Tuesday, 10th September 2024

ಮೂರು ಕರಡಿಗಳು ಕಥೆಯ ಗೋಲ್ಡಿಲ್ಯಾಕ್ಸ್ ಯಾನೆ ಚೆಲುವಮ್ಮ

ತಿಳಿರುತೋರಣ

srivathsajoshi@yahoo.com

ಅರ್ಗಣೆ ಮುದ್ದೆ ಕಥೆಯನ್ನು ಹಿಂದೊಮ್ಮೆ ತಿಳಿರುತೋರಣ ಅಂಕಣದಲ್ಲಿ ಪ್ರಸ್ತಾವಿಸಿದ್ದೆ. ಪಂಜೆ ಮಂಗೇಶರಾಯರು ಬರೆದ ಮಕ್ಕಳ ಕಥೆಗಳಲ್ಲಿ ಅದು ಕೂಡ ಪ್ರಖ್ಯಾತವಾದೊಂದು ಕಥೆ. ಓದುಗರಲ್ಲಿ ಅದು ಬಡಿದೆಬ್ಬಿಸಿದ ತೀವ್ರ ಭಾವಸ್ಪಂದನ ನನ್ನನ್ನು ಅಕ್ಷರಶಃ ಬೆರಗುಗೊಳಿಸಿತ್ತು. ಆ ಒಂದು ಬರಹದಿಂದಾಗಿ ನನಗೆ ಬೆಂಗಳೂರಿನ ಶಾರದಾ ಮೂರ್ತಿ ಅವರಿಂದ ಮೈಸೂರಿನ ರೋಹಿಣಿ- ರಘುರಾಮ ದಂಪತಿಯ ಪರಿಚಯ ಆಯಿತು; ರಘುರಾಮರ ತಂದೆ ದಿ. ಅನಂತ ರಾಮಯ್ಯನವರ ಬಗ್ಗೆ ತಿಳಿಯಿತು; ಅವರ ಹನ್ನೆರಡು ಮಂದಿ ಮೊಮ್ಮಕ್ಕಳು ಅರ್ಗಣೆ ಮುದ್ದೆ ಕಥೆಯನ್ನು ಅಜ್ಜನಿಂದ ನೂರಾರು ಸಲ ಕೇಳಿ ಬೆಳೆದವರಾದ್ದರಿಂದ ಅಜ್ಜನ ೯೦ನೆಯ ವರ್ಷದ ಹುಟ್ಟುಹಬ್ಬದಂದು ಅವರೆಲ್ಲರೂ ‘ಅರಗಣೆ ಮುದ್ದೆ ಫ್ಯಾನ್ಸ್ ಕ್ಲಬ್’ ಟಿ-ಶರ್ಟ್ ತೊಟ್ಟುಕೊಂಡು ಸಂಭ್ರಮಿಸಿದ ಚಿತ್ರ ಸಿಕ್ಕಿತು; ಅನಂತರಾಮಯ್ಯನವರ ಧ್ವನಿಯಲ್ಲಿ ಅರ್ಗಣೆ ಮುದ್ದೆ ಕಥೆ ನಿರೂಪಣೆಯ ಆಡಿಯೊ ಸಹ ದೊರಕಿತು.

ಆಮೇಲೆ ನಾನದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಾಗ ಕ್ಯಾಲಿಫೋರ್ನಿಯಾ ಕನ್ನಡಿತಿ ಕಾವ್ಯಾ ಭಟ್ ಕೇಳಿಸಿಕೊಂಡು ತನ್ನ ಮಕ್ಕಳು ಸ್ಮಯನ್ ಮತ್ತು ಚಿನ್ಮಯ್‌ಗೆ ಆ ಕಥೆಯನ್ನು ಹೇಳಿದರು. ಅವರಿಬ್ಬರಿಗೂ ಅದು ತುಂಬ ಇಷ್ಟವಾಯ್ತು. ಅವರಲ್ಲಿಗೆ ಬಂದಿದ್ದ ಅಜ್ಜಿಯಿಂದಲೂ ಅದೇ ಕಥೆಯನ್ನು ಮತ್ತೆಮತ್ತೆ ಹೇಳಿಸಿಕೊಂಡರು. ಮನೆಮಂದಿಯೆಲ್ಲ ಸೇರಿ ಕಥೆಯ ಅಭಿನಯ ಮಾಡಿದರು. ಕಾವ್ಯಾ ಭಟ್ ಅಲ್ಲಿಗೇ ನಿಲ್ಲಿಸದೆ ಕಥೆಯಲ್ಲಿ ಬರುವ ಸನ್ನಿವೇಶಗಳ ಸುಂದರ ಚಿತ್ರಗಳನ್ನು ಬಿಡಿಸಿ ಅವುಗಳ ನೆರವಿನಿಂದ ಕಥಾನಿರೂಪಣೆಯ ವಿಡಿಯೊ ಮಾಡಿದರು.

ಅದನ್ನು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ತನ್ನ ಯೂಟ್ಯೂಬ್ ಸರಣಿ ‘ಕಥಾ ಪರ್‌ಪಂಚ’ಕ್ಕೆ ಆಯ್ದುಕೊಂಡಿತು. ಆ ಮೂಲಕ ಅಮೆರಿಕನ್ನಡಿಗರ ಮಕ್ಕಳಿಗೆಲ್ಲ ಅರ್ಗಣೆ ಮುದ್ದೆ ಕಥೆ ಸಿಕ್ಕಿತು. ಮತ್ತೊಂದೆಡೆ ಮೈಸೂರಿನ ವರುಣ್ ವಸಿಷ್ಠ ಅವರಿಗೆ ಅನಂತರಾಮಯ್ಯನವರ ಅರ್ಗಣೆ ಮುದ್ದೆ ಆಡಿಯೊ ಕೇಳಿದಾಗ ಅದೇ ರೀತಿ ಕಥೆ ಹೇಳುತ್ತಿದ್ದ ತನ್ನ ಸೋದರಮಾವನ ನೆನಪು ಒತ್ತರಿಸಿ ಬಂದಿತು. ಅವರಿಂದಾಗಿ ತನ್ನಲ್ಲಿ ಪುಸ್ತಕಗಳ ಓದಿನ ಆಸಕ್ತಿ ಹೇಗೆ ಬೆಳೆಯಿತು ಎಂದು ಚಂದದ ಒಂದು ಲೇಖನವನ್ನೇ ಬರೆದರು.

ಅದು ವಿಶ್ವವಾಣಿ ವಿರಾಮ ಪುರವಣಿಯಲ್ಲಿ ಪ್ರಕಟವೂ ಆಯಿತು. ಇರಲಿ, ನಾನಿಂದು ಹೇಳಲಿಕ್ಕೆ ಹೊರಟಿದ್ದು ಪಂಜೆ ಮಂಗೇಶರಾಯರಿಂದಲೇ ಕನ್ನಡಿಗರಿಗೆಲ್ಲ ಪರಿಚಯವಿರುವ ‘ಮೂರು ಕರಡಿಗಳು’ ಕಥೆಯ ವಿಚಾರವನ್ನು. ಕನ್ನಡ ಜನಮಾನಸದಲ್ಲಿ ಅಚ್ಚೊತ್ತಿರುವ ಅತಿಪ್ರಸಿದ್ಧ ಕಥೆಯಿದು. ‘ಒಂದು ದೊಡ್ಡ ಮಲೆ
ಇತ್ತು. ಅಲ್ಲಿ ಮರಗಳು, ಗಿಡಗಳು, ಬಳ್ಳಿಗಳು, ಪೊದರುಗಳು ಎಲ್ಲಾ ಬೆಳೆದು ಇದ್ದವು. ಮಲೆಯ ನಡುವೆ ಒಂದು ಹೊಳೆ ಇತ್ತು. ಅದರ ದಡದ ಮೇಲೆ ಒಂದು ಮನೆ ಇತ್ತು. ಅದೊಂದು ದೊಡ್ಡ ಮನೆ, ಮಾಳಿಗೆಯ ಮನೆ. ಆ ಮನೆಯಲ್ಲಿ ಮೂರು ಕರಡಿಗಳು ಇದ್ದವು. ಅವುಗಳಲ್ಲಿ ಒಂದು ದೊಡ್ಡ ಕರಡಿ. ಒಂದು ಹದ ಕರಡಿ. ಒಂದು ಸಣ್ಣ ಕರಡಿ. ದೊಡ್ಡ ಕರಡಿಗೆ ದೊಡ್ಡ ಮೈ, ದೊಡ್ಡ ಮುಸುಡು, ದೊಡ್ಡ ಸ್ವರ. ಹದ ಕರಡಿಗೆ ಹದ ಮೈ, ಹದ ಮುಸುಡು, ಹದ ಸ್ವರ. ಸಣ್ಣ ಕರಡಿಗೆ ಸಣ್ಣ ಮೈ, ಸಣ್ಣ
ಮುಸುಡು, ಸಣ್ಣ ಸ್ವರ. ದೊಡ್ಡ ಕರಡಿಗೆ ದೊಡ್ಡ ಬಟ್ಟಲು, ದೊಡ್ಡ ಮಣೆ, ದೊಡ್ಡ ಮಂಚ, ದೊಡ್ಡ ಹಾಸಿಗೆ.

ಹದ ಕರಡಿಗೆ ಹದ ಬಟ್ಟಲು, ಹದ ಮಣೆ, ಹದ ಮಂಚ, ಹದ ಹಾಸಿಗೆ. ಸಣ್ಣ ಕರಡಿಗೆ ಸಣ್ಣ ಬಟ್ಟಲು, ಸಣ್ಣ ಮಣೆ, ಸಣ್ಣ ಮಂಚ, ಸಣ್ಣ ಹಾಸಿಗೆ. ಹೀಗಿರಲು ಹೊಸ ಅನ್ನ ಊಟಮಾಡುವ ಹಬ್ಬ ಬಂತು. ಆ ದಿನ ಕರಡಿಗಳು ಪಾಯಸ ಮಾಡಿ ಈಗ ದೇವಸ್ಥಾನಕ್ಕೆ ಹೋಗಬೇಕು ಎಂದು ಹೇಳಿ ಹೊರಟುಹೋದವು. ಅವು ಹೋದ ಮೇಲೆ ಅಲ್ಲಿಗೆ ಒಬ್ಬಳು ಹುಡುಗಿ ಬಂದಳು. ಅವಳು ಬಹು ಚೆಲು ಹುಡುಗಿ. ಅವಳ ಹೆಸರು ಚೆಲುವಮ್ಮ. ಅವಳು ದಾರಿತಪ್ಪಿ ಆ ಕರಡಿಗಳ ಮನೆಯ ಹತ್ತಿರ ಹೋದವಳು. ಮನೆಯ ಮುಂದೆ ನಿಂತು ಇದು ಯಾರ ಮನೆಯಪ್ಪಾ? ಒಳಗೆ ಯಾರಿದ್ದಾರೆ? ಬಾಗಿಲು ತೆರೆದಿದೆ, ಒಳಗೆ ಯಾರೂ ಇಲ್ಲವೇ? ಸದ್ದು ಕೇಳುವುದಿಲ್ಲ! ಎಂದು
ಹೇಳುತ್ತಾ ಕಿಟಕಿಯಿಂದ ಇಣಿಕಿನೋಡಿ ಒಳಗೆ ಹೋದಳು…’ – ಎಂದು ಕಥೆಯ ಪೀಠಿಕೆ.

ಮನೆಯೊಳಗೆ ಹೊಕ್ಕ ಚೆಲುವಮ್ಮ ಮೂರು ಬಟ್ಟಲುಗಳಲ್ಲಿ ಬಡಿಸಿಟ್ಟಿದ್ದ ಪಾಯಸವನ್ನು ನೋಡುತ್ತಾಳೆ. ಹಸಿವಾಗಿದ್ದರಿಂದ ಪಾಯಸ ತಿನ್ನಬಯಸುತ್ತಾಳೆ. ದೊಡ್ಡ ಮತ್ತು ಹದ ಬಟ್ಟಲಲ್ಲಿದ್ದ ಪಾಯಸದಲ್ಲಿ ಬೆರಳದ್ದಿದಾಗ ಬಿಸಿಯಾಗಿತ್ತಾದ್ದರಿಂದ ಸಣ್ಣ ಬಟ್ಟಲಿನಲ್ಲಿದ್ದ ಪಾಯಸ ತಿಂದು ಮುಗಿಸುತ್ತಾಳೆ. ಅಲ್ಲಿದ್ದ ದೊಡ್ಡ ಮಂಚ ಮತ್ತು ಹದ ಮಂಚಗಳನ್ನು ಬಿಟ್ಟು ಸಣ್ಣ ಮಂಚವೇ ತನಗೆ ಸರಿಯಾದ್ದೆಂದು ಅದರ ಮೇಲೆ ಕುಳಿತುಕೊಳ್ಳುತ್ತಾಳೆ. ಆ ಮಂಚ ಮುರಿದುಹೋಗುತ್ತದೆ. ಆಮೇಲೆ ಮಾಳಿಗೆಯ ಕೋಣೆಗೆ ಹೋಗುತ್ತಾಳೆ. ಅಲ್ಲಿದ್ದ ದೊಡ್ಡ ಹಾಸಿಗೆ ಮತ್ತು ಹದ ಹಾಸಿಗೆಗಳನ್ನು ಬಿಟ್ಟು ಸಣ್ಣ ಹಾಸಿಗೆ ತನಗೆ ಸರಿಯಾಗಿದೆ ಎಂದುಕೊಂಡು ಅದರ ಮೇಲೆ ಮಲಗಿ ನಿದ್ದೆಮಾಡುತ್ತಾಳೆ.

ಅಷ್ಟರಲ್ಲಿ ಕರಡಿಗಳು ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತವೆ. ಮ್ಮತಮ್ಮ ಬಟ್ಟಲಲ್ಲಿದ್ದ ಪಾಯಸವನ್ನು ಯಾರೋ ಮುಟ್ಟಿಹೋಗಿದ್ದಾರೆಂದು ದೊಡ್ಡ ಮತ್ತು ಹದ ಕರಡಿಗಳು ಹೇಳಿದರೆ ಸಣ್ಣ ಕರಡಿ ತನ್ನ ಬಟ್ಟಲಲ್ಲಿದ್ದ ಪಾಯಸವನ್ನು  ಯಾರೋ ತಿಂದುಮುಗಿಸಿದ್ದಾರೆಂದು ಕೂಗುತ್ತದೆ. ತಮ್ಮತಮ್ಮ ಮಂಚದಲ್ಲಿ ಯಾರೋ ಕೂತು ಹೋಗಿರುವಂತಿದೆ ಎಂದು ದೊಡ್ಡ ಮತ್ತು ಹದ ಕರಡಿಗಳು ಹೇಳಿದರೆ ಸಣ್ಣ ಕರಡಿಯ ಮಂಚ ಮುರಿದಿರುವುದು ಕಂಡುಬರುತ್ತದೆ. ತಮ್ಮತಮ್ಮ ಹಾಸಿಗೆಯನ್ನು ಯಾರೋ ಮೆಟ್ಟಿ ಹೋಗಿದ್ದಾರೆಂದು ದೊಡ್ಡ ಮತ್ತು ಹದ ಕರಡಿಗಳು ಹೇಳಿದರೆ ಸಣ್ಣ ಕರಡಿ ತನ್ನ ಹಾಸಿಗೆಯನ್ನು ನೋಡಿ ಹಾಸಿಗೆಯ ಮೇಲೆ ಯಾರೋ ಮಲಗಿದ್ದಾರೆ ಎಂದು ಗುರುಗುಟ್ಟುತ್ತದೆ. ಕರಡಿಗಳ ಮನೆಯೊಳಗೆ ಹುಡುಗಿ ಏನೆನೆಲ್ಲ ದಾಂಧಲೆ ಮಾಡಿರಬಹುದೆಂಬ ಚಿತ್ರಣ.

ಕಥೆ ಓದುವ/ಕೇಳುವ ಮಗುವಿಗೆ ಕಣ್ಣಿಗೆ ಕಟ್ಟುವಂತಿರುವ ಬಣ್ಣನೆ. ಅಷ್ಟರಲ್ಲಿ ಚೆಲುವಮ್ಮನಿಗೆ ಫಕ್ಕನೆ ಎಚ್ಚರವಾಯಿತು. ಅವಳು ಕಣ್ಣು ಬಿಟ್ಟು ನೋಡಿದಳು. ಏನು ತಾನೇ ನೋಡುವಳು? ಮೂರು ಕರಡಿಗಳೂ ಬಾಯಿ ತೆರೆದು ನಿಂತಿವೆ. ಹುಡುಗಿಗೆ ಕೈಕಾಲು ನಡುಗಿತು. ಅವಳು ಅತ್ತ ಇತ್ತ ನೋಡಿದಳು. ಪಕ್ಕದ ಗೋಡೆಯಲ್ಲಿ ಒಂದು ಕಿಟಕಿ ಇತ್ತು. ಚೆಲುವಮ್ಮನು ಕಣ್ಣುಮುಚ್ಚಿ ಆ ಕಿಟಕಿಯಿಂದ ಹೊರಕ್ಕೆ ಧುಮುಕಿಬಿಟ್ಟಳು. ಧುಮುಕಿದವಳು ನೆಲದ ಮೇಲಿದ್ದ ಒಂದು ಹುಲ್ಲುಮೆದೆಯ ಮೇಲೆ ಬಿದ್ದಳು. ಆದುದರಿಂದ ಅವಳಿಗೆ ನೋವು ಆಗಲಿಲ್ಲ. ಬಿದ್ದವಳೇ ಅಲ್ಲಿಂದ ಎದ್ದು ಓಡಿದಳು. ಹುಡುಗಿ ಓಡಿಹೋಗುವುದನ್ನು ಕಂಡು, ಕರಡಿಗಳು ಮಾಳಿಗೆಯಿಂದ ಕೆಳಗೆ ಇಳಿದು ಮನೆಯ ಹೊರಗೆ ಬಂದವು. ಆದರೆ ಚೆಲುವಮ್ಮನು ಹಿಂದೆ ನೋಡದೆ ಓಡುತ್ತಾ ಹೋದಳು; ಆಹಾ ಎಷ್ಟು ಚಂದದ ಹುಡುಗಿ ನಮ್ಮ ಒಟ್ಟಿಗೆ ನಿಲ್ಲದೆ
ಓಡಿ ಹೋದಳಲ್ಲಾ ಎಂದು ಮೂರೂ ಕರಡಿಗಳು ಸರದಿಯಿಂದ ಹೇಳಿದವು.

ಚೆಲುವಮ್ಮ ತನ್ನ ಮನೆಯನ್ನು ಸೇರಿಕೊಂಡಳು. ತಿರುಗಿ ಆ ಮನೆಯ ಕಡೆ ಹೋಗಲಿಲ್ಲ. ಕರಡಿಗಳು ತಮ್ಮ ಮನೆ ಸೇರಿಕೊಂಡವು.’ – ಎಂಬಲ್ಲಿಗೆ ಕಥೆ ಮುಗಿಯುತ್ತದೆ. ದೊಡ್ಡ, ಹದ, ಮತ್ತು ಸಣ್ಣ ಕರಡಿಯ ಮಾತುಗಳನ್ನು, ಅವುಗಳ ಚಲನವಲನದ ಶಬ್ದಗಳನ್ನು ಅನುಕ್ರಮವಾಗಿ ದೊಡ್ಡ, ಹದ, ಸಣ್ಣ ದನಿಯಲ್ಲಿ ಹೇಳುವುದು/ಅನುಕರಿಸುವುದು ಈ ಕಥೆಯ ವೈಶಿಷ್ಟ್ಯ. ಮುಖ್ಯ ರಂಜನೆಯೂ ಅದೇ. ಮುದ್ರಿತ ಪುಸ್ತಕದಲ್ಲೂ- ದೊಡ್ಡ, ಹದ, ಮತ್ತು ಸಣ್ಣ ಕರಡಿಯ ಮಾತುಗಳನ್ನು ಅನುಕ್ರಮವಾಗಿ ದೊಡ್ಡ, ಹದ, ಸಣ್ಣ ಅಕ್ಷರಗಳಲ್ಲಿ ಅಚ್ಚು ಮಾಡಿದ್ದಿರುತ್ತದೆ, ಓದುವವರಿಗೆ ಧ್ವನಿ ಮಟ್ಟದ ಸೂಚನೆಯೋ ಎಂಬಂತೆ.

ಪಂಜೆ ಮಂಗೇಶರಾಯರು ಕನ್ನಡದಲ್ಲಿ ನಿರೂಪಿಸಿದ ಈ ಕಥೆ, ಕಳೆದೆರಡು ಶತಮಾನಗಳಿಂದ ಪ್ರಪಂಚದ ಬೇರೆಬೇರೆ ದೇಶ-ಭಾಷೆಗಳಲ್ಲಿ ಪ್ರಚಲಿತವಿರು ವಂಥದ್ದೇ. ಇಂಗ್ಲಿಷ್‌ನಲ್ಲಿ ಎಟ್ಝbಜ್ಝಿಟ್ಚho Zb ಠಿeಛಿ Seಛಿಛಿ ಆಛಿZo ಎಂದು ಕಥೆಯ ಹೆಸರು. ಗೋಲ್ಡಿಲಾಕ್ಸ್ ಎಂದು ಕೆಂಚುಗೂದಲಿನ ಆ ಪುಟ್ಟ ಹುಡುಗಿಯ ಹೆಸರು. ಅಕಸ್ಮಾತ್ತಾಗಿ ಕರಡಿಗಳ ಮನೆಯೊಳಕ್ಕೆ ಹೋಗುವ ಆಕೆ ಅಲ್ಲಿ ಅಕ್ಕಿ ಅಥವಾ ಬೇರಾವುದೋ ಧಾನ್ಯದಿಂದ ಮಾಡಿದ್ದ ‘ಪೋರಿಜ್’ ತಿನ್ನುತ್ತಾಳೆ, ಸಣ್ಣ ಮಂಚವನ್ನು ಮುರಿಯುತ್ತಾಳೆ, ಸಣ್ಣ ಹಾಸಿಗೆಯ ಮೇಲೆ ಮಲಗುತ್ತಾಳೆ, ಕೊನೆಗೆ ಕರಡಿಗಳು ಅಲ್ಲಿಗೆ ಬಂದಾಗ ಯಾವುದೇ ಅಹಿತಕರ ಘಟನೆ ನಡೆಯದೆ ಪಾರಾಗಿ ತನ್ನ ಮನೆಗೆ ಹಿಂದಿರುಗುತ್ತಾಳೆ – ಎಂದೇ ಕಥೆಯ ಆಧುನಿಕ ಆವೃತ್ತಿಗಳಲ್ಲಿ ಇರುವುದು.

ಪೋರಿಜ್ ಹಾಕಿಟ್ಟಿದ್ದ ಬೋಗುಣಿ, ಕುಳಿತುಕೊಳ್ಳಲಿಕ್ಕೆ ಮಂಚ, ಮಲಗಲಿಕ್ಕೆ ಹಾಸಿಗೆ… ಎಲ್ಲವೂ ಮೂರು ಸೈಜಿನವಿದ್ದರೂ ಸಣ್ಣದು ಮಾತ್ರ ತನಗೆಂದೇ
ಮಾಡಿಸಿದ್ದೇನೋ ಎನ್ನುವಷ್ಟು ಗೋಲ್ಡಿಲಾಕ್ಸ್‌ಗೆ ಇಷ್ಟವಾಗುತ್ತದಲ್ಲ, ಅದು ಎಟ್ಝbಜ್ಝಿಟ್ಚho Pಜ್ಞ್ಚಿಜಿmಛಿ ಎಂಬೊಂದು ನುಡಿಗಟ್ಟನ್ನೇ ಇಂಗ್ಲಿಷ್ ಭಾಷೆಗೆ ಕೊಟ್ಟಿದೆ. ಬಾಹ್ಯಾಕಾಶ ವಿಜ್ಞಾನದ ಪರಿಭಾಷೆಯಲ್ಲಿ ‘ಯಾವುದೇ ಒಂದು ಗ್ರಹದ ಮೇಲೆ ನೀರು ಇರುವುದಕ್ಕೆ ಸಾಧ್ಯವಾಗುವಷ್ಟೇ ಪ್ರಮಾಣದ ಉಷ್ಣತೆ ಇರುವಂತೆ ಆ ಗ್ರಹದ
ಕಕ್ಷೆಯು ಸೂರ್ಯನಿಂದ ದೂರದಲ್ಲಿದ್ದರೆ’ ಅದನ್ನು ಗೋಲ್ಡಿಲಾಕ್ಸ್ ಪ್ರಿನ್ಸಿಪಲ್ ಎನ್ನಲಾಗುತ್ತದೆ. ಯಾವ ಪ್ರಮಾಣವು ಜಸ್ಟ್ ರೈಟ್ ಎಂದೆನಿಸುತ್ತದೋ ಅದು ಗೋಲ್ಡಿಲಾಕ್ಸ್. ಸೌರವ್ಯೂಹದಲ್ಲಿ ಶುಕ್ರಗ್ರಹದ ಹೊರಕಕ್ಷೆಯಿಂದ ಮಂಗಳಗ್ರಹದ ಹೊರಕಕ್ಷೆಯವರೆಗಿನದು ಗೋಲ್ಡಿಲಾಕ್ಸ್ ಝೋನ್. ಹಾಗಾಗಿಯೇ ನಡುವಿರುವ ಭೂಮಿಯಲ್ಲಿ ನೀರು, ಮತ್ತು ನೀರಿನಿಂದಾಗಿ ಜೀವಿಗಳು ಇರುವುದು.

ಸೂರ್ಯನಿಗೆ ಹತ್ತಿರ ಹೋದಂತೆಲ್ಲ ನೀರು ಆವಿಯಾಗುತ್ತದೆ, ದೂರ ಹೋದಂತೆ ಹಿಮಗಡ್ಡೆಯಾಗುತ್ತದೆ. ಭೂಮಿಯಲ್ಲಷ್ಟೇ ನೀರು ನೀರಾಗಿಯೇ ಇರುತ್ತದೆ, ಗೋಲ್ಡಿಲಾಕ್ಸ್ ತತ್ತ್ವದಡಿ. ಸ್ವಾರಸ್ಯವೇನೆಂದರೆ, ಇಂಗ್ಲಿಷ್‌ನಲ್ಲಿ ತೀರ ಹಿಂದಿನ ಆವೃತ್ತಿಗಳಲ್ಲಿ- ಮೊತ್ತಮೊದಲಿಗೆ ಲಿಖಿತ ರೂಪದಲ್ಲಿ ಬಂದಾಗ- ಈ ಕಥೆ ಬೇರೆಯೇ ರೀತಿಯಲ್ಲಿತ್ತಂತೆ. ಅದರಲ್ಲಿ ಗೋಲ್ಡಿಲಾಕ್ಸ್ ಎಂಬ ಹುಡುಗಿ ಇರಲಿಲ್ಲ, ಕರಡಿಗಳ ಮನೆಯಲ್ಲಿದ್ದದ್ದು ಪೋರಿಜ್ ಅಲ್ಲ. ಮನೆಯೊಳಗೆ ಹೊಕ್ಕವರನ್ನು ಕರಡಿಗಳು
ಸುಮ್ಮನೆ ಬಿಟ್ಟಿದ್ದೂ ಇಲ್ಲ! ಕಾಲಕ್ರಮೇಣ ಕಥೆಯು ವಿಕಸನ ಹೊಂದಿ ಅಷ್ಟಿಷ್ಟು ಮಾರ್ಪಾಡುಗಳೊಂದಿಗೆ ಈಗಿನ ರೂಪ ಪಡೆದಿರುವುದು. ೧೮೩೧ರಲ್ಲಿ ಎಲಿನಾರ್ ಮ್ಯೂರ್ ಎಂಬಾಕೆ ತನ್ನ ನಾಲ್ಕು ವರ್ಷದ ಸೋದರಳಿಯನಿಗೆ ಹುಟ್ಟುಹಬ್ಬದ ಉಡುಗೊರೆಯೆಂದು ಕೊಡಲಿಕ್ಕೆ ದ ಸ್ಟೋರಿ ಆಫ್ ದ ತ್ರೀ ಬೇರ‍್ಸ್ ಎಂಬ ಹೆಸರಿನ ಪುಸ್ತಕವನ್ನು ತಾನೇ ಕೈಯಿಂದ ಬರೆದು ಮಾಡಿದ್ದು ಈ ಕಥೆಯ ಮೊತ್ತಮೊದಲ ಲಿಖಿತ ರೂಪವೆಂದು ಪರಿಗಣಿಸಲಾಗುತ್ತದೆ. ಆಕೆ ಅದನ್ನೇನೂ ತನ್ನ ಸ್ವಂತ ಕಲ್ಪನೆಯ ಕಥೆ ಎಂದಿಲ್ಲ. ಪ್ರಚಲಿತವಿರುವ ಜನಪ್ರಿಯ ಮೌಖಿಕ ಕಥೆಯನ್ನು ಅಕ್ಷರಕ್ಕಿಳಿಸಿದ್ದೇನೆ ಎಂದಷ್ಟೇ ಅವಳ ಪ್ರತಿಪಾದನೆ.

ಅದರಲ್ಲಿ ಕರಡಿಗಳ ಮನೆಯೊಳಗೆ ಹೊಕ್ಕವಳು ಒಬ್ಬ ಕೋಪಿಷ್ಠೆ ಮುದುಕಿ. ಅಲ್ಲಿ ಅವಳಿಗೆ ಕುಡಿಯಲಿಕ್ಕೆ ಸಿಗುವುದು ಪೋರಿಜ್ ಅಲ್ಲ ಹಾಲು. ಒಂದು ಕರಡಿ ಸಣ್ಣದಿತ್ತು ಎಂಬುದನ್ನು ಬಿಟ್ಟರೆ ಉಳಿದೆರಡು ಕರಡಿಗಳ ಗಾತ್ರ ತುಲನೆ ಇಲ್ಲ. ಕಥೆಯ ಅಂತ್ಯ ತುಸು ಘೋರವೇ ಇತ್ತು. ಮುದುಕಿಯನ್ನು ಸುಡಲಿಕ್ಕೆ ಮತ್ತು ನೀರಿನಲ್ಲಿ ಮುಳುಗಿಸಲಿಕ್ಕೆ ಕರಡಿಗಳು ಯತ್ನಿಸುತ್ತವೆ, ಆದರೆ ಯಶಸ್ವಿಯಾಗುವುದಿಲ್ಲ. ಕೊನೆಗೆ ಸೈಂಟ್ ಪೌಲ್ ಚರ್ಚ್‌ನ ಗೋಪುರಕ್ಕೆ ಆಕೆಯನ್ನು ನೇತುಹಾಕುತ್ತವೆ. ೧೮೩೭ರಲ್ಲಿ ರಾಬರ್ಟ್ ಸೂಥೆ ಎಂಬಾತ ದ ಡಾಕ್ಟರ್- ವಾಲ್ಯುಮ್ ೬ ಎಂಬ ಪುಸ್ತಕದಲ್ಲಿ ಅದೇ ಕಥೆಯ ಇನ್ನೊಂಚೂರು ಬದಲಾಯಿಸಿದ ಆವೃತ್ತಿಯನ್ನು ಪ್ರಕಟಿಸಿದನು. ಅದರಲ್ಲಿ ಮೂರೂ ಗಂಡು ಕರಡಿಗಳೆಂಬ ವಿವರಣೆ ಇತ್ತು. ಅವುಗಳ ಮನೆಯೊಳಗೆ ಹೊಕ್ಕಿದ್ದು ಒಬ್ಬ ಹೆಂಗಸೇ, ಆಕೆ ಕೆಟ್ಟವಳೆಂದೇ ಬಣ್ಣನೆ. ಆದರೆ ಕರಡಿಗಳ ಡೈನಿಂಗ್ ಟೇಬಲ್ ಮೇಲೆ ಇಟ್ಟದ್ದು ಹಾಲಲ್ಲ, ಪೋರಿಜ್. ಕಥೆಯ ಕೊನೆಯಲ್ಲಿ ಹೆಂಗಸು ಕಿಟಕಿಯಿಂದ ಹೊರಕ್ಕೆ ಹಾರಿ ಪಾರಾಗುತ್ತಾಳೆ, ಆಮೇಲೆ ಆಕೆ ಏನಾದಳೆಂಬ ವಿವರಗಳಿಲ್ಲ.

ರಾಬರ್ಟ್ ಸೂಥೆಯಿಂದಾಗಿ ಕಥೆ ಹೆಚ್ಚು ಪ್ರಸಿದ್ಧವಾಯಿತು. ಆಮೇಲೆ ಜಾರ್ಜ್ ನಿಕೋಲ್ ಎಂಬಾತ ಅದನ್ನು ಪದ್ಯರೂಪದಲ್ಲಿ, ಬಣ್ಣಬಣ್ಣದ ಚಿತ್ರಗಳ ಸಹಿತ ಪ್ರಕಟಿಸಿದನು. ಸೂಥೆಯೇ ಆ ಕಥೆಯ ಮೂಲಕರ್ತೃ ಎಂದು ಕೂಡ ನಿಕೋಲ್ ಬರೆದುಕೊಂಡಿದ್ದನಂತೆ. ಏಕೆಂದರೆ ಎಲಿನಾರ್ ಮ್ಯೂರ್ ಕೈಯಿಂದ ಮಾಡಿದ್ದ ಪುಸ್ತಕ ಕೇವಲ ಒಂದು ಖಾಸಗಿ ಉಡುಗೊರೆಯಷ್ಟೇ ಆಗಿತ್ತೇ ಹೊರತು ಸಾರ್ವಜನಿಕವಾಗಿ ಪ್ರಕಟಗೊಂಡಿರಲಿಲ್ಲ. ೨೦ನೆಯ ಶತಮಾನದ ಮಧ್ಯಭಾಗದಲ್ಲಷ್ಟೇ ಗೊತ್ತಾದದ್ದು ಕರಡಿಗಳ ಕಥೆಗೆ ಮೊತ್ತಮೊದಲ ಲಿಖಿತ ರೂಪ ಕೊಟ್ಟವಳು ಅವಳು ಅಂತ. ೧೮೫೦ರಲ್ಲಿ ಜೋಸೆಫ್ ಕಂಡಾಲ್ ಎಂಬುವವನು ಎ ಟ್ರೆಜರಿ ಆಫ್ ಪ್ಲೆಜರ್ ಬುಕ್ಸ್ ಫಾರ್ ಯಂಗ್ ಚಿಲ್ಡ್ರನ್ ಪುಸ್ತಕದಲ್ಲಿ ಕಥಾನಾಯಕಿಯ ವಯಸ್ಸು ಕಡಿಮೆ ಮಾಡಿದನು.

ಮುದುಕಿಯರ ಕಥೆಗಳಾದರೆ ತುಂಬ ಇವೆ, ಇವಳು ಚಿಕ್ಕ ಹುಡುಗಿ ಆಗಿರಲಿ ಎಂದು ಅವನ ಅಂಬೋಣ. ಆದರೂ ಕಂಡಾಲ್ ಆಕೆಗೊಂದು ಹೆಸರಿಡಲಿಲ್ಲ, ಬೆಳ್ಳಿಕೂದಲಿನವಳು ಎಂದಷ್ಟೇ ಬಣ್ಣಿಸಿದ. ಆ ಮೂರು ಕರಡಿಗಳು ಅಪ್ಪ-ಅಮ್ಮ-ಮರಿ ಆಗಿದ್ದುವು, ಅದೊಂದು ನ್ಯೂಕ್ಲಿಯಸ್ ಫ್ಯಾಮಿಲಿ ಆಗಿತ್ತು ಎಂಬ
ಚಿತ್ರಣಗಳೂ ಆಮೇಲೆ ಬಂದುವು. ೧೮೬೦ರ ಸುಮಾರಿಗೆ ಹುಡುಗಿಯ ಕೂದಲು ಬೆಳ್ಳಿಯಿಂದ ಬಂಗಾರದ ಬಣ್ಣಕ್ಕೆ ಬದಲಾವಣೆ ಕಾಣತೊಡಗಿದವು. ೧೮೬೪ರಲ್ಲಿ ಪ್ರಕಟವಾದ ಒಂದು ಪಠ್ಯಪುಸ್ತಕದಲ್ಲಿ ಆ ಕಥೆ ಸೇರಿಕೊಂಡಾಗ ಹುಡುಗಿಯನ್ನು ಬಂಗಾರಗೂದಲಿನವಳು ಎಂದೇ ಚಿತ್ರಿಸಲಾಯಿತು. ೧೮೭೫ರಲ್ಲಿ ಒಬ್ಬಾತ ಕರಡಿಗಳ ಕಥೆಯನ್ನು ತನ್ನ ಸ್ವಂತ ಜೀವನಕ್ಕೆ ಹೋಲಿಸುತ್ತ- ತನ್ನ ವಸ್ತುಗಳೇ ಯಾವಾಗಲೂ ದಾಳಿಗೊಳಗಾಗುತ್ತಿದ್ದದ್ದು ತಾನು ಸಣ್ಣ ಕರಡಿಯಂತೆ ಇದ್ದೆ,
ದಾಳಿಕೋರ ಹುಡುಗಿ ಗೋಲ್ಡಿಲಾಕ್ಸ್ ಆಗಿದ್ದಳು- ಎಂಬಂತೆ ಬರೆದನು. ಅಲ್ಲಿ ಅವನು ಹುಡುಗಿಯ ಹೆಸರೇ ಗೋಲ್ಡಿಲಾಕ್ಸ್ ಎಂದಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಗೋಲ್ಡಿಲಾಕ್ಸ್ ಎಂಬ ಪದ ೧೫ನೆಯ ಶತಮಾನದಿಂದಲೂ- ಕೆಂಚುಗೂದಲಿನವರಿಗೆ ರಹಸ್ಯಪದ ಎಂಬಂತೆ- ಬಳಕೆಯಲ್ಲಿರುವುದರಿಂದ ಅವನೂ ಹಾಗೆಯೇ ಮಾಡಿದ್ದ. ಆದರೆ ಕರಡಿಗಳ ಕಥೆಯಲ್ಲಿನ ಹುಡುಗಿಗೆ ನಿಜವಾಗಿಯೂ ಗೋಲ್ಡಿಲಾಕ್ಸ್ ಎಂದು ನಾಮಕರಣ ಮಾಡಿದ ಖ್ಯಾತಿ ೧೯೧೮ರಲ್ಲಿ ಇಂಗ್ಲಿಷ್ -ರೀ ಟೇಲ್ಸ್ ಹೆಸರಿನ ಪುಸ್ತಕದಲ್ಲಿ ಕಥೆಯನ್ನು ಪ್ರಕಟಿಸಿದ ಫೆರಾ ಆನ್ನಿ ಸ್ಟೀಲ್‌ಳದು.

ಮೂರು ಕರಡಿಗಳ ಕಥೆಗೆ ಮೊತ್ತಮೊದಲಿಗೆ ಲಿಖಿತ ರೂಪ ಕೊಟ್ಟದ್ದು ಎಲಿನಾರ್ ಮ್ಯೂರ್ ಎನ್ನುವುದು ಬಹುಮಟ್ಟಿಗೆ ಎಲ್ಲರಿಗೂ ಒಪ್ಪಿತ ವಿಷಯವೇ ಆಗಿದೆ. ಆದರೆ ಆ ಕಥೆಗಿಂತ ಮೊದಲು ಚಾಲ್ತಿಯಲ್ಲಿದ್ದ ಸ್ಕ್ರೇಪ್-ಟ್ ಎಂಬ ಕಥೆಯ ಪ್ರಭಾವದಿಂದ ಅದು ಹುಟ್ಟಿಕೊಂಡಿರಬಹುದು ಎಂದು ಪಾಶ್ಚಾತ್ಯ ಜನಪದಜ್ಞರ ಅಭಿಪ್ರಾಯ. ಸ್ಕ್ರೇಪ್-ಟ್ ಕಥೆಯಲ್ಲಿ ಕರಡಿಗಳು ಒಂದು ದೊಡ್ಡ ಕ್ಯಾಸಲ್(ಸೌಧ)ದಲ್ಲಿ ವಾಸಿಸುತ್ತವೆ, ಮತ್ತು ಅವು ಅಲ್ಲಿ ಇಲ್ಲದಿದ್ದಾಗ ಒಳನುಗ್ಗಿದ್ದು ಸ್ಕ್ರೇಪ್-ಟ್ ಎಂಬ ಹೆಸರಿನ
ಗಂಡು ನರಿ. ರಾಬರ್ಟ್ ಸೂಥೆ ಯಾರಿಂದಲೋ ಕಥೆ ಕೇಳಿದ್ದಾಗ ನರಿಯ ಬದಲಿಗೆ ಮುದುಕಿಹೆಂಗಸು ಎಂದು ಬದಲಾಗಿರಬಹುದು, ನರಿಬುದ್ಧಿ ತೋರಿಸುವ ಕೆಲವು ಕೆಟ್ಟ ಹೆಂಗಸರಿರುತ್ತಾರಷ್ಟೆ ಎಂಬ ತರ್ಕವನ್ನೂ ಕೆಲವರು ಮಂಡಿಸುತ್ತಾರೆ. ಚಂದ್ರಹಾಸನ ಕಥೆಯಲ್ಲಿ ವಿಷ-ವಿಷಯೆ ಆದಂತೆ ಇಲ್ಲಿಯೂ ಅಕ್ಷರಸಾದೃಶ್ಯದಿಂದಾಗಿ ನರಿ-ನಾರಿ ಆದಳು ಎನ್ನಬಹುದಿತ್ತು ಇದೆಲ್ಲ ಕನ್ನಡದ ಸಂದರ್ಭದಲ್ಲಾದರೆ.

ಹಾಗೆಯೇ, ಇದೇ ಕಥೆಯ ಜಾಡು ಈ ಹಿಂದಿನಿಂದಲೂ ಇರುವ ಕಥೆಗಳಲ್ಲಿದೆ ಎಂದು ತೋರಿಸುವವರೂ ಇದ್ದಾರೆ. ೧೮೧೨ರಲ್ಲಿ ಜೇಕಬ್ ಮತ್ತು ವಿಲ್ಹೆಲ್ಮ್ ಗ್ರಿಮ್ಸ್ ಸೋದರರು ಪ್ರಕಟಿಸಿದ ಸ್ನೋ ವ್ಹೈಟ್ ಎಂಬ ಫೆರಿ ಟೇಲ್ ನಲ್ಲಿ ರಾಜಕುಮಾರಿಯು ಏಳು ಮಂದಿ ಕುಬ್ಜರ ನಿವಾಸದೊಳಕ್ಕೆ ಅವರಿಲ್ಲದ ವೇಳೆಯಲ್ಲಿ
ಹೋಗುತ್ತಾಳೆ, ಅವರೆಲ್ಲರ ತಟ್ಟೆಗಳಿಂದ ಒಂಚೂರು ಆಹಾರ ತಿನ್ನುತ್ತಾಳೆ, ಎಲ್ಲರ ಹಾಸಿಗೆಗಳನ್ನೂ ಪರೀಕ್ಷಿಸಿ ಕೊನೆಗೆ ಒಂದರಲ್ಲಿ ಮಲಗಿ ನಿದ್ದೆ ಮಾಡುತ್ತಾಳೆ. ಕುಬ್ಜರು ಹಿಂದಿರುಗಿದಾಗ ಮನೆಯೊಳಕ್ಕೆ ಯಾರೋ ನುಸುಳಿರುವುದು ಗೊತ್ತಾಗುತ್ತದೆ (ಕರಡಿಗಳಿಗಾದಂತೆಯೇ). ಆದರೆ ಆ ಕುಬ್ಜರು ರಾಜಕುಮಾರಿಯನ್ನು ಹೆದರಿಸುವುದಿಲ್ಲ. ಹೊರನೂಕುವುದಿಲ್ಲ. ಅಲ್ಲಿಯೇ ಇರುವುದಕ್ಕೆ ಪ್ರೀತಿಯಿಂದ ಆಹ್ವಾನಿಸುತ್ತಾರೆ.

ನಾರ್ವೇ ದೇಶದ ಜನಪದ ಕಥೆ ದ ನೈಟ್ಸ್ ಇನ್ ಬೇರ್ ಶೇಪ್ಸ್ ಮತ್ತು ರೊಮಾನಿಯಾ ದೇಶದ ಜನಪದ ಕಥೆ ದ ಬಿವಿಚ್ಡ್ ಬ್ರದರ್ಸ್ ಕೂಡ ಹೆಚ್ಚೂಕಡಿಮೆ ಕರಡಿಗಳ ಕಥೆಯದೇ ಜಾಡು ಹೊಂದಿರುವಂಥವು ಎಂಬ ವಾದವೂ ಇದೆ. ಅವುಗಳಲ್ಲಿ ಕೂಡ ಒಳಹೊಕ್ಕು ಆಹಾರ ಕದಿಯುವುದು ಒಬ್ಬ ಕುರೂಪಿ ಹೆಂಗಸೇ. ಆದರೆ ಕರಡಿಗಳ ಮನೆಯಿಂದಲ್ಲ, ಮಾತನಾಡುವ ಬೇರೆ ಪ್ರಾಣಿ-ಪಕ್ಷಿಗಳ ಗೂಡಿನಿಂದ. ಒಟ್ಟಿನಲ್ಲಿ, ಮೂರು ಕರಡಿಗಳು ಕಥೆಯದೇ ಒಂದು ದೊಡ್ಡ ಕಥೆ ಅಂತಾಯ್ತಲ್ಲ! ದೊಡ್ಡ ಅಲ್ಲ ಹದ ಕಥೆ ಅಂತೀರಾ? ಅಥವಾ, ಹದ ಅಲ್ಲ ಇದು ಸಣ್ಣ ಕಥೆ, ಗೋಲ್ಡಿಲಾಕ್ಸ್ ತತ್ತ್ವದಂತೆ ನಮ್ಮ ಆಸಕ್ತಿ-ಕುತೂಹಲಗಳಿಗೆ ಜಸ್ಟ್ ರೈಟ್ ಆಗಿದೆ, ತಿಳಿರುತೋರಣಕ್ಕೆ ಸರಿಯಾಗಿ ಹೇಳಿ ಮಾಡಿಸಿದಂತಿದೆ ಎನ್ನುತ್ತೀರಿ?

Leave a Reply

Your email address will not be published. Required fields are marked *