Thursday, 12th December 2024

ಹುಲಿ ದಿನದ ಆ ಮರುದಿನ ನೆನಪಾದ ಹುಲಿ ದನ

ಸುಪ್ತ ಸಾಗರ

rkbhadti@gmail.com

ಹುಲಿ ಯಾವತ್ತಿಗೂ ಹೊಂಚುಹಾಕಿ ಬೇಟೆಯಾಡುವುದಿಲ್ಲ. ಕಾಡೆಮ್ಮೆ, ಜಿಂಕೆ, ಮರಿ ಆನೆಗಳ ಮೇಲೆರೆಗಿ ಕೊಂಡು ತಿನ್ನುತ್ತವೆ. ವಿಶೇಷವೆಂದರೆ ಹುಲಿ ನರಭಕ್ಷಕ ಅಲ್ಲವೇ ಅಲ್ಲ. ಇದೊಂದು ಶುದ್ಧಾತಿ ಶುದ್ಧ ಕಟ್ಟುಕಥೆಯಷ್ಟೇ. ಮನುಷ್ಯನನ್ನು ಕೊಲ್ಲವುದು ಆಗಾಗಾ ಉಂಟಾದರೂ ಅದು ಬೇರೆ ಬೇರೆ ಕಾರಣಕ್ಕೆ.

ಅದು ದಟ್ಟ ಕಾನನದ ನಡುವಿನ ಒಂದು ಊರು. ಊರು ಅನ್ನುವುದಕ್ಕಿಂತ ಲೆಕ್ಕ ಮಾಡಿ ಮೂರು ಮನೆಗಳಿರುವ ಒಂದು ತಾಣ. ಅದೂ ಅಣ್ಣ ತಮ್ಮಂದಿರದ್ದೇ. ಕಾಡು ಹಾದಿಯ ಒಂದೂವರೆ ಕಿ. ಮೀ.ಗೂ ಹೆಚ್ಚು ದೂರ ನಡೆದುಕೊಂಡು ಹೋಗಬೇಕು. ಬಸ್ ಇರಲಿ, ಕೊನೇ ಪಕ್ಷ ದ್ವಿಚಕ್ರವಾಹನವೂ ನೆಟ್ಟಗೆ ಹೋಗು ವುದಿಲ್ಲ. ಮಳೆಗಾಲದಲ್ಲಿ ‘ಕಾಲೇಶ್ವರ ಎಕ್ಸ್‌ಪ್ರೆಸ್’ ನಿಮಗಾಗಿ ಸಿದ್ಧವಿರುತ್ತದೆ. ಬೇರೆ ಮಾರ್ಗವೇ ಇಲ್ಲ.

ಹೀಗೆ ನಡೆದುಕೊಂಡೇ ಹೋಗುತ್ತಿದ್ದರೆ ರಸ್ತೆಯೆಂದು ಗುರುತಿಸಿಕೊಂಡಿರುವ ಕಿರು ದಾರಿಯ ಪಕ್ಕದ ಒಂದು ಬೃಹತ್ ಕಾರೇ ಮರ ಕಾಣಿಸುತ್ತದೆ. ಅದರ ಬುಡದಂದು ಜೀರ್ಣಾವಸ್ಥೆಯಲ್ಲಿರುವ ಕಟ್ಟೆ. ಆ ಕಟ್ಟೆಯ ಮೇಲೊಂದು ಹುಲಿಯ ಕಲ್ಲಿನ ವಿಗ್ರಹ. ಅದಕ್ಕೊಂದಿಷ್ಟು ಅರಿಷಿಣ, ಕುಂಕುಮ. ಯಾವತ್ತೋ ಹಾಕಿದ್ದ ಹೂವಿನ ಹಾರ ಒಣಗಿ ವಿಗ್ರಹಕ್ಕೆ ಮೆತ್ತಿಕೊಂಡಿದೆ. ಪಕ್ಕದ ಶ್ರದ್ಧಾಳುಗಳು ಊದಿನ ಕಡ್ಡಿ ಹಚ್ಚಿದ್ದಕ್ಕೆ ಸಾಕ್ಷಿಯಾಗಿ ಅರ್ಧ ಉರಿದುಳಿದ ಒಂದಷ್ಟು ಕಡ್ಡಿಗಳು ರಾರಾಜಿಸುತ್ತಿವೆ.

ಅಚ್ಚರಿಯಾದರೂ ಸತ್ಯ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹುಲಿ ಕಟ್ಟೆಗಳು ಅಲ್ಲಲ್ಲಿ ಪೂಜೆಗೊಳ್ಳುತ್ತಿವೆ. ಎಷ್ಟೋ ಊರು ಗಳನ್ನು ಹುಲಿಯ ಹೆಸರಿನಿಂದಲೇ ಗುರುತಿಸಲಾಗುತ್ತಿದೆ. ಮಲೆನಾಡಿನ ಭಾಗಗಳಲ್ಲಂತೂ ತಾಲೂಕಿಗೊಂದರಂತೆ ಹುಲಿ ಮನೆಯೋ, ಹುಲಿಕಟ್ಟೆಯೋ, ಹುಲ್ಕ, ಹುಲಿಕಾಡೋ, ಹುಲದೇವರಬನವೋ ಒಂದ ಒಂದು ಇಂಥದ್ದೇ ಹೆಸರಿನ ಊರು ಇದ್ದೇ ಇರುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಲಿಕಲ್ ಘಾಟಿ ಸಾಕಷ್ಟು ಪ್ರಸಿದ್ಧ.

ನಂಬಿಕೆಗಳ ಪ್ರಶ್ನೆ ಏನೇ ಇರಲಿ. ನಾವು ಭಾರತೀಯರಿಗೆ ಪ್ರಕೃತಿಯ ಎಲ್ಲ ಅಂಶಗಳೂ ಪೂಜನೀಯ. ಹೀಗಿರುವಾಗ ಪ್ರಕೃತಿಯ ಸೃಷ್ಟಿಗಳಲ್ಲಿ ಒಂದಾದ ಹುಲಿಯೂ ದೇವರಾದದ್ದರಲ್ಲಿ ಅಚ್ಚರಿಯಿಲ್ಲ. ಪ್ರಶ್ನೆ ಅದಲ್ಲ. ಹುಲಿ ಕಟ್ಟೆಯಂಥವುಗಳು ನಿರ್ದಿಷ್ಟ ಪ್ರದೇಶದ ಏಕೆ ಇವೆ? ಕಾಡಿನ ಯಾವುದೇ ಪ್ರದೇಶದಲ್ಲಿ ಹುಲಿ ವಾಸ ಮಾಡಬಹುದು.

ಅ ಹುಲಿ ದೇವರುಗಳನ್ನು ಗ್ರಾಮೀಣರು ಪ್ರತಿಷ್ಠಾಪಿಸಿಲ್ಲವೇಕೆ? ಇಂಥ ಹುಡುಕಾಟಕ್ಕೆ ಇಳಿದಾಗ ಕುತೂಹಲಕಾರಿ ಸಂಗತಿ ಯೊಂದು ಹೊರಬಂತು. ಬರೀ ಪೂಜೆಗಾಗಿಯೇ ಇಂಥ ಕಟ್ಟೆಗಳನ್ನು ಕಟ್ಟಿದ್ದಲ್ಲ. ಹೀಗೆ ಹುಲಿ ಕಟ್ಟೆಗಳು ಇರುವ ತಾಣಗಳೆಲ್ಲ ಅತ್ಯಂತ ದಟ್ಟ ಜಲಮೂಲವನ್ನು ಹೊಂದಿದ್ದವು. ಕಾಲ ಕ್ರಮೇಣ ನಾಗರಿಕತೆಯ ದಾಳಿಗೆ ಸಿಲುಕಿ ಅರಣ್ಯವೂ ನಾಶವಾಯಿತು, ಹುಲಿ ಸಂತತಿಗಳೂ ಕ್ಷೀಣಿಸುತ್ತ ಬಂದು ಕಟ್ಟೆಗಳಷ್ಟೇ ಉಳಿದುಕೊಂಡಿವೆ.

ಹುಲಿಗಳಂತಲೇ ಅಲ್ಲ, ಸಾಮಾನ್ಯವಾಗಿ ಕಾಡು ಪ್ರಾಣಿಗಳು ಜಲಮೂಲದ ಸಮೀಪದ ವಾಸಿಸುತ್ತವೆ. ಅದರಲ್ಲೂ ಹುಲಿಯದ್ದು ಅತ್ಯಂತ ವಿಶಿಷ್ಟ ಸ್ವಭಾವ. ಅದು ನೀರಿಗಾಗಿಯಷ್ಟೇ ಅಲ್ಲ, ನೀರನ್ನು ಹುಡುಕಿಕೊಂಡು ಬರುವ ಪ್ರಾಣಿಗಳ ಬೇಟೆಯ ಉದ್ದೇಶ ದಿಂದಲೂ ಜಲಮೂಲದ ಸಮೀಪದ ತನ್ನ ವಾಸ ಸ್ಥಳವನ್ನು ಗುರುತಿಸಿಕೊಂಡಿರುತ್ತಿತ್ತು. ಹೀಗೆ ಹುಲಿ ಸಂತತಿ ದಟ್ಟವಾಗಿದ್ದ ಕಡೆಗಳಲ್ಲ ಹಿಂದಿನವರು ಅದನ್ನು ಗುರುತಿಸಲು ಸುಲಭವಾಗಲಿ ಎಂಬ ದೃಷ್ಟಿಯಿಂದ ಇಂಥ ಕಟ್ಟೆಗಳನ್ನು ಕಟ್ಟಿ ಪೂಜೆಯ ವ್ಯವಸ್ಥೆ ಮಾಡಿರುತ್ತಿದ್ದರು.

ಇನ್ನೂ ವಿಶೇಷವೆಂದರೆ, ಹೀಗೆ ಸ್ಥಳ ನಿಗದಿಗೆ ಮುನ್ನ ಅತ್ಯಂತ ನಿಖರ ಸಮೀಕ್ಷೆಯನ್ನೂ ಮಾಡಲಾಗುತ್ತಿತ್ತು. ಆ ಭಾಗದ ಅರಣ್ಯ ಪ್ರದೇಶ, ಅಲ್ಲಿರಬಹುದಾದ ಪ್ರಾಣಿ ಸಂಕುಲ, ಜೀವ-ಸಸ್ಯ ವೈವಿಧ್ಯ ಇತ್ಯಾದಿ ಅಂಶಗಳೆಲ್ಲವನ್ನೂ ತಮ್ಮದೇ ವಿಶಿಷ್ಟ  ಕ್ರಮ ಗಳಿಂದ ಲೆಕ್ಕಹಾಕಲಾಗುತ್ತಿತ್ತು. ಈ ಎಲ್ಲ ಅಂಕಿ-ಅಂಶಗಳನ್ನು ಆಧರಿಸಿ ಜಲಮೂಲದ ಸಾಮರ್ಥ್ಯವನ್ನು ಅಳೆಯಲಾಗುತ್ತಿತ್ತು.

ಇಷ್ಟೇ ಅಲ್ಲ ಇದನ್ನು ಅವಲಂಬಿಸಿಯೇ ಮುಂದಿನ ಒಂದು ವರ್ಷ ಊರಿನ ಹೊಳೆ, ಕೆರೆ, ಕಟ್ಟೆಗಳಲ್ಲಿರಬಹುದಾದ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಈ ಎಲ್ಲವನ್ನು ಗಮನಿಸಿದಾಗ ಪ್ರಾಣಿ ಗಣತಿ, ಮರಗಳ ಗಣತಿ ಇವೆಲ್ಲವೂ ಗ್ರಾಮೀಣ ಭಾಗದಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು ಎಂಬ ಸಂಗತಿ ಹುಬ್ಬೇರಿಸುತ್ತದೆ. ನೀರಿನ ವಿಚಾರದಲ್ಲಂತೂ ಅತ್ಯಂತ ಕರಾರುವಾಕ್ ಲೆಕ್ಕಾಚಾರ ಹಿಂದಿನ ಗ್ರಾಮೀಣರದ್ದಾಗಿತ್ತು.

ಈಗಿನ ಆಧುನಿಕ ಪ್ರಾಣಿ ಗಣತಿ ಪದ್ಧತಿಯೂ ಇದೇ ಆಧಾರದಲ್ಲಿಯೇ ಅಭಿವೃದ್ಧಿಗೊಂಡದ್ದೊಂದು ಹೇಳಬಹುದು. ಯಾವುದೇ ಒಂದು ಪ್ರದೇಶದ ಜನಸಂಖ್ಯೆಯನ್ನು ಅತ್ಯಂತ ಸುಲಭವಾಗಿ, ಅಷ್ಟೇ ನಿಖರವಾಗಿ ಎಣಿಸಿ ಹೇಳಿಬಿಡಬಹುದು. ಆದರೆ, ಕಾಡು ಪ್ರಾಣಿಗಳ ಸಂಖ್ಯೆಯನ್ನು ಹಾಗೆ ಎಣಿಸಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರಾಣಿಗಳು ಒಂದು ಕಡೆ ನಿಲ್ಲುವುದೇ ಇಲ್ಲ. ಸದಾ
ಸಂಚರಿಸುತ್ತಿರುತ್ತವೆ. ಮತ್ತೊಂದು ಸಂಗತಿಯೆಂದರೆ ಒಂದು ವರ್ಗದ ಪ್ರಾಣಿಗಳು ಸಾಮಾನ್ಯವಾಗಿ ಆಕಾರ, ಸ್ವರೂಪ, ಗಾತ್ರದಲ್ಲಿ ಒಂದೇ ರೀತಿಯಿರುತ್ತವೆ. ಇನ್ನು ಹುಲಿಯಂಥ ಪ್ರಾಣಿಗಳ ಹೆಜ್ಜೆ ಗುರುತಿನ ಗಣತಿ ವಿಶ್ವಾಸಾರ್ಹವಲ್ಲ.

ಅದೇ ರೀತಿ ನೀರಿನ ಲೆಕ್ಕ ತೆಗೆಯುವುದೂ ಸುಲಭವಲ್ಲ. ಹರಿಯುವಿಕೆ, ಇಂಗುವುದು ಹಾಗೂ ಆವಿಯಾಗುವುದು ನೀರಿನ ಮೂಲಭೂತ ಗುಣ. ಹೀಗಿರುವಾಗ ಆಯಾ ಪ್ರದೇಶದ ಪ್ರಾಣಿಗಳ ಸಂಖ್ಯೆ ಎಷ್ಟು? ನೀರಿನ ಪ್ರಮಾಣವೇನು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ.

ಈಗೆಲ್ಲ ಸಂಖ್ಯಾಶಾಸದ ಆಧಾರದ ಮೇಲೆ ಒಂದು ಚದರ ಕಿ.ಮೀ.ನಲ್ಲಿ ಇಂತಿಷ್ಟು ಪ್ರಾಣಿಗಳಿವೆ ಎಂದು ಅಂದಾಜು ಮಾಡಲಾ ಗುತ್ತದೆ. ಸಾಮಾನ್ಯವಾಗಿ ಸಂರಕ್ಷಿತ ಅರಣ್ಯ ಪ್ರದೇಶದ ಮಧ್ಯಭಾಗ (ಕೋರ್ ಜೋನ್)ದಲ್ಲಿ ಕಾಲ್ಪನಿಕ ಚೌಕಗಳನ್ನು ಹಾಕಿಕೊಳ್ಳಲಾಗುತ್ತದೆ. ಕಾಡಿನ ಮರಗಳ ಮೇಲೆ ಗುರುತು ಮಾಡಿಯೋ, ನೆಲದಲ್ಲಿ ಅಲ್ಲಲ್ಲಿ ಕಲ್ಲುಗಳನ್ನು ನೆಡುವ ಮೂಲಕವೋ ಇಂಥ ಚೌಕಗಳನ್ನು ನಿರ್ಮಿಸಲಾಗುತ್ತದೆ. ಸ್ಥಳೀಯರನ್ನೊಳಗೊಂಡ ಗುಂಪುಗಳಲ್ಲಿ ಇಂಥ ಗುರುತುಗಳನ್ನು ನುಸರಿಸಿ  ನಿಶ್ಶಬ್ದವಾಗಿ ಅಲ್ಲಲ್ಲಿ ತಂಗಿ ಪ್ರಾಣಿ-ಪಕ್ಷಿಗಳನ್ನು ಗುರುತುಹಾಕಿಕೊಳ್ಳುತ್ತಾರೆ.

ಕಾಂಪಾಸ್‌ನ ಸಹಾಯದಿಂದ ಪ್ರಾಣಿ ಕಂಡುಬಂದ ಕೋನ ಹಾಗೂ ರೇಂಜ್ -ಂಡರ್ ಎಂಬ ಉಪಕರಣದ ಗೆರೆಯಿಂದ ಪ್ರಾಣಿಗಿರುವ ದೂರವನ್ನು ಅಳೆದು ತಮ್ಮ ಮಾಹಿತಿ ಕಲೆಹಾಕುತ್ತಾರೆ. ಇವೆಲ್ಲವನ್ನೂ ಕ್ರೋಡೀಕರಿಸಿ ಆಯಾ ಪ್ರದೇಶದ
ಪ್ರಾಣಿಗಳ ಸಾಂದ್ರತೆ ಅರಿಯಲಾಗುತ್ತದೆ. ಇದನ್ನು ‘ಸೀಳು ದಾರಿ ಗಣತಿ’ ಎಂದು ಗುರುತಿಸಲಾಗುತ್ತದೆ. ಇದಕ್ಕೆ ಸಾಕಷ್ಟು ನಿರ್ಬಂಧಗಳಿರುತ್ತವೆ. ಅದರದ್ದೇ ಆದ ನಿಯಮಗಳಿರುತ್ತದೆ. ಗುಂಪಿನಲ್ಲಿ ಹೆಚ್ಚು ಜನರಿರಬಾರದು. ದಾರಿಯಲ್ಲಿ ಮಾತಾಡು ವಂತಿಲ್ಲ.

ಶಬ್ದ ಮಾಡುವಂತಿಲ್ಲ. ಸನ್ನೆಗಳ ಸಂವಹನ ಸಾಸಬೇಕು. ಎಷ್ಟೋ ವೇಳೆ ಕಾಡಿನ ಸದ್ದು ಮೋಸ ಮಾಡುವ ಸಾಧ್ಯತೆ ಯಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಡಿನ ಬಗೆಗೆ ಅನುಭವವಿರಬೇಕು. ಸ್ಥಳದ ಪರಿಚಯವಿರಬೇಕು. ಅದಿಲ್ಲದಿದ್ದರೆ ಹಾದಿ ತಪ್ಪಿ, ಎಲ್ಲೋ ಹೋಗಿ ಬಿಡುವ ಅಪಾಯವಿರುತ್ತದೆ. ಪ್ರಾಣಿಗಳ ಸ್ವಭಾವ, ಅವುಗಳ ಜೀವನ ಕ್ರಮ, ನಡೆ ಇತ್ಯಾದಿಗಳ ಮಾಹಿತಿಯೂ
ತಿಳಿದಿರಬೇಕು.

ಒಟ್ಟಾರೆ ಇದು ಸಾಕಷ್ಟು ಸೂಕ್ಷ್ಮ, ತಾಳ್ಮೆ ಬೇಡುವ ಪ್ರಕ್ರಿಯೆಯಷ್ಟೇ ಅಲ್ಲ. ಅಷ್ಟೇ ಚೇತೋಹಾರಿ ಅನುಭವ. ಮಾತ್ರವಲ್ಲ ಕೆಲವೊಮ್ಮೆ ಅಪಾಯಕಾರಿ ಸಾಹಸವೂ ಹೌದು. ಹೇಗೇ ನೋಡಿದರೂ ಹುಲಿರಾಯ ಪರಿಸರ ಸಮತೋಲನದ ಪರಿಸರದ ಸಂಕೇತ. ನಮ್ಮ ರಾಷ್ಟ್ರೀಯ ಪ್ರಾಣಿಗಂಟೆಗೆ 60-65 ಕಿಮೀ ವೇಗದಲ್ಲಿ ಓಡಬಲ್ಲುದಾದರೂ ಹೆಚ್ಚೆಂದರೆ 35-45 ಮೀ.
ಓಡುತ್ತದೆಯಷ್ಟೇ. ಕಾರಣವಿಷ್ಟೇ ಅಷ್ಟರ ಬೇಟೆ ಸಿಕ್ಕರೆ ಆಯಿತು. ಅದಿಲ್ಲದಿದ್ದರೆ ಅನಗತ್ಯ ಶ್ರಮ ವ್ಯರ್ಥ ಮಾಡುವ ಬದಲು ಬೇರೆ ಬೇಟೆ ಹುಡುಕಿಕೊಂಡು ಹೋಗಲಿದೆ.

ಸಾಮಾನ್ಯವಾಗಿ ಹುಲಿಗಳ ತಮ್ಮ ಗುರಿಯನ್ನು ಬದಲಿಸುವುದು ಅಪರೂಪ. ಕಾಡಿನ ವಾಸಿಗಳ ಪ್ರಕಾರ ಒಂದು ಗುರಿಯಿಟ್ಟು ಹುಲಿ ಹೊರಟರೆ, ಅದರ ಪಕ್ಕದಲ್ಲೇ, ಸುಲಭಕ್ಕೆ ಇನ್ನೊಂದು ಮಿಕ ಸಿಕ್ಕರೂ ಅದನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಅಧ್ಯಯನದ ಪ್ರಕಾರ ೧ ಕಿಮೀ ತನಕವೂ ಬೇಟೆಯನ್ನು ಅಟ್ಟಿಸಿಕೊಂಡು ಹೋಗುತ್ತದೆ.

ಅದು ಸಿಕ್ಕ ನಂತರೂ ಒಂದೇ ಸಲಕ್ಕೆ ತಿನ್ನುವುದಿಲ್ಲ. ಸಾಯಿಸಿದ ಪ್ರಾಣಿಯನ್ನು 300 ಮೀ.ಕ್ಕಿಂತಲೂ ಹೆಚ್ಚಿನ ದೂರ ಎಳೆ ದೊಯ್ದು, ಬೇಟೆಯನ್ನು 2-3 ದಿನ ಇಟ್ಟುಕೊಂಡು ತಿಂದು ಮುಗಿಸುತ್ತದೆ. ಒಮ್ಮೆ ಹೊಟ್ಟೆ ತುಂಬಿದ ಮೇಲೆ ಮತ್ತೆ ಹಸಿವಾಗು ವವರೆಗೂ ಯಾವ ಪ್ರಾಣಿಯ ಮೇಲೂ ಎರಗಲು ಹೋಗುವುದಿಲ್ಲ. ಹೀಗಿದ್ದೂ 100 ಬೇಟೆಗಳಲ್ಲಿ ಸರಾಸರಿ ಅದು ಯಶಸ್ಸು ಕಾಣುವುದು 5-7ರಲ್ಲಿ ಮಾತ್ರವಂತೆ.

ಇಷ್ಟಕ್ಕೂ ಹುಲಿ ಯಾವತ್ತಿಗೂ ಹೊಂಚುಹಾಕಿ ಬೇಟೆ ಯಾಡುವುದಿಲ್ಲ. ಕಾಡೆಮ್ಮೆ, ಜಿಂಕೆ, ಮರಿ ಆನೆಗಳ ಮೇಲೆರೆಗಿ ಕೊಂಡು ತಿನ್ನುತ್ತವೆ. ವಿಶೇಷವೆಂದರೆ ಹುಲಿ ನರಭಕ್ಷಕ ಅಲ್ಲವೇ ಅಲ್ಲ. ಇದೊಂದು ಶುದ್ಧಾತಿ ಶುದ್ಧ ಕಟ್ಟುಕಥೆಯಷ್ಟೇ. ಮನುಷ್ಯನನ್ನು ಕೊಲ್ಲವುದು ಆಗಾಗ ಉಂಟಾದರೂ ಅದು ಬೇರೆ ಬೇರೆ ಕಾರಣಕ್ಕೆ. ಮ್ಯಾಂಗ್ರೋವ್ ಕಾಡಿನ ಹುಲಿಗಳು ಮಾತ್ರ ನರಭಕ್ಷಕ
ಪ್ರವೃತ್ತಿಯನ್ನು ಬೆಳೆಸಿಕೊಂಡಿವೆ. ಉಳಿದಂತೆ ತನ್ನ ಜೀವ ರಕ್ಷಣೆಗಾಗಿ ಅವು ನಮ್ಮ ಮೇಲೆರಗುತ್ತವೆ.

ನೀವು ನಂಬಲೇಬೇಕು ಹುಲಿಗಳಿಗೆ ಮನುಷ್ಯರೆಂದರೆ ತೀರಾ ಭಯ. ಅದರಲ್ಲೂ, ಸಂತಾನಾಭಿವೃದ್ಧಿಯ ಸಂದರ್ಭ, ತಾಯಿ ಯಿಂದ ಬೇರ್ಪಟ್ಟು ಸರಹದ್ದನ್ನು ಗುರುತಿಸಿಕೊಳ್ಳುವಾಗ, ಬೇಟೆಯಾಡುವ ಶಕ್ತಿ ಕಳೆದುಕೊಂಡಾಗ, ವಯಸ್ಸಾದ, ಗಾಯ ಗೊಂಡ ಹುಲಿಗಳಿಗೆ ಮನುಷ್ಯನ ಬಗೆಗೆ ತೀರಾ ಭಯವನ್ನು ಹೊಂದಿರುತ್ತವೆ. ಇಂಥ ಸಂದರ್ಭದಲ್ಲಿ ಮಾತ್ರ
ಅವು ಮನುಷ್ಯನನ ಮೇಲೆರಗುವ ಸಾಧ್ಯತೆಗಳಿರುತ್ತವೆ.

ಹುಲಿ ಎಂಥ ಬಲಶಾಲಿಯೆಂದರೆ, ಅದು ಒಮ್ಮೆ ಪಂಜಿನಿಂದ ಹೊಡೆದರೆ ಮನುಷ್ಯನ ಬೆನ್ನು ಮೂಳೆಯೇ ಮುರಿದು ಹೋಗಬಹುದು. ಆ ಹೊಡೆತ ಪ್ರಾಣಿ ಅಥವಾ ಮನುಷ್ಯನ ಮೇಲೆ 140-150 ಕೆಜಿ ಒತ್ತಡ ಸೃಷ್ಟಿಸಬಲ್ಲದು. ಹುಲಿ ಓಡುವಾಗ ಉಗುರುಗಳು ಒಳಕ್ಕಿರಲಿದ್ದು, ಅದು ದಾಳಿ ಮಾಡುವಾಗ ಮಾತ್ರ ಉಗುರುಗಳು ಹೊರಬರುತ್ತದೆ. ಇನ್ನು ಹುಲಿಯ ಮೈಮೇಲಿನ ಪಟ್ಟೆಗಳು ಎಲ್ಲವೂ ಒಂದೇ ರೀತಿಯಾಗಿ ಕಂಡರೂ ಮನುಷ್ಯನ ಬೆರಳಚ್ಚಿನಂತೆ ವಿಭಿನ್ನವಾಗಿರುತ್ತದೆ.

ಸಾಮಾನ್ಯವಾಗಿ ಪ್ರೌಢಾವಸ್ಥೆಗೆ ಬಂದ ಹುಲಿಯ ಪರಿಧಿ 60 ಚದರ ಕಿ.ಮೀ. ಮಲ ಮೂತ್ರ ವಿಸರ್ಜನೆ, ನೆಲವನ್ನು ಕೆರೆದು, ಮರಗಳ ಮೇಲೆ ಗೀರುವ ಮೂಲಕ ತನ್ನ ವ್ಯಾಪ್ತಿಯನ್ನು ಅದು ಗುರುತಿಸಿಕೊಳ್ಳುತ್ತದೆ. ಒಂದು ಗಂಡು ಹುಲಿಯ ವ್ಯಾಪ್ತಿಯಲ್ಲಿ ಎರಡರಿಂದ ಮೂರು ಹೆಣ್ಣು ಹುಲಿಗಳಿರುತ್ತವೆ. ಒಂದೊಮ್ಮೆ ಒಂದರ ವ್ಯಾಪ್ತಿಯಲ್ಲಿ ಇನ್ನೊಂದು ಪ್ರವೇಶಿಸಿದಾಗ ಕಾಳಗವೇ ನಡೆಯುತ್ತದೆ. ಅಂಥ ಕಾಳಗದಲ್ಲಿ ಗೆದ್ದ ವ್ಯಾಘ್ರ ತನ್ನ ಅಧಿಪತ್ಯವನ್ನು ಸಾಧಿಸಿ ಸೋತ ಹುಲಿಯನ್ನು ಓಡಿಸುತ್ತದೆ.

ಒಂದು ಲೆಕ್ಕಾಚಾರದ ಪ್ರಕಾರ ಒಂದು ಹುಲಿಯ ಆಹಾರಕ್ಕೆ ವರ್ಷಕ್ಕೆ ಸರಾಸರಿ 130-150 ಜಿಂಕೆಗಳು ಬೇಕಾಗುತ್ತದೆ. ಅಂದರೆ ಜಿಂಕೆಗಳ ಸಂತತಿ ಜಾಸ್ತಿಯಾಗುತ್ತಿದೆ ಎಂದರೆ ಅಲ್ಲಿ ಹುಲಿಗಳು ಕಣ್ಮರೆಯಾಗಿವೆ ಎಂದರ್ಥ. ಅದೇ ಲೆಕ್ಕಾಚಾರದಲ್ಲೇ ಹುಲಿ ಸಂಖ್ಯೆ ಹೆಚ್ಚಿದ್ದರೆ ಮಾತ್ರ ಕಾಡು ಸಮೃದ್ಧವಾಗಿ ಜೈವಿಕ ಸಮತೋಲನವಾಗುತ್ತದೆ ಎಂಬುದನ್ನು ಜೀವ ವಿಜ್ಞಾನಿಗಳು ಪ್ರತಿ ಪಾದಿಸುವುದು. ಹುಲಿ ಇರಬೇಕೆಂದರೆ ಅದರ ಬೇಟೆಗೆ ಬೇಕಾದ ಸಾಮಾನ್ಯ ಪ್ರಾಣಿಗಳಾದ ಜಿಂಕೆ, ಕಡವೆ, ಕಾಡೆಮ್ಮೆ ಇತ್ಯಾದಿಗಳಿರಬೇಕು.

ಅವುಗಳಿಗೆ ಹಸಿರು, ನೀರು ಕಾಡಿನಲ್ಲಿ ಸಿಗಬೇಕು. ಹಸಿರು- ನೀರು ಇದ್ದರೆ ಕಾಡು ಸಮೃದ್ಧವಾಗಿದೆ ಎಂದರ್ಥ. ಹಾಗಾಗಿಯೇ ಈ ಆಹಾರ ಸರಪಳಿಯಲ್ಲಿ ಹುಲಿ ಸುಸ್ಥಿರ ಪರಿಸರದ ಸಂಕೇತವೆನಿಸಿದೆ. ಆದ್ದರಿಮದಲೇ ನೀರು ಹೆಚ್ಚಿರುವ ಪ್ರದೇಶದಲ್ಲೇ ಹಿಂದೆಲ್ಲ, ಹುಲಿಬನಗಳು, ಹುಲಿಕಟ್ಟೆಗಳು ಸ್ಥಾಪನೆಯಾದದ್ದು. ಇಂದು ವೈಜ್ಞಾನಿಕ ಬೆಳವಣಿಗೆಗಳ ಉತ್ತುಂಗದಲ್ಲಿರುವ ನಾವು ಬದುಕಿನ ತೀರಾ ಅನಿವಾರ್ಯಗಳಾದ ಜೀವ ಅಧ್ಯಯನದ ಬಗೆಗೆ ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ವಹಿಸಿರುವಂತೆ ಕಂಡು ಬರುತ್ತಿದೆ.

ನಮ್ಮ ಪರಿಸರದಲ್ಲಿ ಪ್ರತಿ ದಿನ, ಪ್ರತಿ ಕ್ಷಣವೂ ಬದಲಾವಣೆ, ಬೆಳವಣಿಗೆಗಳಾಗುತ್ತಿದೆ. ಇದನ್ನು ಗುರುತಿಸುವಲ್ಲಿನ ನಮ್ಮ ವೈಫಲ್ಯವೇ, ನೀರಿನ ಕೊರತೆಯಂಥ ಸಮಸ್ಯೆಗಳಿಗೆ ಕಾರಣವಾಗಿದೆ. ಇನ್ನಾದರೂ ಹುಲಿಕಟ್ಟೆಯಂಥವುಗಳನ್ನು ಮೂಢ
ನಂಬಿಕೆಯೆಂದು ಉಡಾ- ಮಾಡುವ ಬದಲಿಗೆ, ಅವುಗಳ ಬಗೆಗೆ ಸಾಂಸ್ಥಿಕ ಅಧ್ಯಯನಕ್ಕೆ ತೊಡಗುವುದು ಒಳಿತು. ಕೊನೆಗೇ ಹೇಳದೇ ಉಳಿದ ಮಾತೆಂದರೆ, ಮೂಲಭೂತ ಅವಶ್ಯಕತೆಗಳ ಲಭ್ಯತೆಯನ್ನು ಗುರುತಿಸುವ ಸಾಮರ್ಥ್ಯ ಪ್ರಾಣಿ-ಪಕ್ಷಿಗಳಲ್ಲಿ ನಮಗಿಂಥ ಕನಿಷ್ಠ ಹತ್ತುಪಟ್ಟು ಹೆಚ್ಚು ಇರುತ್ತದೆ. ಕೊನೇ ಪಕ್ಷ ಅದನ್ನು ಗ್ರಹಿಸುವ ಸೂಕ್ಷ್ಮತೆ ನಮ್ಮದಾದರೆ ಬದುಕು ಈಗಿನ ನೂರು ಪಟ್ಟು ಸುಲಲಿತ. ಇದನ್ನು ಮತ್ತೊಂದು ಹುಲಿ ದಿನಾಚರಣೆ ಮುಗಿಸಿದ ಗಳಿಗೆಯಲ್ಲಿ ಅರ್ಥ ಮಾಡಿಕೊಳ್ಳೋಣ.