Sunday, 15th December 2024

ಕಣ್ಣಿನ ಮೇಲೆ ಪ್ರಭಾವ ಬೀರುವುದೇ ಥೈರಾಯ್ಡ್ ?

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಗ್ರೇವ್ಸ್ ಕಾಯಿಲೆಯಲ್ಲಿ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಲಕ್ಷಣ ಎಂದರೆ ದೃಷ್ಟಿ ನರವಾದ ಆಪ್ಟಿಕ್ ನರಕ್ಕೆ ಉಂಟಾಗುವ ತೊಡಕು ಗಳು. ಪರಿಣಾಮವಾಗಿ ಕೆಲವೊಮ್ಮೆ ದೃಷ್ಟಿ ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ. ಜತೆಗೆ ಬೇರೆ ಬೇರೆ ಬಣ್ಣದ ವಸ್ತುಗಳು ಭಿನ್ನವಾಗಿ ಕಾಣಿಸುತ್ತವೆ.

ಥೈರಾಯ್ಡ್ ಗ್ರಂಥಿಯು ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಒಂದು ದೊಡ್ಡ ಗ್ರಂಥಿ. ವಾಯುನಾಳದ ಎರಡೂ ಬದಿಗೆ ತನ್ನ ಇರವನ್ನು ಚಾಚಿ ಚಿಟ್ಟೆಯ ರೀತಿ ಹರಡಿ ಕೊಂಡಿರುತ್ತದೆ. ಈ ಗ್ರಂಥಿಯ ಮುಖ್ಯ ಉದ್ದೇಶ- ಥೈರಾಯ್ಡ್ ಹಾರ್ಮೋನನ್ನು ಉತ್ಪಾದಿಸುವುದು. ನಮ್ಮ ದೇಹದ ಎಲ್ಲಾ ಅಂಗಾಂಶಗಳ ಮೇಲೆ ಈ ಹಾರ್ಮೋನಿನ ಪ್ರಭಾವವಿದೆ. ಇದು ಜೀವಕೋಶಗಳ ಕರ್ತವ್ಯ ಶಕ್ತಿಯನ್ನು ವೃದ್ಧಿಸುತ್ತದೆ ಹಾಗಾಗಿ ದೇಹದ ಮುಖ್ಯ ಚಟುವಟಿಕೆಗಳನ್ನು ಇದು ನಿಯಂತ್ರಿಸುತ್ತದೆ.

ಥೈರಾಯ್ಡ್ ಗ್ರಂಥಿಯ ಮುಖ್ಯ ತೊಂದರೆಗಳು: ದೇಹದ ಉಳಿದೆಲ್ಲ ಭಾಗಗಳ ಅಂಗ ಗಳಂತೆ ಇದು ಸಹ ಹಲವು ತೊಂದರೆಗಳಿಗೆ ಒಳಗಾಗುತ್ತದೆ. ೧) ಇದು ಸ್ರವಿಸುವ ಹಾರ್ಮೋನುಗಳ ಉತ್ಪಾದನೆಯಲ್ಲಿ ಉಂಟಾಗುವ ತೊಂದರೆಗಳು. ೨) ಥೈರಾಯ್ಡ್ ಗ್ರಂಥಿ ಅಸಹಜವಾಗಿ ದೊಡ್ಡದಾಗುವುದು ೩) ಇದರಿಂದ ಕುತ್ತಿಗೆಯ ಅಂಗಾಂಶಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡುವುದು. ೪) ಕ್ಯಾನ್ಸರ್ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದು. ಆರೋಗ್ಯವಂತ ಮನುಷ್ಯನಲ್ಲಿ ಥೈರಾಯ್ಡ್ ಎರಡು ರೀತಿಯ ಹಾರ್ಮೋನು ಗಳನ್ನು ಸ್ರವಿಸುತ್ತದೆ.

ಅವುಗಳೆಂದರೆ ಟಿ ೩ ಮತ್ತು ಟಿ ೪. ಇವು ನಮ್ಮ ದೇಹದ ಹಲವು ಮುಖ್ಯ ಕ್ರಿಯೆಗಳ ಮೇಲೆ ನೇರವಾದ ಪ್ರಭಾವವನ್ನು ಹೊಂದಿವೆ. ಉದಾ: ನಾವು ಎಷ್ಟು ಕ್ಯಾಲೋರಿ ಶಕ್ತಿಯನ್ನು ವ್ಯಯಿಸುತ್ತೇವೆ, ನಮ್ಮ ದೇಹ ಎಷ್ಟು ತಾಪಮಾನ ಹೊಂದಿರಬೇಕು, ನಮ್ಮ ತೂಕ ಎಷ್ಟಿರಬೇಕು- ಹೀಗೆ ದೇಹದ ಹಲವು ಮುಖ್ಯ ಅಂಗಗಳ ಮೇಲೆ ಈ ಹಾರ್ಮೋನುಗಳು ನೇರವಾದ ಪ್ರಭಾವ ಹೊಂದಿವೆ. ಥೈರಾಯ್ಡ್ ಹಾರ್ಮೋನುಗಳ ಹೆಚ್ಚಿನ ಚಟುವಟಿಕೆಗಳಿಂದ ಹೃದಯವು ವೇಗವಾಗಿ ಬಡಿದುಕೊಳ್ಳುತ್ತದೆ. ಹಾಗೆಯೇ ಈ ಹಾರ್ಮೋನುಗಳ ಪ್ರಭಾವ ದಿಂದ ದೇಹದ ಇತರ ಎಲ್ಲಾ ಅಂಗಗಳೂ ತಮ್ಮ ಚಟುವಟಿಕೆಗಳನ್ನು ವೃದ್ಧಿಗೊಳಿಸುತ್ತವೆ.

ಹೈಪರ್ ಥೈರಾಯ್ಡಿಸಮ್ ಅಥವಾ ಥೈರಾಯ್ಡ್ ಗ್ರಂಥಿಯ ಚಟುವಟಿಕೆಯಲ್ಲಿ ವೃದ್ಧಿ: ಥೈರಾಯ್ಡ್ ಗ್ರಂಥಿ ತನ್ನ ಹಾರ್ಮೋನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಿದಾಗ ದೇಹದ ಅಂಗಾಂಶಗಳ ಮೇಲೆ ಅದರ ಪ್ರಭಾವ ಗೊತ್ತಾಗುತ್ತದೆ. ಈ ಹಾರ್ಮೋನುಗಳ ಪ್ರಭಾವದಿಂದ ದೇಹದ ಚಟುವಟಿಕೆ ವೃದ್ಧಿಗೊಳ್ಳುತ್ತದೆ. ಅಂತಹ ವ್ಯಕ್ತಿಯ ದೇಹದ ತಾಪಮಾನ ಹೆಚ್ಚುತ್ತದೆ. ವ್ಯಕ್ತಿಯು ಸಹಜಕ್ಕಿಂತ ಹೆಚ್ಚು ಆಹಾರ
ಸೇವಿಸುತ್ತಿದ್ದರೂ, ನಿಧಾನವಾಗಿ ತೂಕ ಕಳೆದುಕೊಳ್ಳುತ್ತಾ ಹೋಗುತ್ತಾನೆ. ಸಂಜೆಯಾಗುತ್ತಿದ್ದಂತೆ ಅಂತಹ ವ್ಯಕ್ತಿ ಬಳಲಿಕೆ ಅಥವಾ ಸುಸ್ತಿನ ಲಕ್ಷಣ ಹೊಂದುತ್ತಾನೆ. ಅವನಿಗೆ ಸಹಜವಾದ ನಿz ಬರುವಲ್ಲಿಯೂ ತೊಡಕಾಗುತ್ತದೆ.

ಕೈಯಲ್ಲಿ ಒಂದು ರೀತಿಯ ನಡುಕ ಆರಂಭವಾಗುತ್ತದೆ. ಹೃದಯ ತನ್ನ ಬಡಿತ ಹೆಚ್ಚಿಸಿಕೊಳ್ಳುತ್ತದೆ ಅಥವಾ ಅನಿಯಮಿತವಾಗಿ ಬಡಿದು ಕೊಳ್ಳಲು ಆರಂಭಿಸುತ್ತದೆ. ಈತನಿಗೆ ಸಣ್ಣ ಸಣ್ಣ ಘಟನೆಗಳೂ ಕಿರಿಕಿರಿ ಎನಿಸುತ್ತವೆ. ಹೈಪರ್ ಥೈರಾಯ್ಡಿಸಮ್ ತುಂಬಾ ತೀವ್ರಗೊಂಡಾಗ ವ್ಯಕ್ತಿಯಲ್ಲಿ ಉಸಿರು ಕಟ್ಟಬಹುದು, ಎದೆ ನೋವು ಬರಬಹುದು, ಮಾಂಸಖಂಡಗಳಲ್ಲಿ ಸುಸ್ತು ಕಾಣಿಸಿಕೊಳ್ಳಬಹುದು. ಈ ಕಾಯಿಲೆಯ ರೋಗಲಕ್ಷಣಗಳು ಬಹಳ ನಿಧಾನದಲ್ಲಿ ಆರಂಭಗೊಂಡು ನಿಧಾನದಲ್ಲಿಯೇ ಮುಂದುವರೆಯುವುದರಿಂದ ಕಾಯಿಲೆ ತೀವ್ರ ಪ್ರಮಾಣಕ್ಕೆ ಹೋಗುವವರೆಗೆ ರೋಗಿಗೆ ಕಾಯಿಲೆಯ ಬಗೆಗೆ ಎಷ್ಟೋ ವೇಳೆ ಅರಿವೇ ಇರುವುದಿಲ್ಲ.

ವಯಸ್ಸಾದ ವ್ಯಕ್ತಿಗಳಲ್ಲಿ ಕಾಯಿಲೆಯ ಎಲ್ಲಾ ಲಕ್ಷಣಗಳೂ ಕಾಣಿಸಿಕೊಳ್ಳದೆ, ಅಂತಹವರಲ್ಲಿ- ತೂಕ ಕಡಿಮೆಯಾಗುವುದು ಅಥವಾ ಅಂತಹವರು ಮಾನಸಿಕವಾಗಿ ಖಿನ್ನರಾಗುವುದು- ಈ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳಬಹುದು.

ಹೈಪರ್ ಥೈರಾಯ್ಡಿಸಮ್‌ನ ಮುಖ್ಯ ರೋಗ ಲಕ್ಷಣಗಳು: ಹೃದಯದ ಬಡಿತ ತೀವ್ರವಾಗಿ ಹೆಚ್ಚಾಗುವುದು, ದೇಹದ ತಾಪಮಾನ ಹೆಚ್ಚಿ ದಂತೆ ಅನಿಸುವುದು, ಒಂದು ರೀತಿಯ ಹೆದರಿಕೆಯ ಅನುಭವವಾಗುವುದು, ನಿzಯ ಪ್ರಮಾಣ ಕಡಿಮೆಯಾಗುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು, ಕರುಳಿನಲ್ಲಿ ಉಂಟಾಗುವ ಏರು ಪೇರಿನಿಂದ ಮಲವಿಸರ್ಜನೆ ಆಗಾಗ ಆಗುವುದು, ಮಹಿಳೆಯರಲ್ಲಿ ಋತು ಸ್ರಾವ ಕಡಿಮೆಯಾಗುವುದು, ಸುಸ್ತಿನ ಅನುಭವ, ತೂಕ ಕಡಿಮೆಯಾಗುವುದು, ಮಾಂಸಖಂಡಗಳಲ್ಲಿ ಸುಸ್ತು, ಚರ್ಮವು ಬಿಸಿಯಾಗುವುದು, ಕೂದಲುಗಳು ಉದುರುವುದು, ವ್ಯಕ್ತಿ ದಿಟ್ಟಿಸಿ ನೋಡಿದಂತೆ ಅನುಭವವಾಗುತ್ತದೆ.

ಥೈರಾಯ್ಡ್-ಕಣ್ಣಿನ ಕಾಯಿಲೆ: ಇದೊಂದು ತುಂಬಾ ಸಾಮಾನ್ಯವಾದ ಕಣ್ಣಿನ ಗೂಡಿನ ಕಾಯಿಲೆ (ಆರ್ಬಿಟ್). ಆದರೆ ಇದು ತುಂಬಾ ಸಂಕೀರ್ಣವಾದ, ಬಹಳ ಕಡಿಮೆ ಅರ್ಥವಾಗಿರುವ ಕಾಯಿಲೆ. ಇದು ಒಬ್ಬ ವ್ಯಕ್ತಿಯಲ್ಲಿ ಹೈಪರ್ ಥೈರಾಯ್ಡಿಸಮ್ (ಥೈರಾಯ್ಡ್ ಗ್ರಂಥಿಯ ಚಟುವಟಿಕೆ ವೃದ್ಧಿಯಾದಾಗ), ಹೈಪೋ ಥೈರಾಯ್ಡಿಸಮ್ (ಥೈರಾಯ್ಡ್ ಗ್ರಂಥಿಯ ಚಟುವಟಿಕೆ ಕ್ಷೀಣಿಸಿದಾಗ) ಹಾಗೂ ಥೈರಾಯ್ಡ್ ಗ್ರಂಥಿಯ ಕಾರ್ಯದಲ್ಲಿ ಏನು ವ್ಯತ್ಯಾಸವಾಗದಿದ್ದಾಗಲೂ ಬರಬಹುದು.

ಇತ್ತೀಚಿನ ಸಂಶೋಧನೆಗಳ ಹೊರತಾಗಿಯೂ ಈ ಕಾಯಿಲೆಯ ಉಗಮ, ಬೆಳವಣಿಗೆ, ಸರಿಯಾದ ಚಿಕಿತ್ಸೆ- ಇವು ಸ್ಪಷ್ಟವಾಗಿ ನಿರ್ಧಾರ ವಾಗಿಲ್ಲ. ಇದು ೧೦೦,೦೦೦ ಮಹಿಳೆಯರಲ್ಲಿ ೧೬ ಜನರಲ್ಲಿಯೂ ಹಾಗೆಯೇ ೧೦೦,೦೦೦ ಪುರುಷರಲ್ಲಿ ೩ ಜನರಲ್ಲಿಯೂ ಕಂಡು ಬರುತ್ತದೆ. ಮುಖ್ಯ ಕಾರಣ ಎಂದರೆ ಮಹಿಳೆಯರಲ್ಲಿ ಹೈಪರ್ ಥೈರಾಯ್ಡಿಸಮ್ ಜಾಸ್ತಿ ಇದೆ. ಗ್ರೇವ್ಸ್ ಕಾಯಿಲೆಯ ಶೇಕಡಾ ೪೦ ರೋಗಿ ಗಳು ಥೈರಾಯ್ಡ್ ಕಣ್ಣಿನ ಕಾಯಿಲೆಗೆ ಒಳಗಾಗುತ್ತಾರೆ. ಮುಖ್ಯವಾಗಿ ಇವರಲ್ಲಿ ಕಣ್ಣಿನ ರೆಪ್ಪೆ ಸರಿಯಾಗಿ ಮುಚ್ಚದಿರುವುದರಿಂದ ಕಾರ್ನಿ ಯಾದ ಮೇಲೆ ಅಲ್ಸರ್ ಮತ್ತು ಹುಣ್ಣು ಆಗಿ ಅದು ಕಣ್ಣಿನ ದೃಷ್ಟಿಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.

ಹೈಪರ್ ಥೈರಾಯ್ಡಿಸಮ್ ಕಾಯಿಲೆಯಲ್ಲಿ ಕಣ್ಣಿನ ಲಕ್ಷಣಗಳು: ಹೈಪರ್ ಥೈರಾಯ್ಡಿಸಮ್ ಅಥವಾ ಗ್ರೇವ್ಸ್ ಕಾಯಿಲೆ ಕಣ್ಣಿನ ಮೇಲೆ ಬೀರುವ ಮುಖ್ಯ ಲಕ್ಷಣಗಳೆಂದರೆ ಕಣ್ಣಿನ ರೆಪ್ಪೆಯ ಮೇಲಿನ ಪ್ರಭಾವದಿಂದ ಇಂತಹ ವ್ಯಕ್ತಿ ತೀವ್ರ ರೀತಿಯಲ್ಲಿ ದುರುಗುಟ್ಟಿ ದಿಟ್ಟಿಸಿದಂತೆ ತೋರುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ ನಮ್ಮನ್ನು ನೇರವಾಗಿ ನೋಡಿದಾಗ ಆತನ/ಆಕೆಯ ಕಣ್ಣಿನ ಮೇಲಿನ ರೆಪ್ಪೆ ಕಣ್ಣಿನ
ಪಾರದರ್ಶಕ ಪಟಲ ಕಾರ್ನಿಯಾಗಿಂತ ಕೆಳಗಿರುತ್ತದೆ.

ಆದರೆ ಗ್ರೇವ್ಸ್ ಕಾಯಿಲೆಯ ವ್ಯಕ್ತಿಯಲ್ಲಿ ಇದು ಕಾರ್ನಿಯಕ್ಕಿಂತ ಮೇಲಿದ್ದು, ಕಾರ್ನಿಯಾದ ಮೇಲಿನ ಬಿಳಿ ಬಣ್ಣದ ಸ್ಲೀರಾ ಸ್ಪಷ್ಟವಾಗಿ ನಮಗೆ ಕಾಣಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಮೇಲಿನ ರೆಪ್ಪೆಯನ್ನು ಆಡಿಸುವ ಮಾಂಸಖಂಡಗಳಿಗೆ ಸಂಬಂಧಪಟ್ಟ ನರಗಳು ಮಾಮೂಲಿ ಗಿಂತ ಹೆಚ್ಚು ಕೆಲಸ ಮಾಡುವಂತೆ ಈ ಕಾಯಿಲೆಯಲ್ಲಿರುವ ಹಾರ್ಮೋನಿನ ಹೆಚ್ಚಳ ನೋಡಿಕೊಳ್ಳುತ್ತದೆ.

ಜತೆಗೆ ಕಣ್ಣಿನ ರೆಪ್ಪೆ ಮುಚ್ಚುವ ಮತ್ತು ತೆಗೆಯುವ ಕ್ರಿಯೆ ಸರಿಯಾಗಿ ಜರುಗುವುದಿಲ್ಲ. ಕಣ್ಣಿನ ರೆಪ್ಪೆ ಮುಚ್ಚಿದಾಗ ಒಂದು ರೀತಿಯ ಅದುರುವಿಕೆ ಕಂಡುಬರುತ್ತದೆ. ಆನಂತರ ರೆಪ್ಪೆ ತೆಗೆದಾಗ ರೆಪ್ಪೆಯ ಚಲನೆ ನಿಯಮಿತವಾಗಿರುವುದಿಲ್ಲ. ಒಂದು ರೀತಿ ಪಟ ಪಟ ಹೊಡೆದು ಕೊಳ್ಳುತ್ತದೆ. ಕಣ್ಣಿನ ರೆಪ್ಪೆಯ ಲಕ್ಷಣಗಳು ಮೂಲ ಕಾಯಿಲೆಗೆ( ಹೈಪರ್ ಥೈರಾಯ್ಡಿಸಮ್ ಅಥವಾ ಗ್ರೇವ್ಸ್ ಕಾಯಿಲೆ) ಚಿಕಿತ್ಸೆ ಮಾಡುತ್ತಾ ಹೋದ ಹಾಗೆ ಕಡಿಮೆಯಾಗುತ್ತಾ ಹೋಗುತ್ತದೆ.

ಮೇಲೆ ತಿಳಿಸಿದ್ದೇ ಕಣ್ಣಿನ ರೆಪ್ಪೆಯ ಮೇಲಿನ ಲಕ್ಷಣಗಳಾದರೆ, ಕಣ್ಣಿನೊಳಗೆ ಈ ಕಾಯಿಲೆ ಬೇರೆ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಈ ರೀತಿಯ ಪ್ರಭಾವಕ್ಕೆ ರಕ್ತದಲ್ಲಿನ ಐಜಎ (ಐ ಜಿ ಜಿ ) ಆಂಟಿಬಾಡಿ ಎಂಬ ವಿಶೇಷ ವಸ್ತು ಕಾರಣವಾಗುತ್ತದೆ. ಇದು ಕಣ್ಣಿನೊಳಗಿನ ಸಣ್ಣ ಮಾಂಸಖಂಡಗಳ ಮೇಲೆ ವಿವಿಧ ರೀತಿಯ ಪ್ರಭಾವ ಬೀರಿ ಕೆಳಗಿನ ಲಕ್ಷಣಗಳಿಗೆ ಕಾರಣವಾಗುತ್ತದೆ. ಕಣ್ಣಿನೊಳಗಿನ ಮಾಂಸ ಖಂಡಗಳು ಅಸಾಮಾನ್ಯವಾಗಿ ದೊಡ್ಡದಾಗುತ್ತವೆ. ಪರಿಣಾಮವಾಗಿ ಕಣ್ಣಿನೊಳಗಿನ ಒತ್ತಡ ನಿಧಾನವಾಗಿ ಜಾಸ್ತಿಯಾಗುತ್ತದೆ. ಇದರ ಪರೋಕ್ಷ ಪರಿಣಾಮ ಕಣ್ಣಿನ ಹೊರಭಾಗ ಕೆಂಪಾಗುತ್ತದೆ. ನೀರಿನ ಅಂಶ ಹೆಚ್ಚಿಸಿಕೊಂಡು ಕಣ್ಣು ಬೀಗುತ್ತದೆ ಅಥವಾ ಕಣ್ಣಿಗೆ ಬಾವು ಬರುತ್ತದೆ. ಜತೆಗೆ ಕಣ್ಣಿನ ಹೊರ ಪದರದ ಸೋಂಕು ಕಂಜಕ್ಟವೈಟಿಸ್ ಉಂಟಾಗುತ್ತದೆ.

ಹಾಗೆಯೇ ಈ ಕಾಯಿಲೆಯ ಅತಿ ಮುಖ್ಯ ಕಣ್ಣಿನ ಲಕ್ಷಣ ಎಂದರೆ ಇಡೀ ಕಣ್ಣುಗುಡ್ಡೆಯೇ ಒಂದು ರೀತಿಯಲ್ಲಿ ಬೀಗಿಕೊಂಡು ಕಣ್ಣು ಹೊರ ಬರುವಂತೆ ಕಾಣುತ್ತದೆ. ಮೊದಲಿನ ಎಲ್ಲಾ ಲಕ್ಷಣಗಳ ಜತೆಗೆ ಈ ರೀತಿಯ ಲಕ್ಷಣ ಸ್ಪಷ್ಟವಾಗಿದ್ದಾಗ ಕಾಯಿಲೆ ಪತ್ತೆ ಹಚ್ಚುವುದು ಏನೂ ಕಷ್ಟವಿಲ್ಲ. ಗ್ರೇವ್ಸ್ ಕಾಯಿಲೆಯಲ್ಲಿ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಲಕ್ಷಣ ಎಂದರೆ ದೃಷ್ಟಿ ನರವಾದ ಆಪ್ಟಿಕ್ ನರಕ್ಕೆ ಉಂಟಾಗುವ ತೊಡಕುಗಳು.

ಪರಿಣಾಮವಾಗಿ ಕೆಲವೊಮ್ಮೆ ದೃಷ್ಟಿ ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ. ಜತೆಗೆ ಬೇರೆ ಬೇರೆ ಬಣ್ಣದ ವಸ್ತುಗಳು ಭಿನ್ನವಾಗಿ ಕಾಣಿಸುತ್ತವೆ. ಅಂದರೆ ಕಡು ನೀಲಿ ಬಣ್ಣದ್ದು ತಿಳಿ ನೀಲಿಯಾಗಿಯೂ ಕಡು ಕೆಂಪಿನದ್ದು ತಿಳಿ ಕೆಂಪಿನದ್ದಾಗಿಯೂ ಕಾಣಿಸುತ್ತದೆ. ಈ ಬದಲಾವಣೆ ಎಷ್ಟೋ ಬಾರಿ ಅಂತಹ ವ್ಯಕ್ತಿಯ ಗಮನಕ್ಕೇ ಬಂದಿರುವುದಿಲ್ಲ. ಜತೆಗೆ ಕೆಲವೊಮ್ಮೆ ಒಂದು ವಸ್ತು ಎರಡಾಗಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಕಣ್ಣುಗುಡ್ಡೆಯ ಹೊರಭಾಗದ ಸಣ್ಣ ಮಾಂಸಖಂಡಗಳು ಬೇರೆ ರೀತಿಯಲ್ಲಿ ತೊಂದರೆಗೆ ಒಳಗಾದಾಗ ಕಣ್ಣಿನ ಚಲನೆಗೆ ತೊಡಕು ಉಂಟಾಗಿ ಈ ರೀತಿ ಒಂದು ವಸ್ತು ಎರಡಾಗಿ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ: ಕಣ್ಣಿನ ತೇವಾಂಶ ಸರಿಪಡಿಸಲು ಕಣ್ಣಿಗೆ ಹನಿ ಔಷಧಗಳು, ಸೋಂಕನ್ನು ತಡೆಗಟ್ಟಲು ಆಂಟಿಬಯೋಟಿಕ್ ಕಣ್ಣಿನ ಔಷಧಿ ಹಾಗೂ ಕಾಯಿಲೆಯ ಮೂಲ ಸಮಸ್ಯೆಯನ್ನು ನಿವಾರಿಸಲು ದೇಹಕ್ಕೆ ಸ್ಟೀರಾಯ್ಡ್ ಔಷಧಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕೊಡಲಾಗುತ್ತದೆ. ಕೆಲವೊಮ್ಮೆ ಅಪರೂಪವಾಗಿ ಶಸ್ತ್ರಕ್ರಿಯೆ ಮಾಡಿ ಕಣ್ಣು ಗುಡ್ಡೆಯ ಹೊರಭಾಗದ ಮೂಳೆಗಳನ್ನು ಕತ್ತರಿಸಿ, ಕಣ್ಣು ಗುಡ್ಡೆಯಲ್ಲಿ ರೂಪು ಗೊಂಡಿದ್ದ ಒಳ ಒತ್ತಡವನ್ನು ನಿವಾರಿಸಬೇಕಾಗುತ್ತದೆ.

ಹೈಪೋಥೈರಾಯಿಡಸಮ್: ಥೈರಾಯ್ಡ್ ಹಾರ್ಮೋನುಗಳ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ಪರಿಣಾಮವಾಗಿ ದೇಹದ ಕ್ರಿಯಾ
ಚಟುವಟಿಕೆ ಕುಂಠಿತಗೊಳ್ಳುತ್ತದೆ. ಜಗತ್ತಿನಾದ್ಯಂತ ೩.೫-೪ ಕೋಟಿ ಜನರಲ್ಲಿ ಇದು ಇರಬಹುದು. ಮಹಿಳೆಯರಲ್ಲಿ ಜಾಸ್ತಿ ಕಂಡು ಬರುತ್ತದೆ. ಒಂದು ಅಂದಾಜಿನ ಪ್ರಕಾರ ಶೇ.೧೦ ಮಹಿಳೆಯರಲ್ಲಿ ಈ ಕಾಯಿಲೆ ಇರುವ ಸಾಧ್ಯತೆ ಇದೆ. ಬಹಳಷ್ಟು ಜನರಿಗೆ ಇದರ ಅರಿವು ಇರುವುದಿಲ್ಲ.

ಹೈಪೋಥೈರಾಯಿಡಸಂನ ಕಾರಣಗಳು: ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಥೈರಾಯ್ಡ್ ಗ್ರಂಥಿಯಲ್ಲಿ ಹಿಂದೆ ಆಗಿದ್ದ ಅಥವಾ
ಈಗ ಇರುವ ಸೋಂಕು ಅಥವಾ ಉರಿಯೂತ. ಇದರ ಪರಿಣಾಮವಾಗಿ ಥೈರಾಯ್ಡ್ ಗ್ರಂಥಿಯ ಹಲವಾರು ಜೀವಕೋಶಗಳು ನಷ್ಟವಾಗಿ, ಹಾರ್ಮೋನುಗಳ ಪ್ರಮಾಣ ಗಮನಾರ್ಹವಾಗಿ ಕುಂಠಿತಗೊಳ್ಳುತ್ತವೆ. ಇದರ ಮುಖ್ಯ ಉದಾಹರಣೆ ಎಂದರೆ ಸ್ವಯಂ ವಿನಾಶಕ ಥೈರಾಯ್ಡ್ ಉರಿಯೂತ. (ಆಟೋ ಇಮ್ಯೂನ್ ಥೈರಾಡೈಟಿಸ್).

ರೋಗಿಯ ಜೀವಿರೋಧಕ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿ ಸೋಂಕು ತಗುಲುತ್ತದೆ. ಇನ್ನೊಂದು ಕಾರಣ ಎಂದರೆ ವೈದ್ಯಕೀಯ ಚಿಕಿತ್ಸೆ ಗಾಗಿ ಥೈರಾಯ್ಡ್ ಮೇಲೆ ಶಸ್ತ್ರಕ್ರಿಯೆ ಮಾಡಿದಾಗ ಹಾರ್ಮೋನುಗಳ ಸ್ರಾವ ಗಮನಾರ್ಹವಾಗಿ ಕಡಿಮೆ ಆಗುತ್ತದೆ.

ಕಾಯಿಲೆಯ ಲಕ್ಷಣಗಳು: ದೈಹಿಕ ಸುಸ್ತು, ನಿತ್ರಾಣ, ತೂಕ ಜಾಸ್ತಿಯಾಗುವುದು, ಕೂದಲು ಒರಟಾಗುವುದು, ಹಾಗೆಯೇ ಕೂದಲು ಉದುರುವುದು, ಚಳಿ ಮತ್ತು ಕಡಿಮೆ ತಾಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗದಿರುವುದು. ಮಾಂಸಖಂಡಗಳಲ್ಲಿ ನೋವು, ಮಲ ಬದ್ಧತೆ, ಮಾನಸಿಕ ಖಿನ್ನತೆ, ನೆನಪಿನ ಶಕ್ತಿ ಕಡಿಮೆಯಾಗುವುದು, ಮಹಿಳೆಯರ ಋತುಚಕ್ರ ಏರುಪೇರಾಗುವುದು, ಲೈಂಗಿಕ ಆಸಕ್ತಿ ತೀವ್ರವಾಗಿ ಕಡಿಮೆಯಾಗುವುದು- ಇವು ಮುಖ್ಯವಾದವುಗಳು.

ಚಿಕಿತ್ಸೆ : ಥೈರಾಯ್ಡ್ ಹಾರ್ಮೋನನ್ನು ಗುಳಿಗೆಯ ರೂಪದಲ್ಲಿ ಸೂಕ್ತ ಪ್ರಮಾಣದಲ್ಲಿ ಕೊಡಲಾಗುವುದು.

ಕೊನೆಯ ಗುಟುಕು: ಥೈರಾಯ್ಡ್ ಕಾಯಿಲೆಯ ಬಗ್ಗೆ ಸೂಕ್ತ ಅರಿವು ಮತ್ತು ಮುನ್ನೆಚ್ಚರಿಕೆ ಬಹಳ ಅಗತ್ಯ.