ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ನಾನು ಕಾರ್‌ನಗಲೀ, ಸ್ಕೂಟರ್‌ನಗಲೀ ಹೋಗುವಾಗ ನಾನು ಚಲಿಸುವ ದಿಕ್ಕಿನಲ್ಲಿ ನಡೆಯುತ್ತಿರುವವರನ್ನು ಕಂಡರೆ ಗಾಡಿ ನಿಲ್ಲಿಸಿ ಡ್ರಾಪ್ ನೀಡುತ್ತೇನೆ. ಗಂಡಸರಾಗಲೀ, ಹೆಂಗಸರಾಗಲೀ ಆ ವೇಳೆಯಲ್ಲೂ ನಾನೇ ಗಾಡಿ ನಿಲ್ಲಿಸಿ ಕೇಳುತ್ತೇನೆ.
ತೂರಾಡುವವರನ್ನು ಬಿಟ್ಟು ಬೇರಾರಿಗೂ ಡ್ರಾಪ್ ನಿರಾಕರಿಸುವುದಿಲ್ಲ. ವ್ಯಾಯಾಮಕ್ಕಾಗಿ ನಡೆಯುವವರನ್ನು ಕೇಳುವ ಪ್ರಮೇಯವಿಲ್ಲ. ಇತ್ತೀಚಿನ ದಿನಗಳಲ್ಲಿ, ಮಾಸ್ಕ್ ಹಾಕಿಕೊಂಡವರಿಗೆ ಮಾತ್ರ ಕಾರೊಳಗೆ ಕುಳಿಸಿಕೊಳ್ಳುತ್ತೇನೆ. ಆಗಂತುಕನಾರೋ ಅವನಾಗವನೇ ಡ್ರಾಪ್ ನೀಡಲು ಮುಂದಾದಾಗ ಭಯಗೊಂಡವರೂ, ಸಂಶಯಪಟ್ಟವರೂ ಇದ್ದಾರೆ, ಅದು ಸಹಜವೇ. ಅದಕ್ಕೆಂದೇ ಮೈಸೂರಿನ ಹಿಂದಿನ ಪೊಲೀಸ್ ಆಯುಕ್ತರಿಗೆ ಡ್ರಾಪ್ ನೀಡಲು ಮುಂದಾಗುವವರ ಹಿನ್ನೆಲೆಯನ್ನು ಪರಿಶೀಲಿಸಿ ಅವರಿಗೆ ಅಪರಿಚಿತರಿಗೂ ಡ್ರಾಪ್ ನೀಡುವ ವ್ಯವಸ್ಥೆ ಕಲ್ಪಿಸಿಕೊಡಲು ಸಲಹೆ ನೀಡಿದ್ದೇ, ಫಲಪ್ರದವಾಗಲಿಲ್ಲ.
ಸರಗಳ್ಳತನ/ದರೋಡೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಡ್ರಾಪ್ ತೆಗೆದುಕೊಳ್ಳಲು ಹಿಂಜರಿತ ಸಹಜವೇ. ಬಸ್ಸಿನ ಸೌಲಭ್ಯ ಸಮರ್ಪಕ ವಿಲ್ಲ, ಟ್ಯಾಕ್ಸಿ, ಆಟೋರಿಕ್ಷಾ ದುಬಾರಿ ಅಥವಾ ಅವರಿಗೆ ಅನುಕೂಲವಾದ ಕಡೆ ಮಾತ್ರ ಬರಲು ಒಪ್ಪುತ್ತಾರೆ. ಹಾಗಾಗಿ, ನಂಬಿ ಕಸ್ಥರು ಡ್ರಾಪ್ ಸೇವೆ ನೀಡುವ ವ್ಯವಸ್ಥೆ ವಿಧ್ಯುಕ್ತವಾಗಿ ಚಾಲ್ತಿಗೆ ಬಂದರೆ ಸಾಮಾನ್ಯ ಜನರಿಗೆ ಕಷ್ಟ ತಪ್ಪುತ್ತದೆ. ನಡೆದು ಹೋಗು ವವರಿಗೆ ಡ್ರಾಪ್ ಸಿಕ್ಕಿ ಹದಿನೈದು ನಿಮಿಷ ಉಳಿತಾಯವಾದರೆ ಅವರಿಗಷ್ಟೇ ಅನುಕೂಲವಲ್ಲ, ದೇಶದ ಉತ್ಪಾದಕತೆಗೂ, ಪ್ರಗತಿಗೂ ದೊಡ್ಡ ಕೊಡುಗೆಯಾಗಬಲ್ಲದು. ರಾಷ್ಟ್ರಾದ್ಯಂತ ಡ್ರಾಪ್ ಕ್ರಾಂತಿಯಾದಾಗ ಅದರ ಒಟ್ಟು ಪರಿಣಾಮ ನಗಣ್ಯವಾಗ ಲಾರದು.
ಈ ವ್ಯವಸ್ಥೆ ವ್ಯಾಪಕವಾಗಿ ಜಾರಿಯಾಗುವ ಮೊದಲು ದೇಶದ ಸಮಸ್ತ ಜನತೆಗೆ ಸಮಯದ ಪ್ರತಿಕ್ಷಣದ ಮೌಲ್ಯ ಅರ್ಥವಾಗ ಬೇಕಾಗುತ್ತದೆ. ಸಮಯಪಾಲನೆಗೂ, ಆರ್ಥಿಕ ಅಭಿವೃದ್ಧಿಗೂ (ಜೀವನೋದ್ಧಾರಕ್ಕೂ) ಇರುವ ಸಂಬಂಧ ಅರ್ಥವಾಗ ಬೇಕಾಗು ತ್ತದೆ. ಈ ಬದಲಾವಣೆಯೂ ಮೇಲಿನಿಂದ ಬಂದರೆ ಸೂಕ್ತ. ಊಳಿಗಮಾನ್ಯ ವ್ಯವಸ್ಥೆಯ ಆತ್ಮವನ್ನು ನೆಟ್ಟಿರುವ ಆಳುವ ವರ್ಗ ದಿಂದ ಅದು ಅಸಾಧ್ಯ. ಊಳಿಗಮಾನ್ಯ ಮನಸ್ಥಿತಿ ಕೇವಲ ನೇತಾರರನ್ನಷ್ಟೇ ಅಲ್ಲ, ಕಳೆದ ವಾರದ ಅಂಕಣದಲ್ಲಿ ನಾನು ಪ್ರಸ್ತಾಪಿಸಿದ ಅಧೊಕಾರಿಗಳನ್ನೂ ಆವರಿಸಿದೆ.
ಮೈಸೂರಿನ ಪ್ರವಾಸೋದ್ಯಮ ವನ್ನು ಅಭಿವೃದ್ಧಿಪಡಿಸಲು ನವ/ಯುವ ಸಂಸದ ಪ್ರತಾಪ ಸಿಂಹರಿಗೆ ನೂತನ ಯೋಜನೆಯ ವಿವರಗಳನ್ನು ನೀಡಿ ಏಳು ವರ್ಷವಾಯಿತು. ಅವರ ಔದಾಸೀನ್ಯವನ್ನೂ, ನಿರುತ್ಸಾಹವನ್ನು, ಅವರ ಪರವಾಗಿ ನನ್ನಲ್ಲಿ ಮತಬೇಡಲು ಬಂದ ಅವರ ಪತ್ನಿಗೆ ವಿವರಿಸಿ ಅದಕ್ಕುತ್ತರವಾಗಿ ಅವರು (ವರ್ತನೆಯನ್ನು) ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿ
ಎರಡು ವರ್ಷವಾಯಿತು.
ಫಲಶ್ರುತಿ ಶೂನ್ಯ. ಅದನ್ನು ನಾನು ಊಹಿಸಿರಲಿಲ್ಲವೆಂತಲ್ಲ. ನನಗೆಷ್ಟೇ ಬೇಸರ ಮೂಡಿಸಿದ್ದರೂ ನಿಮ್ಮ ಯಜಮಾನರಿಗೇ ವೋಟ್ ಹಾಕುತ್ತೇನೆ, ಅದಕ್ಕೆ ಕಾರಣ ಅವರಲ್ಲ ಮೋದಿ ಎಂದು ಹೇಳಿ ಕಳಿಸಿದ್ದೆ. ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೊ ನೋಡಿಯೇ ಬಿಡೋಣ ಅಂತ ಗೆಲುವಿಗೆ ನನ್ನ ಮತವನ್ನೂ ಅವಲಂಬಿಸಿದ ಸಿಂಹರಿಗೆ ಮತ್ತೊಮ್ಮೆ ಮೇಲ್ ಮಾಡಿದೆ.
ವನರಾಜನಿಂದ ಇನ್ನೂ ಉತ್ತರವಿಲ್ಲ. ಇಂಥದ್ದೇ ಅನುಭವ ನವೋತ್ತರ ಯುವ ಸಂಸದ ತೇಜಸ್ವಿ ಸೂರ್ಯರ ಬಳಿಯೂ ಆಗಿದೆ. ಯುವಕರಾದ ಇವರಿಬ್ಬರೇ ಸಮಯಕ್ಕೆ ಬೆಲೆ ನೀಡಲಾರದಾದರೆ, ಬದಲಾವಣೆಯನ್ನು ಯಾರಿಂದ ನಿರೀಕ್ಷೆ ಮಾಡ ಲಾದೀತು? ಸಮಯ – ನಿಯಮವನ್ನು ಉಲ್ಲಂಘಿಸುವುದೂ ಊಳಿಗಮಾನ್ಯ ಮನದ ಮತ್ತೊಂದು ಮುಖವೇ. ಅಧಿಕಾರಸ್ಥರ ಸ್ವಮಹತ್ವ ಮತ್ತೊಬ್ಬರನ್ನು ವಿನಾಕಾರಣ ಕಾಯಿಸುವುದರಲ್ಲಿದೆ. ಕಾರ್ಯವಾಸಿ ಬಂದ ಜನರನ್ನು ಕಾಯಿಸಿ ಹಿಂಸಾನಂದವನ್ನು ಪಡೆಯುವ ಸ್ವಾತಂತ್ರ್ಯಪೂರ್ವ ಅನಿಷ್ಟ ಪರಂಪರೆ ಅವ್ಯಾಹತವಾಗಿ ಮುಂದುವರಿದಿದೆ.
ಜನ್ಮದ ಸಾಫಲ್ಯ (ದೊಡ್ಡವರನ್ನು ಕಾಣುವುದಕ್ಕಾಗಿ) ಕಾಯುವುದರಲ್ಲಿದೆ ಎಂಬ ದಯನೀಯ ಮನಸ್ಥಿತಿ ಕಾಯಿಸಲ್ಪಡುವ ಬಹುತೇಕ ಜನರದ್ದು. ಸಮಯದ ಪರಿಪಾಲನೆ ವ್ಯಕ್ತಿಯೊಬ್ಬ ಪರರಿಗಷ್ಟೇ ಅಲ್ಲ ತನಗೂ ಕೊಟ್ಟುಕೊಳ್ಳಬಹುದಾದಂಥ ಕನಿಷ್ಠ ಗೌರವ. ಈ ಗೌರವವನ್ನು ಕಾಪಾಡಿಕೊಳ್ಳುವುದರಲ್ಲಿ ಯಾವುದೇ ರಾಷ್ಟ್ರದ ಸರ್ವಾಂಗೀಣ ಬೆಳವಣಿಗೆಯ ಸೂತ್ರ ಅಡಗಿದೆ.
ಅಧಿಕಾರಸ್ಥರಲ್ಲಿ ವಿನಯ ಮೂಡಿದ ದಿನ ಸಮಯಪ್ರಜ್ಞೆಯೂ ಮೂಡಬಹುದು. ಸಮಯಪ್ರಜ್ಞೆಗೂ, ವಿನಯವಂತಿಕೆಗೂ ಬಿಡಿಸಲಾಗದ ಸಂಬಂಧವಿದೆ.
ರೋಹಿಣಿ ಸಿಂಧೂರಿಯಂತೆ ಪ್ರಾಮಾಣಿಕರೆಂದು ಬಿಂಬಿಸಿಕೊಂಡಿದ್ದ ಜಿಲ್ಲಾಧಿಕಾರಿ ಮಣಿವಣ್ಣನ್‌ರನ್ನು ಕಾಣಲು ಸಾರ್ವ ಜನಿಕರರೊಬ್ಬರು ಬಂದಿದ್ದರು. ಅವರು ಸಲ್ಲಿಸಿದ್ದ ದಾಖಲೆಗಳು ಕಾಣೆಯಾದದ್ದರ ಬಗ್ಗೆ ದೂರುತ್ತಿದ್ದರು. (ಇಂತಹ) ದೊಡ್ಡ ಕಚೇರಿಯಲ್ಲಿ ಹಾಗಾಗುತ್ತದೆ. ಏನೂ ಮಾಡೊಕ್ಕಾಗೊಲ್ಲ ಅಂತ ಉಡಾಫೆಯ ಉತ್ತರ ಸಿಕ್ಕಿತು. ಅದನ್ನು ಕಂಡು ಅಸಮಾಧಾನ ಗೊಂಡ ದೂರುದಾರರು ದನಿ ಏರಿಸಿದಾಗ ಅವರನ್ನು ಆಚೆ ಹಾಕುವಂತೆ ಗನ್‌ಮ್ಯಾನ್‌ಗೆ ಹೇಳಿ ಹೊರಹಾಕಲು ಮಣಿವಣ್ಣನ್ ಪಿಎಗೆ ಸೂಚನೆ ನೀಡಿದರು.
ಇದು ನಾನು ಕಣ್ಣಾರೆ ಕಂಡ ಮತ್ತೊಂದು ಐಎಎಸ್ ಅಧಿಕಾರಿಯ ದುರ್ವರ್ತನೆ. ಸಾರ್ವಜನಿಕರ ಸೇವೆ ಮಾಡಲು ಐಎಎಸ್ ಉತ್ತಮ ಅವಕಾಶ ಒದಗಿಸುತ್ತದೆ ಎಂದು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪುಂಗಿದ್ದೇ ಪುಂಗಿದ್ದು. ದಲಿತ ಹಿನ್ನೆಲೆಯಿಂದ ಬಂದವರೂ ಹೇಗೆ ಪ್ರಜಾಪೀಡಕರಾಗುತ್ತಾರೆ ಎನ್ನುವುದಕ್ಕೆ ಇದೊಂದು ಜ್ವಲಂತ ನಿದರ್ಶನ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಆದರ್ಶ ಪರಾರಿಯಾಗುತ್ತದೆ. ಅರಮನೆಗಳ ನಗರವಾದ ಮೈಸೂರಿಗೆ ಡಿಸಿ ಆಗಿ ಬಂದವರನ್ನಂತೂ ಹಿಡಿಯಲು ವಿಶೇಷ ಕಾರ್ಯಾಚರಣೆ ತಂಡವೇ ಬೇಕೇನೊ. ದಿವಾನರಿಗೆ ಸೂಕ್ತವಾದ ಬಂಗಲೆ.
ಪಾರಂಪರಿಕ ಕಟ್ಟಡ. ಅರಮನೆಯಲ್ಲಿರುವ ರಾಜಪರಿವಾರಕ್ಕೂ ಡಿಸಿ ಬಂಗಲೆಗಿರುವಷ್ಟು ವಿಶಾಲವಾದ ಆವರಣವಿಲ್ಲ. ತಲೆಕೆಡಲು ಆ ಬಂಗಲೆಯಲ್ಲಿ ಒಂದು ರಾತ್ರಿ ಕಳೆದರೆ ಸಾಕು. ವರ್ಗಾವಣೆಯನ್ನು ರದ್ದು ಪಡಿಸಿರೆಂದು ಸಿಂಧೂರಿ ಮುಖ್ಯಮಂತ್ರಿ ಗಳಲ್ಲಿ ಬೇಡಿಕೊಂಡಿದ್ದೇಕೆಂದು ಅರಿವಾಗುತ್ತದೆ. ಸಿಂಧೂರಿಯದ್ದೇ ಎಂದು ಹೇಳಲಾದ ದನಿಯೊಂದು ವೈರಲ್ ಆದ ಆಡಿಯೋ ದಲ್ಲಿ ಡ್ರಗ್ಸ್ ಕಂಟ್ರೋಲರರನ್ನು ಚಪ್ರಾಸಿಯಂತೆ ಮಾತನಾಡಿಸುವುದನ್ನು ಆಲಿಸಿದಾಗ ಡಿಸಿ ಬಂಗಲೆವಾಸದ ಗಮ್ಮತ್ತು ತಿಳಿಯು ತ್ತದೆ. ಆ ಡ್ರಗ್ಸ್ ಕಂಟ್ರೋಲರನ್ನಾದರೂ ಅನುಚಿತವಾಗಿ ಮಾತನಾಡಿಸುವ ಡಿಸಿಯನ್ನು ತರಾಟೆಗೆ ತೆಗೆದುಕೊಳ್ಳುವ ಬದಲು ಆಕೆಯ ಧೀಮಾಕಿನ ಮಾತನ್ನು ರೆಕಾರ್ಡ್ ಮಾಡಿ ಮೀಡಿಯಾಗೆ ರಿಲೀಸ್ ಮಾಡುತ್ತಾನೆ ಎಂದರೆ ಕೋವಿಡ್ ಸಮಯದಲ್ಲಿ ಇವರುಗಳ ಅಡ್ಡಜ್ಞಾನ ರೇಜಿಗೆ ಹುಟ್ಟಿಸುತ್ತದೆ.
ವಿದ್ಯುತ್ ಪ್ರಸರಣದಲ್ಲಿ ಪ್ರಸರಣಕ್ಕಾಗಿ ಬಳಕೆಯಾಗುವ ವಿದ್ಯುತ್ತನ್ನು ನಷ್ಟವೆಂದೇ ಪರಿಗಣಿಸಲಾಗುತ್ತದೆ. ವಿಧಿ ಇಲ್ಲ.
ವಿದ್ಯುತ್ತಿನ ಲಕ್ಷಣವೇ ಅದು. ಪ್ರಸರಣದ ನಷ್ಟವನ್ನು ತಡೆಯಲಿಕ್ಕಾಗುವುದಿಲ್ಲ. ಹಾಗೆಯೇ ನಮ್ಮ ಮಂತ್ರಿಗಳಾಗಲಿ, ಐಎಎಸ್ ಅಧಿಕಾರಿಗಳಾಗಲೀ ಅವರ ಅಧಿಕಾರವನ್ನು ಅನುಭವಿಸುವುದರ ಅವರ ಅಧಿಕಾರದ ಬಹುಪಾಲು ವ್ಯಯವಾಗುತ್ತದೆ. ತಾನು ಉನ್ನತ ಸ್ಥಾನದಲ್ಲಿರುವವನು(ಳು) ಎಂಬ ಅಮಲಿನ ಸ್ಥಿತಿಯಿಂದ ಹೊರಬರುವ ತುಸುವೇ ಹೊತ್ತಷ್ಟೇ ಸಾರ್ವಜನಿಕ ಸೇವೆಗೆ
ಲಭ್ಯ.
ಅಧಿಕಾರ – ಜನ್ಯ ದರ್ಪವನ್ನು ಚಲಾಯಿಸುವುದರ ಆ ಸಮಯವೂ ಸಾಕಷ್ಟು ಪೋಲಾಗುತ್ತದೆ. ಇನ್ನು ಅಂದು ಅಭಿನಂದನೆ, ವಂದಿಮಾಗಧರೊಂದಿಗೆ ಕಾಲಕ್ಷೇಪ ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಸಾರ್ವಜನಿಕ ಸೇವೆಗೆ ಸಿಗುವ ಸಮಯ ಸ್ವಲ್ಪವೇ ಸ್ವಲ್ಪ. ಒಂದು ರೂಪವತಿ ಯುವತಿ ತನ್ನ ಸೌಂದರ್ಯದ ಸ್ವಪ್ರಶಂಸೆಯ ಕಾಲ ಕಳೆಯುವಷ್ಟು ಹೊತ್ತು ಆಕೆಯಿಂದ
ಉಪಯೋಗಕಾರೀ ಕೆಲಸವನ್ನು ನಿರೀಕ್ಷಿಸಲಾಗುವುದಿಲ್ಲವಲ್ಲ, ಹಾಗೆ.
ಐಎಎಸ್‌ಗಳು ಸೃಷ್ಟಿಸುವ ಮತ್ತೊಂದು ಅವಾಂತರವಿದೆ. ಸಿಂಧೂರಿ ಮತ್ತು ಮೈಸೂರು ನಗರ ಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾ ನಡುವಿನ ಜಟಾಪಟಿ ತಂದ ಸಮಸ್ಯೆ ಮೈಸೂರಿಗೆ ಹೊಸತು. ಸಾಮಾನ್ಯವಾಗಿ, ವೈಮನಸ್ಯ ಅಂಕುರಿಸುವುದು ಐಎಎಸ್ ಮತ್ತು ಐಎಎಸ್ಸೇತರರ ನಡುವೆ. ನಗರಪಾಲಿಕೆಯ ವೈದ್ಯಾಧಿಕಾರಿಗೆ ತಾನು ವೈದ್ಯನೆಂದು, ಇತರ ಕೆಲವು ವಿಭಾಗಗಳಲ್ಲಿನ
ಎಂಜಿನಿಯರ್‌ಗಳಿಗೆ ತಾವು ಎಂಜಿನಿಯರ್ ಎಂಬ ಹಮ್ಮು ಬಿಮ್ಮು.
ಐಎಎಸ್ ಅಧಿಕಾರಿಗೆ ಆತನದ್ದೇ/ಆಕೆಯದ್ದೇ ದಾರಿ. ದರ್ಪ, ಅಹಮಿಕೆಗಳ ಪ್ರದರ್ಶನ ಇಲ್ಲಿ ದಿನನಿತ್ಯ ಕಾಣಸಿಗುತ್ತದೆ. ಆದರೆ, ಐಎಎಸ್ ಅಧಿಕಾರಿಯ ಮಾತೇ ಅಂತಿಮ. ಆಯುಕ್ತರ ಮಾತನ್ನು ಇಷ್ಟವಿರಲಿ, ಇಷ್ಟವಿಲ್ಲದಿರಲಿ ಅವುಡುಗಚ್ಚಿ ಅನುಸರಿಸಬೇಕು.
ಗತ್ಯಂತರವಿಲ್ಲ. ಇದರಿಂದ ಆರಂಭವಾಗುವ ಅಸಮಾಧಾನದ ಹೊಗೆ ಒಳಗೊಳಗೇ ಬುಸುಗುಡುತ್ತಿರುತ್ತದೆ. ಅತ್ತೆಯ ಅಡಿಯಾಳಾಗಿ ನರಳುತ್ತಿದ್ದರೂ ಮೌನ ದಿಂದಲೇ ಎಲ್ಲವನ್ನೂ ನುಂಗಿಕೊಂಡು ದೈನೇಸಿಯಾಗುವ ಸೊಸೆಯಂತೆ ಐಎಎಸ್ಸೇತರರು ವರ್ತಿಸುತ್ತಿರುತ್ತಾರೆ.
ಐಎಎಸ್‌ಗಳು ಹೇಗೆ ಮಂತ್ರಿವರ್ಯರನ್ನು ಯಾಮಾರಿಸುತ್ತಾರೋ ಹಾಗೆ ಐಎಎಸ್‌ಗಳು ಅಧೀನಾಧಿಕಾರಿಗಳು ಮುಗುಮ್ಮಾಗೇ ಅನನುಭವಿ ಬಾಸ್‌ನ ಹಳಿ ತಪ್ಪಿಸುತ್ತಿರುತ್ತಾರೆ. ಇವರ ಈ ಗುಪ್ತ ಕಿತ್ತಾಟಗಳಿಗೆ ಬೆಲೆ ತೆರುವುದು ಬಡ ಬೋರಪ್ಪನೋ, ಕೆಂಚಮ್ಮಳೋ ಆಗಿರುತ್ತಾಳೆ. ಈ ಕಿತ್ತಾಟಗಳ ಮೂಲ ಜಾತಿಯೂ ಆಗಿದ್ದಲ್ಲಿ ಆಶ್ಚರ್ಯವಿಲ್ಲ. ಇನ್ನು ಕೋವಿಡ್ ನಿಯಂತ್ರಣಕ್ಕೆ ಬಾ ಎಂದರೆ ಬರಲು ಕರೋನಾ ಏನು ಹಾಲುಗಲ್ಲದ ಶಿಶುವೇ? ದಿನಾ ಸಾಯೋರಿಗೆ ಅಳೋರ‍್ಯಾರು ಎಂಬ ಪರಿಸ್ಥಿತಿ ಸೃಷ್ಟಿಸಿರುವ ಕೋವಿಡ್‌ಗೆ ಹೇಗೂ ಮದ್ದಿಲ್ಲ. ಹುಚ್ಮುಂಡೆ ಮದುವೆಯಲ್ಲಿ ಉಂಡು ಬೆಳೆಸಿಕೊಂಡ ಜಾಣತನವನ್ನು ಆಕೆಯ ತಿಥಿಯಲ್ಲೂ ಪ್ರದರ್ಶಿಸಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ವಿಸ್ತರಿಸಿರುವವರಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿವೆ.
ಇನ್ನೂ ಪಾಪಭೀತಿ ಎಂಬ ಶಬ್ದದ ಅರ್ಥ ಮರೆಯದ ವೈದ್ಯ ಮಿತ್ರರು ಮೊನ್ನೆ ಹೇಳಿಕೊಂಡದ್ದು: ಖಾಸಗಿ ಆಸ್ಪತ್ರೆಗಳು ಲಾಭ ಗಳಿಸಲು ವರ್ಷಕ್ಕೊಂದು ಅಲೆ ಕೋವಿಡ್ ಅಲೆ ಬಂದರೆ ಸಾಕು, ಜನರಿಗೆ ಬೇರಾವುದೇ ರೋಗರುಜಿನಗಳು ಕಾಡಿಸದಿದ್ದರೂ ನಡೆಯುತ್ತದೆ. ಮೈಸೂರಿಗೆ ಸೀಮಿತಗೊಳಿಸಿ ಹೇಳುವುದಾದರೆ, ನಾವೇಕೆ ಶಾಸಕ ಸಾ.ರಾ. ಮಹೇಶ್ ಅಥವಾ ಮುಡಾ ಅಧ್ಯಕ್ಷ
ರಾಜೀವರ ಮಣ್ಣಿನ ಹಸಿವಿನ ಬಗ್ಗೆ ಅಥವಾ (ಪಕ್ಷ ಯಾವುದಾದರೇನಂತೆ) ನಾಯಕರೆಲ್ಲರೂ ಒಂದೇ ಎಂಬ ಪ್ರಾದೇಶಿಕ ಸಹಕಾರ ತತ್ತ್ವದತ್ತ ಅಥವಾ ಸಿಂಧೂರಿಯ ಈಜುಕೊಳದ (ಈಜುಕೊಳದ) ನೀರಿನ ಗೀಳಿನತ್ತ ನಮ್ಮ ಚರ್ಚೆಯನ್ನು ಕೇಂದ್ರೀಕೃತಗೊಳಿಸ ಬೇಕು? ಮಣ್ಣಿನ ಸಂಪರ್ಕ ಹೊಂದಿರುವವರಿಗೂ, ನೀರಿನಲ್ಲಿ ಕಸರತ್ತು ಮಾಡುವವರಿಗೂ ಆಯುಸ್ಸು ಹೆಚ್ಚು.
ಅವರೆಲ್ಲರಿಗೂ ತಲಾ ಇನ್ನೂರು ವರ್ಷ ಆಯುಸ್ಸು ಇದ್ದೇ ಇದೆ. ಅದರ ಜತೆಗೆ ಕುಮಾರಸ್ವಾಮಿ, ಯಡಿಯೂರಪ್ಪ, ಅಲೆಗ್ಸಾಂಡರ್
(ಬಂಗಾರಪ್ಪ ಕಾಲದ ಹೆಸರುವಾಸಿ ಹಿರಿಯ ಐಎಎಸ್ ಅಧಿಕಾರಿ) ಮಟ್ಟಕ್ಕೆ ನಿಲ್ಲುವ ಐಶ್ವರ್ಯವೂ ಸಿಗಲಿ. ನಾವುಗಳು ನಮ್ಮ ಕೈಲಾದ ಮಟ್ಟಿಗೆ ಅವಶ್ಯಕತೆ ಇರುವ ಯಾರಿಗಾದರೂ ಡ್ರಾಪ್ ನೀಡುವ. ಹೇಳಲು ಮರೆತಿದ್ದೆ. ನಾನು ಭೇಟಿ ನೀಡುವ ಸಲೂನ್‌ನ ಮಾಲೀಕ ಗೋಪಾಲ್ ರಾಷ್ಟ್ರಪ್ರೇಮಿ. ಮೊನ್ನೆ, ದಿನಸಿ ಅಂಗಡಿ ಬಳಿ ಸಿಕ್ಕಿದ್ದರು. ಅಂಗಡಿ ಬಾಗಿಲು ಮುಚ್ಚಿ ಅನನುಕೂಲ ವಾಗಿದೆಯೇ ಕೇಳಿದೆ. ಬೆಂಗಳೂರಿನ ಸ್ನೇಹಿತರೊಬ್ಬರು ಕಳೆದ ವರ್ಷವೇ ಲಾಕ್‌ಡೌನ್ ಘೋಷಣೆಯಾದ ಹೊಸತರಲ್ಲಿ ತಮ್ಮ
ಕ್ಷೌರಿಕರಿಗೆ ಮುಂಗಡವಾಗಿ ಹಣ ನೀಡಿದ್ದರು.
ನಾವೂ ಅಂಥದ್ದೇನಾದರೂ ಮಾಡೋಣ ಎಂದು ಗೋಪಾಲ್‌ಗೆ ತಿಳಿಸಿದೆ. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಸ್ಥಳೀಯ
ಸವಿತಾ ಸಮಾಜದ ಎಂಟು ಸದಸ್ಯರು ತಮ್ಮ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಸುಮಾರು 400 ಆಹಾರ ಕಿಟ್‌ಗಳನ್ನು ವಿತರಿಸಿದ್ದನ್ನು ಹೇಳಿದರು. ಏನಾದರೂ ಇದ್ದರೆ ಹೇಳುವುದಾಗಿ ತಿಳಿಸಿ ನಿರ್ಗಮಿಸಿದರು. ಮಾರನೆಯ ದಿನ ಅವರ ಫೋನ್ ಬಂದಾಗ ಬಹುಶಃ ಸಹಾಯ ಕೇಳಬಹುದೆಂಬ ನನ್ನ ನಿರೀಕ್ಷೆಯನ್ನು ಗೋಪಾಲ್ ಹುಸಿಮಾಡುತ್ತಾ, ಅವರ ಅಂಗಡಿಯ ಬಳಿಯ ಒಂದು ಸಂಸಾರ ಸಂಕಷ್ಟದಲ್ಲಿರುವುದಾಗಿ ತಿಳಿಸಿದರು.
ದಿನಸಿ ಅಂಗಡಿಗೆ ಫೋನ್ ಮಾಡಿ ಒಂದು ಸಾವಿರ ರುಪಾಯಿಯ ಸಾಮಾನು ನೀಡಲು ಕೋರಿಕೊಂಡೆ. ಸಂಜೆ ಗೋಪಾಲರ
ಕರೆ. ಕಿಟ್ಟನ್ನು ನನ್ನ ಸಮ್ಮುಖದ ನೀಡುವುದಾಗಿ ಹೇಳಿದರು. ನಾನು ನಿರಾಕರಿಸಿದೆ. ನಂತರ ಕಿಟ್ ಪಡೆದುಕೊಂಡವರಿಗೆ ಫೋನ್ ಕೊಟ್ಟು ಅವರ ಕೈಯಲ್ಲಿ ಧನ್ಯವಾದ ಹೇಳಿಸಿದರು. ಅದು ಬೇಡವಾಗಿತ್ತು. ಮರುದಿನ ಆಹಾರ ಸಾಮಗ್ರಿಗಾಗಿ ಹಣ ನೀಡಲು ಹೋದಾಗ ದಿನಸಿ ಅಂಗಡಿಯ ಪವನ್ 360 ರುಪಾಯಿ ನನ್ನ ಮೇಲೆಯೇ ಇದೆ ಎನ್ನುತ್ತಾ ಚಿಲ್ಲರೆಯನ್ನು ಹಿಂತಿರುಗಿಸಿದರು.
ಸಂಕಷ್ಟದಲ್ಲಿರುವ ಆ ಕುಟುಂಬ ತನಗೆಷ್ಟು ಬೇಕೋ ಅಷ್ಟನ್ನು ಮಾತ್ರ ಪಡೆದುಕೊಂಡಿದ್ದರು.