ಡಾ.ದಯಾನಂದ ಲಿಂಗೇಗೌಡ
ಭಾರತೀಯ ಚಿತ್ರರಂಗದಲ್ಲಿ ‘ಮಾಸ್ಟರ್ ಪೀಸ್’ ಎಂದೇ ಪರಿಗಣಿಸಲಾಗಿರುವ ಚಿತ್ರಗಳಲ್ಲಿ ‘ಮೊಘಲ್ ಇ ಅಝಮ’ ಚಿತ್ರ ಕೂಡ ಒಂದು. ಈ ಚಿತ್ರವನ್ನು ಚಿತ್ರೀಕರಿಸಲು ತೆಗೆದುಕೊಂಡಿದ್ದು ಬರೋಬ್ಬರಿ ಹದಿನಾರು ವರ್ಷಗಳು. ಚಿತ್ರೀಕರಣ ಪ್ರಾರಂಭವಾದಾಗ ಅವಿವಾಹಿತನಾಗಿದ್ದ ನಿರ್ದೇಶಕ ಕೆ. ಆಸಿಫ್, ಚಿತ್ರ ಬಿಡುಗಡೆಯಾದಾಗ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ. ಅಷ್ಟು ಸುದೀರ್ಘವಾಗಿ ಸಮಯವನ್ನು ತೆಗೆದುಕೊಂಡ ಪರಿಶ್ರಮ ತೆರೆಯ ಮೇಲೆ ಖಂಡಿತ ಕಾಣುತ್ತಿತ್ತು. ಆ ಚಿತ್ರದ ಚಿತ್ರಕಥೆ, ಸಂಭಾಷಣೆ, ಹಾಡುಗಳು, ಚಿತ್ರೀಕರಣ ಒಂದಕ್ಕಿಂತ ಒಂದು ಅದ್ಭುತವೇ
ಸರಿ.
ಆ ಚಿತ್ರದಲ್ಲಿ ಬರುವ ಸಲೀಂ ಮತ್ತು ಅನಾರ್ಕಲಿ ಪಾತ್ರಗಳು ಚಿರಸ್ಮರಣೀಯ. ಹಣ, ಅಂತಸ್ತು, ಜಾತಿ ಧರ್ಮಗಳನ್ನು ಮೀರಿದ ಈ ಪ್ರೇಮಿಗಳು, ಎಲ್ಲ ಕಾಲಕ್ಕೂ ಆದರ್ಶ ಪ್ರೇಮಿಗಳಾಗಿ ಉಳಿದುಕೊಳ್ಳುವಂತೆ ಸೃಷ್ಟಿಸಲಾಗಿತ್ತು. ಆ ಚಿತ್ರ ನೋಡಿದ ನಂತರ ಸಲೀಂ ಮತ್ತು ಅನಾರ್ಕಲಿಗಳಂತೆ ತಾವು ಪ್ರೇಮಿಸಬೇಕು ಎಂಬುದು ಪ್ರತಿಯೊಬ್ಬ ಪ್ರೇಮಿಗಳ ಕನಸಾಗಿಸಿತ್ತು. ಅವರ ಪ್ರೇಮ, ಪ್ರತಿಯೊಬ್ಬ ಪ್ರೇಮಿಗಳಿಗೂ ಒಂದು ಆದರ್ಶವಾಗಿತ್ತು. ಈ ಭಾವನೆಗೆ ಇನ್ನೊಂದು ಬಲವಾದ ಕಾರಣವಿತ್ತು. ಈ ಪಾತ್ರಗಳು ರೋಮಿಯೋ ಜೂಲಿಯೆಟ್ ರೀತಿ, ಕಾಲ್ಪನಿಕ ಪಾತ್ರ ವಾಗಿರದೇ ಇತಿಹಾಸದ ಒಂದು ಭಾಗವಾಗಿರುವುದರಿಂದ, ಆ ಪ್ರೇಮಿಗಳ ಕತೆಗೆ ಹೆಚ್ಚಿನ ತೂಕ.
ಸಾಮಾನ್ಯ ಜನರಲ್ಲಿ ಸಲೀಮ್ ಅನಾರ್ಕಲಿ ಆದರ್ಶ ಪ್ರೇಮದ ಬಗ್ಗೆ ದ್ಭಾವನೆ ತೀರಾ ಇತ್ತೀಚಿಗೆ ಬಿಡುಗಡೆಯಾದ ‘ತಾಜ್’ ಎಂಬ ವೆಬ್ ಸೀರೀಸ್ ಬರುವವರೆಗೂ ಹಾಗೆ ಉಳಿದುಕೊಂಡಿತ್ತು. ಇವರ ಪ್ರೇಮ ಕಥೆಗೆ ಇನ್ನೊಂದು ಒಂದು ಕೋನವಿರಬ ಹುದು ಎಂಬ ಸಣ್ಣ ಅನುಮಾನವೂ ಜನರಲ್ಲಿ ಮೂಡದಂತೆ ಮೊದಲು ಪರಿಸರ ಸೃಷ್ಟಿ ಮಾಡಲಾಗಿತ್ತು. ಈ ಕಥೆಗೆ ಮತ್ತೊಂದು ಕೋನದ ದೃಷ್ಟಿಕೋನ ವಿದೆ ಎಂದು ಸರಣಿ ನೋಡಿದ ಜನರು ಆಘಾತಕ್ಕೆ ಒಳಗಾದರು.
ಇದರಲ್ಲಿ ಅನಾರ್ಕಲಿಯನ್ನು ಅಕ್ಬರನ ಅನಽಕೃತ ಪತ್ನಿ ಎಂಬ ವಿವರ ಬಯಲಾಗಿತ್ತು. ಅಪ್ಪನ ಪ್ರೇಮಿಯಾದ ಅನಾರ್ಕಲಿಯನ್ನೇ, ಅಕ್ಬರನ ಮಗನಾದ ಸಲೀಂ ಪ್ರೇಮಿಸುವುದೇ ಒಂದು ರೋಚಕ ಕಥೆ. ಅತ್ಯಂತ ಶಕ್ತಿಶಾಲಿಯಾಗಿದ್ದ ಅಕ್ಬರ್, ಈ ತ್ರಿಕೋನ ಪ್ರೇಮಕಥೆಯಲ್ಲಿ ಮುಜುಗರದ ಮದ್ಯೆ ಮೇಲುಗೈ ಸಾಧಿಸುತ್ತಾನೆ. ಮೊದಲು ಕೇಳಿದ ಕತೆಗೆ ಯಾವುದೇ ವ್ಯತ್ಯಾಸವಾಗದಂತೆ, ಈ ಕಥೆಯ ಇನ್ನೊಂದು ಮುಖವನ್ನು ತೋರಿಸಿರುವುದೇ ಈ ವೆಬ್ ಸರಣಿ ಯ ವಿಶೇಷ.
ಸಮಗ್ರ ದೃಷ್ಟಿಕೋನದಿಂದ ಇವರ ಕಥೆಗಳನ್ನು ನೋಡಿದಾಗ ಅನಾರ್ಕಲಿ ಮತ್ತು ಸಲೀಂ ಆದರ್ಶಗಳು ಪ್ರೇಮಿಗಳಾಗಿ ಉಳಿದುಕೊಳ್ಳುವುದಿಲ್ಲ. ಒಬ್ಬರ ವಿಷಯವನ್ನು ಮತ್ತೊಬ್ಬರಿಗೆ ತಿಳಿಸದೇ, ಅಪ್ಪ-ಮಗನನ್ನು ಏಕಕಾಲದಲ್ಲಿ ನಿಭಾಯಿಸುವ ಅನಾರ್ಕಲಿ ಒಂದು ವಿಚಿತ್ರವಾಗಿಯೇ ಕಾಣಿಸು ತ್ತಾಳೆ. ಅಪ್ಪನ ಪ್ರೇಮಿಯನ್ನು, ಪ್ರೀತಿಸುವ ಸಲೀಮನ ಬಿಸಿರಕ್ತ ಅರ್ಥಮಾಡಿಕೊಳ್ಳುವಲ್ಲಿ ಕಷ್ಟವಾಗುವುದಿಲ್ಲ. ರಾಜ್ಯ- ರಾಜ್ಯಭಾರ-ಅಧಿಕಾರ ಇವುಗಳೇ ಪ್ರಮುಖವಾಗಿದ್ದ ಮೊಗಲ್ ರಾಜರಿಗೆ, ಹೆಂಗಸರೆಂಬುದು ಯಾವ ವಿಶೇಷ ಮುಖ್ಯ ಸಂಗತಿಯೂ ಅಲ್ಲ ಎಂಬ ಭಾವನೆ ಮೂಡುವುದು ಸಹಜ.
ಕಾನೂನು ಕ್ರಮದಿಂದ ಪಾರಾಗಲು ಇದೊಂದು ಕಾಲ್ಪನಿಕ ಕತೆ ಎಂದು ನಿರ್ದೇಕರು ಹೇಳಿಕೊಂಡಿದ್ದಾರೆಯಾದರೂ, ಸೂಕ್ಷ್ಮಾತಿ ಸೂಕ್ಷ್ಮ ವಿವರಣೆಗಳು ಇರುವುದರಿಂದ, ಇದರಲ್ಲಿ ಅಧ್ಯಯನ ಅಡಕವಾಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಏನೇ ಹೇಳಿ, ಕಥೆಯ ಒಂದು ಮುಖವನ್ನು ಮುಚ್ಚಿಟ್ಟು ಓದಿದಾಗ ಬರುವ ಭಾವನೆಗಳಿಗೂ, ಕಥೆಯನ್ನು ಎಲ್ಲ ದೃಷ್ಟಿಕೋನದಲ್ಲಿ ನೋಡಿದಾಗ ಮೂಡುವ ಭಾವನೆಗಳು ಇದು ಅಜಗಜಾಂತರ. ಶಹಜಹಾನ್‌ನ ಚರಿತ್ರೆಯನ್ನು ನೋಡಿದಾಗಲೂ, ನಿಜವಾಗಲೂ ಇತಿಹಾಸಕಾರರು ಹೇಳಿದ ಹಾಗೆ ‘ಈ ತಾಜ್ ಮಹಲ್ ಒಂದು ಪ್ರೇಮದ ಸಂಕೇತವಾ?’ ಎಂದು ಅನುಮಾನ ಮೂಡುತ್ತದೆ.
ಷಹಜಹಾನ್‌ನ ಏಳು ಅಧಿಕೃತ ಪತ್ನಿಯರಲ್ಲಿ ಮಮತಾಜ್ ಕೂಡ ಒಬ್ಬಳು. ೧೪ನೇ ಹೆರಿಗೆಯಲ್ಲಿ ರಕ್ತಸ್ರಾವದಿಂದ ಮಮ್ತಾಜಳು ಮರಣ
ಹೊಂದುತ್ತಾಳೆ. ಆನಂತರ ಅವಳ ಸಹೋದರಿಯನ್ನು ಮದುವೆಯಾಗುತ್ತಾನೆ ಶಹಜಹಾನ್. ಅವರ ಮಗಳಾದ ಜಹಾನರ ಮತ್ತು ಷಹಜಹಾನ್ ಬಗ್ಗೆಯೂ ಹಲವಾರು ಕಥೆಗಳಿವೆ. ಮಗಳನ್ನು ಮದುವೆ ಮಾಡಿಕೊಡದೆ, ಅವಳು ಬದುಕಿ ಇರುವವರೆಗೂ ಷಹಜಹಾನ್‌ನ ಅರಮನೆಯ
ಇದ್ದುದ್ದಕ್ಕೆ ಇದೂ ಒಂದು ಕಾರಣ ಎಂದು ಹೇಳಲಾಗುತ್ತದೆ.
ಇಂತಹ ಷಹಜಹಾನ್ ನಿಜವಾಗಲೂ ಪ್ರೇಮದ ಸಂಕೇತವಾಗಿ ತಾಜ್ ಮಹಲ್ ಕಟ್ಟಿಸಿದನೋ ಅಥವಾ ಇದಕ್ಕೆ ಬೇರೇನೋ ಕತೆಗಳಿಯಿವೆಯೋ ಗೊತ್ತಿಲ್ಲ. ತಾಜ್ ಮಹಲಿನ ನೆಲಮಾಳಿಗೆಯಲ್ಲಿ ಏನಿದೆ ಎಂಬುದನ್ನ ಇದುವರೆಗೂ ಗುಪ್ತವಾಗಿಸಿರಿವುದು ಮತ್ತು ಸ್ವಾತಂತ್ರ್ಯಾ ನಂತರ ತಾಜ್ ಮಹಲಿನ ಹಿಂಬಾಗಿಲನ್ನು ಶಾಶ್ವತವಾಗಿ ಕಲ್ಲುಗಳಿಂದ ಮುಚ್ಚಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಇಂತಹ ವಿವಾದಕ್ಕೆ ಇತ್ತೀಚೆಗೆ ಸೇರಿಕೊಂಡಿರುವುದು ಟಿಪ್ಪು ಸುಲ್ತಾನನ ಸಾವು. ನಮ್ಮೆಲ್ಲರಿಗೂ ಶಾಲೆಗಳಲ್ಲಿ ತಿಳಿಸಿರುವಂತೆ ಟಿಪ್ಪು ಸುಲ್ತಾನನ ಸಾವು, ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಆಗಿರುವುದು ತಿಳಿದು ಬರುತ್ತದೆ. ಆದರೆ ಅವನನ್ನು ಕೊಂದವರು ಯಾರು ಎಂಬುದರ ಬಗ್ಗೆ ಹಲವಾರು ಗೊಂದಲ ಗಳಿವೆ.
ಕೆಲವೊಂದು ಸ್ಥಳಗಳಲ್ಲಿ ಅನಾಮಧೇಯ ಯೋಧರು ಟಿಪ್ಪು ಸುಲ್ತಾನನನ್ನು ಕೊಂದರು ಎಂದು ದಾಖಲಾಗಿದ್ದರೆ, ಬ್ರಿಟಿಷ್ ಇತಿಹಾಸಕಾರರನ್ವಯ ಹ್ಯಾರಿಸ್ ಹಾರಿಸಿದ ಗುಂಡಿನಿಂದ ಸುಲ್ತಾನನ ಸಾವು ಎಂದು ಹೇಳಲಾಗಿದೆ. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನ ಆಡಳಿತದ ವಿರುದ್ಧ ಬಂಡೆದ್ದಿದ್ದ ಒಕ್ಕಲಿಗ ಸಮುದಾಯದ ಕಾಣಿಕೆ ಬಗ್ಗೆ ನಾವು ಇತಿಹಾಸದಲ್ಲಿ ಕೇಳಿದ್ದು ಕಡಿಮೆ. ಇಂದಿಗೂ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂದೇ ಹೆಸರಾಗಿರುವ ಮಂಡ್ಯದ ಒಕ್ಕಲಿಗ ಜನರಿಗೆ ಪರ್ಷಿಯನ್ ಹೇರಿಕೆ ಸಿಟ್ಟಿಗೆಬ್ಬಿಸುವುದು ಸಹಜ.
ಆದರೆ ದೇಜವರೇಗೌಡರ ‘ಸುವರ್ಣ ಮಂಡ್ಯ’ ಎಚ್‌ಎಲ್ ನಾಗೇಗೌಡರ ‘ಪ್ರವಾಸಿ ಕಂಡ ಇಂಡಿಯಾ’ ಇವುಗಳಲ್ಲಿ ಒಕ್ಕಲಿಗರ ಕಾಣಿಕೆಯನ್ನು
ತಿಳಿಸಿರುವುದು ಮುನ್ನಲೆಗೆ ಬಂದಿದೆ. ರಾಜ ಮಾತೆ ರಾಣಿ ಲಕ್ಷ್ಮಮ್ಮಣ್ಣಿ ಅವರ ಗೆಜೆಟಿಯರ್‌ಗಳಲ್ಲಿ ಉರಿಗೌಡ ಮತ್ತು ದೊಡ್ಡನಂಜೇಗೌಡ ಇವರ ಹೆಸರು ಇರುವುದರಿಂದ ವ್ಯಕ್ತಿಗಳು ಕಾಲ್ಪನಿಕ ಪಾತ್ರವಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮೈಸೂರು ಸಂಸ್ಥಾನದ ಬಗ್ಗೆ ಬರುವ ಲಾವಣಿಗಳಲ್ಲಿ ‘ಅರಮನೆ ಬಿಲವ ಹೊಕ್ಕಿ, ಗುದ್ದಿ ಗುದ್ದಿ ಕೊಂದರು’ ಎನ್ನುವ ಪದಗಳು ಯಾರನ್ನು ಉದ್ದೇಶಿಸಿದ್ದು? ಎಂದು ಜನರು ಕೇಳುತ್ತಿದ್ದಾರೆ.
ಟಿಪ್ಪು ಸುಲ್ತಾನನಂತಹ ಮಹತ್ವದ ವ್ಯಕ್ತಿಯ ಸಾವಿನ ಬಗ್ಗೆ ನಮ್ಮ ಸ್ಥಳೀಯ ಇತಿಹಾಸಕಾರರು ಹೆಚ್ಚಿನ ಗಮನ ಕೊಡದಿರುವುದೇ ಒಂದು ಸೋಜಿಗವೇ ಸರಿ. ಈ ಇದರ ಬಗ್ಗೆ ಇತಿಹಾಸಕಾರರು ಹೆಚ್ಚು ಮಾತನಾಡದೆ ಬರಿ, ರಾಜಕಾರಣಿಗಳು ಹೊಡೆದಾಡುತ್ತಿರುವುದರಿಂದ ಗೊಂದಲವೇ ಹೆಚ್ಚಾಗುತ್ತದೆ.
ಟಿಪ್ಪು ಸುಲ್ತಾನನ್ನು ಕೊಂದವರು ಯಾರು ಎಂಬುದರ ಬಗ್ಗೆ ಕರ್ನಾಟಕದಲ್ಲಿ ವಿವಾದ ನಡೆಯುತ್ತಿರುವ ಸಮಯದಲ್ಲಿ, ಕೇರಳದಲ್ಲಿ ವೈದ್ಯರು, ಆಸ್ಪತ್ರೆಗಳ ಮೇಲಿನ ದಾಳಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇರಳದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ದಾಳಿ ಪ್ರಕರಣಗಳು ಕಳೆದ ವರ್ಷ ದಾಖಲಾಗಿದ್ದರೂ, ಯಾವುದೇ ಪ್ರಕರಣದಲ್ಲಿ ಪೊಲೀಸರು ಕ್ರಮ ಜರುಗಿಸದೇ ಇರುವುದು ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚಿಗೆ ನಡೆದ ಪ್ರಕರಣದಲ್ಲಿ ಸತ್ತು ಜನಿಸಿದ (ಜನಿಸುವಾಗ ಮರಣ ಹೊಂದಿದ್ದಲ್ಲ) ಮಗುವಿನ ಪ್ರಕರಣದಲ್ಲಿ ವೈದ್ಯರ ಮತ್ತು ಅವರ ಪತಿಯ ಮೇಲೂ ದಾಳಿ ನಡೆದಿದೆ. ವೈದ್ಯರ ಮೇಲಿನ ದಾಳಿಗಳನ್ನು ರಾಜಕಾರಣಿಗಳು ಸಮರ್ಥಿಸಿ ಕೊಳ್ಳುತ್ತಿರುವುದು, ವೈದ್ಯರಿಗೆ ತಕ್ಕ ಶಾಸ್ತಿಯಾಯಿತು ಎಂದು ದಾಳಿಮಾಡಿದವರನ್ನು ರಕ್ಷಿಸುತ್ತಿರುವುದು ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲ ಸಾವಿಗೂ ವೈದ್ಯರೇ ಕಾರಣವೇ, ವೈದ್ಯ ಹಸ್ತಕ್ಷೇಪವಿಲ್ಲದಿದ್ದರೆ ಸಾವೇ ಸಂಭವಿಸುವುದಿಲ್ಲವೇ ಎಂಬ ಪ್ರಶ್ನೆಯನ್ನು ವೈದ್ಯರು ಕೇಳುತ್ತಿದ್ದಾರೆ.
ರಾಜಕಾರಣಿಗಳೇ ಅನಗತ್ಯವಾಗಿ ದೂರವಾಣಿ ಕರೆ ಮಾಡಿದರೆಂದು ಜನರನ್ನ ಬಂಧಿಸಿದ ಪ್ರಕರಣ ನೋಡಿದ್ದೇವೆ. ವಿಮಾನದಲ್ಲಿ ಮೂತ್ರಮಾಡಿದ ಎಂದು ಆರೋಪಕ್ಕೆ ವಿಚಾರಣೆಯಿಲ್ಲದೆ ಬಂಽಸುವುದನ್ನು ಕಂಡಿದ್ದೇವೆ. ಆದರೆ ವೈದ್ಯರ ಮೇಲಿನ ಪ್ರಾಣಾಂತಿಕ ದಾಳಿಗೂ ಯಾವುದೇ ಕಾಳಜಿ ತೋರದ ವ್ಯವಸ್ಥೆ ಬಗ್ಗೆ ವೈದ್ಯ ಸಮುದಾಯ ರೋಸಿ ಹೋಗಿರುವು ಮಾತ್ರ ಸತ್ಯ. ವೈದ್ಯರ ಜೀವದ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಸಮಾಜ, ಜನರ ಪ್ರಾಣವನ್ನು ವೈದ್ಯರು ರಕ್ಷಿಸಬೇಕು ಎಂದು ನಿರೀಕ್ಷಿಸುವುದೇ ಒಂದು ವಿಪರ್ಯಾಸ !
ಕೊನೆಮಾತು: ಟಿಪ್ಪು ಸುಲ್ತಾನನ ಈಗೇನಾದರೂ ಮೃತಪಟ್ಟಿದ್ದರೆ, ಅದನ್ನ ಸುಲಭವಾಗಿ ವೈದ್ಯರ ತಲೆಗೆ ಕಟ್ಟಬಹುದಿತ್ತು. ಯುದ್ಧದಲ್ಲಿ ಗಾಯಗೊಂಡ ಟಿಪ್ಪುವನ್ನು ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರ ಅಸಾಮರ್ಥ್ಯದಿಂದ ಸಾವು ಸಂಭವಿಸಿದೆ ಎಂದು ಹೇಳುತ್ತಿದ್ದರೋ ಏನೋ!