Sunday, 15th December 2024

ಅವಸರವೇನಿಲ್ಲ, ಇನ್ನೂ ಸಮಯವಿದೆ….

ದಾಸ್ ಕ್ಯಾಪಿಟಲ್‌

dascapital1205@gmail.com

ಮತ್ತೆ ಚುನಾವಣೆ ಬರುತ್ತಿದೆ. 2 ರಾಷ್ಟ್ರೀಯ ಪಕ್ಷಗಳ ಜತೆಯಲ್ಲಿ ಜೆಡಿಎಸ್‌ನ ಎಂದಿನ ಹೋರಾಟ ಈ ವರ್ಷವೂ ಇದೆ. ಆದರೆ, ಆ
ಪಕ್ಷದಲ್ಲಿ ಈ ಬಾರಿ ಹೊಸಚೈತನ್ಯ, ಹುರುಪು, ಭರವಸೆ ಕಾಣುತ್ತಿದೆ. ಮುಂದಿನ ಸಿಎಂ ತಾವೇ ಅಂತ ಕುಮಾರಸ್ವಾಮಿ ತುಂಬ ಸಲ ಹೇಳಿದ್ದರು, ಈ ಬಾರಿಯೂ ಹೇಳುತ್ತಿದ್ದಾರೆ.

ಹಾಗೆ ನೋಡಿದರೆ ಕರ್ನಾಟಕಕ್ಕೆ ಈ ಮೂರೂ ಪಕ್ಷಗಳು ಹೊಸತೇನಲ್ಲ. ಅವುಗಳಲ್ಲಿರು ವವರೂ ಹಳಬರೇ. ಹೊಸಬರಿದ್ದರೂ ಅವರೆಲ್ಲ ಪಕ್ಷಾಂತರಿಗಳು. ಅವರೆಲ್ಲ ಆ ಪಕ್ಷದ ಸಿದ್ಧಾಂತವನ್ನು ಒಪ್ಪಿದವರೆಂದೇನೂ ಅರ್ಥವಲ್ಲ, ಒಪ್ಪದೆಯೂ ಇರಲು ಸಾಧ್ಯ. ಆದರೆ ಯಾವ ಪಕ್ಷ ಟಿಕೆಟ್  ಕೊಡುತ್ತದೋ ಅಲ್ಲಿಯವರೆಗೆ ಆ ಪಕ್ಷದ ಸಿದ್ಧಾಂತಿಗಳಾಗಿ ಮಾತಾಡುತ್ತ, ಟಿಕೆಟ್ ಕೈತಪ್ಪಿದಾಗ ಬೈಯುತ್ತ ಇನ್ನೊಂದರತ್ತ ಮುಖಮಾಡಿ, ಅಲ್ಲೂ ಅದೇ ಗತಿಯಾದಾಗ ಪಕ್ಷೇತರರಾಗಿ ನಿಲ್ಲುವುದಾಗಿ ಅಪರೋಕ್ಷ ಧಮಕಿ ಹಾಕುತ್ತ, ಹೆಸರು ವಾಪಸಾತಿಗಾಗಿ ಒತ್ತಾಯಿಸಿದಾಗ ಹಣ ಡಿಮಾಂಡ್ ಮಾಡಿ ಸುಮ್ಮನಾಗುವುದು, ಆಗದವರ ವಿರುದ್ಧ ಒಳಗೊಳಗೇ ಕತ್ತಿ ಮಸೆಯುವುದು. ಇವೆಲ್ಲ ನಿಜವಾದ ರಾಜಕೀಯದ ಮುಖಗಳು!

ರಾಜಕೀಯವೆಂದರೆ ಸ್ವಾರ್ಥಸಾಧನೆ. ಈ ಸರಿಹೊತ್ತಿನ ರಾಜಕೀಯ ಸ್ವಾರ್ಥದ ತುರೀಯಾ ವಸ್ಥೆಯ ತುದಿಯಲ್ಲಿದೆ. ತಾನು ಗೆದ್ದು ಅಽಕಾರದ ಮದವೇರಿಸಿಕೊಂಡು ದರ್ಪದಿಂದ ವರ್ತಿಸಲು, ರಾಜಾರೋಷವಾಗಿ ಭ್ರಷ್ಟಾಚಾರವೆಸಗಿ ಅಪಾರ ಹಣಗಳಿಸಿ ತಾನೂ ತನ್ನವರೂ ಚೆನ್ನಾಗಿ ಬದುಕಲು ಮಾತ್ರವೆಂಬಂತೆ ರಾಜಕೀಯವನ್ನೇ ಒಂದು ದಂಧೆಯಾಗಿಸಿಕೊಂಡು, ಒಂದಿಷ್ಟು ಚೇಲಾಗಳ ಪಟಾಲಂ ಮಾಡಿಕೊಂಡು ಅವರಿವರಿಗೆ ಹೆದರಿಸಿಕೊಂಡು, ಹೆದರಿಸಿದರೆ ಕಾಲಿಗೆ ಬೀಳುವ, ಇಲ್ಲದಿದ್ದರೆ ಅಡ್ಡದಾರಿಯನ್ನೂ ಹಿಡಿಯುವ ಮನಸ್ಥಿತಿಯವರನ್ನೇ ಇಂದಿನ ರಾಜಕೀಯದಲ್ಲಿ ಕಾಣುತ್ತಿದ್ದೇವೆ.

ದೊಡ್ಡವರ ಹೆಸರು ಹೇಳಿಕೊಂಡು ಹೆಸರು ಮಾಡುವವರಿಗೇನೂ ಕೊರತೆಯಿಲ್ಲ. ಯಾರದ್ದೋ ಪ್ರಭಾವದಲ್ಲಿ ಅಧಿಕಾರ, ಸಂಪತ್ತು, ಪದವಿ, ಪ್ರಶಸ್ತಿ ಪಡೆಯುವವರಿಗೆ ರಾಜಕೀಯದಲ್ಲಿ ಬೇಜಾನ್ ಅವಕಾಶವಿದೆ. ಮೂರೂ ಪಕ್ಷಗಳಲ್ಲಿ ಇಂಥವರಿಲ್ಲವೇ ಇಲ್ಲ ಎಂಬುದು ಕಷ್ಟ! ಇದು ಜನತೆಗೆ ಅರಿವಿಲ್ಲದ ವಿಚಾರವಾಗಿ ಉಳಿದಿಲ್ಲ. ಪ್ರತಿಯೊಬ್ಬರನ್ನೂ ಅಳೆದು ತೂಗಿ ನೋಡಿ ವೋಟು ಹಾಕುವವರಿದ್ದಾರೆ, ಜಾತಿ ನೋಡಿ, ಸಿದ್ಧಾಂತ ನೋಡಿ ವೋಟು ಹಾಕುವವರಿದ್ದಾರೆ. ಯಾವ ನೆಲೆಯಲ್ಲಿ ವೋಟು ಹಾಕಿದರೂ ಮೂರೂ ಪಕ್ಷಗಳಿಗೂ ಜಾತಿಯ ಬಲವಿದ್ದೇ ಇದೆ.

ಸಿದ್ಧಾಂತದ ಬಲ, ಜನಬಲವೂ ಇವೆ. ಮೂರೂ ಪಕ್ಷಗಳನ್ನು ಓಲೈಸುವವರಿದ್ದಾರೆ. ಆಮಿಷಕ್ಕೊಳಗಾಗಿ ವೋಟು ಹಾಕುವುದಾದರೆ, ಯಾರು ಹೆಚ್ಚು ಆಮಿಷವೊಡ್ಡಬಲ್ಲರೋ ಅವರಿಗೆ ವೋಟು ಸಿಕ್ಕೀತು! ಇದು ಅಪರಾಧವೆಂಬುದು ಎಲ್ಲರೂ ಒಪ್ಪಿದ ಸತ್ಯ! ಕ್ಷೇತ್ರದ ಅಭ್ಯರ್ಥಿಯ ಬದುಕು, ಗುಣ, ಕಾರ್ಯಕ್ಷಮತೆ, ಒಳ್ಳೆಯತನ ನೋಡಿ ಮತ ಹಾಕುವುದಾದರೆ, ಯಾವ ಪಕ್ಷಕ್ಕೂ ಬಹುಮತ ಸಿಗದು! ಆಗ ಸಮ್ಮಿಶ್ರ ಸರಕಾರದ ರಚನೆ ಅನಿವಾರ್ಯ. ಆಗ ಆಗುವ ಅಭಿವೃದ್ಧಿಯ ವೇಗ, ಒಂದೇ ಪಕ್ಷ ಬಹುಮತ ಪಡೆದು ರಚಿಸಿದ ಸರಕಾರಕ್ಕಿಂತ ಹೆಚ್ಚಿರುತ್ತದೆಂಬ ಅಭಿಪ್ರಾಯವಿದೆ.

ಸಮಷ್ಟಿಯಲ್ಲಿ ನೋಡುವಾಗ ಇದು ಒಳ್ಳೆಯದು. ಆದರೆ ನಿಖರತೆ, ನಿರ್ದಿಷ್ಟತೆ ಇಂಥ ಸರಕಾರಗಳಿಗಿರುವುದಿಲ್ಲ. ರಾಜ್ಯ, ರಾಷ್ಟ್ರದ ಹಿತವನ್ನು ಪರಿಗಣಿಸಿದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೊಂದು ರಾಜ್ಯದಲ್ಲೂ ಅಧಿಕಾರಕ್ಕೆ ಬಂದರೆ ಅನುಕೂಲ ಹೆಚ್ಚಿರುತ್ತದೆ ಎಂಬ ಗ್ರಹಿಕೆಯಿದೆ. ಆದರೆ ಇದು ತಪ್ಪು. ಸ್ವಾತಂತ್ರ್ಯಾನಂತರದಲ್ಲಿ ಹೆಚ್ಚು ಸಮಯ ರಾಷ್ಟ್ರವನ್ನಾಳಿದ ಕಾಂಗ್ರೆಸ್ಸೇ ಇಂಥದ್ದಕ್ಕೆ ಅಡಿಪಾಯ ಹಾಕಿರುವುದರಿಂದ, ರಾಜ್ಯಗಳಿಗೆ ಕೇಂದ್ರದ ಅನುದಾನ ನೀಡುವಿಕೆಯಲ್ಲಿ ವ್ಯತ್ಯಾಸ ಕಂಡುಬರುವ ಕೆಟ್ಟ ಸಭ್ಯಾಸ ಇನ್ನೂ ಮುಂದುವರಿದಿದೆ. ಮೂರೂ ಪಕ್ಷಗಳಲ್ಲಿ ಯಾವುದು ಅಧಿಕಾರಕ್ಕೆ ಬಂದರೂ ಒಳ್ಳೆಯ ಆಡಳಿತವನ್ನು ನೀಡಿಯೇ
ನೀಡುತ್ತದೆಂಬಲ್ಲಿ ಯಾರಿಗೆ ಸಂಶಯವಿಲ್ಲ? ಸಮಷ್ಟಿಯ ಹಿತವನ್ನು ಎಷ್ಟರಮಟ್ಟಿಗೆ ಕಾಯ್ದುಕೊಂಡರೆಂಬುದೇ ಇಲ್ಲಿ ಮುಖ್ಯ.

ರಾಜ್ಯವೊಂದು ಆಡಳಿತ ನಡೆಸುತ್ತ ಕೇಂದ್ರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಅತಿಮುಖ್ಯವಾಗುತ್ತದೆ. ಯಾವ ರಾಜ್ಯವೂ ಸಂಪೂರ್ಣ ಸ್ವಾವಲಂಬಿಯಾಗಿರಲಾರದು. ಈ ದೃಷ್ಟಿಯಿಂದ ನೋಡುವುದಾದರೆ, ರಾಷ್ಟ್ರೀಯ ಪಕ್ಷಗಳಿಗೆ ಇದು
ಅನುಕೂಲವಾಗುವ ಸಾಧ್ಯತೆಗಳು ಹೆಚ್ಚು. ಈಗ ಕೇಂದ್ರ ದಲ್ಲಿರುವ ಪಕ್ಷದ ಸರಕಾರವೇ ಬಹುರಾಜ್ಯಗಳಲ್ಲಿರುವುದರಿಂದ, ಕರ್ನಾಟಕದಲ್ಲೂ ಅದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೆ ಅಂತಾರಾಜ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಾಧ್ಯತೆಗಳು ಬಲವಾಗುತ್ತ ಹೋಗುತ್ತವೆ. ಸಾಮಾನ್ಯರಿಂದ ಹಿಡಿದು ಉಳ್ಳವರವರೆಗೆ ಸರಕಾರಿ ಆಡಳಿತದ ಕ್ರಮಗಳು ಸ್ಪಂದಿಸ ಬೇಕಾಗುತ್ತವೆ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜಾತಿ-ಮತಗಳು ಮುಖ್ಯವಾಗಬಾರದು. ಹಿಂದೆ ಆಳಿದ ಈ ಮೂರೂ ಪಕ್ಷಗಳ ಆಡಳಿತ ವನ್ನು ಕರ್ನಾಟಕದ ಜನತೆ ನೋಡಿದೆ. ಆಯ್ಕೆಯ ವಿಷಯ ಬಂದಾಗ ಪ್ರತಿಯೊಬ್ಬ ಪ್ರಜೆಗೂ ಭಿನ್ನಾಭಿಪ್ರಾಯ ಗಳಿರುವುದು ಸಹಜವೇ. ಆದರೆ ಕಾಲಘಟ್ಟದಲ್ಲಿ ಕರ್ನಾಟಕ ಹೊಂದಬೇಕಾದ ಪರಿವರ್ತನೆಯ ಅಗತ್ಯವನ್ನು ಅವಲೋಕಿಸಿ , ಹೊಂದಬೇಕಾದ ಅಭಿವೃದ್ಧಿಯನ್ನು ಅವಲಂಬಿಸಿ ಮೂವರಲ್ಲಿ ಒಂದೇ ಪಕ್ಷವನ್ನು ಅಧಿಕಾರಕ್ಕೆ ತಂದರೆ ಒಳಿತು. ವಿಐಪಿ ಸಂಸ್ಕೃತಿಯನ್ನು ಬದಿಗೊತ್ತಿ, ಪಕ್ಷಭೇದ ಮರೆತು, ಅಭಿವೃದ್ಧಿಯೊಂದನ್ನೇ ಪ್ರಧಾನವಾಗಿಸಿಕೊಳ್ಳಬೇಕಾದ ದರ್ದು ಎಲ್ಲ ಪಕ್ಷಕ್ಕೂ ಅತ್ಯಗತ್ಯವಾಗಿದೆ.

ಜನತೆ ಇದನ್ನು ಗಮನಿಸುತ್ತದೆಂಬ ಎಚ್ಚರ ಪಕ್ಷಗಳಿಗಿರಬೇಕು. ಯಾವ ಮತವನ್ನೂ ಉಪೇಕ್ಷಿಸದೆ-ಓಲೈಸದೆ ಆಡಳಿತವನ್ನು
ಮಾಡುವ ಪಕ್ಷ ಜನಮನದಲ್ಲಿ ನೆಲೆಯೂರುವುದು ಖಂಡಿತ. ದ್ವೇಷಸಾಧನೆ ಪಕ್ಷ ರಾಜಕೀಯಕ್ಕೆ ಹಿತವಲ್ಲ. ತುಷ್ಟೀಕರಣವಿಲ್ಲದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಉದ್ದೀಪಿಸುವ ಪಕ್ಷವು ಉತ್ತಮ. ‘ದೇಶ ಮೊದಲು’ ಎಂಬರಿವು ಜನರಲ್ಲಿರಬೇಕು. ಸರಕಾರಗಳು ಭಾಗ್ಯಗಳನ್ನು ಕರುಣಿಸಿ ಶ್ರಮಗೌರವ ಮತ್ತು ಸಂಸ್ಕೃತಿಯನ್ನು ದಮನಿಸಬಾರದು. ಪ್ರತಿಯೊಬ್ಬರೂ ತಮ್ಮ ಬದುಕನ್ನು ಕಟ್ಟಿಕೊಳ್ಳುವಂಥ ಯೋಜನೆಗಳನ್ನು ರೂಪಿಸುವ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಬಲಿಷ್ಠವಾಗುತ್ತದೆ, ರಾಷ್ಟ್ರವೂ ಊರ್ಧ್ವ ಮುಖಿ ಯಾಗಿ ಬೆಳೆಯುತ್ತದೆ.

ದೂರದೃಷ್ಟಿಯ ಯೋಜನೆಗಳು ರಾಜ್ಯವನ್ನು ಭವಿಷ್ಯದಲ್ಲಿ ಭದ್ರಗೊಳಿಸುತ್ತವೆ. ಸಿದ್ದರಾಮಯ್ಯರ 5 ವರ್ಷದ ಆಡಳಿತವನ್ನು ನೋಡಿದ ಕರ್ನಾಟಕದ ಜನತೆ ಈಗ ಬಿಜೆಪಿಯ 5 ವರ್ಷವನ್ನೂ ನೋಡಿತು. ತಮಗೆ ಯಾರು ಹಿತವರು ಎಂಬುದನ್ನು ಜನರು
ಸಮರ್ಥವಾಗಿ ಗ್ರಹಿಸಿ ಮುಂಬರುವ ಚುನಾವಣೆಯಲ್ಲಿ ಬಹು ಎಚ್ಚರಿಕೆಯಿಂದ ಮತ ಚಲಾಯಿಸಬೇಕಿದೆ. ಈಗ ಎಚ್ಚರ
ತಪ್ಪಿದರೆ ಮತ್ತೆ 5 ವರ್ಷ ಎಚ್ಚರ ತಪ್ಪೇ ಇರಬೇಕಾಗುತ್ತದೆ.

ಪಕ್ಷವಷ್ಟೇ ಮುಖ್ಯವಲ್ಲ, ಸಮರ್ಥ ನಾಯಕತ್ವವೂ ಅತಿಮುಖ್ಯ. ನಾಯಕತ್ವ ಸಮರ್ಥವಾಗಿದ್ದರೆ ಆಡಳಿತದ ಚಿಂತನೆಗಳು ದಾರಿ ತಪ್ಪುವುದಿಲ್ಲ. ಆ ಚಿಂತನೆಗಳು ಸರಿಯಿದ್ದಲ್ಲಿ ಸರಕಾರವನ್ನು ಪ್ರಶ್ನಿಸುವುದಕ್ಕಾಗಲೀ, ಅಪಸ್ವರ ಎತ್ತುವುದಕ್ಕಾಗಲೀ ಜನರಿಗೆ ಅವಕಾಶವಿರುವುದಿಲ್ಲ. ಹಾಗೆ ನೋಡಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆಡಳಿತದ ಕ್ರಮದಲ್ಲಿ ಅಹಂಕಾರದ ಅಭಿವ್ಯಕ್ತಿಗಳು ಅಷ್ಟಾಗಿ ಗೋಚರಿಸುವುದಿಲ್ಲ; ಜನಪರ ಕಾಯ್ದೆಯೊಳಗೇ ಜನದ್ರೋಹದ ಕಾರ್ಯಗಳನ್ನು ಮಾಡುವವರಿವರು. ಆದರೆ ಇವರು ಬಿಜೆಪಿಯ ಹೊರ ಅಹಂಕಾರದಲ್ಲಿ ಜನರೆದುರು ಸಾಚಾ ಎನ್ನಿಸಿಬಿಡುತ್ತಾರೆ.

ಆಗ ಬಿಜೆಪಿಗೆ ಅಹಂಕಾರವೇ ಮುಳುವಾಗುತ್ತದೆ. ನೈತಿಕತೆ ಪ್ರದರ್ಶನಕ್ಕಲ್ಲ ಎಂಬುದು ಬಿಜೆಪಿಗೆ ಗೊತ್ತಿದ್ದಂತಿಲ್ಲ! ಬಿಜೆಪಿಯವರ ಆರೋಪಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲಿದ್ದರೂ, ಜನರ ನೆನಪಿನಲ್ಲಿರುವುದು ಬಿಜೆಪಿಯ ಆರೋಪ ಮಾತ್ರ!

ಕೇಂದ್ರದ ಬಿಜೆಪಿಯ ಮುಂದೆ ರಾಜ್ಯ ಬಿಜೆಪಿ ಅಷ್ಟಾಗಿ ಸಮರ್ಥವಾಗಿಲ್ಲವೆಂಬುದು ಸತ್ಯಸ್ಯ ಸತ್ಯ! ಕೇಂದ್ರದ ಕಾಂಗ್ರೆಸ್ಸಿಗಿಂತ ರಾಜ್ಯ
ಕಾಂಗ್ರೆಸ್ಸೇ ಬಲವಾಗಿದೆಯೆಂಬುದೂ ಸತ್ಯಸ್ಯ ಸತ್ಯ! ಬಿಜೆಪಿಯನ್ನು ದೂಷಿಸುವವರು ಈ ಅರಿವನ್ನು ಹೊಂದಿಯೇ ಉಳಿದೆರಡು ಪಕ್ಷಗಳನ್ನು ಬೆಂಬಲಿಸುತ್ತಾರೆ. ಹಾಗೆಯೇ ಜೆಡಿಎಸ್ ಮತ್ತು ಕಾಂಗ್ರೆಸ್ಸನ್ನು ದೂಷಿಸುವವರೂ ಬಿಜೆಪಿಯನ್ನು ಬೆಂಬಲಿಸಬೇಕಾ ಗುತ್ತದೆ. ಭ್ರಷ್ಟತೆ ಯಾವ ಪಕ್ಷದಲ್ಲಿಲ್ಲ ಹೇಳಿ? ಆಡಳಿತದ ಅನುಭವವನ್ನು ಉಳಿದೆರಡು ಪಕ್ಷಗಳಿಗಿಂತ ಹೆಚ್ಚು ಹೊಂದಿರುವ ಕಾಂಗ್ರೆಸ್ಸಿಗೆ, ಭ್ರಷ್ಟಾಚಾರದ ಆರೋಪದ ನಡುವೆಯೂ ಬಚಾವಾಗುವ ಬುದ್ಧಿವಂತಿಕೆಯಿದೆ. ಬಿಜೆಪಿಗಿದು ಸಾಧ್ಯವಿಲ್ಲ. ಆದರೂ ಬಿಜೆಪಿ ಪ್ರಶ್ನಾತೀತ! ಕಾಂಗ್ರೆಸ್ಸನ್ನು ಪ್ರಶ್ನಿಸಿದರೆ ಉತ್ತರವಿಲ್ಲ! ಬಿಜೆಪಿಯವರ ಅಹಂಕಾರ ಸಿದ್ದರಾಮಯ್ಯರ ಮೂಲಕ ಕಾಂಗ್ರೆಸ್ಸಿ ಗಂಟಿದೆ.

ಬಿಜೆಪಿಯವರ ಅಹಂಕಾರವನ್ನು ಇಳಿಸುವುದಕ್ಕಾದರೂ ಬಿಜೆಪಿ ಅಧಿಕಾರಕ್ಕೆ ಬರಬೇಕು! 89ರ ಹರೆಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಲವಾದ ವಾಂಛೆ ದೇವೇಗೌಡರಿಗೆ. ‘ಮುಂದಿನ ಮುಖ್ಯಮಂತ್ರಿ ನಾನೇ’ ಎಂಬ ಅತಿ ಆತ್ಮವಿಶ್ವಾಸ ಅವರ
ಎರಡನೆಯ ಮಗನಿಗೆ! ‘ಏನಿಲ್ಲದಿದ್ದರೂ ಮೋದಿಯಿದ್ದಾರೆ, ನಾವು ಗೆದ್ದೇ ಗೆಲ್ಲುತ್ತೇವೆ’ ಅಂಬ ಅತಿ ಆತ್ಮವಿಶ್ವಾಸ ಬಿಜೆಪಿಗೆ!
ಜೆಡಿಎಸ್ ಎಂದಿನ ಸವಾಲಿನೊಂದಿಗೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಘನ ಪ್ರತಿಸ್ಪರ್ಧಿಯಾಗಿದೆ. ಈಗ ನಾವು ವೋಟು ನೀಡಬೇಕಿ ರುವುದು ಏನನ್ನು ನೋಡಿ? ವ್ಯಕ್ತಿಯನ್ನೋ? ಪಕ್ಷವನ್ನೋ? ಜಾತಿಯನ್ನೋ? ಸಿದ್ಧಾಂತವನ್ನೋ?- ಇದು ತೀರ್ಮಾನವಾಗಬೇಕಿದೆ. ಅವಸರವೇನಿಲ್ಲ, ಇನ್ನೂ ಸಮಯವಿದೆ!