Saturday, 14th December 2024

ನಮ್ಮ ರಗಳೆಗಳಿಗೆ ಇಲ್ಲಿ ಯಾರಿಗಿದೆ ಬಿಡುವು …?

ಅಭಿವ್ಯಕ್ತಿ

ಪರಿಣಿತ ರವಿ

ನನಗೇ ಯಾಕೆ ಹೀಗಾಗುತ್ತಿದೆ? ಎಲ್ಲಾ ಕಷ್ಟಗಳು ನನಗೇ ಏಕೆ ಬರುತ್ತವೆ? ಜನರೇಕೆ ನನ್ನನ್ನು ಗುರುತಿಸುವುದಿಲ್ಲ? ನನ್ನನ್ಯಾಕೆ
ಯಾರೂ ಇಷ್ಟ ಪಡುವುದಿಲ್ಲ? ನಾನು ಎಲ್ಲರೊಂದಿಗೆ ಎಷ್ಟು ಮಾನ್ಯವಾಗಿ ನಡೆದುಕೊಳ್ಳುತ್ತೇನೆ, ಆದರೆ ಮಂದಿಯೇಕೆ ನನ್ನನ್ನು ಗೌರವಿಸುವುದಿಲ್ಲ? ನಾನು ಇತರರಿಗೆ ಕೈಲಾದ ಸಹಾಯ ಮಾಡುತ್ತೇನೆ, ಆದರೆ ಜನರೇಕೆ ನನಗೆ ಅಗತ್ಯವಿದ್ದಾಗ ತಿರುಗಿ ಕೂಡಾ
ನೋಡುವುದಿಲ್ಲ? ನಾನು ಯಾರ ಸುದ್ದಿಗೂ ಹೋಗುವುದಿಲ್ಲ.

ಆದರೆ ಜನರು ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ? ಅನ್ಯಾಯ, ಮೋಸ ಮಾಡಿದವರೆ ಅದೆಷ್ಟು ಸುಖವಾಗಿದ್ದಾರೆ!
ಯಾರಿಗೂ ನೋವು ಕೊಡದ ನನಗೇಕೆ ದೇವರು ಪದೇ ಪದೆ ಪರೀಕ್ಷೆ ಒಡ್ಡುತ್ತಾನೆ? ಈ ರೀತಿಯ ಚಿಂತೆಗಳು ಒಂದ ಒಂದು ಸಂದರ್ಭದಲ್ಲಿ ನಮ್ಮ ಮೇಲೆ ದಾಳಿ ಮಾಡಿರುತ್ತವೆ. ಏನಾದರೂ ಸಮಸ್ಯೆ ಎದುರಾದಾಗ ನಮಗೆ ಮಾತ್ರ ಇಂಥ ಕಷ್ಟವೆಂದೂ, ಇದುವೇ ಜಗತ್ತಿನ ಅತೀ ದೊಡ್ಡ ನೋವೆಂದೂ ಭಾವಿಸುತ್ತೇವೆ.

ಯಾರಾದರೂ ನಮಗೆ ಸಹಾಯ ಮಾಡಲಿ, ನಮ್ಮನ್ನು ಸಂತೈಸಲಿ ಎಂದು ಬಯಸುತ್ತೇವೆ. ನಮ್ಮ ಸಮಸ್ಯೆಗಳಿಗೆ ಹೊರಗಿನಿಂದ ಪರಿಹಾರ ಹುಡುಕುತ್ತೇವೆ. ನಾವು ಇತರರಿಗೆ ಸಹಾಯ ಮಾಡಿದ್ದರೆ, ತಿರುಗಿ ಅವರೂ ನಮಗೆ ಸಹಾಯ ಮಾಡುವುದು ಸಹಜ ವೆಂದು ನಿರ್ಧರಿಸುತ್ತೇವೆ. ಹಾಗಾಗದಿದ್ದರೆ ಈ ಜನರೇ ಸರಿ ಇಲ್ಲ, ಈ ಜಗತ್ತೇ ಕೆಟ್ಟು ಹೋಗಿದೆ ಎಂಬ ನಿರ್ಧಾರಕ್ಕೆ ಬರುತ್ತೇವೆ. ನನಗಾಗಿ ಒಂದೊಳ್ಳೆಯ ಮಾತು ಹೇಳುವವರಿಲ್ಲದ ಮೇಲೆ ಈ ಬದುಕೇ ಇಷ್ಟು ಎಂದು ನಿರಾಸೆ ಹೊಂದುತ್ತೇವೆ.

ನಮ್ಮಷ್ಟಕ್ಕೆ ನಾವೇ ಏನೇನೋ ಕಲ್ಪನೆಗಳನ್ನು ಮಾಡಿಕೊಂಡು ಅದೇ ಸರಿ ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತೇವೆ. ಮನಸ್ಸಿ ನೊಳಗೆ ಕಟ್ಟಿಕೊಂಡ ಈ ಗೋಡೆಗಳು ಅದೊಂದು ದಿನ ಉರುಳಿಸಲಾರದಷ್ಟು ಬಲಿಷ್ಟವಾಗಿ ಬೆಳೆದು ಬಿಡುತ್ತವೆ. ಕೊನೆಗೊಮ್ಮೆ ಇದರಿಂದ ಹೊರಬರಲಾರದೆ ಒದ್ದಾಡುತ್ತೇವೆ. ಈಗ ಹೇಳಿ ನಮ್ಮ ಈ ನರಳಾಟಕ್ಕೆ ಯಾರು ಹೊಣೆ? ನಾವೇನೋ ಸಮಾಜವೆಂದೋ, ಜನರೆಂದೋ, ಬಂಧುಗಳೆಂದೋ ಸುಲಭವಾಗಿ ದೂಷಿಸಬಹುದು.

ಆದರೆ ಸಾವಧಾನವಾಗಿ ಅವಲೋಕಿಸಿದಾಗ ಇದಕ್ಕೆ ನಾವೇ ಜವಾಬ್ದಾರರು ಹೊರತು ಅನ್ಯರಲ್ಲ ಅನ್ನುವ ಸತ್ಯ ವೇದ್ಯವಾಗುತ್ತದೆ.
ನಮಗೇನಾದರೂ ಗೊಂದಲವಿದ್ದಾಗ, ಸಮಸ್ಯೆ ಬಂದಾಗ ಬೇರೆಯವರಲ್ಲಿ ಸಲಹೆ, ಅಭಿಪ್ರಾಯ ಕೇಳುತ್ತೇವೆ. ಇಂಥವರಿಂದ ಸರಿಯಾದ ಮಾರ್ಗದರ್ಶನ ಸಿಗಬಹುದೆಂಬ ಅಚಲ ನಂಬಿಕೆ, ವಿಶ್ವಾಸ ನಮ್ಮಲ್ಲಿದ್ದರೆ ಅಭಿಪ್ರಾಯ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅಂತಹ ನಿಸ್ವಾರ್ಥ, ಪ್ರಬುದ್ಧ ಸಲಹೆಗಳಿಂದ ಖಂಡಿತಾ ಒಳಿತಾಗಬಹುದು. ಆದರೆ ಎಲ್ಲರೂ ಅದೇ ರೀತಿ ಇರುತ್ತಾರೆ ಎಂದು ಅಂದುಕೊಳ್ಳುವುದು ಅವಿವೇಕವಾಗುತ್ತದೆ.

ಕೆಲವರಂತೂ ಕಂಡಕಂಡವರಲ್ಲಿ ನನಗೆ ಈ ರೀತಿ ಆಗಿದೆ ಇದಕ್ಕೇನು ಪರಿಹಾರ? ನಾನೇನು ಮಾಡಬೇಕು? ನಿಮ್ಮ ಅಭಿಪ್ರಾಯ ವೇನು? ಎಂದು ಕೇಳುತ್ತಿರುತ್ತಾರೆ. ಆಗ ಜನರು ಅವರಿಗೆ ಬೇಕಾದ ರೀತಿಯಲ್ಲಿ, ಅವರಿಗೇನು ಗೊತ್ತೋ ಅದರ ಆಧಾರದಲ್ಲಿ, ಅವರ
ಅನುಭವಗಳ ಮಿತಿಯಲ್ಲಿ, ಅವರ ಆಲೋಚನೆಗಳ ಪರಿಽಯಲ್ಲಿ, ಅವರ ಜ್ಞಾನದ ಪರಿಮಿತಿಯಲ್ಲಿ ನಮ್ಮ ಸಮಸ್ಯೆಯ ಹೊರಗೆ ನಿಂತು ಪರಿಹಾರ ಸೂಚಿಸುತ್ತಾರೆ.

ಕೆಲವೊಮ್ಮೆ ಅಂತಹ ಸಲಹೆಗಳಿಂದ ಸಮಸ್ಯೆಗೆ ಪರಿಹಾರ ಸಿಗುವ ಬದಲು ಕೇಡು ಸಂಭವಿಸಲೂಬಹುದು. ಎಲ್ಲರ  ಅಭಿಪ್ರಾಯ ಗಳನ್ನು ಕೇಳುತ್ತಾ ಹೋದರೆ ಗೊಂದಲ ಇನ್ನಷ್ಟು ಬಿಗಡಾಯಿಸುವುದೇ ಹೊರತು ಪರಿಹಾರ ವಾಗಲಾರದು. ನಾವು ಯಾರಲ್ಲಿ ಸಲಹೆಯನ್ನು ಕೇಳಬೇಕು ಅನ್ನುವುದು ಬಹಳ ಮುಖ್ಯವಾಗಿರುತ್ತದೆ. ಹಾಗೆಯೇ ನಮ್ಮ ಸಮಸ್ಯೆಯನ್ನು ನಮಗಿಂತ ಚೆನ್ನಾಗಿ ಬೇರೆಯವರು ಅರ್ಥಮಾಡಿಕೊಂಡು ಪರಿಹರಿಸಲು ಸಾಧ್ಯವಿಲ್ಲ ಅನ್ನುವ ಮರ್ಮವನ್ನು ನಾವು ಮನಗಾಣಬೇಕು.

ಶಾಂತಚಿತ್ತರಾಗಿ ಏಕಾಗ್ರತೆಯಿಂದ ಮನಸ್ಸನ್ನು ಹತೋಟಿಗೆ ತಂದುಕೊಂಡು ಸಾವಧಾನ ದಿಂದ ಆಲೋಚಿಸಿದಾಗ ಪರಿಹಾರದ ಕಿರಣವೊಂದು ಖಂಡಿತಾ ಗೋಚರಿಸದೆ ಇರಲಾರದು. ಇತರರ ಅಭಿಪ್ರಾಯಗಳಿಗೆ ಮನ್ನಣೆ ಕೊಡುತ್ತಾ ತಮ್ಮ ಆಯ್ಕೆಗಳನ್ನು ಬದಲಿಸುತ್ತಲೇ ಇರುವ ಅದೆಷ್ಟೋ ಜನರನ್ನು ನಾವು ಕಂಡಿರುತ್ತೇವೆ. ಹೀಗೆ ಪರರ ಅನಿಸಿಕೆಗಳಿಗುಣವಾಗಿ ನಮ್ಮ ಇಷ್ಟಗಳನ್ನು ಬದಲಿಸುತ್ತಾ ಹೋದರೆ ಅಲ್ಲಿ ಕೊನೆಯಿರದ ಗೊಂದಲ ಸೃಷ್ಟಿಯಾಗುತ್ತದೆ. ಉದಾಹರಣೆಗೆ ನಿಮಗೆ ಕೆಂಪು ಬಣ್ಣ ಇಷ್ಟ ಎಂದಿಟ್ಟುಕೊಳ್ಳೊಣ.

ನೀವು ಕೆಂಪು ಬಣ್ಣದ ಉಡುಗೆ ತೊಟ್ಟಾಗ ಇದು ಕಣ್ಣಿಗೆ ಹೊಡೆಯುತ್ತದೆ, ಇದಕ್ಕಿಂತ ಹಳದಿ ಬಣ್ಣ ಚಂದ ಕಾಣುತ್ತದೆ ಎಂದು ಯಾರೋ ಹೇಳುತ್ತಾರೆ. ಹಳದಿ ಬಣ್ಣದ ಡ್ರೆಸ್ ಹಾಕಿದಾಗ ಇನ್ಯಾರೋ ಹೇಳುತ್ತಾರೆ ತುಂಬಾ ಲೈಟ್ ಆಯ್ತು, ನೀಲಿ ಬಣ್ಣ ಬಹಳ ಚೆನ್ನಾಗಿ ಒಪ್ಪುತ್ತದೆ ಎಂದು. ನೀಲಿಯನ್ನು ಆಯ್ಕೆ ಮಾಡಿಕೊಂಡಾಗ ಹಸುರು ಚೆನ್ನ ಅನ್ನುತ್ತಾರೆ. ಹಸಿರಿಗಿಂತ ಕಪ್ಪು ಓಕೆ ಅನ್ನುತ್ತಾರೆ. ಕಪ್ಪಿನ ಸರದಿ ಬಂದಾಗ ಬಿಳಿ ಬಣ್ಣ ಆಗಬಹುದು ಅನ್ನುತ್ತಾರೆ.

ಎಲ್ಲರ ಅನಿಸಿಕೆಗಳನ್ನು ಮನ್ನಿಸುತ್ತಾ ಕಾರ್ಯರೂಪಕ್ಕೆ ತರಲು ಯತ್ನಿಸಿದರೆ ಸಮಾಧಾನ ಮರೀಚಿಕೆ ಯಲ್ಲವೇ? ಜನರ ಅಭಿಪ್ರಾಯಗಳಿಗೆ ಅನುಸಾರವಾಗಿ ನಮ್ಮ ಆದ್ಯತೆಗಳನ್ನು ಬದಲಾಯಿಸುತ್ತಾ ಹೋದರೆ ಸಮಸ್ಯೆಗಳು ಅಧಿಕವಾಗಿ ಮನಃಶಾಂತಿ
ಇಲ್ಲವಾಗುತ್ತದೆ. ನಮಗೇನು ಬೇಕೆಂದು ನಮಗಿಂತ ಚೆನ್ನಾಗಿ ಬೇರೆಯವರು ಹೇಳಲು ಸಾಧ್ಯವಾದರೆ ಎಲ್ಲರೂ ಪರಾವಲಂಬಿಗಳೇ ಆಗಿರುತ್ತಿದ್ದರು. ನಮ್ಮ ಇಷ್ಟಾನಿಷ್ಟಗಳನ್ನು ಇತರರು ನಿರ್ಧರಿಸುವಷ್ಟು ದುರ್ಬಲ ಮನಸ್ಸು ನಮ್ಮದಾಗಬಾರದು.

ಹಾಗೆಂದು ಇತರರ ಅಭಿಪ್ರಾಯಗಳಿಗೆ ಬೆಲೆಯೇ ಕೊಡಬಾರದೆಂದಲ್ಲ. ಎಲ್ಲಿ, ಎಷ್ಟು, ಯಾರಿಂದ, ಹೇಗೆ, ಯಾಕೆ ಇತ್ಯಾದಿ ಗಮನ ದಲ್ಲಿರಿಸಿಕೊಂಡು ಅಳೆದು ತೂಗಿ ಜನರ ಸಲಹೆಗಳನ್ನು ಸ್ವೀಕಾರ ಮಾಡಬೇಕಾದ ಅನಿವಾರ್ಯತೆಯಿದೆ ಅನ್ನುವುದಷ್ಟೇ
ಇದರ ಇಂಗಿತ. ಇತರರ ಮಾತುಗಳನ್ನು ಕೇಳಿ ಕಾರ್ಯಪ್ರವೃತ್ತರಾಗುವ ಮೂರ್ಖತನದ ಕುರಿತಾದ ‘ತಂದೆ-ಮಗ ಹಾಗೂ ಕತ್ತೆ’ಯ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ.

ಆದರೂ ಅದನ್ನು ಹೇಳಿಯೇ ಮುಂದೆ ಹೋಗುವುದು ಸೂಕ್ತವೆನಿಸುತ್ತದೆ. ಒಮ್ಮೆ ತಂದೆ ಹಾಗೂ ಮಗ ಕತ್ತೆಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರಂತೆ. ಇದನ್ನು ನೋಡಿದ ಜನರು ಇವರೆಷ್ಟು ನಿರ್ದಯಿಗಳು, ಕತ್ತೆಗೆಷ್ಟು ನೋವಾಗಬಹುದು, ಆಯಾಸ ವಾಗಬಹುದೆಂದು ಯೋಚಿಸದೆ ಇಬ್ಬರೂ ಕತ್ತೆಯ ಮೇಲೇರಿ ಹೋಗುತ್ತಿದ್ದಾರೆ ದುಷ್ಟರು ಅಂದರಂತೆ. ಇದನ್ನು ಕೇಳಿದ ತಂದೆ ತಾನು ಕೆಳಗಿಳಿದು ಮಗನನ್ನು ಕೂರಿಸಿಕೊಂಡು ಮುಂದೆ ಸಾಗಿದನಂತೆ. ಆಗ ಎದುರಾದ ಜನರು ಎಂತಹ ಸ್ವಾರ್ಥಿ ಮಗ.
ತಂದೆಯನ್ನು ನಡೆಸಿಕೊಂಡು ತಾನು ಕತ್ತೆಯೇರಿ ಹೋಗುತ್ತಿದ್ದಾನೆ ಅಂದರಂತೆ.

ಜನರ ಮಾತುಗಳಿಂದ ನೊಂದ ತಂದೆ ಮಗನನ್ನು ಕೆಳಗಿಳಿಸಿ, ತಾನು ಕತ್ತೆಯ ಮೇಲೇರಿದನಂತೆ. ಆಗ ಇನ್ನೊಂದಷ್ಟು ಜನರು
ಎಂತಹ ನಿಷ್ಕರುಣಿ ತಂದೆ. ಮಗನನ್ನು ನಡೆಸಿಕೊಂಡು ತಾನು ಸುಖವಾಗಿ ಕತ್ತೆಯ ಮೇಲೇರಿ ಹೋಗುತ್ತಿದ್ದಾನೆ ಅಂದರಂತೆ. ಇದರಿಂದ ತಲೆಕೆಟ್ಟ ತಂದೆ – ಮಗ ಇಬ್ಬರೂ ಸೇರಿ ಕತ್ತೆಯನ್ನೇ ಹೊತ್ತುಕೊಂಡು ಸಾಗಿದರಂತೆ. ಇಲ್ಲಿಗೆ ಕತೆಯೇನೋ ಮುಗಿಯುತ್ತದೆ.

ಆದರೆ ಇದರ ಮುಂದಿನ ಭಾಗವನ್ನು ನಾವು ಊಹಿಸಬಹುದು. ಇದನ್ನು ಕಂಡು ತೃಪ್ತರಾಗದ ಜನರು ಈ ತಂದೆ – ಮಗ ಜೋಡಿ ಒಂದು ಕತ್ತೆಯನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನೂ ತಿಳಿಯದ ಅವಿವೇಕಿಗಳು. ಯಾರಾದರೂ ಕತ್ತೆಯನ್ನು ಹೊತ್ತುಕೊಂಡು ಸಾಗುವರೋ? ಮೂರ್ಖರಿವರು ಅನ್ನಬಹುದು. ಅಲ್ಲವೇ? ಹೇಗೆ ಇರಲಿ, ಏನೇ ಮಾಡಲಿ ಆಡಿಕೊಳ್ಳುವ ಜನರು ಆಡಿಕೊಳ್ಳದೆ
ಇರಲಾರರು. ಜಗತ್ತು ಇರುವುದೇ ಹೀಗೆ. ಇದುವೇ ಜಗದ ನಿಯಮ ಎಂಬಂತಾಗಿದೆ. ನಮಗೇನು ಬೇಕೋ ಅದನ್ನು ಸ್ವೀಕರಿಸಿ, ಬೇಡವಾದುದ್ದನ್ನು ಉಪೇಕ್ಷಿಸಿ ಬಿಡಬೇಕು ಅಷ್ಟೇ.

ಒಂದು ಹಳೆಯ ಹಿಂದೀ ಚಿತ್ರಗೀತೆಯ ಸಾಲು ನೆನಪಾಗುತ್ತಿದೆ: ಕುಛ್ ತೋ ಲೋಗ್ ಕಹೇಂಗೇ.. ಲೋಗೋಂಕಾ ಕಾಮ್ ಹೈ ಕೆಹೆನಾ…’ ಪ್ರಸ್ತುತ ಇಂಟರ್ನೆಟ್ ಯುಗದಲ್ಲಂತೂ ಬೇರೆಯವರ ಅಭಿಪ್ರಾಯಗಳು, ಮೆಚ್ಚುಗೆಗಳು ಸಂತೃಪ್ತ ಜೀವನದ ಸೂತ್ರ ಗಳಾಗಿವೆ. ಸಾಮಾಜಿಕ ಜಾಲತಾಣಗಳು ಪಬ್ಲಿಕ್ ಅಪ್ರೂವಲ್ ಅನ್ನುವ ವ್ಯಸನವನ್ನು ಇಮ್ಮಡಿಗೊಳಿಸಿವೆ. ನಾವು ಹಾಕುವ
ಪೋಸ್ಟ್‌ಗಳಿಗೆ ಎಲ್ಲರೂ ಲೈಕ್, ಕಮೆಂಟ್ ಮಾಡಬೇಕು ಎಂದು ಹಾತೊರೆಯುತ್ತೇವೆ.

ಈ ಲೈಕ್ – ಕಮೆಂಟ್ ವ್ಯವಹಾರದಲ್ಲಿ ಅದೆಷ್ಟೋ ಸಂಬಂಧಗಳು ನೆಲಕಚ್ಚಿ ಹೋಗಿವೆ. ನನ್ನ ಪೋಸ್ಟ್‌ಗೆ ಇಂತಿಂಥವರು ಯಾಕೆ
ಲೈಕ್ ಕಮೆಂಟ್ ಮಾಡುವುದಿಲ್ಲ ಅನ್ನುವುದು ಅನೇಕರ ಅಳಲೂ ಆಗಿದೆ. ಯಾರು ಲೈಕ್ ಮಾಡಲಿ ಬಿಡಲಿ, ಯಾರು ಪ್ರತಿಕ್ರಿಯಿಸಲಿ ಬಿಡಲಿ ಅದಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಮ್ಮ ಪೋಸ್ಟ್ ನಮ್ಮ ತೃಪ್ತಿಗಾಗಿ, ಸಂತೋಷಕ್ಕಾಗಿ ಆಗಬೇಕೇ ಹೊರತು ಪರರನ್ನು ಮೆಚ್ಚಿಸುವ ಸಲುವಾಗಿಯೋ, ನಾನು ಪರಮ ಸುಖಿ ಎಂದು ಪ್ರದರ್ಶಿಸುವ ಸಲುವಾಗಿಯೋ
ಆಗಬಾರದು. ಇನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುವ ಆತುರದ ಅಭಿಪ್ರಾಯಗಳು ಇನ್ನೊಬ್ಬರ ಬದುಕಿಗೆ
ಮುಳುವಾಗುವ ಅದೆಷ್ಟೋ ಘಟನೆಗಳನ್ನು ನಾವು ಕಾಣುತ್ತೇವೆ.

ಅಂತಹುದೇ ಒಂದು ಪ್ರಸಂಗ ಇಡೀ ಕುಟುಂಬವನ್ನು ಅವಮಾನದ ಕೂಪಕ್ಕೆ ತಳ್ಳಿ ಬದುಕೇ ದುಸ್ತರವಾಗುವಂತೆ ಮಾಡಿದ ಅಮಾನವೀಯ ಘಟನೆ ಕಳೆದ ಫೆಬ್ರವರಿ 27ರಂದು ಕೇರಳದ ಮನ್ನಾರ್ ಎಂಬಲ್ಲಿ ಸಂಭವಿಸಿದೆ. ಸ್ನಾನಗೃಹದ ಡ್ರೈನೇಜ್ ಬ್ಲಾಕ್
ಆಗಿ ನೀರು ನಿಂತು ಸಮಸ್ಯೆಯಾದಾಗ ಮನೆಯ ಯಜಮಾನ ಪರೀಕ್ಷಿಸಲು ಡ್ರೈನೇಜ್ ಪೈಪಿನೊಳಗೆ ಕೈಹಾಕಿದ. ಆಗ ದುರದೃಷ್ಟವಶಾತ್ ಅವನ ಕೈ ಪೈಪಿನೊಳಗೆ ಸ್ಟಕ್ ಆಗಿ ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ. ಕಂಗಾಲಾದ ಪತ್ನಿ, ಮಗಳು
ಹತ್ತಿರದ ಅಗ್ನಿಶಾಮಕ ದಳವರನ್ನು ಕರೆಸಿದಾಗ ಡ್ರೈನೇಜ್ ಮುಚ್ಚಳವನ್ನು ಒಡೆದು ಅವನ ಕೈಯನ್ನು ಹೊರಗೆ ತೆಗೆದು ಅವನನ್ನು ರಕ್ಷಿಸಲಾಯಿತು. ಆದರೆ ಇದನ್ನು ವಿಡಿಯೋ ಮಾಡಿದ ಯಾರೋ ವಿಕೃತ ಮನಸ್ಸಿನ ದುರ್ಬುದ್ಧಿಯವರು ‘ಹೆಂಡತಿಗೆ ಹೆದರಿ ಡ್ರೈನೇಜಲ್ಲಿ ಅವಿತಿಟ್ಟಿದ್ದ ಮದ್ಯದ ಬಾಟಲನ್ನು ಹೊರತೆಗೆಯುವಾಗ ಕೈಸಿಲುಕಿಕೊಂಡಿದ್ದು, -ಯರ್ -ರ್ಸ್ ಬಂದು ಕುಡುಕನನ್ನು ರಕ್ಷಿಸಿದ ಘಟನೆ’ ಎಂದು ವಿವರಣೆ ಕೊಟ್ಟು ಪೋಸ್ಟ್ ಮಾಡಿದ್ದರು.

ಕ್ಷಣಗಳಲ್ಲಿ ವಿಡಿಯೋ ವೈರಲ್ ಆಯ್ತು. ಹಿಂದು ಮುಂದು ನೋಡದೆ ಜನರು ಅಪಹಾಸ್ಯದ ಸುರಿಮಳೆಗರೆದರು. ಮಲಯಾಳಂನ ಬಹುತೇಕ ಎಲ್ಲಾ ಹಾಗೂ ಕನ್ನಡದ ಕೆಲವು ಆನ್‌ಲೈನ್ ವಾರ್ತಾ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಪಾಪ! ಈ ಅವಮಾನ ದಿಂದ ಹೊರಬರಲಾಗದೆ ಈಗ ಆ ಕುಟುಂಬ ಮನೋವೇದನೆಯಿಂದ ನರಳುತ್ತಿದೆ. ಕೆಲವು ಮಾಧ್ಯಮಗಳು ತಪ್ಪನ್ನು ಸರಿಪಡಿಸಿ
ಮರುಪ್ರಸಾರ ಮಾಡುವ ಔದಾರ್ಯವನ್ನೇನೋ ತೋರಿದರೂ ಮನೆಯವರ ಅವಮಾನಕ್ಕೆ  ಪರಿಹಾರವಾದೀತೇ? ಬೇರೆಯವರ ವಿಚಾರದಲ್ಲಿ ಅಭಿಪ್ರಾಯ ಹೇಳುವಾಗ, ಅನಾವಶ್ಯಕ ಪೋಸ್ಟ್ ಶೇರ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು ಎಂದು ಈ ಘಟನೆ ಎಚ್ಚರಿಸುತ್ತದೆ.

ಇನ್ನು ನಮ್ಮಲ್ಲಿ ಯಾರೋ ಬಂದು ಅವರ ಕಷ್ಟ ಹೇಳಿಕೊಂಡಾಗ ಪ್ರಾಮಾಣಿಕ ಮನಸ್ಸಿನಿಂದ ಸಲಹೆ ಕೊಟ್ಟರೂ ಅದು ಕೂಡಾ ತಿರುಗುಬಾಣವಾಗುವ ಪ್ರಸಂಗಗಳೂ ಇವೆ. ನನ್ನ ನೆರೆಹೊರೆಯ ಗೆಳತಿ ಯೊಬ್ಬಳು ಮಗಳನ್ನು ಪ್ಲೇಸ್ಕೂಲಿಗೆ (ಆಟೋದಲ್ಲಿ
ಹೋಗುವಷ್ಟು ದೂರವಿಲ್ಲ, ನಡೆದು ಹೋಗುವಷ್ಟು ಹತ್ತಿರವಲ್ಲ) ಬಿಟ್ಟು ಬಂದು ಕೆಲಸಕ್ಕೆ ಹೋಗುವಾಗ ತುಂಬ ತಡವಾಗುತ್ತದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಅಲವತ್ತುಕೊಂಡಳು.

ನಾನಂದೆ…‘ನನ್ನ ಸ್ಕೂಟಿ ಇದೆ. ನಾನು ಹೇಗೂ ಉಪಯೋಗಿಸುವುದಿಲ್ಲ. ಬೇಕಾದರೆ ನೀನು ಯೂಸ್ ಮಾಡು’ ಎಂದು. ಬಹಳ ಸಂತೋಷಪಟ್ಟಳು. ಸರಿ, ನಾಲ್ಕು ದಿನ ಕಳೆದಿರಬೇಕು. ಅಷ್ಟರಲ್ಲಿ ಮಧ್ಯಾಹ್ನ ಮಗುವನ್ನು ಕರೆದುಕೊಂಡು ಬರಲು ಹೋಗುವಾಗ
ನಾಯಿಯೊಂದು ಅಡ್ಡ ಬಂದು, ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದು, ಕಾಲಿಗೆ ಏಟಾಗಿ, ಎರಡು ತಿಂಗಳು ಬ್ಯಾಂಡೇಜ್ ಹಾಕಿಕೊಂಡು ವಿಶ್ರಾಂತಿಪಡೆಯು ವಂತಾಯಿತು.

ಅವಳನ್ನು ನೋಡಲೆಂದು ಮನೆಗೆ ಹೋದಾಗ ಅವಳಂದಳು ‘ನೀನು ಹೇಳಿದ ಕಾರಣ ನಾನು ಸ್ಕೂಟಿಯಲ್ಲಿ ಹೋಗಿ ಹೀಗೆ ಆಗಿ ಇಷ್ಟೆ ಅನುಭವಿಸಬೇಕಾಯಿತು’ ಎಂದು. ನಡುಬೆನ್ನಿಗೆ ಚೇಳು ಕುಟುಕಿದಂತೆ ಅನಿಸಿತು ನನಗೆ. ಸಾಲದೆಂಬಂತೆ ‘ಊರನ್ನು ಉದ್ಧಾರ ಮಾಡುವ ಉಸಾಬರಿ ನಿನಗ್ಯಾಕೆ’ ಎಂದು ಪತಿರಾಯರೂ ಹೇಳಿದಾಗ, ನೇರಳೆ ಬಣ್ಣದ ಚೆಲುವೆಯಾಗಿದ್ದ ನನ್ನ ಸ್ಕೂಟಿಗಾದ ಗಾಯಕ್ಕಿಂತ ನನ್ನ ಮನಸಿಗಾದ ಗಾಯ ಆಳವಾಗಿತ್ತು. ಆದರೆ ನಾನು ಎಲ್ಲವನ್ನೂ ಬೇಗನೆ ಮರೆತುಬಿಡುವ ಕಾರಣ ಈಗಲೂ ಅವಳು ನನ್ನ ಫ್ರೆಂಡ್ ಆಗಿಯೇ ಇದ್ದಾಳೆ.

ತಾತ್ಪರ್ಯವೇನೆಂದರೆ ಇನ್ನೊಬ್ಬರಿಗೆ ಸಲಹೆ ಅನಿಸಿಕೆ ಹೇಳುವಾಗಲೂ, ಇತರರಿಂದ ಕೇಳುವಾಗಲೂ ಬಹಳ ಜಾಣ್ಮೆಯಿಂದಿರಬೇಕು. ಸದಾ ಇತರರ ಬಗ್ಗೆ ಅವರು ಹಾಗೆ, ಇವರು ಹೀಗೆ ಎಂದು ಕೊಂಕು ಮಾತನಾಡುತ್ತಾ, ನಮ್ಮ ಇಷ್ಟಕ್ಕೆ
ವಿರುದ್ಧವಾಗಿ ನಡೆದವರನ್ನು ದೂಷಿಸುತ್ತೇವೆ. ಅವರು ಸರಿ ಇಲ್ಲವೆಂದೋ, ಅಹಂಕಾರಿ ಎಂದೋ, ಮತ್ಸರಿ ಎಂದೋ, ನಡತೆಗೆಟ್ಟವರೆಂದೋ, ಮುಂಗೋಪಿ ಯೆಂದೋ ಹಣೆಪಟ್ಟಿ ಕಟ್ಟುತ್ತೇವೆ.

ಆದರೆ ಪ್ರತಿಯೊಬ್ಬರಿಗೂ ಅವರದೇ ಆದ ಸಂಸ್ಕಾರ, ರೀತಿ –  ನೀತಿ, ಆಚಾರ – ವಿಚಾರಗಳಿವೆ ಅನ್ನುವುದನ್ನು ಮರೆಯುತ್ತೇವೆ. ಬೆಳೆದ ವಾತಾವರಣ, ಮನೆಯ ಸಂಸ್ಕಾರ, ರೂಢಿಸಿಕೊಂಡ ಪದ್ಧತಿಗಳು, ಗೆಳೆಯರ ಬಳಗ, ಅರಗಿಸಿಕೊಂಡ ವಿದ್ಯಾಭ್ಯಾಸ, ಸುತ್ತಮುತ್ತಲಿನ ವಾತಾವರಣ ಇವೆಲ್ಲವೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.
ಹಾಗಾಗಿಯೇ ಪ್ರತಿಯೊಬ್ಬರೂ ವಿಭಿನ್ನವಾಗಿರುವುದು. ಯುಜಿನೊ ಇಯನೆಸ್ಕೊ ಅನ್ನುವ ಫ್ರೆಂಚ್ ಲೇಖಕನ ‘ರೈನೋಸಾರ್ಸ್’ ಅನ್ನುವ ನಾಟಕದಲ್ಲಿ ಫ್ರಾನ್ಸ್‌ನ  ಒಂದು ಪುಟ್ಟ ಪಟ್ಟಣದಲ್ಲಿ ಇದ್ದಕ್ಕಿದ್ದಂತೆ ಎಲ್ಲರೂ ರೈನೋಸಾರ್ ಆಗಿ ಮಾರ್ಪಡುತ್ತಾರೆ. ಜೋಸ್ ಸರಮಾಂಗೋ ಅನ್ನುವ ಪೋರ್ಚುಗೀಸ್ ಕಾದಂಬರಿಕಾರನ Blindness ಅನ್ನುವ ಕಾದಂಬರಿಯಲ್ಲಿ ಒಂದು ನಗರದ ಜನರೆಲ್ಲರೂ ಇದ್ದಕ್ಕಿದ್ದಂತೆ ಬ್ಲೈಂಡ್ ಆಗುತ್ತಾರೆ.

ಎರಡೂ ಕಥೆಗಳು ತುಂಬ ಕುತೂಹಲ ಹಾಗೂ ಸ್ವಾರಸ್ಯಕರವಾಗಿವೆ. ಈ ಕತೆಗಳಲ್ಲಿ ಇರುವ ಹಾಗೆಯೇ ನಾವೂ ಕೂಡಾ
ನಾಳೆಯಿಂದ ಇದ್ದಕ್ಕಿದ್ದಂತೆ ಎಲ್ಲರೂ ಐಡೆಂಟಿಕಲ್ ಆಗಿ ಒಂದೇ ರೀತಿ ಆಗಿ ಬಿಡುತ್ತೇವೆ ಎಂದು ಕಲ್ಪಿಸೋಣ. ನಡೆ, ನುಡಿ, ನೋಟ, ಆಹಾರ, ಆಚಾರ, ಯೋಚನೆ ಎಲ್ಲವೂ ಒಂದೇ ರೀತಿ ಇರುತ್ತದೆ ಎಂದಿಟ್ಟುಕೊಳ್ಳೋಣ. ಹಾಗಾದಾಗ ಅದರಲ್ಲಿ ಏನು ಸೊಗಸಿದೆ? ಜನರು ಭಿನ್ನಭಿನ್ನವಾಗಿದ್ದು, ಅವರಂತೆ ಅವರಿದ್ದರೆ ಚಂದವೇ ಹೊರತು ನಮ್ಮಂತೆ ಅವರಿರಬೇಕು ಎಂದು
ಬಯಸುತ್ತಾ, ನಮ್ಮ ಯೋಚನೆಗಳಿಗೆ ಅನುಸಾರವಾಗಿ ಜನರು ಬದಲಾಗಬೇಕೆಂದು ಅಪೇಕ್ಷಿಸುವುದು ತಿಳಿಗೇಡಿತನ ಅನಿಸುವು ದಿಲ್ಲವೇ? ಜನರು ಏಕೆ ನನ್ನನ್ನು ಪರಿಗಣಿಸುವುದಿಲ್ಲ, ಮೆಚ್ಚಿಕೊಳ್ಳುವುದಿಲ್ಲ ಅನ್ನುವ ನಮ್ಮ ಪ್ರಶ್ನೆಗೆ ಡಿವಿಜಿಯವರು ಸುಂದರವಾಗಿ ಮನಮುಟ್ಟುವಂತೆ ಕಗ್ಗದಲ್ಲಿ ಉತ್ತರಿಸಿದ್ದಾರೆ. ನಾನು ಮಾಡಿದ ಕೆಲಸ ಬಹಳ ಉತ್ತಮವಾದದ್ದೊಂದೂ, ಜನರು ನನ್ನನ್ನು ಪ್ರಶಂಸಿಸಬೇಕೆಂದೂ ಹಂಬಲಿಸುತ್ತೇವೆ.

ನನ್ನನ್ನು ಇತರರು ಇಷ್ಟಪಡಬೇಕು, ಹೊಗಳಬೇಕು ಎಂದು ಅಪೇಕ್ಷೆ ಪಡುತ್ತೇವೆ. ಆದರೆ ಡಿವಿಜಿಯವರು ಹೇಳುತ್ತಾರೆ:
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು|
ಮಗುವು ಪೆತ್ತರ್ಗೆ ನೀಂ, ಲೋಕಕೆ ಸ್ಪರ್ಧಿ||
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ|
ರಗಳೆಗಾರಿಗೆ ಬಿಡುವೋ- ಮಂಕುತಿಮ್ಮ||
ಜಗತ್ತು ನಮ್ಮನ್ನು ಮೆಚ್ಚಿಕೊಳ್ಳುವುದಿಲ್ಲ, ಹೊಗಳುವುದಿಲ್ಲ, ಮುದ್ದಿಸುವುದಿಲ್ಲ ಎಂದು ಕೊರಗಬಾರದು. ಏಕೆಂದರೆ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವಂತೆ ಅವರಿಗಷ್ಟೇ ತಾವು ಮಾಡುವುದೆಲ್ಲವೂ  ಬಹಳ ಅಂದವಾಗಿ ಕಾಣುತ್ತದೆ. ಆದರೆ ಲೋಕದ ಕಣ್ಣಿಗೆ
ನಾವು ಪ್ರತಿಸ್ಪರ್ಧಿ.

ಹಾಗಾಗಿ ನಾವು ಇಲ್ಲಿ ನಮ್ಮ ಅಸ್ತಿತ್ವಕ್ಕಾಗಿ ಹೋರಾಡಲೇಬೇಕು. ನಮಗೆ ಹೇಗೆ ನಮ್ಮದೇ ಆದ ಕೆಲಸ ಕಾರ್ಯಗಳು, ಜವಾಬ್ದಾರಿ
ಗಳಿರುತ್ತವೆಯೋ ಹಾಗೆಯೇ ಪ್ರತಿಯೊಬ್ಬರಿಗೂ ಅವರದ್ದೇ ಆದ ಹೆಗಲ ಹೊಣೆ ಇದ್ದೇ ಇರುತ್ತದೆ. ಯಾರೂ ಯಾರ ಹೊರೆಯನ್ನು ಹೊರಲಾರರು, ಹೊರಲಾಗದು. ನಮ್ಮ ಹೊರೆಯನ್ನು ಇತರರು ಹೊರಲಿ ಎಂದು ನಾವು ಅಪೇಕ್ಷೆ ಪಡಲೂಬಾರದು. ಹಾಗಾಗಿ ಎಲ್ಲರೂ ಅವರವರ ಲೋಕದಲ್ಲಿ ಅವರದೇ ಕೆಲಸಕಾರ್ಯಗಳಲ್ಲಿ ನಿರತರಾಗಿರುವಾಗ ನಮ್ಮ ರಗಳೆಯನ್ನು ಕೇಳಲು ಯಾರಿಗೂ ಬಿಡುವಿರುವುದಿಲ್ಲ.

ಅವರವರದ್ದೇ ಅವರವರಿಗೆ ಹೆಚ್ಚಾಗಿರುವಾಗ ಇತರರ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೂ ಸಮಯವಿರುವುದಿಲ್ಲ ಎಂಬ ಕಟುಸತ್ಯವನ್ನು ಡಿವಿಜಿಯವರು ಈ ಮುಕ್ತಕದಲ್ಲಿ ಸ್ಪಷ್ಟೀಕರಿಸಿದ್ದಾರೆ. ಹೌದಲ್ಲವೇ?ಯೋಚಿಸಿ ನೋಡಿ. ನಮ್ಮ ರಗಳೆ ಯಾರಿಗೆ ಬೇಕಾಗಿದೆ ಮತ್ತು ಅದನ್ನು ಕೇಳಲು ಯಾರಿಗಿದೆ ಬಿಡುವು?