Thursday, 12th December 2024

ಹರ್ಷ ನೀಡಿದ ಟಿಪ್ಸ್: ಕ್ರಿಕೆಟಿಗೂ, ಬದುಕಿಗೂ !

ಸುಪ್ತ ಸಾಗರ

rkbhadti@gmail.com

ಕೆಲಸದ ಸ್ಥಳದಲ್ಲಿ ಖುಷಿ ಇರಲಿ. ಒತ್ತಡದ ಮನೋಭಾವ ನಿಮಗೆ, ತಂಡಕ್ಕೆ ಎಂದೂ ಕಾಡದಿರಲಿ. ಇಷ್ಟಪಟ್ಟು ಮಾಡುವ ಕೆಲಸದಿಂದ ಮಾತ್ರ ವ್ಯಕ್ತಿ ಮತ್ತು ಸಂಸ್ಥೆ ಎರಡರ ಯಶಸ್ಸೂ ಸಾಧ್ಯವಿದೆ ಎಂಬುದನ್ನು ಅವಲೋಕಿಸಿ ಬರೆದಿದ್ದಾರೆ. ಇದು ಕೇವಲ ಕ್ರಿಕೆಟ್‌ಗೆ ಅನ್ವಯಿಸುವ ಮಾತಲ್ಲ. ಬದುಕನ್ನು ಗಮನಿಸಿ, ಕ್ರಿಕೆಟ್‌ನೊಂದಿಗೆ ಹೋಲಿಸಿ ಬರೆಯುತ್ತಾ ಹೋಗುತ್ತಾರೆ. 

ಹಾಗೆಂದು ನಾನೇನು ಕಟ್ಟರ್ ಕ್ರಿಕೆಟ್ ಪ್ರೇಮಿಯಲ್ಲ. ಕ್ರಿಕೆಟ್ ದ್ವೇಷವೂ ಇಲ್ಲ. ತೀರಾ ರೋಚಕ ವೆನಿಸುವ ಘಟ್ಟದಲ್ಲಿ(ಅಂಥ ಹಂತ ತಲುಪಿದಾಗ ಸಹಜವಾಗಿಯೇ ಎಲ್ಲೆಡೆ ಅದನ್ನು ಬಿಂಬಿಸುವ ವಾತಾವರಣ ನಿರ್ಮಾಣವಾಗಿದ್ದನ್ನು ಗ್ರಹಿಸಿ) ಪಂದ್ಯವನ್ನು ಕೆಲ ಹೊತ್ತು ನೋಡಲು ನಿಲ್ಲುವುದಿದೆ. ಅಥವಾ ವಾರದ ರಜೆಯ ತೆಗೆದುಕೊಂಡು ಮನೆಯಲ್ಲೇ ಇದ್ದು, ಅಭ್ಯಾಸ ಬಲದಿಂದ ನಿದ್ದೆ ಬಾರದೇ ಕೂತಿದ್ದಾಗ, ಮಗಳು ಹೋಗಿ ತನ್ನ ಪಾಡಿಗೆ ತಾನು ಮಲಗಿಬಿಟ್ಟರೆ ಬೇರೆ ದಾರಿ ಕಾಣದಾದಾಗ, ಒಳ್ಳೆಯ ಸಿನೆಮಾ ನೋಡಲು, ಕೈಲಿ ಹೊಡಕೊಂಡ ಪುಸ್ತಕ ಇಂಟರೆಸ್ಟಿಂಗ್ ಅಂತ ಅನ್ನಿಸದಾದಾಗ ಕ್ರಿಕೆಟ್ ಮೊರೆ ಹೋಗುವುದೂ ಇದೆ.

ಅದು ಬಿಟ್ಟರೆ ನಾವು ಕ್ರಿಕೆಟ್ ಅನ್ನು ಚೂರಾದರೂ ಅರ್ಥ ಮಾಡಿಕೊಳ್ಳಬೇಕೆಂದು ಹೆಣಗಾಡಿದ್ದು, ಕೇಳಿದ್ದು ಕಾಲೇಜು ಓದುತ್ತಿದ್ದ ಜಮಾನಾದಲ್ಲೇ. ನಮ್ಮ ಏಜಿನ ಹುಡುಗರೆಲ್ಲ ಟೆಸ್ಟ್ ಪಂದ್ಯಗಳ ಕಾಮೆಂಟರಿಯನ್ನೂ ಹಳೆಯ ಫಿಲಿಪ್ ರೇಡಿಯೋವನ್ನು ಕಿವಿಗಿಟ್ಟುಕೊಂಡು ಕೇಳುತ್ತಿದ್ದರು.

ಮಲೆನಾಡಿನ ಹಳ್ಳಿ ಮೂಲೆಯ ನಮ್ಮೂರಿನಲ್ಲಿ ಸರಿಯಾಗಿ ರೇಂಜ್ ಸಿಗದೇ, ಡಬ್ಬಾ ಟ್ರಾನ್ಸಿಸ್ಟರ್‌ಗಳ ತಲೆ ಮೇಲೊಂದು ಕುಟ್ಟಿ, ಕಿವಿ ಹಿಂಡಿ, ಗುಡ್ಡ ಮೇಲೆ ಹೋಗಿ ನಿಂತು…  ತೋಟದ ಕಾದಿಗೆಯಲ್ಲಿಳಿದು, ಗೇರು ಮರದ ಕೊಂಬೆಯ ಮೇಲೆ ಒಂಟಿ ಕಾಳಲ್ಲಿ ನಿಂತು, ಮೂರ‍್ನಾಲ್ಕು ದಿನ ಗುಡ್ಡೆಗೆ ಹೋಗುವಾಗಲೂ (ಉತ್ತರಕನ್ನಡದ ಭಾಷೆಯಲ್ಲಿ ಹಾಗಂದರೆ ಕಕ್ಕ ಮಾಡಲು ಹೋಗುವುದು ಎಂದರ್ಥ-ಆಗೆಲ್ಲ ಮನೆಯಲ್ಲಿ ಶೌಚಾಲಯಗಳಿಲ್ಲದೇ ಗುಡ್ಡಕ್ಕೆ ತಂಬಿಗೆ ಹಿಡಿದುಕೊಂಡು ಹೋಗಿ, ಕೆಲಸ ಮುಗಿಸಿಕೊಂಡು ಬರಬೇಕಿದ್ದುದರಿಂದ ಅದಕ್ಕೆ ‘ಗುಡ್ಡೆಗೆ ಹೋಗೋದು’ ಎಂಬ ಅನ್ವರ್ಥವೇ ಬಂದಿದೆ) ಕಿವಿಗೆ ಅಂಟಿಸಿಕೊಂಡು ಓರಿಗೆಯವರೆಲ್ಲ ಓಡಾಡುವಾಗ ಇದೆಂಥಾ ಹುಚ್ಚಪ್ಪಾ ಅನ್ನಿಸದೇ ಇರಲಿಲ್ಲ.

ಮದುವೆ-ಮುಂಜಿಗಳಲ್ಲಿ ಸೇರಿದ್ದಾಗ, ಊರೊಟ್ಟಿನ ಕೆಲಸಕ್ಕೆ, ದೊನ್ನಬಾಳೆಗೆ, ಮೈಯ್ಯಾಳಿಗೆ ಅಂತೆಲ್ಲ ಹೋಗಿದ್ದಾಗಲೂ ಜಾಂಟಿ ರೋಡ್ಸ್, ಸ್ಮಾಲು, ಡೆಸ್ಮಂಡ್ ಹೇನ್ಸ್, ಗಾರ್ಡನ್ ಗ್ರಿನಿಜ್, ಅಲನ್ ಬಾರ್ಡ್ರ್, ಜಾವೆದ್ ಮಿಯಾಂದಾದ್, ಇಯಾನ್ ಬಾತಮ್, ಇಂಜಮಾಮ್, ಜೆಫ್ ಬಾಯ್ಕಾಟ್ ಅಂತೆಲ್ಲ ಮಾತನಾಡಿಕೊಳ್ಳುತ್ತಿದ್ದಾಗ ನನ್ನಂಥವರಿಗೆ ಅದು ಯಾವುದೋ ಅನ್ಯಗ್ರಹದ ವಿಚಾರಗಳಂತೆ ಕೇಳಿಸುತ್ತಿದ್ದುದು ಸುಳ್ಳಲ್ಲ. ಹಾಗೆಂದು
ಅದನ್ನು ತೋರಿಸಿಕೊಳ್ಳುವಂತೆಯೂ ಇರಲಿಲ್ಲ. ನಮಗೆ ಕ್ರಿಕೆಟ್ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೇ ನಾವೊಂಥರಾ ಅಸ್ಪೃಶ್ಯರು, ಅಶಿಕ್ಷಿತರಂತೆ
ಕಾಣಲ್ಪಡುತ್ತಿದ್ದುದೂ ಇದೆ.

ಕ್ರಿಕೆಟ್ ಗೊತ್ತಿಲ್ಲದವರು, ಕಾಮೆಂಟರಿ ಕೇಳದವರು, ಹಿಂದಿ ಅರ್ಥ ಆಗದವರು( ಆಗೆಲ್ಲ ಹಿಂದಿ ಕಾಮೆಂಟರಿಗಳಷ್ಟೇ ಹೆಚ್ಚಾಗಿ ಬರುತ್ತಿದ್ದುದು…) ನಾವೊಂದಿಷ್ಟು ಜನ ಉಳಿದವರು ಕಣ್ಣಲ್ಲಿ ‘ಗುಗ್ಗು’ಗಳಾಗಿದ್ದುದೂ ಉಂಟು. ಬೆಂಗಳೂರಿಗೆ ಬಂದ ಮೇಲೆ ಗೂರ್ಖಾಗಳೊಟ್ಟಿಗೆ, ಪಾನ್ ಶಾಪ್
ನಬನಾರಸಿ ಪಂಡಿತ್‌ನೊಂದಿಗೆ ಮಾತನಾಡಲು ಒಂದಷ್ಟು ಲಾಟ್‌ಪೂಟ್ ಹಿಂದಿ ಕಲಿತದ್ದು ಬಿಟ್ಟರೆ, ಹೈಸ್ಕೂಲಿನಲ್ಲೆಲ್ಲ ಥರ್ಡ್ ಲಾಂಗ್ವೆಜ್ ಸಂಸ್ಕೃತದ ಮೊರೆ ಹೋದ ‘ತಂಬ್ಳಿಗಳು’ (ಹವ್ಯಕ ಮಕ್ಕಳನ್ನು ಸಹಪಾಠಿಗಳು ಗುರುತಿಸುತ್ತಿದ್ದುದು ಹಾಗೆಯೇ) ನಾವು. ಬರೀ ಕ್ರಿಕೆಟ್ ಕಾಮೆಂಟರಿ ಕೇಳಿಯೇ ಹಿಂದಿ-ಇಂಗ್ಲಿಷ್‌ನಲ್ಲಿ ಪಂಟರ್ ಗಳಾದ ನಮ್ಮ ಗೆಳೆಯರೆಷ್ಟೋ!

ಒಟ್ಟಾರೆ, ಕ್ರಿಕೆಟ್ ಎಂದರೆ ಅದು ‘ಮುಂದುವರಿದ ಯುವ ಜನಾಂಗ’ದವರ ವಿಚಾರ ಎಂಬಷ್ಟರ ಮಟ್ಟಿಗೆ ಬ್ರಾಂಡ್ ಆಗಿತ್ತು. ಆ ದೃಷ್ಟಿಯಲ್ಲಿ ಆಗ
ನಾವು ‘ಗಾಂಧಿ’ಗಳೇ. ಕ್ರಿಕೆಟ್ ವಿಚಾರದಲ್ಲಿ ಈಗೂ ಅದೇ! ಹೀಗಾಗಿ ತೀರಾ ಆಟದ ಟೆಕ್ನಿಕಲ್ ಸಂಗತಿಗಳು ಅರ್ಥವಾಗದಿದ್ದರೂ, ಆಟವನ್ನು ಎಂಜಾಯ್ ಮಾಡಬಲ್ಲೆ. ಇಂತಿಪ್ಪ ಕ್ರಿಕೆಟ್‌ನ ನಾನು ನೋಡಿದ ಅತ್ಯದ್ಭುತ ಪಂದ್ಯವೊಂದರ ಬಗ್ಗೆ ಹೇಳಲೇಬೇಕು. ಅದು ೨೦೧೬ರ ಸರಿ ಸುಮಾರು ಇದೇ ಸಮಯ ಇರಬೇಕು. ಎಷ್ಟು ಜನ ಟಿ-ಟ್ವೆಂಟಿ ವಿಶ್ವಕಪ್‌ನ ಭಾರತ-ಬಾಂಗ್ಲಾ ನಡುವಿನ ಆ ಪಂದ್ಯವನ್ನು ವೀಕ್ಷಿಸಿದರೋ, ಇಲ್ಲವೋ ಗೊತ್ತಿಲ್ಲ. ನೋಡದವರಲ್ಲೂ ಒಂದು ಹಂತದ ನಿರಾಸೆ, ಪಶ್ಚಾತ್ತಾಪ ಮೂಡಿಸುವಷ್ಟರ ಮಟ್ಟಿಗೆ ಆ ಪಂದ್ಯ ಸುದ್ದಿ ಮಾಡಿತ್ತು. ಸರಿ ಸುಮಾರು ಒಂದಿಡೀ ವಾರ ಆಫೀಸು, ಹೋಟೆಲು, ಕಾಲೇಜು ಕಾರಿಡಾರು, ಆ ಪಂದ್ಯದ್ದೇ ಚರ್ಚೆ, ಸಾಮಾಜಿಕ ಜಾಲ ತಾಣಗಳಲ್ಲಂತೂ ಕಮೆಂಟುಗಳ ಸುರಿಮಳೆ. ಮಹೇಂದ್ರ ಸಿಂಗ್ ಧೋನಿಯೆಂಬ ಮಹಾ ತಾಳ್ಮೆಯಮೂರ್ತಿ ಬಗ್ಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗಿದ್ದು ಆಗಲೇ.

ಬೈ ಛಾನ್ಸ್ ಬಾಂಗ್ಲಾದೆದುರು ಭಾರತ ಸೋತು ಬಿಟ್ಟಿದ್ದರೆ ಇವರೆಲ್ಲರೂ ವಾಚಾಮಗೋಚರ ಬೈಯ್ದಾಡುತ್ತಿದ್ದರು ಎಂಬುದರಲ್ಲಿ ನನಗಂತೂ
ಸಂಶಯಗಳಿರಲಿಲ್ಲ. ಸೋಲುವುದು ಹಾಗಿರಲಿ, ಕೊನೆ ಓವರ್‌ನ, ಕೊನೆ ಬಾಲ್‌ನಲ್ಲಿ ಧೋನಿ, ಶುವಾಗತನನ್ನು ರನ್‌ಔಟ್ ಮಾಡದೇ ಹೋಗಿದ್ದರೂ ಗ್ರಹಚಾರ ಕಾದಿತ್ತು. ಅಭಿಮಾನಿಗಳೇ ಹಾಗೆ. ಏನೋ ಅಂತೂ ಗೆದ್ದಿದ್ದರು ಬಿಡಿ, ಎನ್ನುವುದಕ್ಕಿಂತ ಆ ಗೆಲವನ್ನು ಕೊಂಚ ಬದುಕಿಗೆ ಹೋಲಿಸಿ ಕೊಂಡರೆ ನಾವಿನ್ನೂ ಕ್ರಿಕೆಟ್‌ನಿಂದ ಸಾಕಷ್ಟು ಕಲಿಯುವುದಕ್ಕಿದೆ ಎನಿಸಿದ್ದು ಸುಳ್ಳಲ್ಲ. ಈಗಲೂ ಕ್ರಿಕೆಟ್ ಅನ್ನು ಆಟ ಎಂಬುದಕ್ಕಿಂತ ಜೀವನದ ದೃಷ್ಟಿಯಿಂದ ನೋಡುವುದೇ ಹೆಚ್ಚು.
***

ತತ್ವಜ್ಞಾನಕ್ಕೆ ಹೋಗುವ ಮೊದಲು ಬಾಂಗ್ಲಾದ ವಿರುದ್ಧದ ಪಂದ್ಯದಲ್ಲಿ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳೋಣ. ಅಸೀಮ ಆತ್ಮ ವಿಶ್ವಾಸದಲ್ಲಿ,
ಒಂದಿನಿತೂ ತಾಳ್ಮೆಗೆಡದೇ ಇಡೀ ಪಂದ್ಯವನ್ನು ಕೊನೇ ಹಂತದಲ್ಲಿ ತನ್ನ ಕಡೆಗೆ ತಿರುಗಿಸಿಕೊಂಡಿದ್ದ ಅಂದಿನ ಧೋನಿಯ ತಂತ್ರಗಾರಿಕೆಯನ್ನು
ಮೆಚ್ಚಲೇಬೇಕು. ಮಾತ್ರವಲ್ಲ ನಾಯಕನಾಗಿ ತಾನು ತಪ್ಪೆಸಗದೇ, ಮಾರು ದೂರದಿಂದಲೇ ಅತಿ ಆತ್ಮವಿಶ್ವಾಸಕ್ಕೆ ಬಿದ್ದು ಚೆಂಡನ್ನು
ಎಸೆದು ಬಿಟ್ಟಿದ್ದರೂ ಶುವಾಗತ ಪ್ರಾಣಭಿಕ್ಷೆ ಪಡಕೊಂಡುಬಿಡುವ ಅಪಾಯಗಳಿದ್ದವು. ಧೋನಿ ಆ ಕ್ಷಣಕ್ಕಾಗಿ ಮೊದಲೇ ಸಿದ್ಧರಾಗಿದ್ದರಿರಬೇಕು.

ಬರುವ ಚೆಂಡನ್ನು ಹಿಡಿದು ಶತಾಯ ಗತಾಯ ರನ್‌ಔಟ್ ಮಾಡಿ, ಒಂದು ರನ್ ತಪ್ಪಿಸಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದರು.
ಅದಕ್ಕಾಗಿ ಮೊದಲೇ ಕೈಗವಸನ್ನು ಕಳಚಿ ನಿಂತಿದ್ದರು. ಏಕೆಂದರೆ ಗ್ಲೌಸ್ ಇದ್ದಾಗ ಹತ್ತು ಹದಿನೈದು ಅಡಿ ಹಿಂದಿನಿಂದ ನೇರವಾಗಿ ವಿಕೆಟ್‌ಗೆ ಗುರಿ ಇಟ್ಟು ಹೊಡೆಯವುದು ತುಸು ಕಷ್ಟವೇ. ಖಾಲಿ ಕೈನಲ್ಲಿ ಗುರಿಯನ್ನು ನಿಖರವಾಗಿ ಮುಟ್ಟಬಹುದು ಎಂಬುದು ಲೆಕ್ಕಾಚಾರ. ೨೨ ಂi iರ್ಡ್ಸ್‌ನಷ್ಟು ದೂರದಿಂದ ಬ್ಯಾಟ್ ಮನ್ ಓಡಿ ಬರುವುದರೊಳಗೆ ವಿಕೆಟ್ ಉದುರಿಸಬೇಕು. ಇನ್ನು ಅಂಥ ಸ್ಥಿತಿಯಲ್ಲಿ ತಾಳ್ಮೆಯೇ ಅತ್ಯಂತ ಪ್ರಮುಖ ಅಂಶ.

ಆತುರಕ್ಕೆ ಬಿದ್ದು ಅವಕಾಶ ಕಳಕೊಳ್ಳದೇ ಗುರಿ ತಲುಪಲೇಬೇಕು. ಶಾಂತ ಮನಃಸ್ಥಿತಿಯಲ್ಲಿ ಮಾತ್ರವೇ ಇದು ಸಾಧ್ಯ. ಏಕೆಂದರೆ ಚೆಂಡು ಬೌಲರ್‌ನ ಕೈಯಿಂದ ಹೊರ ಚಿಮ್ಮುತ್ತಿದ್ದಂತೆಯೇ ಬ್ಯಾಟ್ಸ್‌ಮನ್ ಓಡಲಾರಂಭಿಸಿರುತ್ತಾನೆ. ಆದರೆ ಆ ಚೆಂಡು ವಿಕೆಟ್‌ನ ಇನ್ನೊಂದು ತುದಿಯಲ್ಲಿರುವ ಬ್ಯಾಟ್ಸ್‌ಮನ್ ಅನ್ನು ದಾಟಿ, ತನ್ನ ಕೈ ಸೇರುವವರೆಗೂ ವಿಕೆಟ್ ಕೀಪರ್ ಕಾಯಲೇಬೇಕು. ಒಂದೊಮ್ಮೆ ಅಷ್ಟರಲ್ಲಿ ಬ್ಯಾಟ್ಸ್‌ಮನ್ ಸನಿಹಕ್ಕೆ ಬಂದುಬಿಟ್ಟಿದ್ದಾನೆ ಎಂದೆನಿಸಿದರೆ ನಿಂತಲ್ಲಿಂದಲೇ ವಿಕೆಟ್‌ನತ್ತ ಗುರಿಯಿಟ್ಟು ಕೀಪರ್ ಎಸೆಯಬೇಕು.

ಆವತ್ತಿನ ಪಂದ್ಯದಲ್ಲಿ ಶುವಾಗತ ಸಾಕಷ್ಟು ಅಂತರದಲ್ಲಿರುವುದನ್ನು ಗ್ರಹಿಸಿ, ಛಾನ್ಸ್ ತೆಗೆದುಕೊಳ್ಳದೇ ಧೋನಿ ರನ್‌ಔಟ್ ಮಾಡಿದರು. ಅದು ವಿವೇಚನೆಯ ವಿಚಾರ. ಅದನ್ನು ಅಂದು ಧೋನಿ ಮಾಡಿದ್ದರು. ಕೊನೆಯ ಬಾಲ್‌ನಲ್ಲಿ ಸ್ಟಂಪ್ ಮಾಡುವುದು ಯಾವುದೇ ವಿಕೆಟ್‌ಕೀಪರ್‌ನ ಗುರಿಯಾ ಗಿದ್ದರೂ ಇಲ್ಲಿ ಆ ವಿಕೆಟ್ ಅತ್ಯಂತ ಮುಖ್ಯವೂ ಆಗಿತ್ತು. ಕೊನೆ ಪಕ್ಷ ಟೈ ಮಾಡಿಕೊಳ್ಳಲೂ ಧೋನಿ ಸಿದ್ಧರಿರಲಿಲ್ಲ. ಇದಕ್ಕಿಂತ ವಿಕೆಟ್ ಕೀಪರ್ ಆಗಿ ಧೋನಿಯ ಸಾಮರ್ಥ್ಯ ಕಾಣಿಸಿದ್ದು, ಅದೇ ಪಂದ್ಯದಲ್ಲಿ ಬಾಂಗ್ಲಾದ ಶಬ್ಬೀರ್ ರೆಹಮಾನ್‌ನನ್ನು ಸ್ಟಂಪ್ ಮಾಡಿದ ರೀತಿಯಲ್ಲಿ. ಕಣ್ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ, ಬ್ಯಾಟ್ಸ್‌ಮನ್ ತುಸುವೇ ಆಯತಪ್ಪಿ ಕಾಲು ಎತ್ತಿದುದನ್ನು ಗ್ರಹಿಸಿ ಬೇಲ್ಸ್ ಉದುರಿಸಿದ್ದರು ಧೋನಿ.
***

ಈ ಹಂತದಲ್ಲಿ ಜಾಂಟಿ ರೋಡ್ಸ್ ನೆನಪಾಗುತ್ತಾರೆ. ಪಾಕಿಸ್ತಾನದ ಇಂಜಮಾಮ್ ಉಲ್‌ಹಕ್ ಅವರನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಜಾಂಟಿ, ಡೈವ್ ಹೊಡೆದು ರನ್‌ಔಟ್ ಮಾಡಿದ್ದು ಇವತ್ತಿಗೂ ಮಾಸದ ನೆನಪು. ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಹೊಸ ಮೈಲುಗಲ್ಲನ್ನೇ ನಿರ್ಮಿಸಿತು. ನಂತರದ ದಿನಗಳಲ್ಲಿ ಇಂಥ ಅನಿರೀಕ್ಷಿತ ಆಘಾತ, ಅಚ್ಚರಿಗಳನ್ನೆಲ್ಲ ‘ಹಿ ಡಿಡ್ ಎಲ್ಲಾ ಜಾಂಟಿ’ ಎನ್ನಲಾರಂಭಿಸಿ ನುಡಿಗಟ್ಟಾಗಿಯೇ ಉಳಿಯಿತು.
ಧೋನಿ ಮಾಡಿದ ರನ್‌ಔಟ್ ಸಹ ಇಂಥ ಶಾಶ್ವತ ನೆನಪನ್ನು ಕಟ್ಟಿಕೊಡುತ್ತದೆ.

ಮತ್ತೆ ಬಾಂಗ್ಲಾ-ಭಾರತ ಟಿ ಟ್ವೆಂಟಿ ಪಂದ್ಯಕ್ಕೆ ಬಂದರೆ ನಾವು ಗೆದ್ದದ್ದಕ್ಕಿಂತ ಬಾಂಗ್ಲಾ ಸೋತದ್ದು ದೊಡ್ಡ ಪಾಠವಾಗಬೇಕಿದೆ. ಆರಂಭದಿಂದಲೂ ಸುಸ್ಥಿತಿಯಲ್ಲೇ ಇದ್ದ ತಂಡ, ಕೊನೆಯ ಓವರ್‌ನಲ್ಲಿ ಕೊಂಚ ಓವರಾಗಿಯೇ ವರ್ತಿಸಿದ್ದು ಸೋಲಿಗೆ ಕಾರಣವಾಗಿತ್ತು. ಅಷ್ಟೊಂದು ಆತುರಕ್ಕೆ ಬಿದ್ದು ಆಡುವ ಅಗತ್ಯವೇ ಇರಲಿಲ್ಲ. ಹೋಗಲಿ ಎಂದುಕೊಂಡರೆ, ಒಂದು ಸಿಕ್ಸ್, ಒಂದು ಬೌಂಡರಿಯ ಬಳಿಕವೂ ಮೂರು ಎಸೆತಗಳಲ್ಲಿ ಕೇವಲ ಎರಡು ರನ್‌ನ ಅಗತ್ಯ ಇತ್ತು. ಬಂದ ಬಾಲನ್ನು ತಳ್ಳಿಕೊಂಡು ಹೊರಟಿದ್ದರೂ ಅನಾಯಾಸವಾಗಿ ವಿಜಯದ ನಗೆ ಬೀರಬಹುದಿತ್ತು.

ವಿನಾಕಾರಣ ತೆವಲಿಗೆ ಬಿದ್ದವರ ರೀತಿಯಲ್ಲಿ ಬಾಂಗ್ಲಾ ಆಟಗಾರರು ಅವತ್ತು ವರ್ತಿಸಿದ್ದರು ಎಂಬುದು ಸುಳ್ಳಲ್ಲ. ಇದಕ್ಕೆ ಕಾರಣ ಇಲ್ಲದಿಲ್ಲ. ಕಳೆದ ೨೦೦೭ರ ವಿಶ್ವಕಪ್ ಪಂದ್ಯವೊಂದರಲ್ಲಿ ಇದೇ ಬಾಂಗ್ಲಾ ಭಾರತಕ್ಕೆ ಸೋಲುಣ್ಣಿಸಿತ್ತು. ಆಗೆಲ್ಲ ತಂಡದ ಪರಿಶ್ರಮ, ತಂಡ ಕಟ್ಟಿದ ರೀತಿ,
ಬೆಳೆದು ಬಂದ ಪರಿಯನ್ನು ಕಂಡು ಕ್ರಿಕೆಟ್ ಜಗತ್ತೇ ಶ್ಲಾಘಿಸಿತ್ತು. ಝೀರೋದಿಂದಲೂ ಬಾಂಗ್ಲಾ ತಂಡ ಅತ್ಯಂತ ಶಿಸ್ತಿನಿಂದಲೇ ಬಂದಿದೆ. ಆದರೆ ಈ ಹಂತದಲ್ಲಿ ವಿನಾಕಾರಣ ಭಾರತವನ್ನು ಸೋಲಿಸುವುದೇ ಪ್ರತಿಷ್ಠೆ ಎಂಬ ರೀತಿಯಲ್ಲಿ ಅಲ್ಲಿನ ಆಟಗಾರರು ವರ್ತಿಸಿದ್ದು ಸ್ಪಷ್ಟ.

ಅವರು ಹಾಗೆ ವರ್ತಿಸುವಂತೆ ಹೊರ ಜಗತ್ತು ಅವರನ್ನು ಪ್ರೇರೇಪಿಸಿತ್ತು. ಯಾವುದೇ ತಂಡಕ್ಕೆ ಎಲ್ಲವನ್ನೂ ಗೆಲ್ಲಬೇಕೆಂಬದು ಸಾಮಾನ್ಯ,
ಸಹಜ ಹಂಬಲವಾಗಿರುತ್ತದೆ.  ದರಲ್ಲಿ ತಪ್ಪಿಲ್ಲ. ಆದರೆ ಉತ್ತಮ ತಂಡವಿದ್ದಾಗ್ಯೂ ದುರ್ಬಲ ಮನಸ್ಥಿತಿಗೆ ಬಲಿಬಿದ್ದು, ಪಕ್ಕಾ ಧೋನಿ ಸ್ಟೈಲ್‌ನಲ್ಲೇ ಪಂದ್ಯವನ್ನು ಗೆಲ್ಲಿಸಿಕೊಂಡು ಹೋಗುತ್ತೇವೆಂದು ಹೊರಟು ಮಣ್ಣು ಮುಕ್ಕಿದ್ದರು. ಧೋನಿ ಅಂತಿಮ ಘಟ್ಟದಲ್ಲಿ ಸಿಕ್ಸ್ ಎತ್ತಿಯೋ, ಚೆಂಡನ್ನು
ಬೌಂಡರಿಗಟ್ಟಿಯೋ ಪಂದ್ಯವನ್ನು ಗೆಲ್ಲಿಸುತ್ತಾರೆಂಬುದು ನಿಜ. ಆದರೆ ಹಾಗೆ ಅವರು ಮಾಡುವ ಮುನ್ನ ಉಳಿದಿರುವ ಓವರ್, ಗುರಿಯ ಮೊತ್ತ, ಕೈಯಲ್ಲಿರುವ ವಿಕೆಟ್ ಎಲ್ಲವನ್ನೂ ಪಕ್ಕಾ ಲೆಕ್ಕಾಚಾರಕ್ಕೆ ಒಳಪಡಿಸಿರುತ್ತಾರೆ.

ಅನಗತ್ಯ ಎಂಬಲ್ಲಿ ಅವರು ಆ ತಂತ್ರ ಬಳಸಿದ ಉದಾಹರಣೆಯೇ ಇಲ್ಲ. ಹೊರಗಿನ ಒತ್ತಡ ಹಾಗೂ ತಾಳ್ಮೆಗೆಟ್ಟ ಮನಃಸ್ಥಿತಿಗೆ ವ್ಯಕ್ತಿಗಳು ಸಿಲುಕಿಕೊಂಡರೆ ಮತ್ತೂ ಇವೆರಡರಿಂದ ಮುಕ್ತವಾಗಿ ಸಮಚಿತ್ತ ಕಾಯ್ದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಏಳು ವರ್ಷಗಳ ಹಿಮದಿನ ಆ
ಆಟ ಸ್ಪಷ್ಟ ನಿದರ್ಶನ. ತೀರಾ ಸೋತೇ ಹೋದೆವು, ಇನ್ನು ಬದುಕು ಮುಗಿದು ಹೋಯಿತು ಎಂಬಾಗಲೂ ಗೆಲ್ಲುವ ಅವಕಾಶಗಳಿರುತ್ತವೆ ಮತ್ತು ಗೆಲ್ಲುವ ಮುನ್ನವೇ ಗೆದ್ದೆವೆಂದು ಬೀಗುತ್ತ ಮೈಮರೆತರೆ ಬದುಕು ಹೇಗೆ ಮುಗ್ಗರಿಸುತ್ತದೆ ಎಂಬುದನ್ನು ಭಾರತ-ಬಾಂಗ್ಲಾ ಪಂದ್ಯ ಸಾರಿತ್ತು.
***

ಭಾರತದ ಯಶಸ್ವಿ, ಜನಪ್ರಿಯ ಕ್ರಿಕೆಟ್ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಯಾರಿಗೆ ಗೊತ್ತಿಲ್ಲ? ತಮ್ಮ ಅತ್ಯಂತ ಮೊನಚು ವಿಶ್ಲೇಷಣೆ, ನಿಖರ ವಿಮರ್ಶೆ, ಪದ ಪ್ರಯೋಗಗಳಲ್ಲಿನ ಜಿಪುಣತನ, ಸ್ಪಷ್ಟ ಉಚ್ಚಾರಣೆ, ನಗುಮೊಗದಿಂದ ಹೆಸರು ಮಾಡಿರುವ ಹರ್ಷ ತಮ್ಮದೇ ವಿಶಿಷ್ಟ ವೀಕ್ಷಕ ವಿವರಣೆ ಶೈಲಿಯಿಂದ ಖ್ಯಾತರಾದವರು.

‘ದಿ ವಿನ್ನಿಂಗ್ ವೇ-ಲರ್ನಿಂಗ್ ಫ್ರಂ ಸೋರ್ಟ್ ಫಾರ್ ಮ್ಯಾನೆಜರ‍್ಸ್’ ಅವರ ಕಿರು ಹೊತ್ತಗೆ ಅವರಿಗೆ ಒಬ್ಬ ಒಳ್ಳೆಯ ಲೇಖಕನ ಪಟ್ಟವನ್ನೂ ತಂದುಕೊಟ್ಟಿದೆ. ಲಕ್ಷಗಟ್ಟಲೆ ಪ್ರತಿ ಮಾರಾಟವಾಗಿ ಜಗತ್ತಿನ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದೆನಿಸಿ ದಾಖಲೆ ಬರೆದ ಪುಸ್ತಕವಿದು. ಬಹಳ ದಿನಗಳ ನಂತರ
ಮತ್ತೆ ಆ ಹೊತ್ತಗೆಯನ್ನು ಓದುತ್ತಿದ್ದೆ. ಇಂಥವೆಲ್ಲ ವಿಚಾರಗಳು ಅದರಲ್ಲಿ ಢಾಳಾಗಿ ತುಂಬಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಅನ್ನು, ಕ್ರಿಕೆಟ್ ಪಂದ್ಯಗಳನ್ನು ಜೀವನದೊಂದಿಗೆ ತುಲನೆ ಮಾಡಿ, ವ್ಯಕ್ತಿತ್ವ ವಿಕಸನ ವಿಚಾರ ಹೇಳುತ್ತಾ ಹೋಗುತ್ತಾರೆ ಅವರು. ಹರ್ಷ ಭಾಷಣದಿಂದಲೂ ವ್ಯಕ್ತಿತ್ವ ವಿಕಸನದಲ್ಲಿ ಹೆಸರಾದವರು. ಕ್ರಿಕೆಟ್ ಅನ್ನು ಇಟ್ಟುಕೊಂಡು ಜೀವನವನ್ನು ಅದರೊಂದಿಗೆ ತುಲನಾತ್ಮಕವಾಗಿ ನೋಡುವ ಅವರ ರೀತಿ ನಿಜಕ್ಕೂ ಖುಷಿ
ಕೊಡುತ್ತದೆ. ಬ್ಯುಸಿನೆಸ್ ಸ್ಕೂಲ್‌ನಲ್ಲಿ ತಲೆಕೆಡಿಸಿಕೊಳ್ಳಲಾಗದೇ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿ ಓಡಿ ಬಂದವರು ಭೋಗ್ಲೆ.

ಕ್ರಿಕೆಟ್ ಕಾಮೆಂಟರಿಯಲ್ಲಿ ಇನ್ನಿಲ್ಲದ ಹೆಸರು ಮಾಡಿಬಿಡುತ್ತಾರೆ. ಕೊನೆಗೆ ಅವರು ಬಿಟ್ಟು ಬಂದ ಅದೇ ಅಹಮದಾಬಾದ್‌ನ ಐಐಎಂಗೆ ಹೋಗಿ ಬದುಕಿನ ಬಗ್ಗೆ, ಬದುಕಿನ ಯಶಸ್ಸಿನ ಬಗ್ಗೆ ಉಪನ್ಯಾಸ ನೀಡುತ್ತಾರೆ. ಕಿಕ್ಕಿರಿದ ವಿದ್ಯಾರ್ಥಿ ಸಮೂಹ ಬೆರಗಾಗಿ ಹೋಗುತ್ತದೆ. ೨೦೧೩ರ ಈ ಘಟನೆಯ ನಂತರ ಭಾಷಣಕಾರರಾಗಿಯೂ ದೇಶಾದ್ಯಂತ ಭೋಗ್ಲೆ ಬೇಡಿಕೆ ಪಡಕೊಳ್ಳುತ್ತಾರೆ. ಪ್ರತಿಭೆ ಎನ್ನುವುದಕ್ಕೆ ಅವರು ಕೊಡುವ ವ್ಯಾಖ್ಯಾನ ಅದ್ಭುತ.

ಅದು ಯಾರೊಬ್ಬನ ಸೊತ್ತೂ ಅಲ್ಲ. ಅದು ಜನ್ಮಜಾತವೂ ಅಲ್ಲ. ಯಾರು ಬೇಕಿದ್ದರೂ ಅದನ್ನು ಗಳಿಸಿಕೊಳ್ಳಬಹುದು. ಆದರೆ ಹಾಗೆ ಗಳಿಸಿಕೊಂಡ ಪ್ರತಿಭೆಯನ್ನು ನೀವು ಯಾವಾಗ, ಎಲ್ಲಿ, ಹೇಗೆ ಬಳಸುತ್ತೀರಿ ಎಂಬುದು ಅತ್ಯಂತ ಮುಖ್ಯ. ಒಂದು ಹಂತದಲ್ಲಿ ನಮಗೆ ಪ್ರತಿಭೆಗಿಂತ ನಮ್ಮ ವರ್ತನೆ ಗಳೇ ಮುಖ್ಯವಾಗುತ್ತದೆ ಎಂಬುದು ಅವರ ಪ್ರತಿಪಾದನೆ. ನಿಜ ಅಲ್ಲವೇ? ಮನೋಜ್ಞವಾಗಿ ಓದಿಸಿಕೊಂಡು ಹೋಗುವ ಪುಸ್ತಕದ ಪ್ರತಿ ಅಧ್ಯಾಯದ ಕೊನೆಯಲ್ಲೂ ಒಂದಷ್ಟು ಟಿಪ್ಸ್ ನೀಡುತ್ತ ಹೋಗುತ್ತಾರೆ ಹರ್ಷ. ಎಲ್ಲವೂ ಬದುಕಿನ ಬಗ್ಗೆಯೇ.

ಕೆಲಸದ ಸ್ಥಳದಲ್ಲಿ ಖುಷಿ ಇರಲಿ. ಒತ್ತಡದ ಮನೋಭಾವ ನಿಮಗೆ, ನಿಮ್ಮ ತಂಡಕ್ಕೆ ಎಂದೂ ಕಾಡದಿರಲಿ. ಇಷ್ಟಪಟ್ಟು ಮಾಡುವ ಕೆಲಸದಿಂದ ಮಾತ್ರ
ವ್ಯಕ್ತಿ ಮತ್ತು ಸಂಸ್ಥೆ ಎರಡರ ಯಶಸ್ಸೂ ಸಾಧ್ಯವಿದೆ ಎಂಬುದನ್ನು ಹರ್ಷ ಸೂಕ್ಷ್ಮವಾಗಿ ಅವಲೋಕಿಸಿ ಬರೆದಿದ್ದಾರೆ. ಇದು ಕೇವಲ ಕ್ರಿಕೆಟ್‌ಗೆ ಅನ್ವಯಿಸುವ ಮಾತಲ್ಲ. ಅಥವಾ ಯಾವುದೋ ಗ್ರಂಥದಿಂದ, ವ್ಯಕ್ತಿಯ ಉದ್ಧರಣೆಯಿಂದ ಎತ್ತಿ ತಂದ ವಾಕ್ಯವಲ್ಲ. ಬದುಕನ್ನು ಗಮನಿಸಿ, ಕ್ರಿಕೆಟ್‌ ನೊಂದಿಗೆ ಹೋಲಿಸಿ ಹರ್ಷ ಬರೆಯುತ್ತಾ ಹೋಗುತ್ತಾರೆ. ಈ ಬಗೆಗೆ ಅವರು ಪ್ರತಿ ಅಧ್ಯಾಯದಲ್ಲೂ ಕೊಡುವ ವಿವರಣೆಗಳು ಸಹ ಅವರ ಕಾಮೆಂಟರಿಯಂತೆ ಹಿತವಾಗಿ ಇವೆ.

ಕ್ರಿಕೆಟ್ ತಂಡದಲ್ಲಿನ ಹನ್ನೊಂದು ಆಟಗಾರರಂತೆಯೇ ಯಶಸ್ಸಿನ ಕುರಿತಾಗಿ ನೀಡುವ ಹನ್ನೊಂದು ಟಿಪ್ಸ್ ಕೆಳಗಿದೆ. ಒಮ್ಮೆ ಓದಿ ನೋಡಿ.
-ಕೆಲಸದ ಸ್ಥಳದಲ್ಲಿ ಖುಷಿ ಇರಲಿ. ಒತ್ತಡದ ಮನೋಭಾವ ನಿಮಗೆ, ನಿಮ್ಮ ತಂಡಕ್ಕೆ ಎಂದೂ ಕಾಡದಿರಲಿ -ವರ್ತಮಾನದಲ್ಲಿ ಜೀವಿಸಿ, ಭವಿಷ್ಯಕ್ಕೆ ಯೋಜನೆ ರೂಪಿಸಿ
-‘ಅಸಾಧ್ಯ, ಆಗಲ್ಲ, ಮಾಡಲ್ಲ’ ಇವುಗಳನ್ನು ಮನಸ್ಸಿನಿಂದ ಕಿತ್ತು ಹಾಕಿ
– ಎಲ್ಲರನ್ನೂ ಜತೆಗೆ ಕರೆದುಕೊಂಡು ಸಾಗಿ- ಸರಿಯಾಗಿ ಕೆಲಸ ಮಾಡದೇ ಇರುವವರನ್ನು ಸಹ!
– ಅಭಿಪ್ರಾಯಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ

– ಗುರಿ ದೊಡ್ಡದಿರಲಿ, ಸಾಂಕವಾಗಿ ಗೆಲ್ಲುವ ಛಲ ಇರಲಿ
– ಕೆಲಸದಲ್ಲಿ ಪೈಪೋಟಿ ಬಗ್ಗೆ ಗಮನವಿರಲಿ, ಆಂತರಿಕ ಭಿನ್ನಾಭಿಪ್ರಾಯಗಳನ್ನು ಕಡೆಗಣಿಸಿ
– ಕೆಲಸದಲ್ಲಿ ಶ್ರದ್ಧೆ, ಉತ್ಸಾಹ ಎಂದಿಗೂ ಬತ್ತದಿರಲಿ
– ಕೆಲಸದ ವಿಚಾರದಲ್ಲಿ ಯಾವುದೇ ರಾಜಿ ಬೇಡ
-ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಿ
– ಏಕತಾನತೆ ಬದಿಗೊತ್ತಲು ಹೊಸಬರಿಗೆ ಅವಕಾಶ ನೀಡಿ.
ಇಷ್ಟೆಲ್ಲ ಓದಿ ಮುಗಿಸಿದ ಮೇಲೆ ಮತ್ತೊಮ್ಮೆ ಈ ಹನ್ನೊಂದು ಅಂಶಗಳನ್ನೇ ಇಟ್ಟುಕೊಂಡು ಭಾರತ-ಬಾಂಗ್ಲಾ ನಡುವಣ ರೋಚಕ ಪಂದ್ಯವನ್ನು
ಕಣ್ಣಮುಂದೆ ತಂದುಕೊಳ್ಳಿ. ಕ್ರಿಕೆಟ್ ಬದುಕಿಗೆ ಎಷ್ಟೊಂದು ಹತ್ತಿರವಾಗಿದೆ ಎನಿಸುವುದಿಲ್ಲವೇ? ಎಷ್ಟಾದರೂ ಹರ್ಷ ಅತ್ಯುತ್ತಮ ವೀಕ್ಷಕ ವಿವರಣೆಕಾರ,
ಕ್ರಿಕೆಟ್‌ಗೂ, ಬದುಕಿಗೂ!