ಶಶಾಂಕಣ
ಶಶಿಧರ ಹಾಲಾಡಿ
ನಮ್ಮೂರಲ್ಲಿ ದ್ಯಾವನಾಯಕ ಎಂಬ ಕೃಷಿ ಕಾರ್ಮಿಕನಿದ್ದ. ಸುಮಾರು ಐದು ಅಡಿ ಎತ್ತರ, ಸದಾ ನಗು ಮುಖ, ಎಲೆ ಅಡಿಕೆ
ತಿಂದು ಕೆಂಪಗಾಗಿದ್ದ ಹಲ್ಲುಗಳು. ಮೈ ಬಣ್ಣ ಮಿರ ಮಿರ ಹೊಳೆಯುವ ಕಪ್ಪು; ಕಪ್ಪನೆಯ ತಲೆಗೂದಲು, ಅದನ್ನು ಕಟ್ಟಿ ಹಾಕಿದ ಒಂದು ಜುಟ್ಟು. ಉಡುವುದು ಸಾದಾ ಪಂಚೆ; ಕೆಲಸ ಮಾಡುವಾಗ ಮೇಲ್ಭಾಗಕ್ಕೆ ಅಂಗಿ ಹಾಕುವ ಅಭ್ಯಾಸ ಕಡಿಮೆ. ‘ಮಲೆಗಳಲ್ಲಿ
ಮದುಮಗಳು’ ಕಾದಂಬರಿಯಲ್ಲಿ ಬರುವ ನಾಯಿಗುತ್ತಿಯನ್ನು ಹೋಲುವ ನಡೆನುಡಿ.
ನಮ್ಮೂರಲ್ಲಿ ಗದ್ದೆಗಳಿಗೆ ಸೊಪ್ಪುನ ಗೊಬ್ಬರ ಮಾಡುವ ಪದ್ಧತಿ ಇತ್ತು. ಮರಗಳಿಂದ ಸೊಪ್ಪಿನ ತಂದು ಗಂಟಿ ಕಾಲಡಿ ಹಾಕಿ, ಎರಡು ಮೂರು ವಾರ ಅವುಗಳು ಅದರ ಮೇಲೆ ಮಲಗಿದ ನಂತರ ಗೊಬ್ಬರ ತಯಾರು. ಪ್ರತಿದಿನ ಗಂಟಿ ಮಲಗುವ ಹಟ್ಟಿಗೆ ಸೊಪ್ಪು ಹರಡಬೇಕಿತ್ತು. ಅದಕ್ಕಾಗಿ ಕೆಲವೊಮ್ಮೆ ಮರದಿಂದ ಸೊಪ್ಪನ್ನು ಕತ್ತರಿಸಿ ತರುವ ಅಭ್ಯಾಸ. ಆಗೆಲ್ಲಾ ದ್ಯಾವನಾಯಕನ ಸಹಕಾರ ದೊರಕುತ್ತಿತ್ತು.
‘ಸೊಪ್ಪು ಕಡಿದು ತರಲಿಕ್ಕೆ ಅಡ್ಡಿಲ್ಲ, ಮರ ಹತ್ತುವುದಕ್ಕೂ ನನಗೆ ಗೊತ್ತು.. ಆದರೆ ಯಾವುದೇ ಕಾರಣಕ್ಕೂ ಮರದ ಕುಡಿಯನ್ನು ನಾನು ಕತ್ತರಿಸುವುದಿಲ್ಲ, ಕಾಣಿ’ ಎಂಬ ಷರತ್ತು ವಿಧಿಸಿ, ಅದನ್ನು ಪಾಲಿಸುವುದಾದರೆ ಮಾತ್ರ ಆತ ಮರ ಹತ್ತುತ್ತಿದ್ದ. ಸೊಂಪಾಗಿ ಬೆಳೆದ ಮರದ ಸೊಪ್ಪನ್ನು ಕತ್ತರಿಸಿ, ಮೇಲ್ಭಾಗದ ಮತ್ತು ತುದಿಯಲ್ಲಿರುವ ಕೊಂಬೆಗಳನ್ನು ಯಾವುದೇ ಕಾರಣಕ್ಕೂ ಆತ
ಕತ್ತರಿಸುತ್ತಿರಲಿಲ್ಲ. ‘ಪೂರ್ತಿ ಕಡಿದರೆ, ಆ ಮರ ಮತ್ತೆ ಚಿಗುರಲೇ ಬೇಕಲ್ಲ. . . ಕುಡಿ ಭಾಗ ಹಾಗೆಯೇ ಬಿಟ್ಟರೆ, ಮಳೆ ಬಂದ ಕೂಡಲೆ ಮರ ಚಿಗುರುತ್ತೆ, ಮತ್ತೆ ಮುಂದೊಮ್ಮೆ ಸೊಪ್ಪು ತರಲು ಅನುಕೂಲ ಆಗುತ್ತೆ’ ಎಂಬ ಸರಳ ವಿವರಣೆ ಕೊಡುತ್ತಿದ್ದ ದ್ಯಾವ ನಾಯಕ.
ನಮ್ಮೂರಿನ ಹಿಂಭಾಗದಲ್ಲಿ ಸೊಪ್ಪಿನ ಅಣೆ ಎಂಬ ಒಂದು ದೊಡ್ಡ ಬೆಟ್ಟ ಇದೆ. ಅದರ ತುಂಬಾ ದೊಡ್ಡ ಗಾತ್ರದ ಬೋಗಿ, ದೂಪ, ಅಂಡಾರು, ಹಿರಾಲುಬೋಗಿ, ಕಾಸಾನು, ಚಾರ, ಸಳ್ಳೆ, ನೇರಳು ಮತ್ತಿತರ ಮರಗಳು ಅವಷ್ಟಕ್ಕೆ ಅವು ಬೆಳೆದಿದ್ದವು. ಆ ಮರಗಳಿಂದ ಸೊಪ್ಪು ಕಡಿದು ತಂದು, ಸೊಪ್ಪಿನ ಗೊಬ್ಬರ ಮಾಡಿ, ಗದ್ದೆಗಳಿಗೆ ಹಾಕುತ್ತಿದ್ದರು ನಮ್ಮೂರಿನವರು. ಹೆಚ್ಚಿನವರು ದ್ಯಾವನಾಯಕನ
ರೀತಿಯೇ ಷರತ್ತನ್ನು ವಿಧಿಸಿಕೊಂಡಿದ್ದರು. ಯಾವುದೇ ಕಾರಣಕ್ಕೂ ಮರದ ತುದಿಯನ್ನು ಕತ್ತರಿಸುತ್ತಿರಲಿಲ್ಲ, ತುದಿ ಭಾಗದ ಕುಡಿಯನ್ನು ಹಾಗೆಯೇ ಬಿಟ್ಟು ಮರ ತನ್ನ ಪಾಡಿಗೆ ತಾನು ಚಿಗುರಿ, ಮತ್ತೊಮ್ಮೆ ಬೆಳೆಯಲು ಅವಕಾಶ ಮಾಡಿಕೊಡುತ್ತಿದ್ದವರೇ. ಮರದ ಚಿಗುರನ್ನು ಕತ್ತರಿಸಬಾರದು ಎಂಬ ಆ ಅಲಿಖಿತ ನಿಯಮವೇ, ನಮ್ಮೂರಿನ ಸೊಪ್ಪಿನ ಬೆಟ್ಟವನ್ನು ಇಂದಿಗೂ ಹಸಿರಾಗಿ ಇಟ್ಟಿದೆ.
ಮರವನ್ನು ಕತ್ತರಿಸಬಾರದು, ಮರದ ತುದಿಯನ್ನು ಕಡಿಯಬಾರದು ಎಂಬ ಜನಪದ ನಂಬಿಕೆಯು, ‘ಲಿವ್ ಅಂಡ್ ಲೆಟ್ ಲಿವ್’ ಎಂಬ ತತ್ವವನ್ನು ಢಾಳಾಗಿ ವಿವರಿಸಿ ಹೇಳುವುದು ಒಂದೆಡೆಯಾದರೆ, ಈ ನಂಬಿಕೆಯ ಬೇಲಿಯಲ್ಲಿ ನಮ್ಮ ಸುತ್ತಲಿನ ಪರಿಸರ
ವನ್ನು ಸಾಧ್ಯವಾದಷ್ಟು ಕಾಪಾಡಲು ಸಾಧ್ಯವಾಗುತ್ತಿದ್ದುದು ಇನ್ನೊಂದೆಡೆ. ನಮ್ಮೂರಿನ ದ್ಯಾವ ನಾಯಕನಂತಹವರಿಗೆ ಈಗಿನ
ಆಧುನಿಕ ‘ಚಿಂತಕರು’ ಒಂದು ಕುಚೋದ್ಯದ ಪ್ರಶ್ನೆಯನ್ನು ಕೇಳಿಯಾರು.
‘ಹಳ್ಳಿಯ ಜನರು ಗುಡಿಸಲು ಕಟ್ಟಲು, ಮನೆ ಕಟ್ಟಲು ಮರಗಳನ್ನು ಕಡಿಯುವುದೇ ಇಲ್ಲವೆ?’ ಎಂದು. ನಿಜ, ಕಾಡಿನ ಅಂಚಿ ನಲ್ಲಿರುವವರು ತಮ್ಮ ಮನೆ ಕಟ್ಟಲು ಮರಕಡಿಯುವುದುಂಟು. ಆಗ, ತಾವು ಕಡಿಯುತ್ತಿರುವ ಮರವನ್ನು ಪೂಜಿಸಿ, ಎಷ್ಟು ಬೇಕೋ ಅಷ್ಟು ಮಾತ್ರ ಮರಗಳನ್ನು ಕಡಿಯುವ ಸಂಪ್ರದಾಯ. ಇದರ ನಡುವೆಯೂ ಅರಳಿ ಮರ, ಬೇವಿನ ಮರ ಮೊದಲಾದ ಪವಿತ್ರ ಎನಿಸುವ ಮರಗಳನ್ನು ಯಾರೂ ಕಡಿಯುತ್ತಿರಲಿಲ್ಲ!
ಅರಳಿ ಮರದಲ್ಲಿ ಬ್ರಹ್ಮರಾಕ್ಷಸ ಇರುತ್ತದೆ ಎಂಬ ನಂಬಿಕೆಯು ಅದರ ರಕ್ಷಣೆ ಸಹಕಾರಿ ಎನಿಸಿತ್ತು. ಆದರೆ ಈ ಪುರಾತನ ನಂಬಿಕೆಗೆ ಆಧುನಿಕ ವಿಜ್ಞಾನವು ಪೂರಕ ಮಾಹಿತಿಯನ್ನು ನೀಡಿದ್ದು ಮಾತ್ರ ವಿಸ್ಮಯಕಾರಿ! ಅರಳಿ ಮರವು ಅತಿ ಹೆಚ್ಚು ಆಮ್ಲ ಜನಕವನ್ನು
ಸೂಸುವುದರಿಂದಾಗಿ, ಅದರ ಗಾಳಿಯು ಮನುಷ್ಯನಿಗೆ ಒಳ್ಳೆಯದು ಎಂಬ ಈಚಿನ ಆವಿಷ್ಕಾರವು, ಅರಳಿಮರದ ಕುರಿತಾಗಿದ್ದ ಪುರಾತನ ನಂಬಿಕೆಗೆ ಇಂಬುಕೊಟ್ಟ ಸತ್ಯವನ್ನು ಮಾತ್ರ ಯಾರೂ ಅಲ್ಲಗಳೆಯುವಂತಿಲ್ಲ!
ಹಳ್ಳಿಗಳಲ್ಲಿರುವ ಇಂತಹ ಕೆಲವು ನಂಬಿಕೆಗಳು ಹಲವು ಬಾರಿ ಪರಿಸರ ಸ್ನೇಹಿ ಎಂಬುದು ಬಹಳ ಕುತೂಹಲಕಾರಿ. ನಮ್ಮ ರಾಜ್ಯ ದಲ್ಲಿ ದೇವರ ಕಾಡು ಎಂಬ ಪರಿಕಲ್ಪನೆ ಇದೆ. ಈ ರೀತಿಯ ಜನಪದ ನಂಬಿಕೆಯು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದ
ಹಲವು ಭಾಗಗಳಲ್ಲಿ, ವಿಶ್ವದ ವಿವಿಧ ಕಡೆಯೂ ಇದೆ. ದೇವರಕಾಡನ್ನು ಸ್ಥಳೀಯರು ಗೌರವದಿಂದ ನೋಡುತ್ತಾರೆ. ಅಲ್ಲಿನ ಮರ ಗಿಡಗಳನ್ನು, ಪ್ರಾಣಿ ಪಕ್ಷಿಗಳನ್ನು ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳುವ ಪದ್ಧತಿ.
ಇದರಿಂದಾಗಿ ಸಹಜ ಕಾಡು ಅಲ್ಲಿ ಉಳಿದುಕೊಂಡು ಬಂದು, ಪರಿಸರ ರಕ್ಷಣೆ ತನ್ನಿಂದ ತಾನೇ ಆಗುತ್ತಿರುವ ಪ್ರಕ್ರಿಯೆ! ಜನಪದ
ನಂಬಿಕೆಯಂತೆ ದೇವರ ಕಾಡಿನ ಪರಿಸರದಲ್ಲಿ ಪವಿತ್ರ ದೈವಗಳು, ಭೂತಗಳು, ಶಕ್ತಿಗಳು ಇವೆಯಂತೆ! ಕಾಡಿನಲ್ಲಿ ದೈವೀಶಕ್ತಿಗಳು ಇವೆಯೆಂಬ ಆ ಒಂದು ನಂಬಿಕೆಯಿಂದಾಗಿ, ಅದೆಷ್ಟೋ ಕಾಡುಗಳು ರಕ್ಷಣೆ ಪಡೆದಿವೆ. ಉತ್ತರ ಭಾರತದ ಕೆಲವು ಬುಡಕಟ್ಟು
ಜನಾಂಗದವರು ಸಾಲ ಮರವನ್ನು ಅಕ್ಷರಶಃ ದೇವರೆಂದೇ ಪೂಜಿಸಿ, ಕಾಪಾಡಿಕೊಂಡು ಬರುತ್ತಿದ್ದಾರೆ.
ಕಾಡನ್ನು ಪವಿತ್ರವಾಗಿ ಕಾಣುವ ನಂಬಿಕೆ ದೇಶದಾದ್ಯಂತ ಇದೆ. ಪ್ರಾಣಿ, ಹಕ್ಕಿ, ನದಿ, ನೀರು, ನೀರಿನಲ್ಲಿ ವಾಸಿಸುವ ಜಲಚರಗಳು ಇವೆಲ್ಲವುಗಳಿಗೂ ಗೌರವ ನೀಡುವ ನಮ್ಮ ಜನಪದ ನಂಬಿಕೆಗಳು ಪರೋಕ್ಷವಾಗಿ ಅಲ್ಲಿನ ಪರಸರವನ್ನು ರಕ್ಷಿಸುವ ಕೆಲಸ ಮಾಡುವ ಪರಿ ನಿಜಕ್ಕೂ ಚೋದ್ಯ. ನಮ್ಮ ಕರಾವಳಿಯಲ್ಲಿರುವ ಮಾರಸ್ವಾಮಿ ಎಂಬ ದೇವಾಲಯದ ಮೂರು ಗರ್ಭಗುಡಿಯ
ಮುಂಭಾಗದಲ್ಲಿ, ಮೀನು, ಆಮೆ ಮತ್ತು ಮೊಸಳೆಗಳ ಶಿಲಾನಿರ್ಮಿತಿಗಳನ್ನು ಒಡಮೂಡಿಸಿ, ಪ್ರಧಾನ ದೇವರ ಜತೆ ಅವುಗಳಿಗೂ ಪೂಜೆ ಮಾಡುವ ಸಂಪ್ರದಾಯ ಬೆಳೆದುಬಂದಿದೆ.
ಅಲ್ಲಿನ ದೇಗುಲದ ಪಕ್ಕದಲ್ಲೇ ಇರುವ ನದಿಯ ಆಳದಲ್ಲಿ ನೆಗಳ ಎಂಬ ಬೃಹತ್ ಮೊಸಳೆ ರೀತಿಯ ಪ್ರಾಣಿ ಇದೆ ಎಂಬ ನಂಬಿಕೆಯೂ ಇದ್ದು, ಅದಕ್ಕೆ ಪ್ರತಿ ವರ್ಷ ಅನ್ನದ ನೈವೇದ್ಯ ಸಂಪ್ರದಾಯ. ಆ ಮೂಲಕ ನೆಗಳ ಎಂಬ ಆ ಜಲಚರಕ್ಕೆ ಗೌರವ, ರಕ್ಷಣೆ ನೆಗಳ ಎಂದಾಗ ನೆನಪಾಗುವುದು, ವಂಡಾರು ಎಂಬ ಹಳ್ಳಿಯಲ್ಲಿ ನಾನು ಕಂಡ ನೆಗಳನ ಬಾವಿ.
ನೆಗಳನ ಬಾವಿ ಎಂದಷ್ಟೇ ಹೇಳಿದರೆ, ಅಲ್ಲಿನ ನಂಬಿಕೆ, ಪದ್ಧತಿಗಳ ಪೂರ್ಣ ಚಿತ್ರಣ ನೀಡಿದಂತಾಗದು. ವಂಡಾರಿನಲ್ಲಿ ಒಂದು ವಿಶಾಲವಾದ ಗದ್ದೆ ಇದೆ. ಕಂಬಳ ಗದ್ದೆ ಎಂದೇ ಅದರ ಹೆಸರು. ವರ್ಷಕ್ಕೊಂದು ಬಾರಿ, ಚಳಿಗಾಲದಲ್ಲಿ, ಅಲ್ಲಿ ನಡೆಯುವ ಕಂಬಳ ವಿಭಿನ್ನ, ವಿಶಿಷ್ಟ ಪರಿಸರಸ್ನೇಹಿ. ಈ ಕಂಬಳದಲ್ಲಿ ಕೋಣಗಳ ನಡುವೆ ಸ್ಪರ್ಧೆ ಇಲ್ಲ, ಆದ್ದರಿಂದಲೇ ಅದು ಪರಿಸರಸ್ನೇಹಿ. ಗದ್ದೆಯ ಕೆಸರಿನಲ್ಲಿ ಕೋಣಗಳನ್ನು ಅತ್ತಿಂದಿತ್ತ ನಡೆಸುವುದು ಅಥವಾ ಓಡಿಸುವುದು ಇಲ್ಲಿನ ಪದ್ಧತಿ. ಆದ್ದರಿಂದ, ಕೋಣಗಳಿಗೆ ಹಿಂಸೆ ನೀಡುವ ಅವಕಾಶವೇ ಇಲ್ಲ. ಸುತ್ತಮುತ್ತಲಿನ ಹತ್ತಾರು ಮೈಲಿ -ಸಲೆಯ ಕೃಷಿಕರು ತಮ್ಮ ಕೋಣಗಳಿಗೆ ಅನಾರೋಗ್ಯ ವಾದಾಗ, ಕಂಬಳದ ದಿನ ಇಲ್ಲಿಗೆ ಕರೆತಂದು ಗದ್ದೆಯಲ್ಲಿ ಓಡಿಸುವ ಹರಕೆ ಹೊರುತ್ತಾರೆ.
ಈ ಕಂಬಳಗದ್ದೆಯ ಒಂದು ಮೂಲೆಯಲ್ಲಿ ಇರುವ ಒಂದು ಭಾವಿಯೇ ನೆಗಳನ ಬಾವಿ. ಆ ಬಾವಿಯಲ್ಲಿ ಬೃಹತ್ ಮೊಸಳೆಯನ್ನು
ಹೋಲುವ ಪ್ರಾಣಿ ಇತ್ತು ಎಂಬ ನಂಬಿಕೆ. ಈಗ ನೆಗಳ ಇಲ್ಲ, ಆದರೆ ವಾರ್ಷಿಕ ಕಂಬಳದ ಸಮಯದಲ್ಲಿ ನೆಗಳನಿಗೆ ಪ್ರಜೆ ಮಾಡಿ, ಸಾಕಷ್ಟು ಅನ್ನವನ್ನು ಆಹಾರವಾಗಿ ನೀಡುವ ಪದ್ಧತಿ. ಕೋಣ ಮತ್ತು ಇತರ ಜಾನುವಾರುಗಳನ್ನು ಹಿಡಿದು ತಿನ್ನುತ್ತಿದ್ದ ನೆಗಳ ಎಂಬ ಮೊಸಳೆಯಯನ್ನು ಆ ಬಾವಿಯಲ್ಲಿ ಕೂಡಿಹಾಕಿದ್ದಾರೆ, ನಮ್ಮ ಜನಪದರು!
ವಂಡಾರು ಕಂಬಳದ ದಿನ ಅಲ್ಲಿ ನಡೆಯುವ ಇನ್ನೊಂದು ಸಂಪ್ರದಾಯವು, ಜನಪದ ವೈದ್ಯವನ್ನು ನೆನಪಿಸುತ್ತದೆ. ಸುಮಾರು ಅರ್ಧ ಕಿಮೀ ಉದ್ದ ಇರುವ ಆ ಕಂಬಳದ ಗದ್ದೆಯ ಅಂಚಿನುದ್ದಕ್ಕೂ ಅಕ್ಕಿಯನ್ನು ರಂಗೋಲಿಯ ರೀತಿ ಚೆಲ್ಲುತ್ತಾ ಹೋಗುವ ಒಂದು ಪದ್ಧತಿಯಿದೆ. ಯಾರಿಗಾದರೂ ಮೈಮೇಲೆ ಚಿಬ್ಬು ಉಂಟಾದರೆ, ಈ ರೀತಿ ಅಲಿನ ಕಂಬಳಗದ್ದೆಯ ಅಂಚಿನುದ್ದಕ್ಕೂ ಅಕ್ಕಿ ಚೆಲ್ಲುವ ಸಂಪ್ರದಾಯ. ಈ ಗದ್ದೆಯ ಸುತ್ತಲೂ ಅಕ್ಕಿ ಚೆಲ್ಲಿದರೆ ಮೈಮೇಲಿದ್ದ ಚಿಬ್ಬು (ಸಣ್ಣ ಬಿಳಿಕಲೆ) ವಾಸಿಯಾಗುತ್ತದೆಂಬ ನಂಬಿಕೆ.
ನನಗೂ ಬಾಲ್ಯದಲ್ಲಿ ಈ ರೀತಿ ಚಿಬ್ಬುಂಟಾಗಿದ್ದಾಗ, ಅರ್ಧ ಸೇರು ಅಕ್ಕಿಯನ್ನು ಆ ಗದ್ದೆಯ ಸುತ್ತಲೂ ಚೆಲ್ಲಿದ್ದುಂಟು. ಈ ಅಕ್ಕಿ ಯನ್ನು ಅಲ್ಲಿರುವ ಮೀನುಗಳಿಗೆ ಹಾಕುವುದು ಎಂದು ನಂಬಿಕೆ. ಗದ್ದೆಯಲ್ಲೆಲ್ಲಿ ಮೀನುಗಳು? ಇಲ್ಲೇ ಇರುವುದು ವಿಶೇಷ. ಹಿಂದೆ ಆ ಗದ್ದೆ ಒಂದು ಬೃಹತ್ ಕೆರೆಯಾಗಿತ್ತು ಮತ್ತು ಅದನ್ನು ಕೃಷಿಗಾಗಿ ಗದ್ದೆಯನ್ನಾಗಿ ಪರಿವರ್ತಿಸಿದರು ಎಂಬುದೇ ಇಲ್ಲಿನ ಸ್ವಾರಸ್ಯ. ಆ ಕೆರೆಯಲ್ಲಿದ್ದಿರಬಹುದಾದ ನೆಗಳ ಎಂಬ ಮೊಸಳೆಯನ್ನು ಪಕ್ಕದ ಬಾವಿಯಲ್ಲಿ ಕೂಡಿಹಾಕಿ, ವರ್ಷಕ್ಕೊಂದು ದಿನ
ಅದಕ್ಕೆ ಪೂಜೆ ಮತ್ತು ಆಹಾರ ನೀಡುವ ಪದ್ಧತಿಯೂ ಇದಕ್ಕೆ ಪೂರಕ.
ಚೆಲ್ಲಿದ ಅಕ್ಕಿಯನ್ನು ತಿನ್ನುವ ಮೀನುಗಳು ಆ ಗದ್ದೆಯಲ್ಲಿವೆ ಎಂಬ ನಂಬಿಕೆಯೂ ಇದೊಂದು ಕೆರೆಯಾಗಿತ್ತು ಎಂದೇ ಸೂಚಿಸು ತ್ತದೆ. ಇನ್ನೂ ವಿಶೇಷ ಎಂದರೆ, ಇಲ್ಲಿ ಕಂಬಳ ನಡೆಯುವ ದಿನ ಅಲ್ಲಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ಕೋಟೇಶ್ವರದಲ್ಲಿನ ಕೆರೆಯಲ್ಲಿ ಕೆಸರು ಕಾಣಿಸುತ್ತದಂತೆ. ಏಕೆಂದರೆ, ಇವೆರಡರ ನಡುವೆ ಸುರಂಗ ಇತ್ತು ಎಂಬ ನಂಬಿಕೆ. ವಂಡಾರು ಕಂಬಳ ಗದ್ದೆ ಯನ್ನು (ಹಿಂದೆ ಕೆರೆ) ಮತ್ತು ಕೋಟೇಶ್ವರ ಕೆರೆಯನ್ನು ಪುರಾತನ ಮಾನವರು ಅಥವಾ ಪಾಂಡವರು ನಿರ್ಮಿಸಿದ್ದು ಎಂಬ ಇನ್ನೊಂದು ನಂಬಿಕೆಯೂ ಉಂಟು.
ಕೋಟೇಶ್ವರದಲ್ಲಿ ಈಗಲೂ ವಿಶಾಲವಾದ ಕೆರೆ ಇದ್ದು, ಅದು ಗಾತ್ರದಲ್ಲಿ ವಂಡಾರು ಕಂಬಳಗದ್ದೆಯನ್ನು ಬಹುವಾಗಿ ಹೋಲು ತ್ತದೆ. ಇನ್ನೊಂದು ವಿಸ್ಮಯಕಾರಿ ವಿಚಾರವನ್ನು ತಿಳಿದರೆ ನಿಮಗೇ ಅಚ್ಚರಿ ಎನಿಸಬಹುದು! ವಂಡಾರು ಕಂಬಳಗದ್ದೆ ಯಲ್ಲಿ ಕಂಬಳದ ಜಾತ್ರೆ ನಡೆದ ಎರಡು ವಾರದ ಸಮಯದಲ್ಲಿ ನಡೆಯುವ ಕೋಟೇಶ್ವರ ಜಾತ್ರೆಯ ಸಮಯದಲ್ಲೂ, ಅಲ್ಲಿನ ಕೆರೆಯ ಸುತ್ತಲೂ ಅಕ್ಕಿಯನ್ನು ಚೆಲ್ಲುವ ಸಂಪ್ರದಾಯ ಇದೆ! ಈ ಹರಕೆಯನ್ನು ಸಹ ಮೈಮೇಲೆ ಚಿಬ್ಬು ಉಂಟಾದವರು ಹೊತ್ತು ಕೊಳ್ಳುವಂತಹದ್ದು! ಕೋಟೇಶ್ವರ ಕೆರೆಯ ಮೀನುಗಳಿಗೆ ಅಕ್ಕಿ ಚೆಲ್ಲುವ ಈ ಸಂಪ್ರದಾಯವು ಶೇ.ನೂರರಷ್ಟು ವಂಡಾರು ಕಂಬಳ ಗದ್ದೆಯ ಸುತ್ತ ಅಕ್ಕಿ ಚೆಲ್ಲುವುದನ್ನು ಹೋಲುತ್ತದೆ.
ಜಲಚರಗಳಿಗೆ ಆಹಾರ ನೀಡುವ ಮತ್ತು ಆ ಮೂಲಕ ಚಿಬ್ಬನ್ನು ವಾಸಿಮಾಡಿಕೊಳ್ಳುವ ಜನಪದ ನಂಬಿಕೆಯು ಇಷ್ಟಕ್ಕೇ ಮುಗಿದಿಲ್ಲ. ವಂಡಾರು ಮತ್ತು ಕೋಟೇಶ್ವರ ದಿಂದ ಸುಮಾರು 60 ಕಿಮೀ ದೂರದಲ್ಲಿ ‘ಚಿಬ್ಬಲುಗುಡ್ಡೆ’ ಎಂಬ ಸ್ಥಳವಿದೆ. ತೀರ್ಥಹಳ್ಳಿ ತಾಲೂಕಿನಲ್ಲಿರುವ ಚಿಬ್ಬಲುಗುಡ್ಡವು ತುಂಗಾ ನದಿ ತೀರದಲ್ಲಿರುವ ಒಂದು ಸುಂದರ ಸ್ಥಳ. ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’ ಪ್ರಬಂಧ ಸಂಕಲನದಲ್ಲಿ ಚಿಬ್ಬಲುಗುಡ್ಡದ ಪ್ರಸ್ತಾಪ ಬರುತ್ತದೆ.
ಕುಪ್ಪಳ್ಳಿಗೆ ಆರೆಂಟು ಕಿಮೀ ದೂರದಲ್ಲಿರುವ ಚಿಬ್ಬಲುಗುಡ್ಡೆಗೆ ಕುವೆಂಪು ಅವರು ಆಗಾಗ ಬಂದು, ಅಲ್ಲಿನ ಸುಂದರ ಪರಿಸರವನ್ನು ಕಂಡು ಸಂತಸ ಪಡುತ್ತಿದ್ದರಂತೆ. ಈ ಚಿಬ್ಬಲು ಗುಡ್ಡದಲ್ಲೂ ಮೀನುಗಳಿಗೆ ಅಕ್ಕಿ ಮತ್ತು ಮುಂಡಕ್ಕಿ ತಿನ್ನಿಸುವ ಸಂಪ್ರದಾಯ ಇದೆ! ದಟ್ಟಕಾಡಿನ ನಡುವೆ ಇರುವ ಆ ನದಿಯ ಒಂದು ಗುಂಡಿಯಲ್ಲಿ ನೂರಾರು ಮೀನು ಗಳಿವೆ. ಒಂದರಿಂದ ಎರಡು ಅಡಿ ಉದ್ದ ಇರುವ ಈ ಮೀನುಗಳು ದಡದ ಹತ್ತಿರ ಬಂದು, ನಾವು ಹಾಕುವ ಅಕ್ಕಿ ಮತ್ತು ಮುಂಡಕ್ಕಿಯನ್ನು ತಿನ್ನುವ ನೋಟವೇ ಚೇತೋ ಹಾರಿ.
ಅಲ್ಲೊಂದು ದೊಡ್ಡಗಾತ್ರದ ರಾಣಿಮೀನು ಸಹ ಇದೆ ಎಂಬ ನಂಬಿಕೆ. ಇಂತಹ ನಂಬಿಕೆಯಿಂದಾಗಿ ಆ ಸ್ಥಳವೆಲ್ಲಾ ಪವಿತ್ರ.
ಇಂತಹ ಸುಂದರ ಸ್ಥಳವೊಂದಕ್ಕೆ ಪಾವಿತ್ರ್ಯತೆಯ ಕಿರೀಟ ತೊಡಿಸಿ, ಸ್ಥಳೀಯರು ಅದನ್ನು ರಕ್ಷಿಸಿದ್ದಾ, ಆ ಮೂಲಕ ನಮ್ಮ ಪರಸರವನ್ನೂ ರಕ್ಷಿಸಿದ್ದಾರೆ. ಇಂತಹ ಹಲವು ನಂಬಿಕೆಗಳೇ ಅಲ್ಲವೆ, ಕೆಲವು ಕಡೆಯಾದರೂ ನಮ್ಮ ನಾಡಿನ ಪರಿಸರವನ್ನು ರಕ್ಷಿಸಲು ಸಹಾಯ ಮಾಡಿದ್ದು? ಸ್ಥಳೀಯ ಪಾರಂಪರಿಕ ಪದ್ಧತಿ ಮತ್ತು ನಂಬಿಕೆಗಳಿಗೆ ಬೆಲೆ ನೀಡದೇ ಮಾನವನು ದುರಾಸೆಗೆ
ಒಳಗಾಗಿ, ಕೊಡಲಿಗೆ ಕೈ ಹಾಕಿದಾಗಲೇ ನಮ್ಮದಾಗಲೇ, ಪರಿಸರ ನಾಶವಾಗಿದ್ದು.