ಬೇಟೆ
ಜಯವೀರ ವಿಕ್ರಮ ಸಂಪತ್ ಗೌಡ
ಕೆಲವರಿಗೆ ಒಂದು ರೀತಿಯ ವಿಕೃತ ಆನಂದ.. ಖುಷಿ. ಅದೇನೆಂದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿನ್ನಡೆಯಾಗಬೇಕು, ದಿನ ದಿನವೂ ಅವರ ಪ್ರತಿಷ್ಠೆಗೆ ಧಕ್ಕೆಯಾಗಬೇಕು, ಅವರ ಸರಕಾರಕ್ಕೆ ಕೆಟ್ಟ ಹೆಸರು ಬರಬೇಕು, ಅವರು ಎಲ್ಲಾ ರಂಗಗಳಲ್ಲೂ ವಿಫಲರಾಗಬೇಕು.
ಆಗಲೇ ಅವರಿಗೆ ಸಮಾಧಾನ. ಮೋದಿಗೆ ಜನ ಎಷ್ಟು ಬೈಯುತ್ತಾರೋ, ಆಗ ಇವರಿಗೆ ಹಂಡೆ ಹಾಲು ಕುಡಿದಷ್ಟು ನೆಮ್ಮದಿ. ಆಗ ಇವರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಮೋದಿಯವರನ್ನು ತೆಗಳುತ್ತಾರೆ, ಕೆಟ್ಟ ಕೆಟ್ಟ ಭಾಷೆಯಲ್ಲಿ
ನಿಂದಿಸುತ್ತಾರೆ. ಮೋದಿಯವರು ರಾಜೀನಾಮೆ ಕೊಡಬೇಕು ಎಂದು ಬೊಬ್ಬೆ ಹೊಡೆಯುತ್ತಾರೆ. ಮೋದಿಯವರನ್ನು ಜರೆಯಲು ಒಂದು ವಿಷಯ ಸಿಕ್ಕಿತು ಎಂದು ಉನ್ಮಾದದಿಂದ ವರ್ತಿಸುತ್ತಾರೆ.
ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ನಡೆಯುತ್ತಿರುವುದೇನು? ಇದೇ ಅಲ್ಲವೇ? ಎಂಥಾ ದುರ್ದೈವ ನೋಡಿ, ಇವರೆಂಥ ಹೀನ ಮನಸ್ಥಿತಿಯವರೆಂದರೆ, ಇಂಥವರಿಗೆ ದೇಶದಲ್ಲಿ ಕೋವಿಡ್ ನಿಯಂತ್ರಿಸಲಾರದಷ್ಟು ವ್ಯಾಪಕ ಪ್ರಮಾಣದಲ್ಲಿ ಸೋಂಕಿದರೆ ಖುಷಿ, ಅದರಿಂದ ಜನ ಆಸ್ಪತ್ರೆಯ ಹಾಸಿಗೆಗಾಗಿ, ಆಮ್ಲಜನಕಕ್ಕಾಗಿ, ಐಸಿಯುಗಾಗಿ ಪರಿತಪಿಸಿದರೆ ಒಳಗೊಳಗೇ ಖುಷಿ, ಇವ್ಯಾವವೂ ಸಿಗದೇ ಜನ ಸತ್ತರೆ ವಿಕೃತ ಆನಂದ, ಸತ್ತವರ ಅಂತ್ಯ ಸಂಸ್ಕಾರಕ್ಕೆ ಆಂಬ್ಯುಲನ್ಸ್ ಸಿಗದಿದ್ದರೆ, ಅಂತ್ಯಸಂಸ್ಕಾರ ತಡವಾದರೆ, ಸಾಲು
ಸಾಲು ಮೃತ ದೇಹಗಳನ್ನು ಇಟ್ಟರೆ, ಅವನ್ನೆ ಒಟ್ಟಾಗಿ ಅಂತ್ಯಸಂಸ್ಕಾರ ಮಾಡಿದರೆ, ಇವರಿಗೆ ಪೈಶಾಚಿಕ ಸಂತಸ..
ಇವನ್ನೆ ಮೋದಿ ಬೈಯುವುದಕ್ಕಾಗಿ ಬಳಸಿಕೊಳ್ಳಬಹುದೆಂಬ ಹೊಂಚು, ಲೆಕ್ಕಾಚಾರ. ಮೋದಿ ಏನು ಮಾಡುತ್ತಿದ್ದಾರೆ..ಮೋದಿ ಯಿಂದ ಇಷ್ಟೆ ಆಯಿತು.. ಇವಕ್ಕೆ ಅವರೇ ಕಾರಣ.. ಎರಡನೇ ಅಲೆ ಬರುತ್ತದೆ ಎಂದು ಗೊತ್ತಿದ್ದರೂ ಅವರು ಕಣ್ಣು ಮುಚ್ಚಿ
ಕುಳಿತಿದ್ದೇಕೆ ಎಂದು ಮೊಂಡು ವಾದ ಮಾಡುತ್ತಿದ್ದಾರೆ. ಕರೋನಾದಿಂದ ಇಷ್ಟು ಜನ ಸಾಯುತ್ತಿದ್ದಾರೆ ಎಂಬ ಬೇಸರಕ್ಕಿಂತ, ಮೋದಿಯಿಂದಾಗಿ ಇಷ್ಟೆ ಅವಾಂತರಗಳು ಆದವು ಎಂದು ಅವರಿಗೆ ಒಳಗೊಳಗೇ ವಿಕೃತ ಆನಂದವಿದ್ದಂತಿದೆ.
ಹೀಗಾಗಿ ಗಂಗಾ ನದಿಯಲ್ಲಿ ಹೆಣಗಳು ತೇಲಿ ಬಂದರೂ ಅದಕ್ಕೆ ಮೋದಿಯವರೇ ಕಾರಣ ಎಂಬಂತೆ ಇವರ ಧೋರಣೆ. ಈ ಕರೋನಾ ಬರದಿದ್ದರೆ, ಮೋದಿಯವರನ್ನು ಹಿಡಿಯುವವರು ಯಾರೂ ಇರಲಿಲ್ಲ, ಎರಡನೇ ಅಲೆಯಿಂದಾಗಿ, ಮೋದಿಯವರ ಜನಪ್ರಿಯತೆ ನೆಲ ಕಚ್ಚಿತು, ಇದರಿಂದಾಗಿ ಮೋದಿಯವರ ಸೊಕ್ಕು ಮುರಿಯಿತು ಎಂದು ಸಂತಸಪಡುತ್ತಿದ್ದಾರೆ.
ಕರೋನಾದಿಂದ ಇಷ್ಟೆ ಸಂಕಷ್ಟಗಳು ಎದುರಾದ ದುಃಖಕ್ಕಿಂತ, ಮೋದಿಯವರಿಗೆ ಹಿನ್ನಡೆಯಾಯಿತಲ್ಲ ಎಂಬ ಸಮಾಧಾನವೇ
ಇವರಿಗೆ ದೊಡ್ಡದಾಗಿ ಕಾಣುತ್ತಿದೆ. ಇವರಿಗೆ ಕೋವಿಡ್ ನಿಯಂತ್ರಣಕ್ಕೆ ಬಂದರೆ, ಸೋಂಕು ಪ್ರಮಾಣ ಕಮ್ಮಿಯಾದರೆ, ಸಾಯು ವವರ ಸಂಖ್ಯೆ ಕಡಿಮೆಯಾದರೆ, ಗುಣಮುಖರಾಗುವವರ ಸಂಖ್ಯೆ ಜಾಸ್ತಿಯಾದರೆ, ಇವರಿಗೆ ಏನೋ ಕಸಿವಿಸಿ. ಸಣ್ಣ ಅಲವರಿಕೆ.
ಇನ್ನಷ್ಟು ಆವಾಂತರಗಳಾಗಿದ್ದರೆ, ಮೋದಿಯವರಿಗೆ ಮತ್ತಷ್ಟು ಕೆಟ್ಟ ಹೆಸರು ಬರುತ್ತಿತ್ತ ಎಂದು ಕೈ ಕೈ ಹೊಸಕಿಕೊಳ್ಳುತ್ತಾರೆ.
ಆಗ ಇವರು ಬೇರೆ ರಾಗ ಹಾಡಲಾರಂಭಿಸುತ್ತಾರೆ.
ಲಸಿಕೆ ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯಲಾರಂಭಿಸುತ್ತಾರೆ. ಇಷ್ಟು ದಿನ ಮೋದಿಯವರು ಏನು ಮಾಡುತ್ತಿದ್ದರು ಎಂದು
ಕೇಳುತ್ತಾರೆ. ಲಸಿಕೆಯನ್ನು ವಿದೇಶಗಳಿಗೆ ಕಳಿಸಿದ್ದೇಕೆ, ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮೋದಿ ಬೇರೆಯವರಿಗೆ ಲಸಿಕೆ ಕೊಟ್ಟರು ಎಂದು ದೂಷಿಸುತ್ತಾರೆ. ಕುಂಭಮೇಳದಿಂದಲೇ, ಬಂಗಾಳ ಚುನಾವಣೆಯಿಂದಲೇ ಕರೋನಾ ಹಬ್ಬಿತು, ಅದಕ್ಕೆ ಮೋದಿಯೇ ಕಾರಣ ಎಂದು ಹುಯಿಲೆಬ್ಬಿಸುತ್ತಾರೆ.
ಇವನ್ನೆ ವಿದೇಶಿ ಪತ್ರಿಕೆಗಳು ಜೋರಾಗಿ ಬರೆದರೆ, ಅವನ್ನು ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದಿಂದ ಶೇರ್
ಮಾಡುತ್ತಾರೆ. ಅವರಿಗೆ ನಮ್ಮ ದೇಶದ ಮರ್ಯಾದೆ ಹಾಳಾಯ್ತು ಎಂಬುದಕ್ಕಿಂತ ಮೋದಿಯವರಿಗೆ ತಕ್ಕ ಶಾಸ್ತಿಯಾಯಿತು ಎಂಬ ಸಮಾಧಾನ. ಇಷ್ಟೆ ಕೋಟ್ಯಂತರ ಜನರಿಗೆ ಸಮಸ್ಯೆಯಾಯಿತು, ಅವರಲ್ಲಿ ಅನೇಕರು ತಮ್ಮ ಬಂಧು-ಮಿತ್ರರನ್ನು, ತಂದೆ-ತಾಯಿ ಗಳನ್ನು, ಮಕ್ಕಳನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ ಎಂಬುದಕ್ಕಿಂತ, ಇದರಿಂದ ಮೋದಿಯವರ ವರ್ಚಸ್ಸಿಗೆ ಧಕ್ಕೆಯಾಯಿ ತಲ್ಲ ಎಂಬ ತೃಪ್ತಿ.
ಇದೆಂಥ ಮನೆಹಾಳ ಮನೋಭಾವ? ಈ ದೇಶದಲ್ಲಿ ನಡೆಯುವುದಕ್ಕೆ ಪ್ರಧಾನಿಯವರೇ ಕಾರಣರಾಗಿದ್ದರೆ, ಹತ್ತು ವರ್ಷ ಪ್ರಧಾನಿ ಯಾಗಿದ್ದ ‘ಮೌನಿಬಾಬಾ’ ಅವರನ್ನು ಇವರಾರೂ ಒಮ್ಮೆಯೂ, ಯಾವ ಸಮಸ್ಯೆಗೂ ಏಕೆ ಪ್ರಶ್ನಿಸಲಿಲ್ಲ? ಕರೋನಾ ನಿಯಂತ್ರಿ ಸಲು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ರಾಜೀನಾಮೆ ನೀಡಬೇಕು ಎಂದಾದರೆ, ಜಗತ್ತಿನ ಎಲ್ಲಾ ಪ್ರಧಾನಿಗಳೂ, ರಾಷ್ಟ್ರಾಧ್ಯ ಕ್ಷರೂ ಇಷ್ಟೊತ್ತಿಗೆ ರಾಜೀನಾಮೆ ನೀಡಿರುತ್ತಿದ್ದರು. ಅನಂತರ ಬಂದವರೂ ಮನೆಗೆ ಹೋಗಿರುತ್ತಿದ್ದರು.
ಆದರೆ, ನನಗೆ ತಿಳಿದಂತೆ, ವಿಶ್ವದ ಯಾವ ಪ್ರಧಾನಿ, ಅಧ್ಯಕ್ಷರೂ ಈ ಕಾರಣಕ್ಕೆ ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡುವುದು ಸಮಸ್ಯೆಗೆ ಪರಿಹಾರ ಅಲ್ಲ ಎಂಬ ಸಾಮಾನ್ಯ ತಿಳಿವಳಿಕೆಯೂ ಈ ಜನರಿಗೆ ಇಲ್ಲ. ಒಟ್ಟಾರೆ ಕರೋನಾ ಎರಡನೇ ಅಲೆ ಬಂದಿರುವು ದಕ್ಕೆ ಇಡೀ ದೇಶ ಮಮ್ಮಲ ಮರುಗುತ್ತಿದ್ದರೆ, ಮೋದಿ ವಿರೋಧಿಗಳು ಮಾತ್ರ ಹಿಂದೆಂದಿಗಿಂತಲೂ ಆನಂದದಿಂದ ಇದ್ದಾರೆ!
ಇವರಿಗೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ಖುಷಿ. ಜಿಡಿಪಿ ಕುಗ್ಗಿದರೆ ಖುಷಿ. ದೇಶದಲ್ಲಿ ನಿರುದ್ಯೋಗ ತಾಂಡವವಾಡಿದರೆ ಸಮಾಧಾನ. ಕೈಗಾರಿಗೆಗಳು ಬಾಗಿಲು ಹಾಕಿದರೆ ಇವರಿಗೆ ತೃಪ್ತಿ. ಕಾರಣ ಇವಕ್ಕೆ ಮೋದಿಯನ್ನೇ ಹೊಣೆಗಾರರನ್ನಾಗಿ ಮಾಡಬಹು ದಲ್ಲ.. ಮೋದಿಯಿಂದಾಗಿಯೇ ಹೀಗಾಯಿತು ಎಂದು ಹೇಳಬಹುದ.. ಇಂಥವರು ಅರುಂಧತಿ ರಾಯ್ ಭಾರತವನ್ನು ಕೆಟ್ಟದಾಗಿ ಚಿತ್ರಿಸುವ ಲೇಖನವನ್ನು ಗುಪ್ಪುಹಾರಿ ಶೇರ್ ಮಾಡುತ್ತಾರೆ.
ರಾಣಾ ಅಯೂಬ್ ಎಂಬ ತಲೆಮಾಸಿದವಳು ಭಾರತದಲ್ಲಿ ಏನೂ ಸರಿಯಿಲ್ಲ ಎಂದು ವಿದೇಶಿ ಟಿವಿ ಚಾನೆಲ್ಲುಗಳಿಗೆ ಕೊಟ್ಟ
ಸಂದರ್ಶನದ ವಿಡಿಯೋ ತುಣುಕುಗಳನ್ನು ಫಾರ್ವರ್ಡ್ ಮಾಡುತ್ತಾರೆ. ಇವರಾರಿಗೂ ದೇಶದ ಪ್ರತಿಷ್ಠೆ, ಗೌರವ ಮುಖ್ಯವಲ್ಲ. ಮೋದಿಯವರೇ ಟಾರ್ಗೆಟ್. ಹೀಗಾಗಿ ಗಂಗೆಯಲ್ಲಿ ಹೆಣ ತೇಲಿ ಬಂದಿದ್ದನ್ನು ಅಷ್ಟು ದೊಡ್ಡ ವಿಷಯವಾಗಿ ಮಾಡಿದರು. ಮೋದಿ ವಾರಾಣಸಿ ಕ್ಷೇತ್ರದ ಲೋಕಸಭಾ ಪ್ರತಿನಿಧಿ ಆಗುವುದಕ್ಕಿಂತ ಮುನ್ನ, ದಿನಕ್ಕೆ ನೂರಾರು ಹೆಣಗಳು, ಅರೆಬೆಂದ ಶವಗಳು ಸಂಸ್ಕಾರ ವಿಲ್ಲದೇ ತೇಲಿ ಹೋಗುತ್ತಿದ್ದವು. ಆಗ ಯಾವ ಪ್ರಧಾನಿಯನ್ನೂ ಟಾರ್ಗೆಟ್ ಮಾಡಲಿಲ್ಲ. ಇದು ಚರ್ಚೆಯ ವಿಷಯವೂ ಆಗಲಿಲ್ಲ.
ನನ್ನ ತಕರಾರು ಇರುವುದು ಮೋದಿಯವರನ್ನು ಬೈಯುತ್ತಾರೆ, ಟೀಕಿಸುತ್ತಾರೆ ಎಂಬುದಕ್ಕಲ್ಲ. ಮೋದಿಯವರೇನು ಟೀಕಾತೀತ ರೇನಲ್ಲ. ಅವರಿಂದ ಪ್ರಮಾದಗಳಾದರೆ, ಅವರನ್ನು ಟೀಕಿಸಲೇಬೇಕು. ಆದರೆ ಈಗ ಆಗುತ್ತಿರುವುದು ಅದಲ್ಲ. ಮೋದಿಯವರನ್ನು ಟೀಕಿಸುವ ಭರದಲ್ಲಿ ದೇಶದ ಮಾನವನ್ನು ಕೆಡಿಸುತ್ತಿರುವುದು. ಭಾರತವನ್ನು ಕೆಟ್ಟದಾಗಿ ಚಿತ್ರಿಸಿ, ಆ ಮೂಲಕ ಮೋದಿಯವರನ್ನು ಹಣಿಯುತ್ತಿರುವುದು. ಇವರಿಗೆ ಭಾರತದ ಮಾನ ಹರಣವಾದರೆ ಬೇಸರವಿಲ್ಲ. ಕಾರಣ ಅದರಿಂದ ಮೋದಿಯವರಿಗೆ ಕೆಟ್ಟ ಹೆಸರು ಬರುತದಲ್ಲ… ಇದು ಬಹಳ ಅಪಾಯಕಾರಿ ಪ್ರವೃತ್ತಿ. ಇದು ಹೀನ, ನೀಚ ಬುದ್ಧಿ.
ಸಂಕಟವಾಗುತ್ತಿರುವುದು ಇದಕ್ಕೆ. ಕರೋನಾದಂಥ ಸಂಕಟ ವನ್ನೂ ಮೋದಿ ಹಳಿಯುವುದಕ್ಕಾಗಿ ಬಳಸಿಕೊಳ್ಳುತ್ತಿದ್ದರಲ್ಲ,
ಅದಕ್ಕಾಗಿ ವ್ಯಥೆಯಾಗುತ್ತದೆ. ಇಂಥವರು ಮೋದಿಯವರನ್ನು ಹಳಿಯಲು ಸಣ್ಣ ಪುಟ್ಟ ಘಟನೆ – ವಿದ್ಯಮಾನಗಳನ್ನು ಬಿಡುತ್ತಿಲ್ಲ. ಈ ಸಂಕಟದ ಸಮಯದಲ್ಲಿ ಕೀನ್ಯಾದಂಥ ದೇಶ ಸಹಾಯಕ್ಕೆ ಮುಂದೆ ಬಂದರೆ, ಹನ್ನೆರಡು ಟನ್ ದವಸ-ಧಾನ್ಯ ಹಾಗೂ ಔಷಧಿ ಗಳನ್ನು ಕಳಿಸಿದರೆ, ‘ಕೀನ್ಯಾದಂಥ ದರಿದ್ರ ದೇಶದ ಮುಂದೆ, ಮೋದಿ ಭಿಕ್ಷೆ ಬೇಡುವ ಹಂತಕ್ಕೆ ದೇಶವನ್ನು ತಂದಿಟ್ಟರು’ ಎಂದು ಕುಕವಾಡುತ್ತಾರೆ. ಇವರಿಗೆ ಏನೆನ್ನೋಣ.
ನಿಮಗೆ ನಾನು ಇಂದು ಪ್ರಸಂಗವನ್ನು ಹೇಳಬೇಕು. ಇದನ್ನು ನಾನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಓದಿದ್ದು. ಹಿಂದಿ ಯಲ್ಲಿ ಅಮೋಲ್ ಪಾಂಡೆ ಎನ್ನುವವರು ಬರೆದಿದ್ದನ್ನು ಸುನೀಲ ಕುಷ್ಟಗಿ ಅನುವಾದಿಸಿದ್ದರು. ಅದನ್ನು ನಿಮಗೆ ಹೇಳಬೇಕು.
ನಾವು ಯಾರೂ ‘ಇನೊಸಾಯಿನ್’ ಎಂಬ ಹಳ್ಳಿಯ ಹೆಸರನ್ನು ಕೇಳಿಲ್ಲ. ಇದು ಕೀನ್ಯಾ ಮತ್ತು ತಾಂಜಾನಿಯಾ ನಡುವಿನ ಗಡಿಭಾಗದಲ್ಲಿರುವ ಒಂದು ಹಳ್ಳಿ. ಇಲ್ಲಿ ವಾಸಿಸುವವರು ‘ಮಸಾಯ’ ಎಂಬ ಜನಾಂಗದವರು.
2001ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಇಸ್ಲಾಮಿಕ್ ಭಯೋತ್ಪಾದಕರು ವೈಮಾನಿಕ ದಾಳಿ ನಡೆಸಿದ್ದು ಗೊತ್ತಿದೆ. ಆದರೆ ಇದು ಮಸಾಯ್ ಜನಾಂಗದವರಿಗೆ ತಲುಪಲು ಹಲವು ತಿಂಗಳುಗಳೇ ಬೇಕಾದವು. ಅದು ಕೂಡ ಇವರ ಹಳ್ಳಿಯ ಸಮೀಪದ ಹೋಬಳಿಯ ಓಮಾ ಎಂಬ ಯುವತಿಯಿಂದ ತಿಳಿಯಿತು. ಆಕೆ ಅಮೆರಿಕದ ಸ್ಟ್ಯಾನೋರ್ಡ್ ಯುನಿವರ್ಸಿಟಿಯಲ್ಲಿ ಮೆಡಿಕಲ್
ವಿದ್ಯಾರ್ಥಿನಿಯಾಗಿದ್ದಳು. ಆಕೆ ರಜೆಗೆಂದು ಊರಿಗೆ ಬಂದಾಗ ಈ ವಿಷಯವನ್ನು ತನ್ನ ಊರಿನ ಜನರಿಗೆ ಹೇಳಿದಳು. ಇದನ್ನು
ಕೇಳಿ ಆ ಜನರು ಬಹಳ ದುಃಖಿತರಾದರು.
ಅಮೆರಿಕದ ಕಟ್ಟಡಗಳು ಎಷ್ಟು ಎತ್ತರವಾಗಿರುತ್ತವೆಂದರೆ ಅವುಗಳ ಮೇಲಿನಿಂದ ಬಿದ್ದರೆ, ನೆಲ ಮುಟ್ಟಲು ಬಹಳ ಸಮಯ ವಾಗುವುದಲ್ಲದೇ ಪ್ರಾಣವೂ ಉಳಿಯುವುದಿಲ್ಲ ಅಂತ ಕಿಮೇಲಿ ಹೇಳಿದರೆ ಹುಲ್ಲಿನ ಸಣ್ಣ ಗುಡಿಸಲುಗಳಲ್ಲಿರುವ ಆ ಜನರು ಅಷ್ಟು ದೊಡ್ಡ ಕಟ್ಟಡಗಳು ಇರುವುದನ್ನು ನಂಬಲೂ ತಯಾರಿರಲಿಲ್ಲ. ಆದರೂ ಆ ಮುಗ್ಧ ಜನ ಅಮೆರಿಕ ಜನರ ದುಃಖವನ್ನು ತಮ್ಮದೇ ದುಃಖವೆನ್ನುವಂತೆ ಭಾವಿಸಿದರಲ್ಲದೇ, ಅದೇ ವೈದ್ಯಕೀಯ ವಿದ್ಯಾರ್ಥಿನಿ ಕೈಯಿಂದ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಅಧಿಕಾರಿಗೆ ಒಂದು ಪತ್ರವನ್ನು ಬರೆಯಿಸಿದರು.
ಆ ಪತ್ರವನ್ನು ಓದಿದ ತಕ್ಷಣವೇ ಆ ಅಧಿಕಾರಿ ತಡ ಮಾಡದೇ, ‘ಇನೊಸಾಯಿನ್’ ಹಳ್ಳಿಯನ್ನು ತಲುಪಿದ. ಅಮೆರಿಕ ಅಧಿಕಾರಿ ಹಳ್ಳಿಗೆ ಬಂದದ್ದು ಗೊತ್ತಾದ ತಕ್ಷಣ ಹಳ್ಳಿಯ ಜನರೆಲ್ಲ ಹದಿನಾಲ್ಕು ಆಕಳುಗಳನ್ನ ತಂದು ನಿಲ್ಲಿಸಿದರು. ಆ ಹಳ್ಳಿಯ ಮುಖ್ಯಸ್ಥ ಆಕಳುಗಳಿಗೆ ಕಟ್ಟಿದ್ದ ಹಗ್ಗವನ್ನು ರಾಯಭಾರಿ ಕಚೇರಿಯ ಅಽಕಾರಿ ಕೈಗೆ ಒಪ್ಪಿಸುತ್ತ, ಒಂದು ಪತ್ರವನ್ನು ಕೊಟ್ಟ. ಆ ಪತ್ರದಲ್ಲಿ ದುಃಖದ ಈ ಸಮಯದಲ್ಲಿ ಅಮೆರಿಕದ ಜನರ ಜೊತೆಗೆ ನಾವಿದ್ದೇವೆ.ಅವರ ಈ ಕಷ್ಟಕಾಲದಲ್ಲಿ ಸಹಾಯವಾಗಲೆಂದು ಈ ಆಕಳುಗಳನ್ನು ನೀಡುತ್ತಿದ್ದೇವೆ. ಎಂದು ಬರೆಯಲಾಗಿತ್ತು.
ಆಕಳುಗಳನ್ನು ಅಲ್ಲಿಂದ ಒಯ್ಯುವ ಸಮಸ್ಯೆ ಹಾಗೂ ಕಾನೂನಿನ ತೊಡಕು ಪರಿಶೀಲಿಸಿ, ಅವುಗಳನ್ನು ಒಯ್ಯದೇ, ಮಾರಾಟ ಮಾಡಿ ಬಂದ ಹಣದಿಂದ ಮಸಾಯ್ ಜನಾಂಗದವರ ಸಾಂಪ್ರದಾಯಿಕ ವೇಷಭೂಷಣವನ್ನ ಖರೀದಿಸಿ ಅದನ್ನು 9/11 ಮೆಮೋರಿಯಲ್ ಮ್ಯೂಸಿಯಂನಲ್ಲಿಡಲು ತೀರ್ಮಾನಿಸಲಾಯಿತು.
ಯಾವಾಗ ಈ ವಿಷಯ ಅಮೆರಿಕದ ಜನಸಾಮಾನ್ಯರಿಗೆ ತಲುಪಿತೋ, ಆಗ ಅವರೆಲ್ಲ ಆ ವೇಷಭೂಷಣ ತರುವುದು ಬೇಡ. ಅವರು ಪ್ರೀತಿಯಿಂದ ನೀಡಿರುವ ಆಕಳುಗಳನ್ನೇ ಇಲ್ಲಿಗೆ ತನ್ನಿ ಎಂದು ಆನ್ ಲೈನ್ ಅರ್ಜಿ ಅಭಿಯಾನ ಶುರುವಾಯಿತು. ಅಧಿಕಾರಿಗಳಿಗೆ ಇಮೇಲ್ ಮಾಡಿದರು. ರಾಜಕೀಯ ನಾಯಕರುಗಳ ಮೇಲೆ ಒತ್ತಡ ಹಾಕಿದರು. ಅಲ್ಲದೇ ಅಮೆರಿಕದ ಕೋಟ್ಯಂತರ ಜನರು ಮಸಾಯ್ ಜನಾಂಗದವರಿಗೂ ಹಾಗೂ ಕೀನ್ಯಾ ದೇಶದ ಜನರಿಗೆ ಪತ್ರ ಬರೆದು ನಿಮ್ಮ ನಿಸ್ಪೃಹ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.
ಇದು ನಮ್ಮ ಕಷ್ಟಕಾಲದಲ್ಲಿ ನಾವು ಕೇಳದೇ ತಾವಾಗಿಯೇ ಸಹಾಯ ಮಾಡುವವರನ್ನು ಸ್ಮರಿಸುವ ರೀತಿ. ಆದರೆ ನಮ್ಮಲ್ಲಿಯ ಕೆಲವು ಜನರು ನೋಡಿ ಕೀನ್ಯಾದವರ ಸಹಾಯವನ್ನು ಹೇಗೆ ವ್ಯಂಗ್ಯವಾಡುತ್ತಿದ್ದಾರೆ ಅಂತ. ಮೊನ್ನೆ ಮೋದಿಯವರು ತಮ್ಮ ಅಽಕಾರದ ಏಳನೇ ವರ್ಷವನ್ನು ಪೂರೈಸಿದರು. ಎಂಥವರಿಗಾದರೂ ಈ ಸಂದರ್ಭದಲ್ಲಿ ಬೇರೆಯವರಿದ್ದರೆ ಏನು ಮಾಡುತ್ತಿದ್ದರು
ಎಂಬುದು ತಿಳಿಯದ ಸಂಗತಿಯೇನಲ್ಲ. ಬಾಯಿಬಡುಕತನದಿಂದ ದೇಶ ಉದ್ಧಾರವಾಗುವಂತಿದ್ದರೆ, ಜಗತ್ತಿನಲ್ಲಿ ನಮ್ಮಷ್ಟು
ಮುಂದುವರಿದ ದೇಶ ಇನ್ನೊಂದಿರುತ್ತಿರಲಿಲ್ಲ.
ಮೋದಿಯವರನ್ನು ಟೀಕಿಸುವ ಭರದಲ್ಲಿ ದೇಶದ ಮಾನ ಹರಾಜು ಹಾಕಬಾರದು. ಇಂಥ ಸಂದರ್ಭದಲ್ಲಿ, ಇದು ನಮಗೆ ಗೊತ್ತಿರಬೇಕು.