ನೂರೆಂಟು ವಿಶ್ವ
vbhat@me.com
ಕೆಲವೊಮ್ಮೆ ಯೋಚಿಸಿದಾಗ ದ್ವೇಷ, ಆಕ್ರೋಶ, ಮುನಿಸು, ಪ್ರತೀಕಾರ, ವ್ಯಕ್ತಿಗತ ಮೇಲಾಟಗಳೆಲ್ಲ ತೀರಾ ಕ್ಷುಲ್ಲಕ ವೆನಿಸುತ್ತವೆ. ಸುಖಾಸುಮ್ಮನೆ ಯಾರದೋ ವಿರುದ್ಧ ಜಗಳಕ್ಕೆ ನಿಲ್ಲುತ್ತೇವೆ. ಅದೇ ದ್ವೇಷಕ್ಕೆ ತಿರುಗುತ್ತದೆ. ಆ ದ್ವೇಷವನ್ನೂ ಶಿಸ್ತಾಗಿ, ಪೈಟಾಗಿ, ಸಾಧಿಸಲು ಆಗದೇ ಸೋಲುತ್ತೇವೆ. ಯಾರ ವಿರುದ್ಧ ಹಗೆತನಕ್ಕೆ ಬಿದ್ದಿದ್ದೇವೋ ಅವರ ಜತೆಗೇ ಸ್ನೇಹ ಹಸ್ತ ಚಾಚುವಂಥ ಪ್ರಸಂಗ ಬರುತ್ತದೆ.
ಜೀವನದಲ್ಲಿ ಇಂಥದೊಂದು ಪ್ರಸಂಗ ಬರಲಿಕ್ಕಿಲ್ಲ ಎಂದುಕೊಳ್ಳುತ್ತೇವೆ. ಬಂದರೂ ನನ್ನ ನಿಲುವು ಬದಲಿಸಲಾರೆ ಎಂಬ ಧಾಷ್ಟ್ಯ ಮೆರೆಯುತ್ತೇವೆ. ಆದರೆ ‘ಕಾಲನ ಕಿರ್ದಿ’ಯೇ ಬೇರೆಯದಿರುತ್ತದೆ. ನಮ್ಮ ಧಾಷ್ಟ್ಯದ ಬಾಲ ನಮ್ಮ ಮುಂದೆಯೇ ಮುದುಡಿಕೊಳ್ಳು ವಂತಾಗುತ್ತದೆ. ಯಾವುದು ಅಸಂಭವನೀಯ ಅಂದುಕೊಂಡಿರುತ್ತೇವೆಯೋ ಅದೇ ಸಂಭವಿಸಿರುತ್ತದೆ. ಈ ಬದುಕು ನಮ್ಮನ್ನು ಯಾವ ಮುರುಕಿ ಯಲ್ಲಾದರೂ ತಂದು ನಿಲ್ಲಿಸಬಹುದು. ಎಲ್ಲೆಂದರಲ್ಲಿ ನಿಲ್ಲಿಸಿ ಮಾನ ಕಳೆಯಬಹುದು, ಕುಬ್ಜರನ್ನಾಗಿಸಬಹುದು. ಯಾರ ಮುಂದೆ ಎದೆ ಸೆಟೆಸಿರುತ್ತವೆಯೋ ಅವರ ಮುಂದೆಯೇ ಶಿರಬಾಗಿ ‘ಅಂಬೋ’ ಎನ್ನಬೇಕಾಗಿ ಬರಬಹುದು.
ಈ ಮಾತುಗಳು ಘಟನೆಯಾಗಿ ಕೆನೆಕಟ್ಟಿಕೊಳ್ಳುವಾಗ ನನಗೆ ನೆನಪಾಗುವುದು ‘ಸಂಯುಕ್ತ ಕರ್ನಾಟಕ’ದ ಶಾಮರಾಯರು
ಹಾಗೂ ಉದ್ಯಮಿ ವಿಜಯ ಸಂಕೇಶ್ವರರು. ಇವರಿಬ್ಬರ ಸ್ನೇಹ ಹಾಗೂ ಜಟಾಪಟಿಯ ಮೂಲ ‘ವಿಜಯ ಕರ್ನಾಟಕ’ ಪತ್ರಿಕೆಯ ಹುಟ್ಟಿನ ಮೂಲವೂ ಹೌದು ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಎರಡು ದಶಕಗಳ ಹಿಂದೆ ಒಂದು ದಿನ ‘ಸಂಯುಕ್ತ ಕರ್ನಾಟಕ’ ಹುಬ್ಬಳ್ಳಿ ಆವೃತ್ತಿಯಲ್ಲಿ ಸಂಕೇಶ್ವರರ ವಿರುದ್ಧ ಒಂದು ವರದಿ ಪ್ರಕಟವಾಯಿತು. ಸಂಕೇಶ್ವರರು ಆಗ ಧಾರವಾಡ- ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು. ಆ ವರದಿಯಿಂದ ಅವರಿಗೆ ಬೇಸರವಾಯಿತು. ಸಂಕೇಶ್ವರರು ಭಾಗವಹಿಸಿದ ಕಾರ್ಯಕ್ರಮಗಳ ಫೋಟೊಗಳು ‘ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟವಾಗುತ್ತಿರಲಿಲ್ಲ. ಒಮ್ಮೆ ಆದರೂ ಸಂಕೇಶ್ವರರ ಚಿತ್ರವನ್ನಷ್ಟೇ ಎಡಿಟ್ ಮಾಡಿ ಪ್ರಕಟಿಸುತ್ತಿದ್ದರು.
ಆದರೂ ಸಂಕೇಶ್ವರರು ಇವನ್ನೆಲ್ಲ ತೀರಾ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ‘ಸಂಯುಕ್ತ ಕರ್ನಾಟಕ’ ಏಕಾಏಕಿ ತಮ್ಮ ವಿರುದ್ಧ ತಿರುಗಿ ಬಿದ್ದ ನಿರ್ಧಾರದಿಂದ ಅವರಿಗೆ ಸಖೇದಾಶ್ಚರ್ಯ ಹಾಗೂ ನೋವುಂಟಾಗಿತ್ತು. ಆದರೆ ಅದಾಗಿ ಹದಿನೈದು ದಿನಗಳ ನಂತರ ಸಂಕೇಶ್ವರ ಅವರ ಮಾಲೀಕತ್ವದ ವಿಆರ್‌ಎಲ್ ಸಂಸ್ಥೆ ವಿರುದ್ಧ ‘ಸಂಯುಕ್ತ ಕರ್ನಾಟಕ’ದಲ್ಲಿ ಸತ್ಯಕ್ಕೆ ದೂರವಾದ ಮತ್ತೊಂದು ವರದಿ ಪ್ರಕಟವಾಯಿತು. ಇದಕ್ಕೆ ಪ್ರಚೋದನೆ ಏನಿತ್ತೋ ಗೊತ್ತಿಲ್ಲ.
ಇದರಿಂದ ಸಂಕೇಶ್ವರರು ಅತೀವ ಮನನೊಂದರು. ವಸ್ತುಸ್ಥಿತಿಯನ್ನು ವಿವರಿಸಿ, ಸೃಷ್ಟೀಕರಣ ನೀಡಿ ಪತ್ರಿಕೆಗೆ ಕಳಿಸಿಕೊಟ್ಟರೆ, ‘ಸಂಯುಕ್ತ ಕರ್ನಾಟಕ’ದಲ್ಲಿ ಅದು ಪ್ರಕಟವಾಗಲಿಲ್ಲ. ಸಂಕೇಶ್ವರರಿಗೆ ಅದು ಅರ್ಥವಾಗಲಿಲ್ಲ. ವಿನಾಕಾರಣ ‘ಸಂಯುಕ್ತ ಕರ್ನಾಟಕದಂಥ ಪ್ರಮುಖ, ಪ್ರಭಾವಿ ಪತ್ರಿಕೆಯೊಂದು ತಮ್ಮ ವಿರುದ್ಧ ತಿರುಗಿಬಿದ್ದು, ನಕಾರಾತ್ಮಕ ವರದಿಗಳನ್ನು ಪದೇಪದೆ ಪ್ರಕಟಿಸುತ್ತಿರುವುದರ ಉದ್ದೇಶ, ಹಿನ್ನೆಲೆ ಅರ್ಥವಾಗಲಿಲ್ಲ.
ಖುದ್ದಾಗಿ ಶಾಮರಾಯರನ್ನೇ ಭೇಟಿ ಮಾಡಲು ನಿರ್ಧರಿಸಿದರು. ಸಪತ್ನೀಕರಾಗಿ ಸಂಕೇಶ್ವರರು ರಾಯರನ್ನು ಭೇಟಿ ಮಾಡಿ, ಹಣ್ಣು, ಹಾರ, ಶಾಲು ಸಮರ್ಪಿಸಿ ಬಂದರು. ಅಲ್ಲಿಗೆ ಶಾಮರಾಯರು ಸಂತೃಪ್ತರಾಗಬಹುದು, ಅವರ ಅಹಂ ಶಾಂತವಾಗ ಬಹುದು ಎಂದು ಸಂಕೇಶ್ವರರು ಭಾವಿಸಿದರು. ಮರುದಿನ ಪತ್ರಿಕೆಯಲ್ಲಿ ಪುನಃ ಸಂಕೇಶ್ವರರ ವಿರುದ್ಧ ಮತ್ತೊಂದು ವರದಿ ಪ್ರಕಟವಾಗಿತ್ತು! ಸಂಕೇಶ್ವರರ ಅಸಹನೆಯ ನಾಗರ ಹೆಡೆ ಎತ್ತಿದ್ದು ಆಗ !
‘ನಾನೂ ಒಂದು ದಿನ ಪತ್ರಿಕೆಯನ್ನು ಆರಂಭಿಸುತ್ತೇನೆ’ ಎಂದು ವಿಜಯ ಸಂಕೇಶ್ವರರು ಹೂಂಕರಿಸಿದರು. ಆಗ ಯಾರೂ ಸಂಕೇಶ್ವರರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪತ್ರಿಕೋದ್ಯಮದ ಅಂದಿನ ಗುಣಲಕ್ಷಣ, ಪರಿಸ್ಥಿತಿಗಳೇ ಹಾಗಿದ್ದವು. ‘ಸಂಯುಕ್ತ ಕರ್ನಾಟಕ’ದ ಮುಂದೆ ಹುಬ್ಬಳ್ಳಿಯಲ್ಲಿ ಬೇರೆ ಪತ್ರಿಕೆಯನ್ನು ಊಹಿಸಿಕೊಳ್ಳುವ ಮಾತೇ ಇರಲಿಲ್ಲ. ಅಲ್ಲದೇ ಅಷ್ಟಕ್ಕೂ ಪತ್ರಿಕೋದ್ಯಮಕ್ಕೂ, ಸಂಕೇಶ್ವರರಿಗೂ ಯಾವ ಸಂಬಂಧವೂ ಇರಲಿಲ್ಲ. ಲಾರಿ ಮಾಲೀಕರು ಸಹ ಪತ್ರಿಕೆ ಆರಂಭಿಸುತ್ತೇನೆ ಎಂದು ಹೇಳುವಷ್ಟು ಕನ್ನಡ ಪತ್ರಿಕೋದ್ಯಮ ಕೆಟ್ಟುಹೋಯಿತಾ ಎಂದು ಜನ, ಪತ್ರಕರ್ತರು ಆಡಿಕೊಂಡು ನಕ್ಕರು.
ಶಾಮರಾಯರು ಸಹ ಇಂಥದೇ ಉಡಾಫೆಯ ಮಾತುಗಳನ್ನು ಅನೇಕ ಸಭೆ, ಸಮಾರಂಭಗಳಲ್ಲಿ ಹೇಳಿದರು. ಆದರೆ ಇತ್ತ ಸಂಕೇಶ್ವರರು ತಮ್ಮ ನಿರ್ಧಾರಕ್ಕೆ ಕಾವುಕೊಡಲು ಶುರು ಮಾಡಿದರು. ಹೋದಲ್ಲಿ ಬಂದಲ್ಲಿ ತಾವೂ ಹೊಸ ಪತ್ರಿಕೆ ಆರಂಭಿ ಸುವುದಾಗಿ ಹೇಳಲಾರಂಭಿಸಿದರು. ಅಲ್ಲದೇ ದೆಹಲಿಗೆ ಹೋಗಿ ‘ವಿಜಯ ಕರ್ನಾಟಕ’ ಎಂಬ ಟೈಟಲ್ಲನ್ನೂ ಗಿಟ್ಟಿಸಿಕೊಂಡು ಬಂದರು.
‘ಹೌದಾ !?’ ಎಂದು ರಾಯರು ಉದ್ಗಾರ ತೆಗೆದಿದ್ದು ಆಗ. ಸಂಕೇಶ್ವರರು ತಮ್ಮ ಘೋಷಣೆಯನ್ನು ಕಾರ್ಯಗತಗೊಳಿಸುವಲ್ಲಿ ಇಷ್ಟು ಸೀರಿಯಸ್ ಆಗಿದ್ದಾರೆಂಬುದರ ಲವಲೇಶವೂ ರಾಯರಿಗೆ ಇರಲಿಲ್ಲ. ಟೈಟಲ್ ಸಿಕ್ಕ ಕೆಲವೇ ದಿನಗಳಲ್ಲಿ ‘ಸಂಯುಕ್ತ ಕರ್ನಾಟಕ’ದ ಪ್ರಸಾರ ಹಾಗೂ ಆಡಳಿತ ವಿಭಾಗದ ಕೆಲವು ಹಿರಿಯ ಉದ್ಯೋಗಿಗಳನ್ನು ಸಂಕೇಶ್ವರರು ತಾವು ಆರಂಭಿಸ ಲಿರುವ ಹೊಸ ಪತ್ರಿಕೆಗೆ ಸೇರಿಸಿಕೊಂಡರು. ಅಪಾಯದ ಸೂಚನೆಗಳು ರಾಯರಿಗೆ ಸಿಗಲಾರಂಭಿಸಿದವು. ರಾಯರು ತಕ್ಷಣ ಎಚ್ಚೆತ್ತುಕೊಂಡರು.
ಬಿಜೆಪಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾದ ಶಾಮರಾಯರು, ಅವರ ಪಕ್ಷದ ಲೋಕಸಭಾ
ಸದಸ್ಯರಾದ ಸಂಕೇಶ್ವರರ ಮೇಲೆ ಪ್ರಭಾವ ಬೀರಿ, ಪತ್ರಿಕೆ ಆರಂಭಿಸುವ ನಿರ್ಧಾರವನ್ನು ಕೈ ಬಿಡುವಂತೆ ಒತ್ತಡ ಹೇರಲು ತೀರ್ಮಾನಿಸಿದರು. ಶಾಮರಾಯರ ಕೋರಿಕೆಗೆ ಯಡಿಯೂರಪ್ಪನವರು ಒಪ್ಪಿದರು. ಇಬ್ಬರೂ ಸೇರಿ, ಸಂಕೇಶ್ವರರನ್ನು ಭೇಟಿ ಮಾಡಿದರು. ‘ಯಾವುದೇ ಕಾರಣಕ್ಕೂ ಹಠ ಹಿಡಿಯಬೇಡಿ. ಪತ್ರಿಕೆ ಆರಂಭಿಸಬೇಡಿ. ‘ಸಂಯುಕ್ತ ಕರ್ನಾಟಕ’ದಂಥ ಪತ್ರಿಕೆ ವಿರುದ್ಧ ಜಗಳಕ್ಕೆ ನಿಲ್ಲುವುದು ಸರಿಯಲ್ಲ. ಕೆಲವು ತಪ್ಪುಗ್ರಹಿಕೆಗಳಿಂದ ಹೀಗಾಗಿದೆ.
ಇನ್ನು ಮುಂದೆ ಹಾಗೆ ಆಗುವುದಿಲ್ಲ ಎಂದು ಶಾಮರಾಯರು ಭರವಸೆ ಕೊಡುತ್ತಾರೆ. ಯಾವುದೇ ಕಾರಣಕ್ಕೂ ಹೊಸ ಪತ್ರಿಕೆ
ಆರಂಭಿಸಬೇಡಿ’ ಎಂದು ಯಡಿಯೂರಪ್ಪನವರು ಶಾಮರಾಯರ ಪರ ಬ್ಯಾಟಿಂಗ್ ಮಾಡಿದರು. ಆದರೆ ಸಂಕೇಶ್ವರರು ಜಗ್ಗಲಿಲ್ಲ. ‘ನನ್ನ ತೀರ್ಮಾನದಲ್ಲಿ ಸ್ವಲ್ಪವೂ ಬದಲಾವಣೆ ಇಲ್ಲ. ಇಟ್ಟ ಹೆಜ್ಜೆ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ‘ಸಂಯುಕ್ತ ಕರ್ನಾಟಕ’ ಮಣಿಸಲೆಂದೇ ನಾನು ಪತ್ರಿಕೆ ಆರಂಭಿಸುತ್ತಿದ್ದೇನೆ.
ಏನಾಗುವುದೋ ಆಗಲಿ, ನೋಡೋಣ. ನಾನಂತೂ ನನ್ನ ತೀರ್ಮಾನ ಬದಲಿಸಲಾರೆ’ ಎಂದು ಸಂಕೇಶ್ವರರು ಖಡಾಖಡಿ ಯಡಿಯೂರಪ್ಪನವರಿಗೆ, ಶಾಮರಾಯರಿಗೆ ಹೇಳಿದರು. ಇಬ್ಬರೂ ಬರಿಗೈಲಿ ವಾಪಸ್ಸಾದರು. ಶಾಮರಾಯರ ಮುಂದೆ ತಮ್ಮ ಪಕ್ಷದ ಕಿರಿಯ ನಾಯಕರೊಬ್ಬರು ತಮ್ಮ ಮಾತಿಗೆ ಸೊಪ್ಪು ಹಾಕದ್ದರಿಂದ ಸ್ವಾಭಾವಿಕವಾಗಿ ಯಡಿಯೂರಪ್ಪನವರು ಅಸಮಾ ಧಾನ ಗೊಂಡಿದ್ದರು. ಅಲ್ಲದೇ ಇವರಿಬ್ಬರ ಜಗಳದಿಂದ ಶಾಮರಾಯರ ಸ್ನೇಹ ಕಳಚಿಹೋಗಿ ಪಕ್ಷಕ್ಕೆ ‘ಸಂಯುಕ್ತ ಕರ್ನಾಟಕ’ ದಂಥ ಪತ್ರಿಕೆಯ ಸಹಕಾರ ಕೈತಪ್ಪಿ ಹೋಗಬಹುದೆಂಬ ಸಣ್ಣ ಅಳುಕು ಯಡಿಯೂರಪ್ಪ ನವರದ್ದಾಗಿತ್ತು. ಕೊನೆಗೂ ಸಂಕೇಶ್ವರರು ಜಗ್ಗಲಿಲ್ಲ.
‘ವಿಜಯ ಕರ್ನಾಟಕ’ ಆರಂಭಿಸಿಯೇ ಬಿಟ್ಟರು. ಅವರ ಈ ಪತ್ರಿಕೆ ಆರಂಭವಾಗಿದ್ದರೆ ಅದಕ್ಕೆ ಮೂಲ ಪ್ರೇರಣೆ ಶಾಮರಾಯರೇ.
‘ಸಂಯುಕ್ತ ಕರ್ನಾಟಕ’ದಲ್ಲಿ ಬೆಂಬಿಡದೇ ತಮ್ಮ ವಿರುದ್ಧ ಬರೆಯಿಸದಿದ್ದರೆ, ‘ವಿಜಯ ಕರ್ನಾಟಕ’ ಆರಂಭಿಸುವ ಗೋಜಿಗೇ ಸಂಕೇಶ್ವರರು ಹೋಗುತ್ತಿರಲಿಲ್ಲ. ಈ ವಿಷಯದಲ್ಲಿ ಕಾಲು ಕೆರೆದು ಜಗಳಕ್ಕೆ ಹೋದವರು ಶಾಮರಾಯರೇ. ಈ ಜಗಳ ಮುಂದೇನಾಯಿತು ಎಂಬುದು ಕರ್ನಾಟಕದ ಜನತೆಗೆ ಗೊತ್ತಿರುವ ವಿಚಾರ. ‘ವಿಜಯ ಕರ್ನಾಟಕ’ ಪತ್ರಿಕೆ ಆರಂಭವಾದ ಒಂದೂಕಾಲು ವರ್ಷದ ನಂತರ, ನಾನು ಅನಂತಕುಮಾರ ಅವರನ್ನು ಬಿಟ್ಟು, ಸಂಕೇಶ್ವರರ ಪತ್ರಿಕೆಗೆ ಪ್ರಧಾನ ಸಂಪಾದಕ ನಾಗಿ ಸೇರಿದೆ.
ಇದಕ್ಕೂ ಏಳೆಂಟು ತಿಂಗಳುಗಳ ಹಿಂದೆ, ‘ಸಂಯುಕ್ತ ಕರ್ನಾಟಕ’ದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಹಠಾತ್ ಬೆಳವಣಿಗೆ ಯೊಂದರಲ್ಲಿ, ಶಾಮರಾಯರನ್ನು ಲೋಕಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ‘ಸಂಯುಕ್ತ ಕರ್ನಾಟಕ’ದ ವ್ಯವಸ್ಥಾಪಕ ಸಂಪಾದಕ ಹುದ್ದೆಯಿಂದ ಅಮಾನತುಗೊಳಿಸುವ ನಿರ್ಧಾರವನ್ನು ಅಂದಿನ ಧರ್ಮದರ್ಶಿಗಳ ಮಂಡಳಿ ತೆಗೆದುಕೊಂಡಿತು. ಹಾರನಹಳ್ಳಿ ರಾಮಸ್ವಾಮಿಯವರು ನೂತನ ಮಂಡಳಿ ಅಧ್ಯಕ್ಷರಾದರು. ಅಂದು ನಡೆದ ‘ರಕ್ತರಹಿತ ಕ್ರಾಂತಿ’ಯಲ್ಲಿ ಶಾಮರಾಯರ ಮೇಲೆ ಕೆಲವು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ, ‘ಸಂಯುಕ್ತ ಕರ್ನಾಟಕ’ದಿಂದ ಹೊರಹಾಕ ಲಾಯಿತು.
ಇದನ್ನು ರಾಯರು ಕನಸು-ಮನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ‘ನಾನು ‘ಸಂಯುಕ್ತ ಕರ್ನಾಟಕ’ದ ಧರ್ಮದರ್ಶಿ ಮಂಡಳಿಗೆ ಯಾರನ್ನು ಕರೆದುಕೊಂಡು ಬಂದೆನೋ, ಅವರೇ ನನಗೆ ದ್ರೋಹ ಮಾಡಿ ನನ್ನನ್ನು ಓಡಿಸಿದರು’ ಎಂದು ರಾಯರು ಆರೋಪಿಸಿದರು. ರಾಯರು ಅದೆಷ್ಟು ಕ್ರುದ್ಧರಾಗಿದ್ದರೆಂದರೆ, ಅಂದು ಅವರು ಹಾರನಹಳ್ಳಿ ರಾಮಸ್ವಾಮಿ ಅವರ ಮೈಮೇಲೆ ಕೈಮಾಡಲು ಎಗರಿ ಹೋಗಿದ್ದರು. ಆದರೆ ನ್ಯಾಯಬದ್ಧವಾಗಿ, ವ್ಯವಸ್ಥಿತವಾಗಿ ರಾಯರನ್ನು ಅಲ್ಲಿಂದ ಓಡಿಸುವ ಸಂಚು
ರೂಪಿತವಾಗಿತ್ತು. ಅದು ಕೊನೆಕ್ಷಣದ ತನಕ ಅವರಿಗೆ ಗೊತ್ತಾಗಲಿಲ್ಲ. ರಾಯರು ಕಂಡಕಂಡವರ ಮನೆ ಅಲೆದರು.
ಈ ಹೋರಾಟದಲ್ಲಿ ತಮ್ಮನ್ನು ಬೆಂಬಲಿಸುವಂತೆ ಅಂಗಲಾಚಿದರು ಆದರೆ ಯಾರೂ ಅವರ ಕೈ ಹಿಡಿಯಲಿಲ್ಲ. ವಯಸ್ಸು ಬೇರೆ
ಅವರ ಪರವಾಗಿರಲಿಲ್ಲ. ನಿನ್ನೆ ಮೊನ್ನೆ ತನಕ ರಾಯರ ಜತೆಯಿದ್ದವರು, ಕ್ರಮೇಣ ಕ್ಯಾಂಪು ಬದಲಿಸಿದರು. ರಾಯರು ಏಕಾಂಗಿ ಯಾದರು. ಈ ಮಧ್ಯೆ, ಲೋಕಶಿಕ್ಷಣ ಟ್ರಸ್ಟ್‌ನ ಆಸ್ತಿ ಕಬಳಿಸಲು ರಾಯರು ನಡೆಸಿದ್ದಾರೆ ಎನ್ನಲಾದ ಹಲವು ಪ್ರಕರಣಗಳ ಪಟ್ಟಿಯನ್ನು ನೂತನ ಧರ್ಮದರ್ಶಿಗಳ ಮಂಡಳಿಯು ಬಿಡುಗಡೆ ಮಾಡಿತು. ಅವನ್ನೆಲ್ಲ ಪತ್ರಿಕೆಯಲ್ಲಿಯೂ ಪ್ರಕಟಿಸಿತು. ರಾಯರನ್ನು ಖಳನಾಯಕನನ್ನಾಗಿ ಮಾಡುವ, ಸಂದೇಹದಿಂದ ನೋಡುವ ವಾತಾವರಣ ನಿರ್ಮಾಣವಾಯಿತು. ರಾಯರ ಜತೆಗಿದ್ದ ಕೆಲವರು ಸಹ ಕ್ರಮೇಣ ಅವರಿಂದ ದೂರವಾದರು.
ರಾಯರ ವಿರುದ್ಧ ಲೋಕಶಿಕ್ಷಣ ಮಂಡಳಿಯು ಕೋರ್ಟಿಗೆ ಹೋಯಿತು. ಶಾಮರಾಯರು ಜರ್ಝರಿತರಾದರು. ತಾವೇ ಕಟ್ಟಿದ
ಸಾಮ್ರಾಜ್ಯದಿಂದ ತಿರಸ್ಕೃತರಾದ ರಾಯರು, ತಮ್ಮ ಜೀವಿತದ ಕೊನೆಗಾಲದಲ್ಲಿ ತೀವ್ರ ಮುಖಭಂಗ ಹಾಗೂ ಅವಮಾನ
ಅನುಭವಿಸಿದರು. ಅಧಿಕಾರದಲ್ಲಿದ್ದ ಯಾರೂ ಅವರ ನೆರವಿಗೆ ಹತ್ತಿರ ಸುಳಿಯಲಿಲ್ಲ. ನಾನು ‘ವಿಜಯ ಕರ್ನಾಟಕ’ ಸೇರಿದ ಬಳಿಕ, ರಾಯರನ್ನು ನೋಡಲು ಆಗಾಗ ಅವರ ಮನೆಗೆ ಹೋಗುತ್ತಿದ್ದೆ. ರಾಯರು ಅಕ್ಷರಶಃ ನೇಪಥ್ಯಕ್ಕೆ ಸೇರಿದ್ದರು. ಆರೋಗ್ಯವೂ ಕೈಕೊಡುತ್ತಿತ್ತು. ಅವರನ್ನು ಆ ಸ್ಥಿತಿಯಲ್ಲಿ ನೋಡುವುದು ಸಾಧ್ಯವಿರಲಿಲ್ಲ.
ಇಡೀ ಸರಕಾರವನ್ನು ತನ್ನ ಅಣತಿಯಂತೆ ಆಡಿಸುತ್ತಿದ್ದ ವ್ಯಕ್ತಿ ಅಸಹಾಯಕರಾಗಿ, ಕಂಗಾಲಾಗಿ, ಸೋತು ಕೃಶವಾಗಿ ಕುಳಿತುಬಿಟ್ಟಿದ್ದರು. ತಮ್ಮ ಆಟ ಮುಗಿಯಿತು ಎಂಬುದು ಅವರಿಗೆ ಎಲ್ಲೋ ಗೊತ್ತಾಗಿತ್ತು. ನನಗೆ ತೀವ್ರ ನೋವು ವಿಷಾದ ವಾಗುತ್ತಿದ್ದುದೇ ಅಲ್ಲಿ. ಕಾರಣ ಈ ಸಂಗತಿಯೇ ಅವರನ್ನು ದಿನದಿಂದ ದಿನಕ್ಕೆ ದುರ್ಬಲರನ್ನಾಗಿ ಮಾಡುತ್ತಿತ್ತು. ರಾಯರನ್ನು ಹೇಗಾದರೂ ಮಾಡಿ ಎಂಗೇಜ್ ಮಾಡಬೇಕಿತ್ತು. ಅವರ ಗಮನವನ್ನು ಬೇರೆಡೆ ಸೆಳೆಯುವುದು ಅಗತ್ಯವಾಗಿತ್ತು.
ಆಗ ನಾನೊಂದು ಉಪಾಯ ಮಾಡಿದೆ. ವಿಜಯ ಸಂಕೇಶ್ವರ ಬಳಿ ಬಂದು, ‘ಸಾರ್, ಒಂದು ಪ್ರಸ್ತಾಪ ಹೇಳಬೇಕೆಂದಿರುವೆ. ಶಾಮರಾಯರಿಂದ ಒಂದು ಅಂಕಣ ಬರೆಯಿಸಿದರೆ ಹೇಗೆ? ನೀವು ಹೂಂ ಅಂದ್ರೆ ಅವರ ಹತ್ತಿರ ಮಾತಾಡುತ್ತೇನೆ. ಶಾಮ ರಾಯರು ಬರೆಯಲು ಒಪ್ಪಿದರೆ, ಅದೊಂದು ಮಹತ್ವದ ಘಟನೆಯಾಗುವುದರಲ್ಲಿ ಸಂದೇಹವಿಲ್ಲ’ ಎಂದೆ.
ಸಂಕೇಶ್ವರರದು ದೊಡ್ಡ ಮನಸ್ಸು. ಅವರು ಎಂದೂ ಸಣ್ಣದಾಗಿ, ಸೀಮಿತ ದೃಷ್ಟಿಕೋನವಿಟ್ಟುಕೊಂಡು ಯೋಚಿಸಿದವರಲ್ಲ. ‘ಆಯಿತು’ ಎಂದರು. ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ, ಒಂದೋ ಬೇಡ ಎನ್ನುತ್ತಿದ್ದರು. ಇಲ್ಲವೇ ಯೋಚಿಸಿ ತಿಳಿಸುತ್ತೇನೆ, ನೋಡೋಣ ಎಂದು ಸಾಗಹಾಕುತ್ತಿದ್ದರು. ಯಾರ ವಿರುದ್ಧ ತೊಡೆ ತಟ್ಟಿ ‘ವಿಜಯ ಕರ್ನಾಟಕ’ ಆರಂಭಿಸಿದ್ದರೋ, ಅದೇ ವ್ಯಕ್ತಿಗೆ ತಮ್ಮ ಪತ್ರಿಕೆಯಲ್ಲಿ ಅಂಕಣ ಬರೆಯಲು ಜಾಗ ಕೊಡುವುದು, ಸಣ್ಣ ಮಾತಾಗಿರಲಿಲ್ಲ. ‘ ಶಾಮರಾಯರು ಬರೆಯಲು ಒಪ್ಪಿದರೆ, ನನ್ನದೇನೂ ಅಭ್ಯಂತರವಿಲ್ಲ’ ಎಂದರು ಸಂಕೇಶ್ವರರು.
ಆಗ ಶಾಮರಾಯರ ಬಳಿ ಬಂದು, ‘ನಿಮಗೆ ಪತ್ರಿಕೆ ಇಲ್ಲ ಎಂಬ ಭಾವನೆ ಬರಕೂಡದು. ನೀವು ಒಪ್ಪಿದರೆ, ‘ವಿಜಯ ಕರ್ನಾಟಕ’ದಲ್ಲಿ ವಾರ ವಾರ ಅಂಕಣ ಬರೆಯಬಹುದು’ ಎಂದು ಪೀಠಿಕೆ ಹಾಕಿದೆ. ರಾಯರು ಇದನ್ನು ನಿರೀಕ್ಷಿಸಿರಲಿಲ್ಲ.
‘ನೀನೇನೋ ಬರೀ ಅಂತ ಹೇಳ್ತೀಯಪ್ಪ. ಆದರೆ ನಿನ್ನ ಮಾಲೀಕ ಸಂಕೇಶ್ವರ ಒಪ್ಪಬೇಕಲ್ಲ’ ಎಂದರು ರಾಯರು.
‘ಸಂಕೇಶ್ವರರು ಈಗಾಗಲೇ ಒಪ್ಪಿದ್ದಾರೆ. ನೀವು ‘ವಿಜಯ ಕರ್ನಾಟಕ’ದಲ್ಲಿ ಬರೆದರೆ ಅವರಿಗೂ ಸಂತೋಷವೇ,’ ಎಂದೆ.
ಶಾಮರಾಯರು ಈ ಎಲ್ಲವನ್ನು ಕನಸು, ಮನಸಿನಲ್ಲಿಯೂ ಊಹಿಸಿರಲಿಲ್ಲ.
ತನ್ನ ಧೋರಣೆಯಿಂದ ಜನ್ಮ ತಾಳಿದ ಪತ್ರಿಕೆಯಲ್ಲಿ ತಾನೊಂದು ಅಂಕಣ ಬರೆಯಬೇಕಾಗಿ ಬರಬಹುದೆಂಬ ಸಣ್ಣ ಸುಳಿವು ಅವರ ಮನದ ಮೂಲೆಯಲ್ಲೂ ಟಿಸಿಲೊಡೆದಿರಲಿಕ್ಕಿಲ್ಲ. ಆದರೆ ಕಾಲವೇ ಅಂಥ ವಿಚಿತ್ರ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಯಾವುದು
ಅಸಾಧ್ಯವೋ, ಅಸಂಭವವೋ ಅದೇ ಕಣ್ಣೆದುರು ನಿಜವಾಗುವಂತೆ ಮಾಡಿತ್ತು. ‘ವಿಜಯ ಕರ್ನಾಟಕ’ದಲ್ಲಿ ಶಾಮರಾಯರು ಅಂಕಣ ಬರೆಯಲಿದ್ದಾರೆ ಎಂಬ ಪ್ರಕಟಣೆಯನ್ನು ಮುಖಪುಟದಲ್ಲಿ ಪ್ರಕಟಿಸಿದೆ.
ಅದು ‘ಭೂಕಂಪಕ್ಕೆ ಸಮನಾದುದು’ ಎಂದು ಅನೇಕರು ಅಭಿಪ್ರಾಯಪಟ್ಟರು. ಅಕ್ಷರಶಃ ಕನ್ನಡ ಪತ್ರಿಕೋದ್ಯಮದಲ್ಲಿ ಅಂದು ಕಂಪನವುಂಟಾಗಿತ್ತು. ಶಾಮರಾಯರು ಸಂಕೇಶ್ವರರ ಪತ್ರಿಕೆಯಲ್ಲಿ ಬರೆಯುವುದೆಂದರೇನು? ಯಾರ ವಿರುದ್ಧ ತೊಡೆತಟ್ಟಿ ಪತ್ರಿಕೆ ಆರಂಭಿಸಿದರೋ, ಅವರಿಂದ ಅಂಕಣ ಬರೆಸುವುದೆಂದರೇನು? ಅವರು ಬರೆಯುವುದೆಂದರೇನು? ಅನೇಕರಿಗೆ ಗೊಂದಲ, ಗೋಜಲು, ಎಲ್ಲವೂ ಅಸ್ಪಷ್ಟ. ಇಲ್ಲಿ ಶಾಮರಾಯರ ಸಹೃದಯತೆಯನ್ನೂ ಶ್ಲಾಘಿಸಲೇಬೇಕು.
‘ವಿಜಯ ಕರ್ನಾಟಕ’ದಲ್ಲಿ ಅಂಕಣ ಬರೆಯಿರಿ ಎಂದಾಗ, ತಮ್ಮ ಹಳೆಯ ರಾಗ, ದ್ವೇಷಗಳನ್ನು ಪರಿಗಣಿಸಲಿಲ್ಲ. ಮರುಮಾತಾ ಡದೇ ಒಪ್ಪಿಕೊಂಡರು. ಅದಾಗಿ ಒಂದು ವರ್ಷದ ನಂತರ, ‘ವಿಜಯ ಕರ್ನಾಟಕ’ ನಂಬರ್ 1 ಆದ ಸಂದರ್ಭದಲ್ಲಿ ಏರ್ಪಡಿಸಿದ ಸಂತೋಷಕೂಟಕ್ಕೆ ರಾಯರನ್ನು ಆಹ್ವಾನಿಸಿದಾಗ, ಎಲ್ಲ ಮರೆತು ಬಂದಿದ್ದರು. ಅಷ್ಟೇ ಅಲ್ಲ, ಸಂಕೇಶ್ವರರನ್ನು ಅಭಿಮಾನ ದಿಂದ ಆಲಂಗಿಸಿಕೊಂಡರು. ಶಾಮರಾಯರು ಅಂದು ಸಂಕೇಶ್ವರರನ್ನು ಆ ಪರಿಪತ್ರಿಕೆಯಲ್ಲಿ ಕಾಡದೇ ಇದ್ದಿದ್ದರೆ, ‘ವಿಜಯ ಕರ್ನಾಟಕ’ ಹಾಗೂ ‘ವಿಜಯವಾಣಿ’ ಪತ್ರಿಕೆಗಳು ಹುಟ್ಟುತ್ತಲೇ ಇರಲಿಲ್ಲವೇನೋ? ರಾಯರು ತೀರಿಕೊಂಡಾಗ ಅವರು ಕಟ್ಟಿದ ’ಸಂಯುಕ್ತ ಕರ್ನಾಟಕ’ದಲ್ಲಿ ಒಳಪುಟದಲ್ಲಿ ಸಿಂಗಲ್ ಕಾಲಮ್ಮಿನಲ್ಲಿ ನಿಧನ ಸುದ್ದಿ ಪ್ರಕಟವಾಗಿದ್ದರೆ, ‘ವಿಜಯ ಕರ್ನಾಟಕ’ ದಲ್ಲಿ ಮುಖಪುಟದಲ್ಲಿ ಮೂರು ಕಾಲಮ್ಮು ಫೋಟೊ ಸಮೇತ ದೊಡ್ಡದಾಗಿ ಸುದ್ದಿ ಪ್ರಕಟವಾಗಿತ್ತು.
ವಿಧಿಯಾಟ! ‘ಕಾಲ’ನ ಜತೆ ಯಾರೂ ಸುದೀರ್ಘ ಪಯಣ ಮಾಡಲಾರರು!