Thursday, 12th December 2024

ಹಸಿರ ಬದುಕು; ಬಾಡಿಸುವ ತಂಬಾಕು

ಸಲಹೆ

ಡಾ.ಸಿ.ರಾಮಚಂದ್ರ

ಆಧುನಿಕತೆಯ ಹೆಸರಿನಲ್ಲಿ ಪ್ರತಿಯೊಂದು ಅಕ್ರಮ, ಅನೈತಿಕ, ಅಮಾನುಷ ಕೃತ್ಯಗಳನ್ನು ನಡೆಸಿ, ಅವುಗಳನ್ನೆ ಸಮರ್ಥಿಸಿಕೊಳ್ಳುವ ಪ್ರಯತ್ನ ಸಾಗಿದೆ. ಬೃಹತ್‌ ನಗರಗಳಲ್ಲಂತೂ ದುಶ್ಚಟಗಳು, ದುವ್ರ್ಯಸನಗಳು ಪ್ರತಿಯೊಬ್ಬರಿಗೂ ಇರಲೇಬೇಕಾದ ಅರ್ಹತೆಗಳು ಎಂಬಲ್ಲಿಯವರೆಗೆ ಬಂದು ತಲುಪಿದೆ. ನಗರದ ಜನತೆಯನ್ನೆ ಅನುಕರಿಸಿದರೆ ಆಧುನಿಕತೆ ಎಂದು ಮನಸ್ಸಿನಲ್ಲೊಂದು ಭ್ರಮೆಯನ್ನು ಸೃಷ್ಟಿಸಿಕೊಂಡಿರುವ ಹಳ್ಳಿಗಳಿಗೂ ಈ ಮಾತು ಅನ್ವಯವಾಗುತ್ತದೆ.

ಹೀಗಾಗಿ ಸಿಗರೇಟು, ಮದ್ಯಪಾನ, ಮಾದಕ ಪದಾರ್ಥಗಳ ಸೇವನೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಮದ್ಯಪಾನ, ಧೂಮಪಾನ ಹಾಗೂ ತಂಬಾಕು ಸೇವನೆಗಳಿಗೆ ಪ್ಯಾಶನ್ ಎಂಬ ಬ್ರ್ಯಾಂಡ್ ನೇಮ್ ಕೊಟ್ಟು ತಮ್ಮ ಜೀವಗಳನ್ನೆ ತಾವೇ ಬಲಿಕೊಡುತ್ತಿದ್ದಾರೆ. ಇವುಗಳ ಅಪಾಯವನ್ನು ಅರಿತಿದ್ದರೂ, ತಾವಾಗಿಯೆ ಆಹ್ವಾನಿಸು ತ್ತಿದ್ದಾರೆ. ತಂಬಾಕು ಸೇವನೆಯಿಂದ ಕ್ಯಾನ್ಸರ್‌ಕಾರಕ ರೋಗಗಳು ಜೀವ ಹಿಂಡುತ್ತಿವೆ. ಇಂದಿನ ದಿನಗಳಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿರುವವರಲ್ಲಿ ಕಾಲೇಜು ವಿದ್ಯಾಥಿಗಳು, ಯುವಕರು ಹಾಗೂ ಮಧ್ಯ ವಯಸ್ಕರೇ ಹೆಚ್ಚು. ಇದರಲ್ಲೂ ಯುವಕರ ದೊಡ್ಡ ಸಮೂಹವೇ ಸಿಗರೇಟಿನ ಧೂಮಕ್ಕೆ ಹಾಟ್ ವೈನ್‌ಗೆ ಮರುಳಾಗು ತ್ತಿವೆ.

ಅಸಂಖ್ಯೆ ವಿದ್ಯಾರ್ಥಿಗಳು ಹಾಗೂ ಯುವಜನರು ಸಿಗರೇಟುಗಳನ್ನು ಸಂಪೂರ್ಣವಾಗಿ ಬರಿದುಗೊಳಿಸಬೇಕೆಂದು ಹಟಕ್ಕೆ ಬಿದ್ದವರಂತೆ ಸಿಗರೇಟುಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಸಿಗಾರ್‌ಗಳ ಹೊಗೆಯ ಮಧ್ಯೆ ತಮ್ಮ ಅಮೂಲ್ಯ ಜೀವಗಳನ್ನು ಸದ್ದಿಲ್ಲದೆ ಬಲಿಗೊಡುತ್ತಿದ್ದಾರೆ. ಸಿಗರೇಟಿಗೆ ಹತ್ತಿದ ಬೆಂಕಿ ಅದನ್ನು
ಪೂರ್ತಿಯಾಗಿ ಖಾಲಿ ಮಾಡುವಂತೆ ಇವರ ಬದುಕನ್ನೂ ಬಲಿ ತೆಗೆದುಕೊಳ್ಳುತ್ತಿರುವುದು ಅರ್ಥವಾದರೂ ಹೊಗೆಯ ವಿಷವರ್ತುಲದಲ್ಲಿ ಸಿಲುಕಿಕೊಂಡಿರುವ ಈ ಮಂದಿಗೆ ಅವುಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.

ದುಶ್ಚಟಗಳಿಗೆ ಅಡಿಯಾಳಾಗಿರುವ ಈಗಿನ ಹೆಚ್ಚಿನ ಜನರಲ್ಲಿ ತಂಬಾಕು ಸೇವನೆಯವರ ಸಂಖ್ಯೆಯೇ ಅಧಿಕ. ಶ್ರೀಮಂತರು ಶೋಕಿಗಾಗಿ ಎಳೆಯುತ್ತಿದ್ದ ಸಿಗರೇಟು ಗಳು, ಮಧ್ಯಮವರ್ಗದ ಹಿನ್ನೆಲೆಯಿಂದ ಬಂದವರ ಬೆರಳುಗಳ ಸಂಽಯಲ್ಲೂ ರಾರಾಜಿಸುತ್ತಿದೆ. ಸಿಗರೇಟು ಸೇವನೆ ಮತ್ತು ಮದ್ಯಸೇವನೆಗಳು ಶ್ರೀಮಂತಿಕೆ ಪ್ರದರ್ಶನವಾಗಿಯೂ ಮಾರ್ಪಟ್ಟಿದೆ. ಸಿಗರೇಟು, ಮಾದಕ ದ್ರವ್ಯಗಳ ಹಿಂದೆ ಬಿದ್ದಿರುವವರು ಎಷ್ಟೆ ಬೆಲೆ ತೆತ್ತಾದರೂ ಖರೀದಿಸುವ ಕೆಟ್ಟ ಚಾಳಿ ಮುಂದುವರಿದಿದೆ. ಮೋಜು ಅನುಭವಿಸುವ ನೆಪದಲ್ಲಿ ಪ್ರಾಣಕ್ಕೆ ಸಂಚಕಾರ ಬಂದೊದಗುತ್ತಿದೆ.

ದುಶ್ಚಟಗಳ ಪೈಕಿ ಜನರು ಅತಿ ಹೆಚ್ಚು ಮರುಳಾಗುತ್ತಿರುವುದು ಸಿಗರೇಟು, ಬೀಡಿ ಹಾಗೂ ದೊಡ್ಡ ಸಂಖ್ಯೆಯ ಗುಟ್ಕಾಗಳಿಗಾಗಿ. ತಂಬಾಕಿನಲ್ಲಿರುವ ನಿಕೋಟಿನ್ ಎಲ್ಲಾ ಕಾಯಿಲೆಗಳಿಗೂ ಮೂಲ. ಅರ್ಧ ಗಂಟೆ ತಂಬಾಕು ಜಗಿಯವುದು ನಾಲ್ಕು ಸಿಗರೇಟು ಸೇದುವುದಕ್ಕೆ ಸಮಾನ. ಬಾಯಿ ಕ್ಯಾನ್ಸರ್, ಗಂಟಲು, ತುಟಿ ಕ್ಯಾನ್ಸರ್ ಮುಂತಾದವುಗಳು ಕಾಡುತ್ತಿದೆ. ಧೂಮಪಾನದಿಂದ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲವನ್ನೂ ನಿಯಂತ್ರಿಸಬೇಕಾಗಿದೆ.

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಽಸುವ ಕಾನೂನು 2008 ಅಕ್ಟೋಬರ್ 2 ರಂದು ಜಾರಿಯಾಗಿದೆ. ಆದರೆ ಅಕ್ರಮವಾಗಿ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಕೆಲವೊಂದು ಸ್ಥಳಗಳು ಧೂಮಪಾನಿಗಳಿಗೆ ಹಾಟ್‌ಸ್ಪಾಟ್‌ಗಳಾಗಿ ಪರಿಣಮಿಸಿದೆ. ಕಾನೂನುಗಳು ಪ್ರಬಲವಾಗಿ ಜಾರಿಗೊಳಿಸುವ ಮೂಲಕ ಎಲ್ಲಾ ದುಶ್ಚಟಗಳಿಗೆ ಕಡಿವಾಣ ಹಾಕಬೇಕಾಗಿದೆ. ಮಾನವನ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಽಸಬೇಕಿದೆ. ಇದರಿಂದ ಅದೆಷ್ಟೊ ಅಮಾಯಕ ಜೀವಗಳು ಉಳಿಯಲಿವೆ.

ಯಾವುದೇ ದೇಶ ಹೊಂದಬಹುದಾದ ಅತ್ಯುತ್ತಮ ಆಸ್ತಿಯೆಂದರೆ ಆರೋಗ್ಯವಂತ ಪ್ರಜೆಗಳು ವಿನ್‌ಸ್ಟನ್ ಚರ್ಚಿಲ್ ಅವರು ನುಡಿದ ಮಾತಿದು. ಪ್ರಗತಿ ಮಾನವ ನಿಂದಲೇ ಮತ್ತು ವಿನಾಶವೂ ಮಾನವನಿಂದಲೆ. ಅನಾಗರಿಕ ಮಾನವ ಆಧುನಿಕ ಮಾನವನವರೆಗೆ ಸಾಗಿ ಬಂದ ದಾರಿ ನೋಡಿದರೆ ನಿಜಕ್ಕೂ ಮನುಷ್ಯಜೀವಿ ರಾಶಿಯಲ್ಲಿ ಶ್ರೇಷ್ಠ. ಅಲೆಮಾರಿ ಜೀವನದಿಂದ ಸ್ಥಿರ ಜೀವನ, ಕುಟುಂಬ ಜೀವನ, ಕೃಷಿ, ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ ವೈದ್ಯಕೀಯ, ಕೈಗಾರಿಕೆ, ವ್ಯಾಪಾರ, ವಾಣಿಜ್ಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ಮಾನವನಿಂದಲೇ.

ಕೆಲವೊಂದು ಆರೋಗ್ಯಕ್ಕೆ ಹಾನಿಕಾರಕಗಳು ದೇಹಕ್ಕೆ ಸೇರಿದಾಗ ಇಡೀ ದೇಹವೇ ನಶ್ವರ. ಹೀಗಾಗಿ ದುಶ್ಚಟಗಳಿಗೆ ಬಲಿಯಾಗುವುದು ಬೇಡ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸರಕಾರ ಜತೆ ಕೈಜೋಡಿಸೋಣ. ಆರೋಗ್ಯಕರ ಜೀವನ ನಡೆಸೋಣ.