Thursday, 12th December 2024

Titanic: ಸ್ಫೂರ್ತಿಪಥ ಅಂಕಣ: ಟೈಟಾನಿಕ್ ಹಡಗಿನಲ್ಲಿ ಅರಳಿದ ಸುಂದರವಾದ ಪ್ರೇಮಕಥೆ

titanic

ಶತಮಾನದ ಸಿನೆಮಾ ಎಂದು ಕರೆಸಿಕೊಂಡಿತು – ಟೈಟಾನಿಕ್!

Rajendra Bhat K
  • ರಾಜೇಂದ್ರ ಭಟ್ ಕೆ.

ಸ್ಪೂರ್ತಿಪಥ ಅಂಕಣ: ಜೇಮ್ಸ್ ಕ್ಯಾಮರೂನ್ (James Cameron) ಎಂಬ ನಿರ್ದೇಶಕನ ಕಲ್ಪನಾ ಶಕ್ತಿಗೆ ಎಲ್ಲೆಯೇ ಇಲ್ಲ! ಅದು ಜಗತ್ತಿನ ಅತ್ಯಂತ ವೈಭವದ (Titanic) ಹಡಗಾಗಿತ್ತು. ಇಂಗ್ಲೆಂಡಿನ ಶ್ರೇಷ್ಟವಾದ ವಿನ್ಯಾಸಗಾರರು ವರ್ಷಾನುಗಟ್ಟಲೆ ದುಡಿದು ನಿರ್ಮಿಸಿದ ಹಡಗು ಅದು. ಎಂದಿಗೂ ಮುಳುಗದ ಹಡಗು ಎಂಬ ಕೀರ್ತಿ ಪಡೆದ ಹಡಗದು!

ಅದರಲ್ಲಿ ನೂರಾರು ವೈಭವದ ಕ್ಯಾಬಿನುಗಳು, ಭಾರೀ ದುಬಾರಿಯಾದ ರೆಸ್ಟೂರಾಂಟ್, ಕೆಫೆ, ಆಕಾಶದ ಬಣ್ಣದ ಸ್ವಿಮ್ಮಿಂಗ್ ಪೂಲ್, ಸ್ಮೋಕ್ ರೂಮ್, ವಿಶಾಲವಾದ ಡೆಕ್, ಮನಮೋಹಕ ಇಂಟೀರಿಯರ್ ವಿನ್ಯಾಸಗಳು, ಬೆಲೆ ಕಟ್ಟಲು ಸಾಧ್ಯವೇ ಇಲ್ಲದ ಕಲಾಕೃತಿಗಳು, ಹಡಗಿನ ರಕ್ಷಣೆಗೆ 20 ಲೈಫ್ ಬೋಟುಗಳು…ಎಲ್ಲವೂ ಇದ್ದವು. ಅಂತಹ ಹಡಗು ತನ್ನ ಮೊದಲ ಪ್ರಯಾಣದಲ್ಲಿ ಅಟ್ಲಾಂಟಿಕ್ ಸಾಗರದ ನಡುವೆ ಮಂಜುಗಡ್ಡೆಯ ಪರ್ವತಕ್ಕೆ ಡಿಕ್ಕಿ ಹೊಡೆದು ಮುಳುಗಿತು ಅಂದರೆ ನಂಬುವುದು ಹೇಗೆ?

ಆ ಹಡಗಿನ ಹೆಸರು ಟೈಟಾನಿಕ್

ಇಂಗ್ಲೆಂಡಿನ ಕರಾವಳಿಯಿಂದ ನ್ಯೂಯಾರ್ಕ್ ಕಡೆಗೆ ಹೊರಟ ಈ ಜಗತ್ತಿನ ಅತ್ಯಂತ ಶ್ರೀಮಂತವಾದ ಮತ್ತು ಚಂದವಾದ ಈ ಹಡಗು ಅಟ್ಲಾಂಟಿಕ್ ಸಾಗರದ ನಡುವೆ ಮಂಜು ಶಿಖರಕ್ಕೆ ಡಿಕ್ಕಿ ಹೊಡೆದು ಮುಳುಗಿತ್ತು. 1912ನೇ ಇಸವಿ ಏಪ್ರಿಲ್ 14ರಂದು ಈ ದುರ್ಘಟನೆ ನಡೆದು ಹೋಗಿತ್ತು. ಈ ಹಡಗಿನಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 2224. ಅದರಲ್ಲಿ 1496 ಪ್ರಯಾಣಿಕರು ಜಲಸಮಾಧಿ ಆದರು!

ಎಷ್ಟೋ ವರ್ಷಗಳವರೆಗೂ ಹಡಗಿನ ಅವಶೇಷಗಳನ್ನು ಪತ್ತೆ ಹಚ್ಚಲು ಸಾಧ್ಯವೇ ಆಗಲಿಲ್ಲ. ಅದಕ್ಕೆ ಕಾರಣ ಅಟ್ಲಾಂಟಿಕ್ ಸಾಗರದ ಆಳ ಮತ್ತು ದೈತ್ಯಗಾತ್ರದ ಅಲೆಗಳು. ಆ ಕಾಲಕ್ಕೆ 1.5 ಮಿಲಿಯನ್ ಪೌಂಡ್ ಬೆಲೆಬಾಳುವ ಹಡಗು ಪೂರ್ತಿಯಾಗಿ ಸಾಗರದ ಗರ್ಭ ಸೇರಿತ್ತು. ಮುಂದೆ ಸಮುದ್ರದ ಆಳದಲ್ಲಿ ಅದರ ಅವಶೇಷಗಳು ಪತ್ತೆಯಾದಾಗ ಅದರಲ್ಲಿ ಒಂದು ಅದ್ಭುತವಾದ ಪೇಂಟಿಂಗ್ ಪತ್ತೆಯಾಗಿತ್ತು. ಒಬ್ಬಳು ಅತ್ಯಂತ ಸುಂದರವಾದ ಹುಡುಗಿಯು ಪೂರ್ತಿ ನಗ್ನಳಾಗಿ ಒಂದು ವಜ್ರದ ನೆಕ್ಲೇಸ್ ಮಾತ್ರ ಧರಿಸಿಕೊಂಡು ರೂಪದರ್ಶಿಯಾಗಿ ಮಲಗಿ ಬರೆಸಿಕೊಂಡ ಚಿತ್ರ ಅದು! ಅದು ಮುಂದೆ ಪತ್ರಿಕೆಯಲ್ಲಿ ಪ್ರಕಟವಾದಾಗ ಅದು ತನ್ನದೇ ಎಂದು ಹೇಳಿಕೊಂಡು ತುಂಬಾ ಪ್ರಾಯದ ಹಣ್ಣು ಹಣ್ಣು ಮುದುಕಿ ಮುಂದೆ ಬರುತ್ತಾಳೆ. ಅದು ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಕಲ್ಪನೆಗೆ ಟ್ರಿಗರ್ ಮಾಡುತ್ತದೆ! ಆತ ಸಾಗರದ ಆಳದವರೆಗೂ ಹೋಗಿ ಹಡಗಿನ ಅವಶೇಷಗಳ ಶೂಟಿಂಗ್ ಮಾಡಿ ಬರುತ್ತಾನೆ. ಮುಂದಿನ ಒಂದು ವರ್ಷದ ಕಾಲ ಇಡೀ ಜಗತ್ತನ್ನು ಮರೆತು ಟೈಟಾನಿಕ್ ಸಿನೆಮಾದ ಕಥೆ, ಚಿತ್ರಕಥೆ ಬರೆದು ಮುಗಿಸುತ್ತಾನೆ.

ಅದು ರೋಸ್ ಮತ್ತು ಜಾಕ್ ಅವರ ಅಮರ ಪ್ರೇಮಕಥೆ

ಆ ಹಡಗಿನಲ್ಲಿ ಪ್ರಯಾಣಿಸಿದ್ದರು ಎನ್ನಲಾದ ಜಗದೇಕ ಸುಂದರಿ ರೋಸ್ ಮತ್ತು ಒಬ್ಬ ಅಲೆಮಾರಿ ಚಿತ್ರಕಾರ ಜಾಕ್ ಅವರ ನಡುವೆ ಹಡಗಿನಲ್ಲಿಯೇ ಹುಟ್ಟಿದ ನವಿರು ಮತ್ತು ಮುಗ್ಧವಾದ ಪ್ರೇಮಕಥೆ ಈ ಸಿನೆಮಾದ ತಿರುಳು. ಜೀವನದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಅವರು ಕೆಲವೇ ದಿನಗಳಲ್ಲಿ ಪ್ರೀತಿಯ ಉತ್ಕಟತೆ ತಲುಪುತ್ತಾರೆ. ಜೇಮ್ಸ್ ಕ್ಯಾಮರೂನ್ ಎಂಬ ರೋಮ್ಯಾಂಟಿಕ್ ನಿರ್ದೇಶಕ ಆ ಪ್ರಣಯದ ದೃಶ್ಯಗಳನ್ನು ಅದ್ಭುತವಾಗಿ ಶೂಟ್ ಮಾಡಿದ್ದಾನೆ. ಆ ಪಾತ್ರಗಳನ್ನು ಮಾಡಿದ ಕೇಟ್ ವಿನ್ಸ್ಲೆಟ್ (ರೋಸ್) ಮತ್ತು ಲಿಯಾನಾರ್ಡೋ ಡಿಕ್ಯಾಪ್ರಿಯೋ (ಜಾಕ್) ವೈಭವದ ಹಡಗಿನ ಹಿನ್ನೆಲೆಯಲ್ಲಿ ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ಜೇಮ್ಸ್ ಹಾರ್ನರ್ ಅವರ ಹಿನ್ನೆಲೆ ಸಂಗೀತ ಇಡೀ ಸಿನೆಮಾವನ್ನು ಅದ್ಭುತ ದೃಶ್ಯ ಕಾವ್ಯವಾಗಿ ಮಾಡುತ್ತದೆ.

SHE IS SINKING..!

ಸಾಗರದ ನಡುವೆ ತಲೆಯೆತ್ತಿ ನಿಂತಿದ್ದ ನೀರ್ಗಲ್ಲ ಶಿಖರಕ್ಕೆ ಡಿಕ್ಕಿ ಹೊಡೆದು ಆ ಹಡಗು ಎರಡು ಭಾಗವಾಗಿ ಬ್ರೇಕ್ ಆಗಿ ಸೀಳಿ ಹೋಗುವ ದೃಶ್ಯ, ಹಡಗಿನ ಒಳಗೆ ಸಾಗರದ ನೀರು ನುಗ್ಗಿ ಬಂದು ಎಲ್ಲವನ್ನೂ ಧ್ವಂಸ ಮಾಡುವ ದೃಶ್ಯ, ಹಡಗನ್ನು ಉಳಿಸಲು CREW ಅಧಿಕಾರಿಗಳು ಮಾಡುವ ಹತಾಶೆಯ ಪ್ರಯತ್ನ, ಕೈಗೆ ಸಿಕ್ಕಿದ ಲೈಫ್ ಬೋಟಿಗೆ ಜಿಗಿದು ತಮ್ಮ ತಮ್ಮ ಪ್ರಾಣವನ್ನು ಉಳಿಸಲು ನೂರಾರು ಪ್ರಯಾಣಿಕರು ಮಾಡುವ ಧಾವಂತ….ಇವೆಲ್ಲವೂ ಟೈಟಾನಿಕ್ ಸಿನೆಮಾದಲ್ಲಿ ಅತ್ಯಂತ ಅದ್ಭುತವಾಗಿ ಚಿತ್ರಿತವಾಗಿವೆ. ಕ್ಯಾಮರೂನ್ ಎಂಬ ಸ್ಟಾರ್ ನಿರ್ದೇಶಕ ಇಲ್ಲಿ ಬಳಸಿದ ಪ್ರತೀ ಒಂದು ಫ್ರೇಮ್ ಕೂಡ ನಮ್ಮನ್ನು ಕುರ್ಚಿಗೆ ಕಟ್ಟಿ ಹಾಕುತ್ತದೆ.

‘ಪ್ರೀತಿಯ ನಿಜವಾದ ಅರ್ಥವೇ ತ್ಯಾಗ’ ಎಂದು ತೋರಿಸುವ ಸಿನೆಮಾದ ಕ್ಲೈಮಾಕ್ಸ್ ಎಲ್ಲ ಪ್ರೇಕ್ಷಕರಿಗೆ ಕಣ್ಣೀರು ತರಿಸುತ್ತದೆ.

ಹಾಲಿವುಡ್ ಸಿನೆಮಾದ ಭಾರತೀಯ ರೂಪಾಂತರ!

1997ರಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾದ ಈ ಹಾಲಿವುಡ್ ಸಿನೆಮಾ ಬಾಕ್ಸ್ ಆಫೀಸಿನ ಅದುವರೆಗಿನ ಎಲ್ಲ ದಾಖಲೆ ಮುರಿಯಿತು. ಹಾಲಿವುಡ್ ಸಿನಿಮಾ ಒಂದರ ಭಾರತೀಯ ರೂಪಾಂತರ ಎಂಬಂತೆ ಭಾರತೀಯರು ಈ ಸಿನೆಮಾವನ್ನು ಕಣ್ಣು ತುಂಬಿಸಿಕೊಂಡರು! 200 ಮಿಲಿಯನ್ ಡಾಲರ್ ಖರ್ಚು ಮಾಡಿದ ಈ ಸಿನೆಮಾ ಬಾಕ್ಸ್ ಆಫೀಸ್ ಮೂಲಕ ಸಂಪಾದನೆ ಮಾಡಿದ್ದು 2.264 ಬಿಲಿಯನ್ ಡಾಲರ್! ಅದು ಮುಂದಿನ 20 ವರ್ಷಗಳ ಕಾಲ ಜಾಗತಿಕ ದಾಖಲೆಯಾಗಿ ಉಳಿಯಿತು. ಮುಂದೆ ಅದೇ ಕ್ಯಾಮರೂನ್ ನಿರ್ದೇಶನ ಮಾಡಿದ ಹಾಲಿವುಡ್ ಸಿನೆಮಾ ‘ಅವತಾರ್ ‘ ಈ ಟೈಟಾನಿಕ್ ದಾಖಲೆಯನ್ನು ಮುರಿಯಿತು. 14 ವಿಭಾಗದಲ್ಲಿ ಆಕಾಡೆಮಿ ಪ್ರಶಸ್ತಿಗಳಿಗೆ ನಾಮಕರಣ ಆದ ಈ ಸಿನೆಮಾ 11 ಆಕಾಡೆಮಿ ಅವಾರ್ಡ್ ಪಡೆದು ದಾಖಲೆ ಬರೆಯಿತು! ಈ ಸಿನಿಮಾಕ್ಕೆ ಅತ್ಯುತ್ತಮ ಸಿನೆಮಾ, ಅತ್ಯುತ್ತಮ ನಿರ್ದೇಶನ ಎರಡೂ ಪ್ರಶಸ್ತಿಗಳು ದೊರೆತದ್ದು ಕೂಡ ದಾಖಲೆಯೇ!

ಭಾರತದಲ್ಲಿ ಅತೀ ಹೆಚ್ಚು ಸಂಪಾದನೆ ಮಾಡಿದ ಹಾಲಿವುಡ್ ಸಿನೆಮಾ ಎಂಬ ದಾಖಲೆ, ಶತಮಾನದ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು ಎಂಬ ಕೀರ್ತಿ ಎರಡೂ ಟೈಟಾನಿಕ್ ಸಿನೆಮಾಕ್ಕೆ ದೊರೆಯಿತು!

ರೋಸ್ ಮತ್ತು ಜಾಕ್ ಜಗತ್ತಿನ ಮೂಲೆ ಮೂಲೆಯಲ್ಲಿದ್ದ ಯುವ ಹೃದಯಗಳಿಗೆ ಲಗ್ಗೆ ಇಟ್ಟ ರೀತಿಗೆ ಶಬ್ದಗಳೇ ಇಲ್ಲ ಎನ್ನಬಹುದು. ಇದೇ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು 1958ರಲ್ಲಿಯೇ ‘A NIGHT TO REMEMBER’ ಎಂಬ ಬ್ರಿಟಿಷ್ ಸಿನಿಮಾವು ಬಂದಿದ್ದರೂ ಅದು ಈ ಟೈಟಾನಿಕ್ ಸಿನೆಮಾದ ತಾಂತ್ರಿಕತೆ, ದೃಶ್ಯ ಶ್ರೀಮಂತಿಕೆ, ಚಿತ್ರೀಕರಣ, ಅದ್ಭುತ ಅಭಿನಯ ಮತ್ತು ಭಾವನೆಗಳ ಮುಂದೆ ಮಸುಕಾಗಿ ಹೋಯಿತು.

ಜಗತ್ತಿನ ಅತ್ಯಂತ ವೈಭವದ ಹಡಗು ಮುಳುಗಿದ ಕಥೆ ಮತ್ತು ಅದರಲ್ಲಿ ಅರಳಿದ ನವಿರು ಪ್ರೇಮದ ಕಥೆ…ಎರಡೂ ಜಗತ್ತಿನ ಕೋಟಿ ಕೋಟಿ ಸಿನೆಮಾ ವೀಕ್ಷಕರನ್ನು ತಲುಪಿದ ರೀತಿಯೇ ಅದ್ಭುತ!

ಇದನ್ನೂ ಓದಿ: Motivation: ಸ್ಫೂರ್ತಿಪಥ ಅಂಕಣ: ಜೀವನದ ಯಾವ ಸಮಸ್ಯೆಗೂ ಆತ್ಮಹತ್ಯೆ ಪರಿಹಾರ ಅಲ್ಲ!