಡೀರ್ಕೆನ್ (dierkens, diertgens or diertjes) ಎಂದು ಕರೆದ. ‘ಪುಟ್ಟ ಪ್ರಾಣಿ’ ಎಂದು ಇದರ ಅರ್ಥವಾಗಿತ್ತು. ಓಲ್ಡನ್ ಬರ್ಗ್ ಈ ಶಬ್ದವನ್ನು ‘ಅನಿಮಾಲ್ಕ್ಯೂಲ್’ ಎಂದು ಲ್ಯಾಟಿನ್ ಭಾಷೆಗೆ ಅನುವಾದ ಮಾಡಿದ. ಮೂಲ ಅರ್ಥವನ್ನು ಉಳಿಸಿಕೊಂಡ. ಅದೇ ಶಬ್ದವು ಇಂದಿಗೂ ಬಳಕೆಯಲ್ಲಿದೆ.

ಲ್ಯೂವೆನ್‌ಹುಕ್, ಮುಂದಿನ ದಿನಗಳಲ್ಲಿ ಬ್ಯಾಕ್ಟೀರಿಯ, ಸ್ನಾಯುತಂತು, ವೀರ್ಯಾಣು, ಕೆಂಪುರಕ್ತ ಕಣ, ಕೀಲುವಾತಕಿಯಲ್ಲಿ (ಗೌಟ್) ಕಾಯಿಲೆಯ ಹರಳುಗಳು, ಲೋಮನಾಳಗಳಲ್ಲಿ ರಕ್ತಸಂಚಾರ, ಸಸ್ಯಜೀವಕೋಶಗಳ ಒಳಗಿನ ರಚನೆಗಳು, ರೋಟಿ-ರ್ ಎಂಬ ಬಂಡಿಜೀವಿಗಳು ಹಾಗೂ ನೆಮಟೋಡ್ ಹುಳುಗಳು ಇತ್ಯಾದಿ ರಚನೆಗಳನ್ನು ಅಧ್ಯಯನ ಮಾಡಿ ಪತ್ರಗಳನ್ನು ಬರೆದ.
ಲಂಡನ್ ರಾಯಲ್ ಸೊಸೈಟಿಯು ಲ್ಯೂವೆನ್‌ಹುಕ್‌ನನ್ನು ತನ್ನ ‘ಫೆಲೊ’ ಆಗಿ ಆಯ್ಕೆಮಾಡಿತು. ಇದನ್ನು ಲ್ಯೂವೆನ್‌ಹುಕ್
ನಂಬಲೇ ಇಲ್ಲ! ತನ್ನಂಥ ಅವಿದ್ಯಾವಂತ’ನಿಗೆ ಇಂಥ ಗೌರವವೆ!? ಆತ ಅದನ್ನು ಸ್ವೀಕರಿಸಲು ಲಂಡನ್ನಿಗೆ ಹೋಗಲಿಲ್ಲ.

ಲಂಡನ್ ರಾಯಲ್ ಸೊಸೈಟಿಯ ಒಂದೇ ಒಂದು ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಲ್ಯೂವೆನ್‌ಹುಕ್ ಸಾಯುವಾಗ ಟೈಫಸ್ ಕಾಯಿಲೆಗೆ ತುತ್ತಾದ. ಆ ಕಾಯಿಲೆಯಲ್ಲಿ ಕಂಡುಬರುವ ವಪೆಯ ತುಡಿತವನ್ನು (ಡಯಾಫ್ರಮಾಟಿಕ್ ಫ್ಲಟರ್) ನಿಖರವಾಗಿ ಗುರುತಿಸಿ ಆ ಬಗ್ಗೆ ಪತ್ರವನ್ನು ಬರೆದ. ಇದನ್ನು ‘ಡಾನ್ಸಿಂಗ್ ಬೆಲ್ಲಿ ಸಿಂಡ್ರೋಮ್’ ಎಂದೂ ಕರೆಯುವರು. ಈಗ ಈ ಕಾಯಿಲೆ ಯನ್ನು ‘ಲ್ಯೂವೆನ್ ಹುಕ್ ಡಿಸೀಸ್’ ಎಂದೂ ಕರೆಯುವರು. ಲ್ಯೂವೆನ್‌ಹುಕ್ ಆಗಸ್ಟ್ ೩೦, ೧೭೨೩ರಂದು ಡೆಲ್ತ್ ನಗರದಲ್ಲಿಯೇ ಮರಣಿಸಿದ. ಹೀಗೆ ಓರ್ವ ಜವಳಿ ವ್ಯಾಪಾರಿಯು ತನ್ನ ಕೇವಲ ಆಸಕ್ತಿಯ ಮೂಲಕ ಸಾರ್ವಕಾಲಿಕ ಶ್ರೇಷ್ಠ ವಿಜ್ಞಾನಿಗಳಲ್ಲಿ
ಒಬ್ಬನೆಂದು ವೈದ್ಯಕೀಯ ಇತಿಹಾಸದಲ್ಲಿ ಅಮರನಾದ.